Connect with us

ಭಾವ ಭೈರಾಗಿ

ಮನೋಚರಿತ್ರೆ | ಮನೋಸಂಸ್ಕೃತಿ

Published

on

  • ಯೋಗೇಶ್ ಮಾಸ್ಟರ್, ಚಿಂತಕರು, ಬೆಂಗಳೂರು

ಮುಸಲ್ಮಾನನೊಬ್ಬ ಗಣಪತಿಯ ವಿಗ್ರಹದ ಮುಂದೆ ಇರುವ ಗೋಲಕಕ್ಕೆ ಹಣ ಹಾಕಿ ಕೈ ಮುಗಿದುಕೊಂಡು ಹೋದರೆ, ಹಿಂದೂ ಒಬ್ಬನು ದರ್ಗಾಗೆ ಹೋಗಿ ನವಿಲುಗರಿಯ ಪುಚ್ಛಕ್ಕೆ ತಲೆಗೊಟ್ಟು, ಗೋರಿಯ ಮೇಲೆ ಚಾದರ ಹಾಸಿ ನಮಿಸಿದರೆ ಸೌಹಾರ್ದ ಪ್ರೇಮಿಗಳು “ಇದು ನನ್ನ ಭಾರತ” ಎಂದು ಉದ್ಗರಿಸುತ್ತಾರೆ.

ಇದು ನಾವು ಇಚ್ಚಿಸುವ ಸಾಮರಸ್ಯದ ಭಾರತ ಎಂದು ಅಂತಹುದನ್ನು ಪ್ರಶಂಸಿಸುವುದರ ಮೂಲಕ ಅಂತಹ ಪ್ರಕರಣಗಳನ್ನು ಎದುರು ನೋಡುತ್ತಾರೆ. ಕೆಲವು ಸೌಹಾರ್ದವನ್ನು ಮೆರೆದ ಉದಾಹರಣೆಯಾಗಿ ಅದನ್ನು ವೈರಲ್ ಮಾಡುವುದೂ ಉಂಟು.

ಚರ್ಚೆಯ ಸಲುವಾಗಿ ಎಂದೇ ಒಂದು ಆಕ್ಷೇಪವನ್ನು ಎತ್ತೋಣ. ಅದೇನೆಂದರೆ ಓರ್ವ ಮುಸಲ್ಮಾನ ತನ್ನ ಸೌಹಾರ್ದದ ಮನಸ್ಥಿತಿಯನ್ನು ಪ್ರಕಟಿಸಲು ಗಣೇಶನ ಮೂರ್ತಿಗೆ ನಮಿಸಲೇ ಬೇಕೇ? ಇಸ್ಲಾಂ ಧಾರ್ಮಿಕ ನೀತ್ಯಾ ವಿಗ್ರಹಾರಾಧನೆ ನಿಷೇಧವಿದೆಯಲ್ಲವೇ? ಹಾಗಿರಲು ಗಣಪತಿಗೆ ಆತ ನಮಿಸಿದ್ದರಲ್ಲಿ ಪ್ರಾಮಾಣಿಕತೆ ಇದೆಯೇ? ಒಂದು ವೇಳೆ ಪ್ರಾಮಾಣಿಕನೇ ಆಗಿದ್ದ ಪಕ್ಷದಲ್ಲಿ ಆ ಮುಸ್ಲೀಂ ತನ್ನ ಧಾರ್ಮಿಕ ನಿಷ್ಟೆಗೆ ವ್ಯತಿರಿಕ್ತವಾಗಿ ನಡೆದೇ ತನ್ನ ಸಾಮರಸ್ಯವನ್ನು ಪ್ರದರ್ಶಿಸಬೇಕೇ? ಅದರಂತೆ ಓರ್ವ ಹಿಂದೂ ಧಾರ್ಮಿಕ ವ್ಯಕ್ತಿಯು ತನ್ನ ಧರ್ಮ ನಿರಪೇಕ್ಷೆಯ ಮನಸ್ಥಿತಿಯನ್ನು ಬಿಂಬಿಸಲು ಚರ್ಚಿಗೆ ಹೋಗಿ ಮೊಣಕಾಲೂರಬೇಕೇ?

ಮಸೀದಿಗೆ ಹೋಗಿ ಹಣೆಯನ್ನು ನೆಲಕ್ಕೆ ಹಚ್ಚಿ ಬಾಗಬೇಕೇ? ಭಗವತ್ಗೀತೆ ಕಂಠಪಾಠ ಮಾಡುವ ಮುಸ್ಲೀಂ ಹುಡುಗಿಗೆ, ಹಾಗೆಯೇ ಕುರಾನ್ ಅಧ್ಯಾಯಗಳನ್ನು ನಿರರ್ಗಳವಾಗಿ ಹೇಳುವ ಹಿಂದೂ ಹುಡುಗಿಗೆ ಪ್ರಶಂಸೆಗಳು ಸಲ್ಲುತ್ತವೆ. ಆಯಾ ಧರ್ಮೀಯರು ತಮ್ಮ ತಮ್ಮ ಪಾಡಿಗೆ ತಾವು ತಮ್ಮ ಆಚರಣೆಗಳನ್ನು ವೈಯಕ್ತಿಕವಾಗಿ ಮಾಡಿಕೊಂಡಿದ್ದು ಇತರರ ತಂಟೆಗೆ ಹೋಗದಿರುವುದು ಸಹನೆಯ ಗುರುತಲ್ಲವೇ?
ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಸಹನೆ ಮತ್ತು ಅಸಹನೆಗಳ ಮಾನದಂಡವು ಆಯಾ ಕಾಲದ ಒತ್ತಡದಲ್ಲಿ ರೂಪುಗೊಳ್ಳುತ್ತಿರುತ್ತದೆ.

ಬಹುಸಂಸ್ಕೃತಿಯನ್ನು ಒಪ್ಪುವುದರೊಂದಿಗೆ ನಾನಾ ವಿಧದ ಸಂಧಾನಗಳಿಗೂ, ನಾನಾ ಬಗೆಯ ಒತ್ತಡಗಳಿಗೂ ಮಣಿಯಬೇಕಾಗುತ್ತದೆ ಎಂಬುದೂ ನಿಜ. ಆದರೆ ಭಾರತೀಯ ಸಂಸ್ಕೃತಿ ಎಂಬುದೇ ಬಹುತ್ವದ ಸಂಸ್ಕೃತಿ.

ಇರಲಿ, ಮನುಷ್ಯನ ಮೇಲಾಗುವ ಸಂಸ್ಕೃತಿಯ ಪ್ರಭಾವಗಳನ್ನೂ ಮತ್ತು ಅದೇ ರೀತಿಯಲ್ಲಿ ಮನುಷ್ಯನ ಮಾನಸಿಕ ಒತ್ತಡಗಳನ್ನೂ ಗಮನಿಸೋಣ. ಸಂಸ್ಕೃತಿ ಎಂದ ಕೂಡಲೇ ಭಾಷೆ, ಅದರ ಸೊಗಡು, ಉಡುಗೆ ತೊಡುಗೆ, ಊಟ, ನಿರ್ದಿಷ್ಟ ಹಬ್ಬ, ಆಚರಣೆಗಳು ನೆನಪಿಗೆ ಬರುತ್ತವೆ. ಸಾಮಾನ್ಯವಾಗಿ ಜನ ಸಾಮಾನ್ಯರು ತಮ್ಮ ತಮ್ಮ ಸಂಸ್ಕೃತಿಯನ್ನು ಬಹಳ ಹೆಮ್ಮೆ ಮತ್ತು ಅಭಿಮಾನದಿಂದ ಭಾವಿಸುತ್ತಾರೆ. ಹಾಗೆ ಅದನ್ನು ಉಪಚರಿಸುವುದು, ಅಭಿಮಾನಿಸುವುದು ತಮ್ಮ ಕರ್ತವ್ಯವೆಂದೂ ತಿಳಿಯುತ್ತಾರೆ.

ಹಾಗಾಗಿಯೇ ಪ್ರಾದೇಶಿಕವಾಗಿಯೋ, ಧಾರ್ಮಿಕವಾಗಿಯೋ, ಜಾತಿ, ಕುಲಾಧಾರಿತವಾಗಿಯೋ ರೂಪುಗೊಂಡ ಸಂಸ್ಕೃತಿಯನ್ನು ವೈಭವೀಕರಿಸುವುದು ಮತ್ತು ಅದಕ್ಕೆ ಇತರರು ಕುಂದುಂಟಾಗುವಂತೆ ವರ್ತಿಸಿದರೆ ಅಥವಾ ವಿಮರ್ಶಿಸಿದರೆ ಅದಕ್ಕೆ ಪ್ರತಿಭಟನೆಯನ್ನು ತೋರುವುದು ಕೂಡಾ ಉಂಟು. ಯಾವುದೇ ಒಂದು ವಿಷಯದಲ್ಲಿ ಭಾವಿಸುವುದು, ಸ್ವೀಕರಿಸುವುದು, ತಿರಸ್ಕರಿಸುವುದು, ಕ್ರೋಧಗೊಳ್ಳುವುದು, ಪ್ರತಿಭಟಿಸುವುದು; ಇತ್ಯಾದಿಗಳು ನಡೆಯುತ್ತಿದ್ದರೆ, ಆ ವಿಷಯವು ಮಾನಸಿಕವಾಗಿ ವ್ಯಕ್ತಿಯಲ್ಲಿ ರೂಪುಗೊಂಡಿದೆ ಎಂದೇ ಅರ್ಥ.

ಲಂಬಾಣಿಯವರ ಗಾಜಿನ ಚೂರುಗಳಿಂದ ಅಲಂಕೃತ ಬಣ್ಣ ಬಣ್ಣದ ಉಡುಗೆಗಳನ್ನು ಓರ್ವ ಕ್ರೈಸ್ತ ಹುಡುಗಿ ತೊಡುತ್ತಾಳೆಂದರೆ ಅವಳು ಆ ಉಡುಪಿನ ವಿನ್ಯಾಸಕ್ಕೆ, ರಂಗುರಂಗಾದ ವೈಭವಕ್ಕೆ ಮಾರು ಹೋಗಿದ್ದಾಳೆಂದಷ್ಟೇ ಅರ್ಥ. ನರ್ತಿಸಲು ಚಂದ ಎಂದೋ, ಫ್ಯಾನ್ಸಿ ಡ್ರಸ್ ಕಾಂಪಿಟಿಷನ್ನಿಗೆ ಸೂಕ್ತವೆಂದೋ ಆಕೆ ತೊಟ್ಟಿರುತ್ತಾಳೆ. ಹೊರತಾಗಿ ಅವಳು ಆ ಸಂಸ್ಕೃತಿಯನ್ನು ಅಪ್ಪಿಕೊಂಡಳೆಂದೋ, ಅವರ ಆಚಾರ ವಿಚಾರಗಳನ್ನು ಸ್ವೀಕರಿಸಿದ್ದಾಳೆಂದೋ ಅರ್ಥವಲ್ಲ. ಹೀಗೆ ಸಂಸ್ಕೃತಿಯನ್ನು ಮಾನಸಿಕವಾಗಿ ಸ್ವೀಕರಿಸುವುದಕ್ಕೂ, ಬಾಹ್ಯಾಕರ್ಷಣೆಗೆ ಸ್ವೀಕರಿಸುವುದಕ್ಕೂ ವ್ಯತ್ಯಾಸವಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಒಂದು ಸಂಸ್ಕೃತಿಯನ್ನು ಸ್ವೀಕರಿಸುವ ಮಟ್ಟದಲ್ಲಿ ನಾನಾ ಸ್ತರಗಳಿದ್ದು ಅವು ನಾನಾ ಭಾವಗಳಿಂದ ಕೂಡಿರುತ್ತವೆ. ಹೀಗಾಗಿ ಮಾನಸಿಕ ಆರೋಗ್ಯಕ್ಕೂ ಮತ್ತು ಸಂಸ್ಕೃತಿಗೂ ಸಂಬಂಧ ಇದೆ. ಅದನ್ನು ಪ್ರತಿಯೊಂದು ಸಮಾಜವೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅನುಭವಿಸುತ್ತದೆ.

ಜಾತ್ಯಾತೀತ ಮತ್ತು ಧರ್ಮ ನಿರಪೇಕ್ಷ ಭಾರತದಲ್ಲಿ ಜಾತಿ ಮತ್ತು ಧರ್ಮಗಳನ್ನು, ತಾನು ಗುರುತಿಸಿಕೊಂಡಿರುವ ಸಂಸ್ಕೃತಿ ಮತ್ತು ಇತರ ಸಂಸ್ಕೃತಿಗಳನ್ನು ಹೇಗೆ ನೋಡುವುದೆಂಬುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆಗಲೇ ತಿಳಿಸಿದಂತೆ ಓರ್ವ ಕ್ರೈಸ್ತ ಹುಡುಗಿ ಕಾಲೇಜಿನ ಫ್ಯಾನ್ಸಿ ಡ್ರೆಸ್ಸಿನ ಸ್ಪರ್ಧೆಗೆಂದು ರಂಗು ರಂಗಾದ ಲಂಬಾಣಿ ಉಡುಗೆಯನ್ನು ತೊಟ್ಟು ಬಿಡುವಂತೆ ಆಗುವುದಿಲ್ಲ.

ಏಕದೇವನ ಆರಾಧನೆ ಮಾಡುವ ಧಾರ್ಮಿಕರು ಅದನ್ನೇ ಮಾನಸಿಕವಾಗಿ ಮತ್ತುಭಾವನಾತ್ಮಕವಾಗಿ ಒಪ್ಪಿಕೊಂಡಿರುವಾಗ ಬಹುದೇವತೆಗಳನ್ನು ಆರಾಧನೆಗಳನ್ನು ಮಾಡುವ ಸಹಜನರ ತಾತ್ವಿಕತೆಯನ್ನು ಸಮ್ಮತಿಸುವುದೋ, ಸಹಿಸುವುದೋ; ಒಟ್ಟಾರೆ ಮನಸ್ಸಿಗೆ ಅದು ಒತ್ತಡವೇ.

ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿಯುತ್ತಲೇ ಜಾತಿಯ ಆಧಾರದಲ್ಲಿ ರಾಜಕೀಯ ಪಕ್ಷಗಳು ಆಯಾ ಪ್ರದೇಶಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವುದನ್ನು, ಇಂಥಾ ಜಾತಿಯವರ ಇಷ್ಟು ಓಟುಗಳಿವೆ, ಅಂಥಾ ಜಾತಿಯವರ ಅಷ್ಟು ಓಟುಗಳಿವೆ ಎಂದು ನೋಡುವುದು, ಇಂಥಾ ಜಾತಿಯವರ ಪ್ರಾತಿನಿಧ್ಯ ಬೇಕೆನ್ನುವುದು; ಇತ್ಯಾದಿ ಜಾತಿ ಆಧಾರದ ಗಂಭೀರ ನಿರ್ಣಯಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಮನ್ನಿಸಲಿ, ಮನ್ನಿಸದೇ ಇರಲಿ, ಇಂತಹ ಒತ್ತಡಗಳು ಮನಸ್ಸಿನ ಮೇಲೆ ನಾನಾ ಬಗೆಯ ಪರಿಣಾಮಗಳನ್ನು ಬೀರುತ್ತವೆ.

ಜಾತಿ ಆಧಾರಿತ ದೌರ್ಜನ್ಯಗಳನ್ನು ನೋಡುವಂತಹ ನಮ್ಮ ದೇಶದಲ್ಲಿ ದಲಿತ, ಶೂದ್ರ ಮತ್ತು ಸವರ್ಣೀಯ ಜಾತಿಗಳ ಹಿನ್ನೆಲೆಗಳನ್ನು ಹೊಂದಿರುವಂತಹ ವ್ಯಕ್ತಿಗಳು ಎಂತಹುದ್ದೇ ವಿಶ್ವಮಾನವ ಪರಿಕಲ್ಪನೆಯನ್ನು ಹೊಂದಿದ್ದರೂ, ಸರ್ಕಾರದ ಕಛೇರಿಗಳಲ್ಲಿ, ವ್ಯವಸ್ಥೆಗಳಲ್ಲಿ, ವರದಿಗಳನ್ನು ಜಾರಿಗೆ ತರುವಲ್ಲಿ ಜಾತಿ ಮತ್ತು ಪಂಗಡಗಳನ್ನು ತಮ್ಮ ತಮ್ಮ ಸ್ನೇಹಿತರ ನಡುವೆ ಪರಿಗಣಿಸುವುದು ಮತ್ತು ಭ್ರಾತೃತ್ವದ ಬಗ್ಗೆ ಕನಸುತ್ತಲೇ ವ್ಯವಸ್ಥೆಯಲ್ಲಿಯೇ ಬೇಧಗಳನ್ನು ಹೊಂದುವುದು ಅವರಿಗೇ ತಿಳಿಯದಂತೆ ವಿವಿಧ ರೀತಿಯ ಮಾನಸಿಕ ಒತ್ತಡಗಳನ್ನು ಉಂಟುಮಾಡುತ್ತವೆ.

ವೈರುಧ್ಯಗಳನ್ನು ಹೊಂದಿರುವ ವಿವಿಧ ಸಂಸ್ಕೃತಿಗಳು ನೇರವಾಗಿ ಮನಸ್ಸಿನ ಮೇಲೆ ಬೀರುವ ಪ್ರಭಾವಗಳಿಂದಾಗಿ ಭಾರತ, ನೇಪಾಳ, ಶ್ರೀಲಂಕಾದಂತಹ ದೇಶಗಳಲ್ಲಿ ಧಾತ್ ಸಿಂಡ್ರೋಮ್, ನೈಜೇರಿಯಾದಂತಹ ದೇಶದಲ್ಲಿ ಬ್ರೈನ್ ಫ್ಯಾಗ್ ಸಿಂಡ್ರೋಮ್, ಜಪಾನಿನಲ್ಲಿ ಹಿಕಿಕೊಮೊರಿ ಸಿಂಡ್ರೋಮ್, ಅಮೇರಿಕೆ ಮತ್ತು ಆಂಗ್ಲ ರಾಷ್ಟ್ರಗಳಲ್ಲಿ ವ್ಹೈಟ್ ಸೇವಿಯರ್ ಸಿಂಡ್ರೋಮ್; ಹೀಗೆ ನಾನಾ ಬಗೆಯ ಮಾನಸಿಕ ಸಮಸ್ಯೆಗಳನ್ನು ಕಾಣುತ್ತೇವೆ.

ಒಟ್ಟಾರೆ ಭಾರತದಂತಹ ಬಹು ಸಂಸ್ಕೃತಿಯ ಸಮಾಜದಲ್ಲಿ ವಿವಿಧತೆಯನ್ನು ಕೊಂಡಾಡುವ ಮತ್ತು ಮಾನಸಿಕವಾಗಿ ಸಮಸ್ಯೆಗಳನ್ನು ಉಂಟು ಮಾಡದ ಬಗೆಯನ್ನೇ ಕಂಡುಕೊಳ್ಳಬೇಕಾಗಿರುವ ಅನಿವಾರ್ಯತೆ ಖಂಡಿತ ಇದೆ. ಸವರ್ಣೀಯರಲ್ಲಿ ಶ್ರೇಷ್ಟತೆಯ ವ್ಯಸನಗಳಿರುವಂತೆ, ತಳ ಸಮುದಾಯದ ಜಾತಿ ಮತ್ತು ಸಂಸ್ಕೃತಿಗಳಲ್ಲಿ ಬೇರೆ ಬೇರೆ ರೀತಿಯ ಅರಿಮೆ (ಕಾಂಪ್ಲೆಕ್ಸ್) ಮತ್ತು ಮಾನಸಿಕ ಒತ್ತಡಗಳನ್ನು ಉಂಟು ಮಾಡುತ್ತಿರುವುದು ಸುಳ್ಳಲ್ಲ. ಭಾರತದಂತಹ ದೇಶದಲ್ಲಿ ಇಂತಹದ್ದೊಂದು ಗಂಭೀರ ಅಧ್ಯಯನದ ಅಗತ್ಯವಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending