ದಿನದ ಸುದ್ದಿ
ಬುಡಕಟ್ಟು ಜನಾಂಗದ ಗಟ್ಟಿ ದನಿ : ಸಾಯಿ ಪಲ್ಲವಿ
- ಸಿದ್ದು ಸತ್ಯಣ್ಣನವರ್
ಆಕೆ ‘ಬಡಗ‘ ಎಂಬ ತಮಿಳುನಾಡಿನ ಬುಡಕಟ್ಟು ಜನಾಂಗದ ಕುಡಿ. ದ್ರಾವಿಡತನ ರಕ್ತದಲ್ಲೇ ಇತ್ತು. ಸಿನಿ ರಂಗ ಸೃಷ್ಟಿಸಿದ್ದ ಹಲವು ಸಿದ್ಧ ಮಾದರಿಗಳನ್ನು ಮೀರಿದ ಅಗ್ಗಳಿಕೆ ಸಹ ಆಕೆಯದು. ಹೆಸರು ‘ಸಾಯಿ ಪಲ್ಲವಿ’. ಸದ್ಯ ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ. ಆ ಬೇಡಿಕೆಯನ್ನು ತನ್ನ ಪ್ರಬುದ್ಧತೆ, ,ಪ್ರತಿಭೆ, ನಟನಾ ಕೌಶಲ್ಯತೆಯಿಂದ ಸೃಷ್ಟಿಸಿಕೊಂಡಿರುವಾಕೆ.
ಕೆಲ ದಿನಗಳ ಹಿಂದೆ ಆಕೆ ಕಾಸ್ಮೆಟಿಕ್ ಕಂಪನಿಯೊಂದರ ಎರಡು ಕೋಟಿ ರೂಪಾಯಿ ಜಾಹೀರಾತನ್ನು ತಿರಸ್ಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅದು ಅವಳನ್ನು ಬಲ್ಲ ಕುಟುಂಬ ವರ್ಗ ಮತ್ತು ಸ್ನೇಹಿತ ವಲಯಕ್ಕೆ ಆಶ್ಚರ್ಯಕರ ಸಂಗತಿಯೇನಾಗಿರಲಿಲ್ಲ. ಯಾಕೆಂದರೆ ಸಾಯಿ ಪಲ್ಲವಿಯ ತಂಗಿ ಪೂಜಾ ಮೈ ಬಣ್ಣ ಕಪ್ಪು. ಅವಳು ಸಹ ಹಲವು ಕಂಪೆನಿಯ ಕಾಸ್ಮೆಟಿಕ್ ಪ್ರೋಡಕ್ಟ್ಸ್ ಬಳಸಿದವಳೇ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದನ್ನೇ ಮತ್ತೊಂದು ಬಗೆಯಲ್ಲಿ ಅಂದರೆ ಎರಡು ಕೋಟಿ ಜಾಹೀರಾತು ಏಕೆ ತಿರಸ್ಕರಿಸಿದೀರಿ? ಎಂದು ಸಂದರ್ಶನವೊಂದರಲ್ಲಿ ನಿರೂಪಕಿ ಕೇಳಿದ್ದಳು.
ಕಾಸ್ಮೆಟಿಕ್ಸ್ ಕಂಪನಿಗಳ ವಂಚನೆ ತನ್ನ ತಂಗಿಯ ಮೂಲಕವೇ ಸಾಯಿ ಪಲ್ಲವಿಗೆ ಮನದಟ್ಟಾಗಿತ್ತು. ಆಗ ಅವಳು ಕೊಟ್ಟ ಉತ್ತರ ಹೀಗಿತ್ತು ‘ಬ್ರಿಟಿಷರು ಬೆಳ್ಳಗೆ, ಆಫ್ರಿಕನ್ನರು ಕಪ್ಪಗೆ, ಭಾರತೀಯರು ಕಂದು. ಆಫ್ರಿಕಾದಲ್ಲಿ ನಾವು ಅಲ್ಲಿನ ಕಪ್ಪನೆ ಯುವತಿಯರನ್ನೇ ಸುಂದರಿಯರು ಎನ್ನಬೇಕಾಗುತ್ತದೆ. ಮೈ ಬಣ್ಣ ಎನ್ನುವುದು ಬರೀ ಒಂದು ಭಾವನೆಯಷ್ಟೇ. ನನ್ನ ತಂಗಿಯೇ ಇದ್ದಳಲ್ಲ, ಮನೆಯಲ್ಲಿ. ನಾನು ಹಾಗಾಗಿ ಆ ಜಾಹೀರಾತನ್ನು ಒಪ್ಪಿಕೊಳ್ಳಲಿಲ್ಲ. ದುಡ್ಡಿಗಾಗಿ ನಾನೇಕೆ ಜನರನ್ನು ವಂಚಿಸಲಿ?’ ಎಂದಿದ್ದಳು. ಇದು ಪ್ರಶ್ನೆಯೊಂದಕ್ಕೆ ಸಾಯಿ ಪಲ್ಲವಿಯ ಉತ್ತರವಾದರೂ ಕಪ್ಪು ಬಣ್ಣದ ಬಗ್ಗೆ ತಮಿಳರ ಪ್ರೇಮವನ್ನು ಹೇಳುತ್ತದೆ. (ಪಾ.ರಂಜಿತ್ ನಿರ್ದೇಶನದ ಕಾಲಾ ಸಿನಿಮಾ ಆ ಬಗ್ಗೆ ಖಚಿತವಾಗಿ ಮಾತನಾಡುತ್ತದೆ. ಈ ಪಟ್ಟಿ ಬೆಳೆಸಿದರೆ ಇನ್ನು ಬೆಳೆಯುತ್ತದೆ. ಅದಿಲ್ಲಿ ಅನಗತ್ಯ).
ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ‘ಬಡಗ’ ಎಂಬ ಬುಡಕಟ್ಟು ಜನಾಂಗದ ಹೆಣ್ಣುಮಗಳು ಈ ಸಾಯಿ ಪಲ್ಲವಿ. ಮೆಡಿಕಲ್ ಓದಿದರೂ (ಹಾರ್ಟ್ ಸ್ಪೇಶಲಿಸ್ಟ್) ಪ್ರಾಕ್ಟೀಸಿಗಾಗಿ ಹೆಸರು ನೋಂದಾಯಿಸಿಕೊಂಡಿಲ್ಲ. ತಮಿಳುನಾಡಿನ ಸುಮಾರು 400 ಹಳ್ಳಿಗಳಲ್ಲಿ ಕಂಡು ಬರುವ ಬಡಗ ಜನಾಂಗ ನಮ್ಮಲ್ಲಿ ಕಾಡು ಕುರುಬ, ಜೇನು ಕುರುಬರು ವಾಸಿಸುವಂತೆಯೇ ಕಾಡಿನ ಏರಿಳಿತಗಳ ನಡುವೆ ಹಟ್ಟಿಗಳಲ್ಲಿ ವಾಸಿಸುವವರು. ‘ಬಡಗ’ ಎಂದರೆ ತಮಿಳು ಜನಪದದಲ್ಲಿ ದಕ್ಷಿಣ ಎಂಬರ್ಥವೂ ಉಂಟು.
ನಟಿಯರಲ್ಲಿ ದ್ರಾವಿಡತನದ ಢಾಳ ಛಾಯೆ ನನಗೆ ಎದ್ದು ಕಂಡದ್ದು ‘ಪ್ರೇಮಂ‘ ಎಂಬ ಸಿನೇಮಾದ ಮೂಲಕ ಮೋಡಿ ಮಾಡಿದ ಈ ‘ಮಲರ್‘ ಮೂಲಕ. ವೃತ್ತಿಪರ ನೃತ್ಯಪಟುವಲ್ಲದಿದ್ದರೂ, ಈಕೆ ಅದರಲ್ಲೂ ಯಶಸ್ಸು ಸಾಧಿಸಿದಾಕೆ. ಡ್ಯಾನ್ಸ್ ಬರುತ್ತಿದ್ದ ಕಾರಣಕ್ಕೆ ಮಲಯಾಳಂನ ಎವರ್ ಗ್ರೀನ್ ಹಿಟ್ ಸಿನೆಮಾ ‘ಪ್ರೇಮಂ’ ಚಿತ್ರದಲ್ಲಿ ‘ಮಲರ್’ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದಾಚೆಗೆ ಸಾಯಿ ಪಲ್ಲವಿ ಹೊರಳಿ ನೋಡುವ ಪ್ರಮೇಯಗಳೇ ಎದುರಾಗಲಿಲ್ಲ.
ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದರೂ ಆಕೆಯ ಸ್ಪಷ್ಟ ನಿಲುವು ಸಿನಿಮಾ ರಂಗದ ಬಹುತೇಕರಿಗೆ ಅಪಥ್ಯವೂ ಸಹ. ಅದೇನೂ ಅಂತಹ ಗುಟ್ಟೂ ಅಲ್ಲ. ಹಾಗಂತ ಹಲವು ಒತ್ತಡಗಳ ನಡುವೆಯೂ ಸಾಯಿ ಪಲ್ಲವಿ ಪುರುಷ ಪ್ರೌಢಿಮೆಯ ಸಿನೇಮಾ ಇಂಡಸ್ಟ್ರಿಗಳಲ್ಲಿ ತನ್ನ ನಿಲುವಿಗೆ ಬದ್ಧವಾಗಿರೋದು ಹಲವು ಬಾರಿ ಸುದ್ದಿಯೂ ಆಗಿರುವುದು ಹಳೇ ಸಮಾಚಾರ.
‘ನನ್ನ ತಂಗಿ ಪೂಜಾಳ ಮೈ ಬಣ್ಣ ಕಪ್ಪು. ನನ್ನದು ಬಿಳಿ. ಅದೆಲ್ಲ ಇಲ್ಲಿ ಅನಗತ್ಯ. ಮೈ ಬಣ್ಣ ನನಗೆಂದು ವಿಶೇಷ, ಆಕರ್ಷಕವೆನಿಸಿಲ್ಲ, ಅನಿಸುವುದೂ ಇಲ್ಲ. ಆಫ್ರಿಕನ್ನರ ಮೈ ಬಣ್ಣ ಸಹಜವಾಗಿಯೇ ಕಪ್ಪು. ಕಪ್ಪು ಹುಡುಗಿಯರನ್ನೇ ಅವರು ಸುಂದರಿ ಎಂದು ಕರೆಯಬೇಕು. ಭಾರತದಲ್ಲೂ ಅಷ್ಟೇ’ ಮೇಲೆ ಉಲ್ಲೇಖಿಸಿರುವ ಸಂದರ್ಶನ ಇದೆಯಲ್ಲ, ಅದರಲ್ಲೇ ಮುಂದುವರೆದು ಎರಡನೇ ಬಾರಿ ಇದೇ ಉತ್ತರ ಪುನರುಚ್ಚರಿಸಿದ್ದಳು ಸಾಯಿ ಪಲ್ಲವಿ.
ಬಹುಭಾಷಾ ನಟಿ ಪಾರ್ವತಿ ಮೆನನ್ ಬಿಟ್ಟರೆ ಇಂತಹ ವಿಚಾರಗಳಲ್ಲಿ ತೀರಾ ಇತ್ತೀಚೆಗೆ ಹೀಗೆ ಪುರುಷತ್ವದ ಕಪಾಳಕ್ಕೆ ಹೊಡೆದಂತೆ ನೇರವಾಗಿ ಮಾತನಾಡಿದ್ದು ಸಾಯಿಪಲ್ಲವಿ ಮಾತ್ರ. ಹದಿ ವಯದ ಯುವಕರಂತೂ ಸಾಯಿ ಪಲ್ಲವಿಯ ತೆಲುಗಿನ ‘ಫಿದಾ‘ ಮಲಯಾಳಂನ ‘ಕಾಳಿ‘ ಹಾಗೂ ‘ಅಧಿರನ್‘ ಸಿನಿಮಾಗಳಲ್ಲಿ ಅವಳ ಮುಗ್ಧ, ಮೋಹಕ ನಟನೆಯನ್ನು ಎಂದೂ ಮರೆಯಲಾರರು. ಅದೆಲ್ಲದರಾಚೆಗೆ ಅವಳ ವೈಚಾರಿಕ ನಿಲುವನ್ನು ಸಹ. ಇಂತಹ ಸಾಯಿ ಪಲ್ಲವಿಗೆ ಇಂದು ( ಮೇ 9 ನಿನ್ನೆ ) ಜನ್ಮದಿನ. ಇಂತಹ ನಟಿಯರ ಸಂಖ್ಯೆ ದುಪ್ಪಟ್ಟಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.




