ಅಂತರಂಗ
ಹೋಳಿ ಎಂಬ ಬಯಲು ಲೈಂಗಿಕತೆಯ ಪಳಿಯುಳಿಕೆ
- ಆರಡಿಮಲ್ಲಯ್ಯ ಕಟ್ಟೇರ
ಹೋಳಿ ಆಟವು ಫಲವಂತಿಕೆಯ ಬಯಲು ಲೈಂಗಿಕಕ್ರಿಯೆಯ ರೂಪವೆಂಬುದನ್ನು ಈ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ವಿಲ್ ಡ್ಯೂರಾಂಟ್ ಕೂಡ ಹೋಳಿಯನ್ನು ಮುಕ್ತ ಲೈಂಗಿಕಕ್ರಿಯೆಯೆಂದು ಬರೆಯುತ್ತಾನೆ. ‘ವಾಸಂತಿದೇವಿಯ ಗೌರವಾರ್ಥ ಆಚರಿಸುವ ಹೋಲಿ ಹಚ್ಚುವ ಸ್ವೇಚ್ಚಾರದ ಲಕ್ಷಣವನ್ನು ತಳೆಯುತ್ತಿತ್ತು. ಲಾಂಛನಗಳನ್ನು ಮೆರವಣಿಗೆಗಳಲ್ಲಿ ಗೆದ್ದುಕೊಂಡು ಹೋಗುತ್ತಿದ್ದರು. ಅವುಗಳಿಂದ ಮೈಥುನದ ಚಲನೆಗಳನ್ನು ಅಭಿನಯಿಸಿ ತೋರಿಸುತ್ತಿದ್ದರು.
ಛೋಟಾನಾಗಪುರದಲ್ಲಿ ಸುಗ್ಗಿಯ ಕಾಲವು ಸಾರ್ವತ್ರಿಕ ಸ್ವೇಚ್ಛಾಚಾರಕ್ಕೆ ಸಂಕೇತವಾಗುತ್ತಿತ್ತು. ಪುರುಷರು ಎಲ್ಲಾ ರೀತಿಯ ರಿವಾಜುಗಳನ್ನು ಪಕ್ಕಕ್ಕಿಡುತ್ತಿದ್ದರು. ಮಹಿಳೆಯರು ಎಲ್ಲಾ ಲಜ್ಜೆಯನ್ನು ತೊರೆಯುತ್ತಿದ್ದರು. ತರುಣಿಯರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡಲಾಗುತ್ತಿತ್ತು’ ಎನ್ನುತ್ತಾನೆ.
ಚೀನಾದೇಶದಲ್ಲಿಯೂ ನಾಟಕವು ಧಾರ್ಮಿಕ ಫಲವಂತಿಕೆಯ ಆಚರಣೆಯಾಗಿಯೇ ನಡೆಸಲ್ಪಡುತ್ತಿತ್ತೆಂದು ಡ್ಯೂರಾಂಟ್ ಬರೆಯುತ್ತಾನೆ. ‘ಚೌ’ ರಾಜವಂಶದ ಅವಧಿಯಲ್ಲಿ, ನಾಟಕ ಸ್ವಚಂದತೆ, ಅಶ್ಲೀಲಗಳು ಮುಜುಗರ ಉಂಟು ಮಾಡುತ್ತವೆ ಎಂಬ ಕಾರಣದಿಂದ ನಾಟಕವನ್ನು ನಿಷೇಧಿಸಲಾಯಿತು. ಬುದ್ಧನು ಭಿಕ್ಕುಗಳು ನಾಟಕವನ್ನು ಯಾವುದೇ ಕಾರಣಕ್ಕೆ ನೋಡಬಾರದೆಂದು ಎಚ್ಚರಿಕೆ ವಿಧಿಸಿದ್ದ.
ಬೇಟೆಯೆಂದರೆ ಸಂಭೋಗವೆಂಬ ಅರ್ಥವೂ ಇದೆ; ಬೇಟ ಎಂದರೂ ಪ್ರಣಯವೇ. ಆಹಾರ ಸಂಚಯದ ಬೇಟೆಗೂ ಬೇಟಕ್ಕೂ ಅವಿನಾಭಾವ ಸಂಬಂಧವಿದೆ. ನಿರ್ಧಿಷ್ಟ ಅವಶ್ಯಕ ಸಂದರ್ಭದ ಕ್ರಿಯಾತ್ಮಕ ರೂಪುರೇಷೆಯೇ ಅನುಕರಣೆಯ ಒತ್ತಡವಾಗಿರುತ್ತದೆ. ಮಾನವನ ಜೀವವಿಕಾಸದ ಹಂತಗಳ ಪ್ರತಿಯೊಂದು ನಡೆಯಲ್ಲೂ ಸಂದರ್ಭದ ಸ್ಥಿರ ಅನುಕರಣೆಯನ್ನು ಮೀರಿ ನಡೆಯುವುದು ಬಹುಮುಖ್ಯ ಹಂತವಾಗಿದೆ. ಆದಿ ಮಾನವನ ಬದುಕು ಮತ್ತು ವೈಜ್ಞಾನಿಕ ಅನ್ವೇಷಣೆ ಶುರುವಾಗುವುದು ಬೇಟೆಯಿಂದ.
ಬೇಟೆಯು ಆರಾಧನೆಯಲ್ಲವಾದರೂ, ಅನುಕರಣೆಯ ಅರ್ಧಭಾಗದ ಔಪಚಾರಿಕ ಶಿಕ್ಷಣವೆಂದರೆ ಸರಿಯಾದೀತು. ಇಂಥ ಸಂದರ್ಭದಲ್ಲಿ ಬೇಟೆಗೂ ಬೇಟಕ್ಕೂ ಪ್ರತ್ಯೇಕಿಸಲಾಗದ ತಳಾದಿಯ ಸಂಬಂಧಗಳಿವೆ. ಪ್ರಾಣಿಗಳ ಬೇಟೆಯ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದ ವ್ಯಕ್ತಿಯು ಅನುಕರಿಸಿಯೇ ಬೇಟೆ ಮತ್ತು ಲೈಂಗಿಕ ಶಿಕ್ಷಣವನ್ನು ಪಡೆದದ್ದು. ಮನುಷ್ಯನ ಬೌದ್ಧಿಕ ವಿಕಾಸದ ಹಾದಿಯಲ್ಲಿ ಬೇಟೆಯ ಕ್ರಮ ಸಂಭ್ರಮದ ವಾತಾವರಣವನ್ನು ನಿರ್ಮಿಸಿರಬೇಕು.
ಬೇಟೆಯನ್ನು ನೇರ ಪ್ರಾಣಿಗಳಿಂದ ಕಲಿಯಲಾಗದ ಕೆಲವರಿಗೆ ಅದು ಬೇಟೆಯಾಡುವ ಸಹಜಾಭಿನಯದ ಪ್ರಸ್ತುತಪಡಿಸುವಿಕೆಯಾಗಿರಬಹುದು.
ಇದರಿಂದಾಗಿ ಬೇಟೆಯ ಪ್ರಮಾಣ ಹೆಚ್ಚಿ ಆ ಸಮಾರಾಧನೆಯೇ ಮುಂದೆ ಆಚರಣೆಯ ರೂಪಕ್ಕೆ ತಿರುಗಿ ಬಯಲಾಟ ಆಗಿರಬಹುದಾದ ಸಾಧ್ಯತೆಗಳಿವೆ. ಬೆಂಕಿಯ ಮುಂದೆ ಸೇರಿದ ಗುಂಪು ಆಹಾರ, ಮೈಥುನ, ನಿದ್ದೆಯನ್ನೂ ಸಹಜವೆಂಬಂತೆ ಬೆಂಕಿಯ ಬಯಲಲ್ಲಿಯೇ ಸಾಂಗವಾಗಿ ಸಾಗಿಸಿಕೊಂಡು ಬಂದಿರಲೂ ಸಾಧ್ಯ. ಬಯಲಾಟದ ಸಂದರ್ಭದಲ್ಲಿ ಹಿಡಿಯುವ ದೀವಟಿಗೆಗಳ ಕ್ರಮವೂ ಅದನ್ನೇ ಸಂಕೇತಿಸುತ್ತದೆ. ಇಂದಿಗೂ ನಡೆಯುವ ಕಾಮದಹನ ಹೋಳಿಯಲ್ಲಿ ಬೆಂಕಿಯನ್ನು ಕಾಮಾಗ್ನಿಯಾಗಿ ಪರಿಭಾವಿಸುತ್ತಿರುವುದು ಕಂಡುಬರುತ್ತದೆ.
ಕಾಡುಪ್ರಾಣಿಗಳ ದೇಹಗಳನ್ನು ಸುಟ್ಟು ತಿನ್ನಲು, ಅವುಗಳಿಂದ ರಕ್ಷೆ ಪಡೆಯಲು, ಕತ್ತಲನ್ನು ನೀಗಿಸಿದ ಬೆಳಕಾಗಿ ಮಾತ್ರ ದ್ರಾವಿಡ ಆಚರಣೆಗಳಲ್ಲಿ ಬೆಂಕಿಗೆ ಸ್ಥಾನವಿದೆ. ವಿಶೇಷವೆಂದರೆ ಆಚರಣೆಯ ಸಂದರ್ಭಗಳಲ್ಲಿ ಬೆಂಕಿಯ ಪ್ರಸ್ತುತತೆಯು ನಿಷೇಧಾತ್ಮಕ ಹಾಗೂ ಸಂಘರ್ಷಾತ್ಮಕ ನೆಲೆಗಳಲ್ಲಿಯೇ ನೆಲವಾಸಿ ದ್ರಾವಿಡ ಮತಗಳಲ್ಲಿ ಕಂಡುಬರುತ್ತದೆ. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧ ವರ್ತನಾತ್ಮಕ ಹಾಗೂ ಆಹಾರ, ಮೈಥುನ ಮುಂತಾದ ವೈಲಕ್ಷಣಗಳ ಮೂಲಕ ಈ ಕ್ರಮವನ್ನು ಗುರುತಿಸಲಾಗುತ್ತದೆ.
ಕಾಡುನಾಗರಿಕ ವ್ಯವಸ್ಥೆಯನ್ನು ದಾಟಿ ನಗರನಾಗರಿಕತೆಯ ಹೊಸ್ತಿಲನ್ನು ಮುಟ್ಟಿದ ಮೇಲೂ ಬಹಳ ಕಾಲದವರೆಗೆ ಮನುಷ್ಯ ಭೂತಕಾಲದ ಅನೇಕ ಅಭ್ಯಾಸಗಳನ್ನು ಪೂರ್ಣವಾಗಿ ಬಿಡಲಾರ. ನಾಗರಿಕ ಸಮಾಜದ ಮನುಷ್ಯನ ಗ್ರಹಿಕೆಗಳು ಹಾಗೂ ನಂಬಿಕೆಗಳಲ್ಲಿ ಆದಿಮಕಾಲದ ನಂಬಿಕೆಗಳು ಹಾಗೇ ಅಂಟಿಕೊಂಡಿವೆ.
ಆದುದರಿಂದಲೆ ನಾಗರಿಕತೆಯ ಪ್ರಾರಂಭದ ದೆಸೆಯ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಲು ಕಾಡುನಾಗರಿಕ ಅವಸ್ಥೆಯ ಸನ್ನಿವೇಶಗಳನ್ನು ವಿಶೇಷವಾಗಿ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಒಂದು ಆಚರಣೆಯನ್ನು ಹೊರಗಿನಿಂದ ನೋಡಿ ಅದರ ಆಶಯವನ್ನು ಗ್ರಹಿಸುವುದು ಕಷ್ಟವಾದಾಗ ಒಳಗಿನಿಂದಲೇ ಸೀಳಿನೋಡಬೇಕಾಗುತ್ತದೆ. ಅರ್ಥಾತ್ ಅದರಲ್ಲಿ ಬಳಕೆಯಾಗುವ ವಿವಿಧ ಸಾಧನ ಸಲಕರಣೆಗಳ ಸಾಂಕೇತಿಕತೆ ಮೂಲಕ ಅದರ ಆಶಯ ಗ್ರಹಿಸಬೇಕಾಗುತ್ತದೆ.
ನಾವು ಹೋಳಿಯನ್ನು ಇಂದಿನ ರೂಪದಲ್ಲಿ ನೋಡುವ ಮೊದಲು ಗತದ ಚಾರಿತ್ರಿಕ ಮಹತ್ವವನ್ನು ಗುರುತಿಸಬೇಕಾಗಿದೆ.
ಹೋಳಿ ಆಚರಣೆಯನ್ನು ಕುರಿತು ಎಸ್.ಎಸ್. ಹಿರೇಮಠರು, ಡಿ.ಲಿಂಗಯ್ಯನವರ ಲೇಖನದಲ್ಲಿ ಪ್ರಸ್ತಾಪವಾಗಿರುವುದನ್ನು ಉದ್ಧರಿಸುತ್ತಾರೆ. ‘ವೃಕ್ಷಾರಾಧನೆಯ ಪ್ರಾಚೀನ ಜನಾಂಗವೊಂದು ಕಾಮನಹಬ್ಬದ ಆಚರಣೆಗೆ ಕಾರಣವಾಗಿರುವ ಸಾಧ್ಯತೆಯಿದೆ. ಮಾವಿನಮರ ಅಥವಾ ಬೇವಿನಮರವನ್ನು ಪೂಜಿಸುತ್ತಿದ್ದ ಜನಪದ ಜನಾಂಗದ ಸಾಂಕೇತಿಕ ಆಚರಣೆ ಕಾಮನಹಬ್ಬ ಎಂದು ಊಹಿಸಲು ಅವಕಾಶವಿದೆ.
ಮೂಲದಲ್ಲಿ ಇದು ಶಿಶ್ನಪೂಜೆ, ಫಲವಂತಿಕೆಯ ಆರಾಧನೆ, ಕೃಷಿಕರ ಹಬ್ಬ ಶೂದ್ರ ಉತ್ಸವ. ಬೇವಿನ ಸೊಪ್ಪಿಗೆ ಕಾಮನ ಹೂವ್ವು ಎನ್ನುವ ಹೆಸರಿದೆ. ಎಸ್.ಎಸ್. ಹಿರೇಮಠರು ಹೊಸಪೇಟೆಯ ಕ್ಷೇತ್ರಕಾರ್ಯದ ಮಾಹಿತಿಯೊಂದನ್ನು ಹೇಳುತ್ತಾ ಹೋಳಿಯ ಸಂದರ್ಭದಲ್ಲಿ ಮಾಂಸಹಾರ ಭೋಜನ ಸಾಮೂಹಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಲೈಂಗಿಕ ಸ್ವಚ್ಛಂದತೆಯಿರುತ್ತದೆ ಎಂದು ಮುದುಕರೊಬ್ಬರು ಹೇಳಿದ್ದನ್ನು ದಾಖಲಿಸಿದ್ದಾರೆ.
ಹೋಳಿ ಪ್ರಾದಿಮಕಾಲದ ಸಮುದಾಯದ ಸ್ಥಿರತೆ ಮತ್ತು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಫಲವಂತಿಕೆಯೇ ಮೂಲ ಉದ್ದೇಶವಾಗಿದ್ದ ಬಯಲು ಆಟವೇ ಆಗಿತ್ತೆನ್ನುವುದನ್ನು ಅನೇಕರು ಪ್ರಸ್ತಾಪಿಸಿದ್ದಾರೆ. ‘ಈ ಪ್ರಾಚೀನ ಆಚರಣೆಗಳು ಬೇರೆಯದೆ ಉದ್ದೇಶಗಳಿಗಾಗಿ ಹುಟ್ಟಿಕೊಂಡವು ಎಂಬುದಂತೂ ನಿಜ. ಇದನ್ನು ಅರ್ಥಮಾಡಿಕೊಳ್ಳದೆ ಹೋಗಿರುವುದು ಈಗ ನಿಜವಾಗಿಯೂ ಸಮಸ್ಯೆಯಾಗಿದೆ.
ಉದಾಹರಣೆಗೆ: ವಸಂತನ ಹೋಳಿಹಬ್ಬವು ಇಂದು ಸಾರ್ವಜನಿಕರು ಮತ್ತು ಕಾನೂನುಗಳೆರಡರ ದೃಷ್ಠಿಯಲ್ಲಿಯೂ ಒಂದು ಅಶ್ಲೀಲ ಕಾಮುಕ ಹಾಗೂ ಅಸಹ್ಯಕರ ಹಬ್ಬ. ಈ ಹಬ್ಬ ಹುಟ್ಟಿಕೊಂಡದ್ದು ಅತ್ಯಂತ ಪ್ರಾಚೀನ ಅನಾಗರಿಕ ಕೃಷಿಪೂರ್ವ ಕಾಲದಲ್ಲಿ. ಆಗ ಆಹಾರದ ಕೊರತೆಯಿತ್ತು, ಅದರ ಪೂರೈಕೆಯೂ ಕೂಡ ಅನಿರ್ದಿಷ್ಟವಾಗಿತ್ತು. ಹೀಗೆ ಆಹಾರದ ಸಂಗ್ರಹಣೆಯೇ ಜೀವನೋಪಾಯವಾಗಿದ್ದ ಕಾಲದಲ್ಲಿ ಸಂತಾನಾಭಿವೃದ್ಧಿಗೆ ತೀವ್ರ ಪ್ರಚೋದನೆಯ ಅವಶ್ಯಕತೆಯಿತ್ತು. ಇಲ್ಲವಾದಲ್ಲಿ ಒಡಲಿನ ಹಸಿವು ಸಂತನೋತ್ಪತ್ತಿಗೆ ಮಾರಕವಾಗಿ ಬಿಡಬಹುದಿತ್ತು. ಹಾಗಾಗಿ ಮೂಲದಲ್ಲಿ ಹೋಳಿ ಒಂದು ಅಶ್ಲೀಲ ಹಬ್ಬವಾಗಿರಲೆ ಇಲ್ಲ’ ಎಂದು ದೇವಿಪ್ರಸಾದ್ ಚಟ್ಟೋಪಧ್ಯಾಯರು ಬರೆಯುತ್ತಾರೆ.
ಹೋಳಿಹಬ್ಬದ ಮೂಲ ಆಶಯವು ಮಾನವರ ಪ್ರಾಣಿಗಳ ಮತ್ತು ಬೆಳೆಗಳ ಫಲವತ್ತತೆಯನ್ನು ಹೆಚ್ಚಿಸುವುದೇ ಆಗಿತ್ತೆಂದು ಅನೇಕ ವಿದ್ವಾಂಸರು ವಿವರಿಸಿದ್ದಾರೆ. ಅದರ ಮೂಲರೂಪದಲ್ಲಿ ಹಾಗೂ ಲೈಂಗಿಕ ಸ್ವಚ್ಛಂದತೆಯೂ ಸೇರಿತ್ತು. ರಾಜಮಹಲ್ ಬೆಟ್ಟಗಳಲ್ಲಿ ಪರ್ಗಣ ಉತ್ಸವದ ವೇಳೆ ಅವಿವಾಹಿತರು ಲೈಂಗಿಕಕ್ರಿಯೆಯಲ್ಲಿ ತೊಡಗುತ್ತಿದ್ದರು. ಒರಿಸ್ಸಾದ ಭೂಮಿಯಾಗಳು ತಮ್ಮ ವಸಂತೋತ್ಸವದ ವೇಳೆ ರಕ್ತಸಂಬಂಧ ಪತಿ-ಪತ್ನಿ ಸಂಬಂಧ ಎಂಬುದಕ್ಕೆಲ್ಲಾ ಬೆಲೆ ಕೊಡುವುದಿಲ್ಲ. ನೀಲಗಿರಿ ಬೆಟ್ಟದ ಕೊತರಲ್ಲೂ ಇದೇ ಪದ್ಧತಿಯಿದೆ.
ಅಸ್ಸಾಮಿನ ಬುಡಕಟ್ಟುಗಳು ಬೊಂಬೆಗಳು ಮಣಿಪುರದ ಬುಡಕಟ್ಟುಗಳು ಇತ್ಯಾದಿಗಳು ಸಹ ಇದಕ್ಕೆ ಹೊರತಲ್ಲ. ಮೇಲೆ ಹೇಳಲಾದ ವಿದ್ವಾಂಸರ ಮಾತುಗಳನ್ನು ಒಪ್ಪಿಕೊಂಡು ಮುಂದುವರಿದರೆ ಬಯಲಾಟವು ಫಲವಂತಿಕೆಯ ಲೋಕವಾದಿ ಆಚರಣೆಯಾಗಿತ್ತೆಂದು; ಅದೇ ಆಚರಣೆ ಬಯಲಾಟವಾಯ್ತೆಂದು ತಿಳಿಯಲು ಸುಲಭವಾಗುತ್ತದೆ.
ಪ್ರಾಚೀನ ಇಂಡಿಯಾದ ಉತ್ಪಾದನಾ ವಿಧಿ ಆಚರಣೆಗಳ ಯಾವುದೋ ರೀತಿಯಲ್ಲಿ ಸಮಾಜಗಳ ಸೃಷ್ಟಿ ಹಾಗೂ ಪುನರುತ್ಪಾಧನೆಯನ್ನು ನಡೆಸುತ್ತವೆಂಬ ಸಹಜಜ್ಞಾನವು ಪ್ರಾಚೀನರು ಹಾಗೂ ಆಧುನಿಕರಿಬ್ಬರಿಗೂ ಇದೆಯೆಂದಾದಲ್ಲಿ ಈ ಸಹಜಜ್ಞಾನವನ್ನು ವಿವರಿಸುವುದು ನಮ್ಮ ಸಮಸ್ಯೆಯಾಗಿದೆ.
ಪ್ರಾರಂಭಕ್ಕೆ ಅತಿಮಾನವನ ಅಥವಾ ನಿಸರ್ಗದಾಚೆಗಿನ ಒಂದು ಶಕ್ತಿ ಎಂಬುದರ ಕಲ್ಪನೆ ಇಲ್ಲ. ಏಕೆಂದರೆ ಈ ಆದಿ ಬುಡಕಟ್ಟಿನ ಜನರಿಗೆ ಒಂದು ಮತವಿದೆ. ಆದರೆ ಅವರಿಗೆ ದೈವವೆಂಬುದರ ಕಲ್ಪನೆ ಇಲ್ಲ…. ಹಾಗೆ ಮತಧರ್ಮಕ್ಕೆ ದೈವದ ಕಲ್ಪನೆ ಇರಲೇಬೇಕೆಂದು ಭಾವಿಸುವುದಾದರೆ ಬೌದ್ಧಮತವು ಕೂಡ ಒಂದು ಧರ್ಮವಾಗಿ ಪರಿಗಣಿತವಾಗುವಂತಿಲ್ಲ. ಏಕೆಂದರೆ ಅಲ್ಲಿ ದೈವಕ್ಕೆ ಸ್ಥಾನವಿಲ್ಲ. ಅತಿ ಪ್ರಾಚೀನವಾದ ಮಾನವನ ಸಮುದಾಯಗಳಲ್ಲಿ ಮತಧರ್ಮವೆಂಬುದು ಇರಲು ಸಾಧ್ಯವಿರಲಿಲ್ಲವೆಂದು ಜಾನ್‌ಲುಬಾಕ್‌ನ ಅಭಿಪ್ರಾಯವಾಗಿದೆ.
ಹದಿನಾಲ್ಕನೆಯ ಶತಮಾನದ ನಂತರ ಭಕ್ತಿಪಂಥದ ಪ್ರಭಾವದಿಂದ ಭಾರತೀಯ ಬಹುಮುಖ್ಯ ಆಚರಣೆಗಳೆಲ್ಲವೂ ಲೌಕಿಕವನ್ನು ನಿರ್ಲಕ್ಷಿಸುವ ಪ್ರಯತ್ನ ಮಾಡಿದವು. ಭವವನ್ನು ನೀಗಿಸಿಕೊಳ್ಳುವ ಮೂಲಕ ಮೋಕ್ಷಕ್ಕೆ ಸಾಧನವೆಂಬಂತೆ ಭಕ್ತಿಯು ಮೂಲಸ್ಥಾಯಿಯಾಯಿತು. ಆಶಯವು ಏನೇ ಇದ್ದರೂ ಪರಿಣಾಮ ನೆಲಮೂಲ ಲೋಕವಾದಕ್ಕೆ ದೊಡ್ಡ ಪೆಟ್ಟು ನೀಡಿತು. ಒಳಿತೆಲ್ಲವೂ ದೈವಾನುಗ್ರಹವೆಂಬ ಮನೋಭಾವ ಪ್ರಬಲವಾದಂತೆ ನಾಟಕದ ಮೂಲವನ್ನೂ ದೈವತ್ವದ ಕೇಂದ್ರಕ್ಕೆ ಒಯ್ಯಲು ಸುಲಭವಾಯಿತು.
ನಂತರದ ದಿನಮಾನಗಳಲ್ಲಿ ನಾಟಕವನ್ನು ಅಧ್ಯಯನ ಮಾಡಿದವರೂ ಸಂಪ್ರದಾಯವಾದಿಗಳಾಗಿರದಿದ್ದರೂ ದೈವತ್ವವನ್ನು ನಿರಾಕರಿಸದವರಾದ ಕಾರಣ ದೈವಮೂಲ ಪ್ರಬಲವಾಗಿ ಸಂಶೋಧನೆಯಲ್ಲೂ ಮಹತ್ತರ ಸ್ಥಾನಪಡೆಯಿತು. ‘ಜನತಾ ರಂಗಭೂಮಿಯ ಹುಟ್ಟು ದೇವಪೂಜೆಯ ಮೂಲ ಮನೋಭಾವದಲ್ಲಿಯೇ ಅಡಗಿದೆ. ಕನ್ನಡನಾಡಿನ ಜಾನಪದ ರಂಗಭೂಮಿಯಾದರೂ ಈ ಮಾತಿಗೆ ಹೊರತಾದುದಲ್ಲ. ಆಹಾರ, ನಿದ್ರಾ, ಭಯ, ಮೈಥುನಗಳ ಕಾರಣದಿಂದಾಗಿ ದೇವರನ್ನೂ ದೆವ್ವಗಳನ್ನೂ ಆರಾಧಿಸುವ ಸಾಮಾನ್ಯ ಸಂಪ್ರದಾಯಗಳ ಆಚರಣೆಯಲ್ಲಿ ಹಳ್ಳಿಯ ನಾಟಕದ ಹುಟ್ಟನ್ನು ಕಾಣಬಹುದಾಗಿದೆ.
ಮಳೆ, ಗುಡುಗು, ಮಹಾಪೂರ, ಕ್ಷಾಮ, ರೋಗ, ಮರಣ ಈ ಎಲ್ಲವೂ ನೈಸರ್ಗಿಕ ಶಕ್ತಿಗಳ ಕೈವಾಡದ ಕಾರಣವೆಂದು ನೆರೆನಂಬಿದ್ದ ಪ್ರಾಚೀನ ಕನ್ನಡಿಗರು, ಆ ಶಕ್ತಿಗಳನ್ನು ಒಲಿಸಿಕೊಳ್ಳುವ ಸಲುವಾಗಿ ಮಾಡುತ್ತಿದ್ದ ಉಪಾಸನೆಗಳಲ್ಲಿ ಅಂತಹ ಶಕ್ತಿಗಳ ಅನುಕರಣವೂ ಅಡಗಿ ನಾಟಕ ಹುಟ್ಟಿತು’ ಎಂದು ಭಾವಿಸಿ ಪ್ರಾಚೀನಕಾಲದಲ್ಲಿ ನಡೆಯುತ್ತಿದ್ದ ಲೋಕಕ್ರಿಯೆಗಳನ್ನು ಸಾಂಕೇತಿಕಾರ್ಥದಲ್ಲಿ ಆಚರಿಸುವ ವಿಧಿಯಾಚರಣೆಗಳನ್ನು ಅಧ್ಯಯನಕಾರರು ದೈವಪೂಜೆ ವಿಧಿವಿಧಾನಗಳೆಂದು ಅರ್ಥೈಸಿಕೊಂಡಿದ್ದಾರೆ.
ದೈವಾರಾಧನೆಯೇ ಬಯಲಾಟದ ಮೂಲ ಎಂದು ಸಾಕ್ಷ್ಯ ಒದಗಿಸುವ ಸಂಶೋಧಕರು ಗ್ರೀಕ್‌ದೇಶದಲ್ಲೂ ದೈವಾರಾಧನೆಯಿಂದಲೇ ಬಯಲಾಟವು ಆರಂಭವಾಯಿತೆಂದು ಡಯೋನಿಸಿಯಸ್ ದೇವತೆಯ ಆಚರಣೆಯನ್ನು ಸಾಕ್ಷ್ಯವಾಗಿ ನೀಡುತ್ತಾರೆ. ಗ್ರೀಕ್ ರಂಗಭೂಮಿಯ ಮೂಲ ಡಯೋನಿಸಿಯಸ್ ಎಂಬ ಫಲಕೊಡುವ ದೇವರ ಪ್ರೀತ್ಯರ್ಥವಾಗಿ ನಡೆಯುತ್ತಿದ್ದ ಧಾರ್ಮಿಕ ಆಚರಣೆ. ಕ್ರಿ.ಪೂ. 13ನೆಯ ಶತಮಾನದಲ್ಲೇ ಪ್ರಚಲಿತವಾಗಿದ್ದ ಈ ಆಚರಣೆಯಲ್ಲಿ, ಮೆರವಣಿಗೆಯಲ್ಲಿ ಹೋತ ಬಲಿಕೊಡುವ ಸಂಪ್ರದಾಯವೂ ಮತ್ತು ಡಿಥಿರ್ಯಾಂಬ್ ಎಂಬ ಹೆಸರಿನ ಮೇಳ ಭಜನೆಯೂ ಇರುತ್ತಿತ್ತು. ಮೊದಲು ಈ ಆಚರಣೆ ಬಹುಶಃ ಒಂದು ಉನ್ಮತ್ತ ಕ್ರಿಯಾವಿಧಿಯಾಗಿತ್ತು; ನರಬಲಿಯೂ ಕೂಡಾ ಈ ಆಚರಣೆಯ ಅಂಗವಾಗಿತ್ತು.
ಆದರೆ, ಆಮೇಲೆ ಗ್ರೀಕ್ ನಾಗರಿಕತೆ ವಿಕಾಸಗೊಂಡಂತೆ ಈ ಆಚರಣೆಯೂ ನಾಗರಿಕವಾಗತೊಡಗಿತು. ಕ್ರಿ.ಪೂ. ಏಳನೆಯ ಶತಮಾನದ ಹೊತ್ತಿಗೆ ಗ್ರೀಕ್ ವೀರರ ಕಥೆಗಳು ಈ ಭಜನೆಯ ಪಠ್ಯವಾಗಿ ಸೇರಿಕೊಂಡವು. ಹೀಗೆ ಮಾರ್ಪಾಟುಗೊಂಡ ಈ ಆಚರಣೆಯೇ ಗ್ರೀಕ್ ಬುಡಕಟ್ಟುಗಳನ್ನು ಒಂದುಗೂಡಿಸುವ ಸಾಧನವೂ ಆಗಿದ್ದರಿಂದ ಇದಕ್ಕೆ ಕ್ರಿ.ಪೂ ಆರನೆಯ ಶತಮಾನದಲ್ಲಿ ರಾಜ್ಯದ ಮಾನ್ಯತೆಯೂ ದೊರಕಿತು. ಡಯೋನಿಸಿಯಸ್ ದೇವತಾಚರಣೆಯೂ ಬಯಲು ಲೈಂಗಿಕಕ್ರಿಯೆ ಆಗಿತ್ತೆಂಬುದನ್ನು ಮುಂದೆ ಆಧಾರ ಸಮೇತ ವಿವರಿಸಲಾಗುತ್ತದೆ.
ಪ್ರಾಚೀನ ಕಾಲದ ಕ್ರಿ.ಪೂ. ಶತಮಾನಗಳಲ್ಲಿ ‘ಅಥೆನ್ಸಿನಲ್ಲಿ ಸಮೃದ್ಧಿ ಇತ್ತು. ಆಲೀವ್ ಎಣ್ಣೆಯ ರಫ್ತು ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು. ಆ ಕಾರಣದಿಂದಲೇ ಮಣ್ಣಿನ ಜಾಡಿಗಳನ್ನು ಮಾಡುವ ಉಧ್ಯಮ ಬೆಳೆಯಿತು. ಮಣ್ಣಿನ ಹೂಜಿಯ ಮೇಲೆ ಕೆಂಪುಬಣ್ಣದ ಚಿತ್ರಗಳನ್ನು ಬಿಡಿಸುವ ಕಲೆ ಕ್ರಿ.ಪೂ. ೫೩೫ರ ಸುಮಾರಿಗೆ ಸಿದ್ದಿಸಿತು. ಇಡೀ ಜಾಡಿಯನ್ನು ಕಪ್ಪಾಗಿಸಿ ಅದರ ಮೇಲೆ ಸಹಜ ಕೆಂಪುಬಣ್ಣದಲ್ಲಿ ವಾಸ್ತವವೆಂಬಂತೆ ಕಾಣುವ ಚಿತ್ರಗಳನ್ನು ಮೂಡಿಸುತ್ತಿದ್ದರು.
ಎಣ್ಣೆಯ ವ್ಯಾಪಾರ ಒಳನಾಡಿನಲ್ಲೂ ನಡೆಯುತ್ತಾ ಜನಸಾಮಾನ್ಯರ ಆಚರಣೆ, ಸಮೂಹಗಾನ, ಅಣಕುನೃತ್ಯ, ಮದ್ಯ ದೇವತೆಯಾದ ಡಯೊನೀಸಿಯಸ್‌ನ ಆರಾಧನೆ, ಇವು ವ್ಯಾಪಕವಾಗಿ ನಗರಕ್ಕೂ ತಲುಪಿ ಈ ಆಚರಣೆಗಳೇ ರಂಗಭೂಮಿಯ ತಳಹದಿಗಳಾದವು. ಆಚರಣೆಯ ಸಮಯದಲ್ಲಿ ಹೋತದ ಬಲಿ ಕೊಡುತ್ತಿದ್ದರು. ಹಾಗಾಗಿ ಆ ಆಚರಣೆ ಟ್ರಾಗ್ ಓಡಿಯಾ ಅಥವಾ ಹೋತಗೀತೆ ಎಂಬ ಹೆಸರಿತ್ತು. ಅಂದರೆ ಬಲಿ ಮತ್ತು ಟ್ರಾಜಿಡಿಗಳ ನಡುವೆ ನೇರ ಸಂಬಂಧವಿದೆ. ಈ ಆದಿಮ ಬಲಿ ಆಚರಣೆಯೇ ಅತ್ಯಂತ ಶಕ್ತ ರಂಗಭೂಮಿ ಪ್ರತಿಮೆಯಾಗಿದೆ.
ಗ್ರೀಕ್‌ಮೂಲದಿಂದ ನಾಟಕಗಳ ಉಗಮವನ್ನು ಅನ್ವಯಿಕವಾಗಿ ಗುರುತಿಸುವುದೂ ಕನ್ನಡ ಸಂಶೋಧನೆಯ ಬಹುಮುಖ್ಯ ಲಕ್ಷಣಗಳಲ್ಲಿ ಒಂದು. ಪಾಶ್ಚಾತ್ಯ ಮಾದರಿಗಳ ಮೂಲಮಾನದಿಂದ ಕನ್ನಡದ ಅಸ್ಮಿತೆಗಳ ಆಂತರ್ಯವನ್ನು ಅರಿಯುವುದು ನಷ್ಟವಲ್ಲದಿದ್ದರೂ ನೆಲಮೂಲದ ಸತುವನ್ನು ಕಡೆಗಣಿಸದಿದ್ದರೆ ಆಯಿತು. ಎಲ್ಲವೂ ಗ್ರೀಕ್‌ನಿಂದಲೇ ಬಂದುವು ಎಂಬ ಪೂರ್ವ ತೀರ್ಮಾನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಂಶೋಧನೆ ತೊಡಗುವುದು ಮಾತ್ರ ಅಪಾಯ. ಗ್ರೀಕ್ ಮೂಲದಿಂದ ಬಯಲಾಟದ ಸ್ವರೂಪ ಇತಿಹಾಸವನ್ನು ಹುಡುಕುವ ಸಂಶೋಧಕರು ಡಯೋನಿಸಸ್ ದೇವತೆಯ ಆಚರಣೆಯನ್ನು ಉದಾಹರಣೆ ನೀಡಿ ಇದರಿಂದ ಪ್ರಭಾವಿತಗೊಂಡ ಆಚರಣೆಗಳು ಕರ್ನಾಟಕದಲ್ಲೂ ಇದ್ದವು ಎಂದು ಬರೆಯುತ್ತಾರೆ.
‘ಡಯೋನಿಸಸ್‌ನ ಉತ್ಸವದಲ್ಲಿ ಲಿಂಗಪೂಜೆಯಿತ್ತು. ನೃತ್ಯಾದಿಗಳಿದ್ದವು. ಇವುಗಳ ವರ್ಣನೆಯನ್ನು ಓದಿದರೆ ಕಾಮದಹನದ ಉತ್ಸವ, ಮೆರವಣಿಗೆ, ವೇಷಭೂಷಣ, ಓಕುಳಿ, ಕುಣಿತ, ಸಂಭ್ರಮ, ಸ್ವಚ್ಛಂಧ ಮುಂತಾದವುಗಳ ಜ್ಞಾಪಕ ಬರುತ್ತದೆ. ಶಿವನು ಪ್ರಾಚೀನ ದೇವತೆ. ಲಿಂಗಪೂಜೆ ೫೦೦೦ ವರ್ಷಗಳ ಕೆಳಗೆ ಸಿಂಧೂ ಪ್ರಾಂತ್ಯದಲ್ಲಿತ್ತು. ಡಯೋನಿಸ್‌ಸನು ಗ್ರೀಸಿಗೆ ಪೂರ್ವದೇಶದಿಂದ ಬಂದ ದೇವತೆಯೆಂದು ಪಾಶ್ಚಾತ್ಯ ವಿದ್ವಾಂಸರೇ ಹೇಳುತ್ತಾರೆ’. ಸಂಸ್ಕೃತ ನಾಟಕಕಾರರು ಗುರುತಿಸುವಂತೆ ಡಯೋನಿಸಸ್ ದೇವತೆ ಪುರುಷದೇವತೆಯಾಗಿರದೆ ಸ್ತ್ರೀದೇವತೆಯಾಗಿದ್ದು ಮುಕ್ತ ಲೈಂಗಿಕತೆಯೇ ಅದರ ಮಾಂತ್ರಿಕ ಆಚರಣೆಯೂ ಆಗಿತ್ತು. ಮಾಂತ್ರಿಕ ಆಚರಣೆಗಳು ನೇರವಾಗಿ ಮಾತೃದೇವತೆಗಳಿಗೆ ಸಂಬಂಧಿಸುತ್ತವೆ.
‘ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅದರ ಆಳ ತಿಳಿದುಕೊಳ್ಳಬೇಕೆಂದರೆ ದೃಷ್ಟಿಯನ್ನು ಹಿಂದಕ್ಕೋಡಿಸಬೇಕು. ಪಕ್ಷಪಾತವೆಂಬುದಿರಕೂಡದು. ಅಭಿಮಾನ ಎಂಬ ಮಾತನ್ನೇ ಕೈಬಿಡಬೇಕು. ಸತ್ಯವನ್ನು ಗ್ರಹಿಸಬೇಕೆಂಬ ಬುದ್ಧಿಮಾತ್ರ ಪ್ರಧಾನವಾಗಿರಬೇಕು. ಆ ಸತ್ಯ ಅವಮಾನಕರವಾಗಿದ್ದರೂ ಸರಿ, ಅಸಹ್ಯವಾಗಿ ಕಂಡರೂ ಸರಿ. ಇಷ್ಟಕ್ಕೂ ಇಂದು ನಮಗೆ ಅಸಹ್ಯ ಎನಿಸುವ ವಸ್ತುವನ್ನು ಅಂದು ಎಲ್ಲರೂ ಆಧರಿಸಿರಬಹುದಲ್ಲವೆ? ಇಂದು ನಮಗೆ ಅವಮಾನಕರವಾಗಿ ಕಂಡ ಸಂಗತಿ ಆ ದಿನಗಳಲ್ಲಿ ದೊಡ್ಡ ಗೌರವದ ವಿಷಯವಾಗಿರಬಹುದು.
ಆದ್ದರಿಂದ ಸತ್ಯವನ್ನೊಪ್ಪಿಕೊಂಡರೆ ಯಾವ ಪ್ರಮಾದವೂ ಇಲ್ಲ’ ಎಂಬ ತಾಪಿ ಧರ್ಮರಾವ್ ಅವರ ಮಾತು ಇಲ್ಲಿ ನೆನೆಸಿಕೊಳ್ಳುವಂಥಾಹದ್ದು. ಹೋಲಿಯನ್ನು ಕುರಿತೂ ಈ ಮಾತು ಅತ್ಯಂತ ಪ್ರಸ್ತುತ. ಬೇರೆ ದೇಶಗಳಲ್ಲಿ ಆಚರಿಸುವ ಹಬ್ಬಗಳನ್ನು ನೀಡಲಾಗಿದೆ. ಅವು ಭಾರತದಲ್ಲಿ ಹೋಳಿ ಎಂದು ಕರೆಯಲ್ಪಡುವ ಆಚರಣೆಯ ಪರ್ಯಾಯ ಹೆಸರುಗಳು.
(ಬಯಲಾಟವೆಂದರೆ ಮುಕ್ತ ಲೈಂಗಿಕಕ್ರಿಯೆಯೆಂಬುದರ ಪರಿಕಲ್ಪನಾತ್ಮಕ ಸಂಶೋಧನೆಯ ಪುಸ್ತಕವೊಂದನ್ನು ಕಳೆದ ಎರಡುವರ್ಷಗಳ ಹಿಂದೆ ಬರೆದು ಮುಗಿಸಿದ್ದೆ. ಅದು ಮತ್ತಷ್ಟು ಪರಿಷ್ಕರಣೆಗೊಂದು ಸೈಂಧವ_ಸಂಕಥನ ಎಂಬ ಹೆಸರಿನಲ್ಲಿ ಪ್ರಕಟವಾಗಲಿದೆ. ಕೆಲವೇ ದಿನಗಳಲ್ಲಿ ಪಲ್ಲವ ಪ್ರಕಾಶನ ಪ್ರಕಟಿಸಲಿದೆ. ಸಂಶೋಧನಾಕೃತಿಯಲ್ಲಿ ಪ್ರಸ್ತುತ ಲೇಖನವು ಇದೆ. ಕೃತಿಯಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಒಂದು ಸಣ್ಣ ಟಿಪ್ಪಣಿ ನಿಮ್ಮ ಓದಿಗೆ.) – ಆರಡಿಮಲ್ಲಯ್ಯ ಕಟ್ಟೇರ.

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
-
ದಿನದ ಸುದ್ದಿ6 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ3 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ1 day agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

