ಬಹಿರಂಗ
ಮಕ್ಕಳು-ಮಾಧ್ಯಮ ಪ್ರಜ್ಞೆ ಮತ್ತು ಪ್ರಜ್ಞಾವಂತ ಮಾಧ್ಯಮ
- ನಾ ದಿವಾಕರ
ಡಾ. ಎಚ್. ಕೆ. ರಂಗನಾಥ್ ಅವರ ಕರ್ನಾಟಕ ರಂಗಭೂಮಿ ಕೃತಿಯ, ವಿಲಾಸಿ ರಂಗಭೂಮಿ ಅಧ್ಯಾಯದ ಒಂದೆಡೆ ಕೃತಿಕಾರರು ಹೀಗೆ ಹೇಳುತ್ತಾರೆ : “ ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸಿ ವಿಕಾಸಗೊಳಿಸುವ ಪ್ರಯತ್ನವನ್ನು ಕನ್ನಡ ರಂಗಭೂಮಿ ಇತ್ತೀಚಿನವರೆಗೆ ಮಾಡಲಿಲ್ಲ ಅಂದರೆ ಸಲ್ಲುತ್ತದೆ,,,,,,,,ಮಕ್ಕಳ ರಂಗಭೂಮಿಯನ್ನು ನಿರ್ಮಿಸುವಲ್ಲಿ ಕರ್ನಾಟಕ ಹಿಂದೆಯೇ ಉಳಿಯಿತು.
ದೊಡ್ಡವರು ಆಡುತ್ತಿದ್ದ ನಾಟಕಗಳನ್ನೇ ಮಕ್ಕಳೂ ನೋಡಿಕೊಂಡು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ದೊಡ್ಡವರಿಗಾಗಿ ಸಣ್ಣ ಅಕ್ಷರದಲ್ಲಿ ಅಚ್ಚು ಮಾಡಿದ ದಿನಪತ್ರಿಕೆಯನ್ನು ಒಲ್ಲದ ಮಕ್ಕಳೂ ಓದಬೇಕಲ್ಲವೇ ? ಹಾಗೆ ! ಮಕ್ಕಳಿಗಾಗಿಯೇ ಮೀಸಲುಗೊಂಡ ದಿನಪತ್ರಿಕೆ ಚಿತ್ರಗಳೊಡನೆ ದೊಡ್ಡ ಅಕ್ಷರದಲ್ಲಿ ಅಚ್ಚು ಆಗುವವರೆಗೆ “ ನಮ್ಮ ಮಕ್ಕಳಿಗೆ ಪ್ರಪಂಚದ ವಿದ್ಯಮಾನಗಳೇ ಗೊತ್ತಿಲ್ಲ ” ಎಂದುತಪ್ಪು ಹೊರಿಸುವುದು ಅಪರಾಧ ತಾನೇ ? ” (ಪುಟ 393 ಕರ್ನಾಟಕ ರಂಗಭೂಮಿ 1978 ಸುರುಚಿ ಪ್ರಕಾಶನ)
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ನಾ. ಡಿಸೋಜ
ಇಲ್ಲಿ ರಂಗಭೂಮಿಯ ಪ್ರಶ್ನೆಯನ್ನು ಪಕ್ಕಕ್ಕಿಡೋಣ. ಏಕೆಂದರೆ 1978ರ ನಂತರದಲ್ಲಿ ಮಕ್ಕಳಿಗಾಗಿಯೇ ನಾಟಕಗಳನ್ನು ರಚಿಸುವಲ್ಲಿ ಯಶಸ್ವಿ ಪ್ರಯತ್ನಗಳು ನಡೆದಿವೆ. ಈ ಮಾತುಗಳಲ್ಲಿ ನಾವು ಗಮನಿಸಬೇಕಿರುವುದು ದಿನಪತ್ರಿಕೆಗಳ ಬಗ್ಗೆ ರಂಗನಾಥ್ ಅವರು ಹೇಳಿರುವ ಮಾತುಗಳನ್ನು.
ಈ ಪ್ರಶ್ನೆ ಇಂದಿಗೂ ಪ್ರಶ್ನೆಯಾಗೇ ಉಳಿದಿದ್ದರೆ ಅಥವಾ ಉತ್ತರಗಳು ದೊರೆತು ಮತ್ತದೇ ಪ್ರಶ್ನೆಯ ಪುನರಾರ್ತನೆಯಾಗುವ ಪರಿಸ್ಥಿತಿ ಉಂಟಾಗಿದ್ದರೆ ಇದು ಖಂಡಿತವಾಗಿಯೂ ಯೋಚಿಸಬೇಕಾದ ವಿಚಾರ. 1978ರ ಸಂದರ್ಭದ ಮಕ್ಕಳು ಎನ್ನುವ ಪರಿಕಲ್ಪನೆಗೂ ಇಂದಿನ ಪರಿಕಲ್ಪನೆಗೂ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ನವ ಶತಮಾನದ ಮಕ್ಕಳ ಮನಸ್ಸು ಹೊರ ಪ್ರಪಂಚಕ್ಕೆ ಬೇಗನೆ ತೆರೆದುಕೊಳ್ಳುತ್ತದೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ಮಕ್ಕಳು ಹಾಗೆಯೇ ಇರಲಿಕ್ಕೆ ಸಾಧ್ಯ.
ನಾವೂ ದಶಕಗಳ ಕಾಲ ದಿನಪತ್ರಿಕೆಗಳನ್ನು ಓದುತ್ತಲೇ ಬಂದಿದ್ದೇವೆ. ಬಹುಶಃ 1970ರ ದಶಕದ ಉತ್ತರಾರ್ಧದಲ್ಲಿ ಮತ್ತು 1980ರ ದಶಕದಲ್ಲಿ ಶಾಲೆಗಳಲ್ಲಿ ದಿನಪತ್ರಿಕೆಗಳ ಮುಖ್ಯ ಸುದ್ದಿ ಓದುವ ಒಂದು ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ಇದೂ ಸಹ ಪ್ರೌಢಶಾಲೆಯ ಹಂತದಿಂದ ಆರಂಭವಾಯಿತು ಎನಿಸುತ್ತದೆ. ಪ್ರಾಥಮಿಕ ಶಾಲೆಯ ಹಂತದಲ್ಲಿ ಇತ್ತೀಚೆಗೆ ಇದು ಚಾಲ್ತಿಯಲ್ಲಿರಬಹುದು.
ಇಲ್ಲಿ ರಂಗನಾಥ್ ಅವರು ಎತ್ತಿರುವ ಪ್ರಶ್ನೆ ನಮ್ಮಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂದಿನ ಮಕ್ಕಳು ಪತ್ರಿಕೆಗಳನ್ನು ಓದುವುದಿಲ್ಲ, ನಿತ್ಯ ಸುದ್ದಿಗಳನ್ನು ತಿಳಿದುಕೊಳ್ಳುವುದಿಲ್ಲ, ತಮ್ಮ ಸುತ್ತಲಿನ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಪರಿವೆ ಇರುವುದಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಇದೆ.
ಇಲ್ಲಿ ಮಕ್ಕಳು ಎಂದರೆ ಯಾವ ಓರಿಗೆಯವರು ? ಪ್ರಾತಮಿಕ ಶಾಲೆಯ ಮಕ್ಕಳಿಗೆ ಈ ತಿಳುವಳಿಕೆ ಬೇಕೋ ಬೇಡವೋ ಎನ್ನುವ ಜಿಜ್ಞಾಸೆಯನ್ನು ಬದಿಗಿಟ್ಟು ಯೋಚಿಸಿದಾಗ ಆಧುನಿಕ ಜಗತ್ತಿನ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ವಿಕಸನದ ಹಂತದಲ್ಲಿರುವ ಮಕ್ಕಳನ್ನು ತಲುಪುತ್ತಿವೆಯೇ ಎಂಬ ಪ್ರಶ್ನೆ ಹೆಚ್ಚು ಪ್ರಸ್ತುತ ಎನಿಸುತ್ತದೆ.
ಇಂದಿನ ವಿದ್ಯುನ್ಮಾನ ತಂತ್ರಜ್ಞಾನ ಯುಗದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಅಂತರ್ಜಾಲ ಕೇಂದ್ರಿತ ಮಾಹಿತಿ ಕಣಜ ಇರುವುದನ್ನು ಕಾಣಬಹುದು. ಗೂಗಲ್ ಇಂದು ಸಕಲ ಜ್ಞಾನದ ಆಕರದಂತೆ ಕಾಣುತ್ತಿದ್ದು ಎಂಟು ಹತ್ತು ವರ್ಷದ ಮಕ್ಕಳೂ ಸಹ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಗೂಗಲ್ ಹುಡುಕಾಟದಲ್ಲಿ ತೊಡಗಿರುತ್ತಾರೆ.
ತಮ್ಮ ಅಥವಾ ತಮ್ಮ ಪೋಷಕರ, ಕುಟುಂಬದ ಹಿರಿಯ ಕೈಯ್ಯಲ್ಲಿನ ಮೊಬೈಲ್ ಅಥವಾ ಲ್ಯಾಪ್‍ಟಾಪ್ ಈ ಮಕ್ಕಳಿಗೆ ಹೊರ ಜಗತ್ತನ್ನು ಕಂಡುಕೊಳ್ಳುವ ಮಹಾದ್ವಾರದಂತೆ ಕಾಣುತ್ತದೆ. ಕೊರೋನಾ ಸಂದರ್ಭದ ಆನ್ ಲೈನ್ ಶಿಕ್ಷಣದಿಂದ ಈಗ ಮಧ್ಯಮ ವರ್ಗಗಳ ಎಳೆಯ ಮಕ್ಕಳ ಬಳಿಯೂ ಒಂದು ಸ್ಮಾರ್ಟ್ ಫೋನ್ ಇರುವುದು ಸಾಮಾನ್ಯ ಸಂಗತಿಯಾಗಿದೆ.
ಆದರೆ ಈ ಮಕ್ಕಳಲ್ಲಿನ ಪ್ರಾಪಂಚಿಕ ತಿಳುವಳಿಕೆ ಅಥವಾ ಸುತ್ತಲಿನ ನಿತ್ಯದ ವಿದ್ಯಮಾನಗಳ ಬಗ್ಗೆ ಅರಿವು ಮತ್ತು ತಾವು ಬದುಕುತ್ತಿರುವ ಒಂದು ಸಮಾಜದ ಪರಿವೆ ಇವುಗಳನ್ನು ಪರೀಕ್ಷಿಸಲು ಹೋದಾಗ ನಿರಾಸೆಯಾಗುವುದೇ ಹೆಚ್ಚು. ಏಕೆಂದರೆ ಬಹುತೇಕ ಮಕ್ಕಳನ್ನು ಪೋಷಕರು ಶಿಕ್ಷಣ ಬಂಧಿಗಳನ್ನಾಗಿ ಮಾಡಿರುತ್ತಾರೆ.
ಶಾಲೆ-ಟ್ಯೂಷನ್-ಶಾಲೆ ವ್ಯೂಹದಿಂದ ಹೊರಬರಲು ಸಮಯ ಸಿಕ್ಕಾಗಲೆಲ್ಲಾ ಈ ಮಕ್ಕಳು ಪರದೆಯ ಮೊರೆ ಹೋಗುತ್ತಾರೆ. ಟಿವಿ, ಲ್ಯಾಪ್‍ಟಾಪ್ ಅಥವಾ ಸ್ಮಾರ್ಟ್‍ಫೋನ್ ಅವರ ಮತ್ತೊಂದು ಪ್ರಪಂಚವಾಗಿ ಪರಿಣಮಿಸುತ್ತದೆ. ಈ ಪ್ರವೃತ್ತಿಯನ್ನು ನಗರ ಪ್ರದೇಶಗಳ ಕೆಳಮಧ್ಯಮ ವರ್ಗಗಳಲ್ಲೂ ಕಾಣಬಹುದು, ಕೆಲವೆಡೆ ಗ್ರಾಮೀಣ ಪ್ರದೇಶಗಳಲ್ಲೂ ಕಾಣಬಹುದು.
ಇಲ್ಲಿ ಬಲಿಯಾಗುತ್ತಿರುವುದು ಓದು ಮತ್ತು ಓದಿನ ಹವ್ಯಾಸ. ಪಠ್ಯೇತರ ಓದು ಎನ್ನುವುದನ್ನು ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆ ಹಂತಹಂತವಾಗಿ ಕೊಲ್ಲುತ್ತಲೇ ಬಂದಿದ್ದು ಸ್ಮಾರ್ಟ್ ಫೋನ್ ಯುಗದಲ್ಲಿ ಮಕ್ಕಳಿಗೆ ದಿನಪತ್ರಿಕೆಗಳೂ ಸಹ ಓದಿಗೆ ಸಹ್ಯ ಎನಿಸುವುದಿಲ್ಲ. ಈ ಸಂದರ್ಭದಲ್ಲೇ ಡಾ ರಂಗನಾಥ್ ಅವರ ಪ್ರಶ್ನೆ ಮಹತ್ವ ಪಡೆಯುತ್ತದೆ.
ಮಕ್ಕಳ ಚಂಚಲ ಮನಸಿಗೆ ನಿಲುಕುವಂತೆ ದಿನನಿತ್ಯದ ಸುದ್ದಿಗಳನ್ನು ನೀಡುವಂತಹ ಪತ್ರಿಕೆಗಳು ಸಾಧ್ಯವಿಲ್ಲವೇ ? ಮಕ್ಕಳಿಗಾಗಿ ಒಂದು ಪುರವಣಿಯನ್ನೋ ಅಥವಾ ವಾರಪತ್ರಿಕೆಗಳಲ್ಲಿ ಒಂದೆರಡು ಪುಟಗಳನ್ನೋ ಮೀಸಲಿಡುವ ಮೂಲಕ ಮಕ್ಕಳ ಹಾಡು, ಕಥೆ, ವಿನೋದ ಇತ್ಯಾದಿಗಳನ್ನು ನೋಡುತ್ತಿದ್ದೇವೆ.
ಆದರೆ ಇವು ಮನರಂಜನೆಯ ಸರಕುಗಳಷ್ಟೇ. ತಮ್ಮ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಮಕ್ಕಳ ಗ್ರಹಿಕೆಗೆ ನಿಲುಕುವಂತೆ ಪತ್ರಿಕೆಯನ್ನು ರೂಪಿಸಲು ಸಾಧ್ಯವೇ ? ಇದಕ್ಕೆ ನೇರ ಉತ್ತರ ಕಷ್ಟವಾಗಬಹುದು. ಆದರೆ ಚರ್ಚೆ ಮಾಡಲು ಅಡ್ಡಿಯಿಲ್ಲ.
ಆದರೆ ಸಮಸ್ಯೆಯಿಂದ ಅಥವಾ ಪ್ರಶ್ನೆಯಿಂದ ನಾವು ವಿಮುಖರಾಗುವಂತಿಲ್ಲ. ರಾಜಕೀಯ ಎಂದರೆ ಹೊಲಸು ಎಂದು ಮೂಗುಮುರಿಯುವ ಸಂದರ್ಭದಲ್ಲಿ ನಾವಿರುವಾಗಲೇ ಹೊಲಸು ರಾಜಕಾರಣ ಮನೆಮನೆಯನ್ನೂ ತಲುಪುತ್ತಿದೆ. ಮಕ್ಕಳಿಗೇಕೆ ರಾಜಕೀಯ ಎನ್ನುವ ಕಾಲವೂ ಒಂದಿತ್ತು ಆದರೆ ಇಂದಿನ ಸಾಂಸ್ಕೃತಿಕ-ಮತೀಯ ರಾಜಕಾರಣ ಮಕ್ಕಳ ಮನಸುಗಳನ್ನೂ ಹೊಕ್ಕಿದೆ.
ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಅಸ್ಮಿತೆಗಳ ಲೋಕ ತಾಂಡವಾಡುತ್ತಿದೆ. ‘ ನಮ್ಮವರು ’ ಮತ್ತು ‘ ಅನ್ಯ ’ರನ್ನು ಗುರುತಿಸುವಷ್ಟು ಮಟ್ಟಿಗೆ ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಮತಾಂಧತೆ, ಜಾತೀಯತೆಯ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಈ ವಿಷಬೀಜಗಳಿಂದಲೇ ಮುಗಿಲೆತ್ತರಕೆ ಬೆಳೆದಿರುವ ವಿಷವೃಕ್ಷಗಳೇ ಆಡಳಿತ ವ್ಯವಸ್ಥೆಯ ಮೇಲೆ ಅಧಿಪತ್ಯ ಸಾಧಿಸುತ್ತಿದೆ. ಅಂದರೆ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುತ್ತಿದ್ದವರೇ ಈಗ ಆ ಪ್ರಜೆಗಳನ್ನು ಅಸ್ಮಿತೆಗಳ ಮೂಲಕ ಗುರುತಿಸಲು ಸಜ್ಜಾಗಬೇಕಿದೆ.
ಈ ಅಸ್ಮಿತೆಗಳ ವಿಷವರ್ತುಲದಿಂದ ಮಕ್ಕಳನ್ನು ಹೊರತರಬೇಕಾದರೆ ಎಳೆಯ ಮಕ್ಕಳಿಗೂ ತಮ್ಮ ಸುತ್ತಲಿನ ಸಾಮಾಜಿಕ, ಸಾಂಸ್ಕೃತಿಕ , ರಾಜಕೀಯ ವಿದ್ಯಮಾನಗಳು ಅರ್ಥವಾಗುವಂತೆ ತಿಳಿಸಬೇಕಾಗುತ್ತದೆ. ಸಾಂಸ್ಕೃತಿಕ ನೆಲೆಯಲ್ಲಿ, ಮತಧಾರ್ಮಿಕ ಚೌಕಟ್ಟಿನಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಕ್ರಮೇಣ ಸಾಮಾಜಿಕ ಮತ್ತು ರಾಜಕೀಯ ಫಲ ನೀಡುವಷ್ಟರಲ್ಲಿ ವಿಷಬೇರುಗಳು ಮತ್ತಷ್ಟು ವ್ಯಾಪಕವಾಗಿ ಹರಡಿರುತ್ತವೆ.
ಆದರೆ ಇದಕ್ಕೆ ಪ್ರತಿಯಾಗಿ ಸಂವೇದನಾಶೀಲ ಸಾಂಸ್ಕೃತಿಕ ನೆಲೆಗಳನ್ನು ಮಕ್ಕಳ ನಡುವೆ ಸ್ಥಾಪಿಸುವಲ್ಲಿ ಬಹುಶಃ ನಾವು ಎಡವಿದ್ದೇವೆ ಎನಿಸುತ್ತದೆ. ಈ ವೈಫಲ್ಯದ ಪರಿಣಾಮವನ್ನು ಶತಮಾನದ ಮಕ್ಕಳ ಸಮೂಹ ಸಾಂಸ್ಕೃತಿಕ ವಲಸೆಯಲ್ಲಿ ಕಾಣುತ್ತಿದ್ದೇವೆ. ಇಂದಿನ ಎಳೆಯ ಮಕ್ಕಳು ಒಂದು ದಶಕದ ನಂತರ ಇದೇ ವಲಸೆಯ ಮುಂದುವರೆದ ಭಾಗವಾಗಿ ಕಂಡರೆ ಅಚ್ಚರಿಯೇನಿಲ್ಲ ಅಲ್ಲವೇ ?
ಇಲ್ಲಿ ನಮಗೆ ಪ್ರಜಾತಂತ್ರ ವ್ಯವಸ್ಥೆಯ ಮತ್ತು ಪ್ರಜ್ಞಾವಂತ ಸಮಾಜದ ನಾಲ್ಕನೆಯ ಸ್ತಂಭ, ಮಾಧ್ಯಮ ಲೋಕ ಮುಖ್ಯವಾಗುತ್ತದೆ. ಸ್ಮಾರ್ಟ್ ಫೋನ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ಇಂದು ಪ್ರತಿಯೊಬ್ಬ ವ್ಯಕ್ತಿಗೂ ನೇರವಾಗಿ ತಲುಪುವ ಸುಲಭ ಸಾಧನಗಳಾಗಿವೆ. ಮಕ್ಕಳೂ ಸಹ ಇದನ್ನೇ ಬಳಸಿಕೊಳ್ಳುತ್ತಿದ್ದಾರೆ. ಇಡೀ ಪ್ರಪಂಚದ ವಿದ್ಯಮಾನಗಳನ್ನು ಒಂದು ಪರದೆಯಲ್ಲಿ ಸೆರೆಹಿಡಿದು ಮಕ್ಕಳ ಮುಂದಿಟ್ಟರೂ ಅವರ ಗಮನ ಹರಿಯುವುದು ಆಕರ್ಷಣೀಯ ಆಟಗಳ ಕಡೆಗೆ.
ಈ ಆಟಗಳೂ ಸಹ ಮಕ್ಕಳಿಗಾಗಿ ದೊಡ್ಡವರ ಮನಸ್ಥಿತಿಯಲ್ಲಿ ರೂಪಿಸಲಾಗಿರುತ್ತದೆ. ಹೊಡೆದುರುಳಿಸುವುದು, ತೊಡೆದುಹಾಕುವುದು, ಗೆಲ್ಲುವ ಹಪಹಪಿ , ಸಾಫಲ್ಯ ಮತ್ತು ವೈಫಲ್ಯ ಹೀಗೆ ವಯಸ್ಕ ಬದುಕಿನ ವಿದ್ಯಮಾನಗಳನ್ನೇ ಮಕ್ಕಳ ಆಟಗಳ ರೂಪದಲ್ಲಿ ಅಳವಡಿಸಲಾಗಿರುತ್ತದೆ. ಮಕ್ಕಳು ಇಡೀ ದಿನ ಇಂತಹ ಆಟಗಳ ನಡುವೆಯೇ ಕಾಲ ಕಳೆಯುತ್ತಾರೆ.
ಕರ್ನಾಟಕದ ಮಟ್ಟಿಗೇ ಹೇಳುವುದಾದರೆ ಮುದ್ರಣ ಮಾಧ್ಯಮದ ಯಾವುದೇ ಪತ್ರಿಕೆಗಳೂ ಮಕ್ಕಳ ಮನಸನ್ನು ತಲುಪುವಂತಹ ಪುಟಗಳನ್ನು ಹೊಂದಿರುವುದಿಲ್ಲ. ಭಾನುವಾರದ ಪುರವಣಿಗಳಲ್ಲಿನ ಹಳೆಯ ವಿನ್ಯಾಸದ ಹಾಡು, ಪದ್ಯ, ಸಣ್ಣ ಕಥೆ ಮತ್ತು ಮನರಂಜನೆಯ ಸರಕುಗಳನ್ನು ಬಿಟ್ಟರೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾದಂತಹ ಸರಕುಗಳು ಇರುವುದಿಲ್ಲ.
ಕೋವಿದ್ 19 ಸಂದರ್ಭದಲ್ಲಿ ಬಹುಪಾಲು ಎಲ್ಲ ಪತ್ರಿಕೆಗಳ ಪುರವಣಿಗಳೇ ತಮ್ಮ ಮೂಲ ಅಸ್ತಿತ್ವ ಕಳೆದುಕೊಂಡಿದ್ದು, ಮಕ್ಕಳ ಅವಶ್ಯಕತೆಗಳು ನಿರ್ಲಕ್ಷಿತವಾಗಿವೆ. ಮಕ್ಕಳಿಗಾಗಿಯೇ ವರುಷಕ್ಕೊಮ್ಮೆ ಹೊರತರುವ ವಿಶೇಷ ಸಂಚಿಕೆಗಳು ಇದ್ದುದರಲ್ಲಿ ಕೊಂಚ ಆಶಾಭಾವನೆ ಮೂಡಿಸುವಂತಿವೆ.
ಆದರೆ ಮುದ್ರಣ ಮಾಧ್ಯಮದಿಂದ ಬಹುಪಾಲು ವಿಮುಖವಾಗಿರುವ ಮಕ್ಕಳಿಗೆ ವಿದ್ಯುನ್ಮಾನ ಮಾಧ್ಯಮಗಳು ಕನಿಷ್ಟ ಮಟ್ಟದಲ್ಲಿ ತಲುಪುವ ಪ್ರಯತ್ನಗಳನ್ನೂ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟ. ಅನ್ಯ ಭಾಷೆಯ ಮತ್ತು ಕನ್ನಡದಲ್ಲಿ ಡಬ್ ಆದ ಕಾರ್ಟೂನ್ ವಾಹಿನಿಗಳ ಪುನರಾವರ್ತಿತ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ಬೌದ್ಧಿಕ ವಿಕಸನಕ್ಕೆ ಮತ್ತು ಮಕ್ಕಳ ಪಠ್ಯೇತರ ಜ್ಞಾನಾರ್ಜನೆಗೆ ಪೂರಕವಾದಂತಹ ಕಾರ್ಯಕ್ರಮಗಳು ಯಾವುದೇ ಕಾರ್ಟೂನ್ ವಾಹಿನಿಗಳಲ್ಲೂ ಕಾಣುವುದಿಲ್ಲ. ಸಾಂಪ್ರದಾಯಿಕ ಕಲೆಗಳಾದ ಸೂತ್ರದ ಬೊಂಬೆ, ತೊಗಲು ಬೊಂಬೆ, ಛಾಯಾ ಬೊಂಬೆಯಾಟ ಮುಂತಾದವುಗಳಿಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅವಕಾಶವೇ ಇಲ್ಲದಿರುವುದು ದುರಂತ.
ಶೈಕ್ಷಣಿಕ ನೋಡಿದಾಗಲೂ, ಶಾಲಾ ಪಠ್ಯಗಳಲ್ಲಿ ಈಗಲೂ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸುವ ವಿಜ್ಞಾನ ಮತ್ತು ಗಣಿತವನ್ನು, ಮಕ್ಕಳು ಅನವಶ್ಯಕ ಎಂದು ಭಾವಿಸುವ ಚರಿತ್ರೆಯ ಮಜಲುಗಳನ್ನು, ಅವರ ವಯೋಮಿತಿಗೆ ಅನುಗುಣವಾಗಿ ಮನಮುಟ್ಟುವಂತೆ ತಿಳಿಸಿಕೊಡುವ ಕಾರ್ಯಕ್ರಮಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಂಡುಬರುವುದಿಲ್ಲ.
ಮಕ್ಕಳು ತಮ್ಮದೇ ಆದ ಬೌದ್ಧಿಕ ನೆಲೆಯಲ್ಲಿ ಗ್ರಹಣ ಶಕ್ತಿಯನ್ನು ಹೊಂದಿರುತ್ತಾರೆ. ಈ ಗ್ರಹಿಕೆಯ ಸಾಮಥ್ರ್ಯಕ್ಕೆ ಪೂರಕವಾದ ಬೌದ್ಧಿಕ, ಶೈಕ್ಷಣಿಕ ಸರಕುಗಳನ್ನು ಒದಗಿಸುವುದು ಒಂದು ಸ್ವಸ್ಥ ಸಮಾಜದ ಆದ್ಯತೆಯಾಗಿರಬೇಕಲ್ಲವೇ ? ತಂತ್ರಜ್ಞಾನ ಯುಗದ ನಾಗಾಲೋಟದಲ್ಲಿ ಇದನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ.
ಒಂದೆಡೆ ಬೈಜೂದಂತಹ ಶೈಕ್ಷಣಿಕ ವೆಬ್ ಸಾಧನಗಳು ಮಕ್ಕಳಿಗೆ ಅವರ ವಯೋಸಹಜ ಇತಿಮಿತಿಗಳನ್ನೂ ಮೀರಿದಂತೆ ಸರಕುಗಳನ್ನು ಉಣಬಡಿಸುತ್ತಿವೆ, ಮಧ್ಯಮ ವರ್ಗದ ಮಕ್ಕಳ ಮಿದುಳಿನಲ್ಲಿ ಅವಶ್ಯಕತೆಗಿಂತಲೂ ಹೆಚ್ಚು ಸರಕುಗಳನ್ನು ತುಂಬುತ್ತಿವೆ. ಮತ್ತೊಂದೆಡೆ ಮಕ್ಕಳು ತಮ್ಮ ಸಹಜ ವಿಕಸನಕ್ಕೆ ಅತ್ಯವಶ್ಯವಾದ ವಸ್ತುಗಳಿಂದ ವಂಚಿತರಾಗುತ್ತಿದ್ದಾರೆ.
ಕನ್ನಡದ ಹತ್ತಾರು ವಾಹಿನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನೇ ಮರೆತು ಮಾರುಕಟ್ಟೆಯ ಗುಲಾಮಗಿರಿಗೆ ಒಳಗಾಗಿರುವುದರಿಂದ ಮಕ್ಕಳ ಮನೋವಿಕಾಸಕ್ಕೆ ಪೂರಕವಾದಂತಹ ಯಾವುದೇ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲದಂತಾಗಿದೆ.
ಮುಂಜಾನೆಯಲ್ಲಿ ಜ್ಯೋತಿಷ್ಯ, ಆಗಮ, ಆರಾಧನೆ ಮತ್ತು ವಾಸ್ತು ಮುಂತಾದ ಮೌಢ್ಯ ಬಿತ್ತನೆ ಪ್ರಧಾನವಾಗಿದ್ದರೆ ರಾತ್ರಿ ವೇಳೆ ಕದನ ಕುತೂಹಲ ಕೆರಳಿಸುವ ಯುದ್ಧ, ಮಹಾಸಮರ, ಪ್ರವಾಹ, ವಿಶ್ವ ವಿನಾಶ ಹೀಗೆ ಭೀತಿ ಬಿತ್ತನೆಯ ಕಾರ್ಯಕ್ರಮಗಳು ಪ್ರಧಾನವಾಗಿರುತ್ತವೆ. ಈ ನಡುವೆ ಪ್ರಸಾರವಾಗುವ ಧಾರಾವಾಹಿಗಳು ಮಕ್ಕಳಿಗೆ ತಲುಪುವುದಕ್ಕಿಂತಲೂ ಹೆಚ್ಚಾಗಿ ಅವರಲ್ಲಿನ ಸೂಕ್ಷ್ಮತೆಯನ್ನೂ ನಾಶಪಡಿಸುವಂತಿರುತ್ತವೆ.
ಕನ್ನಡದ ಸುದ್ದಿಮನೆಗಳಿಂದ ಮಕ್ಕಳನ್ನು ದೂರ ಇರಿಸುವುದೇ ಕ್ಷೇಮ ಎನ್ನುವ ರೀತಿಯಲ್ಲಿ ಸುದ್ದಿ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ವಾಹಿನಿಯಲ್ಲಿ ಮಕ್ಕಳಿಗಾಗಿ ದಿನಕ್ಕೆ ಕನಿಷ್ಟ ಅರ್ಧಗಂಟೆಯಷ್ಟು ಅವಧಿಯನ್ನೂ ಒದಗಿಸಲು ಕನ್ನಡ ವಾಹಿನಿಗಳಿಗೆ ಸಾಧ್ಯವಾಗದಿರುವುದು ದುರಂತ.
ಚಲನ ಚಿತ್ರ ಕ್ಷೇತ್ರದಲ್ಲಿ ಬಹುಶಃ ಮಕ್ಕಳ ಕಲ್ಪನೆಯೇ ಮಾಯವಾಗಿದೆ. ಕನ್ನಡದಲ್ಲಿ ಒಂದು ಸುಂದರ ಮಕ್ಕಳ ಚಿತ್ರವನ್ನು ಕಂಡು ದಶಕಗಳೇ ಕಳೆದಿರಬಹುದು. ವಯಸ್ಕರಿಗಾಗಿ ಹೆಣೆಯುವ ಕತೆಗಳು, ಹೊಡಿಬಡಿ ದೃಶ್ಯಗಳು, ಅತಿಮಾನುಷ ಶಕ್ತಿಯ ನಾಯಕ ಮತ್ತು ಸತ್ವಹೀನ ನಾಯಕಿ ಹೀಗೆ ಹಳಸಲು ಸೂತ್ರಗಳನ್ನೇ ಬಳಸುತ್ತಿರುವ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಕೆಲವೇ ಚಿತ್ರಗಳು ಮಕ್ಕಳಿಗೆ ತಲುಪುವಂತಿರುವುದು ದುರಂತ.
ಮಕ್ಕಳಿಗಾಗಿಯೇ ಮನರಂಜನೆಯನ್ನೊಳಗೊಂಡ ಮನೋವಿಕಾಸ ಭೂಮಿಕೆಯ ಚಿತ್ರಗಳು ಕಾಣುತ್ತಲೇ ಇಲ್ಲ. ಇಲ್ಲಿ ಮತ್ತೊಮ್ಮೆ ಡಾ ರಂಗನಾಥ್ ನಾಟಕವನ್ನು ಕುರಿತು ಹೇಳಿದ ಮಾತುಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ. ನಮ್ಮಲ್ಲಿ ಪ್ರತಿಭೆಗಳ ಕೊರತೆ ಇಲ್ಲ, ಅವಕಾಶಗಳ ಕೊರತೆ ಇದೆ. ಟಿ ಆರ್ ಪಿ ಮತ್ತು ಮಾರುಕಟ್ಟೆಯ ಚೌಕಟ್ಟಿನಿಂದಾಚೆಗೆ ಒಂದು ಉತ್ತಮ ಕೌಟುಂಬಿಕ ಧಾರಾವಾಹಿಯನ್ನೂ ತಯಾರಿಸಲು ಸಾಧ್ಯವಾಗದ ಪರಿಸ್ಥಿತಿ ಇರುವುದು ದುರಂತ.
ವಿಕಸಿಸುವ ಕುಸುಮಗಳ ಪಕಳೆಗಳಿಗೆ ವಿಷದ ಲೇಪನ ಮಾಡುವ ಬೌದ್ಧಿಕ ಪ್ರಕ್ರಿಯೆಯಲ್ಲಿ ಸಾಂಸ್ಕೃತಿಕ ರಾಜಕಾರಣದ ಮತಾಂಧ ಶಕ್ತಿಗಳು ಸಕ್ರಿಯವಾಗಿರುವ ಈ ಸಂದರ್ಭದಲ್ಲಿ ನಮ್ಮ ಆದ್ಯತೆಗಳಿಗೆ ಎರಡು ಆಯಾಮಗಳಿರಬೇಕಾಗುತ್ತದೆ. ಮೊದಲನೆಯದು ಇಂದಿನ ಎಳೆ ಮಕ್ಕಳ ಮಿದುಳಿನಲ್ಲಿ ಸಮ ಸಮಾಜದ ಕಲ್ಪನೆಯನ್ನು ಜೀವಂತವಾಗಿರಿಸುವುದು ಮತ್ತು ವೈಜ್ಞಾನಿಕ-ವೈಚಾರಿಕ ಚಿಂತನೆಯ ನೆಲೆಯನ್ನು ಭವಿಷ್ಯಕ್ಕಾಗಿ ಕಾಪಾಡುವುದು.
ಈ ನಿಟ್ಟಿನಲ್ಲಿ ನಾವು ಯೋಚಿಸದೆ ಹೋದರೆ ಇಡೀ ಪೀಳಿಗೆಯನ್ನೇ ತಮ್ಮ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳಲು ಮತಾಂಧ, ಜಾತಿವಾದಿ ಶಕ್ತಿಗಳು ಆವರಿಸುತ್ತವೆ. ಈ ಬೌದ್ಧಿಕ ವಿಕಸನದ ಮಾರ್ಗಗಳನ್ನು ಮರುಶೋಧಿಸುವ ಪ್ರಯತ್ನ ನಮ್ಮದಾಗಬೇಕಿದೆ. ಮಾಧ್ಯಮಗಳು ಪ್ರಜ್ಞೆ ಕಳೆದುಕೊಂಡಿವೆ ಆದರೆ ನಾಗರಿಕ ಸಮಾಜದ ಪ್ರಜ್ಞೆ ಜೀವಂತವಾಗಿದೆ ಅಲ್ಲವೇ ?
ಕೃಪೆ : ಬೆವರಹನಿ ಪತ್ರಿಕೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.
ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.
ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ
ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.
ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.
ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.
1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.
ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.
ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.
ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.
ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.
ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.
ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.
ಭವಿಷ್ಯದ ರಾಜಕೀಯ ಪಾತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.
ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ5 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ3 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್


