ಅಂತರಂಗ
ಧರ್ಮ ಮರ್ಮ – 06 : ಸ್ವರ್ಗದ ಆಸೆ, ನರಕದ ಭಯ
- ಯೋಗೇಶ್ ಮಾಸ್ಟರ್
ಯಾವುದೇ ಸ್ಥಾಪಿತ ಧರ್ಮವಾಗಲಿ, ಯಾವುದೇ ಮತದ ಕವಲುಗಳಾಗಲಿ ಹುಟ್ಟುವುದೇ ಸಂಘರ್ಷದ ಫಲವಾಗಿ. ಆಯಾ ಕಾಲಘಟ್ಟದ ಮೌಢ್ಯ, ಧಾರ್ಮಿಕ ಅಥವಾ ಸಾಂಪ್ರದಾಯಕ ವಿಧಿ ವಿಧಾನಗಳು ಸಮಂಜಸವಾಗಿಲ್ಲ ಎಂದು ಎತ್ತಿದ ದನಿಗಳು ಮತ್ತು ಪರ್ಯಾಯ ಮಾರ್ಗಗಳು ಹೊಸ ಧರ್ಮಗಳಾದವು ಅಥವಾ ಹೊಸ ಪಂಥಗಳಾದವು.
ಸ್ಥಾಪಿತ ವ್ಯಕ್ತಿ ಅಥವಾ ಸಮೂಹದ ಜೀವಿತಾವಧಿಯ ನಂತರದ ಕಾಲಘಟ್ಟಗಳಲ್ಲಿ ಅದೇ ಹೊಸ ಪಂಥದ ಸದಸ್ಯರೇ ಕಟ್ಟರ್ ಧೋರಣೆಗಳನ್ನು ಅನುಸರಿಸುತ್ತಾ, ತಮ್ಮದೇ ಪಂಥ ಅಥವಾ ಧರ್ಮ ಉದಸಿದ್ದ ವೈಶಾಲ್ಯದ ಕಾರಣವನ್ನು ಒಂದು ಚೌಕಟ್ಟಿಗೆ ಒಳಪಡಿಸಿ ಸಂಕುಚಿತಗೊಳಿಸುತ್ತಾರೆ.
ಹೊಸತರ ಆಕರ್ಷಣೆ ಅಥವಾ ಅದರಲ್ಲಿರುವ ವ್ಯಕ್ತಿಗಳ ಮೇಲಿನ ತಮ್ಮ ಗೌರವದಿಂದ ಪಂಥವನ್ನು ಪ್ರವೇಶಿಸಿದ್ದರೂ ಹಳೆಯ ಸಾಂಪ್ರಾದಯಕ ಮನಸ್ಥಿತಿಗಳು ಬದಲಾಗಿರುವುದಿಲ್ಲ. ಹಾಗಾಗಿ ಹಳೆಯ ಪಂಥದಲ್ಲಿದ್ದಂತಹ ಮನಸ್ಥಿತಿಗಳನ್ನು ಹೊಸದರಲ್ಲೂ ಮುಂದುವರಿಸುತ್ತಾರೆ. ಮುಖ್ಯವಾಗಿ ಅವರಿಗೆ ಸ್ಥಾಪಕರ ಮೂಲ ಆಶಯವೇ ಅವರಿಗೆ ತಿಳಿದಿರುವುದಿಲ್ಲ.
ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ, ಲಿಂಗಾಯತ ಮೊದಲಾದ ಧರ್ಮಗಳು, ಹಿಂದೂ ಜೀವನ ಪದ್ಧತಿಯ ಪಂಥಗಳು ಎಲ್ಲವೂ ಇದೇ ರೀತಿಯಲ್ಲಿ ಸೊರಗಿವೆ. ತಮ್ಮ ಮೂಲ ಆಶಯವನ್ನು ಜೀವಂತವಾಗಿರಿಸಿಕೊಳ್ಳಲು ವಿಫಲವಾಗಿವೆ. ಆದರೆ ಇಲ್ಲಿ ನಾವು ವಿಚಾರ ಮಾಡಬೇಕಾದ ಅಂಶವೆಂದರೆ ಸೋತಿರುವುದು ಅಥವಾ ವಿಫಲವಾಗಿರುವುದು ಧರ್ಮ ಅಥವಾ ಧರ್ಮದ ಸ್ಥಾಪಕರು ಅಲ್ಲ. ಆಯಾ ಧರ್ಮಗಳ ಧಾರ್ಮಿಕರು.
ಸಾಮಾನ್ಯವಾಗಿ ಧರ್ಮಗಳಲ್ಲಿ ಆಶಯದ ಅನುಷ್ಠಾನಕ್ಕೆ ಅಗತ್ಯವಿರುವ ನೇಮ, ನಿಯಮಗಳನ್ನು ಸಂಪ್ರದಾಯಗಳನ್ನಾಗಿಸಿ, ಅವುಗಳನ್ನು ಉಳಿಸಿಕೊಳ್ಳಲು ಅವುಗಳ ಬಗ್ಗೆ ಭಯ ಮತ್ತು ಆಸೆಗಳನ್ನು ಹುಟ್ಟುಹಾಕುವುದು ಆ ಸಂಪ್ರದಾಯಸ್ಥ ಮನಸ್ಥಿತಿಗಳ ಕೆಲಸ. ಭಯ ಮತ್ತು ಆಸೆಗಳನ್ನು ಹುಟ್ಟು ಹಾಕಲು ಅವರು ಬಳಸುವ ತಂತ್ರವೇ ಕಥನಕಲೆ. ಸಾಮಾನ್ಯವಾಗಿ ಕಥನ ನಿರೂಪಣೆಗಳಿಗೆ ಸಾಮಾನ್ಯರ ಮನಸ್ಸುಗಳು ಸೋಲುತ್ತವೆ.
ಅದರಲ್ಲೂ ಆ ನಿರೂಪಣೆಗಳು ಭಾವನಾತ್ಮಕವಾಗಿ ನಾಟಕೀಯವಾಗಿ ಪ್ರಸ್ತುತವಾಗಿಬಿಟ್ಟರಂತೂ ಅವರು ಸಂಪೂರ್ಣ ಮರುಳಾಗಿಬಿಡುತ್ತಾರೆ. ತಮ್ಮದೇ ಬದುಕಿನ ಪ್ರತಿಫಲನದಂತೆ ಆರಂಭವಾಗುವ ಆ ಕಥೆಗಳು ಯಾರದ್ದೋ ಆಗಿರುತ್ತವೆ. ಆದರೆ ನೋವು, ಸಂಕಟ, ಕಷ್ಟಗಳ ಸಾಮ್ಯತೆ ಇರುತ್ತವೆ. ಆ ಕಥೆಗಳಲ್ಲಿ ಅದ್ಯಾವುದೋ ಮಾರ್ಗದಿಂದ ಆ ಕಷ್ಟ ನೋವುಗಳು ಪರಿಹಾರವಾಗುತ್ತವೆ. ಹಾಗಾಗಿ ತಾವೂ ಅಂತೆಯೇ ವ್ರತವನ್ನು ಮಾಡಬೇಕು ಎಂದು ಜನ ತಿಳಿಯುತ್ತಾರೆ. ವ್ರತ ಎಂದರೇನೇ ನೇಮ. ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸುವುದು. ಇದರಿಂದ ಸಾಂಪ್ರದಾಯಕ ಚೌಕಟ್ಟುಗಳು ಬಲಗೊಳ್ಳುತ್ತಾ ಬರುವವು.
ಹಾಗೆಂದು ನೇಮ ನಿಷ್ಟೆಗಳನ್ನು ನಕಾರಾತ್ಮಕವಾಗಿ ನೋಡುವ ಅಗತ್ಯವಿಲ್ಲ. ಯಾವುದೇ ಸಂದರ್ಭದಲ್ಲಿ ಕೇಡಿನೊಂದಿಗೆ, ಅಸತ್ಯದೊಂದಿಗೆ, ಪರಿಸ್ಥಿತಿಗೆ ಅನುಗುಣವಾಗಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೇ ತನ್ನ ಜೀವನ್ಮುಖಿ ಧೋರಣೆಯನ್ನು, ಸತ್ಯ ನಿಷ್ಟತೆಯನ್ನು, ನ್ಯಾಯಪರತೆಯನ್ನು ಕಾದುಕೊಳ್ಳುತ್ತಾ ಬರುವುದು ಕೂಡ ನೇಮವೇ. ಅದೇ ಇಲ್ಲಿ ನಾವು ಸ್ಪಷ್ಟತೆಯನ್ನು ಕಂಡುಕೊಳ್ಳಬೇಕಾಗಿರುವುದು. ಯಾವ ನೇಮವನ್ನು ಮಾಡಿಕೊಂಡಿದ್ದೇವೆ.
ಅದರ ಆಶಯವೇನು? ಅದು ಯಾವ ಪರವಾಗಿದೆ? ಅದು ವಿಶಾಲಾರ್ಥದಲ್ಲಿ ಸಮಾಜಮುಖಿಯಾಗಿದೆಯೋ,ಜೀವನ್ಮುಖಿಯಾಗಿದೆಯೋ, ಜೀವಪರವಾಗಿದೆಯೋ, ತಮ್ಮದೇ ಪಂಥದ ಪ್ರತಿಷ್ಠೆ ಅಥವಾ ಅಹಂಭಾವದ ಧೋರಣೆಯಾಗಿದೆಯೋ, ಶ್ರೇಷ್ಟತೆಯ ವ್ಯಸನದಿಂದ ಕೂಡಿದೆಯೋ; ಇಂಥವನ್ನೆಲ್ಲಾ ತಿಳಿಯಬೇಕಾದರೆ ಒಬ್ಬಾತನಿಗೆ ವ್ಯಕ್ತಿಗತವಾಗಿ ಪರಾಮರ್ಶೆ ಮಾಡಿಕೊಳ್ಳುವ ಗುಣವಿರಬೇಕು. ತಾನೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಆತ್ಮವಿಶ್ವಾಸದಿಂದ ಕೂಡಿರುವ ಧೈರ್ಯವಿರಬೇಕು.
ತನ್ನ ಒಲವು, ನಿಲುವುಗಳಲ್ಲಿ ಸ್ಪಷ್ಟತೆ ಇದ್ದ ಪಕ್ಷದಲ್ಲಿ ಯಾವುದೇ ಧರ್ಮ, ಮತ ಅಥವಾ ಪಂಥದಲ್ಲಿದ್ದರೂ ಅದರ ಕೆಲವು ಅಂಶಗಳನ್ನು ಒಪ್ಪುವ ಅಥವಾ ನಿರಾಕರಿಸುವ, ಕೆಲವನ್ನು ಅಚ್ಚುಕಟ್ಟಾಗಿ ಪಾಲಿಸುವ ಅಥವಾ ತಿರಸ್ಕರಿಸುವ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾನೆ. ಅಲ್ಲದೇ ತನ್ನ ಧೋರಣೆ ಮತ್ತು ಆಶಯದ ಬಗ್ಗೆ ಸ್ಪಷ್ಟತೆಯನ್ನು ತಳೆದಿರುವ ಕಾರಣ ಕಾಳು ಹೊಟ್ಟುಗಳನ್ನು ಬೇರ್ಪಡಿಸುವ, ಅಗತ್ಯ ಮತ್ತು ಅನಗತ್ಯಗಳನ್ನು ಸ್ಪಷ್ಟವಾಗಿ ನೋಡುವಂತಹ ದೃಷ್ಟಿಯನ್ನು ಹೊಂದಿರುತ್ತಾರೆ.
ಇದರಿಂದಾಗಿಯೇ ಸ್ಥಾಪಿತ ಧರ್ಮಗಳಲ್ಲಿದ್ದು, ಅದೇ ಧರ್ಮದ ನೇಮ ನಿಷ್ಟೆ ಶ್ರದ್ಧೆಗಳನ್ನು ಹೊಂದಿದ್ದರೂ ಅವರು ಕ್ರಾಂತಿಕಾರಿಗಳಂತೆ ಕಾಣುತ್ತಾರೆ. ಏಕೆಂದರೆ ಬರಿಯ ಸಾಂಪ್ರದಾಯಿಕ ಮನಸ್ಥಿತಿಗಳ ಸಮೂಹವು ನಡೆದುಕೊಳ್ಳುವುದಕ್ಕಿಂದ ಭಿನ್ನವಾಗಿ ಇವರು ಕಾಣುತ್ತಾರೆ. ಅವರನ್ನು ಒಪ್ಪಬಹುದು, ನಿರಾಕರಿಸಬಹುದು, ನಿವಾರಿಸಿಯೇಬಿಡಬಹುದು. ಅದು ಸಾಂಪ್ರದಾಯಕ ಮನಸ್ಥಿತಿಯವರ ರೋಗಗ್ರಸ್ಥದ ಗಾಢತೆ ಮತ್ತು ಪ್ರಭಾವಗಳ ಮೇಲೆ ಆಧಾರಿತವಾಗಿರುತ್ತದೆ.
ಸ್ಪಷ್ಟವಾಗಿ ನಮಗೆ ಎಲ್ಲಾ ಧರ್ಮಗಳಲ್ಲೂ ಕಾಣಬರುವುದೇನೆಂದರೆ ಅದೇ ಧರ್ಮದ ನೇಮವನ್ನು ಆಚರಿಸುತ್ತಲೇ ಅದೇ ಧರ್ಮದ ಸಾಂಪ್ರದಾಯಿಕ ಧೋರಣೆಗಳ ಬಗ್ಗೆ ಧ್ವನಿ ಎತ್ತಿರುವಂತಹದ್ದು. ಆದರೆ ಇವರ ಸಂಖ್ಯೆ ಬಹಳ ಕಡಿಮೆ. ಕೆಲವೊಮ್ಮೆ ಇಲ್ಲವೇ ಇಲ್ಲ ಎಂದೆನಿಸುವಷ್ಟೂ ಕಡಿಮೆ. ಸ್ವರ್ಗ ನರಕಗಳ ಜನಕರು ಸಂಪ್ರದಾಯವಾದಿಗಳು ಮೂಲಭೂತ ಆಶಯವನ್ನು ಉಳಿಸಿಕೊಳ್ಳಲು ಹಾಕಿಕೊಟ್ಟಿರುವ ಮಾರ್ಗವನ್ನು ಬಿಡಲೇಬಾರದೆಂಬಂತಹ ವಿಚಾರಕ್ಕೆ ಬದ್ಧರಾಗಿರುವ ಕಾರಣದಿಂದ ಸಂಪ್ರದಾಯಕ್ಕೆ ಶರಣು ಹೋಗುವುದು. ಇತರರನ್ನು ಅದರ ತೆಕ್ಕೆಯಲ್ಲಿ ಸೆಳೆಯಲು ಅಥವಾ ಈಗಾಗಲೇ ಇರುವವರು ಬಿಟ್ಟು ಹೋಗದಿರಲು ಸ್ವರ್ಗದ ಗಳಿಕೆ ಮತ್ತು ನರಕದ ಭೀತಿಯನ್ನು ಇಟ್ಟಿರುವರು.
ಕನ್ನಡದ ನಾಗರಹೊಳೆ ಚಿತ್ರದಲ್ಲಿ “ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೆ ಇಲ್ಲ ಸುಳ್ಳು. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು” ಎಂಬ ಹಾಡು ಬಹಳ ಜನಪ್ರಿಯ. ಈ ಸ್ವರ್ಗ ಮತ್ತು ನರಕ ಸುಳ್ಳು ಎಂಬ ಧೋರಣೆ ತಳೆಯುವಂತಹ ಇಂತಹದ್ದೊಂದು ವಿಚಾರ ಬರಲು ಬಹಳಷ್ಟು ಕಾಲ ಬೇಕಾಯ್ತು. ಈಗ, ಈ ಕಾಲಘಟ್ಟದಲ್ಲಂತೂ ಸ್ವರ್ಗ ಮತ್ತು ನರಕದ ಭಯ ಬಹುತೇಕ ಯಾರಿಗೂ ಇಲ್ಲ. ಈಗ ಮಾಡಿದ್ದು ಈಗಲೇ ಎಂಬ ಮನಸ್ಥಿತಿಗೆ ತಲುಪಿಯಾಗಿದೆ. ಮರಣಾನಂತರದ ಜೀವನದಲ್ಲಿ, ದೇವರ ಸಾಮ್ರಾಜ್ಯದಲ್ಲಿ ಎಂದೇನೆಲ್ಲಾ ಯಾರಾದರೂ ಸತ್ತಾಗ ಹೇಳಬಹುದು.
ಅದು ಬರಿಯ ಆಗಿನ ನಂಬಿಕೆಯ ಉಳಿಕೆಯ ಮಾತಾಗಿದೆಯೇ ಹೊರತು ಯಾರಿಗೂ ಅದರ ಮೇಲೆ ಗಾಢವಾದ ನಂಬಿಕೆಯೇನೂ ಅಷ್ಟಿಲ್ಲ. ಕನಿಷ್ಟಪಕ್ಷ ಸಂಖ್ಯಾವಾರು ದೃಷ್ಟಿಯಿಂದಾದರೂ ಈ ಹಿಂದೆಲ್ಲಾ ಇರುವಷ್ಟು ಪ್ರಮಾಣದಲ್ಲಿ ಖಂಡಿತ ಇಲ್ಲ. ಆದರೆ, ಕಾಯುವ, ಮುನಿಯುವ ದೇವರ ಕಲ್ಪನೆ ಮಾತ್ರ ಜೀವಂತವಾಗಿದೆ. ಅದೂ ನಾವು ಮಾಡುವ ಭಕ್ತಿ ಅಥವಾ ದೇವರಿಗೆ ವಿಮುಖವಾಗಿ ಮಾಡುವಂತಹ ಕೆಲಸ “ದೋಸೆ ಮುಗುಚಿ ಹಾಕಿದಂತೆ” ಈಗಲೇ, ಈ ಒಂದು ಜನ್ಮದಲ್ಲೇ ಅನುಭವಕ್ಕೆ ಬರುತ್ತದೆ ಎಂಬ ನಂಬಿಕೆ ಗಾಢವಾಗಿದೆ. ಇದು ನೇರ ಕರ್ಮ ಸಿದ್ಧಾಂತದ ಪ್ರಭಾವ.
ಕರ್ಮ ಸಿದ್ಧಾಂತದ ಬೇರು
ಕರ್ಮ ಸಿದ್ಧಾಂತವು ಭಾರತದ ಕೊಡುಗೆ ಎಂದು ಬಹಳಷ್ಟು ವಿದ್ವಾಂಸರು ಹೇಳುವುದುಂಟು, ಹಾಗೆಯೇ ಸಾಮಾನ್ಯರಲ್ಲಿ ಒಂದು ನಂಬುಗೆ ಉಂಟು. ಆದರೆ ಹಾಗೇನೂ ಇಲ್ಲ. ಕರ್ಮ ಸಿದ್ಧಾಂತದ ಬೇರು ಪ್ರಪಂಚದ ಶ್ರದ್ಧಾಕ್ಷೇತ್ರದ ಮೂಲೆ ಮೂಲೆಯಲ್ಲಿದೆ. ಎಲ್ಲಾ ಧಾರ್ಮಿಕತೆಗಳಲ್ಲೂ, ಸಂಸ್ಕೃತಿ, ಆಧ್ಯಾತ್ಮಿಕತೆಗಳಲ್ಲೂ ಕರ್ಮ ಸಿದ್ಧಾಂತವು ಒಂದಿಲ್ಲೊಂದು ರೀತಿಯಲ್ಲಿ ನುಸುಳಿಕೊಂಡಿವೆ. ಆದರೆ ಈ ಕರ್ಮ ಸಿದ್ಧಾಂತದ ಮೂಲವನ್ನು ಮನಸ್ಸಿನ ಮೂಲದೊಂದಿಗೆ ಗುರುತಿಸಿದವನು ಮತ್ತು ಸಮೀಕರಿಸಿದವನು ಬುದ್ಧ.
ಭಗವತ್ಗೀತೆಯ ಕರ್ಮಯೋಗದಲ್ಲಿ ಮತ್ತು ಇತರ ಅಧ್ಯಾಯಗಳಲ್ಲಿ ಕರ್ಮಸಿದ್ಧಾಂತವನ್ನು ಬಹಳ ಸೂಕ್ಷ್ಮವಾಗಿ ಮತ್ತು ಯೋಗ್ಯವಾಗಿ, ಕೆಲವೊಮ್ಮೆ ಆಗ್ರಹಕ್ಕೊಳಗಾಗಿ ಚಿತ್ರಿಸಿದ್ದಾರೆ. ಅವು ನಿಜಕ್ಕೂ ಅಧ್ಯಯನ ಯೋಗ್ಯ. ಅದರಿಂದ ನಮ್ಮ ಪೂರ್ವಿಕರ ಒಲವು ನಿಲುವುಗಳು ಹಾಗೂ ಗೀತೆಯನ್ನು ತಮ್ಮ ಬಳಕೆಗೆ ತಂದುಕೊಳ್ಳುವಂತಹ ಮನಸ್ಥಿತಿಯವರ ಗುಪ್ತ ಆಶಯ ಅಥವಾ ಗೀಳುಗಳೂ ನಮಗೆ ಅರಿವಾಗುತ್ತಾ ಹೋಗುತ್ತದೆ. ಅಂತಹ ಅರಿವಿಗೆ ತೆರೆದುಕೊಳ್ಳುವುದರಿಂದಲೇ ಮಾರ್ಗಕ್ಕೆ ಸ್ಪಷ್ಟತೆಯೂ, ಗಮ್ಯಕ್ಕೆ ನಿಖರತೆಯೂ ಲಭ್ಯವಾಗುತ್ತದೆ.
ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ ಸ್ವರ್ಗ ನರಕಗಳ ಪರಿಕಲ್ಪನೆ ಮತ್ತು ನರಕದಲ್ಲಿ ಇರುವಂತಹ ಒಂದು ಕೆಟ್ಟದಾದ ನದಿಯ ಪರಿಕಲ್ಪನೆಯು ವಿಶ್ವದ ಬಹುಪಾಲು ಎಲ್ಲಾ ಸಂಸ್ಕೃತಿಗಳಲ್ಲಿ ಇರುವುದು. ಹಾಗೆಯೇ ಬಹುಪಾಲು ಪ್ರಾಚೀನ ಧಾರ್ಮಿಕ ಅಥವಾ ಆಧ್ಯಾತ್ಮಿಕ ಸಿದ್ಧಾಂತಗಳಲ್ಲಿ ಮತ್ತು ಪೌರಾಣಿಕ ನಿರೂಪಣೆಗಳಲ್ಲಿ ಜಗತ್ತಿನ ಸೃಷ್ಟಿ ಮತ್ತು ಪ್ರಳಯಗಳ ಬಗ್ಗೆ ಜಿಜ್ಞಾಸೆಗಳಿವೆ. ಅಂದರೆ ಎಲ್ಲರೂ ಒಂದು ಉತ್ಪತ್ತಿ ಮತ್ತು ನಾಶದ ಬಗ್ಗೆ ಅವಧಾನವನ್ನು ಹೊಂದಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಹೆಚ್ಚಿನ ಮಟ್ಟದ ಗಮನ ನೀಡುವ ಅಭಿಲಾಷೆಯನ್ನು ಹೊಂದಿದ್ದರು.
ಅದರಿಂದಾಗಿಯೇ ತಮ್ಮ ಕಣ್ಣಿಗೆ ಕಾಣುವ ಜೀವ ಸೃಷ್ಟಿಯ ಹಿಂದಿನದುರ ಬಗ್ಗೆ ಮತ್ತು ಜೀವ ನಾಶದ ನಂತರದ ಬಗ್ಗೆ ಅತೀವ ಆಸಕ್ತಿಯನ್ನೂ ಹೊಂದಿದ್ದಲ್ಲದೇ, ಅವರ ಕಾಲಘಟ್ಟದ ದಾರ್ಶನಿಕರು, ಬುದ್ಧಿವಂತರು, ಸೂಕ್ಷ್ಮವಿಚಾರವಾದಿಗಳು ಹೇಳುವುದನ್ನು ಶ್ರದ್ಧಾ ಭಕ್ತಿಗಳಿಂದ ಕೇಳಿದ್ದೇ ಅಲ್ಲದೇ ಒಪ್ಪಿರುತ್ತಿದ್ದರು.
ಜಡ್ಜ್ಮೆಂಟ್ ಡೇ ಸ್ಪಷ್ಟವಾಗಿ ದಾಖಲಾಗಿರುವ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ತೀರ್ಮಾನದ ದಿನ (ಜಡ್ಜ್ಮೆಂಟ್ ಡೇ) ಎಂಬುದು ಜಗತ್ತಿಗೂ ಇರುತ್ತದೆ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆ ಜಡ್ಜ್ಮೆಂಟ್ ಅವಧಿ ಬಂದಿರುತ್ತದೆ. ಅದೇ ಅವನ ಪಾಪ ಪುಣ್ಯಗಳ ವಿಚಾರಣಾ ದಿನವೂ ಹೌದು.
ಅವನು ಮಾಡಿರುವ ಪಾಪ ಪುಣ್ಯಗಳ ಅನುಸಾರವಾಗಿ ಅವನು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವನು. ಹಾಗೆಯೇ ಎರಡನ್ನೂ ತೂಕ ಮಾಡಿ ನೋಡಲು ಮಾಡಿರುವ ಪಾಪಕ್ಕಿಂತ ಪುಣ್ಯವೇ ಹೆಚ್ಚಾಗಿದ್ದ ಪಕ್ಷದಲ್ಲಿ ಸ್ವರ್ಗಕ್ಕೆ ಹೋಗುವನು. ಕೆಲವೊಮ್ಮೆ ಮಾಡಿರುವ ಪಾಪಕ್ಕೆ ಶಿಕ್ಷೆ ಅನುಭವಿಸುವಂತೆ ಮಾಡಿ, ಆ ಪಾಪಕರ್ಮದ ಫಲವನ್ನು ಕಳೆದುಕೊಂಡು ಸ್ವರ್ಗಕ್ಕೆ ಕಳುಹಿಸಲಾಗುವುದು. ಕೆಲವೊಮ್ಮೆ ಮಾಡಿದ ಪಾಪಗಳನ್ನೆಲ್ಲಾ ಒಮ್ಮಿಂದೊಮ್ಮೆಲೇ ಶುದ್ಧಗೊಳಿಸಿ, ಆತ್ಮವನ್ನು ಶುದ್ಧಾತ್ಮವನ್ನಾಗಿಸಿ ಏಕ್ದಂ ಸ್ವರ್ಗಕ್ಕೆ ಕಳುಹಿಸುವಂತಹ ಕೆಲವು ಸೂಕ್ಷ್ಮ ತಂತ್ರಗಾರಿಕೆಗಳು ಉಂಟು. ಅವೇನೇ ಇರಲಿ.
ಈ ಪಾಪ ಪುಣ್ಯ ಮತ್ತು ಸ್ವರ್ಗ ನರಕಗಳ ಪರಿಕಲ್ಪನೆಯು ಮನುಷ್ಯನನ್ನು ಅತ್ಯಂತ ಸುದೀರ್ಘ ಕಾಲ, ಸಾವಿರಾರು ವರ್ಷಗಳ ಕಾಲ ಆಳಿದೆ ಎಂಬುದು ಸುಳ್ಳಲ್ಲ. ಈ ಪರಿಕಲ್ಪನೆಗಳನ್ನು ಒಮ್ಮಿಂದೊಮ್ಮೆಲೇ ಸುಳ್ಳು ಎಂದು ತಳ್ಳಿ ಹಾಕಿಬಿಡುವುದರಿಂದ ಸಮಸ್ಯೆಯೇ ಇಲ್ಲ, ಕೆಲಸವೇ ಇಲ್ಲ. ಆದರೆ, ಇಂತಹದ್ದೊಂದು ಸುಳ್ಳು ಏಕಾಗಿ ಮತ್ತು ಹೇಗೆ ಇಷ್ಟೂ ಕಾಲ, ಅಷ್ಟು ವ್ಯಾಪಕವಾಗಿ ಸಮೂಹಗಳಲ್ಲಿ ಜೀವಂತವಾಗಿತ್ತು, ಅವರನ್ನು ಆಳುತ್ತಿತ್ತು, ಅವರ ಮನಸ್ಸುಗಳನ್ನು, ಬದುಕುಗಳನ್ನು, ಶಕ್ತಿಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿತ್ತು ಎಂದು ವಿಚಾರಿಸಲು ಹೋದರೆ ಬಹಳ ಸೂಕ್ಷ್ಮವಾದ ವಿಷಯಗಳು ಅನಾವರಣಗೊಳ್ಳುತ್ತಾ ಹೋಗುವವು.
ಅದೇನೇ ಆಗಲಿ, ಒಬ್ಬ ವ್ಯಕ್ತಿಯ ಜೀವನಾವಧಿಯಲ್ಲಿ ವಿಕಾಸದ ಘಟ್ಟಗಳನ್ನು ಗುರುತಿಸಿಕೊಳ್ಳುತ್ತಾ, ಹಿಂದಕ್ಕೆ ನಡೆಯುತ್ತಾ ಭೂತದಲ್ಲಿ ಆದ ಪ್ರಭಾವಗಳನ್ನು ಗುರುತಿಸುವಷ್ಟೇ ಸುಂದರವಾದ ಮತ್ತು ಅಗತ್ಯವಾದ ಕೆಲಸ ಇದಾಗಿರುತ್ತದೆ. ಸ್ವರ್ಗ ಮತ್ತು ನರಕಗಳ ಪರಿಕಲ್ಪನೆಗಳನ್ನು ಉಪಚರಿಸಿದ ಬಗೆಗಳಲ್ಲಿ ನಾನಾ ರೀತಿಗಳಿವೆ. ಆದರೆ ಪ್ರಾಚೀನ ಸಮಾಜಗಳು ಅವನ್ನು ಸ್ವೀಕರಿಸಿದ್ದವು. ಅವನ್ನು ಗ್ರಹಿಸುತ್ತಿದ್ದ ರೀತಿಗಳಲ್ಲಿ ಮತ್ತು ಪರಿಗಣಿಸುತ್ತಿದ್ದ ಮತಿಗಳಲ್ಲಿ ವೈರುಧ್ಯತೆಗಳಿರುತ್ತಿದ್ದವು.
ನಾನು ಸಣ್ಣವನಿರುವಾಗ ಅನೇಕ ವಿಷಯಗಳನ್ನು ಕೇಳುತ್ತಿದ್ದೆ. “ಯಾರಾದರೂ ಸತ್ತಾಗ ಅತಿಯಾಗಿ ಅಳಬಾರದು. ನಮ್ಮೆಲ್ಲರ ಕಣ್ಣೀರು ಸತ್ತವರ ಸ್ವರ್ಗಾವರೋಹಣಕ್ಕೆ ಪ್ರವಾಹವಾಗಿ ಅಡ್ಡ ಬಂದು ತೊಡಕಾಗುವುದು.”
“ವಿಚಾರಣಾ ಸ್ಥಳದಿಂದ (ಯಮಲೋಕ) ಸ್ವರ್ಗಕ್ಕೆ ಹೋಗುವ ದಾರಿ ಬಹಳ ಸೂಕ್ಷ್ಮ. ಬೆಕ್ಕು ಅದನ್ನು ಕಡಿದು ಹಾಕಿದರೆ, ನಾಯಿಯು ತನ್ನ ಬಾಲದಿಂದ ದಾರಿಯು ತುಂಡಾಗದಂತೆ ಅಥವಾ ನಡೆಯುವಿಕೆಗೆ ತೊಡಕಾಗದಂತೆ ನೋಡಿಕೊಳ್ಳುತ್ತದೆ.”
“ಸತ್ತಮೇಲೆ ಮಾಡುವ ಸರಿಯಾದ ಸಂಸ್ಕಾರದಿಂದ, ಅವರ ಹೆಸರಿನಲ್ಲಿ ಮಾಡುವ ದಾನ ಧರ್ಮಗಳ ಪುಣ್ಯ ಸಂಚಯದಿಂದ ವಿಚಾರಣೆಯಲ್ಲಿರುವ ಮೃತವ್ಯಕ್ತಿಯ ಖಾತೆಗೆ ಪುಣ್ಯವು ಜಮಾಆಗಿ ಅವನು ಸ್ವರ್ಗಕ್ಕೆ ಹೋಗುವಂತಹ ಅರ್ಹತೆಗಳನ್ನು ಪಡೆಯುತ್ತಾನೆ.”
“ದೇವಸ್ಥಾನದಲ್ಲಿ ದೇವರ ದುಡ್ಡನ್ನು ಕದಿಯುವವನು, ದೈವೀಕಾರ್ಯದಲ್ಲಿ ವಂಚಿಸಿ ಧನ ಸಂಗ್ರಹ ಮಾಡುವವನು ಮುಂದಿನ ಜನ್ಮದಲ್ಲಿ ನಾಯಿಯಾಗುತ್ತಾನೆ.” (ನಾನು ಸಣ್ಣವನಿದ್ದಾಗ ಇದನ್ನು ತಿಳಿದ ಮೇಲೆ ಬಹಳ ಗಂಭೀರವಾಗಿ ನಂಬಿದ್ದೇ ಅಲ್ಲದೇ ಎದುರಾಗುವ ಪ್ರತಿ ನಾಯಿಗೂ ಯಾವ ದೇವಸ್ಥಾನದ ಪೂಜಾರಿಯಾಗಿದ್ದೆ? ಯಾವ ದೇವರ ಅರ್ಚಕನಾಗಿದ್ದೆ? ಎಂದು ವಿಚಾರಿಸುತ್ತಿದ್ದೆ.)
“ಕಬ್ಬಿಣವನ್ನು ಕದ್ದವನು ಮುಂದಿನ ಜನ್ಮದಲ್ಲಿ ಬಿಳಿಯ ಮಚ್ಚೆಗಳನ್ನು ಹೊಂದಿರುವಂತಹ ತೊನ್ನಿನ ರೋಗವನ್ನು ಪಡೆಯುತ್ತಾನೆ.” ಇತ್ಯಾದಿ. ಈ ಬಗೆಯ ಮಾತುಗಳೆಲ್ಲದರ ಹಿಂದೆ ಕಾರಣಗಳಿವೆ, ಪ್ರಭಾವಗಳಿವೆ ಮತ್ತು ಉದ್ದೇಶಗಳೂ ಸ್ಪಷ್ಟವಾಗಿವೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


