ರಾಜಕೀಯ
ಭಾರತದ ಸಂವಿಧಾನದ ಏಕೈಕ ಶಿಲ್ಪಿ, ಸಂವಿಧಾನದ ಪಿತಾಮಹ ಡಾ ಅಂಬೇಡ್ಕರ್

- ಅಲ್‌ಮೆಯಿಡಾ ಗ್ಲಾಡ್‌ಸನ್
ಭಾರತದ ಸಂವಿಧಾನದ ಏಕೈಕ ಶಿಲ್ಪಿ, ಸಂವಿಧಾನದ ಪಿತಾಮಹ ಡಾ ಅಂಬೇಡ್ಕರ್ ಮಾತ್ರ ಯಾಕೆಂದರೆ 395 ವಿಧಿಗಳು, 8 ಅನುಚ್ಛೇದಗಳು, 22 ಭಾಗಗಳು, ಒಂದು ಲಕ್ಷಕ್ಕಿಂತಲೂ ಹೆಚ್ಚು ಶಬ್ದಗಳು ಹಾಗೂ ಇನ್ನೂರಕ್ಕಿಂತ ಹೆಚ್ಚು ಪುಟಗಳ ಸಂವಿಧಾನವನ್ನು ರಚಿಸುವಲ್ಲಿ ಡಾ ಅಂಬೇಡ್ಕರ್ ಪಟ್ಟ ಶ್ರಮ, ವ್ಯಯಿಸಿದ ಸಮಯ ಎಲ್ಲರಿಗಿಂತಲೂ ಹೆಚ್ಚು.
ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಕೆ ಎಮ್ ಮುನ್ಶಿಯಂಥ ಘಟಾನುಘಟಿಗಳು ಇದ್ದರೂ, ಸಮಿತಿಯ ಅಧ್ಯಕ್ಷರನ್ನಾಗಿ ಆರಿಸಿದ್ದು ಬಾಬಾಸಾಹೇಬರನ್ನು ಅವರ ಸಾಮರ್ಥ್ಯ ಹಾಗೂ ಅಗಾಧವಾದ ಜ್ಞಾನದಾಧರದಲ್ಲಿ. ಸಂವಿಧಾನ ಕರಡು ಸಮಿತಿಯಲ್ಲಿ ಬಾಬಾಸಾಹೇಬರ ಜೊತೆ ಇನ್ನೂ ಆರು ಜನರಿದ್ದರು. ಆದರೆ ಕಾರಾಣಾಂತರಗಳಿಂದ ಕರಡು ಸಮಿತಿಯ ಹೆಚ್ಚಿನ ಸದಸ್ಯರು ಸಂವಿಧಾನ ರಚನೆಯಲ್ಲಿ ಭಾಗವಹಿಸಲೇ ಇಲ್ಲ. ಒಬ್ಬರು ತೀರಿಹೋದರು, ಇನ್ನೊಬ್ಬರು ಅಮೇರಿಕಾಕ್ಕೆ ಹೋದರೆ, ಮತ್ತೋರ್ವರು ತಮ್ಮ ರಾಜ್ಯದ ವಿಷಯಗಳಲ್ಲೇ ತಲ್ಲೀನರಾದರು. ಇನ್ನಿಬ್ಬರು ಅನಾರೋಗ್ಯದ ನಿಮಿತ್ತ ದೆಹಲಿ ಕಡೆ ಬರಲೇ ಇಲ್ಲ. ಹೀಗಾಗಿ ಇಡೀ ಸಂವಿಧಾನವನ್ನು ರಚಿಸುವ ಸಂಪೂರ್ಣ ಜವಾಬ್ದಾರಿ ಬಾಬಾಸಾಹೇಬರ ಹೆಗಲಿಗೇ ಬಿತ್ತು. ಸುಮಾರು ಎರಡೂವರೆ ವರುಷಗಳ ಕಾಲ ನಡೆದ ಸಂವಿಧಾನ ರಚನೆ, ನವೆಂಬರ್ 26, 1949ರಂದು ಸಂವಿಧಾನ ಸಭೆಯ ಅನುಮೋದನೆ ಪಡೆಯುವ ಮೊದಲು ಸುಮಾರು 2500 ಬಾರಿ ತಿದ್ದುಪಡಿಗೆ ಒಳಗಾಗಿತ್ತು. ಕೊನೆಗೆ ಈ ಸಂವಿಧಾನ ಅನುಮೋದನೆಯಾದಾಗ ಅದು ಜಗತ್ತಿನ ಅತೀ ದೊಡ್ಡ ಸಂವಿಧಾನವೆಂದು ಪರಿಗಣಿಸಲ್ಪಟ್ಟಿತ್ತು. ಸದ್ಯಕ್ಕೆ ನಮ್ಮ ಸಂವಿಧಾನ ಜಗತ್ತಿನ ಎರಡನೆಯ ಅತೀ ದೊಡ್ಡ ಸಂವಿಧಾನ. ಮೊದಲನೆಯ ಸ್ಥಾನದಲ್ಲಿ ಈವಾಗ ಅಲ್ಬೇನಿಯಾದ ಸಂವಿಧಾನ ಇದೆ.
ನಮ್ಮ ದೇಶ ಯಾವುದೇ ದೇಶದ ಸಂವಿಧಾನದ ಕಾಪಿ-ಪೇಸ್ಟ್ ಅಲ್ಲ ಸಂಘಿಗಳು ಹೇಳುವಂತೆ. ಹೌದು ಬ್ರಿಟನ್, ಅಮೇರಿಕಾ, ಐರ್ಲೆಂಡ್, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಯುಎಸ್‍ಎಸ್‍ಆರ್ ಮುಂತಾದ ದೇಶಗಳ ಸಂವಿಧಾನಗಳ ಪ್ರಭಾವ ನಮ್ಮ ಸಂವಿಧಾನದ ಮೇಲೂ ಇದೆ. ಆದರೆ ಅಲ್ಲಿಂದ ಕಾಪಿಯಾಗಿಲ್ಲ ಬದಲಾಗಿ ಅವುಗಳ ಕೆಲ ಆಶಯಗಳನ್ನು ಮೂಲಾಧಾರವಾಗಿಟ್ಟು, ಭಾರತದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಭೌಗೋಳಿಕ, ಭಾಷಿಕಾ ವಿವಿಧತೆಗಳಿಗೆ ಅನುಸಾರವಾಗಿ ಭಾರತದ ಸಂವಿಧಾನವನ್ನು ರಚಿಸಲಾಗಿದೆ.
ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿದ್ದವರು ಬಾಬಾಸಾಹೇಬ್ ಅಂಬೇಡ್ಕರ್, ಗೋಪಾಲಸ್ವಾಮಿ ಅಯ್ಯಂಗಾರ್, ಕೃಷ್ಣಸ್ವಾಮಿ ಅಯ್ಯರ್, ಕೆಎಮ್ ಮುನ್ಶಿ, ಸಯ್ಯದ್ ಮಹಮೂದ್ ಸಾ’ದುಲ್ಲಾ, ಬಿ ಎಲ್ ಮಿಟ್ಟರ್, ಡಿ ಪಿ ಖೈತಾನ್. (ಮಿಟ್ಟರ್ ಅವರ ಅನಾರೋಗ್ಯದ ಕಾರಣದಿಂದ ಸಮಿತಿಯಿಂದ ಹೊರಗುಳಿದಾಗ ನಮ್ಮ ಮೈಸೂರಿನ ಮಾಧವ ರಾವ್ ಅವರ ಜಾಗಕ್ಕೆ ಆಯ್ಕೆಯಾಗಿದ್ದರೆ, ಡಿ ಪಿ ಖೈತಾನ್ 1948ರಲ್ಲಿ ತೀರಿಹೋದ ಕಾರಣ ಅವರ ಜಾಗಕ್ಕೆ ಟಿ ಟಿ ಕೃಷ್ಣಮಾಚಾರಿ ಆಯ್ಕೆಯಾಗಿದ್ದರು). ಭಾರತದ ಸಂವಿಧಾನ ನವೆಂಬರ್ 26, 1949ರಂದು ಸಂವಿಧಾನ ಸಭೆಯ ಅನುಮೋದನೆ ಪಡೆದಾಗ ಸಂವಿಧಾನ ಸಭೆಯನ್ನುದ್ದೇಶಿಸಿ ಮಾತಾನಾಡಿದ ಟಿ ಟಿ ಕೃಷ್ಣಮಾಚಾರಿ ಹೀಗೆಂದಿದ್ದಾರೆ “ಕರಡು ರಚನಾ ಸಮಿತಿಗೆ ಈ ಸಂವಿಧಾನ ಸಭೆ ಏಳು ಜನರನ್ನು ನೇಮಿಸಿತ್ತು. ಅದರಲ್ಲಿ ಒಬ್ಬರು ರಾಜೀನಾಮೆ ಕೊಟ್ಟಾಗ ಅವರ ಜಾಗಕ್ಕೆ ಇನ್ನೋರ್ವರ ಆಯ್ಕೆಯಾಯಿತು. ಒಬ್ಬರು ತೀರಿಹೋದರು, ಒಬ್ಬರು ಅಮೇರಿಕಾಕ್ಕೆ ಹೋದರೆ, ಮತ್ತೊಬ್ಬ ಸದಸ್ಯರು ತಾವು ಪ್ರತಿನಿಧಿಸುತ್ತಿದ್ದ ರಾಜ್ಯದ ವಿಷಯಗಳಲ್ಲೇ ತಲ್ಲೀನರಾಗಿದ್ದರೆ, ಇನ್ನಿಬ್ಬರು ದೆಹಲಿಯಿಂದ ದೂರವಿದ್ದು, ಅವರ ಅನಾರೋಗ್ಯದ ಕಾರಣದಿಂದ ಸಂವಿಧಾನ ರಚನೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಸಂವಿಧಾನವನ್ನು ರಚಿಸುವ ಸಂಪೂರ್ಣ ಜವಾಬ್ದಾರಿ ಡಾ ಅಂಬೇಡ್ಕರ್ ಅವರ ಹೆಗಲಿಗೆ ಬಿತ್ತು. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ಹಾಗೂ ಪ್ರಶಂಸನೀಯ ರೀತಿಯಲ್ಲಿ ನಿಭಾಯಿಸಿದಕ್ಕಾಗಿ ನಾವೆಲ್ಲರೂ ಅವರಿಗೆ ಋಣಿಯಾಗಿರಬೇಕೆಂದು ನನ್ನ ಅಭಿಪ್ರಾಯ.”
ಭಾರತದ ಪ್ರಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸಂವಿಧಾನ ಸಭೆಯ ಡಿಬೇಟ್‍ನಲ್ಲಿ ಒಂದೊಮ್ಮೆ ಹೀಗೆಂದಿದ್ದರು. “ಅಧ್ಯಕ್ಷನ ಸ್ಥಾನದಲ್ಲಿದ್ದು ಕರಡು ರಚನೆ ಸಮಿತಿಯ ದೈನಂದಿನ ಕೆಲಸಗಳನ್ನು ನಾನು ಬಲು ಹತ್ತಿರದಿಂದ ನೋಡಿದ್ಡೇನೆ. ಹಾಗಾಗಿ ಬೇರೆಯರವರಿಗಿಂತ ಹೆಚ್ಚಾಗಿ ಸಂವಿಧಾನ ಕರಡು ರಚನೆ ಸಮಿತಿಯ ಸದಸ್ಯರು ಹಾಗೂ ಪ್ರತ್ಯೇಕವಾಗಿ ಸಮಿತಿ ಅಧ್ಯಕ್ಷರು ಎಷ್ಟೊಂದು ಶೃದ್ಧೆ ಹಾಗೂ ಚೈತನ್ಯದಿಂದ ಈ ಸಂವಿಧಾನವನ್ನು ರಚಿಸಿದ್ದಾರೆ ಎಂದು ನನಗೆ ತಿಳಿದಿದೆ. ಅಂಬೇಡ್ಕರ್ ಅವರನ್ನು ಕರಡು ಸಮಿತಿಗೆ ಆಯ್ಕೆ ಮಾಡಿ, ತದನಂತರ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕಿಂತ ಹೆಚ್ಚಿನ ಒಳ್ಳೆಯ ಕೆಲಸವನ್ನು ನಾವು ಮಾಡಿಲ್ಲ.”
ಹೀಗಾಗಿ ಬಾಬಾಸಾಹೇಬ್ ಕೊಟ್ಟ ಸಂವಿಧಾನದ ಕಾರಣದಿಂದಲೇ ಇವತ್ತು ಐಎಎಸ್ ಆಫೀಸರ್ ಆಗಿರುವ ಶಿಕ್ಷಣಾ ಇಲಾಖೆಯ ಅಧಿಕಾರಿ ಉಮಾಶಂಕರ್ ಸಂವಿಧಾನ ರಚನೆಯ ಬಗ್ಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಆಗಿರುವುದು ಪ್ರಮಾದವಲ್ಲ ಬಟ್ ಅಪರಾಧ. ಸಂವಿಧಾನದ ಕಾರಣದಿಂದಲೇ ಇಂಥ ಉನ್ನತ ಹುದ್ದೇಗೇರಿರುವ ವ್ಯಕ್ತಿಗಳು ಮನಸ್ಸಿನಲ್ಲಿ ಇಷ್ಟೊಂದು ಕೊಳಕನ್ನು ಹಾಗೂ ನೀಚತನವನ್ನು ತುಂಬಿಸಿಕೊಂಡಿದ್ದಾರೆಂದರೆ ಅವರು ಸಂವಿಧಾನದ ಪಾಲಕರಾಗಿರಲು ಸಾಧ್ಯವೇ ಇಲ್ಲ. ಇವರನ್ನು ಕೇವಲ ಅಮಾನತ್ತುಗೊಳಿಸಿದರೆ ಸಾಕಾಗೋಲ್ಲ ಬದಲಾಗಿ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಸಂವಿಧಾನದ ನೆರಳಿನಡಿಯಲ್ಲಿ ಕುಳಿತು ತಮ್ಮ ರಾಜಕೀಯ ಹಾಗೂ ವ್ಯಯಕ್ತಿಕ ಸಿದ್ದಾಂತಗಳನ್ನು ಪ್ರತಿಪಾದಿಸುವ ಬದಲು ನೇರವಾಗಿ ಸೇವೆಗೆ ರಾಜೀನಾಮೆ ಕೊಟ್ಟು ಹೊರಬಂದು ತಮಗೆ ಬೇಕಾದ ರಾಜಕೀಯ ಪಕ್ಷವನ್ನು ಸೇರಲಿ. ಹಾಗಾಗಿ ಉಮಾಶಂಕರ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ತನಕ ಪಟ್ಟು ಸಡಿಲಿಸದೆ ಹೋರಾಡಬೇಕು. ನಮ್ಮ ಬ್ಯೂರೋಕ್ರಸಿಯಲ್ಲಿ ತುಂಬಿರುವ ಇಂಥ ನೀಚರನ್ನು ಗುರುತಿಸಿ ಹೊರಗಟ್ಟಿಲ್ಲವೆಂದರೆ ಮುಂದೊಂದು ದಿನ ಇವರೇ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡೋಡು ಗ್ಯಾರಂಟಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
