ಅಂತರಂಗ
ನಾನು ಮೋಸ ಹೋದೆ..!
- ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ
ದಿನ ಬೆಳಗಾದರೆ ಪತ್ರಿಕೆಗಳಲ್ಲಿ “ ಚಿನ್ನದ ಆಮಿಷವೊಡ್ಡಿ ವಂಚನೆ” “ಆಭರಣ ಹೊಳೆಯುವಂತೆ ಮಾಡಿ ಟೊಪ್ಪಿ” ಲಾಟರಿ ನಂಬಿ ಮೋಸ ಹೋದ ರೈತ” ಇತ್ಯಾದಿ ತರಹೆವಾರಿ ತಲೆಬರಹಗಳ ಸುದ್ಧಿಗಳು ಬರುತ್ತಲೇ ಇರುವುದನ್ನೂ ನೀವೂ ಸಹ ಗಮನಿಸಿರುವಿರಿ. ಕೆಲವೊಮ್ಮೆ ಸ್ವಲ್ಪ ಯಾಮಾರಿದರೂ ಸಹ ಆ ಅನುಭವ ನಿಮಗೇ ಆಗಬಹುದು ಅಥವಾ ಈಗಾಗಲೇ ಆಗಿರಬಹುದು.
ನಾವು ನಮ್ಮ ಹುಶಾರಿಯಲ್ಲಿ ಎಷ್ಟೇ ಇದ್ದರೂ ಸಹ ಮೋಸ ಮಾಡುವ ಖದೀಮರು ಹೇಗಾದರೂ ಮಾಡಿ ನಯ ವಿನಯ ತೋರಿ ಹಳ್ಳಕ್ಕೆ ಕೆಡವಿಯೇ ಬಿಡುತ್ತಾರೆ. ಹೌದು ! ನಾನೂ ಸಹ ಒಮ್ಮೆ ಇಂತಹ ಮೋಸಕ್ಕೆ ತುತ್ತಾಗಿದ್ದಿದೆ. 1980 ರ ದಶಕ. ನಾನಿನ್ನೂ ಹೈಸ್ಕೂಲು ಹುಡುಗ. ಆಗ ಪತ್ರಿಕೆಗಳಲ್ಲಿ ಒಂದು ವಿಚಿತ್ರ ರೀತಿಯ ಜಾಹೀರಾತು. ಪದಬಂಧದಂತ ಒಂದಿಷ್ಟು ಪ್ರಶ್ನೆಗಳನ್ನು ಬಿಡಿಸಿ ಅದನ್ನು ದಿಲ್ಲಿಗೆ ಕಳಿಸಿದಲ್ಲಿ ರೇಡಿಯೋ ಕಳಿಸುತ್ತೀವಿ ಎಂದು.
ಕಳಿಸಿದರೆ ಸ್ವಲ್ಪೇ ದಿನದಲ್ಲಿ “ ನೀವು ಈ ಸ್ಪರ್ಧೆಯಲ್ಲಿ ಗೆದ್ದಿದ್ದೀರಿ. ಇಂತಿಷ್ಟು ಹಣ ಕಳಿಸಿದರೆ ನಿಮಗೆ ರೇಡಿಯೋ ಕಳಿಸುತ್ತೀವಿ” ಎಂದು ಮಾರುತ್ತರ ಬರುತ್ತಿತ್ತು. ನಾನೂ ಸಹ ಕೆಲವೊಮ್ಮೆ ಮನಿಆರ್ಡರ್ ಮೂಲಕ ಈ ಹಣ ಕಳಿಸಿದಾಗ ರೇಡಿಯೋಗಳು ಬಂದದ್ದು ಇದ್ದೇ ಇತ್ತು. ಕೆಲವರಿಗೆ ನಾನು ಕೊಡಿಸಿಯೂ ಇದ್ದೆ. ಈ ರೇಡಿಯೋಗಳೆಲ್ಲಾ ಅತ್ಯಂತ ಕಳಪೆ ಗುಣಮಟ್ಟದ “ಡೆಲ್ಲಿ ಸೆಟ್ಟ್” ಎಂದೇ ಪ್ರಖ್ಯಾತವಾಗಿದ್ದವು.
ಫಿಲಿಪ್ಸ್ ಮತ್ತು ಮರ್ಫಿಯಂತ ಪ್ರಖ್ಯಾತ ಕಂಪನಿಗಳ ಒಂದು ಬ್ಯಾಂಡ್, ಎರಡು ಬ್ಯಾಂಡ್ ಅಥವಾ ಮೂರು ಬ್ಯಾಂಡ್ ರೇಡಿಯೋಗಳಿಗೆ ರೂ 300 ರಿಂದ1000 ವರೆಗೂ ಬೆಲೆ ಇದ್ದ ಕಾಲದಲ್ಲಿ ಮಧ್ಯಮ ವರ್ಗದವರಿಗೆ ರೇಡಿಯೋ ಖರೀದಿಸುವುದು ಗಗನ ಕುಸುಮವೇ ಆಗಿ ಬಿಟ್ಟಿತ್ತು. ರೇಡಿಯೋ ಖರೀದಿಸಿದ ತಕ್ಷಣ ತಹಶೀಲ್ದಾರ್ ಕಚೇರಿಗೆ ಅದನ್ನು ಒಯ್ದು, ಅದರ ನೋಂದಣಿ ಮಾಡಿಸಿ ರೂ:10ನ್ನು ಲೈಸನ್ಸ್ ಶುಲ್ಕವಾಗಿ ಕಟ್ಟಿ, ಪ್ರತಿ ವರ್ಷ ರೂ: 3ನೀಡಿ ಅದನ್ನು ನವೀಕರಿಸಬೇಕಾಗಿತ್ತು.
ಅದರಲ್ಲೂ ಸಹ ಒಂದು ಬ್ಯಾಂಡಿನಿಗಿಂತ ಜಾಸ್ತಿ ಸಾಮರ್ಥ್ಯದ ರೇಡಿಯೋಗಳಿಗೆ ತಾಲೂಕು ದೊರೆ ತಹಶೀಲ್ದಾರ್ ಕಚೇರಿಯಿಂದ ಲೈಸನ್ಸಿನ ಅಗತ್ಯವಿತ್ತು ಎಂದರೆ ಈ ಕಾಲದವರು ನಂಬಲಿಕ್ಕಿಲ್ಲ !!. ಈಗ ನಾವು ವಾಹನ ನೋಂದಣಿಗೆ ಎಷ್ಟೆಲ್ಲಾ ಶ್ರಮ ಪಡುತ್ತವೆಯೋ ಹಾಗೆಯೇ ರೇಡಿಯೋ ಎಷ್ಟು ಬ್ಯಾಂಡಿನದು? ಅದರ ಮೂಲ ಬೆಲೆ ಎಷ್ಟು? ಖರೀದಿಸಿ ಎಷ್ಟು ಸಮಯವಾಯಿತು? ಎಂಬಿತ್ಯಾದಿ ತರಹೇವಾರಿ ಕಾಲಮ್ಮುಗಳಿಗೆಲ್ಲಾ ಉತ್ತರ ನೀಡಿ ಸಾಕಾಗಿ ಹೋಗುತ್ತಿತ್ತು. ಅದರಲ್ಲೂ ತಹಸೀಲ್ದಾರ್ ಕಚೇರಿಯ ಗುಮಾಸ್ಥನಿಗೆ 2ರೂ ನೀಡಿ ಕೈಬಿಸಿ ಮಾಡದಿದ್ದರೆ ಹರೋ ಹರ, ಲೈಸನ್ಸ್ ರದ್ದಾಗುವುದು ಗ್ಯಾರಂಟಿಯಿತ್ತು.
ಇದನ್ನೂ ಓದಿ | ಮಮತಾ ಬ್ಯಾನರ್ಜಿ ಮೇಲಿನ ದಾಳಿ ಒಂದು ಪಿತೂರಿ : ಉನ್ನತ ಮಟ್ಟದ ತನಿಖೆಗೆ ಟಿಎಂಸಿ ನಿಯೋಗ ಒತ್ತಾಯ
ಇವರ ಕಾಟ ತಾಳಲಾರದೇ ಜನ ದೂರಿದ್ದರಿಂದ, ಸರ್ಕಾರ ಅಂಚೆಕಚೇರಿಯಲ್ಲಿ ರೇಡಿಯೋ ಹೊತ್ತಯ್ದು ತೋರಿಸಿ3 ರೂಪಾಯಿ ನೀಡಿ ಲೈಸನ್ಸ್ ನವೀಕರಿಸಿಕೊಂಡು ಬರಬೇಕಿತ್ತು. ಅಂಚೆ ಮಾಸ್ತರು ಲೈಸನ್ಸಿನ ಪುಸ್ತಕಕ್ಕೆ ಸ್ಟಾಂಪ್ ಒಂದನ್ನು ಅಂಟಿಸಿ ಕರಿ ಮಸಿಯಿಂದ ಟಪ್ ಎಂದು ಮುದ್ರೆಯೊತ್ತಿ ನೀಡಿದರೆ ಇನ್ನೊಂದು ವರ್ಷ ನಿರಾಳವಾಗರಬಹುದಿತ್ತು.
ಲೈಸನ್ಸ್ ಇರದ ಅಥವಾ ನವೀಕರಿಸದ ರೇಡಿಯೋಗಳನ್ನು ಸರ್ಕಾರದ ಅಧಿಕಾರಿಗಳು ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರವಿತ್ತು. ಎಲ್ಲಾ ಜನರೂ ಸಹ ರೇಡಿಯೋ ಖರೀದಿಸಿದ ತಕ್ಷಣ ಸರ್ಕಾರದ ಮೇಲಿನ ಭಯ ಭಕ್ತಿಯಿಂದ ಲೈಸನ್ಸ್ ಮಾಡಿಸಿ ತಪ್ಪದೇ ಪ್ರತಿ ವರ್ಷ ಅದರ ನವೀಕರಣ ಮಾಡಿಸಿಕೊಳ್ಳುತ್ತಿದ್ದುದು ವಿಶೇಷ.
ನಮ್ಮ ಮನೆಯಲ್ಲಿ ಆಗಲೇ ಹಳೆಯ ಮರ್ಪಿ ರೇಡಿಯೋ ಒಂದು ಬೆಳಗಿನ ಸುಪ್ರಬಾತ ಹೇಳಿ ಎಬ್ಬಿಸುತ್ತಿತ್ತು. ಮಣಬಾರದ ಆ ರೇಡಿಯೋಗೆ ಪ್ರತಿ ವರ್ಷ ಲೈಸನ್ಸ್ ನವೀಕರಿಸಲು ಸಾಧ್ಯವಾಗದೇ ನಮ್ಮಜ್ಜ ಮರ್ಫಿ ರೇಡಿಯೋ ಯಾರಿಗೋ ಹುಟ್ಟಿದಷ್ಟಕ್ಕೆ ಮಾರಿಬಿಟ್ಟ ಎಂಬುದು ನೆನಪು. ಅದರಲ್ಲೂ ಮಣ ಭಾರದ ಟ್ಯುಬ್ಯುಲರ್ ಬ್ಯಾಟರಿ ಹೊಂದಿದ ಇವುಗಳ ನಿರ್ವಹಣೆಯೇ ದೊಡ್ಡ ಸವಾಲಿನ ಕೆಲಸವಾಗಿತ್ತು.
ಒಂದು ಕುಟುಂಬದಲ್ಲಿ ಒಂದಕ್ಕಿಂತ ಜಾಸ್ತಿ ರೇಡಿಯೋ ಇಟ್ಟುಕೊಳ್ಳುವಂತಿಲ್ಲ ಎಂಬುದೂ ಒಂದು ನಿಯಮವಾಗಿತ್ತು ಎಂಬುದು ಈಗ ನೆನಪು ಮಾತ್ರ.1991 ರಲ್ಲಿ ಕೇಂದ್ರ ಸರ್ಕಾರ ಈ ಪದ್ಧತಿಯನ್ನ ತೆಗದು ಹಾಕಿತು.
ಆಗಲೇ ಪ್ರಾರಂಭವಾಗಿದ್ದು ಈ ಡೆಲ್ಲಿ ಸೆಟ್ಟುಗಳ ಹಾವಳಿ. ಈಗ ಚೈನಾವಸ್ತುಗಳು ಹೇಗೋ ಹಾಗೆಯೇ ಆಗಿನ ಡೆಲ್ಲಿ ಸೆಟ್ ರೇಡಿಯೋಗಳು. ಗೊರ ಗೊರ ಶಬ್ದ ಮಾಡುತ್ತಾ ಟ್ಯೂನ್ ಆಗದೇ ಸತಾಯಿಸುತ್ತಿದ್ದವು. ತಲೆಯ ಮೇಲೆ ಪಾಪ ಪಾಂಡುವಿನ ಪಾಚೋ ಶ್ರೀಮತಿಯು ಪಾಂಡುವಿನ ತಲೆಯ ಮೇಲೆ ಲೊಟ್ ಎಂದು ಮೊಟಕುವ ಹಾಗೆ ಮೊಟಕಿದಲ್ಲಿ ಮಾತ್ರ ಚಂದದಿಂದ ಹಾಡುತ್ತಿದ್ದವು.
ಕೆಟ್ಟು ಕೂತಾಗ ಇವುಗಳ ಹೊಟ್ಟೆ ಬಗೆದು ವಿವಿದ ಬಗೆಯ ಬಣ್ಣ ಬಣ್ಣದ ವೈರುಗಳನ್ನು ಭೀಮಸೇನ ದುಶ್ಯಾಸನನ ಒಡಲು ಬಿರಿದು ಕರುಳ ಮಾಲೆಯನ್ನು ಧರಿಸಿದ ಹಾಗೇ ಈ ರೇಡಿಯೋಗಳೆಲ್ಲಾ ನಮ್ಮ ರಿಪೇರಿಯ ಪ್ರಯೋಗಕ್ಕೆ ಬಲಿ ಪಶುವಾಗುತ್ತಿದ್ದವು. ಡೆಲ್ಲಿ ಸೆಟ್ಟುಗಳ ಸಂಖ್ಯೆ ಜಾಸ್ತಿಯಾದಂತೆ ನಮ್ಮ ಹಳ್ಳಿಯಲ್ಲಿ ರೇಡಿಯೋ ರಿಪೇರಿ ಮಾಡುವ “ಹವ್ಯಾಸಿ” ರಿಪೇರಿಗರೂ ಸಹ ಮನೆಗೊಬ್ಬರಂತೆ ಹುಟ್ಟಿಕೊಂಡರು. ಬೆಸುಗೆ ಮಾಡುವ ಸೋಲ್ಡರಿಂಗ್ ಗನ್ ಮತ್ತ ಸ್ಕ್ರೂ ಡ್ರೈವರ್ ಅವರ ಕೈಯಲ್ಲಿ ರಾರಾಜಿಸುತ್ತಿತ್ತು.
ಇನ್ನು ಡೆಲ್ಲಿ ಸೆಟ್ಟಿನ ಪ್ರಕರಣಕ್ಕೆ ಬರೋಣ. ನಾನೂ ಸಹ ಎಲ್ಲರಂತೆ ಪದ ಬಂಧದಂತ ಪ್ರಶ್ನೆ ಬಿಡಿಸಿ ಪೋಸ್ಟ್ ಕಾರ್ಡಿನಲ್ಲಿ ಕಳುಹಿಸಿದ ಕೆಲವೇ ದಿನಗಳಲ್ಲಿ ದಿಲ್ಲಿಯಿಂದ ನಾವು ರೇಡಿಯೋವನ್ನು ಗೆದ್ದಿರುವೆನೆಂದೂ ಹಾಗೂ ಒಂದಿಷ್ಟು ಹಣ ಕಳಿಸಿದರೆ, ಅದನ್ನು ಕಳಿಸುವುದಾಗಿ ಪತ್ರ ಬರುತ್ತಿತ್ತು. ಹೀಗಿದ್ದಾಗ ಒಮ್ಮೆ ದಿನಪತ್ರಿಕೆಯಲ್ಲಿ ಪದಬಂಧದೊಂದಿಗೆ ಟೇಪ್ ರಿಕಾರ್ಡರ್ ನೀಡುವ ಆಫರ್ ಇತ್ತು.
ಆಗ ಕ್ಯಾಸೆಟ್ ಕಾಲ. ಕನ್ನಡದ ಮಧುರವಾದ ಹಾಡುಗಳನ್ನು ಕ್ಯಾಸೆಟ್ ಹಾಕಿ ಕೇಳುವುದು ಆಗಿನ ಹುಚ್ಚು. ಮದುವೆ ಮನೆಗಳಲ್ಲಿ, ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಇವುಗಳನ್ನು ಬಾಡಿಗೆಗೆ ಪಡೆದು ಜೋರಾಗಿ “ಶರಣು ಶರಣಯ್ಯಾ.. ಶರಣು ಬೆನಕಾ.. ಎಂದು ಹಾಡು ಬಜಾಯಿಸುತ್ತಿದ್ದರೆ, ಜನ ತಾನಾಗಿಯೇ ಜಮಾಯಿಸಿಬಿಡುತ್ತಿದ್ದರು. ದುಂಡನೆಯ ಕಪ್ಪು ತಟ್ಟೆಯೊಂದರ ಮೇಲೆ ಮುಳ್ಳಿನಂತ ಹಿಡಿಕೆಯಲ್ಲಿ ಗಿರಿ ಗಿರಿ ಸುತ್ತಿಸುತ್ತಾ ಬರುವ ಗ್ರಾಮಾಫೋನಿನ ಕೀರಲು ಸ್ವರ ಕೇಳಿ ಬೋರು ಹೊಡೆಸಿಕೊಂಡ ಜನ ಕ್ಯಾಸೆಟ್ ಕಾಲಕ್ಕೆ ಬೇಗ ಮರುಳಾದರು.
ಆದರೆ ಹೊಸದಾಗಿ ಬಂದ ಟೇಪ್ ರಿಕಾರ್ಡರ್ ದುಬಾರಿಯಾಗಿದ್ದು, ಸಾಮಾನ್ಯ ಜನರ ಕೈಗೆ ಎಟಕುವಂತಿರಲಿಲ್ಲ. ಹೀಗಿರುವಾಗ ಟೇಪ್ ರಿಕಾರ್ಡರ್ ಆಫರ್ ಬಿಡುವಂತದ್ದೇ? ಪದಬಂಧ ತುಂಬಿ ಪೋಸ್ಟ್ ಕಾರ್ಡಿನಲ್ಲಿ ಕನ್ನಡದಲ್ಲಿಯೇ ದಿಲ್ಲಿ ವಿಳಾಸ ಬರೆದು ಕಳಿಸಿದೆ. ಸ್ವಲ್ಪೇ ದಿನಕ್ಕೆ ಮಾಮೂಲಿನಂತೆ ದಿಲ್ಲಿ ಸಂದೇಶ ಬಂದೇ ಬಿಟ್ಟಿತು, ರೂ:350 ಪಾವತಿಸಿ, ಅದ್ಭುತ ಟೇಪ್ ರಿಕಾರ್ಡರ್ ಪಡೆಯಿರಿ ಎನ್ನುವ ಇಂಗಿತದ್ದು. 1983ರ ದಶಕದಲ್ಲಿ ಇದೇ ಬಹಳ ದೊಡ್ಡ ಮೊತ್ತ.
ಹೇಗೇಗೋ ಈ ಮೊತ್ತ ಹೊಂದಿಸಿ ಮನಿಆರ್ಡರ್ ಮಾಡಿದೆ. ಇನ್ನೇನು ಟೇಪ್ ರಿಕಾರ್ಡರ್ ಬರುತ್ತಲ್ಲ. ಯಕ್ಷಗಾನದ, ಹರಿಕಥೆಗಳ, ಚಿತ್ರಕಥೆಗಳ, ಉತ್ತಮ ಹಾಡುಗಳ ಅನೇಕ ಕ್ಯಾಸೆಟ್ಟುಗಳನ್ನು ಖರೀದಿಸಿದೆ ಮತ್ತೆ ಕೆಲವನ್ನು ಬಾಡಿಗೆಗೆ ಪಡೆದೆ. ದಿನವೂ ಅಂಚೆ ಅಣ್ಣನ ಆಗಮನವನ್ನೇ ಕಾಯುವುದು ಸಾಮಾನ್ಯವಾಗಿ ಹೋಗಿತ್ತು. ಅಂಚೆ ಕಚೇರಿಯೋ ನಮ್ಮನೆಯಿಂದ 6 ಕಿಲೋ ಮೀಟರ್ ದೂರ. ಬಂದ ಪತ್ರಗಳನ್ನೆಲ್ಲಾ ಶೇಖರಿಸಿಕೊಂಡು ಒಂದು ವಾರದ ಮೇಲೆ ತಲುಪಿಸುವುದು. ನಾನಂತೂ ಅವರ ಬರುವನ್ನೇ ಕಾಯುವ ಚಾತಕ ಪಕ್ಷಿಯಾಗಿ ಹೋದೆ. ಆ ದಿನ ಬಂದೇ ಬಿಟ್ಟಿತು. ಅಂಚೆಯಣ್ಣ ಪರ್ಸಲ್ ತೆಗೆದುಕೊಂಡು ಬಂದೇ ಬಿಟ್ಟರು.
ಆಗಲೇ ಟೇಪ್ ರಿಕಾರ್ಡರ್ ಬರುವ ಬಗ್ಗೆ ಸುಳಿವು ಕೊಟ್ಟಿದ್ದರಿಂದ ಅಡಿಕೆ ಸುಲಿಯಲು ಬಂದ 10-11 ಜನ, ಯಾವುದೋ ಕಾರ್ಯಕ್ರಮಕ್ಕೆಂದು ಬಂದ ನಮ್ಮ ನೆಂಟರಿಷ್ಟರು ಪಾರ್ಸಲ್ ಬಿಡಿಸುವುದನ್ನೇ ಬಿಟ್ಟ ಕಣ್ಣುಗಳಿಂದ ನೋಡುತ್ತಾ, ಟೇಪ್ ರಿಕಾರ್ಡರಿಗಾಗಿ ಮತ್ತು ಅದರಿಂದ ಬರುವ ಸುಮಧುರ ಸ್ವರದ ಹಾಡಿಗಾಗಿ, ಕೀರ್ತನೆಗಳಿಗಾಗಿ, ಯಕ್ಶಗಾನಕ್ಕಾಗಿ ಕುತೂಹಲಿಗಳಾದರು.
ಪಾರ್ಸಲ್ ತೆಗೆಯುತ್ತಾ ಇದ್ದ ಹಾಗೇ ಟೇಪ್ ರಿಕಾರ್ಡರ್ ಚಿಕ್ಕದೇನಾದರೂ ಕಳಿಸಿರಬಹುದು ಅಂದುಕೊಂಡೆ. ಏಕೆಂದರೆ ಪೆಟ್ಟಿಗೆಯೊಳಗೆ ಅಂತಹ ದೊಡ್ಡ ವಸ್ತುವಿರುವ ಯಾವ ಸೂಚನೆಯೂ ಕಾಣಿಸಲಿಲ್ಲ. ಅದರಲ್ಲಿರುವ ಹತ್ತಿಯಂತ ಮೆತ್ತನೇ ವಸ್ತುಗಳನ್ನು ತೆಗೆಯುತ್ತಾ ಹೋದಂತೆ ಸಣ್ಣ ಪೊಟ್ಟಣವೊಂದು ಉದ್ಭವವಾಯಿತು. ಆಗಲೇ ನನ್ನ ಜಂಗಾಬಲ ಉಡುಗಿತ್ತು.
ನಡುಗುವ ಕೈಗಳಿಂದ ಆ ಪೊಟ್ಟಣ ಬಿಚ್ಚಿದೆ!. ಒಳಗೇನಿದೆ ಅಂತಿರಾ? ಐದು ಅತ್ತರದ (ಸುಗಂಧ ದ್ರವ್ಯ) ಬಾಟಲಿಗಳು ತಣ್ಣಗೇ ದಿಲ್ಲಿಯಿಂದ ಸಾಗಿ ಬಂದು ಕೂತಿದ್ದವು. ಅದರ ಜೊತೆ ಒಂದು ಆಂಗ್ಲ ಭಾಷೆಯ ಪತ್ರ. ಈ ಅತ್ತರು ಬಾಟಲಿಗಳನ್ನು ಐದು ಜನರಿಗೆ ಹಂಚಿ. ಅವರು ಮತ್ತು ಐದು ಅತ್ತರು ಬಾಟಲಿ ಪಡೆಯುತ್ತಾರೆ. ಹಾಗೆಯೇ 100 ಜನ ಗಮ್ಮೆಂದು ನಾರುವ ಈ ಕಳಪೆ ಗುಣಮಟ್ಟದ ಅತ್ತರು ತರಿಸಿ ಬಳಿದುಕೊಂಡರೆ ನಿಮ್ಮ ಟೇಪ್ ರಿಕಾರ್ಡರ್ ಬಂದು ಬಿಡುವುದು ಅಂತ.
ನನ್ನನ್ನು ದಿಲ್ಲಿಯವರು ಪಕ್ಕಾ ಬಕರಾ ಮಾಡಿ ಮೋಸದ ಕೂಪಕ್ಕೆ ದೂಡಿದ್ದರು. ಎಲ್ಲರ ಮಧ್ಯೆ ಟೇಪ್ ರಿಕಾರ್ಡರ್ ತರಿಸುವೆ ಎಂದು ಬೋಂಗು ಬಿಟ್ಟಿದ್ದಕ್ಕಾಗಿ ಮತು ಅದು ಸುಳ್ಳಾಗಿ ಮೋಸ ಹೋಗಿರುವುದರಿಂದ ಅವಮಾನದಲ್ಲಿ ಹೂತು ಹೋದೆ. ಅತ್ತರು ಬಾಟಲಿಗಳು ವಜ್ರಮುನಿ ತರ ಗಹಗಹಿಸಿ ನಕ್ಕಂತೆ ಭಾಸವಾಯಿತು. ಓಡಿ ಹೋಗಿ ಮಾಳ ಸೇರಿದವ ಊಟಕ್ಕೂ ಬರದೇ ಮುಸುಕು ಹಾಕಿ ಮಲಗಿಬಿಟ್ಟೆ. ಈಗಲೂ ಈ ಘಟನೆ ನೆನೆಸಿಕೊಂಡರೆ ಅಷ್ಟು ಸುಲಭಕ್ಕೆ ಮೋಸ ಹೋಗಿದ್ದನ್ನು ನೆನೆಸಿಕೊಂಡು ನಗು ಬಂದರೂ ವಿಷಾಧ ಭಾವ ಮೂಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


