Connect with us

ಲೈಫ್ ಸ್ಟೈಲ್

ಹಾಲು ಸಸ್ಯಾಹಾರವೇ !? ಮಾಂಸಾಹಾರವೇ!? : ಮಿಸ್ ಮಾಡ್ದೆ ಈ ಲೇಖನ ಓದಿ

Published

on

  • ಡಾ: ಎನ್.ಬಿ.ಶ್ರೀಧರ

ಹಾಲು ಕುಡಿಯುವವರು ಈ ಶಿರ್ಷಿಕೆ ನೋಡಿ ನಮಗ್ಯಾಕೆ ಈ ಪ್ರಶ್ನೆ? ಎಂದು ಹೌಹಾರುವುದು ಸಹಜ. ಹಾಲನ್ನು ಅಹಾರವಾಗಿ ಸೇವಿಸುವವರು ತಲೆ ಕೆಟ್ಟಿದೆ ಈ ಮನುಷ್ಯನಿಗೆ ಎಂದುಕೊಂಡರೆ ಮಾಂಸಾಹಾರಿಗಳು ಹಾಲು ಸಸ್ಯಾಹಾರ ಅಂದು ಕೊಂಡು ಸೇವಿಸುತ್ತಿದ್ದೀರಲ್ಲಾ !! ಬನ್ನಿ ನಮ್ಮ ಸಾಲಿಗೆ ಅಂದು ಒಳಗೊಳಗೇ ಖುಷಿ ಪಡುತ್ತಾರೆ..

ವೃತ್ತಿಯಲ್ಲಿ ಪಶುವೈದ್ಯನಾದರೂ ಸಹ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುವುದರಿಂದ ಪಾಠ ಮಾಡುವುದು ನನ್ನ ದೈನಂದಿನ ಚಟುವಟಿಕೆ. ಮೊನ್ನೆ ತರಗತಿಯಲ್ಲಿ ಪಾಠ ಮಾಡುತ್ತಾ ಸಾಂಧರ್ಭಿಕವಾಗಿ ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಹಾಕಿದೆ. ಸ್ವಲ್ಪ ಹೊತ್ತು ಗಲಿಬಿಲಿಗೊಂಡ ಅವರಲ್ಲಿ ಕೆಲವರು ಸಸ್ಯಾಹಾರವೇ ಸಾರ್..!! ಸಂಶಯವೇಕೆ? ಅಂದರು.

ಸಸ್ಯಾಹಾರವೆಂದರೆ ಸಸ್ಯಮೂಲದಿಂದ ಬಂದ ವಸ್ತುವಲ್ಲವೇ !? ಇದು ಕ್ಯಾರೇಟ್, ಟೊಮ್ಯಾಟೋ.. ಮೂಲಂಗಿ, ಮಾವು, ಬೇವು, ಸೊಪ್ಪು ಈ ರೀತಿ ಭೂಮಿಯಿಂದ ಬೆಳೆದ ವಸ್ತುಗಳೇ? ಎಂದು ಕೇಳಿದೆ. ಹೌದಲ್ಲ ಸಾರ್. ಸಸ್ಯಾಹಾರ ಅಲ್ಲ.!! ಹಾಗಿದ್ರೆ ಮಾಂಸಾಹಾರವೇ? ಎಂದು ಮುಂದುವರೆದೆ. ವಿದ್ಯಾರ್ಥಿಗಳು ಒಕ್ಕೊರಳಿನಿಂದ ಅಲ್ಲ. ಎಲ್ಲಾ….. ಸಾರ್ ಅಂದ್ರು. ಅಲ್ಲಪ್ಪಾ!!.. ಹಾಲು ಸಸ್ಯಾಹಾರ ಅಲ್ಲ.

ಅಂದರೆ ಅದು ಪ್ರಾಣಿಯ ಜೀವಂತ ಜೀವಕೋಶಗಳು ಅದರಲ್ಲಿ ಇಲ್ಲವೇ? . ಪ್ರಾಣಿಯ ದೇಹದ ಕೆಚ್ಚಲಿನಲ್ಲಿ ಉತ್ಪನ್ನವಾದ ಮತ್ತು ಪ್ರಾಣಿಯ ದೇಹದಿಂದ ಬಂದಿದ್ದು ಅಂದರೆ ಅದು ಮಾಂಸಾಹಾರ! ಅಲ್ಲವೇ ? ಎಂದು ಪ್ರಶ್ನಿಸಿದೆ. ತಲ ತಲಾಂತರದಿಂದ ಬಂದ ನಂಬಿಕೆಯ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದ ಹಾಗೇ ಕೆಲವು “ಹಾಲಾಹಾರಿಗಳು” ಹೌಹಾರಿ ಬಿದ್ದರು.

ಮೂಲತ: ಮಾಂಸಾಹಾರಿಯಾದ ಮತ್ತು ಮನೆಯಲ್ಲಿ ಸಸ್ಯಾಹಾರಿಯಾಗಿದ್ದು ಹಾಸ್ಟೆಲ್ನಲ್ಲಿ ಕಾಲಕಾಲಕ್ಕೆ ತಕ್ಕಂತೆ “ಸೀಸನಲ್” ಮಾಂಸಾಹಾರಿಯಾದ ಕೆಲವು ವಿದ್ಯಾರ್ಥಿಗಳು ಈ “ಹಾಲಾಹಾರಿ” ಗಳನ್ನು ಮನಸ್ಸಿಗೆ ಬಂದಂತೆ ಟೀಕಿಸತೊಡಗಿದರು.

ನಮ್ಮ ಸಮಾಜದಲ್ಲೂ ಸಹ ಮನೆಯವರಿಗೆ, ಸಂಪ್ರದಾಯಕ್ಕೆ, ಹೆಂಡತಿಗೆ ಹೆದರಿ ಸಭೆ ಸಮ್ಮೇಳನದಲ್ಲಿ ಗುಟ್ಟಾಗಿ “ಸೀಸನಲ್” ಮಾಂಸಾಹಾರಿಯಾಗುವ ಮತ್ತು ಅಲ್ಕೋಹಾಲ್ ಸಹವಾಸ ಮಾಡುವ ಎಲ್ಲರಿಗೂ ಸಹ ಈ ಮಾತು ಅನ್ವಯ. ಹಾಗಿದ್ರೆ ಹಾಲು ಸಸ್ಯಾಹಾರವೂ ಅಲ್ಲಾ.. ಮಾಂಸಾಹಾರವೂ ಅಲ್ಲ. ಮತ್ತೇನು ಇದು? ಎಂದು ಪ್ರಶ್ನೆ ಹಾಕಿದೆ.

ಮಾಂಸವೆಂದರೆ ಬಹುಜೀವಕೋಶಗಳ ಗುಚ್ಚವನ್ನು ಹೊಂದಿದ, ಅಸ್ಥಿಪಂಜರಕ್ಕೆ ಅಂಟಿಕೊಂಡ ಒಂದು ಅಂಗಾಂಶ. ಅದನ್ನು ಪ್ರಾಣಿಗಳಿಂದ ತೆಗೆದು ತಿಂದರೆ ಅದು ಮಾಂಸಾಹಾರ. ಹಾಲು ಅಂತಹ ವಸ್ತುವೇ? ಎಂದು ಪ್ರಶ್ನಿಸಿದೆ. ಖಂಡಿತಾ ಅಲ್ಲ ಸಾರ್ ಎಂದು ಒಕ್ಕೊರಳ ಉತ್ತರ ಬಂದಿತು.

ಮಾಂಸವೆಂದರೆ ಪ್ರಾಣಿ ಸತ್ತ ಮೇಲೆ ಅಥವಾ ಪ್ರಾಣಿಯನ್ನು ಸಾಯಿಸಿ ಅದರ ಅಂಗಗಳನ್ನು ಉಪ್ಪು ಕಾರ ಹಾಕಿ ಬೇಯಿಸಿ ತಿನ್ನುವುದಲ್ಲವೇ? ಸತ್ತ ಮೇಲೆ ಪ್ರಾಣಿಯು ಶರೀರವನ್ನು ಶವ ಅಥವಾ ಕಳೆಬರಹ ಅಥವಾ ಹೆಣ ಅಂತ ಕರೆಯಬಹುದಲ್ಲವೇ? ಹಾಗಿದ್ದರೆ ಮಾಂಸಾಹಾರಿಗಳು “ಶವ ಮಾಂಸ ಭಕ್ಷಕರೆ ? ಹೆಣ ತಿನ್ನುವವರೆ? ಕಳೆಬರಹ ಬೇಯಿಸಿ ತಿನ್ನುವವರೇ? ಇತ್ಯಾದಿ ತರಲೆ ಪ್ರಶ್ನೆಗಳು ತೂರಿ ಬಂದವು.

ಮಾಂಸಾಹಾರಿಗಳನ್ನು ಈವತ್ತಿನ ” ಕೋಳಿ ಶವ ಮಾಂಸ ಭಕ್ಷಣೆ” ಕಾರ್ಯ ಸಸೂತ್ರವಾಗಿ ಮುಗಿಯಿತೆ!? ಎಂದು ಕೇಳಿದರೆ ಗೂಸಾ ಖಚಿತ. ಅಥವಾ ಚಿಕನ್ ಮಂಚೂರಿಯನ್ನು “ಮಸಾಲೆ ಪೂರಿತ ಕೋಳಿ ಶವ ಮಾಂಸದ ಖಾದ್ಯ” ಎನ್ನಬಹುದಾದರೆ ಮಟನ್ ಬಿರ್ಯಾನಿಯನ್ನು “ ಬೇಯಿಸಿದ ಕುರಿ ಶವ ಮಾಂಸದ ಅನ್ನ ಖಾದ್ಯ” ಅನ್ನಬಹುದೇನೋ? ಇತ್ಯಾದಿ ಸಲಹೆಗಳು “ಸಸ್ಯಾಹಾರಿ” ವಿದ್ಯಾರ್ಥಿಗಳಿಂದ ಬಂದು “ಮಾಂಸಾಹಾರಿ” ವಿದ್ಯಾರ್ಥಿಗಳನ್ನು ಕೆರಳಿಸಿದವು.

ಮೊಟ್ಟೆ ಸಸ್ಯಾಹಾರವೇ? ಮಾಂಸಾಹಾರವೇ? ಎಂದು ಇನ್ನೂ ಗಲಿಬಿಲಿಗೊಳಿಸಿದೆ. ಹೌದಲ್ಲ !!. ಮೊಟ್ಟೆಯೂ ಸಹ ಸಸ್ಯಾಹಾರಿ ಅಥವಾ ಮಾಂಸಾಹಾರಿ ವಸ್ತು ಅಲ್ಲ.. ಮತ್ತೇನಿದು? ಸ್ವಲ್ಪ ಹೊತ್ತು ತರಗತಿಯಲ್ಲಿ ನೀರವ ಮೌನ. ಅವರಲ್ಲೇ ಗುಜು..ಗುಜು.. ಚರ್ಚೆ ಪ್ರಾರಂಭವಾಯ್ತು.

ಹಾಲು ಮತ್ತು ಮೊಟ್ಟೆ ಸಸ್ಯಾಹಾರವೂ ಅಲ್ಲ.. ಮಾಂಸಾಹಾರವೂ ಅಲ್ಲ.. “ಪ್ರಾಣಿಜನ್ಯ ಶಾಖಾಹಾರಿ” ವಸ್ತು ಅನ್ನಬಹುದೇ? ಅಂದೆ. ಇದು ಸರಿ ಸಾರ್ ಅಂದ್ರು. ಎರಡೂ ಪಾರ್ಟಿಗಳಿಗೂ ತಾತ್ಕಾಲಿಕ ಮಾತಿನ ಸಮರ ನಿಂತು ತರಗತಿ ತಹಬಂದಿಗೆ ಬಂತು.

ಸ್ವಲ್ಪ ವೈಜ್ಞಾನಿಕ ವಿಚಾರಕ್ಕೆ ಬರೋಣ. ಒಂದು ಲೀಟರ್ ಹಾಲಿನಲ್ಲಿ ಸರಾಸರಿ 850 ಗ್ರಾಂ ನೀರು, 50 ಗ್ರಾಂ ಲ್ಯಾಕ್ಟೋಸ್, 50 ಗ್ರಾಮ್ ಕೊಬ್ಬು, 40 ಗ್ರಾಂ ಪ್ರೋಟೀನ್, 10 ಗ್ರಾಂ ಖನಿಜಗಳು, ಜೀವಸತ್ವಗಳು ಮತ್ತಿತರ ಘನ ವಸ್ತುಗಳಿರುತ್ತವೆ. ಈ ಒಂದು ಲೀಟರ್ ಹಾಲನ್ನು ಉತ್ಪಾದಿಸಲು ಕೆಚ್ಚಲಿನ ಹಾಲು ಉತ್ಪಾದಿಸಲೆಂದೇ ಇರುವ ವಿಶೇಷ ಜೀವಕೋಶದ ಮೂಲಕ ಸುಮಾರು 400 ಲೀಟರ್ ರಕ್ತದ ಪರಿಚಲನೆಯಾಗಿ ಈ ಎಲ್ಲ ವಸ್ತುಗಳನ್ನು ಪೂರೈಸಬೇಕಾಗುತ್ತದೆ.

ಅಂದರೆ ಪ್ರತಿದಿನ ಸುಮಾರು 20ಲೀಟರ್ ಹಾಲು ಉತ್ಪಾದಿಸುವ ಹಸುವಿನ ಕೆಚ್ಚಲಿನಲ್ಲಿ 8000 ಲೀಟರ್ ರಕ್ತದ ಪರಿಚಲನೆಯಾಗುತ್ತದೆ. ಪ್ರತಿ ಮಿಲಿ ಹಾಲಿನಲ್ಲಿ ಸುಮಾರು 2 ಲಕ್ಷ ಕೆಚ್ಚಲಿನ ಪದರದ ಜೀವಂತ ಜೀವಕೋಶಗಳು ಬರುತ್ತವೆ ಎಂದರೆ ಕೆಲವರಿಗೆ ಆಶ್ಚರ್ಯವಾದರೂ ಸಹ ಸತ್ಯ. ಇವುಗಳಿಗೆ ಸೊಮ್ಯಾಟಿಕ್ ಸೆಲ್ ಗಳೆಂದೂ ಕರೆಯುತ್ತಾರೆ.

ಕೆಚ್ಚಲು ಬಾವಿನಂತಹ ಖಾಯಿಲೆಗಳನ್ನು ಪತ್ತೆ ಮಾಡುವಾಗ ಇವುಗಳ ಸಂಖ್ಯೆ 10 ಪಟ್ಟು ಜಾಸ್ತಿಯಾಗುವುದರಿಂದ ಇವುಗಳನ್ನು ಮಾಪಕವಾಗಿಯೂ ಸಹ ಬಳಸುತ್ತಾರೆ.ಹಾಲನ್ನು ಸೇವಿಸಿದಾಗ ಇವುಗಳ ಸೇವನೆಯೂ ಅನಿವಾರ್ಯ. ಭಾರತದಲ್ಲಿ ಹಾಲನ್ನು ಬಿಸಿಮಾಡಿ ಅಥವಾ ಕುದಿಸಿ ಕುಡಿಯುವುದರಿಂದ ಇದನ್ನು “ಶಾಖಾಹಾರ” ಅಂದರೆ ಬೇಯಿಸಿ ತಿನ್ನುವ ಅಹಾರವೆನ್ನಬಹುದು. ಅಂದರೆ ಹಾಲಿಗೆ “ಪ್ರಾಣಿಜನ್ಯ ಶಾಖಾಹಾರ”ವೆನ್ನಬಹುದೇ ಹೊರತು ಸಸ್ಯಾಹಾರವಾಗಲು ಸಾಧ್ಯವೇ ಇಲ್ಲ!!.

ಇನ್ನೂ ಮುಂದಕ್ಕೆ ಹೋಗಿ ಹೇಳಬೇಕೆಂದರೆ, ಹಾಲಿನಲ್ಲಿ ಲಕ್ಷಾಂತರ ಪ್ರಾಣಿ ಜೀವಕೋಶಗಳಿದ್ದರೆ, ಕೋಳಿಯಿಂದ ಸಿಗುವ ಮೊಟ್ಟೆ ಏಕಜೀವಕೋಶದಿಂದ ಬಂದಿರುವ ವಸ್ತು. ಮೊಟ್ಟೆಯನ್ನು ಗಂಡುಕೋಳಿಯ ಸಂಪರ್ಕವಿಲ್ಲದೇ ಪಡೆಯುವುದರಿಂದ ಈ ಏಕಜೀವಕೋಶದ ವಸ್ತುವನ್ನು “ಪಕ್ಷಿಜನ್ಯ ಶಾಖಾಹಾರ” ವೆಂದು ಕರೆಯಬಹುದೇನೋ? ಇದು ವಿಚಾರ ಮಾಡುವ ವಿಷಯ.

ತಿನ್ನುವ ವಸ್ತುವಿನ ಆಯ್ಕೆ ಆಯಾ ಮನುಜನ ಹಕ್ಕು ಮತ್ತು ಆತನ ಸಂಪ್ರದಾಯದಂತೆ ಇಚ್ಚೆ ಕೂಡಾ. ಹಾಲನ್ನು ಸಸ್ಯಾಹಾರಿ ಪದಾರ್ಥ ಎನ್ನುವವರು ಅದೇ ಅರ್ಥದಲ್ಲಿ ಮೊಟ್ಟೆಯನ್ನೂ ಸಹ ಸಸ್ಯಾಹಾರ ಎಂದು ಅನಿವಾರ್ಯವಾಗಿ ಒಪ್ಪಲೇ ಬೇಕು.

ಹೊಟೇಲುಗಳಲ್ಲಿ ಗೋಬಿ ಮಂಚೂರಿಯನ್ನು ಇಷ್ಟ ಪಟ್ಟು ಚಪ್ಪರಿಸಿಕೊಂಡು ತಿನ್ನುವ ಅನೇಕರು ಅಣಬೆಯಿಂದ ಮಾಡಿದ “ಮಶ್ರೂಮ್ ಮಂಚೂರಿ”ಯನ್ನು ಸಸ್ಯಾಹಾರವಲ್ಲ ಎಂದು ತಿನ್ನುವುದಿಲ್ಲ. ಅಣಬೆ ತಿಂದರೆ ಮಾಂಸ ತಿಂದಂತೆ ಎಂದು ಅವರ ಅಂಬೋಣ. ಅಣಬೆ ಒಂದು ಶಿಲೀಂದ್ರ ವರ್ಗಕ್ಕೆ ಸೇರಿದ ವಸ್ತು. ಶಿಲೀಂದ್ರ ಸಸ್ಯವಲ್ಲ. ಹಾಗೆಯೇ ಅದು ಪ್ರಾಣಿಣಿಜನ್ಯವೂ ಅಲ್ಲ ಅಥವಾ ಈ ಮೊದಲು ತಿಳಿಸಿದಂತೆ ಮಾಂಸಾಹಾರವೂ ಅಲ್ಲ. ಇದನ್ನು “ಶಾಖಾಹಾರ” ಎಂದು ಕರೆಯಬಹುದು.

ಮುಂದಿನ ಪ್ರಶ್ನೆ ಜೇನುತುಪ್ಪ ಸಸ್ಯಾಹಾರಿಯೇ? ಮೇಲ್ನೋಟಕ್ಕೆ ಇದು ಸಸ್ಯಗಳ ಮಕರಂದದ ಮೂಲದ ವಸ್ತುವಾಗಿ ನಿಜ ಅನ್ನಿಸಿದರೂ ಸಹ, ಜೇನು ತುಪ್ಪ ಜೇನುಹುಳಗಳು ಕಷ್ಠಪಟ್ಟು ಹೂವಿನ ಮಕರಂದವನ್ನು ಅವುಗಳ ಬಾಯಿಯಲ್ಲಿ ಹೀರಿಕೊಂಡು ಬಂದು ಜೇನುಗೂಡಿನಲ್ಲಿ ಇರುವ ಇದಕ್ಕೆಂದೇ ಸಿದ್ಧ ಪಡಿಸಿರುವ ಕೋಶದಲ್ಲಿ ಹಾಕುತ್ತವೆ.

ಇದಕ್ಕೆ ಸತತವಾಗಿ ಅವುಗಳ ರೆಕ್ಕೆಗಳ ಮೂಲಕ ಹಾಕುವ ಗಾಳಿಯ ಮೂಲಕ ಮಕರಂದವನ್ನು ಸಿಹಿಯಾದ ಸುವಾಸನಾ ಯುಕ್ತ ಜೇನುತುಪ್ಪವಾಗಿ ಪರಿವರ್ತಿಸುತ್ತವೆ. ಜೇನುಹುಳಗಳ ಎಂಜಲಿನಿಂದ ಕಲುಷಿತವಾದ ವಸ್ತು ಸಸ್ಯಾಹಾರಿ ಆಗಲು ಸಾಧ್ಯವೇ? ಸಾಧ್ಯವಿಲ್ಲ ಅಲ್ಲವೇ?.

ಇತ್ತೀಚೆಗೆ ಕೆಲವರಲ್ಲಿ “ವೆಗಾನ್” ಪದ್ದತಿಯ ಅಹಾರ ಪದ್ಧತಿ ರೂಢಿಯಲ್ಲಿದೆ. ವೆಗಾನ್ ಅಂದರೆ ಪ್ರಾಣಿ ಅಥವಾ ಕೀಟಮೂಲದ ಯಾವುದೇ ವಸ್ತುಗಳನ್ನು ಹಿಂಸಿಸಿ ಪಡೆಯುವ ಅಹಾರವನ್ನು ತಿನ್ನದೇ ಇರುವುದು. ಇದರಲ್ಲಿ ಹಾಲು, ಮೊಟ್ಟೆ, ಮಾಂಸ, ಜೇನು ತುಪ್ಪ ಇತ್ಯಾದಿ ಅನೇಕ ವಸ್ತುಗಳು ಸೇರುತ್ತವೆ. ಕಠಿಣ ಸಸ್ಯಾಹಾರಿಗಳಾದ ದಿಗಂಬರ ಜೈನ ಮುನಿಗಳು ಸಹ ಈ ರೀತಿಯ ಆಹಾರ ಪದ್ಧತಿ ಅನುಸರಿಸುತ್ತಾರೆ ಎನ್ನುತ್ತಾರೆ.

ಅಹಾರ ಪದ್ದತಿ ಅವರವರ ಪರಂಪರೆ, ಜಾತಿ, ಕುಲ ಇನ್ನೂ ಅನೇಕ ಸಂಕಿರಣ ಸಾಮಾಜಿಕ ಹಿನ್ನೆಲೆಯಲ್ಲಿ ಜೀವನದಲ್ಲಿ ಅಡಕವಾಗಿರುವ ಅಂಶ ಮತ್ತು ತೀರಾ ವೈಯಕ್ತಿಕ ವಿಷಯ. ಯಾವ ಅಹಾರ ಪದ್ದತಿಯಾದರೇನು? ಸರಿಯಾದ ಸಮಯದಲ್ಲಿ, ಶುಚಿಯಾದ, ರುಚಿಯಾದ, ಕಡಿಮೆ ಮಸಾಲೆ, ಕಡಿಮೆ ಕೊಬ್ಬು ಇರುವ ಆರೋಗ್ಯಕಾರಿ ಅಹಾರವನ್ನೇ ಹಿತಮಿತವಾಗಿ ಸೇವಿಸಿ ಆರೋಗ್ಯವಂತರಾಗಿರುವುದೇ ಮುಖ್ಯ. ಏನಂತೀರಿ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.

54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

Published

on

ಸುದ್ದಿದಿನ,ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ ರೆಸ್ಟೋರೆಂಟ್‌ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.

ಬೆಂಗಳೂರಿನ #NativeCooks ಫುಡ್‌ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

ಹೌದು, ಹೆಬ್ಬಾಳ, ಆರ್‌ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್‌ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್‌ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್‌ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್‌ಬಾಕ್ಸ್‌ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.

ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್‌ ಕುಕ್ಸ್‌ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್‌ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್.‌ ವೆಜ್‌ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್‌ವೆಜ್‌ ಊಟವನ್ನು 135 ರೂಪಾಯಿಗೆ ಹಾಗೂ ಎಕ್‌ ಮೀಲ್‌ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.

ಸದ್ಯಕ್ಕೆ ಹೆಬ್ಬಾಳ, ಆರ್‌ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

Published

on

~ಡಾ. ಪುಷ್ಪಲತ ಸಿ ಭದ್ರಾವತಿ

ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು

ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.

ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.

ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.

ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.

ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending