ಸಿನಿ ಸುದ್ದಿ
HapPy BiRtHdAy | ‘ಹಾಸ್ಯ ಬ್ರಹ್ಮ ನರಸಿಂಹ ರಾಜು’ ಅವರ ಬಗ್ಗೆ ನಿಮಗಿಷ್ಟು ತಿಳಿದಿರಲಿ

ಡಾ.ರಾಜ್ ಕುಮಾರ್ ಅವರ ಕಾಲ್ ಶೀಟ್ ಗಿಂತಲೂ ಮೊದಲು ನರಸಿಂಹರಾಜು ಅವರ ಕಾಲ್ ಶೀಟ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದ ಕಾಲವೊಂದಿತ್ತು. ಅವರೇ ನಮ್ಮ ತಿಳಿ ಹಾಸ್ಯದ ಬ್ರಹ್ಮ, ಕರ್ನಾಟಕದ ಚಾಪ್ಲಿನ್ ನರಸಿಂಹರಾಜು ಅವರಿಗೆ ಜನ್ಮದಿನದ ಶುಭಾಶಯಗಳು.
ನಮ್ಮ ನಾಡು ಕಂಡ ಶ್ರೇಷ್ಠರಲ್ಲಿ ಶ್ರೇಷ್ಠ ಕಲಾವಿದರಲ್ಲೊಬ್ಬರಾದ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಜನ್ಮದಿನ ಜುಲೈ 24ರಂದು. ಅವರು ಜನಿಸಿದ ವರ್ಷ 1926. ನಾವು ಮೆಚ್ಚಿರುವ ಯಾವುದೇ ಶ್ರೇಷ್ಠ ನಟ ನಟಿಯರಿರಲಿ, ಅವರು ನಟಿಸಿರುವ ನೂರಿನ್ನೂರು ಚಿತ್ರಗಳು ಇರುತ್ತವೆಂದರೆ ಅವರ ಬೆರಳೆಣಿಕೆಯಷ್ಟು ಪಾತ್ರಗಳು ನಮ್ಮನ್ನು ಸೆಳೆದಿರುತ್ತವೆ. ಇಲ್ಲವೇ ನಾವು ಅವರ ಅಪಾರ ಅಭಿಮಾನಿಗಳಾಗಿರುತ್ತೇವೆ ಎಂದುಕೊಂಡರೂ ಆ ಸಂಖ್ಯೆ ಇನ್ನೊಂದಷ್ಟು ಎಂಬಂತಿರಬಹುದು ಅಷ್ಟೇ. ಆದರೆ ನರಸಿಂಹರಾಜು ಅವರ ಬಗ್ಗೆ ಆ ಮಾತು ಅನ್ವಯಿಸುವುದಿಲ್ಲ. ಅವರ ಪ್ರತೀ ಪಾತ್ರವೂ ಜನತೆಗೆ ಪ್ರಿಯವೇ.
ನರಸಿಂಹರಾಜು ಅವರ ಬಗ್ಗೆ ಅವರ ಪುತ್ರಿ ಸುಧಾನರಸಿಂಹರಾಜು ಅವರು ದೂರದರ್ಶನದಲ್ಲಿ ಕಾರ್ಯಕ್ರಮ ಮಾಡಿದಾಗ ಸಂದರ್ಶನದಲ್ಲಿ ಭಾಗವಹಿಸಿದ್ದ ವರನಟ ರಾಜ್ ಕುಮಾರ್ ಅವರು ಹೇಳಿದ್ದ ಮಾತು ನೆನಪಾಗುತ್ತಿದೆ, “ಅಂದಿನ ದಿನದಲ್ಲಿ ನಿರ್ಮಾಪಕ ನಿರ್ದೇಶಕರು, ಚಲನಚಿತ್ರಗಳಿಗೆ ಮೊದಲು ನರಸಿಂಹರಾಜು ಅವರ ದಿನಗಳನ್ನು ಗುರುತುಪಡಿಸಿಕೊಂಡು ಉಳಿದ ನಮ್ಮಂತಹ ಕಲಾವಿದರನ್ನು ಸಂಪರ್ಕಿಸುತ್ತಿದ್ದರು“. ರಾಜ್ ಅವರು ಹೇಳಿದ ಮಾತು ನರಸಿಂಹರಾಜು ಅವರು ಗಳಿಸಿದ ಶ್ರೇಷ್ಠತೆಗೆ ಮತ್ತು ಅಂತಹ ಮಾತನ್ನು ಹೇಳುವ ರಾಜ್ ಅವರ ಸಜ್ಜನತೆಯ ಶ್ರೇಷ್ಠತೆಗೆ ಕನ್ನಡಿ ಹಿಡಿದಂತಿದೆ. ರಾಜ್ ಕುಮಾರ್ ಮತ್ತು ನರಸಿಂಹರಾಜು ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ಅದ್ಭುತಗಳಲ್ಲೊಂದು. ಈ ಜೋಡಿಗೆ ಬಾಲಣ್ಣ ಅವರನ್ನು ಕೂಡಾ ಸೇರಿಸಬಹುದು.
ಅಂದಿನ ದಿನದಲ್ಲಿ ಬಾಲಕೃಷ್ಣ ಮತ್ತು ನರಸಿಂಹರಾಜು ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಪೂರಕವಾಗಿ ಅಭಿನಯಿಸುತ್ತಿದ್ದುದು ನೆನಪಾಗುತ್ತದೆ. ಬಾಲಣ್ಣ ಅವರದು ರೇಗುವ ಅಸಹನತೆಯ ಪಾತ್ರವೋ, ಕೆಲವೊಂದು ಭಾರೀ ಕೃತ್ರಿಮ ಪಾತ್ರವೋ ಆಗಿರಬಹುದಾದರೂ ನರಸಿಂಹರಾಜು ಅವರ ಪಾತ್ರ ಮಾತ್ರ ಸರಳ ಸಜ್ಜನಿಕೆಯ ನೆರಳಲ್ಲೇ ಮೂಡುವ ಪೆದ್ದನದೋ, ಪೆಚ್ಚನದೋ, ತುಂಟನದೋ, ಮೂರ್ಖನದೋ ಆದ, ಹಾಗೆ ನಾವಾಗಲು ಇಷ್ಟಪಡದಿದ್ದರೂ ಇಂಥಹ ಪಾತ್ರ ಯಾವಾಗಲೂ ನಮ್ಮ ಮುಂದೆ ಇರಬೇಕು ಎನಿಸುವಂತೆ ಆಪ್ತವಾಗಿರುತ್ತಿದ್ದ ಸುಂದರತೆಯ ಹೃದ್ಭಾವದ ಸೃಜನಸೃಷ್ಠಿಗಳು. ನರಸಿಂಹರಾಜು ಅವರ ಹಿಂದೆ ಹಾಗೂ ಅವರ ನಂತರ ಅನೇಕ ಕಲಾವಿದರು ಚಿತ್ರರಂಗದಲ್ಲಿ ಮೂಡಿದ್ದಾರೆ. ಹೀಗೆ ಮೂಡಿದ ಹಲವಾರು ಕಲಾವಿದರು ನಮಗೆ ಇಷ್ಟವೂ ಆಗಿದ್ದಾರೆ ನಿಜ. ಆದರೆ ನರಸಿಂಹರಾಜು ಅಂತಹ ಆಳವಾದ ಆಪ್ತತೆ ಮೂಡಿಸಿದ ನಟ ಮಾತ್ರ ಚಾರ್ಲಿ ಚಾಪ್ಲಿನ್ ಹೊರತಾಗಿ ಅವರೊಬ್ಬರೇ.
ಕನ್ನಡದಲ್ಲಿ ಹೊಸಬಗೆಯ ಪ್ರಯೋಗ, ವೈವಿಧ್ಯಪೂರ್ಣ ಕಥೆಗಳು, ಯಶಸ್ವೀ ಚಿತ್ರಗಳು ಹೊರಬಂದದ್ದು ಕಳೆದ ಶತಮಾನದ ಐದು, ಆರು ಮತ್ತು ಏಳನೆಯ ದಶಕಗಳಲ್ಲಿ. ಈ ಅವಧಿ ಕನ್ನಡ ಚಿತ್ರರಂಗದ ಸುವರ್ಣ ಯುಗ. ಈ ಯುಗದಲ್ಲಿ ರಾರಾಜಿಸಿದ ನರಸಿಂಹರಾಜು, 1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ`ದಿಂದ ಆರಂಭವಾಗಿ 1979ರವರೆಗಿನ 25 ವರ್ಷಗಳಲ್ಲಿ 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯನಟರಾಗಿ ಬೆಳಗಿದವರು.
ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ.ಬಿ.ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಂಡ ನರಸಿಂಹರಾಜು ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭವಾಯಿತು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ಸಹಜವಾಗಿತ್ತು. ರಂಗಮಂಚದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರ ನಗೆಹೊನಲು ಹರಿಯುತ್ತಿತ್ತು.
ನರಸಿಂಹರಾಜು ಅವರು ಪೌರಾಣಿಕ ಪಾತ್ರಗಳನ್ನು – ವಿಶ್ವಾಮಿತ್ರ, ರಾಮ, ಕೆಲವೊಮ್ಮೆ ರಾವಣ. ಭರತ, ಇನ್ನು ಕೆಲವು ಸಲ ಲಕ್ಷ್ಮಿಯ ಪಾತ್ರವನ್ನೂ ನಿರ್ವಹಿಸುತ್ತಿದ್ದರು. ಆಗಲೇ ಜನಪ್ರಿಯತೆ ಪಡೆದಿದ್ದ ‘ಬೇಡರ ಕಣ್ಣಪ್ಪ` ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ನರಸಿಂಹರಾಜು ತುಂಬಾ ಜನಪ್ರಿಯತೆ ಪಡೆದರು.
`ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ`, `ಎಡತೊರೆಯ ಕಂಪೆನಿ`, `ಹಿರಣ್ಣಯ್ಯನವರ ಮಿತ್ರಮಂಡಲಿ`, `ಭಾರತ ಲಲಿತ ಕಲಾ ಸಂಘ`, ಬೇಲೂರಿನ `ಗುಂಡಾ ಜೋಯಿಸರ ಕಂಪೆನಿ`, ಗುಬ್ಬಿಯ `ಚೆನ್ನಬಸವೇಶ್ವರ ನಾಟಕ ಕಂಪೆನಿ`ಯ ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ 27 ವರ್ಷಗಳನ್ನು ನರಸಿಂಹರಾಜು ಕಳೆದಿದ್ದರು.
ರಾಜ್‌ಕುಮಾರ್ ಅವರೊಂದಿಗೆ `ಬೇಡರ ಕಣ್ಣಪ್ಪ` ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ನಂತರವೂ ಅವರು ರಂಗಭೂಮಿಯನ್ನು ಕಡೆಗಣಿಸಲಿಲ್ಲ. ಬಾಲನಟನಾಗಿ ರಂಗ ಪ್ರವೇಶಿಸಿದ ನರಸಿಂಹರಾಜು ಬೆಳೆಯುತ್ತಿದ್ದಂತೆ ದೊಡ್ಡವರ ಪಾತ್ರಗಳಿಗೆ ಭಡ್ತಿ ಪಡೆದರು. ತಮ್ಮ ವಿಶಿಷ್ಟ ಅಭಿನಯದಿಂದ ಹಾಸ್ಯನಟರಾಗಿ ರೂಪುಗೊಂಡರು. ರಂಗಭೂಮಿಯಲ್ಲಿ ಪಡೆದ ಎಲ್ಲ ಬಗೆಯ ಅನುಭವ, ಅವರಿಗೆ ಸಿನಿಮಾ ಜಗತ್ತಿನಲ್ಲಿ ಉಪಯೋಗಕ್ಕೆ ಬಂದಿತು. ಚಿತ್ರರಂಗದ ಪ್ರವೇಶಕ್ಕೆ ನಿಮಿತ್ತವಾದ ‘ಬೇಡರ ಕಣ್ಣಪ್ಪ`ದಲ್ಲಿನ ಕಾಶಿಯ ಪಾತ್ರ ಅವರಿಗೆ ಲೀಲಾಜಾಲವಾಗಿತ್ತು. ‘ಬೇಡರ ಕಣ್ಣಪ್ಪ` ನಾಟಕದಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಅವರು ಕಾಶಿಯ ಪಾತ್ರ ವಹಿಸಿದ್ದರು. ಪ್ರತಿ ಪ್ರದರ್ಶನದಲ್ಲಿಯೂ ಅವರು ತೋರಿಸುತ್ತಿದ್ದ ತನ್ಮಯತೆ, ಬೆರಗು ಮೂಡಿಸುವಂತಿತ್ತು ಎಂದು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಾಸ್ಟರ್ ಹಿರಣ್ಣಯ್ಯ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.
ಶ್ರೇಷ್ಠ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ನರಸಿಂಹರಾಜು ಅವರ ಪೀಚು ಶರೀರ, ವಿಶಿಷ್ಟ ಬಗೆಯ ಹಾವಭಾವಗಳ ಮ್ಯಾನರಿಸಂಗಳು ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಅವರ ಚಿತ್ರಗಳನ್ನು ಟೆಂಟ್‌ಗಳಲ್ಲಿ ನೋಡುತ್ತಿದ್ದ ಗ್ರಾಮೀಣರು, ಉಬ್ಬು ಹಲ್ಲಿನ ತಮ್ಮ ಮಿತ್ರರನ್ನು ‘ನರಸಿಂಹರಾಜು` ಎಂದೇ ಕರೆಯುವಷ್ಟು ದಟ್ಟ ಪ್ರಭಾವವನ್ನು ನರಸಿಂಹರಾಜು ಮೂಡಿಸಿದ್ದರು. ಇದು ಜನಪದ ನಾಯಕನೊಬ್ಬ ಬೀರಿದ ಪ್ರಭಾವದಂತೆ ತೋರುತ್ತದೆ.
ನರಸಿಂಹ ರಾಜು ಅವರ ಪ್ರತೀ ಪಾತ್ರವೂ ನಮಗೆ ಪ್ರಿಯವೇ. ಅದರಲ್ಲಿ ಯಾವ ಯಾವ ಪಾತ್ರ ಇಷ್ಟ ಎಂಬುದು ಹೇಳಲಾಗದ ಮಾತು. ನಾವು ಅವರ ಎಷ್ಟು ಪಾತ್ರಗಳನ್ನು ನೋಡಿದ್ದೇವೆ ಎಂಬುದಷ್ಟೇ ನಮಗೆ ಹೇಳಲು ಸಾಧ್ಯವಿರುವಂತದ್ದು. ಏಕೆಂದರೆ, ಅವರ ಪ್ರತೀ ಪಾತ್ರ ನಿರ್ವಹಣೆಯೂ ನಮಗೆ ಇಷ್ಟವಾಗಿರುವಂತದ್ದೆ. ‘ಬೇಡರ ಕಣ್ಣಪ್ಪ’ದಿಂದ ಪ್ರಾರಂಭಗೊಂಡು ಅವರು ನಟಿಸಿರುವ ಪಾತ್ರಗಳ ವೈವಿಧ್ಯ ಅದರಲ್ಲಿ ಅವರು ಹರಿಸಿರುವ ಹಾಸ್ಯವೆಂಬ ಚೈತನ್ಯದ ವೈವಿಧ್ಯ ನಿತ್ಯ ಸ್ಮರಣೀಯವಾದುದು. ಬಹುಷಃ ನರಸಿಂಹರಾಜು ಅವರೊಬ್ಬರಿಲ್ಲದಿದ್ದರೆ ನಾವು ನೋಡಿದ ಚಿತ್ರಗಳು ಹೇಗಿದ್ದಿರಬಹುದಿತ್ತು ಎಂದು ಊಹಿಸುವುದು ಕೂಡಾ ಕಷ್ಟ ಸಾಧ್ಯ.
‘ಸ್ಕೂಲ್ ಮಾಸ್ಟರ್’ ಚಿತ್ರದ ಭಾಮೆಯ ನೋಡಲು ತಾ ಬಂದ ಹಾಡಿನಲ್ಲಿ ‘ಕಣ್ ಸನ್ನೆಯಲೇ ಕನ್ಯೆಯ ಮನ ಸೆಳೆದ’ ಎಂದು ತಾನು ನೋಡಲು ಬಂದ ಹುಡುಗಿ ಹಾಡಿದರೆ ‘ಆ ಚಿನ್ಮಯ ಮೂರುತಿ ಶ್ರೀಗೋವಿಂದ’ನ ಸ್ಥಾನದಲ್ಲಿ ಕುಳಿತ ಈ ಪೆಚ್ಚು ನರಸಿಂಹರಾಜು ಪಿಳಿ ಪಿಳಿ ಕಣ್ಸನ್ನೆ ಮಾಡಿದ್ದು ಕೂಡಾ ಅಷ್ಟೇ ಮನಮೋಹಕವಾದದ್ದು. ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ನರಸಿಂಹರಾಜು ಅವರಂತೆ ತೆನಾಲಿ ರಾಮಕೃಷ್ಣನಾಗಿ ಮತ್ತ್ಯಾರೂ ಅಭಿನಯಿಸಿರಲಾರರು. ‘ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ಉದಯ್ ಕುಮಾರ್ ಅವರ ಶ್ರೇಷ್ಠ ಸಿಡುಕು ಮತ್ತು ರಾಜ್ ಕುಮಾರ್ ಅವರ ಸರ್ವೋತ್ಕೃಷ್ಟ ಸೌಮ್ಯತೆಯ ನಡುವೆ ಕಪಿ ಚೇಷ್ಟೆಯ, ಆದರೆ ಕಡೆಯಲ್ಲಿ ಅಷ್ಟೇ ಗೌರವಯುತವಾಗಿ ಪರಿವರ್ತಿತವಾಗುವ ನಕ್ಷತ್ರಿಕನಾದ ನರಸಿಂಹರಾಜು ಅಭಿನಯ ಮತ್ತೊಂದು ಶ್ರೇಷ್ಠ ಮಜಲಿನದು. ಜೊತೆಗೆ ಆ ಪಾತ್ರ ಚಿತ್ರದಲ್ಲಿನ ಸಶಕ್ತ ಕೊಂಡಿಯಾಗಿ ಇಡೀ ಚಿತ್ರವನ್ನೇ ತನ್ನ ಹಿಡಿತದಲ್ಲಿ ನಡೆಸುವಷ್ಟು ಸಮರ್ಥವಾದದ್ದು ಕೂಡಾ. ‘ಅಂಡ ಪಿಂಡ ಬ್ರಹ್ಮಾಂಡ’ ಎಂದು ಮೂರ್ಖನಾಗಿ ಮಾತನಾಡಿ ‘ನಿನ್ನ ಪಿಂಡ’ ಎಂದು ವಿಶ್ವಾಮಿತ್ರರಿಂದ ಬೈಸಿಕೊಳ್ಳುವುದಾಗಲಿ, ‘ಏನಿದೀ ಗ್ರಹಚಾರವೋ’ ಎಂದು ಹರಿಶ್ಚಂದ್ರನ ಪ್ರಾಣ ತಿನ್ನುವುದಾಗಲೀ, ‘ಅಪ್ಪಾ ನನ್ನನ್ನು ಕ್ಷಮಿಸಿ ಬಿಡಪ್ಪ’ ಎಂದು ಹರಿಶ್ಚಂದ್ರನ ಕ್ಷಮಾಪಣೆ ಯಾಚಿಸುವ ಧೈನ್ಯತೆಯಾಗಲೀ, ಕಡೆಗೆ ಗುರು ವಿಶ್ವಾಮಿತ್ರರಿಗೇ “ಗುರುಗಳೇ ಒಂದು ಮಾತು ಮಾತ್ರ ನನ್ನ ಅನುಭಾವಕ್ಕೆ ಬಂತು, ಈ ಅಂಡ ಪಿಂಡ ಬ್ರಹ್ಮಾಂಡದಲ್ಲಿ ಅವರರವರ ಕರ್ಮ ಅವರದು” ಎಂದು ಹೇಳುವ ವೇದಾಂತ’ವಾಗಲಿ ಚಿತ್ರರಂಗದ ನಾನು ಕಂಡ ಪಾತ್ರಗಳಲ್ಲಿ ನನ್ನನ್ನು ಅತೀವವಾಗಿ ಹಿಡಿದಿಟ್ಟ ಒಂದು ಅದಮ್ಯತೆ. ಸಂಧ್ಯಾರಾಗ, ವೀರ ಕೇಸರಿ, ರತ್ನ ಮಂಜರಿ, ಕಣ್ತೆರೆದು ನೋಡು, ರಾಯರ ಸೊಸೆ ಹೀಗೆ ನೀವು ಅವರ ಇನ್ನೂರೈವತ್ತು ಚಿತ್ರಗಳಲ್ಲಿ ನೋಡಿರುವಷ್ಟನ್ನೂ ಒಂದಕ್ಕೊಂದು ಪೋಣಿಸಿಕೊಂಡು ಹೋಗಬಹುದು.
ಬಹುಷಃ ಅಂದಿನ ದಿನದಲ್ಲಿ ನರಸಿಂಹರಾಜು ಅವರನ್ನೇ ಕೇಂದ್ರವಾಗಿಸಿ ಚಾರ್ಲಿ ಚಾಪ್ಲಿನ್ ಸಿನಿಮಾದಂತೆ ಒಂದು ಸಿನಿಮಾ ಯಾಕೆ ಸೃಷ್ಟಿಯಾಗಲಿಲ್ಲ ಎಂದು ನನಗೆ ಆಗಾಗ ಅನ್ನಿಸಿದೆ. ಆದರೆ ಕನ್ನಡದ ಕೆಲವೊಂದು ಹಾಸ್ಯ ಕಲಾವಿದರು ಹೀರೋ ಆಗಲು ಹೋಗಿ ಚಿತ್ರ ನಿರ್ಮಾಣದ ಸೋಲಿನಲ್ಲಿ ತಮ್ಮನ್ನೂ ಧನಹೀನರನ್ನಾಗಿಸಿಕೊಂಡು ತಮ್ಮಲ್ಲಿನ ಸಾಮರ್ಥ್ಯವನ್ನೂ ವ್ಯರ್ಥಗೊಳಿಸಿಕೊಂಡು ಪ್ರೇಕ್ಷಕರಿಗೆ ತಲೆ ನೋವು ತಂದಿರುವುದನ್ನು ನೆನೆಸಿಕೊಂಡರೆ ನಮಗೆ ನರಸಿಂಹರಾಜು ಅವರು ಇಷ್ಟವಾಗಿದ್ದು ಅವರು ಹಾಸ್ಯಪಾತ್ರವಾಗಿಯೇ ಉಳಿದದ್ದರಿಂದ ಎಂದು ಕೂಡಾ ಅನಿಸುತ್ತದೆ. ನರಸಿಂಹ ರಾಜು ಅವರು ತಾವೇ ನಿರ್ಮಿಸಿದ ‘ಪ್ರೊಫೆಸರ್ ಹುಚ್ಚೂರಾಯ’ ಚಿತ್ರದಲ್ಲಿ ಕೂಡಾ ತಮ್ಮನ್ನೇ ತಾವು ವಿಜ್ರಂಭಿಸಿಕೊಳ್ಳದೆ ಹಲವಾರು ಸಾಮಾಜಿಕ ನಿಲುವುಗಳ ಒಂದು ಸುಂದರ ಕಥೆ ಹೆಣೆದು ಅದರಲ್ಲಿ ತಾವೊಂದು ಉತ್ತಮ ಹೃದಯವಂತ ವ್ಯಕ್ತಿಯಾಗಿ, ಮತ್ತು ತಮ್ಮ ಸಾಮರ್ಥ್ಯದ ಕುರುಹಾದ ಹಾಸ್ಯ ಲೇಪನದ ಪಾತ್ರವಾಗಿ ಮಾತ್ರ ಮೂಡಿದ್ದು, ನರಸಿಂಹರಾಜು ತಮ್ಮನ್ನು ಎಂದೂ ಅಗತ್ಯಕ್ಕಿಂತ ತೋರಿಕೊಳ್ಳದೆ ತಮ್ಮ ಕಲಾವಿದನನ್ನು ಮಾತ್ರ ಹೊರತಂದ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.
“ನಗಬೇಕು ನಗಿಸಬೇಕು, ಇದೇ ನನ್ನ ಧರ್ಮ ನಗಲಾರೆ ಅಳುವೇ ಎಂದರೆ ಅದೇ ನಿನ್ನ ಕರ್ಮ” ಎಂಬುದು ನರಸಿಂಹ ರಾಜು ಅವರ ಮೇಲೆ ಚಿತ್ರಿತವಾದ ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ಗೀತೆ. ಇದನ್ನು ಚಾಚೂ ತಪ್ಪದೆ ತಮ್ಮ ಬಾಳಿನ ತಿರುಳನ್ನಾಗಿ ಮಾಡಿಕೊಂಡವರು ನರಸಿಂಹರಾಜು. ಅವರು ಯಾರ ಬಗ್ಗೆ ಕೆಟ್ಟ ಮಾತನ್ನು ಆಡಿದ್ದಾಗಲೀ, ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಿದ್ದಾಗಲೀ ನಾವೆಂದು ಮಾಧ್ಯಮದಲ್ಲಿ ಓದಲಿಲ್ಲ.
ಕೆಲವು ವರ್ಷ ಮದ್ರಾಸಿನಲ್ಲಿ ನೆಲೆಸಿದ್ದ ನರಸಿಂಹರಾಜು ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆಗಳು ಬೆಂಗಳೂರಿನಲ್ಲಿ ಆರಂಭವಾದಾಗ ಅವರು ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿದರು. ಮಕ್ಕಳು ಮೊಮ್ಮಕ್ಕಳೊಂದಿಗೆ ನೆಲೆಸಿದ್ದ ಕುಟುಂಬವತ್ಸಲ ನರಸಿಂಹರಾಜು, ತಮ್ಮ 56ನೇ ವಯಸ್ಸಿನಲ್ಲಿ 1979ರ ಜುಲೈ 20 ರಂದು ಎಂದಿನಂತೆ ರಾತ್ರಿ ಉಪಹಾರ ಸೇವಿಸಿ ಮಲಗಿದ್ದರು. ಮುಂಜಾನೆ 4.30ರ ವೇಳೆಗೆ ತೀವ್ರ ಹೃದಯಾಘಾತದಿಂದ ನಿಧನರಾದರು.
ನರಸಿಂಹರಾಜು ಅವರು ಕನ್ನಡ ಚಿತ್ರರಂಗದ ಸುವರ್ಣ ಕಾಲ ಎನ್ನಬಹುದಾದ ಅರವತ್ತು ಎಪ್ಪತ್ತರ ದಶಕದಲ್ಲಿ ಹಾಸ್ಯಚಕ್ರವರ್ತಿಯಾಗಿ ಕನ್ನಡಿಗರನ್ನು ರಂಜಿಸಿದ್ದರು. ಇಂತಹ ನಟನಾ ಚಕ್ರವರ್ತಿಗೆ ಒಮ್ಮೆಯೂ ರಾಜ್ಯ ಸರ್ಕಾರದ ಪ್ರಶಸ್ತಿ ಕೂಡಾ ಬರಲಿಲ್ಲ. ಅವರ ಹೆಸರಿನಲ್ಲಿ ಯಾವೊಂದು ಸ್ಮಾರಕ, ರಸ್ತೆ, ಕಟ್ಟಡಗಳು ಮೂಡಲಿಲ್ಲ. ಆದರೆ ಅವರು ಚಿತ್ರರಸಿಕರ ಹೃದಯದಲ್ಲಿ ಮೂಡಿರುವಷ್ಟು ಉಳಿದವರು ನಿಲ್ಲಬಲ್ಲರು ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಇದನ್ನೇ ಇರಬೇಕು ವಚನಕಾರರು ಹೇಳಿರುವುದು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂದು. ನರಸಿಂಹ ರಾಜು ಅಂತಹ ತಾನೂ ನಕ್ಕು, ಇತರರನ್ನೂ ನಗೆಗಡಲಿನಲ್ಲಿ ತೇಲಿಸಿದ ಆತ್ಮಉಂಟೆ? ಈ ಮಹಾನ್ ಚೇತನಕ್ಕೆ ನಮ್ಮ ಗೌರವದ ಪ್ರೀತಿಯ ಆತ್ಮೀಯ ನಮನ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
777 ಚಾರ್ಲಿ ಚಿತ್ರಕ್ಕೆ ‘ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ’

ಸುದ್ದಿದಿನ ಡೆಸ್ಕ್ : 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2021 ಪ್ರಕಟವಾಗಿದ್ದು, ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಲಭಿಸಿವೆ.
ನಟ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಜೇಕಬ್ ವರ್ಗೀಸ್ ನಿರ್ದೇಶನದ ಸಾಕ್ಷ್ಯಚಿತ್ರ ಆಯುಷ್ಮಾನ್ಗೆ ಅತ್ಯುತ್ತಮ ಅನ್ವೇಷಣಾ ಚಿತ್ರ ಪ್ರಶಸ್ತಿ ಲಭಿಸಿದೆ.
ಅನಿರುಧ್ ಜತ್ಕರ್ ನಿರ್ದೇಶನದ ಬಾಳ ಬಂಗಾರ ಸಾಕ್ಷ್ಯಚಿತ್ರ ತೀರ್ಪುಗಾರರ ವಿಶೇಷ ಉಲ್ಲೇಖ ಪಡೆದಿದೆ. ಸಿನಿಮಾ ವಿಮರ್ಶೆ ವಿಭಾಗದಲ್ಲಿ ಹಿರಿಯ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ ತೀರ್ಪುಗಾರರ ವಿಶೇಷ ಉಲ್ಲೇಖಕ್ಕೆ ಭಾಜನರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶ್ರೀಲಂಕಾದಲ್ಲಿ ಕನ್ನಡ ಚಲನಚಿತ್ರೋತ್ಸವ

ಸುದ್ದಿದಿನ, ಕೊಲೊಂಬೋ : ಶ್ರೀಲಂಕಾದ ರಾಜಧಾನಿ ಕೊಲೊಂಬೋದಲ್ಲಿನ ತರಂಗಿಣಿ ಸಿನಿಮಾ ಹಾಲ್ನಲ್ಲಿ ಏರ್ಪಡಿಸಿದ್ದ ಕನ್ನಡ ಚಲನಚಿತ್ರೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಗೋಪಾಲ್ ಬಾಗ್ಳೆ, ಶ್ರೀಲಂಕಾದ ಬಹು ಮಾಧ್ಯಮ ಖಾತೆ ಸಚಿವ ಡಾ. ಬಂದೂಲ ಗುಣವರ್ಧನೆ ಹಾಗೂ ಸಂಸ್ಕೃತಿ ಖಾತೆ ಸಚೆವ ವಿಧುರವಿಕ್ರಮ ನಾಯಕ್ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ, ಕನ್ನಡ ಚಲನಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರ ಮಾತನಾಡಿದ ಸಚಿವ ಡಾ.ಗುಣವರ್ಧನೆ, ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ, ಚಲನಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಮನರಂಜನಾ ಮಾಧ್ಯಮವು ಅತ್ಯಂತ ಜನಪ್ರಿಯ ಮಾಧ್ಯಮವಾಗಿದ್ದು, ಪ್ರಾದೇಶಿಕ ಚಲಚಿನಚಿತ್ರಗಳು, ಅದರಲ್ಲಿಯೂ ಭಾರತದ ಚಲನಚಿತ್ರ ಸಂಸ್ಕೃತಿಯ ಜೊತೆಗೆ ದೇಶದ ಪರಂಪರೆ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುತ್ತಿದೆ. ಸಾಮಾಜಿಕ ವಲಯದಲ್ಲಿ ಪ್ರಾದೇಶಿಕ ಬಾಷೆಯಲ್ಲಿ ಬರುವ ಚಿತ್ರಗಳು, ಚಿತ್ರ ಪ್ರೇಮಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿಗಳಿಗೆ, ಪಠ್ಯಕ್ರಮದ ಭಾಗವಾಗಿ ಹಲವು ಪ್ರದೇಶಗಳಲ್ಲಿ ಅಧ್ಯಯನಕ್ಕೂ ಅನುಕೂಲವಾಗಿದೆ. ಇತ್ತೀಚೆಗೆ ಶ್ರಿಲಂಕಾದ ವಿದ್ಯಾರ್ಥಿಗಳು ಇದರ ಅನುಭವವನ್ನು ಪಡೆದುಕೊಳ್ಳಲು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾರ್ಗದರ್ಶನ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಶ್ರೀಲಂಕಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 250 ರಿಂದ 300 ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಕಳೆದ ವರ್ಷ ನಾಲ್ಕನೇ ಬಹುದೊಡ್ಡ ಕಾರ್ಯಗಾರ ಆಯೋಜಿಸಲಾಗಿತ್ತು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶ್ರೀಲಂಕಾ ವಿದ್ಯಾರ್ಥಿಗಳಿಗೆ, ಚಲನಚಿತ್ರರಂಗದ, ತರಬೇತಿ, ವೀಕ್ಷಣೆ ಹಾಗೂ ನಿರ್ಮಾಣದ ಬಗ್ಗೆ ಹಲವು ರೀತಿ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈ ವರ್ಷ ಅಮೆರಿಕ-ಅಮೆರಿಕ, ಇಷ್ಠಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಏನಿದು ವಿಚಿತ್ರ | ನಟಿಯ ಡೈವೋರ್ಸ್ ಫೋಟೋಶೂಟ್..!

ಸುದ್ದಿದಿನ ಡೆಸ್ಕ್ : ನಟಿ ಶಾಲಿನಿ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಜನಮನಗೆದ್ದಿದ್ದಾರೆ. ಮೊದಲ ಮದುವೆಯ ವಿಚ್ಛೇದನದ ನಂತರ ಆಕೆ ಮೊಹಮ್ಮದ್ ಎಂಬುವವರನ್ನು ಮದುವೆಯಾಗಿದ್ದರು. ಆ ದಾಂಪತ್ಯದಲ್ಲಿ ಹಲವು ಸಮಸ್ಯೆಗಳಿಂದ ವಿಚ್ಛೇದನ ಪಡೆದರು. ಅದನ್ನು ಸಂಭ್ರಮಿಸಲು ಫೋಟೋಶೂಟ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
ಮದುವೆಗೂ ಮುನ್ನ ತೆಗೆದಿರುವ ಫೋಟೋಶೂಟ್ಗಳು ಬಹಳಷ್ಟು ಬಂದಿವೆ. ಆದರೆ ವಿಚಿತ್ರ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಕ್ಕಾಗಿಯೇ ನಟಿ ಶಾಲಿನಿಫೋಟೋಗಳು ವೈರಲ್ ಆಗಿವೆ. ಡೈವೋರ್ಸ್ ಆಗಿದ್ದನ್ನೂ ಸಂಭ್ರಮಿಸುವ ಕಾರಣಕ್ಕಾಗಿ ಮಾಡಿದ ಈ ಫೋಟೋಶೂಟ್ ಈಗ ಹಲವರ ಗಮನ ಸೆಳೆದಿದೆ.
ಜೀ ತಮಿಳು ಶೋ ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಮಗಳೊಂದಿಗೆ ಶಾಲಿನಿ ಭಾಗವಹಿಸಿದ್ದರು. ಖುಷ್ಬು ಅಭಿನಯದ ಮೀರಾ ತಮಿಳು ಧಾರಾವಾಹಿಯಲ್ಲಿ ಕೂಡ ಆಕೆ ನಟಿಸಿದ್ದಾರೆ. ಈ ಧಾರಾವಾಹಿಯ ಮೂಲಕ ನಟಿ ಖುಷ್ಪು ಹಲವು ವರ್ಷಗಳ ನಂತರ ಕಿರುತೆರೆಯಲ್ಲಿ ನಟಿಸಿದ್ದಾರೆ.
ಮಹಿಳೆಯೊಬ್ಬರು ‘ಡೈವೋರ್ಸ್ಡ್’ ಎಂಬ ಫಲಕ ಹಿಡಿದ, ಪತಿಯೊಂದಿಗೆ ಇದ್ದ ಫೋಟೋದಲ್ಲಿನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸಿದ, ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದಂಥ ಫೋಟೋಗಳು ಈ ಫೋಟೋಶೂಟ್ನ ಪ್ರಮುಖ ಆಕರ್ಷಣೆ ಎನಿಸಿಕೊಂಡಿವೆ. ಅಲ್ಲದೆ, ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!’ ಎಂಬ ಫಲಕವನ್ನು ಹಿಡಿದು ಸಂತಸದಿಂದ ಬೀಗುವಂಥ ಫೋಟೋ ಮೂಲಕ ‘ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ’ ಎಂಬ ಸಂದೇಶವನ್ನೂ ಈಕೆ ಸಾರಿದ್ದಾರೆ.
ಶಾಲಿನಿ ಇನ್ಸ್ಟಾ ಅಕೌಂಟ್ ಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://instagram.com/shalu2626?igshid=YmMyMTA2M2Y=
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ12 hours ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ2 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ13 hours ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ
-
ದಿನದ ಸುದ್ದಿ1 hour ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ