ನೆಲದನಿ
ಮುಚ್ಚಿಡಲ್ಪಟ್ಟ ಅಂಬೇಡ್ಕರ್‍ರ ಭವ್ಯ ಇತಿಹಾಸ..!

ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು, ಬಾಲ್ಯದಿಂದಲೆ ಅಸ್ಪøಶ್ಯತೆಯ ನೋವನ್ನು ಅನುಭವಿಸಿದರು, ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು… ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನ ಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿಕೊಂಡರು, ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದ್ದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಲಾಗುತ್ತಿದೆ!
ಹಾಗಿದ್ದರೆ ಅಂಬೇಡ್ಕರ್‍ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ಜಾರ್ಜ್‍ಬುಷ್ “ಗಾಂಧಿ, ಠಾಗೋರ್ ಮತ್ತು ನೆಹರೂ”ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್‍ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿಯಾರು? ಈ ಹಿನ್ನೆಲೆಯಲ್ಲಿ ಹೊರ ಜಗತ್ತಿಗೆ ಅಂಬೇಡ್ಕರರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.
ಹಾಗಿದ್ದರೆ ಅಸ್ಪೃಶ್ಯರ ಉದ್ಧಾರವನ್ನು, ಸಂವಿಧಾನ ರಚನೆಯನ್ನು ಹೊರತುಪಡಿಸಿ ಅಂಬೇಡ್ಕರರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ , ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್. ಈ ದೇಶದ ಮಹಿಳೆಯರಿಗೆ ‘ಹಿಂದೂ ಸಂಹಿತೆ ಮಸೂದೆ’ಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್.
ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ) ಸ್ಥಾಪಿಸಲು ಕಾರಣರಾದದ್ದು ಕೂಡ ಅಂಬೇಡ್ಕರ್‍ರೆ. ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೊಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ರೂಪಿಸಿದ್ದು… ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರ್‍ರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೆ!
ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೇ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್ ರವರಿಂದ ರಚಿಸಲ್ಪಟ್ಟಿತು. ಅಂಬೇಡ್ಕರ್‍ರವರು ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ “ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು. ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್‍ರವರು ಅದ್ಭುತವಾದ ಸಾಧನೆ ಮಾಡಿದ್ದಾರೆ. 1942 ರಿಂದ 1946 ರವರೆಗೆ ಗವರ್ನರ್ ಜನರಲ್‍ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ, ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು.
ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್‍ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ! ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನಿರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಅವರು 1944ರಲ್ಲೆ ’ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು. ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್‍ರವರು ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೆನೂ ಅಲ್ಲ. ದುರಂತವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.
ಅಂದಹಾಗೆ ಅಂಬೇಡ್ಕರ್‍ರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ’ ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೋರಟ್‍ರವರು ಇದನ್ನು ದಾಖಲಿಸುತ್ತಾರೆ. “ಆರ್.ಬಿ.ಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್‍ರವರು ಆರ್.ಬಿ.ಐ.ನ ಮಾರ್ಗದರ್ಶಿಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ. ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ” ಎನ್ನುತ್ತಾರೆ ಸುಖದೆವ್ ಥೊರಟ್.
ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್ ಅಯೋಗ’ದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್‍ರವರು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‍ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು. ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದನ್ನು ಗಮನಿಸಿ ಅಂಬೇಡ್ಕರ್ ರವರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳುತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?
ಮತ್ತೋಂದು ವಿಷಯ ಇಲ್ಲಿ ಹೇಳಲೆಬೇಕಾಗಿದೆ. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೇ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್‍ರವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ, ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್ ರವರ ಕೊಡುಗೆಯಾದರೂ ಏನು? ಎಂಬುದು. ಖಂಡಿತ ಏನೂ ಇಲ್ಲ. ಎಸ್.ಬಿ.ಐ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾತ್ರ್ಯ ಸೇನ್‍ರಿಂದ “ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು”ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‍ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು! ದುರಂತವೆಂದರೆ ಅಸ್ಪೃಶ್ಯತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿತಾಸಕ್ತಿಗಳಿಗೆ ಅಂಬೇಡ್ಕರರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೇ!
ಇನ್ನು ಈ ನಡುವೆ ಅಂತರ್ ರಾಜ್ಯ ಸಮಸ್ಯೆಗಳ ಬಗ್ಗೆ ಅಂಬೇಡ್ಕರ್‍ರವರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೆ ಅಂಬೇಡ್ಕರ್‍ರವರು ತಮ್ಮ “ಭಾಷಾವಾರು ಪ್ರಾಂತ್ಯಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡುತ್ತಾರೆ. ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾದದ್ದು. ಯಾಕೆಂದರೆ 2000ದಲ್ಲಿ ಮದ್ಯಪ್ರದೇಶದಿಂದ ಛತ್ತೀಸಗಢ ಮತ್ತು ಬಿಹಾರದಿಂದ ಜಾರ್ಖಂಡ್‍ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇದ್ಕರ್‍ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೋರೆ ಹೋಗಬೇಕಷ್ಟೆ.)
ಸಿಂಪಲ್ಲಾಗಿ ಹೇಳುವುದಾದರೆ ಅಂಬೇಡ್ಕರ್‍ರನ್ನು ಕೇವಲ ದಲಿತರ ಉದ್ಧಾರಕ ಎಂದು ಮಾತ್ರ ನೋಡಲಾಗಿದೆ. ತನ್ಮೂಲಕ ಅವರ ಇತರ ಅದ್ಭುತ ಸಾಧನೆಗಳನ್ನು ನಿಕೃಷ್ಟವಾಗಿ ಮುಚ್ಚಿಡಲಾಗಿದೆ. ಅಂತಹ ಮುಚ್ಚಿಡುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ ಎಂದರೆ ಅಚ್ಚರಿಯಾಗಬಹುದು. ಉದಾಹರಣೆಗೆ ರಾಜ್ಯಸರ್ಕಾರದ ಪಠ್ಯ ಪುಸ್ತಕವೊಂದರಲ್ಲಿ ಸಂವಿಧಾನ ರಚನೆ ಬಗೆಗಿನ ಅಧ್ಯಾಯದಲ್ಲಿ ಡಾ.ಬಾಬು ರಾಜೇಂದ್ರ ಪ್ರಸಾದರನ್ನು ಸಂವಿಧಾನ ರಚನಾಸಭೆಯ ಅಧ್ಯಕ್ಷರೆಂದೂ (ನೆನಪಿರಲಿ Constituent Assembly
ಎಂಬುದನ್ನು ‘ಸಂವಿಧಾನ ಸಭೆ’ ಎಂದು ಅನುವಾದಿಸಬೇಕಿತ್ತು.
ಆದರೆ ಗೊಂದಲ ಮೂಡಿಸಲು ಅದನ್ನು ‘ಸಂವಿಧಾನ ರಚನಾಸಭೆ’ ಎಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ಅನುವಾದಿಸಲಾಗಿದೆ ಎಂದೆನಿಸುತ್ತದೆ!) ಮತ್ತು ಡಾ.ಬಿ.ಆರ್. ಅಂಬೇಡ್ಕರರನ್ನು ಕರಡು ಸಮಿತಿಯ (ಇದನ್ನು ಸರಿಯಾಗಿ ಅನುವಾದಿಸಲಾಗಿದೆ!) ಅಧ್ಯಕ್ಷರೆಂದು ಉಲ್ಲೇಖಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಇಲ್ಲಿ ಕೇವಲ ರಾಜೇಂದ್ರ ಪ್ರಸಾದರ ಚಿತ್ರವನ್ನು ಮಾತ್ರ ಮುದ್ರಿಸಲಾಗಿದೆ, ಅಂಬೇಡ್ಕರ್ ಭಾವಚಿತ್ರ ಮಾತ್ರ ಇಲ್ಲ! ರಾಜೇಂದ್ರಪ್ರಸಾದರ ಆ ಚಿತ್ರವನ್ನು ನೋಡಿದ ಯಾರಾದರೂ ಅಂಬೇಡ್ಕರರನ್ನು ‘ಸಂವಿಧಾನ ಶಿಲ್ಪಿ’ ಎನ್ನುತ್ತಾರೆಯೆ? ಖಂಡಿತ ಇಲ್ಲ. ‘ಬಾಬು ರಾಜೇಂದ್ರ ಪ್ರಸಾದರ ಚಿತ್ರದ ಹಿಂದೆ’ ಅಂಬೇಡ್ಕರರನ್ನು ‘ಮುಚ್ಚುª’ ಕ್ರೂರ ಪ್ರಯತ್ನವಿದಲ್ಲದೆ ಬೇರೆನೂ ಅಲ್ಲ!
ಹಾಗಿದ್ದರೆ ಅಂಬೇಡ್ಕರ್‍ರನ್ನು ಹೀಗೆ ಮುಚ್ಚಿಡುವ ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ ಒಂದು ಬೃಹತ್ ಸಮುದಾಯವನ್ನು ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು. ‘ನಮಗೇಕೆ ಇದನ್ನು ಹೇಳಲಿಲ್ಲ’ ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.
–ರಘೋತ್ತಮ ಹೊ.ಬ

ದಿನದ ಸುದ್ದಿ
ಲೇಖಕಿ ಬಾನು ಮುಸ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ; ಗಣ್ಯರ ಅಭಿನಂದನೆ

ಸುದ್ದಿದಿನಡೆಸ್ಕ್:ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.
ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ.
ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.
ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಎದೆಯ ಹಣತೆ’ಯನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ
ಹಾಗೇ ನಾಡಿನ ಸಾಹಿತ್ಯ ಪ್ರೇಮಿಗಳು, ಹೋರಾಟಗಾರರು ಸೇರಿದಂತೆ ಕನ್ನಡಿಗರು ಸಂಭ್ರಮಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.
ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.
ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.
ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.
ವಸ್ತು ಪ್ರದರ್ಶನ
ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.
ದೇಸೀ ಆಟಗಳು
ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.
ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ಉತ್ಸವ’-2025.
| ಡಾ.ಬಿ.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

ಅಂತರಂಗ
ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

- ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ
ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು
ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.
ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ
ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:
1. 1908 – ಮಹಿಳಾ ಹಕ್ಕುಗಳ ಹೋರಾಟ:
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.
2. 1909 – ಮೊದಲ ಮಹಿಳಾ ದಿನಾಚರಣೆ:
ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.
3. 1910 – ಅಂತಾರಾಷ್ಟ್ರೀಯ ಹೋರಾಟ:
ಡೆನ್ಮಾರ್ಕ್ನ ಕೊಪನ್ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.
4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.
5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:
1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.
6. 1975 – ವಿಶ್ವ ಮಹಿಳಾ ವರ್ಷ:
UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು
7. 2011 – 100ನೇ ವಾರ್ಷಿಕೋತ್ಸವ:
2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.
ಮಹಿಳಾ ದಿನಾಚರಣೆಯ ಉದ್ದೇಶ
ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.
ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ
ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.
ಮಹಿಳೆಯರು ಬದುಕಿನ ಉತ್ಸಾಹ
ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಾಧನೆಗಳ ಬೆಳಕು
1. ಶಿಕ್ಷಣ ಮತ್ತು ಸಶಕ್ತೀಕರಣ:
ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2. ಉದ್ಯೋಗ ಹಾಗೂ ಉದ್ಯಮಶೀಲತೆ:
ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
3. ಕ್ರೀಡೆ ಮತ್ತು ಸಾಹಸ:
ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.
4. ಸಮಾಜಸೇವೆ ಮತ್ತು ಪ್ರಭಾವ:
ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.
ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ
ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.
ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್
ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.
“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ2 days ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ3 days ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ16 hours ago
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ
-
ದಿನದ ಸುದ್ದಿ3 days ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್
-
ದಿನದ ಸುದ್ದಿ2 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ