ಲೈಫ್ ಸ್ಟೈಲ್
ಮೂಲಿಕೆ ಮದ್ದುಗಳಿಗೂ ಬೇಕು ಸುರಕ್ಷತೆಯ ಅಗ್ನಿಪರೀಕ್ಷೆ..!
- ಡಾ.ಎನ್.ಬಿ.ಶ್ರೀಧರ
“ಈ ಇಂಗ್ಲಿಷ್ ಔಷಧಿಗಳಿಗೆಲ್ಲಾ ಸೈಡ್ ಇಫೆಕ್ಟ್ ಜಾಸ್ತಿ. ನಾನು ತಗೋಳ್ತಾ ಇರೋದು ಗಿಡಮೂಲಿಕೆ ಔಷಧಿ. ನಮ್ಮನೇ ದನಗಳಿಗೂ ನಾನು ನಾಟಿ ಔಷಧೀನೇ ಮಾಡಿಸೋದು” ಇದು ಕೆಲವು ರೈತರ ಅಭಿಪ್ರಾಯ. ಔಷಧಿ ಅಂದರೆ ಪರಿಣಾಮವಿರುವ ಔಷಧಿಗೆ ಅಡ್ಡಪರಿಣಾಮ ಇದ್ದೇ ಇರುತ್ತದೆ. ಅಡ್ಡಪರಿಣಾಮಗಳಿಲ್ಲ ಅಂದರೆ ಅದಕ್ಕೆ ಪರಿಣಾಮವೂ ಇಲ್ಲ.
ಇದು ಔಷಧಿಗಳಿಗೆಲ್ಲ ಇರುವ ಮಾತೃ ವೇದವಾಕ್ಯ!!. “ಔಷಧಿ ಎರಡೂ ಕರೆ ಕುಯ್ಯುವ ಗರಗಸ ಇದ್ದ ಹಾಗೇ. ಅದು ರೋಗವನ್ನು ವಾಸಿ ಮಾಡಬಲ್ಲದು. ಹಾಗೆಯೇ ಮನುಜನ ಶರೀರಕ್ಕೆ ಹಾನಿಯನ್ನೂ ಉಂಟು ಮಾಡಬಲ್ಲದು” ಎಂದು ಆಂಗ್ಲ ಗಾದೆಯಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಗಿಡಮೂಲಿಕೆಗಳ ಸಾಧಕ ಬಾಧಕಗಳೇನು ಎಂಬುದು ಮುಖ್ಯವಲ್ಲವೇ? ತಿಳಿದುಕೊಳ್ಳೋಣ.
ಭಾರತವು ಪುರಾತನ ಪರಂಪರೆಯಿಂದ ಗಿಡಮೂಲಿಕೆ ಔಷಧಿಗಳನ್ನು ಉಪಯೋಗಿಸುತ್ತಾ ಬಂದಿದೆ. ಪ್ರಪಂಚದಾದ್ಯಂತದ ಜನರು ಪ್ರತಿ ವರ್ಷ ಸಾವಿರಾರು ವಿವಿಧ ಗಿಡಮೂಲಿಕೆ ಔಷಧಿಗಳನ್ನು ಬಳಸುತ್ತಾರೆ. ಇದರ ಫಲವಾಗಿ ಈ ಗಿಡಮೂಲಿಕೆ ಔಷಧಿಗಳ ಉದ್ಯಮವು ಎಷ್ಟು “ಲಾಭದಾಯಕ” ವೆನಿಸಿದೆಯೆಂದರೆ, ವಿಶ್ವದಾದ್ಯಂತ ಈ ಉದ್ಯಮದ ಮೌಲ್ಯವು 7000ರೂ ಕೋಟಿಗೂ ಹೆಚ್ಚಿದೆ. ಮೊದಲು ಮನೆ ಮದ್ದು ಎಂದು ಉಪಯೋಗಿಸಲ್ಪಡುತ್ತಿದ್ದ ಈ ಉತ್ಪನ್ನಗಳು ಇಂದು ಉದ್ಯಮಗಳ ಕಣ್ಮಣಿಯಾಗಿವೆ ಎಂದರೆ ಉತ್ಪ್ರೇಕ್ಷೆ ಅಲ್ಲ.
ಹೌದು! ಉಧ್ಯಮಗಳು ಲಾಭ ಮಾಡಲೆಂದೇ ಇರುವುದು. ಆದರೆ ಅತಂಕದ ವಿಷಯವೆಂದರೆ ಈ ಗಿಡ ಮೂಲಿಕೆ ಔಷಧಿಗಳ ತಯಾರಿಕೆ, ಮಾರಾಟ ಮತ್ತು ಮಾರಾಟೋತ್ತರ ನಡುವಳಿಕೆಗಳ ಬಗ್ಗೆ ಸಾಕಷ್ಟು ಕಾನೂನುಗಳಿದ್ದರೂ ಅವುಗಳ ಪಾಲನೆಯ ಬಗ್ಗೆ ಬಗ್ಗೆ ಕಟ್ಟು ನಿಟ್ಟಾದ ನಿಯಂತ್ರಣ ಇಲ್ಲದೇ ಇಲ್ಲದಿರುವುದು. ಇದರಿಂದಲೇ ಈ ಗಿಡಮೂಲಿಕೆ ಔಷಧಿಗಳ ಹೆಸರಿನಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತುತ್ತಿರುವ ಹೊಸ ಹೊಸ ಕಂಪನಿಗಳು !!.
ಈ ಉದ್ಯಮದ ವ್ಯಾಪಕತೆಯು ಕಣ್ಣಿಗೆ ಕಾಣದಂತೇನೂ ಇಲ್ಲ; ಇವುಗಳ ಜಾಹಿರಾತುಗಳಂತೂ ದಿನಬೆಳಗಾದರೆ ಪತ್ರಿಕೆಗಳು, ನಿಯತಕಾಲಿಕೆಗಳು,ಹಲವಾರು ದೃಶ್ಯ ಮಾಧ್ಯಮಗಳಲ್ಲಿ ಕಂಡು ಬರುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಈ ಮಾರುಕಟ್ಟೆಯು ಗಣನೀಯ ವೇಗವನ್ನು ಗಳಿಸಿದೆ. ಇದರ ಜೊತೆಗಿರುವ ಪ್ರಮುಖ ಅಪಾಯವೆಂದರೆ, ಗ್ರಾಹಕರು ತಮಗರಿವಿಲ್ಲದೇ ಪರಿಶೀಲಿಸದ ಅಥವಾ ಅಧಿಕೃತವಲ್ಲದ ಪೂರಕ ಆಹಾರ ಪದಾರ್ಥಗಳು ಮತ್ತು ಔಷಧಿಗಳನ್ನು ಸೇವಿಸುವ ಸಾಧ್ಯತೆ ಹೆಚ್ಚಾಗಿದೆ.ಮೂಲಿಕೆ ಮದ್ದುಗಳೆಲ್ಲಾ ಸುರಕ್ಷಿತ ಎಂಬ ಭ್ರಮೆ ಬೇಡವೇ ಬೇಡ. ಪರಿಣಾಮವಿರುವ ಯಾವುದೇ ಔಷಧಿಗೆ ಯಾವುದಾದರೊಂದು ಅಡ್ಡಪರಿಣಾಮ ಇದ್ದೇ ಇರುತ್ತದೆ ಎನ್ನುವುದು ಕಟು ಸತ್ಯ.
ಆಧುನಿಕ ವಿಜ್ಞಾನದಿಂದ ತುಲನಾತ್ಮಕವಾಗಿ ದೂರವಿರುವ ಗಿಡ ಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧಿಗಳ ವಿಚಾರದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದ್ದು, ಅವು ಮಾರುಕಟ್ಟೆ ಪ್ರವೇಶಿಸುವ ಮೊದಲು ಕಠಿಣ ತಪಾಸಣೆಗೆ ಒಳಪಡುವುದಿಲ್ಲ ಎಂಬುದು ಬೆಚ್ಚಿಬೀಳಿಸುವ ಸತ್ಯ. ಕೇವಲ “ಇವು ಪಾರಂಪರಿಕ ಔಷಧಗಳು, ಪುರಾತನ ಕಾಲದಿಂದ ಬಳಕೆಯಲ್ಲಿವೆ; ಇವುಗಳಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬದು ಒಂದು ಸುಳ್ಳಿನ ಕಂತೆ. ಕೇವಲ ಇವು ಸುರಕ್ಷಿತ ಎಂಬ ನಂಬಿಕೆಯ ಮೇಲೆ ನಡೆಯುತ್ತಿರುವುದು ಮತ್ತು ಮಾರಾಟವಾಗುತ್ತಿರುವುದು ಅಪ್ರಿಯವಾದ ಸತ್ಯ.
ಹಾಗಿದ್ದರೆ ಹೇಗೆ ಈ ಗಿಡಮೂಲಿಕೆಗಳ ಉತ್ಪನ್ನಗಳು ರಹದಾರಿ ಪಡೆಯುತ್ತವೆ ಎಂಬುದನ್ನು ನೋಡೋಣ. ಭಾರತದಲ್ಲಿ ಶೇ 80 ರಷ್ಟು ಹಳ್ಳಿಯ ಜನ ಗಿಡಮೂಲಿಕಾ ಔಷಧಿಗಳನ್ನು ಅವರ ವಿವಿಧ ಕಾಯಿಲೆಗಳ ಪ್ರಾಥಮಿಕ ಚಿಕಿತ್ಸೆಗೆ ಬಳಸುತ್ತಾರಂತೆ. ಆಯುಶ್ ಇಲಾಖೆಯ ಪ್ರಕಾರ ಸಧ್ಯ ಭಾರತದಲ್ಲಿ 10088 ಗಿಡಮೂಲಿಕೆ ಔಷಧಿ ತಯಾರಿಸುವ ರಹದಾರಿ ಪಡೆದಿರುವ ಕಂಪನಿಗಳಿದ್ದರೆ ಇವುಗಳಲ್ಲಿ ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ) ದ ಬಗ್ಗೆ ಅನುಮತಿ ಪಡೆದಿರುವವರು5402 ಮಾತ್ರ.
ಈ ಔಷಧಿಗಳ ತಯಾರಿಕೆಗೆ ರಹದಾರಿ ಪಡೆಯಲು ಮೂರು ಕೊಠಡಿಗಳಿರುವ1200 ಚದರ ಅಡಿ ಕಟ್ಟಡ ಸಾಕು. ಇದರಲ್ಲಿ ಒಂದು ತಯಾರಿಕಾ ಕೊಠಡಿ, ಒಂದು ಸಂಗ್ರಹ ಕೊಠಡಿ ಮತ್ತು ಒಂದು ಕ್ವಾರಂಟೈನ್ ಕೊಠಡಿ ಇರಬೇಕು. ಒಂದು ಔಷಧಿ ತಯಾರಿಕೆಗೆ ಆಯುಶ್ ಮಂತ್ರಾಲಯದವರು ಸೂಚಿಸಿದ ಉಪಕರಣಗಳು, ಕೊಠಡಿಗಳು, ಸಂಬಂಧ ಪಟ್ಟ ವಿವಿಧ ದಾಖಲೆಗಳ ಸಮೇತ ಆಯಾ ರಾಜ್ಯದ ಆಯುಶ್ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಅಲ್ಲಿನ ಪರೀಕ್ಷಕರ ವರದಿಯಾದ ನಂತರ ರಹದಾರಿ ದೊರೆಯುತ್ತದೆ. ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ) ದ ಬಗ್ಗೆ ಮತ್ತೊಂದು ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯಬೇಕು. ಎಲ್ಲ ಕಡೆ ಇರುವಂತೆ ಇಲ್ಲಿಯೂ ಸಹ ಕೆಂಪು ಪಟ್ಟಿ ಅಧಿಕಾರಶಾಹಿ ಇತ್ಯಾದಿ ಅಡೆ ತಡೆ ಇದ್ದೇ ಇರುತ್ತದೆ.
ಉತ್ಪನ್ನ ತಯಾರಿಸುವ ಮೊದಲು ಅದರ ಬಗ್ಗೆ ಪುಸ್ತಕದಲ್ಲಿ ಪರಿಣಾಮದ ಬಗ್ಗೆ ಉಲ್ಲೇಖವಿರಬೇಕು. ಕಂಪನಿಯ ಏಕಮೇವ ಉತ್ಪನ್ನವಾಗಿದ್ದರೆ ಸರ್ಕಾರಿ ಆಸ್ಪತ್ರೆಗಳು ಅಥವಾ ಮಹಾವಿದ್ಯಾಲಯದಿಂದ ಆ ಉತ್ಪನ್ನದ ಬಗ್ಗೆ ಸಂಶೋಧನಾ ಲೇಖನಗಳು ಬೇಕು. ಆಗ ಈ ಔಷಧಿಯನ್ನು ಭಾರತಲ್ಲಿ ಮಾರಾಟ ಮಾಡಲು ತೊಂದರೆ ಇಲ್ಲ.
ಅಮೇರಿಕಾ ಮತ್ತಿತರ ದೇಶಗಳಲ್ಲಿ ಇದನ್ನು “ಅಹಾರ ಪೂರಕ” (ಡಯಟರಿ ಸಪ್ಲಿಮೆಂಟ್) ಎಂದು ಮಾರಾಟ ಮಾಡಬಹುದು. ಇದಕ್ಕೆ ಆ ದೇಶದ 1974 ರ ನಿಯಮದಡಿ ಅವಕಾಶ ನೀಡಲಾಗಿದೆ. ಇದಕ್ಕೆ ಉತ್ಪನ್ನದ ಪರಿಣಾಮ ಮತ್ತು ಅಡ್ಡ ಪರಿಣಾಮದ ಬಗ್ಗೆ ಮಾಹಿತಿ ನೀಡುವ ಅವಶ್ಯಕತೆ ಇಲ್ಲ. ಆದರೆ ಅದನ್ನು ಔಷಧಿ ಎಂದು ಯಾವ ಕಾರಣಕ್ಕೂ ಹೇಳುವ ಹಾಗಿಲ್ಲ. “ಔಷಧಿ” ಎಂದರೆ ಅಹಾರ ಮತ್ತು ಔಷಧ ನಿಯಂತ್ರಣ ಆಡಳಿತ ( ಎಫ಼್ ಡಿ ಏ) ದ ವ್ಯಾಪ್ತಿಯಲ್ಲಿ ಬಂದು ಅತ್ಯಂತ ಕಠಿಣ ನಿಯಮದಡಿ ಬರುತ್ತದೆ.
ಕಾರಣ ಅಮೇರಿಕಾಕ್ಕೆ ಬಹಳ ಗಿಡ ಮೂಲಿಕಾ ಉತ್ಪನ್ನಗಳು ರಪ್ತಾಗುತ್ತವೆ. ಚ್ಯವನ ಪ್ರಾಶದಂತ ಕೆಲವು ಉತ್ಪನ್ನಗಳು ಕೆನಡಾದಂತ ದೇಶದಲ್ಲಿ ಬ್ಯಾನಾಗಿದ್ದು ಅದರಲ್ಲಿ ಸತುವಿನಂತ ಹೆಚ್ಚಿನ ಭಾರ ಲೋಹಗಳಿವೆ ಎಂಬ ಅಂಶಗಳಿಗಾಗಿ. ಆದರೆ ಇದರ ಪರಿಸ್ಥಿತಿ ಯರೋಪ್ ಖಂಡದ ದೇಶದಲ್ಲಿ ಸ್ವಲ್ಪ ಭಿನ್ನವಾಗಿದೆ. ಭಾರತದ ಪಾರಂಪರಿಕ ಗಿಡಮೂಲಿಕಾ ಉತ್ಪನ್ನಗಳನ್ನು ಅಲ್ಲಿ ಅಮೇರಿಕಾದ ಹಾಗೇ ಸುಲಭದಲ್ಲಿ ಮಾರುವ ಹಾಗಿಲ್ಲ. ಇವುಗಳ ಪರಿಣಾಮ ಮತ್ತು ಅಡ್ಡಪರಿಣಾಮ ಇವೆಲ್ಲವುಗಳಿಗೆ ಪೂರಕವಾಗಿ ಹಲವಾರು ಸಂಶೋಧನಾ ಲೇಖನಗಳು ಇನ್ನಿತರ ದಾಖಲೆಗಳನ್ನು ನೀಡಬೇಕು.
ಅಲ್ಲದೇ ಉತ್ಪನ್ನದೊಳಗಿರುವ ಪ್ರತಿಯೊಂದು ಗಿಡಮೂಲಿಕಾ ಪದಾರ್ಥವು ಪ್ರಮಾಣೀಕರಣಗೊಂಡಿರಬೇಕು ಮತ್ತು ಯಾವ ಕಾಲದಲ್ಲಿಯಾದರೂ ಯಾವ ಮಾದರಿಯನ್ನಾದರೂ ತೆಗೆದುಕೊಂಡು ತಾಳೆಹಾಕಿದಾಗ ಅದು ಹೊಂದಾಣಿಕೆಯಾಗಲೇಬೇಕು. ಆ ದೇಶಗಳ ಕಾನೂನಿನಂತೆ ಹರ್ಬಲ್ ಮೆಡಿಸಿನಲ್ ಪ್ರೊಡಕ್ಟ್ ಡೈರೆಕ್ಟಿವ್2004 ರ ನಿಯಮಾನುಸಾರ ಉತ್ಪನ್ನಕ್ಕೆ ಅದರ ಉಪಯೋಗ, ಪ್ರಮಾಣ, ಅಡ್ಡ ಪರಿಣಾಮ, ನೀಡುವ ವಿಧಾನ ಈ ಎಲ್ಲವಕ್ಕೂ ದಾಖಲೆಗಳಿರಬೇಕು. ಅಲ್ಲದೇ ಯರೋಪ್ ದೇಶಗಳಲ್ಲ್ ಮ್ರು ರುಕಟ್ಟೆ ಮಾಡಬೇಕಾದರೆ15ವರ್ಷಗಳ ಮಾರುಕಟ್ಟೆ ಅನುಭವ ಇರಬೇಕು. ಇಷ್ಟೆಲ್ಲ ಕಟ್ಟಳೆಗಳಿರಬೇಕಾದರೆ ಅಲ್ಲಿ ಈ ಗಿಡಮೂಲಿಕಾ ಉತ್ಪನ್ನಗಳನ್ನು ಮಾರುವುದು ಅತ್ಯಂತ ಕಷ್ಠಕರ.
ಇನ್ನು ಆಫ್ರಿಕಾದಂತ ಹಿಂದುಳಿದ ದೇಶದಲ್ಲಿ ಮಾರುಕಟ್ಟೆ ಇದ್ದರೂ ಸಹ ಅಲ್ಲಿನ ನಿಯಮಗಳೇ ಬೇರೆ. ಹೀಗೆ ದೇಶದಿಂದ ದೇಶಕ್ಕೆ ಬದಲಾಗುವ ನಿಯಮಗಳು ಮಾರಾಟಗಾರರನ್ನು ಹೈರಾಣ ಮಾಡಿತು ಅಂದರೆ ತಪ್ಪಿಲ್ಲ. ಗಿಡ ಮೂಲಿಕೆ ಔಷಧಿಗಳಿಗೆ ಭಾರತದಲ್ಲಿ ಸದ್ಯಕ್ಕೆ ರಹದಾರಿ ಪಡೆಯುವುದರಿಂದ ಹಿಡಿದು ಗುಣಮಟ್ಟ ಕಾಪಾಡುವವರೆಗೆ ಹೆಚ್ಚಿನ ಕಟ್ಟು ಪಾಡುಗಳಿಲ್ಲ. ಭಾರತ ಸರ್ಕಾರದ ಅಧೀನದ ಆಯುಶ್ (ಆಯುರ್ವೇದ, ಸಿದ್ಧ, ಯುನಾನಿ, ಹೋಮಿಯೋಪತಿ ಇಲಾಖೆ) ಸಹ ಈ ಗಿಡಮೂಲಿಕೆ ಉತ್ಪನ್ನಗಳ ಬಗ್ಗೆ ಅವು ನಮ್ಮದೇ ದೇಶದ ಪರಂಪರೆಯಿಂದ ಬಂದ ಪದ್ಧತಿ ಎಂದು ಮೃದುದೋರಣೆ ತಳದಿರಬಹುದು.
ಅಲ್ಲದೇ ವನಸ್ಪತಿ ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ಮೂಲ ಗಿಡಮೂಲಿಕೆಗಳ ಭಾಗ, ಯಾವ ಋತುವಿನಲ್ಲಿ ಇವುಗಳ ಕಟಾವಣೆ ಮಾಡಬೇಕು, ಅರಣ್ಯದ ಅವಲಂಭನೆ, ಇವುಗಳ ಕೃಷಿ ಪದ್ಧತಿ, ಬೆಲೆ ನಿಗದಿ ಮಾಡುವಿಕೆ, ಇವುಗಳ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಇವುಗಳಲ್ಲಿ ಕೀಟನಾಶಗಳು ಮತ್ತು ಭಾರಲೋಹದ ಮಟ್ಟ ಕಡಿಮೆ ಮಾಡುವುದು, ಮೂಲ ವಸ್ತುವಿನ ಗುರುತು ಮಾಡುವುದು ಇವುಗಳ ಬಗ್ಗೆ ಗೊಂದಲದ ಗೂಡೇ ಇದ್ದು ಇದು ಸದ್ಯಕ್ಕಂತೂ ಬಗೆಹರಿಯುವ ಲಕ್ಷಣಗಳಿಲ್ಲ. ಆಯುಶ್ ಇಲಾಖೆ ಅನೇಕ ಮಾನದಂಡಗಳನ್ನು ನಿಗದಿ ಮಾಡಿದರೂ ಅನೇಕ ತಯಾರಿಕರಿಗೆ ಲೈಸನ್ಸ್ ಪಡೆಯುವುದು ಮತ್ತು ಅದರ ನವೀಕರಣ ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಅದನ್ನು ಸಂಪರ್ಕಿಸುವ ಅವಶ್ಯಕತೆ ಕಂಡು ಬಂದಿಲ್ಲ.
ಆಯುಶ್ ಇಲಾಖೆಯ ಪ್ರಕಾರ 600 ವಿವಿಧ ಗಿಡಮೂಲಿಕೆಗಳು, 52 ಖನಿಜಗಳು, 50 ಪ್ರಾಣಿ ಉಪಪದಾರ್ಥಗಳು ಈ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ. ಕಾರಣ ಯಾರು ಬೇಕಾದರೂ ಸುಲಭವಾಗಿ ರಹದಾರಿ ಪಡೆದು ಈ ಉತ್ಪನ್ನಗಳನ್ನು ತಯಾರಿಸಬಹುದು. ಅನೇಕ ಸಲ ಲೇಬಲ್ಲಿನ ಮೇಲೆ ಬರೆದ ಗಿಡ ಮೂಲಿಕೆ ಹಾಕಿರುವರೋ ಇಲ್ಲವೋ ಎಂಬುದೂ ಖಚಿತ ಪಡಿಸಿಕೊಳ್ಳಲು ಸಾಧ್ಯವಿಲ್ಲ.
ಅಲೋಪತಿ ಔಷಧಗಳ ತಯಾರಿಕೆ ವಿಷಯದಂತೆ ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ)ದಲ್ಲಿ ಉತ್ಪನ್ನಗಳ ತಯಾರಿಕೆ ಕಡ್ಡಾಯವಲ್ಲ. ಉತ್ಪನ್ನ ಕಳಪೆಯೆಂದಾದರೆ ದೂರು ನೀಡಬಹುದಾದರೂ ಸಹ ಅನೇಕ ಪದಾರ್ಥಗಳು ಒಂದು ಉತ್ಪನ್ನದಲ್ಲಿ ಇರುವುದರಿಂದ ಮತ್ತು ಇವೆಲ್ಲವು ಅದರಲ್ಲಿ ಇದೆಯೇ ಎಂಬುದನ್ನು ಅಳೆಯಲು ಯಾವುದೇ ಪ್ರಮಾಣೀಕೃತ ಪ್ರಯೋಗ ಪದ್ದತಿಗಳಿಲ್ಲ. ಇದರಿಂದ ಬಹುತೇಕ ತಯಾರಿಕೆದಾರರಲ್ಲಿ ಈ ಕಾನೂನಲ್ಲಿರುವ ಈ ಎಲ್ಲ ಕಂದಕ ಗಮನಿಸಿ ಮೋಸ ಮಾಡಲು ದಾರಿ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.
ಇತ್ತೀಚಿನ ದಿನಗಳಲ್ಲಿ ಅತ್ಯಂತ ಚರ್ಚೆಗೊಳಗಾದ ವಿಷಯವೆಂದರೆ ಈ ಗಿಡಮೂಲಿಕೆ ಉತ್ಪನ್ನಗಳನ್ನು ಔಷಧಿಯೆಂದು ಪರಿಗಣಿಸಬೇಕೆ ? ಅಥವಾ ಪರಂಪರಾಗತವಾಗಿ ಬಂದವೆಂಬ ಕಾರಣದಿಂದ ಅವುಗಳ ವಿಷಗುಣದ ಬಗ್ಗೆ ಪರೀಕ್ಷೆ ನಡೆಸುವುದು ಬೇಡವೇ? ಎಂಬ ಬಗ್ಗೆ. ಇದರ ಕುರಿತು ಚೈನ ಗಿಡಮೂಲಿಕೆ ಉತ್ಪನ್ನಗಳನ್ನು ಜಾಸ್ತಿ ಬಳಸುವ ಚೈನಾದ ವಿಜ್ಞಾನಿಗಳದ್ದು ಈ ನಿಟ್ಟಿನಲ್ಲಿ ಪ್ರತ್ಯೇಕ ಹೇಳಿಕೆ ನಮ್ಮ ಗಮನ ಸೆಳೆಯುತ್ತದೆ. ಅವರು “ ನಮ್ಮ ಗಿಡಮೂಲಿಕೆ ಉತ್ಪನ್ನಗಳನ್ನು ಔಷಧಿ ಎಂದುಕೊಂಡರೆ ಅವುಗಳನ್ನು ಪಾಶ್ಚಿಮಾತ್ಯ ಪದ್ದತಿಗಳ ಪ್ರಕಾರವೇ ಕಠಿಣ ಪರೀಕ್ಷೆಗೊಳಪಡಿಸಬೇಕು” ಎನ್ನುತ್ತಾರೆ.
ಇವುಗಳು ಸುರಕ್ಷಿತ ಎನ್ನುವುದು ಉತ್ಪ್ರೇಕ್ಷೆಯಿಂದ ಹೇಳುವ ಹೇಳಿಕೆ. ಗಿಡಮೂಲಿಕೆ ಉತ್ಪನ್ನಗಳು ಉತ್ಪನ್ನಗಳು ಎನ್ನುವುದಾದರೆ ಓಇಸಿಡಿ ನಿಯಮಗಳ ಪ್ರಕಾರವೇ ಅವುಗಳ ಪರೀಕ್ಷೆ ನಡೆಯುವುದರಲ್ಲಿ ತಪ್ಪೇನಿದೆ?” ಎಂಬುದು.ಎಲ್ಲಾ ಔಷಧಿಗಳೂ ಅವುಗಳದೇ ಆದ ಅಡ್ಡಪರಿಣಾಮ ಹೊಂದಿವೆ. “ಔಷಧಿ ಎರಡೂ ಕರೆ ಕುಯ್ಯುವ ಗರಗಸ ಇದ್ದ ಹಾಗೇ. ಅದು ರೋಗವನ್ನು ವಾಸಿ ಮಾಡಬಲ್ಲದು. ಹಾಗೆಯೇ ಮನುಜನ ಶರೀರಕ್ಕೆ ಹಾನಿಯನ್ನೂ ಉಂಟು ಮಾಡಬಲ್ಲದು” ಎಂದು ಆಂಗ್ಲ ಗಾದೆಯಲ್ಲಿ ಹೇಳಲಾಗಿದೆ.
ಆದರೆ ಭಾರತೀಯರಲ್ಲಿ ಇದಕ್ಕೆ ಭಿನ್ನಾಭಿಪ್ರಾಯವಿದೆ. “ನಮ್ಮ ಪದ್ಧತಿ ಬಹಳ ಪುರಾತನವಾದದ್ದು. ಇದಕ್ಕೆ 5000 ವರ್ಷಗಳ ಇತಿಹಾಸವಿದೆ. ಇದನ್ನು ಅಲೋಪತಿ ಪದ್ಧತಿಯಲ್ಲಿ ಪರೀಕ್ಷೆಗೆ ಒಳಪಡಿಸುವುದು ಸರಿಯಲ್ಲ” ಎಂಬುದು. ಇದಕ್ಕೆ ತದ್ವಿರುದ್ಧವಾಗಿ ಒಂದಷ್ಟು ಜನ. ನಮ್ಮದು ಪುರಾತನ ಪದ್ಧತಿ ಎನ್ನುವುದು ಸರಿ. ಆದರೆ ಪುರಾತನ ಪದ್ಧತಿಯಾಗಿ ಇದು ಈಗ ಉಳಿದಿಲ್ಲ. ಬಹುತೇಕ ವಾಣಿಜ್ಯೀಕರಣವಾಗಿದೆ. ಲಾಭಕ್ಕಾಗಿಯೇ ಕೆಲವು ಕಂಪನಿಗಳು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅವುಗಳಿಗೆ ಕಠಿಣ ಪರೀಕ್ಷೆಗಳ ಕಡಿವಾಣ ಹಾಕಲೇಬೇಕು” ಎನ್ನುತ್ತಾರೆ ಅನೇಕರು.
ಇದಕ್ಕೆ ಅನೇಕ ಉದಾಹರಣೆಗಳನ್ನು ಅವರು ನೀಡುತ್ತಾರೆ. ಗಿಡಮೂಲಿಕೆಗಳನ್ನು ಹೊಂದಿದೆ ಎನ್ನಲಾಗುವ ಸೋಪುಗಳು, ಮುಲಾಮುಗಳು ಮೈಗೆ ಹಚ್ಚಿದ ಕೂಡಿದ ಕೂಡಲೇ ಅಲರ್ಜಿಯನ್ನುಂಟು ಮಾಡುವುದು, ಕೆಲವೊಂದು ಗಿಡಮೂಲಿಕೆಗಳ ಪ್ರಮಾಣ ಜಾಸ್ತಿಯಾದರೆ ಅದು ವಿಷಕಾರಿಯಾಗಬಲ್ಲದು ಎನ್ನುತ್ತಾರೆ. ಇವುಗಳಲ್ಲಿ ತಲೆನೋವು, ತಲೆ ತಿರುಗುವಿಕೆ, ಚರ್ಮದ ಮೇಲೇಳುವ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಸೇರಿರುತ್ತವೆ.
ಉದಾಹರಣೆಗೆ ಅಮೇರಿಕಾದ ಎಫ್ ಡಿ ಎ ಇದು2004 ರಲ್ಲಿ ಚೀನಾ ಮತ್ತು ಭಾರತದಿಂದ ಆಮದಾಗುವ ದೇಹತೂಕವನ್ನು ಕಡಿಮೆ ಮಾಡಲು ಬಳಸುವ ಎಫಿಡ್ರಾ ಗಿಡಮೂಲಿಕೆಯನ್ನು ಹೊಂದಿದ ಎಲ್ಲಾ ಉತ್ಪನ್ನಗಳನ್ನು ಬ್ಯಾನ್ ಮಾಡಿತು. ಕಾರಣ ಇಷ್ಟೇ. ಈ ಎಫಿಡ್ರಾ ಸಿನಿಕಾ ಎಂಬ ಗಿಡದ ಬಹುತೇಕ ಭಾಗಗಳಲ್ಲಿ ಎಫಿಡ್ರಿನ್ ಮತ್ತು ಅಂಫೆಟಮೈನ್ ಎಂಬ ಔಷಧಿ ಇದ್ದು ಇದು ನರಮಂಡಲದ ಉದ್ರೇಕಿಸಿ ವಿಷವನ್ನುಂಟು ಮಾಡಿ ಸುಮಾರು 155 ಜನರನ್ನು ಮುಗಿಸಿತು ಎಂದು ಎಫ್ ಡಿ ಏ ವಾದ.
ಒಂದು ಗಿಡಮೂಲಿಕೆ ಮೂಲದ ಉತ್ಪನ್ನಗಳು ಸುರಕ್ಷಿತವೆಂದು ಎಲ್ಲರಿಂದ ಪರಿಗಣಿಸಲ್ಪಡುವುದಾದರೂ, ಮುಂಜಾಗ್ರತೆಯು ಅಗತ್ಯವಾಗಿದೆ. ಒಂದು ವಸ್ತುವಿನ ಲೇಬಲ್‌ನಲ್ಲಿ “ನೈಸರ್ಗಿಕ” ಎಂದು ಬರೆಯಲ್ಪಟ್ಟಿದ್ದ ಮಾತ್ರಕ್ಕೆ ಮುಂಜಾಗ್ರತೆ ವಹಿಸುವುದನ್ನು ಅಲಕ್ಷಿಸಬಾರದು. “ಸುರಕ್ಷಿತ” ಎಂಬುದು ಈ ಉತ್ಪನ್ನಗಳ ವಿಷಯದಲ್ಲಿ ಒಂದು ನಂಬಿಕೆ ಅಷ್ಟೇ. ಯಾವುದೂ ವೈಜ್ಞಾನಿಕ ಪದ್ಧತಿಯಲ್ಲಿ ಸಿದ್ಧವಾಗಿಲ್ಲ. ಇದರಲ್ಲಿ ವನಸ್ಪತಿಗಳ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಇವುಗಳು ತುಂಬಾ ಸುರಕ್ಷಿತ ಎಂಬುದು ಹಲವರ ನಂಬಿಕೆ.
ಕೆಲವು ಗಿಡಮೂಲಿಕೆಗಳ ಉತ್ಪನ್ನಗಳ ವಿಷಯದಲ್ಲಿ ಇದು ನಿಜ ಕೂಡಾ. ಆದರೆ ಜೀವನದಲ್ಲಿ ನಂಬಿಕೆ ಹೊರತು ನಂಬಿಕೆಯೇ ಜೀವನವಾಗಬಾರದು. ಈ ಗಿಡಮೂಲಕ ಉತ್ಪನ್ನಗಳನ್ನು ಪ್ರಿಕ್ಲಿನಿಕಲ್ ಅಡ್ಡಪರಿಣಾಮಗಳ ಪರೀಕ್ಷೆಗೆ ಒಡ್ಡಲೇಬೇಕೆನ್ನುವುದು ನಿಜ.
ಒಂದು ವಿಚಾರ. ಇಷ್ಟೆಲ್ಲಾ ಇದ್ದರೂ ಈ ಗಿಡಮೂಲಿಕೆ ಔಷಧಿಗಳ ದರ ಸಾಮಾನ್ಯ ಜನರ ಕೈಗೆಟಕುವ ಹಾಗೆ ಇವೆಯೇ? ಖಂಡಿತಾ ಇಲ್ಲ. ಬಹುತೇಕ ಕಂಪನಿಗಳು ತಯಾರಿಸುವ “ನೈಸರ್ಗಿಕ” ಉತ್ಪನ್ನಗಳ ಬೆಲೆ ಸಾಮಾನ್ಯರಿಗೆ ಗಗನ ಕುಸುಮ. ಅಲ್ಪ ಸ್ವಲ್ಪ ಸಂಶೋಧನೆಗಾಗಿ ಮತ್ತು ಧಾರಾಳವಾಗಿ ಜಾಹಿರಾತಿಗಾಗಿ ಹಣ ಖರ್ಚು ಮಾಡುವ ಪ್ರತೀಷ್ಠಿತ ಗಿಡಮೂಲಿಕಾ ಉತ್ಪನ್ನಗಳ ತಯಾರಿಕಾ ಕಂಪನಿಗಳ ಉತ್ಪನ್ನಗಳ ಬೆಲೆಯಂತೂ ಸಾಮಾನ್ಯರ ಪಾಲಿಗೆ ಮುಗಿಲ ಮಲ್ಲಿಗೆ. ಹಾಗಿದ್ದರೆ ಯಾವ ರೀತಿಯಲ್ಲಿ ಈ ಉತ್ಪನ್ನಗಳು ಒಳ್ಳೆಯವು? ಉಪಯೋಗಿಸುವವರೇ ಈ ಕುರಿತು ವಿಚಾರ ಮಾಡಬೇಕು.
ಒಂದು ದೇಶಕ್ಕೆ ಸೀಮಿತವಾಗಿರದೇ ಜಗತ್ತಿನ ಸುಮಾರು 56 ದೇಶಗಳಲ್ಲಿ ಜನರ ದೈನಂದಿನ ಬದುಕಿನಲ್ಲಿ ಉಪಯೋಗುತ್ತಿರುವ ವನಸ್ಪತಿ ಗಿಡಮೂಲಿಕೆಗಳ ಉತ್ಪನಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಈ ಉತ್ಪನ್ನಗಳ ಬಗ್ಗೆ ವಿಶ್ವ ಮಟ್ಟದ ಮಾನದಂಡ, ಸಮಯೋಚಿತ ಉಪಯೋಗ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ವನಸ್ಪತಿಗಳ ಉತ್ತಮ ತಳಿ ಬೀಜಗಳ ಲಭ್ಯತೆ, ಇವುಗಳ ಉತ್ತಮ ಕೃಷಿ ಪದ್ದತಿ, ಕಟಾವಣೆ ಪದ್ಧತಿ, ಶೇಖರಣಾ ಪದ್ಧತಿ, ಸಂಸ್ಕರಣೆ, ಕಚ್ಚಾ ವಸ್ತು ಮತ್ತು ವಾಣಿಜ್ಯ ಉತ್ಪನ್ನಗಳ ಕನಿಷ್ಠ ದರ ನಿಗದಿ ಮಾಡುವಿಕೆ, ವಾಣಿಜ್ಯ ಉತ್ಪಾದನೆ ಇವುಗಳ ಬಗ್ಗೆ ಗಮನ ಹರಿಸಿ ಜಾಗತಿಕ ಮಾನದಂಡ ರೂಪಿಸಬೇಕಾದ ಅವಶ್ಯಕತೆಯಿದೆ. “ವಿಶ್ವಗುರು” ಎಂದು ಕರೆಸಿಕೊಳ್ಳಲು ಉತ್ಸುಕವಾದ ಭಾರತವೇ ಈ ನಿಟ್ಟಿನಲ್ಲಿ ನಾಯಕತ್ವವಹಿಸಿ ಮೂಲಿಕೆ ಮದ್ದುಗಳನ್ನು ಮಾರಾಟಮಾಡಲು ಕಠಿಣ ನಿಯಮ ತಂದು ಅಗ್ನಿಪರೀಕ್ಷೆಗೆ ಒಡ್ಡಿ ಪುಟವಿಟ್ಟ ಬಂಗಾರದಂತೆ ಹೊರಬಂದು ಜನರ ಆರೋಗ್ಯದ ರಕ್ಷಣೆ ಮಾಡಲಿ ಎಂಬುದೇ ಈ ಲೇಖನದ ಉದ್ದೇಶ.
ಆಕರ ವೈಜ್ಞಾನಿಕ ಲೇಖನಗಳು
1. BENT, S. 2008. Herbal medicine in the United States: Review of efficacy, safety, and regulation: Grand rounds at University of California, San Francisco Medical Center. Journal of General Internal Medicine, 23(6):854-859.
2. JUNHUA ZHANG, IGHO J. ONAKPOYA, PAUL POSADZKI and MOHAMED EDDOUKS.2015. The Safety of Herbal Medicine: From Prejudice to Evidence. Evidence-Based Complementary and Alternative Medicine, 15 (2): 231-234.
3. LEE, M. K. , CHENG, B. W. H. , CHE, C. T. AND HSIEH, D. P. H. 2006. Cytotoxicity assessment of Ma-Huang (Ephedra) under different conditions of preparation. Toxicological Sciences, 56(2): 424-430
4. NIHARIKA SAHOO and PADMAVATI MANCHIKANTI, 2013. Herbal Drug Regulation and Commercialization. An Indian Industry Perspective. The Journal of Alternative and Complementary Medicine, 19(12):957-963
5. Ramawat, K.G. and Goyal, S.2008. The Indian Herbal Drugs Scenario in Global Perspectives. Bioactive Molecules and Medicinal Plants. 5(1):1-25
6. The Drugs and Cosmetics Act, 1940 and Drugs and Cosmetics (Amendments) Act, 2019. Ministry of Health and Family Welfare. Department of Health. Government of India. Updated till 30th April, 2019. pp 452-545.
7. World Health Organization. 1998. Regulatory Situation of Herbal Medicines A Worldwide Review. https://apps.who.int/medicinedocs/pdf/whozip57e/whozip57e.pdf
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

ದಿನದ ಸುದ್ದಿ
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್, ರ‍್ಯಾಪಿಡೋ ನಂತಹ ಆ್ಯಪ್‌ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
http://Visit : www.suddidina.com
ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.
ನಮ್ಮ ಬಿಎಂಟಿಸಿ 2.0′ ಆ್ಯಪ್‌ನಲ್ಲಿ ಏನಿದೆ ಹೊಸತು?
ಖಾಸಗಿ ಆ್ಯಪ್‌ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್‌ನಲ್ಲಿ ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳಿವೆ. ಪ್ರತಿದಿನ ಸರಾಸರಿ 6,200 ಬಸ್‌ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.
ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ:
ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
200 ಹೊಸ ಮಿನಿ ಬಸ್‌ಗಳ ಖರೀದಿ:
ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್‌ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್‌ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್‌ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.
ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:
ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 200 ಮಿನಿ ಎಸಿ ಇ-ಬಸ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್‌ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

ದಿನದ ಸುದ್ದಿ
EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ
ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.
http://Visit : www.suddidina.com
ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.
ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.
ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.
ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

-
ದಿನದ ಸುದ್ದಿ1 day agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ1 day agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ1 day ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ1 day agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ1 day agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್
-
ದಿನದ ಸುದ್ದಿ14 hours agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ1 day agoಮೊದಲ ಬಾರಿಗೆ ಗೋನೂರು ಕೆರೆಗೆ ಹರಿದು ಬಂದ ಭದ್ರೆ – ರೈತರ ಸಂಭ್ರಮಾಚರಣೆ
-
ದಿನದ ಸುದ್ದಿ14 hours agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!


