Connect with us

ಬಹಿರಂಗ

ಚೂರಾದದ್ದು ಕಲ್ಲಂಗಡಿ ಬೆತ್ತಲೆಯಾಗಿದ್ದು ಶ್ರಮಿಕ ಪ್ರಜ್ಞೆ

Published

on

ಜೀವನೋಪಾಯವನ್ನು ಕಸಿಯುವ ಯಾವುದೇ ಕೃತ್ಯವನ್ನು ಖಂಡಿಸುವುದು ನಾಗರಿಕತೆಯ ಲಕ್ಷಣ

  • ನಾ ದಿವಾಕರ

ಯಾವುದೇ ಒಂದು ಸಮಾಜವನ್ನು ʼ ನಾಗರಿಕ ʼ ಎಂದು ಪರಿಭಾವಿಸಬೇಕಾದರೆ, ಕೆಲವು ಲಕ್ಷಣಗಳು ಅವಶ್ಯವಾಗಿ ಇರಬೇಕಾಗುತ್ತವೆ. ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಅಧಿಕಾರ ಕೇಂದ್ರಗಳು ಯಾವುದೇ ಮಾರ್ಗಗಳನ್ನು ಅನುಸರಿಸುತ್ತಿದ್ದರೂ, ಸಾರ್ವಜನಿಕ ಬದುಕಿನಲ್ಲಿ ತಮ್ಮ ಕಸುಬು, ವೃತ್ತಿ, ನೌಕರಿ ಅಥವಾ ವ್ಯಾಪಾರವನ್ನು ನಂಬಿ ಬದುಕು ಸವೆಸುವ ಸಾಮಾನ್ಯ ಜನರ ನಿತ್ಯ ಬದುಕಿನ ಮಟ್ಟಿಗೆ ಅದು ನಗಣ್ಯವಾಗಿರುತ್ತದೆ.

ಪ್ರಜಾತಂತ್ರವಾಗಲೀ, ನಿರಂಕುಶಾಧಿಕಾರವಾಗಲೀ, ಸರ್ವಾಧಿಕಾರ ಅಥವಾ ಸೇನಾಡಳಿತವೇ ಆಗಲಿ, ತಮ್ಮ ಬದುಕು ಸವೆಸಲು ನಿತ್ಯ ಕಾಯಕವನ್ನೇ ನಂಬಿ ನಡೆಯುವ ಅಸಂಖ್ಯಾತ ಜನರಿಗೆ ತಮ್ಮ ಸುತ್ತಲಿನ ಸಮಾಜ ಮತ್ತು ಆ ಕ್ಷಣದ ವಾತಾವರಣವೇ ಮುಖ್ಯವಾಗಿರುತ್ತದೆಯೇ ಹೊರತು ಆಡಳಿತ ವ್ಯವಸ್ಥೆಯ ಚೌಕಟ್ಟುಗಳಲ್ಲ. ಆದರೆ ಈ ಸಾಮಾನ್ಯ ಜನತೆಯ ಜೀವನ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುವ ಸಾಮುದಾಯಿಕ ಅಸ್ಮಿತೆಗಳು, ಜಾತಿ, ಮತ, ಧರ್ಮ, ಪಂಥ ಮತ್ತು ಭಾಷಿಕ ನೆಲೆಯಲ್ಲಿ ಶ್ರೀಸಾಮಾನ್ಯನನ್ನು ಕಾಡುತ್ತಲೇ ಇರುತ್ತದೆ.

ಈ ಕಾಡುವಿಕೆಯಲ್ಲೇ ಜಾತಿ ಮತಗಳ ಸಾಂಸ್ಥಿಕ ನೆಲೆಗಳು ಜನಸಮುದಾಯಗಳ ಮೇಲೆ ತಮ್ಮ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ವ್ಯಕ್ತಿಗತ ಬದುಕಿನಲ್ಲಿ ಯಾವುದೇ ಪಾತ್ರ ವಹಿಸದ ಅಸ್ಮಿತೆಗಳು ಸಹಜವಾಗಿಯೇ ಸಾಮುದಾಯಿಕ ಬದುಕಿನ ಒಂದು ಭಾಗವಾಗಿ, ಮನುಷ್ಯನನ್ನು ಸಂಗ-ಜೀವಿಯನ್ನಾಗಿ ಮಾಡುತ್ತದೆ.

ಈ ಸಂಗ-ಜೀವಿಯ ಬೇಕು ಬೇಡಗಳನ್ನು ಪೂರೈಸುವ ನೈತಿಕ ಹೊಣೆಗಾರಿಕೆ ಆಡಳಿತ ವ್ಯವಸ್ಥೆಯ ಮೇಲಿದ್ದರೂ, ನಿತ್ಯ ಬದುಕಿನ ಹಾದಿಯಲ್ಲಿ ಜನಸಮುದಾಯಗಳು ತಮ್ಮೊಳಗಿನ ಸ್ನೇಹ ಸೇತುವೆಗಳನ್ನು ಗಟ್ಟಿಗೊಳಿಸುತ್ತಾ ತಮ್ಮೊಳಗಿನ ವೈವಿಧ್ಯತೆಯನ್ನೇ ಬಂಡವಾಳವನ್ನಾಗಿರಿಸಿಕೊಂಡು, ತಮ್ಮ ನಡುವಿನ ಭಿನ್ನತೆಗಳನ್ನು ಬದಿಗಿರಿಸುತ್ತಾ, ಪರಸ್ಪರ ಕಷ್ಟ ಸುಖಗಳಿಗೆ ಹೆಗಲು ನೀಡುತ್ತಾ ಬದುಕು ಸವೆಸುತ್ತಾರೆ.

ಇದು ದುಡಿಯುವ ವರ್ಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಾರ್ವತ್ರಿಕ ಲಕ್ಷಣ. ದೈಹಿಕ ಮತ್ತು ಬೌದ್ಧಿಕ ಶ್ರಮದಲ್ಲಿ ತೊಡಗಿರುವವರಷ್ಟೇ ಅಲ್ಲದೆ, ಜೀವನೋಪಾಯಕ್ಕಾಗಿ, ಜೀವನ ನಿರ್ವಹಣೆಗಾಗಿ ಸಣ್ಣ ಪುಟ್ಟ ವ್ಯಾಪಾರವನ್ನು ಅವಲಂಬಿಸಿ ಬದುಕುವ ಕೋಟ್ಯಂತರ ಜನರು ಈ “ಶ್ರಮಜೀವಿ ವರ್ಗ”ಕ್ಕೇ ಸೇರಿದವರಾಗಿರುತ್ತಾರೆ. ಭಾರತದಂತಹ ಸಾಂಪ್ರದಾಯಿಕ, ಶ್ರೇಣೀಕೃತ ಸಮಾಜದಲ್ಲೂ, ಗುಪ್ತವಾಹಿನಿಯಂತೆ ಹರಿಯುವ ಅಸ್ಪೃಶ್ಯತೆ ಮತ್ತು ಜಾತೀಯತೆಯಂತಹ ವಿಷತೊರೆಗಳ ಹೊರತಾಗಿಯೂ, ಈ ಶ್ರಮಜೀವಿ ವರ್ಗವು ಒಂದಾಗಿ ಬದುಕುವುದು ಸಾಧ್ಯ ಎನ್ನುವುದನ್ನು ಇತಿಹಾಸ ನಿರೂಪಿಸಿದೆ.

ಅಸ್ಪೃಶ್ಯ ಸಮುದಾಯಗಳು, ತಮ್ಮ ಮೇಲೆ ನಿರಂತರವಾಗಿ ನಡೆಯುವ ಜಾತಿ ದೌರ್ಜನ್ಯಗಳನ್ನೂ ಸಹ ಬದುಕಿನ ಒಂದು ಭಾಗ ಎಂದು ಭಾವಿಸುವ ದುರಂತ ಮನಸ್ಥಿತಿಯೇ ಆವರಿಸಿರುವುದರಿಂದ, ಈ ಸಮುದಾಯಗಳ ಸಹಿಷ್ಣುತೆಯೂ ಹೆಚ್ಚಾಗಿಯೇ ಕಾಣುತ್ತದೆ. ಸಮಕಾಲೀನ ಸಮಾಜದಲ್ಲಿ ಒಂದು ಸೌಹಾರ್ದ ವಾತಾವರಣ ಇದೆ ಎಂದರೆ ಈ ಸಮಾಜ ದೌರ್ಜನ್ಯ ಮುಕ್ತವಾಗಿದೆ ಎಂದರ್ಥವಲ್ಲ ಅಥವಾ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ಅಮಾನುಷ ಪದ್ಧತಿಗಳು ಇಲ್ಲವಾಗಿದೆ ಎಂದೂ ಹೇಳಲಾಗುವುದಿಲ್ಲ.

ತಳಸಮುದಾಯಗಳನ್ನು ನಿರಂತರವಾಗಿ ಕಾಡುವ ಬಡತನ ಮತ್ತು ಆರ್ಥಿಕ ಪರಾವಲಂಬನೆಯೇ ಅವರಲ್ಲಿನ ಸಹಿಷ್ಣುತೆಯನ್ನೂ ಅನಿವಾರ್ಯವಾಗಿ ಹೆಚ್ಚಿಸುತ್ತದೆ. ಈ ಶೋಷಿತ ಸಮುದಾಯಗಳ ನಡುವೆ ಉದ್ಭವಿಸಬಹುದಾದ ಬಂಡಾಯವನ್ನು, ಪ್ರತಿರೋಧವನ್ನು ಅಡಗಿಸುವ ಸಲುವಾಗಿಯೇ ಆಳುವ ವರ್ಗಗಳು ಮತ್ತು ಸಮಾಜದ ಪ್ರಬಲ ವರ್ಗಗಳು ಜಾತಿ-ಮತಗಳ ಅಸ್ಮಿತೆಗಳನ್ನು ಬಳಸುತ್ತಿರುತ್ತವೆ. ಜಾತಿ, ಮತ, ಪಂಥ ಅಥವಾ ಭಾಷೆಯ ಆಧಾರದ ಮೇಲೆ ಸಾಂಸ್ಥಿಕ, ಸಂಘಟನಾತ್ಮಕ ಶಕ್ತಿಗಳು ಈ ವರ್ಗವನ್ನು ವಿಭಜಿಸಿ, ವಿಘಟನೆಗೊಳಪಡಿಸುವ ಮೂಲಕ ಸಮುದಾಯಗಳ ಮೇಲೆ, ಸಮಾಜದ ಮೇಲೆ ತಮ್ಮ ಆಧಿಪತ್ಯವನ್ನು ಸಾಧಿಸಲು ಸದಾ ಯತ್ನಿಸುತ್ತಲೇ ಇರುತ್ತವೆ.

ಈ ಶಕ್ತಿಗಳಿಂದ ಅಡ್ಡಡ್ಡಲಾಗಿ ಸೀಳಲ್ಪಡುವ ಶ್ರಮಜೀವಿ ವರ್ಗಗಳು ತಮ್ಮ ನಡುವೆ ನಿರ್ಮಿಸಲಾಗುವ ಬೌದ್ಧಿಕ ಮತ್ತು ಭೌತಿಕ ಗೋಡೆಗಳನ್ನು ಭಂಜಿಸದೆ, ಭೇದಿಸದೆ ಹೋದರೆ ಈ ಗೋಡೆಗಳೇ ಕಾಲಕ್ರಮೇಣ ದೊಡ್ಡ ಕಂದರಗಳಾಗಿ, ಸಮುದಾಯಗಳ ನಡುವೆ ಶಾಶ್ವತವಾದ ಬೇಲಿಗಳಾಗಿ ಪರಿಣಮಿಸಿಬಿಡುತ್ತವೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಅಧಿಕಾರ ಕೇಂದ್ರಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧರಾಗಿರುವವರೆಗೂ ಜನಸಮುದಾಯಗಳು ತಮ್ಮ ನೆಮ್ಮದಿಯ ಬದುಕನ್ನು ತಮ್ಮದೇ ಆದ ಅಸ್ಮಿತೆಗಳೊಂದಿಗೆ ಸವೆಸಲು ಸಾಧ್ಯ.

ಆದರೆ ಒಮ್ಮೆ ಈ ಅಧಿಕಾರ ಕೇಂದ್ರಗಳು ತೀವ್ರತೆರನಾದ ನಿರಂಕುಶಾಧಿಕಾರಕ್ಕೊಳಗಾದಾಗ, ನಿರ್ದಿಷ್ಟ ಮತಾಚರಣೆಯ ಸಾಂಸ್ಕೃತಿಕ ಚೌಕಟ್ಟುಗಳಲ್ಲಿ ಬಂಧಿಸಲ್ಪಟ್ಟಾಗ ಮತಾಂಧತೆ ಮತ್ತು ಮತೀಯವಾದವೇ ಆಡಳಿತ ನೀತಿಗಳಾಗಿಬಿಡುತ್ತವೆ. ಇಂತಹ ವಾತಾವರಣದಲ್ಲಿ ಶ್ರಮಜೀವಿ ವರ್ಗಗಳನ್ನು ಅಸ್ಮಿತೆಗಳ ಆಧಾರದ ಮೇಲೆ ವಿಭಜಿಸುವ ವ್ಯವಸ್ಥಿತ ರಾಜಕಾರಣ ನಡೆಯುತ್ತದೆ. ಅನೇಕ ಪಶ್ಚಿಮ ರಾಷ್ಟ್ರಗಳಲ್ಲಿ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದಲ್ಲಿ ಇದು ಸಂಭವಿಸಿದೆ. ದುರದೃಷ್ಟವಶಾತ್‌ ಇಂದು ಭಾರತವೂ ಇದೇ ದಿಕ್ಕಿನಲ್ಲಿ ಸಾಗುತ್ತಿದೆ.

ಹಿಂದೂ, ಇಸ್ಲಾಂ, ಕ್ರೈಸ್ತ ಅಥವಾ ಸಿಖ್‌ ಮತಗಳ ಪ್ರಭಾವಳಿಗೆ ಸಿಲುಕಿ ತಮ್ಮ ಮೂಲ ಅಸ್ಮಿತೆಯನ್ನು ಕಳೆದುಕೊಳ್ಳುವ ಶ್ರಮಜೀವಿ ವರ್ಗಗಳು ತಮ್ಮ ಶೋಷಕರನ್ನು ಅಗೋಚರ ಶಕ್ತಿಯಲ್ಲಿ ಕಾಣಲು ಹಪಹಪಿಸುತ್ತವೆ. ಅಥವಾ ಅಧಿಕಾರ ರಾಜಕಾರಣದಲ್ಲಿ ಸೃಷ್ಟಿಯಾಗುವಂತಹ ಮತೀಯ ಚೌಕಟ್ಟುಗಳಲ್ಲಿ ಕಾಣುತ್ತವೆ.

ಅಸ್ಪೃಶ್ಯತೆಯ ಕ್ರೌರ್ಯವನ್ನು ದಿನನಿತ್ಯ ಅನುಭವಿಸುವ ಸಮುದಾಯಗಳೂ ಸಹ, ತಮ್ಮ ಶೋಷಣೆಗೆ ಮೂಲ ಕಾರಣ ಈ ದೇಶದ ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ವೈದಿಕಶಾಹಿಯ ಸಾಂಸ್ಕೃತಿಕ ಆಧಿಪತ್ಯ ಎನ್ನುವುದನ್ನು ಅರಿಯದೆ, ಅನ್ಯಮತಗಳಲ್ಲಿ, ಅನ್ಯ ಧರ್ಮಗಳಲ್ಲಿ, ಸಾಂಸ್ಕೃತಿಕ ರಾಜಕಾರಣದ ಮೇಲಾಟದಲ್ಲಿ ಕಾಣಲು ಹಂಬಲಿಸುತ್ತವೆ.

ಜಾತಿ ತಾರತಮ್ಯ ಮತ್ತು ದೌರ್ಜನ್ಯಗಳನ್ನು ಪೋಷಿಸುವ ಬಂಡವಾಳಶಾಹಿ ಆರ್ಥಿಕತೆ ಮತ್ತು ಈ ಅರ್ಥವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳುವ ಮೇಲ್ಜಾತಿಯ ಹಿಡಿತವನ್ನು ಗ್ರಹಿಸಿ, ಇದರ ವಿರುದ್ಧ ಸಿಡಿದೇಳಬೇಕಾದ ಶೋಷಿತ ಸಮುದಾಯಗಳು, ಯಾವುದೋ ಒಂದು ಧಾರ್ಮಿಕ ನಂಬಿಕೆಗಳಿಗೆ ಬಲಿಯಾಗಿ, ಮತೀಯ ಅಸ್ತಿತ್ವಗಳಿಗೆ ಬಲಿಯಾಗಿ, ಮತ್ತೊಂದು ಜನಾಂಗದ ಶ್ರಮಿಕ ವರ್ಗಗಳ ವಿರುದ್ಧವೇ ಹೋರಾಡಲು ಸಜ್ಜಾಗುತ್ತವೆ.

ಇದರಲ್ಲಿ ಪ್ರಬಲ ಮೇಲ್ವರ್ಗಗಳ ರಾಜಕೀಯ ಜಾಣ್ಮೆಯನ್ನು ಕಾಣುವಂತೆಯೇ, ತಳಸಮುದಾಯಗಳ ಅರಿವಿನ ಕೊರತೆಯನ್ನೂ ಕಾಣಬೇಕಿದೆ. ಶೂದ್ರ ಸಮುದಾಯದ ಯುವಪೀಳಿಗೆಯೇ ಹೆಚ್ಚುಹೆಚ್ಚಾಗಿ ಹಿಂದುತ್ವ ರಾಜಕಾರಣದ, ಮುಸ್ಲಿಂ ಮತಾಂಧತೆಯ ಕಾಲಾಳು ಪಡೆಗಳಾಗಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗಿದೆ.

ಜಾತಿಯ ಸಾಂಸ್ಕೃತಿಕ ನೆಲೆಯಲ್ಲಿ ಅಥವಾ ಆರ್ಥಿಕತೆಯ ನೆಲೆಯಲ್ಲಿ ಗುರುತಿಸಲಾಗದ ಶತ್ರುವನ್ನು ಶೂದ್ರ ಮತ್ತು ದಲಿತ ಸಮುದಾಯಗಳು ಮತೀಯ ನೆಲೆಯಲ್ಲಿ ಗುರುತಿಸಲಾರಂಭಿಸಿವೆ. ಹಾಗಾಗಿಯೇ ಇಸ್ಲಾಂ ಪ್ರಬಲ ಶತ್ರು ಎನಿಸುತ್ತದೆ ಅಥವಾ ಮುಸ್ಲಿಂ ಸಮುದಾಯ ʼ ಅನ್ಯ ʼ ಎನಿಸಿಬಿಡುತ್ತದೆ. ತಮ್ಮ ವಿರುದ್ಧ ನಡೆಯುತ್ತಿರುವ ಶೋಷಣೆಯನ್ನೂ ಗುರುತಿಸಲಾಗದಂತಹ ಸಮೂಹ ಸನ್ನಿಗೆ ಸಮುದಾಯ ಒಳಗಾದಾಗ, ಈ ʼ ಅನ್ಯತೆ ʼಯೇ ಮತೀಯ ರಾಜಕಾರಣಕ್ಕೆ ಬುನಾದಿಯಾಗಿಬಿಡುತ್ತದೆ.

ಇತ್ತೀಚೆಗೆ ಕರ್ನಾಟಕದ ಹಲವೆಡೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದ ದಾಳಿಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ. ಜೀವನೋಪಾಯದ ಮಾರ್ಗವಾಗಿ, ಲಾಭದಾಹವಿಲ್ಲದ ವ್ಯಾಪಾರವನ್ನು ನಂಬಿ ಬದುಕುವ ಪೆಟ್ಟಿಗೆ ಅಂಗಡಿಯ ಮಸಲ್ಮಾನ, ತಳ್ಳುಗಾಡಿಯಲ್ಲಿ ಕಲ್ಲಂಗಡಿ ಮಾರುವ ನಬೀಸಾಬ್‌, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವವರು, ಜಾತ್ರೆ ಸಂತೆಗಳಲ್ಲಿ ಅಲ್ಪ ಬಂಡವಾಳ ಮತ್ತು ಹೆಚ್ಚು ಸಾಲದ ಹೊರೆಯೊಂದಿಗೆ ವ್ಯಾಪಾರ ಮಾಡುವ ಮುಸ್ಲಿಂ ವರ್ತಕರು, ಧರ್ಮ ರಕ್ಷಣೆಯ ಹೆಸರಿನಲ್ಲಿ ದಾಳಿಗೊಳಗಾಗಿರುವುದನ್ನು ಗಮನಿಸುವಾಗ, ಈ ದಾಳಿಗಳನ್ನು ಪ್ರಚೋದಿಸಿರುವ ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಗಳ ಮೂಲ ನೆಲೆಗಳನ್ನೂ ಗಮನಿಸಬೇಕಾಗುತ್ತದೆ.

ಶ್ರಮಿಕ ವರ್ಗಗಳ ನಡುವೆಯೇ ಅಂತರ್‌ ಕಲಹ ಸೃಷ್ಟಿಸುವ ಮೂಲಕ, ಶೋಷಿತ ಸಮುದಾಯಗಳು ಎಂದಿಗೂ ಐಕ್ಯತೆಯನ್ನು ಸಾಧಿಸದಿರುವಂತೆ ಮಾಡುವ, ಬಂಡವಾಳಶಾಹಿಯ ಹುನ್ನಾರ ಮತ್ತು ಬಂಡವಾಳ ವ್ಯವಸ್ಥೆಯನ್ನು ಪೋಷಿಸುವ ಮೇಲ್ಜಾತಿ-ಮೇಲ್ವರ್ಗಗಳ ರಾಜಕೀಯ ಮೇಲಾಟಗಳನ್ನು ಸೂಕ್ಷ್ಮವಾಗಿ ಗಮನಿಸದೆ ಹೋದರೆ, ಶ್ರಮಿಕ ವರ್ಗಗಳು ತಮ್ಮ ನಡುವೆ ನಿರ್ಮಿಸಲಾಗಿರುವ ಗೋಡೆಗಳನ್ನು ಭೇದಿಸುವುದು ಸಾಧ್ಯವಾಗುವುದೇ ಇಲ್ಲ. ಇಲ್ಲಿ ಶ್ರಮಿಕ ವರ್ಗಗಳ ನಡುವೆ ಇರಲೇಬೇಕಾದ ವರ್ಗಪ್ರಜ್ಞೆಯ ಪ್ರಶ್ನೆ ಮುನ್ನೆಲೆಗೆ ಬರುತ್ತದೆ.

ಶ್ರಮಿಕ ವರ್ಗಗಳಲ್ಲಿ ಈ ವರ್ಗಪ್ರಜ್ಞೆಯ ಕೊರತೆ ಇರುವುದರಿಂದಲೇ ಭಾರತದಲ್ಲಿ ಶೋಷಕ ವರ್ಗಗಳು ಜಾತಿಮತಗಳ ನೆಲೆಯಲ್ಲಿ ಮತ್ತು ಆರ್ಥಿಕ ನೆಲೆಯಲ್ಲಿ ತಮ್ಮ ಶೋಷಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುತ್ತಿವೆ. ದೇಶದ ಸಂಪತ್ತನ್ನು ವೃದ್ಧಿಸಲು ನೆರವಾಗುವ ಶ್ರಮಶಕ್ತಿಯನ್ನು ಗುರುತಿಸಬೇಕಾದರೆ, ಉತ್ಪಾದಕೀಯ ಶಕ್ತಿಗಳಾದ ಶ್ರಮಿಕರನ್ನು ಪರಸ್ಪರ ಸಂಪರ್ಕಿಸುವ ಶ್ರಮ ಸರಪಳಿಯ ಸಂರಚನೆಯನ್ನೂ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಧಾರವಾಡದ ನಬೀಸಾಬ್‌ ತನ್ನ ಕಲ್ಲಂಗಡಿ ಹಣ್ಣುಗಳ ರಾಶಿ ನೆಲಸಮವಾಗುತ್ತಿರುವುದನ್ನು ಕಂಡು, ವೇದನೆಯಿಂದ “ ನನ್ನನ್ನೂ ಕೊಂದುಬಿಡಿ ” ಎಂದು ಹೇಳುವುದನ್ನು ಒಂದು ರೂಪಕದಂತೆ ನಾವು ನೋಡಬೇಕಿದೆ. ರಸ್ತೆಯಲ್ಲಿ ಚೆಲ್ಲಿದ ಕಲ್ಲಂಗಡಿಯ ತುಣುಕುಗಳಲ್ಲಿ ನಮಗೆ, ಹೊಲದಲ್ಲಿ ದಿನವಿಡೀ ಬೆವರು ಸುರಿಸಿದ ಕೃಷಿ ಕಾರ್ಮಿಕ, ಸಣ್ಣ ರೈತ, ರೈತ ಮಹಿಳೆಯರು, ಹೊಲದಿಂದ ಮಾರುಕಟ್ಟೆಗೆ ಸಾಗಾಣಿಕೆ ಮಾಡುವ ಒಬ್ಬ ಶ್ರಮಿಕ, ಅದನ್ನು ವಾಹನದೊಳಗೆ ತುಂಬಿಸಿ ಮತ್ತೆ ಕೆಳಗಿಳಿಸುವ ಒಬ್ಬ ಕೂಲಿ ಕಾರ್ಮಿಕ, ತಳ್ಳುಗಾಡಿಯ ಗಾಲಿ ಕೀಲುಗಳನ್ನು ತಯಾರಿಸುವ ಒಬ್ಬ ಕುಶಲಕರ್ಮಿ ಮತ್ತು ಈ ವ್ಯಾಪಾರವನ್ನೇ ನಂಬಿ ಬದುಕುವ ಒಂದು ಬಡ ಕುಟುಂಬ, ಇವೆಲ್ಲವೂ ಕಾಣದೆ ಹೋದರೆ ನಾವು ನಾಗರಿಕ ಪ್ರಜ್ಞೆಯನ್ನು ಕಳೆದುಕೊಂಡಿದ್ದೇವೆ ಎಂದೇ ಅರ್ಥ.

ಹಾಗೆಯೇ ಈ ಶ್ರಮಸರಪಳಿಯ ಕೊಂಡಿಗಳನ್ನು ಅರ್ಥಮಾಡಿಕೊಳ್ಳದೆ ಹೋದರೆ ನಮ್ಮಲ್ಲಿ ಸಾಮಾಜಿಕ ವರ್ಗಪ್ರಜ್ಞೆ ನಶಿಸಿದೇ ಎಂದೇ ಅರ್ಥ.
ವರ್ಗಪ್ರಜ್ಞೆ ಜಾಗೃತವಾಗಿರುವ ಸಮಾಜದಲ್ಲಿ ನಬೀಸಾಬ್‌ ಏಕಾಂಗಿಯಾಗುತ್ತಿರಲಿಲ್ಲ. ಅವರಂತೆಯೇ ದುಡಿದು ಬದುಕುವ ನೂರಾರು ಶ್ರಮಿಕರು ತಮ್ಮ ಜಾತಿ ಮತಗಳ ಅಸ್ಮಿತೆಗಳನ್ನು ಬದಿಗೊತ್ತಿ, ಶ್ರಮಸರಪಳಿಯ ಕೊಂಡಿಗಳನ್ನು ಮತ್ತಷ್ಟು ಬಲಪಡಿಸುತ್ತಿದ್ದರು.

ಇಂದು ತನ್ನ ಧಾರ್ಮಿಕ ನಂಬಿಕೆಗಳಿಗಾಗಿ ದಾಳಿಗೊಳಗಾದ ನಬೀಸಾಬ್‌ನಂತೆಯೇ ಮುಂದೊಂದು ದಿನ ಮತ್ತೋರ್ವ ವ್ಯಾಪಾರಿ ತಾನು ಹುಟ್ಟಿದ ಜಾತಿಯ ಕಾರಣಕ್ಕಾಗಿ ಹಲ್ಲೆಗೊಳಗಾಗಬಹುದು. ರೇಷ್ಮೆ ಗೂಡುಗಳ ಮಾರುಕಟ್ಟೆಯಲ್ಲೂ ಧಾರ್ಮಿಕ ಅಸ್ಮಿತೆಗಳನ್ನು ಹುಡುಕುತ್ತಿರುವ ಧರ್ಮಾಂಧರು ಒಂದು ತುಂಡು ರೇಷ್ಮೆ ವಸ್ತ್ರದ ಹಿಂದಿರುವ ಶ್ರಮಸರಪಳಿಯನ್ನು ಗಮನಿಸಬೇಕು.

ಹಿಪ್ಪು ನೇರಳೆ ಬೆಳೆಯುವ ರೈತ ಯಾವುದೋ ಶೂದ್ರ ಸಮುದಾಯಕ್ಕೆ ಸೇರಿದವನಾಗಿರುತ್ತಾನೆ. ಮೇಲ್ಜಾತಿಯವರ ಒಡೆತನದಲ್ಲಿ ನಡೆಯುವ ಬೇಸಾಯ ಪ್ರಕ್ರಿಯೆಯಲ್ಲಿ ದಲಿತರ ಶ್ರಮವೂ ಬೆರೆತಿರುತ್ತದೆ. ಈ ಸೊಪ್ಪುಗಳನ್ನು ಉಣಬಡಿಸುತ್ತಲೇ ಮೊಟ್ಟೆಗಳು ಚಿಟ್ಟೆಗಳಾಗಿ ತಮ್ಮ ಸುತ್ತಲೂ ಗೂಡು ಕಟ್ಟಿಕೊಳ್ಳುತ್ತವೆ.

ಗೂಡು ಕಟ್ಟುವಂತೆ ಮಾಡುವ ಸಾಕಾಣಿಕೆ ಶ್ರಮದಲ್ಲಿ ಹಲವು ಜಾತಿ ಸಮುದಾಯಗಳ ಕೊಡುಗೆ ಇರುತ್ತದೆ. ಈ ಗೂಡುಗಳಿಂದ ತೆಗೆಯಲಾಗುವ ನೂಲಿನಲ್ಲಿ ಮುಸಲ್ಮಾನನೊಬ್ಬನ ಬೆವರು ಅಡಗಿರುತ್ತದೆ. ಈ ಬೆವರಿನ ಫಲವನ್ನೇ ನೇಕಾರನೊಬ್ಬನು ವಸ್ತ್ರವನ್ನಾಗಿ ಪರಿವರ್ತಿಸುತ್ತಾನೆ. ಈ ವಸ್ತ್ರದ ಉತ್ಪಾದನೆಯ ಹಾದಿಯಲ್ಲಿ ರೇಷ್ಮೆ ಗೂಡನ್ನು ನಂಬಿ ಬದುಕುವ ರೈತ, ನೂಲನ್ನು ನಂಬಿ ಬದುಕುವ ಮುಸಲ್ಮಾನ ಮತ್ತು ವಸ್ತ್ರ ನೇಯುವ ನೇಕಾರ ತಮ್ಮ ಜಾತಿ ಸಮುದಾಯದ ಅಸ್ಮಿತೆಗಳನ್ನು ಮರೆತು ಶ್ರಮಿಸುತ್ತಾರೆ.

ಈ ವಸ್ತ್ರ ಮಾರುಕಟ್ಟೆಗೆ ಬಂದ ಕೂಡಲೇ ಅದಕ್ಕೆ ಪಾವಿತ್ರ್ಯತೆ, ಜಾತಿ ಶ್ರೇಷ್ಠತೆಯ ಪಾರಮ್ಯ ಮತ್ತು ಮಾರುಕಟ್ಟೆ ಮೌಲ್ಯ ಅಂಟಿಕೊಳ್ಳುತ್ತದೆ. ಇಲ್ಲಿಗೆ ಶ್ರಮಿಕರ ಶ್ರಮ ಸರಪಳಿ ಅಂತ್ಯಗೊಂಡು, ಇಡೀ ಶ್ರಮಿಕ ಸಮುದಾಯ ಈ ಉತ್ಪನ್ನದಿಂದ ಹೊರತಾಗಿಬಿಡುತ್ತದೆ. ರೇಷ್ಮೆ ಗೂಡಿನ ವಹಿವಾಟಿನ ಮೇಲೆ ದಾಳಿ ನಡೆಯುವಾಗ, ಈ ಶ್ರಮ ಸರಪಳಿಯ ವಾರಸುದಾರರು ಒಂದಾಗಿದ್ದರೆ, ಇಂತಹ ದಾಳಿಗಳ ವಿರುದ್ಧ ದನಿ ಎತ್ತಬಹುದಲ್ಲವೇ ?

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ, ಬಂಡವಾಳಶಾಹಿಯೊಡನೆ ಕೈಜೋಡಿಸಿ ಶ್ರಮಿಕ ಸಮುದಾಯಗಳ ನಡುವೆ ಶಾಶ್ವತವಾದ ಗೋಡೆಗಳನ್ನು ಕಟ್ಟುತ್ತಿರುವ ಈ ಸಂದರ್ಭದಲ್ಲಿ ಇಂತಹ ಒಂದು ವರ್ಗಪ್ರಜ್ಞೆ ಅನಿವಾರ್ಯವಾಗಿದೆ. ಬಹುಶಃ ಈ ವರ್ಗಪ್ರಜ್ಞೆ ಜಾಗೃತವಾಗಿದ್ದಲ್ಲಿ ಇಂದು ಜಾತ್ರೆಗಳಲ್ಲಿ, ಸಂತೆಗಳಲ್ಲಿ, ದೇವಾಲಯದ ಆವರಣಗಳಲ್ಲಿ ಸಣ್ಣಪುಟ್ಟ ವ್ಯಾಪಾರಿಗಳು ಮತಾಂಧರಿಂದ ದಾಳಿಗೊಳಗಾಗುತ್ತಿರಲಿಲ್ಲ.

ಮತೀಯ ದ್ವೇಷ ಮತ್ತು ಧಾರ್ಮಿಕ ಅಸ್ಮಿತೆಗಳಿಗೆ ಬಲಿಯಾಗಿ ಇಂತಹ ದಾಳಿಗಳನ್ನು ಸಂಭ್ರಮಿಸುವ ಮೂಲಕ ನಮ್ಮ ಸಮಾಜ ತನ್ನ ಪ್ರಜ್ಞಾಶೂನ್ಯತೆಯನ್ನು ಪ್ರದರ್ಶಿಸಿದೆ. ಆದರೆ ಶ್ರಮಿಕ ವರ್ಗ ಈ ಪ್ರಜ್ಞಾಶೂನ್ಯತೆಯ ಸಮೂಹ ಸನ್ನಿಗೊಳಗಾಗದೆ ತನ್ನ ಮೂಲ ವರ್ಗ ಅಸ್ಮಿತೆಯೊಂದಿಗೆ ಗುರುತಿಸಿಕೊಳ್ಳುವುದರೊಂದಿಗೆ ಶ್ರಮಜೀವಿಗಳ ಶೋಷಣೆಯ ಮೂಲವಾದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಶೋಷಕ ಬಂಡವಾಳಶಾಹಿಯ ವಿರುದ್ಧ ಐಕ್ಯತೆಯಿಂದ ಹೋರಾಡುವುದು ಇಂದಿನ ಅನಿವಾರ್ಯತೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending