ಅಂತರಂಗ
ಧರ್ಮ ಮರ್ಮ-08 : ನವಸಮಾಜದ ಕನಸುಗಾರರು
- ಯೋಗೇಶ್ ಮಾಸ್ಟರ್
ಕ್ರಿಸ್ತನ ಮರಣಾನಂತರ ಪ್ರಾರಂಭಿಕ ಕ್ರೈಸ್ತರು ಮತ್ತು ಬಸವಣ್ಣನ ಗಡಿಪಾರಿನ ನಂತರ ಶರಣರು ಹೇಗೆ ಅಪಾರವಾದ ಕಿರುಕುಳ, ಹಿಂಸೆ ಮತ್ತು ಬಹಿಷ್ಕಾರಗಳನ್ನು ಅನುಭವಿಸಿದರು. ಅದು ಮುಸಲ್ಮಾನರಿಗೂ ತಪ್ಪಿದ್ದೇನಲ್ಲ. ಪ್ರವಾದಿ ಮಹಮದರ ಸಮಯದಲ್ಲಿಯೇ ಅವರಿಗೂ ಮತ್ತು ಅವರ ಅನುಯಾಯಿಗಳಿಗೆ ಭಯಾನಕ ಕಿರುಕುಳಗಳನ್ನು, ಹಿಂಸೆಗಳನ್ನು ನೀಡಲಾಗಿತ್ತು. ಅವರನ್ನು ತಡೆಯಲು ಅದೆಷ್ಟು ಸಾಧ್ಯವೋ ಅಷ್ಟು ಬಲಪ್ರಯೋಗಗಳಾಗುತ್ತಿದ್ದವು.
ಇದು ಯಾವುದೇ ಸತ್ಯಾನ್ವೇಷಕರಿಗೆ ಮತ್ತು ನವಸಮಾಜದ ಪ್ರತಿಪಾದಕರಿಗೆ ತಪ್ಪಿದ್ದೇನಲ್ಲ.
ಮುಸಲ್ಮಾನರ ಮೊದಲಿನ ಅಬ್ರಹಾಮನ ಧಾರ್ಮಿಕತೆಯ ಪರಂಪರೆಯನ್ನು ಗಮನಿಸುವುದಾದರೆ ಮೊದಲು ಈಜಿಪ್ಟಿನಲ್ಲಿ ಇಸ್ರೇಲರು ಈ ಕಿರುಕುಳಕ್ಕೆ ಒಳಗಾಗಿದ್ದರು. ಅವರನ್ನು ಐಗುಪ್ತ್ಯರ (ಈಜಿಪ್ಟಿನವರ) ಫರೋಹನು ಇಸ್ರೇಲಿನ ಹೀಬ್ರೂಗಳನ್ನು ತನ್ನ ದಾಸ್ಯದಲ್ಲಿರಿಸಿಕೊಂಡಿದ್ದರು. ಹಾಗೂ ಅವರ ಸಂತತಿಯು ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದನು. ಗಂಡು ಮಕ್ಕಳಾದರೆ ಕೊಲ್ಲುವ ಮತ್ತು ಹೆಣ್ಣು ಮಕ್ಕಳಾದರೆ ಮಾತ್ರ ಉಳಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಹಾಗೆ ಮಾಡಲು ಈಜಿಪ್ಟಿನ ಸೂಲಗಿತ್ತಿಯರಿಗೆ ಸೂಲಗಿತ್ತಿಯರಿಗೆ ಸೂಚನೆ ನೀಡಲಾಗಿತ್ತು. ಅವರು ಹಾಗೆ ಮಾಡಲಿಲ್ಲವೆನ್ನುವುದು ಬೇರೆ ವಿಚಾರ.
ಆದರೆ ಇದೇ ಬಗೆಯಲ್ಲಿ ದ್ವೇಷ ಮತ್ತು ಹಟದ ಸಾಧನೆಗಾಗಿ ಹುಟ್ಟುತ್ತಿದ್ದಂತೆ ಗಂಡು ಮಕ್ಕಳನ್ನು ಕೊಲ್ಲುವ ಪ್ರಕರಣಗಳನ್ನು ಹಲವು ಕಡೆ ಗಮನಿಸುತ್ತೇವೆ. ಅದಕ್ಕೆ ಎರಡು ಉದಾಹರಣೆಯೆಂದರೆ ಯೇಸುವಿನ ಜನನದ ಕಾಲದಲ್ಲಿ ಹೇರೋದನು ಯೆಹೂದ್ಯರ ಅರಸ ಹುಟ್ಟುವನು ಎಂಬ ಭವಿಷ್ಯವನ್ನು ನಂಬಿ ಆ ಸಮಯದಲ್ಲಿ ಹುಟ್ಟಿದ ಎಲ್ಲಾ ಗಂಡು ಮಕ್ಕಳನ್ನು ಕೊಲೆ ಮಾಡಲು ಆದೇಶಿಸಿದ್ದನು.
ಸುಳಿವು ತಿಳಿದ ಯೇಸುವಿನ ತಂದೆ ಜೋಸೇಫನು ತನ್ನ ಗರ್ಭಿಣಿ ಹೆಂಡತಿಯನ್ನು ಕರೆದುಕೊಂಡು ಈಜಿಪ್ಟಿಗೆ ಪಲಾಯನ ಮಾಡಬೇಕಾಯಿತು. ಅದೇ ರೀತಿ ಭಾರತದಲ್ಲಿ ಕೃಷ್ಣನ ಜನನದ ವಿಷಯದಲ್ಲಿಯೂ ಹೀಗೇ ಕಂಸನಿಂದ ಮಕ್ಕಳನ್ನು ಕೊಲ್ಲುವ ಕೆಲಸವಾಗಿತ್ತು. ಇದು ಖ್ಯಾತ ಮತ್ತು ಖ್ಯಾತವಲ್ಲದ ಅನೇಕಾನೇಕ ಸಾಮಾಜಿಕ ಮತ್ತು ಧಾರ್ಮಿಕ ಪರಂಪರೆಗಳ ಚರಿತ್ರೆಯಲ್ಲಿ ಗುರುತಿಸಬಹುದಾಗಿದೆ.
ಜನಾಂಗೀಯ, ಭಿನ್ನ ಸಂಸ್ಕೃತಿಗಳ, ಧರ್ಮಗಳ ಕಾರಣಗಳ, ರಾಜಕೀಯ ಸಂಘರ್ಷಗಳ ಕಾರಣಗಳಿಗೆ ಜನರ ಹತ್ಯಾಕಾಂಡಗಳಾಗಿವೆ. ಆದರೆ ಅವು ಕಾರಣಗಳಲ್ಲ, ನೆಪಗಳು. ಆದರೆ ನಿಜವಾದ ಕಾರಣ ತಮ್ಮ ಸಾರ್ವಭೌಮತ್ವವನ್ನು ಮತ್ತೊಬ್ಬರ ಮೇಲೆ ಹೇರುವುದು. ಇತರರನ್ನು ತಮ್ಮ ಅಧೀನದಲ್ಲಿ ಇರಿಸಿಕೊಳ್ಳುವುದು. ಕ್ಷಾಮ, ಸಾಂಕ್ರಮಿಕ ಕಾಯಿಲೆ, ಭೂಕಂಪ, ಪ್ರವಾಹ, ಜ್ವಾಲಾಮುಖಿ, ಹಿಮಪಾತಗಳಂತಹ ಅವಘಡಗಳಿಗಿಂತ ಹೆಚ್ಚು ಭೀಕರವಾಗಿ ಜನರನ್ನು ಕೊಂದಿಕ್ಕಿರುವುದು ಜನರಲ್ಲಿಯೇ ಇರುವ ಸಾರ್ವಭೌಮತ್ವದ ಅಹಂಕಾರದಿಂದ.
ವಿಮೋಚನಾ ಕಾಂಡ
ಐಗುಪ್ತ್ಯರು ಹೀಬ್ರೂಗಳನ್ನುದಾಸ್ಯದಲ್ಲಿಟ್ಟುಕೊಂಡು ತಮ್ಮಸಾರ್ವಭೌಮತ್ವವನ್ನು ಸಾಧಿಸಲು ಯತ್ನಿಸುತ್ತಿದ್ದರು. ಅವರ ಗಂಡು ಸಂತತಿ ಹೆಚ್ಚಿದರೆ ಬಲಿಷ್ಟರಾಗಿ ತಮ್ಮೊಡನೆ ಯುದ್ಧ ಮಾಡಿ ತಮ್ಮ ಸಾರ್ವಭೌಮತ್ವವನ್ನು ಮಣ್ಣುಗೂಡಿಸಬಹುದೆಂದು ಭಯ ಫರೋಹಗಳಿಗಿತ್ತು. ಇದನ್ನು ಸಾಕ್ಷೀಕರಿಸಿದವನು ಮೋಶೆ. ಹೀಬ್ರೂ ತಾಯಿಗೆ ಹುಟ್ಟಿದವನು, ಮಗುವನ್ನು ಕೊಲ್ಲುವವರೆಂದು ಅವನನ್ನು ಪೆಟ್ಟಿಗೆಯೊಂದರಲ್ಲಿ ಮಲಗಿಸಿ ನೈಲ್ ನದಿಯ ಅಂಚಿನ ಜಂಬುಹುಲ್ಲಿನ ಪೊದೆಯಲ್ಲಿ ಇಟ್ಟು ಅಡಗಿಕೊಂಡು ನೋಡುತ್ತಿರುತ್ತಾಳೆ.
ಫರೋಹನ ರಾಜಕನ್ನಿಕೆಯೊಬ್ಬಳು ಆ ಮಗುವಿನ ಮೇಲೆ ಕನಿಕರಪಟ್ಟು ತಾನೇ ಸಾಕುತ್ತಾಳೆ. ಅದಕ್ಕೆ ಮೊಲೆಯೂಡಲು ಅವನ ನಿಜವಾದ ತಾಯನ್ನೇ ಕರೆಯಿಸುವ ಕರುಣಾಜನಕ ಮತ್ತು ನಾಟಕೀಯವಾದಂತಹ ಕತೆ ಮೋಶೆಯ ಹುಟ್ಟು ಮತ್ತು ಬೆಳವಣಿಗೆಯದ್ದು. ಅದೇನೇ ಇರಲಿ, ಅವನು ರಾಜಮನೆತನದವನಾಗಿಯೇ ಬೆಳೆದರೂ ಅವನಿಗೆ ದಾಸ್ಯದಲ್ಲಿ ಹೀಬ್ರೂಗಳನ್ನು ನರಳಿಸುವುದು ಅವನಿಗೆ ಒಗ್ಗುತ್ತಿರಲಿಲ್ಲ. ಒಂದು ಸಂದರ್ಭದಲ್ಲಿ ಅವನಿಗೆ ತನ್ನ ಹುಟ್ಟಿನ ರಹಸ್ಯವೂ ತಿಳಿಯುತ್ತದೆ. ಒಟ್ಟಾರೆ ಅವನು ನಿರ್ಧರಿಸುವುದು ತನ್ನ ಜನರನ್ನು ದಾಸ್ಯದಿಂದ ಬಿಡಿಸಬೇಕೆಂಬುದು. ಇದೇ ವಿಮೋಚನಾ ಕಾಂಡ.
ಬಿಟ್ಟಿಚಾಕರಿ ಮಾಡುತ್ತಾ ದಾಸ್ಯದಲ್ಲಿ ನರಳುತ್ತಿದ್ದ ಹೀಬ್ರೂಗಳನ್ನು ಬಿಡಿಸಿದ ಮೋಶೆಯೂ ಮಾಡಿದ್ದೇನೆಂದರೆ ಅವರಿಗೆ ಬದುಕಲು ಒಂದು ಕ್ರಮವನ್ನು ಕೊಟ್ಟಿದ್ದು. ವಿಶ್ವಾಸಿಸಲು ಒಂದು ಪರಿಕಲ್ಪನೆಯನ್ನು ಕೊಟ್ಟಿದ್ದು. ಹತ್ತು ನಿಬಂಧನೆಗಳನ್ನು ಇತ್ತನು. ಸೀನಾಯಿ ಎಂದು ಕರೆಯಲ್ಪಡುವ ಬೆಟ್ಟವೊಂದರಲ್ಲಿ ಪೊದೆಯಲ್ಲಿ ಬೆಂಕಿಯಂತೆ ಕಾಣುವ ದೇವರು ಮೋಶೆ ತನ್ನ ಜನರು ನೇಮವಾಗಿ, ಶಿಸ್ತಿನಿಂದ ಮತ್ತು ಬದ್ಧತೆಯಿಂದ ನಡೆಯುವ ಅಗತ್ಯವಿರುವುದೆಂದು ಕಟ್ಟಳೆಗಳನ್ನು ನೀಡಿದನೆಂದು ಹೇಳಿಕೊಳ್ಳುವನು.
ದೇವರ ಹೆಸರಿನಲ್ಲಿ ತನ್ನ ಜನರು ದಾಸ್ಯದಿಂದ ಬಿಡುಗಡೆಯಾಗಿದ್ದು ಮತ್ತೆ ಪತನವಾಗದಿರಲೆಂಬ ಕಾಳಜಿಯಿಂದ ಅವನು ಒಂದು ದಾರಿಯನ್ನು ರೂಪಿಸಲು ಈ ಕಟ್ಟಳೆಗಳನ್ನು ವಿಧಿಸಿದನು. ಏಕೆಂದರೆ ಪಡೆದಿರುವಂತಹ ಸ್ವಾತಂತ್ರ್ಯವು ಫಲಪ್ರದವಾಗಬೇಕಾದರೆ ಅವರು ಆ ಸ್ವತಂತ್ರ ಕಾಲದಲ್ಲಿ ಮತ್ತು ಸ್ಥಿತಿಯಲ್ಲಿ ಸ್ವಶಿಸ್ತಿನಿಂದ ವರ್ತಿಸಬೇಕು. ಹಾಗೆಯೇ ತಿಳುವಳಿಗೆಯಿಂದ ಸ್ವಸ್ಥ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬೇಕು. ಅದು ಅವರ ಉದ್ದೇಶ. ಈ ನಿಬಂಧನೆಗಳು ದಾಸ್ಯಕ್ಕೊಳಿಸುವ ನಿರ್ಬಂಧವಲ್ಲ. ದಾಸ್ಯಕ್ಕೆ ಮರಳದಿರಲು ಬೇಕಾದ ಶಿಸ್ತು. ಶಿಸ್ತು ಕೂಡಾ ನಿಬಂಧನೆಯೇ. ಆದರೆ ಅದು ಕಾರ್ಯ ಸಾಧನೆಗೆ.
ಹತ್ತು ಕಟ್ಟಳೆಗಳು
ಮೋಶೆಯ ಹತ್ತು ಕಟ್ಟಳೆಗಳು ಅವರಲ್ಲಿದ್ದ ನ್ಯೂನ್ಯತೆಗಳನ್ನು ತೊಡೆಯುವ ದಿಕ್ಕಿನಲ್ಲಿಯೇ ಇದ್ದವು. ಮೂರ್ತಿ ಪೂಜೆಯನ್ನು ನಿರಾಕರಿಸಿತ್ತು. ಕಂಡಕಂಡ ವಸ್ತು ವ್ಯಕ್ತಿಗಳನ್ನೆಲ್ಲಾ ದೇವರೆಂದು ಒಪ್ಪಬಾರದಿತ್ತು. ಗ್ರೀಸ್ ಮತ್ತು ಈಜಿಪ್ಟಿನಲ್ಲಿ ಹಲವಾರು ದೇವತೆಗಳು, ಹಲವಾರು ಮೂಢ ನಂಬಿಕೆಗಳು ಬಹಳವಾಗಿತ್ತು. ಅದರ ಪ್ರಭಾವದಲ್ಲಿ ಇದ್ದ ಇವರು ಅದನ್ನೇ ಅನುಸರಿಸಬಾರದೆಂಬುದೂ ಆಗಿತ್ತು.
ಮುಂದಿನ ಪೀಳಿಗೆಗಳನ್ನು ಗಮನಿಸಿಕೊಂಡು, ಅವರ ಹಿತವನ್ನು ಕಾಯುವ ದೂರದೃಷ್ಟಿಯನ್ನು ಇಟ್ಟುಕೊಂಡು ತಾನು ಇಂದು ತಪ್ಪು ಮಾಡಬಾರದೆಂದಾಗಿತ್ತು. ದೇವರ ಹೆಸರನ್ನು ತನ್ನ ಸ್ವಾರ್ಥದ ಅಥವಾ ಕೆಟ್ಟ ಕೆಲಸಗಳಿಗೆ ಬಳಸಬಾರದು. ಹಗಲು ಇರುಳು ಎನ್ನದೇ ಬಿಟ್ಟಿ ಚಾಕರಿ ಮಾಡಿಕೊಂಡಿದ್ದ ಅವರು ಕೆಲಸದ ಮಧ್ಯೆ ವಿರಾಮವನ್ನೂ ಮತ್ತು ತಮ್ಮ ಕುಟುಂಬಗಳಿಗೆ ಸಮಯವನ್ನು ಕೊಡಲು ವಾರದ ಏಳನೆಯ ದಿನವಾದ ಸಬ್ಬತ್ ದಿನದಂದು ಏನೂ ಕೆಲಸ ಮಾಡಬಾರದೆಂದು ಇತ್ತು.
ತನ್ನ ಸ್ವಾರ್ಥಕ್ಕಾಗಿ ತಂದೆ, ತಾಯಿಯೇ ಮೊದಲ್ಗೊಂಡು ಸಂಬಂಧಗಳನ್ನು ಲೆಕ್ಕಿಸದಂತಹ ಪ್ರಕರಣಗಳನ್ನು ನೋಡಿದ್ದ ಮೋಶೆ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡರೆ ದೇವರಿಂದ ಅನುಗ್ರಹಿತವಾದ ಈ ಭೂಮಿಯಲ್ಲಿ ಚೆನ್ನಾಗಿ ಬಾಳುವೆ ಎಂದು ಆಶೆ ಇರಿಸಿದನು. ವಯಸ್ಸಾದ ತಂದೆ ತಾಯಿಯರು ಮಕ್ಕಳ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾಗದಿರಲು ಮೋಶೆ ಮನಗಂಡಿದ್ದನು.
ಹೀಗೇ ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮತ್ತೊಬ್ಬರ ಮನೆಯ ಜನರನ್ನಾಗಲಿ, ವಸ್ತುಗಳನ್ನಾಗಲಿ, ಪಶುಗಳನ್ನಾಗಲಿ ವಶಪಡಿಸಿಕೊಳ್ಳಲು ಬಯಸಬಾರದು. ಬಿಟ್ಟಿಚಾಕರಿ ಮಾಡುತ್ತಾ ಗುಲಾಮಗಿರಿಯಲ್ಲಿದ್ದ ಜನರಿಗೆ ಸ್ವಾತಂತ್ರ್ಯವು ಸಿಕ್ಕಿದಾಗ, ಅವರಿಗೆಂದು ಒಂದು ಭೂಮಿಯು ಬಾಳ್ವೆಗೆ ದೊರಕಿದಾಗ ತಾವು ಇನ್ನೊಬ್ಬರನ್ನು ದಾಸ್ಯಕ್ಕೆ ಒಳಮಾಡಬಾರದೆಂಬ ಮಮಕಾರ, ಕಾರುಣ್ಯ ಮೋಶೆಯಲ್ಲಿತ್ತು.
ವಿಮೋಚನೆಗೆ ದಾರಿ ತೋರಿದ್ದ ಮೋಶೆಯು ಮತ್ತೊಬ್ಬರನ್ನು ದಾಸ್ಯಕ್ಕೆ ಒಳಪಡಿಸಬಾರದೆಂಬ ಪ್ರಜ್ಞೆಯ ತರಬೇತಿ ಕೊಡಲು ದೇವರ ಹೆಸರು ಎತ್ತಿದ್ದ, ಹತ್ತು ನಿಬಂಧನೆಗಳನ್ನು ನೀಡಿದ್ದ. ನಿಜಕ್ಕೂ ಆತ ಧೀರನೂ ಹೌದು, ಕರುಣಾಳುವೂ ಹೌದು.
ಆದರೆ ದಶಾಜ್ಞೆಗಳು ಅಥವಾ ಹತ್ತು ನಿಬಂಧನೆಗಳನ್ನು ಹೀಬ್ರೂ ಜನರು ಒಂದಷ್ಟು ಕಾಲವಷ್ಟೇ ತನ್ನ ಮಾನ್ಯತೆಯನ್ನು ಪ್ರಾಮಾಣಿಕವಾಗಿ ಉಳಿಸಿಕೊಂಡಿದ್ದು. ನಂತರ ಅದನ್ನೇ ಮುಂದಿಟ್ಟುಕೊಂಡು ಪುರೋಹಿತರು ಮತ್ತೆ ಜನರನ್ನು ತಮ್ಮದೇ ಜನರನ್ನು ಶೋಷಿಸತೊಡಗಿದ್ದರು.
ಸಾಲದಕ್ಕೆ ತಮ್ಮ ಸ್ವಾರ್ಥ ಸಾಧನೆಗೆ ಬೇಕಾದಂತೆ ಅವನ್ನು ಬಳಸಿಕೊಳ್ಳಲೂ ತೊಡಗಿದ್ದರು. ಮತ್ತೆ ಗುಲಾಮರಂತಾಗಿದ್ದರು. ಅಂತಹ ಸಮಯದಲ್ಲಿ ಮೂಡಿದ ಮೋಶೆಯಂತೆಯೇ ಮತ್ತೊಬ್ಬ ಸಮಾಜ ಸುಧಾರಕ, ಆದರ್ಶ ಸಮಾಜದ ಕನಸುಗಾರ ಯೇಸು. ಸಾಂಪ್ರದಾಯಕವಾಗಿ ಬಂದಿರುವ ಧರ್ಮಶಾಸ್ತ್ರವನ್ನು ತಾನು ಕಡೆಗಣಿಸಲು ಅಥವಾ ತಿರಸ್ಕರಿಸಲು ಬಂದಿಲ್ಲ, ಬದಲಾಗಿ ಅವನ್ನು ಸರಿಯಾದ ರೀತಿಯಲ್ಲಿ ನೆರವೇರಿಸಲೆಂದೇ ಬಂದವನು ತಾನು ಎಂದೇ ಯೇಸು ನೀಡಿದ್ದ ಸ್ಪಷ್ಟತೆ.
ಆದರೆ ಯೇಸುವೂ ಕೂಡಾ ತನ್ನ ಜನರು ಮೌಢ್ಯ ಮತ್ತು ಕಂದಾಚಾರಗಳಿಂದ ಮುಕ್ತರಾಗಿ ಸಂಪೂರ್ಣ ಗುಣಮಟ್ಟದ ಜೀವನವನ್ನು ನಡೆಸಲು ತಾತ್ವಿಕವಾಗಿ ಮತ್ತು ಧಾರ್ಮಿಕವಾಗಿ ಮಾದರಿಯಾಗಿದ್ದೇ ಮಿತಿಯಲ್ಲಿರುವುದಾದರೂ ತಮ್ಮ ಚಿಲ್ಲರೆ ಸಾರ್ವಭೌಮತ್ವಕ್ಕೆ ಪೆಟ್ಟಾಗದಿರಲು ಯೇಸುವಿಗೇ ಪೆಟ್ಟುಕೊಟ್ಟರು. ಶಿಲುಬೆಯ ಪಟ್ಟಿಗಳಿಗೆ ಯೇಸುವನ್ನು ಜಡಿದು ಕೊಂದ ಮೇಲೆ ಕ್ರೈಸ್ತರಿಗೆ ಕೂಡಾ ಕಿರುಕುಳಗಳಾದವು.
ಪ್ರೇಷಿತರ ಮತ್ತು ಇತರ ಅನೇಕಾನೇಕ ಕ್ರಿಸ್ತನ ಅನುಯಾಯಿಗಳ ತ್ಯಾಗ ಬಲಿದಾನದ ನಂತರ ಕ್ರೈಸ್ತ ಧರ್ಮವು ಒಡಮೂಡಿತ್ತು. ಅದೂ ಕೂಡಾ ಕ್ರಮೇಣ ಪುರೋಹಿತ ಮತ್ತು ಪ್ರಭುತ್ವದವರ ಬಳಕೆಗೆ ಸಲಕರಣೆಯಾಗಿಬಿಟ್ಟಿತು. ಅರೇಬಿಯಾದ ಮಕ್ಕಾದಲ್ಲಿರುವ ಕಾಬಾ ಮಂದಿರದ ಮೇಲೆ ಕ್ರೈಸ್ತ ಅರಸರ ದಾಳಿಯ ಯೋಜನೆ ಇದಕ್ಕೊಂದು ನಿದರ್ಶನ.
ಅರಬರಲ್ಲಿನ ಅವ್ಯವಸ್ಥೆ
ಅರಬರಲ್ಲಿಯೇ ಹೊಂದಾಣಿಕೆ ಇರಲಿಲ್ಲ. ಭಿನ್ನ ಕುಲಗಳ ಮತ್ತು ಬುಡಕಟ್ಟುಗಳ ನಡುವೆ ಸಂಘರ್ಷ ತುಂಬಾ ಸಾಮಾನ್ಯವಾಗಿತ್ತು. ಮೂರ್ತಿ ಪೂಜೆಗಳು ವ್ಯಾಪಕವಾಗಿದ್ದವು. ಮೌಢ್ಯವೋ ಮುಗಿಲು ಮುಟ್ಟಿತ್ತು. ಯಾವ ನೈತಿಕತೆಯೂ ಇಲ್ಲದೇ ಜನರು ಕುಲಗಳ ನೆಪದಲ್ಲಿ, ಗೋತ್ರಗಳ ನೆಪದಲ್ಲಿ ಒಗ್ಗೂಡಿಕೊಂಡು ಬಡಿದಾಡಿಕೊಂಡು ಇದ್ದರು. ಹಿಂದೆ ಹೆಣ್ಣು ಮಕ್ಕಳನ್ನು ಉಳಿಸಿ, ಮುಂದೆ ಗಟ್ಟಿಗರಾದಾಗ ಹೋರಾಡಬಹುದೆಂದು ಗಂಡುಮಕ್ಕಳ ಹತ್ಯೆಗಳನ್ನು ಮಾಡುತ್ತಿದ್ದರು.
ಆದರೆ, ಆಗ ಅರೇಬಿಯಾದಲ್ಲಿ ಹೆಣ್ಣು ಮಕ್ಕಳನ್ನೂ ಕೂಡಾ ಜೀವಂತವಾಗಿ ಹೂಳುವಷ್ಟು ನೈತಿಕವಾಗಿ ಅವನತಿಯನ್ನು ಹೊಂದಿದ್ದರು. ಇಂತಹ ಸಮಯದಲ್ಲಿ ನವಸಮಾಜದ ನಿರ್ಮಾಪಕ ಬೇಕಾಗಿತ್ತು. ನೈತಿಕ ತಳಹದಿಯ ಮೇಲೆ ಆದರ್ಶ ಸಮಾಜದಲ್ಲಿ ಬಾಳುವುದಕ್ಕೆ ಮತ್ತೆ ಒಂದು ಧರ್ಮವನ್ನು ಅಥವಾ ಕ್ರಮವನ್ನು ರೂಪಿಸಬೇಕಿತ್ತು. ಬರೀ ಲೌಕಿಕವಾಗಿ ಮೇಲಿನ ಸ್ತರದಲ್ಲಿಯೇ ತಮ್ಮ ಬಾಳ್ವೆಗಳನ್ನು ಪೊಳ್ಳಾಗಿಸಿಕೊಂಡಿದ್ದು, ತಮ್ಮ ಸಹಜೀವಿಗಳಿಗೆ ಪೀಡೆಗಳಾಗುತ್ತಿದ್ದವರನ್ನು ಸರಿದಾರಿಗೆ ತರಲು ಅರಿವನ್ನು ನೀಡಬೇಕಿತ್ತು. ಆ ಕೆಲಸಕ್ಕೆ ನಿಂತವರು ಪ್ರವಾದಿ ಮುಹಮ್ಮದ್.
ಅಬ್ರಹಾಮನ ಸಮಾಜೋಧಾರ್ಮಿಕ ಪರಂಪರೆಯನ್ನು ಅವಲೋಕಿಸಿದ್ದ ಮುಹಮ್ಮದರಿಗೆ ಮೋಶೆಯ ಕಟ್ಟಳೆಯೂ ತಿಳಿದಿತ್ತು, ಯೇಸುವಿನ ಬಲಿದಾನದ ಅರಿವೂ ಇತ್ತು. ಅವುಗಳೆಲ್ಲವೂ ಅವರ ನಂತರದ ಕಾಲದಲ್ಲಿ ಹೇಗೆ ಹಳ್ಳ ಹಿಡಿಯಲಾರಂಭಿಸಿದ್ದವು ಎಂಬುದರ ಬಗ್ಗೆಯೂ ತಿಳುವಳಿಕೆ ಸ್ಪಷ್ಟವಾಗಿಯೇ ಇತ್ತು. ಇಷ್ಟು ನಮಗೆ ಅರ್ಥವಾಗಬೇಕು. ಮೋಶೆಯ ನಿಬಂಧನೆಗಳು ಪ್ರಾಮಾಣಿಕವಾಗಿ ಮತ್ತು ತಾತ್ವಿಕವಾಗಿ ಯಶಸ್ವಿಯಾಗಿದ್ದರೆ ಯೇಸುವಿನ ಅಗತ್ಯವಿರಲಿಲ್ಲ.
ಹೋಗಲಿ ಯೇಸುವಿನ ಬಲಿದಾನವನ್ನು ಮುಂದಿಟ್ಟುಕೊಂಡು ಮಹೋದ್ದೇಶದಿಂದ ಪೌಲನೇ ಮೊದಲಾದ ತ್ಯಾಗವೀರರು ರೂಪಿಸಿದ ಕ್ರೈಸ್ತ ಧರ್ಮವು ಪುರೋಹಿತ ಮತ್ತು ಪ್ರಭುತ್ವದ ಸ್ವಾರ್ಥಕ್ಕೆ ಬಳಕೆಯಾಗದಿದ್ದರೆ ಪ್ರವಾದಿ ಮುಹಮ್ಮದರೂ ಮತ್ತವರ ಪೂರ್ವಜರು ದೀನ್ ಎಂಬುದನ್ನು ಕನವರಿಸುವ ಅಗತ್ಯವಿರುತ್ತಿರಲಿಲ್ಲ. ಸತ್ಯವು ಯಾವುದೆಂದು ಅಂತರಂಗದಿಂದಲೇ ಅರಿತು ವಿದೇಯವಾಗುವುದು ಮತ್ತು ಅದನ್ನು ತಪ್ಪದಂತೆ ರೂಪಿಸಿಕೊಳ್ಳುವ ಕ್ರಮ ಅಥವಾ ದಾರಿಯನ್ನೇ ದೀನ್ ಎಂದು ಅರ್ಥೈಸಿಕೊಳ್ಳೋಣ.
ಮುಹಮ್ಮದ್ ಅವರ ಕಾಲದ ಸಮಾಜೋಧಾರ್ಮಿಕ ಅವ್ಯವಸ್ಥೆಗಳು ಮತ್ತು ಮನುಷ್ಯರ ಬಾಳ್ವೆಗೆ ಮಾರಕವಾಗಿರುವಂತಹ ಅತ್ಯಂತ ಕೆಟ್ಟ ಮತ್ತು ಕ್ರೂರವಾದಂತಹ ಸಂಘರ್ಷಗಳು ಅವರನ್ನು ಮತ್ತೊಮ್ಮೆ ನವಸಮಾಜವನ್ನು ಕನವರಿಸುವಂತಾಯಿತು. ಎಲ್ಲಾ ಅಸಮಾನತೆ, ವೈಪರಿತ್ಯ, ಅಭದ್ರತೆ, ತಾರತಮ್ಯ, ಕ್ರೂರವಾದ ಮೌಢ್ಯ; ಇತ್ಯಾದಿಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತು ಜನರಿಗೆ ದಾರಿಯನ್ನು ತೋರಲು ಸಿದ್ಧವಾದರು. ಅದೇ ಕುರಾನಿನ ಅವತರಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


