Connect with us

ದಿನದ ಸುದ್ದಿ

ನೈತಿಕತೆ ಜಾರುತ್ತಿದೆ ಅಂತ ತೋರಿಸಿತು ಜಾರಕಿಹೊಳಿ ಎಪಿಸೋಡು

Published

on

  • ಆರ್.ಟಿ.ವಿಠ್ಠಲಮೂರ್ತಿ

ರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಹಲ ಸಚಿವರು ಕೂಡಾ ತಮ್ಮ ಸುತ್ತ ಇಂತಹ ವಿವಾದಗಳು ಸುತ್ತಿಕೊಳ್ಳಬಹುದು ಎಂಬ ಆತಂಕದಿಂದ ನ್ಯಾಯಾಲಯದ ಕಟಕಟೆ ಏರಿದ್ದಾರೆ.

ಜಾರಕಿಹೊಳಿ ಅವರ ಪ್ರಕರಣದ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿವೆ.ಇದು ಬ್ಲಾಕ್‌ ಮೇಲ್‌ ಎಂಬುದರಿಂದ ಹಿಡಿದು ಮಹಿಳೆಯ ಜತೆಗಿನ ಸಂಬಂಧ ಪರಸ್ಪರ ಸಮ್ಮತಿಯದೇ ಹೊರತು ಕಿರುಕುಳ ಅಲ್ಲ ಎಂಬಲ್ಲಿಯವರೆಗೆ ಚರ್ಚೆ ಸಾಗಿದೆ. ಆದರೆ ಪ್ರಶ್ನೆ ಇರುವುದು ನೈತಿಕತೆಯದು.

ಯಾಕೆಂದರೆ ಅವರಿಗೆ ಧರ್ಮಪತ್ನಿ ಇದ್ದಾರೆ.ಧರ್ಮಪತ್ನಿ ಇರುವಾಗ ಈ ರೀತಿಯ ಸಂಬಂಧ ಸಾಧಿತವಾಗುವುದು ಸರಿಯೇ?ಎಂಬುದರಲ್ಲಿ. ಅದೇನೇ ಇರಲಿ,ಇವತ್ತು ರಮೇಶ್‌ ಜಾರಕಿಹೊಳಿ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಒಂದು ವಿಷಯವನ್ನು ಸ್ಪಷ್ಟವಾಗಿ ಎತ್ತಿ ತೋರಿಸಿವೆ.ಅದೆಂದರೆ ನೈತಿಕತೆಯ ಚೌಕಟ್ಟನ್ನು ವ್ಯವಸ್ಥೆಯೇ ಸಡಿಲಿಸುತ್ತಾ ಬಂದಿರುವುದು.

ವಾಸ್ತವವಾಗಿ,ಇಂತಹದೊಂದು ಪ್ರಕರಣ ನಡೆದಿದೆ ಎಂಬುದು ಗೊತ್ತಾದ ಕೂಡಲೇ ನಮ್ಮ ವ್ಯವಸ್ಥೆ ರಮೇಶ್‌ ಜಾರಕಿಹೊಳಿ ಮಾಡಿದ್ದು ತಪ್ಪು ಎಂದು ಸ್ಪಷ್ಟವಾಗಿ ಹೇಳಬೇಕಿತ್ತು.
ಆದರೆ ರಮೇಶ್‌ ಜಾರಕಿಹೊಳಿ ಅವರು ಮಾಡಿದ್ದು ತಪ್ಪು ಎನ್ನುವ ಕೂಗು ಎದ್ದಾಗಲೇ,ಇದು ಕೆಲವರ ಷಡ್ಯಂತ್ರ ಎಂಬ ಅಪಸ್ವರ ಕೇಳಿ ಬಂತು.ಹಾಗೆಯೇ ಇದು ಪರಸ್ಪರ ಸಮ್ಮತಿಯ ಸಂಬಂಧ ಎಂಬ ಕೂಗು ತೇಲಿ ಬಂತು.

ಅದು ನಿಜವೂ ಇರಬಹುದು.ಆದರೆ ಪ್ರಶ್ನೆ ಇದ್ದುದು ಅಲ್ಲಲ್ಲ,ಜವಾಬ್ದಾರಿಯುತ ಸ್ಥಾನದಲ್ಲಿದ್ದ ರಮೇಶ್‌ ಜಾರಕಿಹೊಳಿ ಮಾಡಿದ್ದು ಸರಿಯೇ?ಎಂಬಲ್ಲಿ. ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಸಮಾಜದ ನೈತಿಕತೆಯ ಬೇರುಗಳು ಹೇಗೆ ಸಡಿಲವಾಗುತ್ತಾ ನಡೆದಿವೆ?ಎಂಬುದು ಸ್ಪಷ್ಟವಾಗುತ್ತದೆ.
ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಟಿ.ಸಿದ್ಧಲಿಂಗಯ್ಯ ಮಂತ್ರಿಯಾಗಿದ್ದರು.ಒಂದು ಸಂದರ್ಭದಲ್ಲಿ ಅವರ ಸಹೋದರನಿಗೆ ವಿದ್ಯುತ್‌ ಇಲಾಖೆಯ ಗುತ್ತಿಗೆಯೊಂದು ಸಿಕ್ಕಿತು.

ಇದನ್ನೂ ಓದಿ | ರಾಜ್ಯ ಬಜೆಟ್ | 60 ಸಾವಿರ ಮಹಿಳೆಯರಿಗೆ ಉದ್ಯೋಗ : ಸಿಎಂ ಯಡಿಯೂರಪ್ಪ

ಇದು ಗೊತ್ತಾಗುತ್ತಿದ್ದಂತೆಯೇ ಸಿದ್ಧಲಿಂಗಯ್ಯ ಅವರು ಕೆಂಗಲ್‌ ಹನುಮಂತಯ್ಯ ಅವರನ್ನು ನೋಡಲು ಹೋದರು.ಅವರನ್ನು ನೋಡುತ್ತಲೇ ಕೆಂಗಲ್‌ ಹನುಮಂತಯ್ಯ ಅವರು:ನೀವು ಬಂದೇ ಬರುತ್ತೀರಿ ಎಂದು ನನಗೆ ಗೊತ್ತಿತ್ತು ಎಂದರು. ಸಿದ್ಧಲಿಂಗಯ್ಯ ಅವರು ಮರುಮಾತನಾಡದೆ ತಮ್ಮ ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸಿದರು.ವಸ್ತುಸ್ಥಿತಿ ಎಂದರೆ ತಮ್ಮ ಸಹೋದರನಿಗೆ ಇಂತಹ ಕಾಂಟ್ರಾಕ್ಟು ಕೊಡಿ ಎಂದು ಸಿದ್ಧಲಿಂಗಯ್ಯನವರು ಹೇಳಿರಲೇ ಇಲ್ಲ.

ಹಾಗಂತ ಹೇಳಿ ಕೆಂಗಲ್‌ ಹನುಮಂತಯ್ಯನವರು:ನಿಮ್ಮ ರಾಜೀನಾಮೆಯ ಅಗತ್ಯವಿಲ್ಲ ಎಂದರಾದರೂ ಸಿದ್ದಲಿಂಗಯ್ಯನವರು ಒಪ್ಪಲಿಲ್ಲ.ಬದಲಿಗೆ:ನಿಮಗೆ ಇದು ಗೊತ್ತಿದೆ.ಆದರೆ ಜನರಿಗೆ ಗೊತ್ತಾಗುವುದು ಹೇಗೆ?ಇದರ ನೈತಿಕ ಹೊಣೆ ಹೊರದೆ ಬೇರೆ ದಾರಿಯೇ ಇಲ್ಲ ಎಂದು ಹೇಳಿ ಬಂದರು.
ನಿಜಲಿಂಗಪ್ಪ ಅವರು ಮೊದಲು 1956 ರಲ್ಲಿ ಮುಖ್ಯಮಂತ್ರಿಯಾದರಲ್ಲ?ಆ ಸಂದರ್ಭದಲ್ಲಿ ತಮ್ಮ ಸಚಿವ ಸಂಪುಟಕ್ಕೆ ಸೇರುವಂತೆ ಅವರು ಶ್ರೀಮತಿ ಯಶೋದರಮ್ಮ ತುಳಸೀದಾಸಪ್ಪ ಅವರನ್ನು ಕೋರಿದ್ದರು.ಆಗವರು:ನೀವು ಪಾನ ನಿಷೇಧ ಮಾಡಲು ಒಪ್ಪಿಕೊಂಡರೆ ನಿಮ್ಮ ಸಂಪುಟ ಸೇರುತ್ತೇನೆ ಎಂದರು.

ಪಾನ ನಿಷೇಧ ಮಾಡುವ ವಿಷಯದಲ್ಲಿ ನಿಜಲಿಂಗಪ್ಪನವರಿಗೂ ಒಲವಿತ್ತು.ಹಾಗಂತಲೇ:ಖಂಡಿತ ಮಾಡೋಣ.ನೀವು ಮಂತ್ರಿ ಮಂಡಲಕ್ಕೆ ಸೇರಿ ಎಂದರು.ಆದರೆ ಮುಂದೆ ಪಾನ ನಿಷೇಧದ ಮಾತು ಬಂದಾಗ ನಿಜಲಿಂಗಪ್ಪ ಸಂಪುಟದ ಬಹುತೇಕ ಸಚಿವರು ಅಪಸ್ವರ ತೆಗೆದರು.

ಸರ್ಕಾರದ ಪ್ರಮುಖ ಆದಾಯ ಮೂಲ ಅದು.ಹೀಗಿರುವಾಗಿ ಪಾನನಿಷೇಧ ಮಾಡಿ ಸರ್ಕಾರವನ್ನು ಹೇಗೆ ನಡೆಸುತ್ತೀರಿ?ಏಂದು ಪ್ರಶ್ನಿಸಿದರು.ಆಗ ನಿಜಲಿಂಗಪ್ಪ ಅಸಹಾಯಕರಾಗಬೇಕಾಯಿತು.
ಆದರೆ ಇದನ್ನು ಒಪ್ಪದ ಶ್ರೀಮತಿ ಯಶೋದರಮ್ಮ ದಾಸಪ್ಪ ಅವರು ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹೊರಬಂದರು.
ಇದೇ ರೀತಿ ಮುಂದೆ ನಿಜಲಿಂಗಪ್ಪ ಅವರ ಸಚಿವ ಸಂಪುಟದಲ್ಲಿ ಎಂ.ವಿ.ರಾಮರಾವ್‌ ಅವರು ಗೃಹ ಸಚಿವರಾಗಿದ್ದಾಗ ಒಂದು ಘಟನೆ ನಡೆಯಿತು.

ಅವತ್ತು ಪೋಲೀಸ್‌ ಠಾಣೆಯೊಂದರಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆದು ಆಕೆ ಅನಾಹುತ ಮಾಡಿಕೊಂಡಿದ್ದಳು.ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಯಿತು.
ಪ್ರತಿಪಕ್ಷದ ನಾಯಕರೊಬ್ಬರು:ಗೃಹ ಸಚಿವರೇ ಈ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ.ಆ ನೊಂದ ಹೆಣ್ಣು ಮಗಳ ಜಾಗದಲ್ಲಿ ನಿಮ್ಮ ಮಗಳು ಇದ್ದಿದ್ದರೆ ನೀವೇನು ಮಾಡುತ್ತಿದ್ದಿರಿ?ಎಂದು ಪ್ರಶ್ನಿಸಿದರು.

ಅವರ ಪ್ರಶ್ನೆ ಕೇಳಿ ಅರೆಕ್ಷಣ ಸ್ತಂಭೀಭೂತರಾದ ರಾಮರಾವ್‌ ಅವರು:ನೀವು ಹೇಳಿದ್ದು ನನ್ನ ಮನಸ್ಸು ಮುಟ್ಟಿದೆ ಎಂದು ಹೇಳಿದವರೇ ಮುಖ್ಯಮಂತ್ರಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಇದೇ ರೀತಿ ನಿಜಲಿಂಗಪ್ಪ ಅವರ ಕಾಲದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರು ಪಂಚಾಯ್ತ್‌ ಮಸೂದೆಯೊಂದನ್ನು ತಂದರು.ಅದನ್ನು ವಿಧಾನಮಂಡಲದಲ್ಲಿಟ್ಟು ಅಂಗೀಕಾರ ಪಡೆಯುವ ಮುನ್ನ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂಡಿಸಿದರು.

ಆಗೆಲ್ಲ ಒಂದು ಕಾಯ್ದೆಯನ್ನು ತರುವ ಮುನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಸಂಪ್ರದಾಯವಿತ್ತು.ಅದರನುಸಾರ ಹೆಗಡೆ ಕೂಡಾ ಆ ಮಸೂದೆಯನ್ನು ಪಕ್ಷದ ಶಾಸಕಾಂಗ ಸಭೆಯಲ್ಲಿ ಮಂಡಿಸಿದ್ದರು.
ಆದರೆ ಒಂದೇ ಮತದ ಅಂತರದಲ್ಲಿ ಹೆಗಡೆ ಅವರು ಶಾಸಕಾಂಗ ಸಭೆಯಲ್ಲಿ ಮಂಡಿಸಿದ ಮಸೂದೆಗೆ ಸೋಲಾಯಿತು.

ಇದರಿಂದ ನೊಂದ ಹೆಗಡೆ:ಇನ್ನು ಗ್ರಾಮೀಣಾಭಿವೃದ್ಧಿ ಸಚಿವನಾಗಿ ಮುಂದುವರಿಯುವುದು ನೈತಿಕತೆಯಲ್ಲ ಎಂದವರೇ ಮುಖ್ಯಮಂತ್ರಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು.
ಇದೇ ರೀತಿ ದೇವರಾಜ ಅರಸರ ಕಾಲದಲ್ಲಿ ಸಚಿವರಾಗಿದ್ದ ಆರ್.ಡಿ.ಕಿತ್ತೂರು ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯೊಬ್ಬರು ನಾಪತ್ತೆಯಾದರು.ವಿಷಯ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಆ ಸಂದರ್ಭದಲ್ಲಿ ಹಲವು ರೀತಿಯ ಮಾತುಗಳು ಕೇಳಿ ಬಂದವು.ಪರಿಣಾಮ?ಆರ್.ಡಿ.ಕಿತ್ತೂರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ನಾಯಕರೇ:ಬಾಳೇ ಹಣ್ಣು ತಿಂದವರು ಯಾರೋ?ಆದರೆ ಸಿಪ್ಪೆ ಹಿಡಿದುಕೊಂಡಿದ್ದ ಕಾರಣಕ್ಕಾಗಿ ಅರ್.ಡಿ.ಕಿತ್ತೂರ್‌ ರಾಜೀನಾಮೆ ಕೊಡಬೇಕಾಯಿತು ಎಂದು ಮಾತನಾಡಿಕೊಂಡರು.
ಮುಂದೆ ತಾವೇ ಮುಖ್ಯಮಂತ್ರಿಯಾದ ಕಾಲದಲ್ಲಿ ಬಾಟ್ಲಿಂಗ್‌ ಹಗರಣ ಮತ್ತು ಟೆಲಿಫೋನ್‌ ಟ್ಯಾಪಿಂಗ್‌ ಹಗರಣ ನಡೆದಾಗ ಹೆಗಡೆ ರಾಜೀನಾಮೆ ನೀಡಿದರು.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ತಮ್ಮ ಪುತ್ರ ಮಧ್ಯಾಭಿಷೇಕ ಮಾಡಿದ ಆರೋಪ ಕೇಳಿ ಬಂದಾಗ ಸಚಿವರಾಗಿದ್ದ ಬಿ.ಟಿ.ಲಲಿತಾನಾಯಕ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಆದರೆ ಇಂತಹ ಸತ್ಸಂಪ್ರದಾಯಗಳು ಕ್ರಮೇಣ ಮರೆಯಾಗುತ್ತಾ ಹೋಗಿ ಈಗ ಯಾವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರೆ ತಪ್ಪು ಮಾಡಿದವರನ್ನೂ ಸಮರ್ಥನೆ ಮಾಡುವ ದೊಡ್ಡ ಜನಸಮೂಹ ಬೆಳೆದುನಿಂತಿದೆ.

ವಿಪರ್ಯಾಸವೆಂದರೆ ಮಾಡಿದ ತಪ್ಪು ಕಣ್ಣೆದುರಿಗಿದ್ದರೂ ತಪ್ಪು ಮಾಡಿದವರೇ ಸ್ವಾತಂತ್ರ್ಯ ಹೋರಾಟಗಾರರ ಫೋಜು ಕೊಡುತ್ತಾ ತಮ್ಮ ಕೈನ ಎರಡೂ ಬೆರಳುಗಳನ್ನು ಎತ್ತಿ ತೋರಿಸುತ್ತಾ,ವಿಜಯೋತ್ಸವ ಆಚರಿಸುತ್ತಾರೆ.
ಅಂದ ಹಾಗೆ ಆರೋಪಗಳಿಗೆ ನಾನಾ ಮುಖಗಳಿರಬಹುದು.

ಯಾರದೋ ಷಡ್ಯಂತ್ರವೂ ಇದಕ್ಕೆ ಕಾರಣವಾಗಿರಬಹುದು,ಆದರೆ ನಡೆದಿದ್ದು ತಪ್ಪು ಎಂಬುದು ಸ್ಪಷ್ಟವಾದಾಗ ಶಿಕ್ಷೆಯನ್ನು ಸ್ವೀಕರಿಸುವ ಮತ್ತು ತನಿಖೆಯನ್ನು ಎದುರಿಸುವ ಗುಣ ಇರಬೇಕು.ಇಂತಹ ವಾತಾವರಣ ಸೃಷ್ಟಿಗೆ ವ್ಯವಸ್ಥೆಯೂ ಬಲ ನೀಡಬೇಕು. ಆದರೆ ರಮೇಶ್‌ ಜಾರಕಿಹೊಳಿ ಪ್ರಕರಣ ಅಂತಹ ವಾತಾವರಣ ಸೃಷ್ಟಿಸಲು ವ್ಯವಸ್ಥೆಯೇ ತಯಾರಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್‌ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

Published

on

ಸುದ್ದಿದಿನ,ಬೆಂಗಳೂರು: ವಿಶ್ವ ವೆಂಕಟೇಶ್ವರ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ “ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ” ಎಂಬ ಆಶಯದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಾ ಬಾಲಾಜಿ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು, ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು, ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದರಲ್ಲಿ ಅಡಗಿದೆ ಎಂದು ಕರೆ ನೀಡಿದರು. ಪ್ರಾಮಾಣಿಕ ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕತ್ವವೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಡಿಪಾಯ ಎಂದರು.

ವಿದ್ಯಾರ್ಥಿಗಳ ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಪ್ರದರ್ಶನಗಳು ಹಾಗೂ ಶಿಸ್ತುಬದ್ಧ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕೊಡಿಪಾಳ್ಯ ಮತ್ತು ಕೆಂಗೇರಿಯಲ್ಲಿ 445 ಮೀಟರ್ ಇರುವ ವಿಶೇಷ ಧ್ವಜದೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಶತಪ್ರತಿಶತ ಫಲಿತಾಂಶ ಸಾಧಿಸಿದ ಬೋಧಕ ಸಿಬ್ಬಂದಿಯನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನೇರ ಪ್ರಸಾರವೂ ನಡೆಯಿತು. 2,500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಮಧ್ಯಾಹ್ನದ ಊಟ ಮತ್ತು ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಒಗ್ಗಟ್ಟು ಮತ್ತು ದೇಶಪ್ರೇಮದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಈ ಸಂದರ್ಭದಲ್ಲಿ ವಿವಿಐಎಸ್ ನ ಅಕಾಡೆಮಿಕ್ ಅಡ್ವೈಸರ್ ಡಾ. ರಾಜೇಶ್ವರಿ ದತ್ತಾತ್ರಿ, ವಿವಿ ವಿದ್ಯಾಸಂಸ್ಥೆಯ ಡೀನ್ ಶ್ರೀ ಕಿಶೋರ್ ಕಟ್ಟ, ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಟಿ.ಎನ್, ಕೆಪಿಸಿ ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಐ. ಚೆನ್ನಾರೆಡ್ಡಿ, ಸಿಬಿಎಸ್‌ಇ ಪ್ರಾಂಶುಪಾಲರಾದ ಪ್ರೊ. ಪ್ರಹ್ಲಾದ, ಉಪಪ್ರಾಂಶುಪಾಲರಾದ ಶ್ರೀ ಮದನ್ ರಾಜ್, ಪ್ರಾಂಶುಪಾಲರಾದ ಡಾ. ಸುರೇಶ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ

Published

on

ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರದ ಭವಿಷ್ಯದ ಉತ್ತಮ ನಾಗರಿಕರಾಗಬೇಕು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ತಿಳಿಸಿದರು.

ನಗರದ ರೋಟರಿ ವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದ ಅವರು ಮಾತನಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವುದು ಅನೇಕ ಮಹನೀಯರ ತ್ಯಾಗದ ಫಲ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸದಾ ಸ್ಮರಿಸಿ, ಏಕತೆ, ಶಿಸ್ತು, ಶಿಕ್ಷಣ ಮತ್ತು ಸೇವೆಯ ಮೂಲಕ ಶ್ರೇಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಅವರು ಕರೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ದೇಶದ ಹೆಮ್ಮೆ ಮತ್ತು ಭವಿಷ್ಯದ ಆಶಾಕಿರಣಗಳಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. PHF. PDG. ಮಧುಪ್ರಸಾದ್ ಕೆ. ಅವರು ವಹಿಸಿದ್ದರು. ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನತೆಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳನ್ನು ನೀಡಿದಂತೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು, ಪರಿಸರವನ್ನು ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಟ್ರಸ್ಟ್ ನ ಖಜಾಂಚಿ ರೊ. ಸತ್ಯನಾರಾಯಣಾಚಾರ್,
ರೊ. ಜಿ.ಎ. ವಿಶ್ವನಾಥ್ ಬಾಬು, ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಸದಸ್ಯರು, ಹಾಗೂ ರೊ. ಶಂಕರಪ್ಪ, ಆಡಳಿತಾಧಿಕಾರಿ, ರೋಟರಿ ವಿದ್ಯಾಲಯ, ಉಪಸ್ಥಿತರಿದ್ದು , ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ, ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಭಾಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ವಿದ್ಯಾರ್ಥಿಗಳ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಹೆಚ್.ಎಂ. ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಶಿಕ್ಷಕಿ ಜ್ಯೋತಿ ಆರ್. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಗೌರಮ್ಮ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರೋಟರಿ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಏಕತೆ, ಸಾಮರಸ್ಯ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕುರಿತು ಸಂದೇಶ ನೀಡಲಾಯಿತು.

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಜಾಫರ್ ಅವರು ಮಾತನಾಡಿ, ಸ್ವಾತಂತ್ರ್ಯವೆಂಬುದು ಕೇವಲ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವೃದ್ಧಿಯ ಅವಕಾಶ ದೊರೆಯುವಂತಾಗಬೇಕು. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending