ಬಹಿರಂಗ
ಪ್ರೀತಿಯ ವಾಲ್ಮೀಕಿ -ನಾಯಕ ಸಮುದಾಯದ ಸಹೋದರರೇ
ಈ ಮೊದಲೇ ತಿಳಿಸಿದಂತೆ ವಾಲ್ಮೀಕಿ -ನಾಯಕ ಸಮುದಾಯವು 7.5% ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ನಾನು ನೈತಿಕವಾಗಿ ಬೆಂಬಲಿಸುತ್ತಿದ್ದೇನೆ. ಈಗ ನಿಮ್ಮ ಮುಂದೆ ನಾನು ಮಂಡಿಸುತ್ತಿರುವ ಈ ಕೆಳಗಿನ ತಕರಾರುಗಳೆಲ್ಲವೂ ನಿಮಗೆ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಲಿ ಎಂದಷ್ಟೇ ಆಶಿಸುತ್ತೇನೆ.
ಮೊನ್ನೆ ನಡೆದ ವಾಲ್ಮೀಕಿ- ನಾಯಕ ಸಮಾವೇಶದಲ್ಲಿ ಭಗವಾಧ್ವಜಗಳು ಹಾರಾಡುತ್ತಿದ್ದವು. ಭಗವಾಧ್ವಜ ಎಂಬುದು ನಾಯಕ ಸಮುದಾಯದವರ ಪಾಲಿಗೆ ದಲಿತರ ಸ್ವಾಭಿಮಾನಿ ಹೋರಾಟದ ಲಾಂಛನವಾಗಿರುವ ನೀಲಿ ಬಾವುಟಕ್ಕಿಂತಲೂ ಮಹತ್ವವಾದದ್ದೇನು? ಭಗವಾಧ್ವಜಗಳನ್ನು ಹಾರಾಡಿಸಿಕೊಂಡು ಯಾರೇ ಬರಲಿ ಅವರು ಅಂಬೇಡ್ಕರ್ ಗೆ ವಿರೋಧಿಗಳೆಂದು ನಾವು ತಿಳಿಯಬೇಕಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸಾಮಾಜಿಕ ನ್ಯಾಯದ ಮಾನದಂಡವೆಂದು ಮೀಸಲಾತಿಯನ್ನು ದೊರಕಿಸಿಕೊಟ್ಟ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿರುವ ಎಲ್ಲ ಪಂಗಡಗಳು ಒಂದಾಗುವುದನ್ನು ಬಿಟ್ಟು ಮೀಸಲಾತಿ ವಿರೋಧಿಗಳಾದ ಕೇಸರಿ ಪಡೆಗಳ ಹಿಂದೆ ಭಗವಾಧ್ವಜ ಹಾರಿಸುತ್ತಾ ಹೋಗುವುದು ನ್ಯಾಯವೇನು? ಬುದ್ಧಗುರು – ಬಸವಣ್ಣ – ಗಾಂಧೀಜಿ – ಅಂಬೇಡ್ಕರ್- ಕುವೆಂಪು ಮುಂತಾದ ಮಾನವತಾವಾದಿಗಳ ಜಾತ್ಯತೀತ ಹೋರಾಟದ ಹಿನ್ನೆಲೆ ತಿಳಿಯದೆ ಕೋಮುವಾದಿ ಸಂಘಿಗಳೊಂದಿಗೆ ಕೈಜೋಡಿಸುತ್ತಾ ಬರಿದೇ ಮೀಸಲಾತಿ ಫಲಾನುಭವಗಳಿಗಾಗಿ ಆಸೆಪಡುವ ಜನರು, ಅನ್ನ ಕೊಟ್ಟ ಡಾ.ಅಂಬೇಡ್ಕರ್ ಅವರ ಸಂವಿಧಾನದ ಬದಲು ರಾಮಾಯಣ – ಮಹಾಭಾರತ- ಭಗವದ್ಗೀತೆ ಬೇಕೆನ್ನುತ್ತಿದ್ದಾರೆ. ಆತ್ಮಗೌರವದ ಸಂಕೇತವಾದ ನೀಲಿ ಧ್ವಜ ಬೇಕಿಲ್ಲವೆಂದು ದೂರವಿಟ್ಟಿರುವ ಇದೇ ಜನ ಹಿಂದುತ್ವದ ಹೆಸರಿನಲ್ಲಿ ಮತೀಯ ಧ್ವೇಷ ಹರಡುವ ಭಗವಾಧ್ವಜ ಹಿಡಿದುಕೊಂಡಿದ್ದಾರೆ. ಜೈ ಭೀಮ್ ಎಂದು ಭೀಮಮಂತ್ರ ಹೇಳಬೇಕಾದವರು ಜೈ ಶ್ರೀರಾಮ್ – ಜೈ ಭಜರಂಗಬಲಿ ಎಂದು ಕೂಗುತ್ತಿದ್ದಾರೆ. ಏನೆಂತಾ ವರ್ತನೆ ಇವರದು? ಈ ವರ್ತನೆ ಎಷ್ಟರಮಟ್ಟಿಗೆ ಸರಿ?.
ಮೇಲ್ಜಾತಿಗಳ ಗುಡಿಗಳಿಗೂ ಮನೆಗಳಿಗೂ ಪ್ರವೇಶಿಸುವ ಸಾಮಾಜಿಕ ಸ್ವಾತಂತ್ರ್ಯವಿರುವ ವಾಲ್ಮೀಕಿ- ನಾಯಕರಿಗೆ ಹೋಲಿಸಿ ನೋಡಿದರೆ, ಅದೇ ಮೇಲ್ಜಾತಿಯವರ ಗುಡಿಯಾಚೆಗೂ ಮನೆಯಾಚೆಗೂ ತಲೆ ತಗ್ಗಿಸಿ ಕೈಕಟ್ಟಿಕೊಂಡು ನಿಂತಿರುವ ಹೊಲೆಮಾದಿಗರಷ್ಟು ತೀವ್ರವಾದ ಸಾಮಾಜಿಕ ಶೋಷಣೆಗೀಡಾಗಿಲ್ಲವೆಂಬುದು ವಾಸ್ತವ ಸಂಗತಿ. ಸಾಮಾಜಿಕ ಬಹಿಷ್ಕಾರಕ್ಕೆ ಹೊಲೆಮಾದಿಗರು ಗುರಿಯಾಗುತ್ತಿರುವರೇ ಹೊರತು ನಾಯಕ ಜನಾಂಗದವರಲ್ಲ. ಮೀಸಲಾತಿ ಕೇಳುವ ವಾಲ್ಮೀಕಿ – ನಾಯಕರು ಸವರ್ಣೀಯರೊಂದಿಗೆ ಮಾತ್ರ ಗುರುತಿಸಿಕೊಳ್ಳುತ್ತಿದ್ದಾರೆ. ಚಪ್ಪಲಿ ಹೊಲೆಯುವ – ಸತ್ತ ಪಶುಗಳನ್ನು ಹೊತ್ತು ಸಾಗಿಸುವ – ಅರೆ ತಮಟೆ ನುಡಿಸುತ್ತಾ ತೋಟಿ ಕೆಲಸ ಮಾಡುವ – ಕಕ್ಕಸ್ಸು ಬಾಚಿ ಜಾಡಮಾಲಿ ಕೆಲಸ ಮಾಡುವ ಹೊಲೆಮಾದಿಗರನ್ನು ಅಸ್ಪೃಶ್ಯರನ್ನಾಗಿ ಕಾಣುತ್ತಿದ್ದಾರೆ. ಸಮಾಜದ ಸೇವೆ ಮಾಡುತ್ತಾ ಕಟ್ಟಕಡೆಯವರಾಗಿ ಬದುಕುತ್ತಿರುವ ಹೊಲೆಮಾದಿಗರ ವಿರುದ್ಧ ನಾಯಕ ಸಮುದಾಯದವರು ತೋರಿಸುವ ಅಸಡ್ಡೆ -ಕೃತಘ್ನತೆ- ಶೋಷಣೆ ಮಾನವೀಯವಾದದ್ದೇ? ಅಂಬೇಡ್ಕರ್ ದೊರಕಿಸಿ ಕೊಟ್ಟಿರುವ ಮೀಸಲಾತಿಯ ಅನುಕೂಲ ಬೇಕೆಂದ ಮೇಲೆ ಅಂಬೇಡ್ಕರ್ ಅವರು ಹುಟ್ಟಿದ ಅಸ್ಪೃಶ್ಯರ ಸಮಾಜದ ಪರವಾಗಿ ನಿಲ್ಲದಿರುವ ಬಹತೇಕ ನಾಯಕರು, ಜಾತಿ ದೌರ್ಜನ್ಯ ಎಸಗುವ ಸವರ್ಣೀಯರೊಂದಿಗೆ ಮನುವಾದಿಗಳೊಂದಿಗೆ ಗುರುತಿಸಿಕೊಳ್ಳುವುದು ಸರಿಯೇನು? ಇತ್ತೀಚೆಗೆ ಏಪ್ರಿಲ್ 14 ರಂದು ಪಾವಗಡದಲ್ಲಿ ನಾಯಕ ಸಮುದಾಯದವರು ಸವರ್ಣೀಯರೊಂದಿಗೆ ಕೈಜೋಡಿಸಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ದಲಿತ ವಿರೋಧಿ ವರ್ತನೆ ಮತ್ತು ಅಸ್ಪೃಶ್ಯರ ವಿರುದ್ಧ ನಾಯಕರು ಎಸಗುತ್ತಿರುವ ದೌರ್ಜನ್ಯವನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?
ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಎಂಬುವ ಸ್ವಾಮೀಜಿಯೊಬ್ಬ ಠೇಂಕಾರದಿಂದ ಮಾತಾಡುತ್ತಾ ಮನುವಾದಿಗಳ ತಾಳಕ್ಕೆ ಕುಣಿಯುವ ಭಟ್ಟಂಗಿಯಾಗಿ ವಾಲ್ಮೀಕಿ ಸಮುದಾಯದ ಯುವಕರನ್ನು ಕೋಮುವಾದಿಗಳನ್ನಾಗಿ ಪರಿವರ್ತಿಸುತ್ತಿದಾರೆ. ಮೊನ್ನೆ ದಿನ ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ ವಾಲ್ಮೀಕಿ – ನಾಯಕ ಸಮಾವೇಶದಲ್ಲಿ ಭಗವಾಧ್ವಜಗಳು ಈ ಸ್ವಾಮೀಜಿಯ ನೇತೃತ್ವದಲ್ಲಿ ರಾರಾಜಿಸುತ್ತಿದ್ದವು. ಅಲ್ಲಿ ದಲಿತ ಚಳವಳಿಯ ಸ್ವಾಭಿಮಾನಿ ಹೋರಾಟದ ಸಂಕೇತವಾದ ನೀಲಿ ಬಾವುಟಗಳು ಯಾಕಿರಲಿಲ್ಲ? ಕೇಸರಿ ಭಗವಾಧ್ವಜವು ಅಂಬೇಡ್ಕರ್ ವಿರೋಧಿ ಮನುವಾದಿಗಳಿಗೆ ಮಾತ್ರ ಲಾಂಛನವಾಗಿರುತ್ತದೆ. ಅಂತಹ ವಿರೋಧಿ ಶಕ್ತಿಗಳ ಜೊತೆಗೆ ಗುರುತಿಸಿಕೊಂಡಿರುವ ಸ್ವಾಮೀಜಿಯು ಒಪ್ಪುವ ಕೇಸರಿ ಬಾವುಟಗಳನ್ನೇಕೆ ನೀವು ಬಳಸಿದಿರಿ? ಇದು ಕೇಸರಿ ಬಾವುಟ ಹಿಡಿಯಲು ದಲಿತ ಯುವಕರನ್ನು ಪ್ರಚೋದಿಸುತ್ತಿರುವ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಲಿಯಾಸ್ ಕಿಟ್ಟಿಗೂ ಅನ್ವಯಿಸುವ ಪ್ರಶ್ನೆ. ಭಾರತೀಯ ದಲಿತ ಚಳುವಳಿಯ ಪ್ರಜ್ಞೆಯಾಗಲೀ ಪ್ರಜಾತಾಂತ್ರಿಕ ತಿಳಿವಳಿಕೆಯಾಗಲೀ ಇಲ್ಲದೇ ಭಗವಾಧ್ವಜ ಹಾರಿಸುವ ಸ್ವಾಮೀಜಿಗಳು ನಮ್ಮ ಪ್ರಜಾತಾಂತ್ರಿಕ ನಡಿಗೆಗೆ ಯಾವತ್ತಿಗೂ ಮಾರಕವೆಂದು ನಿಮಗೆ ಅನ್ನಿಸುತ್ತಿಲ್ಲವೇಕೆ?
ಮ್ಯಾಸಬೇಡರು ಊರನಾಯಕರಿಗಿಂತ ಹಿಂದುಳಿದಿದ್ದಾರೆ. ಮ್ಯಾಸಬೇಡರು ಇಂದಿಗೂ ಬುಡಕಟ್ಟು ಚಹರೆಗಳನ್ನು, ಪೆಟ್ಟಿಗೆ ದೇವರುಗಳನ್ನು, ನೆಲದೇವತೆಗಳ ನೆಲೆಗಳನ್ನು, ಪ್ರತ್ಯೇಕ ಭಾಷೆಯನ್ನು, ಗೋಮಾಂಸ ಸೇವನೆಯ ಮೂಲ ಆಹಾರ ಸಂಸ್ಕೃತಿಯನ್ನು, ಗುಡಿಕಟ್ಟು ಕಟ್ಟೆಮನೆ ಒಳಾಡಳಿತ ಪದ್ದತಿಯನ್ನು ಉಳಿಸಿಕೊಂಡುಬಂದಿದ್ದಾರೆ. ಹಾಗಾಗಿ ಮ್ಯಾಸಬೇಡರು ನಿಜವಾದ ಮೀಸಲಾತಿ ಫಲಾನುಭವಿಗಳಾಗಬೇಕಿದೆ. ಇವರು ಇಂದಿಗೂ ಶಿಕ್ಷಣಕ್ಕಾಗಲೀ ನಾಗರಿಕ ಬದುಕಿಗಾಗಲೀ ತೆರದುಕೊಳ್ಳದೆ ಮೀಸಲಾತಿಯೂ ಸಿಗದೆ ಒದ್ದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರಲು ಹಕ್ಕಿಪಿಕ್ಕಿ ಸೋಲಿಗ ಕಾಡುಕುರುಬ ಮಲೆಕುಡಿಯ ಜೇನುಕುರುಬ ಇರುಳಿಗ ಸಿದ್ಧಿಯರು ಮುಂತಾದವರಿಗೆ ಸಿಗಬೇಕಾದ ST ಮೀಸಲಾತಿಯ ಸಿಂಹಪಾಲು ಊರನಾಯಕರ ಪಾಲಾಗುತ್ತಿದೆ. ದೇವರ ಎತ್ತುಗಳ ಕಿಲಾರಿಗಳನ್ನು ಮತ್ತು ದೇವರ ಎತ್ತುಗಳನ್ನೇ ಪವಿತ್ರವೆಂದು ಎತ್ತಿನ ಬಾಲ ಹಿಡಿದುಕೊಂಡಿರುವ ಮ್ಯಾಸನಾಯಕರು ಮೂಲೆಗುಂಪಾಗಿದ್ದಾರೆ. 2011 ರಲ್ಲಿಯೇ ಮ್ಯಾಸಬೇಡರನ್ನು ಓಬಿಸಿ ಪಟ್ಟಿಗೆ ಸೇರಿಸಲಾಗಿದೆ.. ಇದು ಊರನಾಯಕರು ಮಾತ್ರ 7.5% ಮೀಸಲಾತಿ ದೋಚಿಕೊಳ್ಳಲು ಮಾಡಿರುವ ಹುನ್ನಾರವಾಗಿದೆ. ಈ ಪ್ರಶ್ನೆಗೆ ನಿಮ್ಮ ಉತ್ತರವೇನು?
ದಾರ್ಶನಿಕ ಕವಿ ವಾಲ್ಮೀಕಿ ಅವರಿಗಿರುವಷ್ಟು ಸ್ಥಾನಮಾನವನ್ನು ನಾಯಕ ಸಮುದಾಯದವರು, ನಮಗೆಲ್ಲರಿಗೂ ಮೀಸಲಾತಿ ತಂದುಕೊಟ್ಟ ಮಹಾನ್ ನೇತಾರನಾದ ಅಂಬೇಡ್ಕರ್ ಅವರಿಗೆ ನೀಡುತ್ತಿಲ್ಲ. ವಾಲ್ಮೀಕಿ ಒಬ್ಬ ಪುರಾಣಿಮ ಕವಿ – ಅಂಬೇಡ್ಕರ್ ಮೀಸಲಾತಿಯನ್ನು ಕೊಟ್ಟ ಸಾಮಾಜಿಕ ಹೋರಾಟಗಾರ. ಪುರಾಣ ಸಂಗತಿಗಳು ಸಮಾಜದ ಧಾರ್ಮಿಕ ನಾಡಿಯೇ ಹೊರತು ಸಂವಿಧಾನಪ್ರಣೀತ ರಾಜಕೀಯ ಶಕ್ತಿಯಲ್ಲ. ಬುದ್ಧಗುರು – ಬಸವಣ್ಣ – ಗಾಂಧೀಜಿ – ಅಂಬೇಡ್ಕರ್ – ಕುವೆಂಪು ಮುಂತಾದ ಮಾನವತಾವಾದಿ ಜಾತ್ಯತೀತ ಹೋರಾಟಗಾರು ಹಾಗೂ ಸಾಮಾಜಿಕ ನ್ಯಾಯದ ನಿಷ್ಠಾವಂತ ಪ್ರಗತಿಪರ ಹೋರಾಟಗಾರರು ನಮಗೆ ಪ್ರಧಾನವಾಗಬೇಕೇ ಹೊರತು ಪುರಾಣಿಮ ಪ್ರತಿಮಾ ನಾಯಕರಲ್ಲ. ಪುರಾಣಿಮ ಕವಿ ವಾಲ್ಮೀಕಿ ನಮ್ಮೆಲ್ಲರ ಸಾಂಸ್ಕೃತಿಕ ಹೆಮ್ಮೆಯ ಸಂಕೇತವೆಂಬುದನ್ನು ಒಪ್ಪುತ್ತೇವೆ.
ಆದರೆ ಮೀಸಲಾತಿ ದೊರಕಿಸಿಕೊಟ್ಟ ಡಾ.ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಅಂಬೇಡ್ಕರ್ ನಮಗಿಂದು ಸಾಮಾಜಿಕ ಚಳವಳಿಗಳಲ್ಲಿ ಹೆಚ್ಚು ಪ್ರಸ್ತುತ ಎಂಬುದು ನಿಮಗೇಕೆ ತಿಳಿಯುತ್ತಿಲ್ಲ? ವಾಲ್ಮೀಕಿ ಜಯಂತಿಯನ್ನು ಆಚರಿಸಲು ತೋರಿಸುವ ಉತ್ಸಾಹದ ಅರ್ಧದಷ್ಟಾದರೂ ನಾಯಕ ಸಮುದಾಯದವರು ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ತೋರಿಸುತ್ತಿಲ್ಲ ಯಾಕೆ? ಪುರಾಣಿಮ ನಾಯಕನಾದ ವಾಲ್ಮೀಕಿ ಮತ್ತು ಚಾರಿತ್ರಿಕ ಪಾಳ್ಳೇಗಾರನಾದ ಮದಕರಿನಾಯಕರ ಜಯಂತಿಗಳನ್ನು ಆಚರಿಸುವ ಇದೇ ಜನ, ಡಾ.ಅಂಬೇಡ್ಕರ್ ಅವರ ಜಯಂತಿ ಆಚರಿಸಲು ಅಥವಾ ಗೌರವ ತೋರಿಸಲು ಯಾಕೆ ಮುಂದಾಗಬಾರದು? ಪುರಾಣಿಮ ಕವಿ ವಾಲ್ಮೀಕಿಗೆ ಕೊಟ್ಟಿರುವ ಲೇಶಮಾತ್ರ ಗೌರವದ ಸ್ಥಾನವನ್ನು ಅಂಬೇಡ್ಕರ್ ಗೆ ಕೊಡದಿರುವ ಇವರು ವಾಲ್ಮೀಕಿಯಿಂದ ಮೀಸಲಾತಿ ಪಡೆದರೋ ಅಥವಾ ಅಂಬೇಡ್ಕರ್ ಅವರಿಂದ ಪಡೆದರೋ?
ಪ್ರೊ.ಕೆ.ನಾರಾಯಣಸ್ವಾಮಿ (ಕೆಎನ್ಎಸ್) ಅವರನ್ನು ಹೊರತುಪಡಿಸಿ ಅಷ್ಟೊಂದು ಬದ್ಧತೆಯಿಂದ ದಲಿತ ಚಳವಳಿಗಾಗಿ ನಾಯಕ ಸಮುದಾಯದ ಯಾವುದೇ ನೇತಾರ ಹೋರಾಟ ಮಾಡಿದ ಉದಾಹರಣೆಗಳಿಲ್ಲ ಎಂಬುದು ಕಟುಸತ್ಯ. ಒಬ್ಬ ವ್ಯಕ್ತಿಯಾಗಿ ನ್ಯಾ.ಎಲ್.ಜಿ.ಹಾವನೂರು ವರದಿ ಹೊರತುಪಡಿಸಿ, ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಒಟ್ಟಾರೆ ಮೀಸಲಾತಿ ಹೋರಾಟಗಳಿಗೆ ನಾಯಕ ಸಮುದಾಯದವರು ನೀಡಿರುವ ಕೊಡುಗೆ ಏನು? ಹಾಗೂ ಈ ಹೋರಾಟಗಳಲ್ಲಿ ಅಸ್ಪೃಶ್ಯರೊಂದಿಗೆ ಕೈಜೋಡಿಸಿ ಒಳಮೀಸಲಾತಿ ಸಮಸ್ಯೆ ನಿರ್ವಹಣೆಗೆ ಎಷ್ಟರಮಟ್ಟಿಗೆ ಸ್ಪಂದಿಸಿದ್ದಾರೆ? ಇನ್ನು ಅಲೆಮಾರಿಗಳ ಪಾಡಂತೂ ಮತ್ತಷ್ಟು ಚಿಂತಾಜನಕವಾಗಿದೆ. ಇಂದಿಗೂ ಟೆಂಟು ಡೇರೆಗಳಲ್ಲಿ ಗೋಚರಿಸದವರಾಗಿ ಅನೇಕ ಅಲೆಮಾರಿ ಸಮುದಾಯಗಳು ಭಿಕ್ಷಾಟನೆ ಮಾಡಿಕೊಂಡು ಊರೂರು ಅಲೆದಾಡುತ್ತಾ ಬದುಕುತ್ತಿವೆ. ಅವರ ಬದುಕು ಹಸನಾಗಿಸುವವರು ಯಾರು?
ಮೀಸಲಾತಿಯ ಮೂಲಕ ಅನ್ನ ಕೊಟ್ಟ ತಂದೆಯನ್ನೇ ಹೊರಗಿಡಬಾರದು.ಒಳಮೀಸಲಾತಿ ವರ್ಗೀಕರಣದ ಹೋರಾಟದಲ್ಲಿ ನಾಯಕ ಸಮುದಾಯದವರ ಬೆಂಬಲವೇ ವ್ಯಕ್ತವಾಗಿಲ್ಲ. ಇಲ್ಲಿ ಪ್ರಶ್ನೆ ಇರುವುದು ಕೇವಲ ಒಳ ಮೀಸಲಾತಿಯ ವರ್ಗೀಕರಣದ ಬಗ್ಗೆಯಲ್ಲ. ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಗಳಲ್ಲಿ ಮೀಸಲಾತಿಯ ಜನಕ ಬಾಬಾ ಸಾಹೇಬರ ಭಾವಬಿಂಬವನ್ನು ನಾಯಕ ಸಮುದಾಯದವರು ಅಸ್ಪೃಶ್ಯರಷ್ಟು ಹೃದಯ- ದಮನಿ- ನಾಡಿಗಳಲ್ಲಿ ಹರಿಯುವ ನೆತ್ತರಿನ ಪ್ರಜ್ಞೆಯಾಗಿಸಿಕೊಂಡಿಲ್ಲ ಎಂಬುದೇ ಪ್ರಶ್ನೆ. ವಾಲ್ಮೀಕಿ ಸಮುದಾಯದ ಬಂಧುಗಳೆಲ್ಲರಲ್ಲಿಯೂ ಅರಿವು ಮೂಡಿ ಶೋಷಿತ ಸಮುದಾಯಗಳ ಬೆನ್ನಿಗೆ ನಿಂತಿದ್ದೇ ಆದರೆ, ದಲಿತರ ಮೇಲೆ ಜಾತಿ ಕಾರಣಕ್ಕೆ ದೌರ್ಜನ್ಯ ಎಸಗುವ ಜಾತಿಗ್ರಸ್ತ ಮನಸುಗಳ ಎದೆ ನಡುಗುವುದಷ್ಟೇ ಅಲ್ಲದೆ ಒಂದು ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಹೊಮ್ಮಬಹುದು. ಮೀಸಲಾತಿ ವಿಚಾರ ಬಂದಾಗ ಮಾತ್ರ ಅಂಬೇಡ್ಕರ್ ಫೋಟೋ ಹಿಡಿಯೋದು, ಬಾಕಿಯ ವೇಳೆಯಲ್ಲಿ ಹಿಂದುತ್ವದ ಝಂಡಾ ಹಾರಿಸೋದು ಹೀಗಿದೆ ಬಹುತೇಕ ಜನರ ವರ್ತನೆ. ಕೆಲವರು ಅಂಬೇಡ್ಕರ್ ಅಂದ್ರೆ ಹೊಲಯ ಮಾದಿಗ ಸಮುದಾಯಕ್ಕೆ ಮೀಸಲು ಅಂತಾ ತಿಳಿದುಕೊಂಡಿದ್ದಾರೆ… ತಾವೂ ದಲಿತರೆಂಬುದನ್ನು ಮರೆತೇಬಿಟ್ಟಿದ್ದಾರೆ. ನೆನಪಿರಲಿ ಮೀಸಲಾತಿಗೆ ಈ ದೇಶದ ಎಲ್ಲಾ ಧರ್ಮೀಯ ಶೋಷಿತರು ಹಕ್ಕುದಾರರು. ಸಂವಿಧಾನದ ಮೂಲಕ ಆ ಹಕ್ಕನ್ನು ದೊರಕಿಸಿಕೊಟ್ಟಿರುವುದು ಅಂಬೇಡ್ಕರ್! ಅದೇ ಸಂವಿಧಾನವನ್ನು ಸುಡುತ್ತಿರುವ ವಿರೋಧಿಗಳೊಂದಿಗೆ ಗುರುತಿಸಿಕೊಳ್ಳುವುದೆಂದರೆ ಅದು ಹೆತ್ತ ತಾಯಿಯ ವಿರುದ್ಧ ಮಕ್ಕಳು ಎಸಗುವ ಮಹಾ ಪಾಪಕಾರ್ಯ!
ಇಂತಹ ವಾಸ್ತವಗಳಿಗೆ ನಾವು ಮುಖಾಮುಖಿಯಾಗಬೇಕು. ಇಲ್ಲದಿದ್ದರೆ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಸಾಗುವ ದ್ರೋಹಿಗಳೂ ಆತ್ಮವಂಚಕರೂ ಆಗುತ್ತೇವೆ. ಶರಣು ಶರಣಾರ್ಥಿಗಳು.
-ಡಾ.ವಡ್ಡಗೆರೆ ನಾಗರಾಜಯ್ಯ
8722724174
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

-
ದಿನದ ಸುದ್ದಿ21 hours agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ21 hours ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ21 hours agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ21 hours agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ21 hours agoಮೊದಲ ಬಾರಿಗೆ ಗೋನೂರು ಕೆರೆಗೆ ಹರಿದು ಬಂದ ಭದ್ರೆ – ರೈತರ ಸಂಭ್ರಮಾಚರಣೆ
-
ದಿನದ ಸುದ್ದಿ21 hours agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್
-
ದಿನದ ಸುದ್ದಿ8 hours agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ1 day agoEV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ


