Connect with us

ನೆಲದನಿ

ನುಡಿಯ ಒಡಲು – 01 : ನುಡಿಯೆಲ್ಲ ತತ್ವ ನೋಡಾ..!

Published

on

  • ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಲ್ಲಮನ ಈ ಮುಂದಿನ ವಚನವೊಂದರ ಮೂಲಕ ‘ನಮಗೆ ಬೇಕಾಗಿರುವ ಬದುಕಿನ ದಾರಿಗಳು’ ಎಂತಹವು? ಅಂತಹ ದಾರಿಯೊಂದನ್ನು ರೂಪಿಸಿಕೊಳ್ಳಲು ‘ನುಡಿ ಹೇಗೆ ಒತ್ತಾಸೆಯಾಗಬಲ್ಲದು’ ಎಂಬುದನ್ನು ಚರ್ಚಿಸುವುದು ಈ ಟಿಪ್ಪಣಿಯ ಗುರಿಯಾಗಿದೆ.

ಏಕೆಂದರೆ ಬದುಕಿನ ಚಲನಶೀಲತೆಗೆ ನುಡಿ ಕಾರಣವಾಗುವ ಹಾಗೆಯೇ, ಬದುಕಿನ ದಾರಿಗಳನ್ನು ತಪ್ಪಿಸುವಲ್ಲಿಯೂ ಮೊದಲ ಕಾರಣವೇ ನುಡಿ ಆಗಿರುತ್ತದೆ. ಹಾಗಾಗಿ ನುಡಿಯೊಂದು ಯಾವತ್ತಿಗೂ ನಿರ್ಲಿಪ್ತವಾಗಿರುವ ವಿದ್ಯಮಾನವಾಗಿರಲಾರದು. ಆ ಕಾರಣವಾಗಿ ಬದುಕಿನ ಹಲವು ವಿನ್ಯಾಸಗಳನ್ನು ಸೂಚಿಸುವ ಸೂಚಕವಾಗಿ ನುಡಿಯೊಂದು ಮುಂಚೂಣೆಗೆ ಬಂದಿರುತ್ತದೆ ಎಂಬೀ ದಿಟವನ್ನು ಒಪ್ಪಿ ನಾನು ಈ ಬರಹವನ್ನು ಬರೆಯಲು ಮುಂದಾಗಿರುತ್ತೇನೆ.

“ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ!
ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ!
ಅರಿದು ಮರೆದು ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೇ ಭಿನ್ನವುಂಟೆ?
ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ,
ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ!
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
ಬಾಯ್ದೆಗೆದೆನಲ್ಲದೆ, ಭಿನ್ನವುಂಟೆ ಹೇಳಾ!”

–ಅಲ್ಲಮಪ್ರಭು

ಅಲ್ಲಮನನ್ನು ಕುರಿತು ಈಗಾಗಲೆ ಸಾಕಷ್ಟು ಬರೆಹಗಳು ಬಂದಿವೆ. ಅವನ ವಚನಗಳನ್ನೂ ಕುರಿತು ಇನ್ನೂ ಹೆಚ್ಚಿನ ಬರೆಹಗಳು ಬಂದಿರುತ್ತವೆ. ಆದರೂ ಅಲ್ಲಮನ ವಚನವೊಂದನ್ನು ಕುರಿತು ಒಂದಿಷ್ಟು ಚರ್ಚೆಗಳನ್ನು, ನುಡಿಯರಿಮೆ ನೆಲೆಯಿಂದ ಬೆಳೆಸುವುದು ಮಾತ್ರ ಈ ಟಿಪ್ಪಣಿಯ ಗುರಿಯಾಗಿದೆ. ಅಂದರೆ ನುಡಿಯನ್ನೇ ನೆಲೆಯಾಗಿಸಿಕೊಂಡಿರುವ ಅಲ್ಲಮನ ಈ ವಚನವÀನ್ನು ಮಾತ್ರ ಎದುರಿಗೆ ಇಟ್ಟುಕೊಂಡು ಇಲ್ಲಿಯ ಚರ್ಚೆಗಳು ಮೈದಾಳುತ್ತವೆ.

ಇಲ್ಲಿಯ ಯಾವ ಚರ್ಚೆಯು ಕೂಡ ತನ್ನಷ್ಟಕ್ಕೆ ತಾನು ಸ್ವತಂತ್ರವೂ ಅಲ್ಲ ಮತ್ತು ಸ್ವಾಯತ್ತವೂ ಅಲ್ಲ. ಅಂತಹವೊಂದು ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆ ಯಾವುದೆ ತಿಳಿವು ಇಲ್ಲವೇ ಚಿಂತನೆಯೊಟ್ಟಿಗೆ ಪ್ರತ್ಯೇಕವಾಗಿ ನೆಲೆಗೊಳ್ಳಲಾರದು. ತಿಳಿವು ಯಾವತ್ತಿಗೂ ಸಮೂಹಗಳ ಒಡಲಿಂದಲೇ ಹೊರಹೊಮ್ಮುತ್ತದೆ.

ಹೀಗೆ ಹೊರಹೊಮ್ಮುವ ತಾತ್ವಿಕ ಚೌಕಟ್ಟುಗಳು ಎದುರಿಸಬಹುದಾದ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಎಂತಹವು? ಮತ್ತು ಅವುಗಳ ಪರಿಣಾಮದಿಂದ ಸಮೂಹಗಳು ಅನುಭವಿಸುವ ಇಕ್ಕಟ್ಟುಗಳ ಸ್ವರೂಪ ಯಾವ ಬಗೆಯದು? ಎಂಬುದನ್ನು ವಿವರಿಸುವುದು ಈ ವಚನದ ಆಶಯವಾಗಿದೆ. ಇಂತಹ ಆಶಯಗಳನ್ನು ಸಮುದಾಯಗಳ ವಿನ್ಯಾಸಗಳೊಂದಿಗೆ ಮುಖಾಮುಖಿ ಆಗಿಸಿದರೆ, ಹುಟ್ಟಿಕೊಳ್ಳಬಹುದಾದ ಸಾಮಾಜಿಕ ಬಿಕ್ಕಟ್ಟುಗಳು ಎಂತಹವು ಎಂಬುದನ್ನು ಈ ಚರ್ಚೆಗಳು ಎತ್ತಿ ತೋರಿಸುತ್ತವೆ.

ಒಂದು ಸಂಗತಿಯನ್ನು ಮೊದಲೇ ನಿಚ್ಚಳಪಡಿಸಿಕೊಳ್ಳಬೇಕು. ಅದೇನೆಂದರೆ ನುಡಿ ಕುರಿತು ಅಲ್ಲಮನ ಈ ವಚನವು ಕನ್ನಡವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಹೇಳಿರುವ ಮಾತಲ್ಲ. ಒಟ್ಟಾರೆ ನುಡಿಯ ತಾತ್ವಿಕತೆಯನ್ನು, ಮಹತ್ವವನ್ನು ಹಾಗೂ ಮನೋಧರ್ಮವನ್ನು ಕಂಡರಿಸುವ ನಿಲುವುಗಳು ಇದರಲ್ಲಿ ಅಡಕವಾಗಿವೆ. ಇದೊಂದು ರೀತಿಯಲ್ಲಿ ನುಡಿಯನ್ನು ಕುರಿತು, ಆ ನುಡಿ ಮೂಲಕವೇ ಬಿಡಿಸಿ ಹೇಳುವ ಬಗೆಯಾಗಿದೆ.

ಇಂತಹ ಮೆಟಾಲಿಂಗ್ವಿಸ್ಟಿಕ್ ಸ್ವರೂಪದ ವಿವರಗಳನ್ನು ತಾತ್ವಿಕಗೊಳಿಸುವುದು ಅಷ್ಟೊಂದ ಸುಳುವಾದ ಸಂಗತಿಯಲ್ಲ. ಭಾಷಾಶಾಸ್ತ್ರದಲ್ಲಿ ಇಂತಹ ಚಿಂತನೆಯನ್ನು ನುಡಿ ತತ್ವಶಾಸ್ತ್ರವೆಂದು ಕರೆಯುತ್ತಾರೆ.

ಈ ನುಡಿ ತತ್ವಶಾಸ್ತ್ರವು ಕನ್ನಡದಲ್ಲಿ ಒಂದು ಶಾಸ್ತ್ರೀಯ ನೆಲೆಯಾಗಿ ಇದುವರೆಗೂ ಬೆಳೆದು ಬರಲಿಲ್ಲ (ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತನ್ನು ಹೇಳುತ್ತೇನೆ). ಆದರೆ ಸಾಹಿತ್ಯದಲ್ಲಿ ಹಾಗೂ ನುಡಿ ಮತ್ತು ಸಂಸ್ಕ್ರುತಿ ಕುರಿತ ಬರೆಹಗಳಲ್ಲಿ ಈ ನುಡಿ ತತ್ವಶಾಸ್ತ್ರೀಯ ಚಿಂತನೆಗಳು ಪ್ರಕಟಗೊಂಡಿರುವುದನ್ನು ಕಾಣಬಹುದು.

ಇಂತಹ ಮೆಟಾಲಿಂಗ್ವಿಸ್ಟಿಕ್ ಚಿಂತನೆಗಳ ಹಿಂದೆ ಸಮೂಹಗಳ ಏಳ್ಗೆಯನ್ನು ಕಾಣುವ ಇರಾದೆಯು ಅಂತಸ್ಥವಾಗಿರುತ್ತದೆ. ಇಂತಹ ಚಿಂತನೆಗಳು, ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅಂದರೆ ಆಯಾ ಸಮಾಜಿಕರ ಅಭಿವ್ಯಕ್ತಿಗಳ ನಂಬಿಕೆಯನ್ನು ವೈಚಾರಿಕಗೊಳಿಸುವ ನೆಲೆಯಾಗಿರುತ್ತವೆ. ಸಮೂಹಗಳ ಒಡಲಲ್ಲಿ ಹುದುಗಿರುವ ಅಸಮಾನ ರಚನೆಗಳ ವಿನ್ಯಾಸಗಳನ್ನು ವೈಚಾರಿಕವಾಗಿ ಸರಿಪಡಿಸುವ ಮಾದರಿಗಳು ನುಡಿಯ ಇಂತಹ ತಾತ್ವಿಕ ಚೌಕಟ್ಟುಗಳಲ್ಲಿ ಸಿಗುತ್ತವೆ.

ಮನುಷ್ಯ ತನ್ನ ಬುದ್ಧಿಯನ್ನು ಯಥಾವತ್ತಾಗಿ ಬಳಸುವುದಕ್ಕೆ ಮತ್ತು ಆ ಹೊತ್ತಿನ ವಾಸ್ತವವನ್ನು ಅರಿವುದಕ್ಕೆ ಮಾತ್ರ ಸೀಮಿತನಾಗದೇ, ಇಂತಹ ಯಥಾಸ್ಥಿತಿ ಮತ್ತು ವಾಸ್ತವವನ್ನು ಬದಲಾಯಿಸುವ ನಿಲುವುಗಳನ್ನು ಹೊಂದಿರುತ್ತಾನೆ. ಗ್ರಹಿಕೆಯ ಮೂಲತತ್ವಗಳ ಬೆಳವಣಿಗೆ, ಬದಲಾವಣೆ ಹಾಗೂ ವೈಚಾರಿಕಗೊಳಿಸುವ ಮಾದರಿಗಳು ನುಡಿಯಿಂದಲೇ ಮೊದಲಾಗುತ್ತವೆ.

ಸಾಂಸ್ಕ್ರುತಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ರಾಂತಿಗಳನ್ನು ನಿರಂತರಗೊಳಿಸಲು ನುಡಿಯ ಈ ವೈಚಾರಿಕ ಮಾದರಿಗಳು ಯಾವತ್ತಿಗೂ ನೆರವಾಗುತ್ತವೆ. ಅರವತ್ತರ ದಶಕದಲ್ಲಿ ಯುರೋಪಿನ ಚಿಂತನೆಯ ಮಾದರಿಗಳಲ್ಲಿ ತಲೆಯೆತ್ತಿದ ಇಂತಹ ಪ್ರಕ್ರಿಯೆಯನ್ನೇ ಭಾಷಿಕ ತಿರುವು (ಲಿಂಗ್ವಿಸ್ಟಿಕ್ ಟರ್ನ್) ಎಂದು ಗುರುತಿಸಿರುವುದನ್ನು ಕಾಣಬಹುದು.

ಮಾನವ ಇಲ್ಲವೇ ಸಮೂಹಗಳು ಚರಿತ್ರೆಯ ಉತ್ಪನ್ನ ಹಾಗೂ ಚರಿತ್ರೆಗಳೇ ಸಮೂಹಗಳನ್ನು ರೂಪಿಸುತ್ತವೆ ಎಂಬ ಸರಳವಾದ ನಂಬಿಕೆಯನ್ನು, ಬದಲಾಯಿಸುವ ನೆಲೆಗಳು ಇಂತಹ ಭಾಷಿಕ ತಿರುವಿನಲ್ಲಿ ಹುದುಗಿರುತ್ತವೆ. ಪರಿಣಾಮವಾಗಿ ಚರಿತ್ರೆ ಮತ್ತು ಚರಿತ್ರೆಯ ತಾತ್ವಿಕ ಚೌಕಟ್ಟುಗಳನ್ನು ಮರುಕಟ್ಟಲು ಸಾಧ್ಯವಾಗುತ್ತದೆ.

ಸಾಮಾಜಿಕ ಮತ್ತು ರಾಜಕೀಯ ಪಲ್ಲಟವನ್ನು ನೆಲೆಗೊಳಿಸುವ ಬಗೆಯೇ ಈ ಭಾಷಿಕ ತಿರುವುಗಳ ಮುಖ್ಯ ಗುರಿಯಾಗಿರುತ್ತದೆ. ಅಲ್ಲಮನ ಈ ಮೇಲಿನ ವಚನವು ಕೂಡ ಇಂತಹ ತಿಳಿವನ್ನೇ ಮಂಡಿಸುತ್ತದೆ. ಆದರೆ ಈ ಬಗೆಯ ಸಾಹಿತ್ಯಕ ಪರಿಕರಗಳು ಅರಿವಿನ ಆಕರಗಳಾಗಿ ಮಾನ್ಯತೆ ಪಡೆಯದೆ ಇರುವುದರಿಂದ, ಅವುಗಳೊಳಗಿನ ಚಿಂತನೆ ಮತ್ತು ಚಿಂತನೆಯನ್ನು ಕಟ್ಟುವ ಪರಿಕರಗಳು ಕೇವಲ ರಸಾನುಭವಕ್ಕೆ ಸೀಮಿತವಾಗಿವೆ.

ಜ್ಞಾನಮೀಮಾಂಸೆ ಎಂಬುದು ಸಮುದಾಯಗಳ ವಿವೇಕಕ್ಕೆ ಹೊರತಾದ ಚೌಕಟ್ಟು ಎಂಬ ನಂಬಿಕೆಯೇ ಸಾಮಾಜಿಕ-ಮಾನಸಿಕ ಬಿರುಕುಗಳಿಗೆ ಕಾರಣವಾಗುತ್ತದೆ. ಒಂದೊಂದು ನುಡಿ ಸಮುದಾಯದ ಲಾಂಗ್ವೇಜ್ ಸೈಕಾಲಜಿ ಮತ್ತು ಲಾಂಗ್ವೇಜ್ ಸೋಶಿಯಾಲಜಿಯನ್ನು ಆಳವಾದ ಓದಿಗೆ ಒಗ್ಗಿಸದೇ ಹೋದರೆ, ಅಂತಹ ಸಮುದಾಯ ಯಾವುದೇ ಏಳ್ಗೆಯನ್ನು ಕಾಣಲಾರದು ಹಾಗೂ ಬದುಕಿನ ಮುಂಗಾಣ್ಕೆಯನ್ನೂ ಹೊಂದಲು ಸಾಧ್ಯವಾಗಲಾರದು. ಇಂತಹ ಇಕ್ಕಟ್ಟುಗಳಿಂದ ಬಿಡಿಸಿಕೊಳ್ಳಲು ನುಡಿ ಮತ್ತು ನುಡಿಯ ಓದುಗಳನ್ನು ನಾವೆಲ್ಲರೂ ನಂಬಬೇಕಿದೆ.

ಯಾವುದೇ ವಿದ್ಯಮಾನವು ರಾಜಕೀಯ ಮಹತ್ವವನ್ನು ಪಡೆದುಕೊಳ್ಳುತ್ತದೆ ಅಂದರೆ, ಅದೊಂದು ಸಾಮಾಜಿಕ ಆದ್ಯತೆಯ ಬಗೆಯಾಗಿ ಮಾತ್ರವೇ ಹೊರತು, ಬೇರೆ ಯಾವುದೇ ಸಾಮಾಜಿಕ ಬೇಡಿಕೆಗಳನ್ನು ಈಡೇರಿಸುವ ಇರಾದೆಯಿಂದಲ್ಲ. ಎತ್ತುಗೆಗಾಗಿ ಕನ್ನಡ ಮಾಧ್ಯಮವನ್ನು ಕುರಿತ ಚರ್ಚೆಗಳು ರಾಜಕೀಯ ಮಹತ್ವವನ್ನು ಗುರಿಯಾಗಿಟ್ಟುಕೊಂಡು ಮುಂಚೂಣೆಗೆ ಬರುತ್ತವೆ. ಇಲ್ಲವಾದರೆ ಕೇವಲ ರಾಜಕೀಯ ಸರಿತನವನ್ನು ತೋರಿಸುವ ತುಡಿತದಿಂದ ಕೂಡಿರುತ್ತವೆ.

ಆದರೆ ಕನ್ನಡ ಮಾಧ್ಯಮವನ್ನು ನೆಲೆಗೊಳಿಸುವ ಮೂಲಕ ಯಾವ ಬಗೆಯ ಸಾಮಾಜಿಕ ಮಹತ್ವ, ಪರಿಣಾಮ ಮತ್ತು ಪ್ರಭಾವವನ್ನು ಉಂಟುಮಾಡಬಹುದು ಎಂಬ ಸಂಗತಿಯು ಈ ಚರ್ಚೆಗಳಲ್ಲಿ ಕಾಣೆಯಾಗಿರುತ್ತದೆ. ನುಡಿಯೆಂಬುದೇ ಬದುಕಿನ ವಿನ್ಯಾಸವೆಂದು ತಿಳಿದವರಿಗೆ ನುಡಿಯ ಮಹತ್ವದ ಅರಿವು ಬೇರೆಯಾಗಿರುತ್ತದೆ. ಆದರೆ ಬದುಕಿನ ಹಲವು ವಿದ್ಯಮಾನಗಳಲ್ಲಿ ನುಡಿಯೂ ಒಂದು ಎಂದಾದರೆ, ಈ ಬಗೆಯ ತಿಳಿವಿನ ಪರಿಣಾಮದಿಂದ ನುಡಿಗೆ ಇರುವ ಮಹತ್ವ ಕಳೆದು ಹೋಗುತ್ತದೆ.

ನುಡಿಯ ಮಹತ್ವವನ್ನು ಮಾತ್ರ ಹೇಳುವುದು ನನ್ನ ಗುರಿಯಲ್ಲ ಬದಲಾಗಿ ಬದುಕು ಮಹತ್ವವನ್ನು ಪಡೆಯಬೇಕಾದರೆ, ಅಂತಹ ಮಹತ್ವವೊಂದು ಎಲ್ಲಿ ಅಡಕವಾಗಿರುತ್ತದೆ ಎಂಬುದನ್ನು ಅರಿಯುವುದಾಗಿದೆ. ಇದಕ್ಕೆ ಒತ್ತಾಸೆಯಾಗಿರುವುದು ನುಡಿಯೇ ಆಗಿರುತ್ತದೆ. ಅಂದರೆ ನುಡಿ ಹಾಗೂ ಸಂಸ್ಕ್ರುತಿಗಳನ್ನು ಬೆಸೆಯುವ ಮೂಲತತ್ವಗಳನ್ನು ಅರಿಯುವ ಬಗೆಯೇ ಇಂತಹ ವಿಶ್ಲೇಷಣೆಗಳ ಮೊದಲ ಕಾಳಜಿ ಆಗಿರುತ್ತದೆ.

ತಿಳಿವನ್ನು ಮಂಡಿಸುವ ಹಾಗೂ ತಿಳಿವನ್ನು ವಿಶ್ಲೇಷಿಸುವ ಬಗೆಗಳ ನಡುವೆ ಗೆರೆ ಎಳೆಯಲು ಸಾಧ್ಯವಿಲ್ಲ. ಆದರೆ ಆಯಾ ಸಮುದಾಯದ ತಿಳಿವಿನ ದಾರಿಗಳನ್ನು ಮರೆಸುವ ನೆಲೆಗಳು ಎಂತಹವು ಎಂಬುದನ್ನು ಮಾತ್ರ ಗೆರೆ ಎಳೆದು ತೋರಿಸಬಹುದು ಎಂಬ ದಿಟವನ್ನು ಅಲ್ಲಮನ ಈ ವಚನವು ಗಟ್ಟಿಯಾಗಿ ಹೇಳುತ್ತದೆ. ನುಡಿಯ ಮಹತ್ವವನ್ನು ಮರೆತವರು, ಅದನ್ನು ಮನಗಾಣಬೇಕಾದ ಅನಿವಾರ್ಯ ಎಷ್ಟೊಂದು ಅಗತ್ಯವಿದೆ ಎಂಬುದನ್ನು ಈ ಚರ್ಚೆಗಳು ನೆನಪಿಸುತ್ತವೆ.

ಸಾಂಸ್ಕ್ರುತಿಕ ನೆನಪು ಮತ್ತು ಮರೆವುಗಳ ನಡುವಣ ತಿಕ್ಕಾಟ ಕೇವಲ ಒಂದು ಕಾಲಘಟ್ಟದ ಪ್ರಶ್ನೆ ಮಾತ್ರವಲ್ಲ, ಸಮೂಹಗಳ ಸಾಂಸ್ಕ್ರುತಿಕ ಹಾಗೂ ರಾಜಕೀಯ ಗುರುತಿನ ಚರಿತ್ರೆಯನ್ನು ನಿರ್ನಾಮಗೊಳಿಸುವ ಬಗೆಯೂ ಆಗಿರುತ್ತದೆ. ಮರೆವು, ನೆನಪು ಮತ್ತು ಮಾಯೆಯ ರೂಪಕವಾಗಿ ನುಡಿಯೊಂದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಲ್ಲಮ ತನ್ನೀ ವಚನದಲ್ಲಿ ಹೇಳುತ್ತಾನೆ.

ಬಹುತೇಕವಾಗಿ ಅಲ್ಲಮನ ವಚನಗಳು ಜನರಲ್ಲಿ ಕೇವಲ ತಿಳಿವನ್ನು ಮೂಡಿಸುವ ಇರಾದೆಯಿಂದ ಹುಟ್ಟಿಕೊಂಡಂತವುಗಳಲ್ಲ. ಬದಲಾಗಿ ತಿಳಿವಿನ ತಿಳಿವನ್ನು, ಅರಿವಿನ ಅರಿವನ್ನು ಕುರಿತು ಚಿಂತಿಸುವ ನೆಲೆಯಲ್ಲಿರುತ್ತವೆ. ಈ ಬಗೆಯ ಆಲೋಚನೆಯ ಕ್ರಮವನ್ನು ಕೇವಲ ಒಂದು ಜಿಜ್ಞಾಸೆಯ ವಿದ್ಯಮಾನವಾಗಿ ನೋಡಲಾಗುತ್ತದೆ.

ಆದರೆ ಅಲ್ಲಮನ ಗುರಿ ಇರುವುದು ಬದುಕಿನ ನೋಟಕ್ರಮದೊಳಗೆಯೇ ಜಿಜ್ಞಾಸೆಯೊಂದು ವಿಕಾಸಗೊಳ್ಳುವ ಹಾಗೂ ಅಂತಹ ಪ್ರಕ್ರಿಯೆಯಿಂದ ಉಂಟಾಗುವ ಪರಿಣಾಮಗಳನ್ನು ಗೊತ್ತುಪಡಿಸುವ ನಿಲುವಾಗಿದೆ. ಯಾವುದೇ ಕ್ರಿಯೆ ನೇರವಾಗಿ ಪರಿಣಾಮವನ್ನು ಸೂಚಿಸಲಾರದು. ಹೊರತಾಗಿ ಒಂದೊಂದು ಕ್ರಿಯೆಯು ಉಂಟಾಗಬಹುದಾದ ವಿದ್ಯಮಾನವೊಂದನ್ನು ಮಾತ್ರ ಸೂಚಿಸುತ್ತದೆ. ಹಾಗಾಗಿ ಪರಿಣಾಮವೆಂಬುದು ಕ್ರಿಯೆಯೊಳಗೆಯೇ ಅಂತಸ್ಥವಾಗಿರುವುದಿಲ್ಲ ಎಂಬ ದಿಟವನ್ನು ಈ ಮಾತುಗಳು ನಿಚ್ಚಳಪಡಿಸುತ್ತವೆ.

ಆದರೆ ಯಾವುದೇ ಕ್ರಿಯೆಯಿಂದ ಹೊರಹೊಮ್ಮಬಹುದಾದ ಪರಿಣಾಮದ ವಿನ್ಯಾಸಗಳನ್ನು, ಗೆರೆಕೊರೆದು ತೋರಿಸುವ ವಿವೇಕ ಅಲ್ಲಮನ ವಚನಗಳಿಗೆ ಇರುತ್ತದೆ. ಎತ್ತುಗೆಗಾಗಿ ‘ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ?’ ಎಂಬೀ ರೂಪಕವನ್ನು ನಿಗಾಯಿಟ್ಟು ನೋಡಿದರೆ, ಅಲ್ಲಮನ ವಚನಗಳ ಕಾಣ್ಕೆಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮಂಜು ಮತ್ತು ಬಿಸಿಲು ಇವುಗಳು ಕೇವಲ ವೈರುಧ್ಯದ ನಿಲುವುಗಳಲ್ಲ. ಬದುಕಿನ ವಿನ್ಯಾಸದೊಳಗಿನ ವಿರೋಧಭಾಸವನ್ನು ಅರಿಯುವ ಮಾದರಿಯೆಂದೇ ಹೇಳಬೇಕು.

ಏಕೆಂದರೆ ಮಂಜು ಮತ್ತು ಬಿಸಿಲುಗಳು ಒಡಗೂಡಿದರೆ, ಪರಿಣಾಮ ಏನಾಗುತ್ತೆ? ಎಂಬುದಷ್ಟನ್ನೇ ಅಲ್ಲಮ ಹೇಳುತ್ತಿಲ್ಲ, ಬದಲಾಗಿ ಇಂತಹ ಪರಿಣಾಮಗಳ ಮೂಲಕ ಆಯಾ ವಸ್ತು ಇಲ್ಲವೇ ವಿದ್ಯಮಾನಗಳ ಅಸ್ತಿತ್ವದ ಗುರುತುಗಳನ್ನು ಮುಂಗಾಣಿಸುವ ಬಗೆಯೂ ಆಗಿರುತ್ತದೆ. ಆದ್ದರಿಂದ ಯಾವುದು ಏನನ್ನು, ಹೇಗೆ ನಿಯಂತ್ರಿಸುತ್ತದೆ ಮತ್ತು ಅವುಗಳ ಅಸ್ತಿತ್ವದ ಚಹರೆಗಳು ಎಂತಹವು ಅನ್ನುವುದು ಅಲ್ಲಮನ ವಚನದ ಈ ಸಾಲವೊಂದು ಎತ್ತಿ ತೋರಿಸುತ್ತದೆ.

ಆದರೆ ನಾನಿಲ್ಲಿ ಅಲ್ಲಮನನ್ನು ಈ ಸೀಮಿತ ತಾತ್ವಿಕ ಚೌಕಟ್ಟಿಗೆ ಕಟ್ಟಿ ಹಾಕಲಾರೆ. ಹೇಗೆ ನುಡಿಯೊಂದು ಅರಿವಿನ ಕುರುಹು ಆಗಬಲ್ಲದು ಎಂಬುದನ್ನು ತಿಳಿಯುವ ಜರೂರಿದೆ. ಆದ್ದರಿಂದ ನುಡಿಗೂ ಮತ್ತು ಬದುಕಿಗೂ ಇರುವ ನಂಟಸ್ತಿಕೆಯನ್ನು ಅಲ್ಲಮನ ಈ ವಚನದ ಮೂಲಕ ತಿಳಿಯುವುದಾಗಿದೆ. ಮತ್ತು ಅಲ್ಲಮನ ಮಾತುಗಳು ಅತ್ಯಂತ ಪರಿಣಾಮಕಾರಿಯಾಗಿ ಏನನ್ನು ಹೇಳುತ್ತವೆ ಎಂಬುದು ಇಲ್ಲಿ ಅಮೂರ್ತವಾಗಿದೆ ದಿಟ.

ಆದರೆ ಈ ಅಮೂರ್ತತೆ ಇಲ್ಲಿ ಒಂದು ಸಾಮಾಜಿಕ ಒತ್ತಡವಾಗಿ ನುಡಿಯೊಂದರ ಇಡೀತನವನ್ನು ಸಾಮಾಜಿಕ ಅಸ್ಮಿತೆಯ ಸಂಕೇತವನ್ನಾಗಿ ಕಾಣಿಸುತ್ತದೆ. ಆದರೆ ಇಂತಹ ಸಮೀಕರಣವನ್ನು ಕೇವಲ ಒಂದು ಸೂಚಕವನ್ನಾಗಿ ಮಾತ್ರ ಇಲ್ಲಿ ಗಮನಿಸಬೇಕಾದ ಅಗತ್ಯವಿದೆ. ಸಾಮಾಜಿಕತೆ ಎಂಬುದನ್ನು ನಾವು ಬಿಡಿಸಿ ನೋಡಬೇಕಾದರೆ ನುಡಿಯನ್ನು ಹಾಗೂ ಅದು ಕಟ್ಟಿಕೊಡುವ ತಾತ್ವಿಕತೆಯನ್ನು ಅರಿಯಲೆಬೇಕಾದ ಜರೂರಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

Trending