ರಾಜಕೀಯ
ರಕ್ಷಣಾ ಅಗತ್ಯಗಳನ್ನು ಪೂರೈಸಲು ರಕ್ಷಣಾ ಇಲಾಖೆಯ ಭೂಮಿಗಳ ಮೆಗಾ ಸೇಲ್..!
-
ಅರ್ಜುನ್ ಬಿ.
ಕನ್ನಡಕ್ಕೆ: ಕೆ.ಎಂ.ನಾಗರಾಜ್
ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ. ಫಲಿತಾಂಶವೆಂದರೆ, ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಆರು ವರ್ಷಗಳ ಹಿಂದೆ ಭಾರತದ ಜನತೆಗೆ ಕಾಣಿಸಿದ್ದ ಅವರ ಆಳ್ವಿಕೆಯಲ್ಲಿ ಈಗ ದೇಶ ತನ್ನ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ತನ್ನ ಖರ್ಚು ವೆಚ್ಚಗಳಿಗೆ ತನ್ನ ಆಸ್ತಿಗಳನ್ನು ಮಾರಿಕೊಂಡು ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.
___________________________________________
ಆರು ವರ್ಷಗಳ ಹಿಂದೆ, ಪ್ರಧಾನ ಮಂತ್ರಿ ಮೋದಿಯವರು ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಭಾರತದ ಜನತೆಗೆ ಕಾಣಿಸಿದ್ದರು. ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸುವುದಾಗಿ ಅವರು 2014ರಲ್ಲಿ ಘೋಷಿಸಿದ್ದರು. ದೇಶದ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಜಾಗತಿಕ ವ್ಯವಹಾರ-ವಿದ್ಯಮಾನಗಳಲ್ಲೂ ಭಾರತವು ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ ಎಂದು ಮೋದಿ ಭಾವಿಸಿದ್ದರು. ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ನಂತರವಂತೂ ಮೋದಿಯವರ ವರ್ಚಸ್ಸಿನಿಂದ ಭಾರತದ ಮತದಾರರು ಮಾತ್ರವಲ್ಲ ಅಂತಾರಾಷ್ಟ್ರೀಯ ಸಮುದಾಯವೇ ನಿಬ್ಬೆರಗಾಗಿದೆ ಎಂದೇ ಮೋದಿ ಭಕ್ತರು ಭಾವಿಸಿದ್ದಾರೆ. ಹಾಗಾಗಿ, ಕಾಶ್ಮೀರದ ವಿಶೇಷ ಸ್ಥಾನ-ಮಾನ ಕಲ್ಪಿಸುವ 370ನೇ ವಿಧಿಯನ್ನು ಸರಿಯಾದ ಸಮಯದಲ್ಲಿ ಮೋದಿ ರದ್ದುಗೊಳಿಸಿದ್ದಾರೆ, ಏಕೆಂದರೆ, ಭಾರತದ ಪರವಾಗಿ ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಅವರು ಪ್ರಭಾವಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಾಗಿ ಆರ್‌ಎಸ್
ಸ್‌ನ ಸಹಚರರು ನಂಬಿದ್ದಾರೆ.
ದೇಶದ ಜನಸಂಖ್ಯೆಯ ಬೃಹತ್ ಗಾತ್ರ, ಅದರ ಭೌಗೋಳಿಕ ನೆಲೆ ಮತ್ತು ಅದರ ಆರ್ಥಿಕ ವಹಿವಾಟುಗಳ ಸ್ವರೂಪ ಮತ್ತು ಗಾತ್ರಗಳಿಂದಾಗಿ, ಜಾಗತಿಕ ವಾಣಿಜ್ಯ-ವ್ಯವಹಾರ ವಹಿವಾಟುಗಳಲ್ಲಿ ಭಾರತವು ಸ್ವಾಭಾವಿಕವಾಗಿಯೇ ಒಂದು ಪ್ರಮುಖ ಜಾಗತಿಕ ಪೈಪೋಟಿದಾರ ಎಂಬುದು ಭಾರತದ ಬಲಪಂಥದ ನಂಬಿಕೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರನ್ನು ಸಂಮೋಹಗೊಳಿಸುವ ಯಶಸ್ವಿ ಕಲೆಯೇ ದೇಶದ ಶಕ್ತಿ-ಸಾಮರ್ಥ್ಯವೆಂಬ ಗುಂಗಿನಲ್ಲಿರುವ ಮೋದಿಯವರು ಅಮೇರಿಕಾದ ಅಧ್ಯಕ್ಷರನ್ನೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದು ಭಾವಿಸಿದ್ದಾರೆ.
ಇಂತಹ ದೊಡ್ಡಸ್ತಿಕೆಯ ಭ್ರಮೆಗಳ ಪ್ರಚಾರದ ಮೂಲಕ ವಾಸ್ತವವನ್ನು ಮುಚ್ಚಿಡಲಾಗದು. ಕಟು ವಾಸ್ತವ ಏನೆಂದರೆ, ಕೈಗಾರಿಕೆಗಳ ಅಶಕ್ತ ತಳಹದಿ, ಉನ್ನತವಲ್ಲದ ಮಟ್ಟದ ತಂತ್ರಜ್ಞಾನ, ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆಯ ಜ್ಞಾನ ಬೋಧನೆಯ ಉತ್ಕೃಷ್ಟ ಕೇಂದ್ರಗಳನ್ನು ಹೊಂದಿರುವ ಭಾರತವು ಜಾಗತಿಕ ಗಣ್ಯರನ್ನು ಪ್ರಭಾವಿಸಲಾಗುವುದಿಲ್ಲ.
ಆದಾಗ್ಯೂ, ಮೋದಿ ಸರ್ಕಾರ ಮತ್ತು ಅವರ ಬೆಂಬಲಿಗರು ವಾಸ್ತವ ಜಗತ್ತಿನಿಂದ ದೂರ ಸರಿದು ತಮ್ಮ ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಲೇ ಇದ್ದಾರೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು: ಭಾರತದಲ್ಲಿ ಉದ್ಯಮ ಸ್ಥಾಪಿಸಲು ಇದು ಅತ್ಯತ್ತಮ ಸಮಯ. ಅನೇಕ ಸಂಗತಿಗಳಲ್ಲಿ ಏರಿಕೆ-ಇಳಿಕೆಗಳಾಗುತ್ತಿವೆ. ದೇಶದಲ್ಲಿ ವ್ಯವಹಾರ ನಡೆಸುವುದು ಸುಗಮವಾಗಿದೆ. ಬದುಕು ಸುಗಮವಾಗಿದೆ. ವಿದೇಶಿ ನೇರ ಹೂಡಿಕೆ, ಮೈದುಂಬಿದ ಅರಣ್ಯಗಳು, ಪೇಟೆಂಟ್ಸ್ (ಸ್ವಾಮ್ಯ), ಉತ್ಪಾದಕತೆ ಮತ್ತು ಮೂಲಸೌಕರ್ಯಗಳು ಹೆಚ್ಚುತ್ತಿವೆ. ಅದೇ ಸಮಯದಲ್ಲಿ ತೆರಿಗೆಗಳು, ತೆರಿಗೆ ದರಗಳು, ಕಛೇರಿಗಳಲ್ಲಿ ವಿಧಾನ-ವಿಳಂಬಗಳು, ಲಂಚಗುಳಿತನಗಳು ಮತ್ತು ಚಮಚಾಗಿರಿ ಇಳಿಯುತ್ತಿವೆ.
ಆದರೆ, ಅಹಿತವಾದ ವಾಸ್ತವ ಏನೆಂದರೆ, ಭಾರತವು ಈಗ ಆರ್ಥಿಕ ಮಂದಗತಿಯಲ್ಲಿ ಒದ್ದಾಡುತ್ತಿದೆ. ನೆರೆಯ ಬಾಂಗ್ಲಾದೇಶವು, ಭಾರತಕ್ಕಿಂತಲೂ ವೇಗವಾಗಿ, 8.1% ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ. ನೇಪಾಳವೂ ಸಹ 2019ರಲ್ಲಿ ಭಾರತಕ್ಕಿಂತಲೂ ವೇಗವಾಗಿ ಬೆಳೆಯುತ್ತದೆ ಎಂದು ಅಂದಾಜು ಮಾಡಲಾಗಿದೆ. ವಿಶ್ವ ಬ್ಯಾಂಕಿನ ಪ್ರಕಾರ, ಆರ್ಥಿಕ ರಂಗದಲ್ಲಷ್ಟೇ ಅಲ್ಲ, ಹಲವು ಸಾಮಾಜಿಕ ಸೂಚಿಗಳಲ್ಲೂ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿದೆ. ಬಾಂಗ್ಲಾದೇಶದ ಸರಾಸರಿ ಮಾನವ ಜೀವಿತಾವಧಿ 72 ವರ್ಷಗಳಿದ್ದರೆ, ಭಾರತದಲ್ಲಿ ಅದು 69.1 ವರ್ಷಗಳು. ಬಾಂಗ್ಲಾದೇಶದ ಶಿಶು ಮರಣ ಸಂಖ್ಯೆ 25.1 ಇದ್ದರೆ, ಭಾರತದಲ್ಲಿ ಅದು 31.5 ಇದೆ.
ಕೇಂದ್ರ ಸರ್ಕಾರದ ಹಣಕಾಸಿನ ಪರಿಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂದರೆ, ಅದು ತನ್ನ ಮಾಮೂಲಿ ಖರ್ಚು-ವೆಚ್ಚಗಳಿಗೂ ಹಣ ಹೊಂದಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ, ತನ್ನ ಉದ್ದಿಮೆಗಳನ್ನೇ ಮಾರುತ್ತಿದೆ. ಈ ಬಗ್ಗೆ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಹೀಗೆ ಟ್ವೀಟ್ ಮಾಡಿದ್ದರು: ಮೋದಿ ಸರ್ಕಾರ ಪಾಪರಾಗಿದೆಯೇ? ತನ್ನ ದುಂದುಗಾರಿಕೆಯ ಖರ್ಚುಗಳಿಗೆ ಮತ್ತು ಕಟ್ಟು ಕತೆ ಹಾಗೂ ಅಸತ್ಯಗಳಿಂದ ಕೂಡಿದ ಪ್ರಚಾರಗಳಿಗೆ ಹಣ ಹೊಂದಿಸಿಕೊಳ್ಳಲು ಜನತೆಗೆ ಸೇರಿದ ಸಂಪತ್ತನ್ನು ಮಾರುವುದೇ?
ಕೇಂದ್ರ ಸರ್ಕಾರದ ಆದಾಯವು ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ಇಳಿಯುತ್ತಿದೆ. ಹಾಗಾಗಿ, ಅದರ ವಿತ್ತೀಯ ಕೊರತೆ ಹೆಚ್ಚುತ್ತಿದೆ. ಈ ಕೊರತೆಯನ್ನು ಸರಿದೂಗಿಸಿಕೊಳ್ಳುವ ಸಲುವಾಗಿಯೇ, ರಿಸರ್ವ್ ಬ್ಯಾಂಕ್ ಹೊಂದಿದ್ದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಗಳನ್ನು ಇತ್ತೀಚೆಗಷ್ಟೇ ಕಸಿದುಕೊಂಡಿತ್ತು. ಆದಾಗ್ಯೂ, ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್ ಮೀಸಲು ಇಟ್ಟುಕೊಂಡಿರುವ ಚಿನ್ನವನ್ನೂ ಸಹ ಹರಾಜು ಹಾಕುವ ಸನ್ನಾಹದಲ್ಲಿದೆ ಎಂಬ ವರದಿ ಪ್ರಕಟವಾಗಿದೆ.
ಅಷ್ಟಾಗಿಯೂ, ಖಜಾನೆಯಲ್ಲಿ ಸಾಕಷ್ಟು ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ, ಆದಾಯದ ಕೊರತೆಯನ್ನು ಸರಿದೂಗಿಸಿಕೊಳ್ಳಲು ಸರ್ಕಾರವು ಜನತೆಗೆ ಸೇರಿದ ಸಾರ್ವಜನಿಕ ಉದ್ದಿಮೆಗಳ ಸ್ವತ್ತುಗಳನ್ನು ಮಾರುತ್ತಿದೆ.
ಮಹಾರತ್ನ ಕಂಪೆನಿ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಮತ್ತು ಇಲ್ಲಿಯವರೆಗೆ 17,246 ಕೋಟಿ ರೂಗಳ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 53.29% ಷೇರುಗಳನ್ನು; ಹಿಂದಿನ ವರ್ಷದಲ್ಲಿ 171% ಲಾಭಾಂಶ ಕೊಟ್ಟಿರುವ ಮತ್ತು ನವರತ್ನ ಕಂಪೆನಿಗಳಲ್ಲಿ ಒಂದಾದ ಕಂಟೈನರ್ ಕಾರ್ಪೊರೇಷನ್ನಿನ 63.75%; ಷಿಪ್ಪಿಂಗ್ ಕಾರ್ಪೊರೇಷನ್ನಿನ 63.75%; ತೆಹ್ರಿ ಹೈಡ್ರೊ ಡೆವೆಲ್ಪಮೆಂಟ್ ಕಾರ್ಪೊರೇಷನ್ನಿನ 75%; ನಾರ್ತ್ ಈಸ್ಟ್ ಇಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ನಿನ 100% ಷೇರುಗಳನ್ನು ಮಾರುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟವು ಕೈಗೊಂಡಿದೆ. ಮಾರಾಟದ ಪಟ್ಟಿಯಲ್ಲಿ, ಹಿಂದಿನ ವರ್ಷ ಒಂದರಲ್ಲೇ 7,218 ಕೋಟಿ ರೂ ಗಳ ಲಾಭ ಗಳಿಸಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 100% ಷೇರುಗಳ ಮಾರಾಟವನ್ನು ಕೊನೆ ಗಳಿಗೆಯಲ್ಲಿ ಸೇರಿಸಲಾಗಿದೆ ಎಂದು ವರದಿಯಾಗಿದೆ.
ಸರ್ಕಾರದ ಆರ್ಥಿಕ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿದೆ ಎಂದರೆ, ಕಾಯಂ ಸೇನೆಯನ್ನು ಪರಿಣಾಮಕಾರಿಯಾಗಿ ನಿಯುಕ್ತಿಗೊಳಿಸಲು ಮತ್ತು ಅದನ್ನು ನವೀನವಾಗಿ ಸಜ್ಜುಗೊಳಿಸಲು ಸಾಕಾಗುವಷ್ಟು ಹಣ ಸರ್ಕಾರದ ಬಳಿ ಇಲ್ಲ. ವಿತ್ತೀಯ ಮುಂಜಾಗರೂಕತೆಯ ಹೆಸರಿನಲ್ಲಿ, ಮಾಜಿ ಯೋಧರಿಗೆ ಸಲ್ಲಬೇಕಿದ್ದ ಮತ್ತು ವಾಗ್ದಾನ ಮಾಡಿದ್ದ ಒಂದು ಶ್ರೇಣಿ-ಒಂದು ನಿವೃತ್ತಿ ವೇತನವನ್ನು ನಿರಾಕರಿಸಲಾಗಿದೆ.
ಇದು ಒಂದು ಸ್ವಯಂ ನಿರ್ಮಿತ ಸಮಸ್ಯೆ. ಮೂಗು ಹೊರಲಾರದಷ್ಟು ದೊಡ್ಡದಾದ ಮೂಗುತಿ ಎನ್ನುವ ರೀತಿಯ ವಿದೇಶ ನೀತಿಯ ಅನುಸರಣೆ ಮತ್ತು ಚಾಣಕ್ಯತೆ ಮತ್ತು ಮಹತ್ವಾಕಾಂಕ್ಷೆಗಳಿಂದ ಕೂಡಿದ ಮನೋಭಾವದ ಕಾರಣಗಳಿಂದಾಗಿ ಈ ಸಮಸ್ಯೆ ಉದ್ಭವವಾಗಿದೆ. ಶಕ್ತಿಶಾಲಿ ದೇಶಗಳ ಮಿಲಿಟರಿ ಮೈತ್ರಿ ಕೂಟಗಳಿಗೆ ಸೇರಿಕೊಳ್ಳುವ ನೀತಿಗೆ ಬಲು ದುಬಾರಿ ಬೆಲೆಯನ್ನೇ ತೆರಬೇಕಾಗುತ್ತದೆ. ಮಿಲಿಟರಿ ಮೈತ್ರಿ ಕೂಟದ ಪಾಲುದಾರ ದೇಶಗಳು ಹೊಂದಿರುವ ಅತ್ಯಾಧುನಿಕ ಶಸ್ತ್ರ ಸಜ್ಜಿತ ಯುದ್ಧ ವಿಮಾನ, ಜಲಾಂತರ್ಗಾಮಿ ನೌಕೆ ಮತ್ತು ಟ್ಯಾಂಕರ್ ಇತ್ಯಾದಿಗಳಿಗೆ ಹೊಂದಿಕೊಳ್ಳುವ ಮಾದರಿಯ ಉಪಕರಣಗಳನ್ನೇ ಭಾರತ ಕೊಳ್ಳಬೇಕಾಗುತ್ತದೆ. ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ದಂಡಿಯಾಗಿ ಹಣ ಖರ್ಚುಮಾಡಬೇಕಾಗುತ್ತದೆ.
ಇಂತಹ ಖರ್ಚುಗಳಿಂದಾಗಿ ಉಂಟಾಗಿರುವ ಆರ್ಥಿಕ ಒತ್ತಡವನ್ನು ನಿಭಾಯಿಸುವ ಸಲುವಾಗಿ, ಅಂದರೆ, ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಯ ವೆಚ್ಚಗಳಿಗೆ ಖಜಾನೆಯ ಹೊರಗಿನ ಮೂಲಗಳಿಂದ ಹಣ ಹೊಂದಿಸಿಕೊಳ್ಳುವ ಉದ್ದೇಶದಿಂದ, ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯನ್ನು ತಿದ್ದುಪಡಿ ಮಾಡಲು ಸರ್ಕಾರವು ಹವಣಿಸುತ್ತಿದೆ. ಇಂತಹ ಒಂದು ಪ್ರಸ್ತಾಪದ ಸಮರ್ಥನೆಯಾಗಿ ಸರ್ಕಾರ ಕೊಡುವ ಕಾರಣವೆಂದರೆ, ಖರ್ಚುಗಳ ಬಗ್ಗೆ ರಕ್ಷಣಾ ಮಂತ್ರಾಲಯದ ಮುನ್ನಂದಾಜಿಗೂ ಮತ್ತು ವಿತ್ತ ಮಂತ್ರಾಲಯವು ಹಂಚುವ ಹಣದಲ್ಲಿ ಸತತವಾಗಿ ಶೇ.೨೫ರಷ್ಟು ಕೊರತೆಯಾಗುತ್ತಿದೆ.
ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯ ತಿದ್ದುಪಡಿಯ ಮೂಲಕ ರಕ್ಷಣಾ ಇಲಾಖೆಯ ಭೂಮಿಯನ್ನು ಹರಾಜಿಗಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಈಗಾಗಲೇ ಭೂಮಿಯ ಹರಾಜಿನ ವಾಸನೆ ಹಿಡಿದಿರುವ ಭೂಗಳ್ಳರು ಮತ್ತು ಖಾಸಗಿ ವಲಯದ ರಣ ಹದ್ದುಗಳು ಅದನ್ನು ಕಬಳಿಸಲು ಹೊಂಚುಹಾಕುತ್ತಾ ಕುಳಿತಿವೆ. ರಕ್ಷಣಾ ಇಲಾಖೆಯು ಹೊಂದಿರುವ 17.5 ಲಕ್ಷ ಎಕರೆಗಳಷ್ಟು ಭೂಮಿಯಲ್ಲಿ, ಎಲ್ಲೆಲ್ಲಿ ಎಷ್ಟೆಷ್ಟು ಭೂಮಿ ಒತ್ತುವರಿಯಾಗಿದೆ ಮತ್ತು ನಾಗರಿಕ ಉದ್ದೇಶಗಳಿಗಾಗಿ ಅಗತ್ಯವಿರುವ ಸೇನೆಯ ಭೂಮಿ ಎಷ್ಟು ಎಂಬುದರ ಬೇಡಿಕೆಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ.
ತಹ ಹರಾಜಿನ ಮೂಲಕ ರಕ್ಷಣಾ ಮಂತ್ರಾಲಯವು ಕನಿಷ್ಠ 25,000 ಕೋಟಿ ರೂಗಳನ್ನು ಪಡೆಯಬಹುದು ಎಂಬುದು ತಜ್ಞರ ಅಂದಾಜು. ಈ ಹಣವನ್ನು ಮೂಲ ಧನವಾಗಿ ಇಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನು ಸೇನೆಯ ವಿಶೇಷ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂಬುದು ತಜ್ಞರ ಸಲಹೆ.
ಈ ಸಂಬಂಧವಾಗಿ ಸಾರ್ವಜನಿಕ ಅಭಿಪ್ರಾಯ gಪಿಸುವ ಉದ್ದೇಶದಿಂದ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುವಂತೆ ನೋಡಿಕೊಳ್ಳುವ ಕೆಲಸ ರಭಸದಿಂದ ನಡೆಯುತ್ತಿದೆ. ಸಾರ್ವಜನಿಕರಲ್ಲಿ ಅನುಕಂಪ ಹುಟ್ಟಿಸುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಈಗಾಗಲೇ 9600 ಎಕರೆಗೂ ಮೇಲ್ಪಟ್ಟ ಭೂಮಿಯ ಒತ್ತುವರಿಯಾಗಿದೆ. ಈ ಸಂಬಂಧವಾಗಿ, ಹಲವಾರು ರಾಜ್ಯಗಳು ಮತ್ತು ನಗರ ಸಭೆಗಳ ವಿರುದ್ಧ ರಕ್ಷಣಾ ಮಂತ್ರಾಲಯ ದಾವೆ ಹೂಡಿದೆ ಎಂಬ ಕತೆಗಳನ್ನು ಹೆಣೆಯಲಾಗುತ್ತಿದೆ.
ಈ ಎಲ್ಲ ವಿದ್ಯಮಾನಗಳು ಸೂಚಿಸುವ ಸಾರಾಂಶ ಏನೆಂದರೆ, ದೇಶದ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ಸೇನೆಯ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಸೇನೆಯ ಆಸ್ತಿ ಮಾರಾಟದಿಂದ ಬರುವ ಬಡ್ಡಿಯನ್ನು ಅವಲಂಬಿಸಿ ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.
ಮಹಾನ್ ದೇಶಗಳು ತಮ್ಮ ಸೇನೆಯ ಖರ್ಚು ವೆಚ್ಚಗಳಿಗೆ ಕಂಡ ಕಂಡ ಸಂದಿ ಮೂಲೆಗಳನ್ನೂ ತಡಕಾಡಿ ತಮ್ಮ ಖಜಾನೆ ತುಂಬಿಸಿಕೊಳ್ಳುವುದಿಲ್ಲ. ಒಂದು ಹುರುಪಿನ ಕಾಯಂ ಸೇನೆಯನ್ನು ಪೋಷಿಸಿ ಅದನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಹೆಣಗಾಡುವ ಯಾವುದೇ ದೇಶದ ಖಜಾನೆಯು ತನ್ನ ಸರ್ಕಾರಕ್ಕೆ ನೆಲದ ಮೇಲೆ ನಿಲ್ಲುವಂತೆ ಮತ್ತು ಅದರ ಮಹತ್ವಾಕಾಂಕ್ಷೆಯನ್ನು ತಾನು ಹೊರುವಷ್ಟು ಮಟ್ಟಕ್ಕೆ ಇಳಿಸಿಕೊಳ್ಳುವಂತೆ ಹೇಳಬೇಕು.
ನಮ್ಮ ಕೊರತೆಗಳನ್ನು ಲೆಕ್ಕಿಸದೆ ಹಿಂದೂ ಮಹಾಸಾಗರದಲ್ಲಿ ನಾವು ಚೀನಾದೊಂದಿಗೆ ಪೈಪೋಟಿಗೆ ಇಳಿಯಲಾಗದು. ಅಪಾರ ಖರ್ಚು ವೆಚ್ಚಗಳು ತಗಲುವಂತಹ ಇಂದ್ರಜಾಲಗಳೋ ಎಂಬಂತಹ ಮಿಲಿಟರಿ ರಕ್ಷಣಾ ದೃಶ್ಯಾವಳಿಗಳನ್ನು ಆಗು ಮಾಡಿಕೊಳ್ಳಲಾಗದು. ನಮ್ಮ ವಿದೇಶ ನೀತಿಯನ್ನು ಮಾರ್ಪಡಿಸಿದ ನಂತರ, ನಮ್ಮ ರಾಜತಾಂತ್ರಿಕತೆ ಯಶಸ್ವಿಯಾಗುತ್ತದೆಂದು ಊಹಿಸಿಕೊಳ್ಳಲಾಗದು.
ಮೋದಿಯವರ ವಿದೇಶ ನೀತಿಯು ಸುಕ್ಕುಗಟ್ಟಿದೆ ಮತ್ತು ಅತಿ ಆಡಂಬರದಿಂದ ಕೂಡಿದೆ. ಅದು ಸೌಮ್ಯವಾಗಿರಬೇಕು ಮತ್ತು ತಾಳ್ಮೆಯಿಂದ ಕೂಡಿರಬೇಕು. ಬೇರೆ ಬೇರೆ ದೇಶಗಳಲ್ಲಿ ಅದ್ದೂರಿಯ ಸಭೆ ಸಮಾರಂಭಗಳನ್ನು ಏರ್ಪಡಿಸಲು ಮೋದಿ ಸರ್ಕಾರವು ಸಾವಿರಾರು ಕೋಟಿ ರೂ ಗಳನ್ನು ಖರ್ಚುಮಾಡುತ್ತಿದೆ. ಇವೆಲ್ಲ ಹಿಂದೆಂದೂ ಆಚರಿಸದ, ಕಂಡರಿಯದ ಕೇಳರಿಯದ ಕ್ರಮಗಳು. ಮೂರು ಟ್ರಿಲಿಯನ್ ಗಾತ್ರದ ಒಂದು ಅರ್ಥವ್ಯವಸ್ಥೆಯು ತನ್ನ ಇತಿ ಮಿತಿಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು. ಅಂಧ ಶ್ರದ್ಧೆ ಮತ್ತು ನಂಬಿಕೆಗಳಷ್ಟೇ ಒಂದು ಪರಿಪಕ್ವ ಕಾರ್ಯನೀತಿಗೆ ಆಧಾರವಾಗಲಾರವು. ಮೋದಿಯವರ ವಿದೇಶ ನೀತಿಯ ಸಮಸ್ಯೆಯೆಂದರೆ, ಅದು, ದೇಶೀಯವಾಗಿ ಕಡಿಮೆ ಸಾಮರ್ಥ್ಯದ ಆಯುಧ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಮದ್ಯಮ ಬಲದ ದೇಶವೊಂದಕ್ಕೆ ಹೊರಲಾರದಷ್ಟು ಭವ್ಯ ಪ್ರಮಾಣದ್ದು.
ಬಲಪಂಥದ ಸಮಸ್ಯೆಯೆಂದರೆ, ಅದು ಬಲ ಪ್ರಯೋಗ ಮಾಡುವ ಇಚ್ಛಾಶಕ್ತಿಯನ್ನು ರಾಷ್ಟ್ರ ಗೌರವದೊಂದಿಗೆ ತಳುಕುಹಾಕುತ್ತದೆ. ದೇಶದ ಸಾರ್ವಭೌಮತೆಯ ಹಿರಿಮೆಯು ಅದು ಹೊಂದಿರುವ ಮಿಲಿಟರಿ ಶಕ್ತಿ ಮತ್ತು ಅದರ ಬಲ ಪ್ರದರ್ಶನಗಳಿಗೆ ನೇರವಾಗಿ ಅನುಗುಣವಾಗಿರುತ್ತದೆ ಎಂದು ಬಲಪಂಥ ಭಾವಿಸುತ್ತದೆ. ಆದರೆ, ಇದೇನೂ ಸಾರ್ವತ್ರಿಕವಾಗಿ ಅನ್ವಯವಾಗುವ ನಿಯಮವಲ್ಲ ಎಂಬುದು ಅದರ ಜಾಣ ಮರೆವು.
ತನ್ನ ಶಸ್ತ್ರಾಸ್ತ್ರಗಳ ಅಗತ್ಯವನ್ನು ಮತ್ತು ಸಂಪರ್ಕ-ಸಾಧನಗಳನ್ನು ಹೊರ ದೇಶಗಳಿಂದ ಪೂರೈಸಿಕೊಳ್ಳುವ ಮಧ್ಯಮ ಬಲದ ದೇಶ ತಾನೊಂದು ಗಟ್ಟಿ ಶಕ್ತಿಯೆಂದು ತೋರಿಸುವ ಅದರ ಆಕಾಂಕ್ಷೆ ಹೆಚ್ಚಿದಷ್ಟು ಅದರ ಸಾರ್ವಭೌಮತ್ವ ಕುಗ್ಗುತ್ತದೆ. ರಾಷ್ಟ್ರ ಹಿತವನ್ನು ಕಾಪಾಡುವ ಪ್ರಯತ್ನಗಳು ಅವಾಸ್ತವಿಕವಾಗಿದ್ದರೆ, ದೇಶವು ಹೆಚ್ಚು ಪರಾಧೀನವೂ ಮತ್ತೂ ಬೇಧ್ಯವೂ ಆಗುತ್ತದೆ.
ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಿಜೆಪಿ ರೈತ ಮೋರ್ಚಾದಿಂದ ಬಂದ್ಗೆ ಕರೆ; ಹಲವು ವೃತ್ತಗಳಲ್ಲಿ ಟೈರ್ಗೆ ಬೆಂಕಿ, ಬೆಂಕಿ ನಂದಿಸಿದ ಪೊಲೀಸರು
ಸುದ್ದಿದಿನ,ದಾವಣಗೆರೆ: ಮೇಲ್ಭದ್ರ ಯೋಜನೆಯ ನೀರನ್ನು ಸಮರ್ಪಕವಾಗಿ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ದಾವಣಗೆರೆಯಲ್ಲಿ ಬಿಜೆಪಿ ರೈತ ಮೋರ್ಚಾ ಬಂದ್ಗೆ ಕರೆ ನೀಡಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನಗರದ ವಿವಿಧ ವೃತ್ತಗಳಲ್ಲಿ ಪ್ರತಿಭಟನಾಕಾರರು ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮೇಲ್ಭದ್ರ ಯೋಜನೆಯ ನೀರು ದಾವಣಗೆರೆ ಭಾಗದ ರೈತರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ನೀರಿನ ಲಭ್ಯತೆ ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ನೀರು ಬಿಡುಗಡೆ ವಿಚಾರದಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರೈತರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಬೇಕು ಎಂಬ ಆಗ್ರಹವೂ ಕೇಳಿಬಂತು.
http://Visit : www.suddidina.com
ಗುಟ್ಕಾ, ಪಾನ್ ಮಸಾಲಾ ನಿಷೇಧಕ್ಕೂ ಆಗ್ರಹ
ಬಂದ್ನ ಮತ್ತೊಂದು ಪ್ರಮುಖ ಬೇಡಿಕೆ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧಕ್ಕೆ ಸಂಬಂಧಿಸಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇಂತಹ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಒತ್ತಾಯಿಸಿದೆ.
ಈ ಎರಡು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಬಂದ್ಗೆ ಬೆಂಬಲ ನೀಡುವಂತೆ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯ ವಾತಾವರಣ ನಿರ್ಮಾಣವಾಗಿದ್ದು, ಬಂದ್ಗೆ ಬೆಂಬಲ ಪಡೆಯಲು ಸಂಘಟಕರು ಕರೆ ನೀಡಿದ್ದಾರೆ.
https://x.com/ians_india/status/2094602342230528256
ಟೈರ್ಗೆ ಬೆಂಕಿ; ಪೊಲೀಸರ ಮಧ್ಯಪ್ರವೇಶ
ಪ್ರತಿಭಟನೆಯ ವೇಳೆ ನಗರದ ಹಲವು ವೃತ್ತಗಳಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಲಾಯಿತು. ಇದರಿಂದ ಕೆಲಕಾಲ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.
ಸಾರ್ವಜನಿಕ ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪರಿಸ್ಥಿತಿಯನ್ನು ಗಮನಿಸಲಾಗಿದ್ದು, ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಪ್ರಯತ್ನ ನಡೆದಿದೆ.
ಬಂದ್ಗೆ ವ್ಯಾಪಾರಸ್ಥರ ಬೆಂಬಲ?
ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಆದರೆ ಬಂದ್ಗೆ ವಿವಿಧ ವರ್ಗಗಳಿಂದ ಎಷ್ಟರ ಮಟ್ಟಿಗೆ ಬೆಂಬಲ ದೊರೆಯಲಿದೆ ಎಂಬುದು ದಿನದ ಬೆಳವಣಿಗೆಗಳಿಂದ ಸ್ಪಷ್ಟವಾಗಲಿದೆ.
ಮೇಲ್ಭದ್ರ ನೀರಿನ ವಿಚಾರ ದಾವಣಗೆರೆ ಜಿಲ್ಲೆಯ ರೈತರ ಪಾಲಿಗೆ ದೀರ್ಘಕಾಲದ ಪ್ರಮುಖ ವಿಷಯವಾಗಿದ್ದು, ಇದೀಗ ಈ ಬೇಡಿಕೆ ಮತ್ತೊಮ್ಮೆ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಇದರ ಜತೆಗೆ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧದ ಬೇಡಿಕೆಯನ್ನೂ ಮುನ್ನೆಲೆಗೆ ತರುವ ಮೂಲಕ ಬಿಜೆಪಿ ರೈತ ಮೋರ್ಚಾ ಹೋರಾಟಕ್ಕೆ ವ್ಯಾಪಕ ಸ್ವರೂಪ ನೀಡಲು ಮುಂದಾಗಿದೆ.
ಒಟ್ಟಿನಲ್ಲಿ, ಮೇಲ್ಭದ್ರ ನೀರು ಬಿಡುಗಡೆ ಮತ್ತು ಗುಟ್ಕಾ–ಪಾನ್ ಮಸಾಲಾ ನಿಷೇಧ ಎಂಬ ಎರಡು ಪ್ರಮುಖ ಬೇಡಿಕೆಗಳೊಂದಿಗೆ ದಾವಣಗೆರೆಯಲ್ಲಿ ಬಂದ್ ಹಾಗೂ ಪ್ರತಿಭಟನೆ ಕಾವು ಪಡೆದಿದ್ದು, ಸರಕಾರದ ಮುಂದಿನ ಪ್ರತಿಕ್ರಿಯೆ ಇದೀಗ ಕುತೂಹಲ ಮೂಡಿಸಿದೆ.

ದಿನದ ಸುದ್ದಿ
ಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಏಕೀಕೃತ ವ್ಯವಸ್ಥೆ; ಶನಿವಾರ ಜನಸಂಪರ್ಕ, ಬುಧವಾರ ಮೂರು ಹಂತದ ಪರಿಶೀಲನೆ
ಬೆಂಗಳೂರು: ಸರ್ಕಾರಿ ಸೇವೆ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ದಿನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಪ್ರಜಾಸೇವಾ ಅಭಿಯಾನ’ಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಭಿಯಾನ ಆರಂಭವಾಗಲಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವ ವ್ಯವಸ್ಥೆ ರೂಪಿಸಲಾಗಿದೆ.
ಇದುವರೆಗೆ ವಿವಿಧ ಇಲಾಖೆ, ಯೋಜನೆ ಅಥವಾ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಲು ಜನರು ಹಲವು ಬಾರಿ ಕಚೇರಿಗಳಿಗೆ ತೆರಳಬೇಕಾಗುತ್ತಿತ್ತು. ಇದೀಗ ಈ ಅಲೆದಾಟ ಕಡಿಮೆ ಮಾಡಿ ಜನರ ಮನೆ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ಯುವುದು ಪ್ರಜಾಸೇವೆಯ ಪ್ರಮುಖ ಉದ್ದೇಶವಾಗಿದೆ.
ಹೈಲೈಟ್ಸ್: ಸೆ.5ರಿಂದ ಹೊಸ ಆಡಳಿತ ವ್ಯವಸ್ಥೆಗೆ ಚಾಲನೆ |
|
http://Visit : www.suddidina.com
ಪ್ರತಿ ಶನಿವಾರ ಜನರೊಂದಿಗೆ ನೇರ ಸಂಪರ್ಕ
ಪ್ರತಿ ಶನಿವಾರ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಸಭೆಗಳನ್ನು ಪರ್ಯಾಯವಾಗಿ ನಡೆಸಲು ನಿರ್ಧರಿಸಲಾಗಿದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತದೆ.
ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಮನೆ-ಮನೆಗೆ ಕರಪತ್ರ ವಿತರಿಸುವುದರ ಜತೆಗೆ AI ಆಧಾರಿತ ಕಾಲ್ ಸೆಂಟರ್ ಮೂಲಕ ಸಭೆಯ ದಿನಾಂಕ, ಸ್ಥಳ ಹಾಗೂ ಸಮಯದ ಕುರಿತು ಮಾಹಿತಿ ನೀಡಲಾಗುತ್ತದೆ.
ಗ್ರಾಮ ಒನ್ನಲ್ಲೇ ಅರ್ಜಿ ಸಲ್ಲಿಕೆ
ಜನರು ತಮ್ಮ ಅರ್ಜಿ ಹಾಗೂ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿ ಸಲ್ಲಿಸಬಹುದು. ಸಭಾ ಸ್ಥಳದಲ್ಲಿಯೂ ಗ್ರಾಮ ಒನ್ ಮಳಿಗೆ ಸ್ಥಾಪಿಸಿ ಕಂಪ್ಯೂಟರ್, ಪ್ರಿಂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತದೆ.
ಈ ಸಭೆಗಳಲ್ಲಿ ಹೊಸ ಅಹವಾಲುಗಳು ಮತ್ತು ಈಗಾಗಲೇ ದೂರು ದಾಖಲಿಸಿದ್ದರೂ ಪರಿಹಾರವಾಗದ ಅಹವಾಲುಗಳಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. 21 ದಿನಗಳ ಬಳಿಕವೂ ಸಮರ್ಪಕ ಪರಿಹಾರ ಸಿಗದ ಪ್ರಕರಣಗಳನ್ನೂ ಆದ್ಯತೆಯಿಂದ ಪರಿಗಣಿಸಲಾಗುತ್ತದೆ.
ಬುಧವಾರ ಮೂರು ಹಂತದ ಪರಿಶೀಲನೆ
ಪ್ರಜಾಸೇವಾ ಸಭೆಗಳಲ್ಲಿ ಸ್ವೀಕರಿಸಿದ ಅರ್ಜಿ ಮತ್ತು ಅಹವಾಲುಗಳ ಮೇಲೆ ಪ್ರತಿ ಬುಧವಾರ ಮೂರು ಹಂತದ ಪರಿಶೀಲನೆ ನಡೆಯಲಿದೆ. ಬೆಳಗ್ಗೆ 9ರಿಂದ 11ರವರೆಗೆ ತಾಲ್ಲೂಕು ಮಟ್ಟದಲ್ಲಿ, 11ರಿಂದ ಮಧ್ಯಾಹ್ನ 1ರವರೆಗೆ ಉಪವಿಭಾಗ ಮಟ್ಟದಲ್ಲಿ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಯಲಿದೆ.
ತಾಲ್ಲೂಕಿನಲ್ಲಿ ಬಗೆಹರಿಯದ ಸಮಸ್ಯೆಗಳು ಉಪವಿಭಾಗಾಧಿಕಾರಿಗೆ, ಅಲ್ಲಿಂದ ಜಿಲ್ಲಾಧಿಕಾರಿಗೆ ಮೇಲ್ದರ್ಜೆಗೆ ವರ್ಗಾವಣೆಯಾಗಲಿವೆ. ನಿಗದಿತ ಅವಧಿಯಲ್ಲಿ ಪರಿಹಾರವಾಗದ ಪ್ರಕರಣಗಳು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಮಟ್ಟಕ್ಕೂ ಸ್ವಯಂಚಾಲಿತವಾಗಿ ಎಸ್ಕಲೇಷನ್ ಆಗುವ ವ್ಯವಸ್ಥೆ ಇರಲಿದೆ.
ಸ್ಥಳದಲ್ಲೇ ಮಂಜೂರಾತಿ, ಆನ್ಲೈನ್ನಲ್ಲಿ ಸ್ಥಿತಿ
ಅರ್ಹ ಫಲಾನುಭವಿಗಳಿಗೆ ಕೆಲವು ಯೋಜನೆಗಳ ಮಂಜೂರಾತಿ ಪತ್ರವನ್ನು ಸ್ಥಳದಲ್ಲೇ ನೀಡಲು ಅವಕಾಶವಿದೆ. ಅರ್ಜಿ ಅಥವಾ ದೂರು ಯಾವ ಹಂತದಲ್ಲಿದೆ ಎಂಬುದನ್ನು ಸಾರ್ವಜನಿಕರು ನೈಜ-ಸಮಯದ ಸ್ಥಿತಿ ಪರಿಶೀಲನಾ ವ್ಯವಸ್ಥೆಯ ಮೂಲಕ ತಿಳಿದುಕೊಳ್ಳಬಹುದು.
ಇದಲ್ಲದೆ, ಪ್ರತಿ ಸಭೆಯ ಸಂಪೂರ್ಣ ವಿವರ, ಛಾಯಾಚಿತ್ರ, ವೀಡಿಯೋ ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಪೋರ್ಟಲ್ನಲ್ಲಿ ದಾಖಲಿಸಲಾಗುತ್ತದೆ. ಸಾರ್ವಜನಿಕರು 1902 ಸಹಾಯವಾಣಿ ಅಥವಾ ಅಧಿಕೃತ IPGRS ಪೋರ್ಟಲ್ ಮೂಲಕವೂ ಕುಂದುಕೊರತೆ ದಾಖಲಿಸಬಹುದು.
ಆಡಳಿತಕ್ಕೆ ಹೊಣೆಗಾರಿಕೆ, ಜನರಿಗೆ ಉತ್ತರ
ಪ್ರಜಾಸೇವಾ ಅಭಿಯಾನದ ಯಶಸ್ಸು ಕೇವಲ ಸಭೆ ನಡೆಸುವುದರಲ್ಲಿ ಇಲ್ಲ; ದೂರು ಸ್ವೀಕರಿಸಿ, ಕಾಲಮಿತಿಯಲ್ಲಿ ಪರಿಹರಿಸಿ, ಅದರ ಹೊಣೆಗಾರಿಕೆಯನ್ನು ನಿಗದಿಪಡಿಸುವುದರಲ್ಲಿ ಇದೆ. ಜಿಲ್ಲಾಉಸ್ತುವಾರಿ ಕಾರ್ಯದರ್ಶಿಗಳು, ಅಧಿಕಾರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳ ನಿರಂತರ ಮೇಲ್ವಿಚಾರಣೆಯ ಮೂಲಕ ಬಾಕಿ ಪ್ರಕರಣಗಳ ವಿಲೇವಾರಿಗೆ ಒತ್ತು ನೀಡಲಾಗಿದೆ. ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸುವ ಈ ವ್ಯವಸ್ಥೆ ಆಡಳಿತದ ಹೊಸ ಮಾದರಿಯಾಗುವ ನಿರೀಕ್ಷೆ ಮೂಡಿಸಿದೆ.

ದಿನದ ಸುದ್ದಿ
ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 35 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳು 29 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.
ಈ ಫಲಿತಾಂಶದೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ.
ಮೇಯರ್ ಸ್ಥಾನಕ್ಕೆ ಅಜಿಲ್ ಅಹಮದ್ ಗೋಲಾ
ಈ ಚುನಾವಣೆಯಲ್ಲಿ 21ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ಅಜಿಲ್ ಅಹಮದ್ ಗೋಲಾ ಅವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತದಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿಗೆ ಬಹುಮತ ದೊರೆತಿದ್ದು, ಅವರು ಮೇಯರ್ ಸ್ಥಾನವನ್ನು ಅಲಂಕರಿಸಿದ್ದಾರೆ.
ಪಾಲಿಕೆಯ ಮುಂದಿನ ಆಡಳಿತದಲ್ಲಿ ಮೇಯರ್ ಸ್ಥಾನ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಅಜಿಲ್ ಅಹಮದ್ ಗೋಲಾ ಅವರ ಆಯ್ಕೆ ಇದೀಗ ಗಮನ ಸೆಳೆದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 35 ಮತಗಳು ದೊರೆತಿರುವುದು ಚುನಾವಣೆಯಲ್ಲಿ ಪಕ್ಷದ ಬಲವನ್ನು ತೋರಿಸಿದೆ.
ಉಪ ಮೇಯರ್ ಸ್ಥಾನವೂ ಕಾಂಗ್ರೆಸ್ ಪಾಲು
20ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊರೆತ ಬಹುಮತದ ಹಿನ್ನೆಲೆಯಲ್ಲಿ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೇಯರ್ ಹಾಗೂ ಉಪ ಮೇಯರ್ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿರುವುದರಿಂದ ಪಾಲಿಕೆಯ ಆಡಳಿತದ ಮೇಲೆ ಪಕ್ಷದ ಹಿಡಿತ ಮತ್ತಷ್ಟು ಬಲಗೊಂಡಿದೆ.
ಆಗಸ್ಟ್ 7ರಿಂದ ಆಗಸ್ಟ್ 29ಕ್ಕೆ ಮುಂದೂಡಿಕೆ
ಆರಂಭದಲ್ಲಿ ಈ ಚುನಾವಣೆ ಆಗಸ್ಟ್ 7ರಂದು ನಡೆಯಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು. ಬಳಿಕ ಪ್ರಾದೇಶಿಕ ಆಯುಕ್ತರ ಆದೇಶದ ನಂತರ ಪರಿಷ್ಕೃತ ದಿನಾಂಕ ನಿಗದಿಪಡಿಸಿ ಆಗಸ್ಟ್ 29ರಂದು ಚುನಾವಣೆ ನಡೆಸಲಾಯಿತು.
ಅದರಂತೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಒಟ್ಟು ಮತಗಳ ಲೆಕ್ಕಾಚಾರದಲ್ಲಿ ಕಾಂಗ್ರೆಸ್ 35 ಮತಗಳನ್ನು ಪಡೆದರೆ, ಬಿಜೆಪಿ 29 ಮತಗಳಿಗೆ ಸೀಮಿತವಾಯಿತು.
ಈ ಮೂಲಕ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ಕಾಂಗ್ರೆಸ್ ಕೈಗೆ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಹೊಸ ಮೇಯರ್ ಮತ್ತು ಉಪ ಮೇಯರ್ ಅವರ ಕಾರ್ಯವೈಖರಿ ಹೇಗಿರಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

-
ದಿನದ ಸುದ್ದಿ7 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ: ಪ್ರತಿ ತಿಂಗಳು ಎರಡು ದಿನ ಪ್ರವಾಸ
-
ದಿನದ ಸುದ್ದಿ6 days agoಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್ಕಟ್ ಹೇಳಿದ ಡಿಕೆಶಿ
-
ದಿನದ ಸುದ್ದಿ4 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ4 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ4 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ4 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ4 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?



