ಅಂತರಂಗ
ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು..!
- ಲಕ್ಷ್ಮಣ ಬಾದಾಮಿ
ಕಲಾಕೃತಿ: `ಮೈ ಬರ್ತ್’
ಕಲಾವಿದೆ: ಫ್ರಿಡಾ ಕಹ್ಲೋ (1907 – 1954)
ದೇಶ: ಮೆಕ್ಸಿಕೋ
ಹುಟ್ಟುವ ಹೊಸ ಜೀವವೊಂದು ಹೊರಜಗತ್ತಿಗೆ ಹೇಗೆ ಬರುತ್ತದೆ? ಅದು ಬರುವಾಗ ತಾಯ ಒಡಲಿನಲ್ಲಿ ಉಂಟಾಗುವ ನೋವ ತೆರೆಗಳ ಅಬ್ಬರವೇನು, ಸಂಕಟದ ಉಬ್ಬರವೇನು? ಎಂಬುದು. ಮತ್ತು ಒಂದು ಜೀವ ಇನ್ನೊಂದು ಜೀವಕ್ಕೆ ಜನ್ಮ ನೀಡುವಾಗಿನ ಸೃಷ್ಟಿ ಕ್ರಿಯೆಯ ಅನುಭವ ತಾಯಿಗೆ ಮಾತ್ರ ಗೊತ್ತು; ಹೆಣ್ಣುಜೀವಕ್ಕೆ ಮಾತ್ರ ಗೊತ್ತು. ತಾನು ಹೇಗೆ ಹುಟ್ಟಿ ಬಂದೆ ಅನ್ನುವ ಅನುಭವ ಹೆಣ್ಣೊಬ್ಬಳು ತಾನೂ ತಿರುಗಿ ತಾಯಾದಾಗ ಆ ಅನುಭವ ಪಡೆಯುತ್ತಾಳೆ. ಗಂಡು ಜನ್ಮಕ್ಕೆ ಈ ಅನುಭವ ಅತೀತವಾದುದು.
ದೃಶ್ಯಾತ್ಮಕವಾಗಿ ಈ ಚಿತ್ರ ತುಂಬಾ ಸರಳವಾಗಿದೆ. ಚಿತ್ರಭಿತ್ತಿಯ ಮಧ್ಯದಲ್ಲಿ ಒಂದು ಮಂಚವಿದೆ. ಮಂಚದ ಮಧ್ಯೆ ಹೆಣ್ಣೊಬ್ಬಳು ಮಲಗಿದ್ದಾಳೆ. ಅವಳಿಗೆ ಹೆರಿಗೆಯಾಗುತ್ತಿದೆ. ಮಂಚದ ಮಧ್ಯ ನೇರಕ್ಕೆ ಹಿಂದಿನ ಗೋಡೆಯಲ್ಲಿ ಒಂದು ಚಿತ್ರಪಟ ತೂಗು ಹಾಕಲಾಗಿದೆ. ಇವೆಲ್ಲದರ ಮಧ್ಯೆ ಸಾಕಷ್ಟು ತೆರಪು (space) ಇದ್ದುದರಿಂದ ಆಕೃತಿಗಳು ಬಯಲಿಗೆ ಬಿದ್ದಂತೆ ಅಥವಾ ಕಲಾಕೃತಿಯು ಒಂದಿಷ್ಟು ಖಾಲಿ ಖಾಲಿ ಅನ್ನಿಸುತ್ತಿದೆ. ಕಲಾವಿದೆ ಫ್ರಿಡಾ ಕಹ್ಲೋ ಉದ್ಧೇಶಪೂರ್ವಕವಾಗಿಯೇ ಚಿತ್ರದಲ್ಲಿ ಒಂದಿಷ್ಟು ಖಾಲಿತನವನ್ನು ತುಂಬಿದ್ದಾಳೆನಿಸುತ್ತದೆ. ಹೆಂಗಸರು, ದಾದಿಯರು ಸೂಲಗಿತ್ತಿಯರು ಇರುವ ಹೆರಿಗೆ ಕೋಣೆಯನ್ನು ಚಿತ್ರಿಸುವುದು ಅವಳ ಉದ್ಧೇಶವಾಗಿರಲಿಲ್ಲ.
ಇಲ್ಲಿ ಯಾವುದನ್ನು ಸಂಕೀರ್ಣಗೊಳಿಸದೇ ನೇರಾನೇರ ವಸ್ತುವನ್ನು ಇಟ್ಟಿರುವುದರಿಂದ ನೋಡುವವರ ದೃಷ್ಟಿ ಅಲ್ಲಿಯೇ ಕೇಂದ್ರಿಕೃತಗೊಂಡು ಗಂಭೀರ ಆಲೋಚನೆಗಳು ಶುರುವಾಗುತ್ತವೆ. ತಾಯಿಯ ಜನನಾಂಗದಿಂದ ಉದಿಸುತ್ತಿರುವುದು ಕೂಸಲ್ಲ, ಬೆಳೆದ ತಲೆ! ಅದೂ ಫ್ರಿಡಾಳದ್ದೇ!! ಹಾಗಾದರೆ ತಾಯಿ ಯಾರು? ಅನ್ನೋ ಪ್ರಶ್ನೆಯನ್ನು ಉತ್ತೇಜಿಸಲು ಹೆರಿಗೆಯಾಗುತ್ತಿರುವ ಹೆಂಗಸಿನ ಮುಖದ ಮೇಲೆ ಬೆಡ್ಶೀಟ್ನ್ನು ಹೊದಿಸಲಾಗಿದೆ. ಇಲ್ಲಿ ತಾಯ ಗರ್ಭದಿಂದ ಫ್ರಿಡಾ ಜನಿಸುತ್ತಿದ್ದಾಳೋ.. ಅಥವಾ ಅವಳು ತನ್ನ ಗರ್ಭದಿಂದ ತಾನೇ ಪುನಃ ಜನಿಸುತ್ತಿದ್ದಾಳೋ..!? ನೋಡುಗನಲ್ಲಿ ದಿಗಿಲುಗಳ ಮೇಲೆ ದಿಗಿಲು ಶುರುವಿಟ್ಟುಕೊಳ್ಳುತ್ತವೆ.
`My Birth’ ಫ್ರೀಡಾ ಕಹ್ಲೋಳ ಈ ಕೃತಿ ತನ್ನ ಹುಟ್ಟನ್ನು ತಾನೇ ನೋಡಿಕೊಳ್ಳುವ ಬಗೆಯೆನಿಸುತ್ತದೆ. ಅಲ್ಲದೆ ವ್ಯಕ್ತಿ ಆತ್ಮಾವಲೋಕನಕ್ಕೆಡೆ ಮಾಡಿಕೊಳ್ಳುವ ಆರಂಭ ಹಾಗೂ ಪ್ರಾಪಂಚಿಕ ಪರಿಧಿಯಲ್ಲಿ ನಿಂತು ಅಧ್ಯಾತ್ಮಿಕದ ಕಡೆಗೆ ಹೊರಳುವ ಪ್ರಮೇಯ ಅನಿಸುತ್ತದೆ. ಯಾರಿಗೆ ಯಾರಿಲ್ಲ ಎರವಿನ ಸಂಸಾರ/ ನೀರ ಮೇಲಣ ಗುಳ್ಳೆ/ ನಿಜವಲ್ಲ ಹರಿಯೇ/ ಎಂಬುದನ್ನು ಚಿತ್ರ ಖಾತ್ರಿಪಡಿಸುತ್ತದೆ. ಹೆರಿಗೆಯ ನೋವು ತಿನ್ನುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗದ ಸ್ಥಿತಿಯಲ್ಲಿ `Virgin of Sorrows’ ಚಿತ್ರಪಟದಲ್ಲಿದ್ದಾಳೆ. ತನ್ನ ಅಸಹಾಯಕ ಸ್ಥಿತಿಗೆ ಅವಳೂ ಕಣ್ಣೀರಾಗಿದ್ದಾಳೆ.
ಇಡೀ ಚಿತ್ರವು ಕಲಾವಿದೆಯ ಸ್ವಂತ ಬದುಕಿನ ನೋವ ಕುದಿ ಎಸರು ಘನೀಭೂತಗೊಂಡು ಇಲ್ಲಿ ಚಿತ್ರವಾಗಿದೆ. ಈ ಕಲಾಕೃತಿ ರಚಿಸುವಾಗ ಫ್ರೈಡಾ ಆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದಳು ಮತ್ತು ಆಗಷ್ಟೇ ಫ್ರೈಡಾಳಿಗೆ ಗರ್ಭಪಾತವಾಗಿತ್ತು. ತನ್ನ ತಾಯಿಯನ್ನು ಕಳೆದುಕೊಂಡಿದ್ದು, ತಾನು ತಾಯಿಯಾಗುವ ಅಸ್ಮಿತೆಯನ್ನು ಕಳೆದುಕೊಂಡಿದ್ದು. ಈ ಸಂಕಟಗಳ ದಾಳಿಗೆ ನಲುಗಿ ಅವಳು ಮುದ್ದೆಯಾಗುವ ಬದಲು ಅವುಗಳನ್ನೇ ತೀವೃವಾಗಿ ಬಳಸಿ ಚಿತ್ರವಾಗಿಸಿ ಹಗೂರಾಗಲು ಯತ್ನಿಸಿದ್ದಾಳೆ.
ಫ್ರಿಡಾ ಬಾಲ್ಯದಲ್ಲಿ ಪೊಲಿಯೋಗೆ ತುತ್ತಾಗಿ ದೈಹಿಕವಾಗಿ ಅಸಮರ್ಥಳಾದಳು. ಶಾಲೆಯಲ್ಲಿ ಳೈಂಗಿಕ ಕಿರುಕುಳ ಅನುಭವಿಸಿದಳು. ತರುಣಾವಸ್ಥೆಯಲ್ಲಿ ವಾಹನ ಅಪಘಾತವೊಂದರಲ್ಲಿ ಸಿಲುಕಿ ನುಜ್ಜುಗುಜ್ಜಾದಳು. ಅದರ ನೋವು, ದೈಹಿಕ ತೊಂದರೆಗಳು ಬದುಕಿನುದ್ದಕ್ಕೂ ಕಾಡಿದವು. ಇಷ್ಟಪಟ್ಟು ಕೈಹಿಡಿದ ಗಂಡ ನಡುವೆಯೇ ಕೈಬಿಟ್ಟ.. ಹೀಗೆ ಅಡಿಗಡಿಗೂ ಸಂಕಟಗಳ ಸರಮಾಲೆಯಲ್ಲೇ ತುಯ್ಯತೊಡಗಿದಳು.
ಪರಿಣಾಮವಾಗಿ ಬಹಳಷ್ಟು ಚಿತ್ರಗಳಿಗೆ ಅವಳ ನೋವೆ ಎದಿರು ನಿಂತು modelಆಗಿ ಚಿತ್ರಿತಗೊಂಡಂತಿದೆ.The Broken Column, The Wounded Deer, Girl With Death mask, Diego and I, Diego and frida ಇವೇ ಮುಂತಾದ ಚಿತ್ರಗಳು ಕಹ್ಲೋಳ ಬದುಕಿನ ಒಂದೊಂದು ಕಾಲಘಟ್ಟದಲ್ಲಾದ ಒಂದೊಂದು ಕಥೆಯನ್ನು ಹೇಳುತ್ತವೆ. ಹಾಗಾಗಿ ಇವು ಕಹ್ಲೋಳ ಆತ್ಮಚರಿತ್ರಾತ್ಮಕ ಚಿತ್ರಗಳಾಗಿವೆ. ಇನ್ನೂ ಮುಂದುವರೆದು ಹೇಳುವುದಾದರೆ ಇವು ಇಡೀ ಸ್ತ್ರೀ ಸಂಕುಲದ ಚರಿತ್ರಾತ್ಮಕ ಚಿತ್ರಗಳು ಅಂದರೂ ನಡೆದೀತು. The wounded deerನಲ್ಲಿ ಜಿಂಕೆಯ ಮೈತುಂಬಾ ಬಾಣಗಳು ನೆಟ್ಟಿವೆ.
ಈ ಜಿಂಕೆಯ ಮುಖ ಕಹ್ಲೋಳದ್ದೇ ಆದರೂ ಇದು ಅವಳ ಯಾತನೆಗಳನ್ನಷ್ಟೇ ತೋರಿಸದೇ, ಆಕೆ ಸ್ತ್ರೀ ಕುಲದ ಪ್ರತಿನಿಧಿಯಾಗಿ ಚರಿತ್ರೆಯ ತುಂಬಾ ಹೆಣ್ಣಿನ ಮೇಲಾದ ಗಾಯದ ಗುರುತುಗಳನ್ನು ನೆನಪಿಸಿಕೊಡುತ್ತಾಳೆ. ತನ್ನ ಬದುಕಿನ ಬೇಗುದಿಯನ್ನೇ ಬಣ್ಣವಾಗಿಸಿಕೊಂಡ ಕಹ್ಲೋ ಸ್ತ್ರೀ ಸಮುದಾಯದ ಮುಖವಾಣಿಯಂತಾಗಿದ್ದಾಳೆ.
ಅವಳ ಕಷ್ಟಗಳು ಬಹಳಷ್ಟು ಸ್ತ್ರೀಯರು ಅನುಭವಿಸುತ್ತಿರುವ ಸಂಕಷ್ಟಗಳೇ ಆಗಿರುವುದರಿಂದ ಅವಳ ಅಭಿವ್ಯಕ್ತಿಯಲ್ಲಿ ಸಾರ್ವತ್ರಿಕ ದನಿಯೂ ಮಿಳಿತವಾಗಿದೆ. ಅವಳ ಕಲಾಕೃತಿಗಳೆಲ್ಲ ಸ್ತ್ರೀವಾದಿಗಳಿಗೆ ಪ್ರಖರ ಆಕರಶಕ್ತಿಗಳಾಗಿವೆ. ಹಾಗೆಯೇ ಚಿತ್ರಗಳ ಮೂಲಕ ತನ್ನ ಆತ್ಮಚರಿತ್ರೆಯನ್ನು, ಅದು ಭಾಗಶಃ ಆಗಿದ್ದರೂ ಅತ್ಯಂತ ತೀವೃವಾಗಿ ಗೋಚರಿಸುವಂತೆ ಸೃಷ್ಟಿಸಿದ ಮೊದಲ ಕಲಾವಿದೆ ಫ್ರಿಡಾ ಕಹ್ಲೋ ಆಗಿದ್ದಾಳೆನಿಸುತ್ತದೆ.
ಬಸ್ ಅಪಘಾತದಿಂದುಂಟಾದ ತೀವೃತರ ದೈಹಿಕ ನೋವು, ಮೂಳೆ ಮುರಿತದ ಯಾತನೆಗಳು ಆಕೆಯನ್ನು ಬಿಟ್ಟುಬಿಡದೇ ಕಾಡುತ್ತಿದ್ದವು. ಅದರ ವೈದ್ಯಕೀಯ ಖರ್ಚನ್ನು ಭರಿಸಲಿಕ್ಕೆ ಆಕೆ ಹೆಣಗಾಡುತ್ತಿದ್ದಳು. The Broken Column ಹೆಸರಿನ ಚಿತ್ರವು ಅವಳ ದೇಹವೆಷ್ಟು ಶಿಥಿಲವಾಗಿತ್ತು ಎಂಬುದನ್ನು ಕಾಣಿಸುತ್ತದೆ.
ಪತಿಯು ಇವಳಿಗೆ ವಿಚ್ಛೇದನ ನೀಡಿದಾಗ Diego and I ಚಿತ್ರಿಸಿದಳು. ಇದರಲ್ಲಿ ಕಹ್ಲೋ ತನ್ನದೇ ಭಾವಚಿತ್ರ ರಚಿಸಿ ಹಣೆಯ ಮೇಲೆ ಡಿಯಾಗೋನನ್ನು ಚಿತ್ರಿಸಿದ್ದಾಳೆ. ಕಣ್ಣಲ್ಲಿ ನೀರು ತುಳುಕಿದಾಗಲೂ ಅವಳ ನೋಟದಲ್ಲಿ ಮರುಕ ಮತ್ತು ತೀಕ್ಷಣತೆ ಇರುವುದರಿಂದ ಇದು ಪರಿಸ್ಥಿತಿಯ ಭಯಂಕರ ವ್ಯಂಗವಾಗಿ ತೋರುತ್ತದೆ.
ಫ್ರಿಡಾ ಕಹ್ಲೋ ಕಲಾ ಶಿಕ್ಷಣವನ್ನು ಸಾಂಪ್ರದಾಯಿಕವಾಗಿ ಪಡೆದವಳಲ್ಲ. ಆದುದರಿಂದಲೋ ಏನೋ ಅವಳಿಗೆ ಯಾವುದೇ ಆಧುನಿಕ ಕಲಾ ಪಂಥಗಳ ಹಂಗು ಇರಲಿಲ್ಲ. ಕಲೆಯ ಆದಿಮ ತಿಳುವಳಿಕೆಯೊಂದಿಗೆ ತನ್ನದೇ ಆದ ಒಂದು ವೈಯಕ್ತಿಕ ಪಥದಲ್ಲಿ ನಡೆದಿದ್ದಳು. ಸ್ವತಃ ಪತಿಯಾದ ಡಿಯಾಗೋ ಪ್ರಸಿದ್ಧ ಚಿತ್ರಕಲಾವಿದನಾಗಿದ್ದು ಕ್ಯೂಬಿಸಂ, ಸರ್ರಿಯಲಿಸಂ ಶೈಲಿಯ ಶ್ರೇಷ್ಠ ಕೃತಿಗಳನ್ನು ರಚಿಸಿದ್ದರೂ ಅವನ ಪ್ರಭಾವಕ್ಕೆ ಒಂದಿನಿತು ಒಳಗಾಗಿರಲಿಲ್ಲ.
ತನ್ನ ಸ್ವಂತಿಕೆಯನ್ನು ತನ್ನಷ್ಟೇ ಜತನದಿಂದ ಕಾಪಾಡಿಕೊಂಡಿದ್ದಳು. ಆಕಾರಗಳನ್ನು ಒಡೆದು (ಒಂದರ್ಥದಲ್ಲಿ ವಿಕಾರವಾಗಿಸಿ) ಅಮೂರ್ತ ಆಕೃತಿಗಳನ್ನು ಸೃಜಿಸಿ ಆ ಮೂಲಕ ವರ್ಣಚಿತ್ರಕಲೆಗೆ ಹೊಸ ಭಾಷ್ಯಗಳನ್ನು ಬರೆಯುತ್ತಿದ್ದ ಕಾಲದಲ್ಲಿ ಕಹ್ಲೋ ತುಸು ಪಾರಂಪರಿಕವಾಗಿಯೇ, ಆಕಾರಗಳನ್ನು ಒಡೆಯದೆ ಇರುವ ರೂಪದಲ್ಲಿಯೇ ಅವುಗಳನ್ನು ವಿಶಿಷ್ಟವಾಗಿ, ವೈರುಧ್ಯವಾಗಿ ಸಂಯೋಜಿಸಿ ಆ ಮೂಲಕ ಅವಳು ಕಲಾಕೃತಿಗಳಲ್ಲಿ ಹೊರಡಿಸುತ್ತಿದ್ದ ಧ್ವನಿಶಕ್ತಿ ಯಾವುದಕ್ಕೂ ಕಡಿಮೆಯಾಗಿರಲಿಲ್ಲ.
`ಕಾಣದುದನರಸುವರಲ್ಲದೇ ಕಂಡದನರಸುವರೇ?’ ಇದು ನಮ್ಮ ವಚನಕಾರ ಅಲ್ಲಮನ ಪ್ರಶ್ನೆ. ಅಕಾಡೆಮಿಕ್ ವಲಯದ ಕಲಾವಿದರು ಕಲಿತಿರುವುದನ್ನು ಮರೆತು ಕಾಣಲಾರದ್ದನ್ನು ತಮ್ಮ ಕೃತಿಗಳ ಮೂಲಕ ಶೋಧಿಸಲು ಹೊರಡುತ್ತಾರೆ. ಫ್ರಿಡಾ ಕಹ್ಲೋ ನಾನ್ ಅಕಾಡೆಮಿಕ್ ಕ್ಷೇತ್ರದವಳು. ಅವಳು ಕಾಣಲಾರದ್ದನ್ನು ಹುಡುಕುವ ಗೋಜಿಗೆ ಹೋಗುವುದಿಲ್ಲ. ತಾನು ಕಂಡು ಉಂಡದ್ದನ್ನೇ ಲೋಕದೆದಿರು ತೆರೆದಿಟ್ಟು ಹಗೂರಾಗಲು ತವಕಿಸಿದ್ದಾಳೆ.
ಇವಳ ದೃಶ್ಯಭಾಷೆ ತುಂಬ ಸರಳವಾದುದು. ಹಾಗೆಂದು ಅದು ಕನಿಷ್ಠ ಎಂದರ್ಥವಲ್ಲ. ಎಂಥವರೊಂದಿಗೂ ಅದು ಸಂವಹನ ಸಾಧಿಸುತ್ತದಲ್ಲ.. ಇದೇ ಅದರ ಮಹತ್ವವಾಗಿದೆ. ಉಳಿದ ಕಲಾವಿದರಂತೆ ಇಸಂಗಳ ಹೇರಿಕೆಯಾಗಲಿ, ಘನಗಂಭೀರ ರೂಪಕ, ಪ್ರತಿಮೆಗಳ ಭಾರವಾಗಲಿ ಇಲ್ಲದಿರುವುದರಿಂದ ಈ ಕೃತಿಗಳು ಸುಲಭಗ್ರಾಹಿಯಾಗುತ್ತವೆ. ಅವಳ ಈ ಅನನ್ಯ ಕಲಾಪಥದಲ್ಲಿ ವಿಮರ್ಶಕರು ಮ್ಯಾಜಿಕ್ ರಿಯಲಿಸಂ, ಮೆಕ್ಸಿಕನ್ ಜಾನಪದದ ಪ್ರಭಾವ ಮತ್ತು ನವ್ಯ ಸಾಹಿತ್ಯ ಸಿದ್ಧಾಂತದ ಪ್ರಭಾವವನ್ನು ಗುರುತಿಸುತ್ತಾರೆ. ಫ್ರಿಡಾ ತನ್ನ ವಾಸ್ತವಿಕ ದೃಷ್ಟಿಕೋನಕ್ಕೆ ಮಾಂತ್ರಿಕತೆಯನ್ನು ಬೆರೆಸಿ ಕಲಾಕೃತಿಗಳನ್ನು ಬಲವಾಗಿ ಮಸೆದಿದ್ದಾಳೆ!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ19 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


