Connect with us

ದಿನದ ಸುದ್ದಿ

ಪ್ರಬುದ್ಧರೆನ್ನುವ ಪ್ರಭುಗಳಿಗೆ ಅತೀವ ನಮನ..!

Published

on

ಹರ್ಷಿತಾ ಕೆರೆಹಳ್ಳಿ
  • ಹರ್ಷಿತಾ ಕೆರೆಹಳ್ಳಿ

ಅದೆಷ್ಟೇ ತಪ್ಪಿಸಿದರೂ ಬೆಂಬಿಡದೆ ಬೆನ್ನೆತ್ತಿದೆ ಈ ವಿಚಾರ. ಸ್ವಚ್ಛಂದ ಆಕಾಶ, ನಿರ್ಮಲ ಗಾಳಿ, ಶುದ್ಧ ಜಲ, ಇರಲೊಂದು ಗೂಡು, ಬಂಧು ಮಿತ್ರರ ಒಡನಾಟ, ನಮ್ಮವರು , ತಮ್ಮವರು ಎಂಬ ವಿಶ್ವಾಸ ಎಲ್ಲವು ಸುಗಮವಾಗಿ ಸಾಗುತ್ತಲೇ ಇತ್ತು. ಅದೆಲ್ಲಿಂದ ಬಂದಿತೋ? ಮಹಾಮಾರಿ. ತಂಬೆಲರು ತುಳುಕುವ ಜಾಗದಲ್ಲೆಲ್ಲಾ ನೋವ ಹನಿ, ಜೀವ ಹಾನಿ. ಬೇಡೆಂದರು ಬಿಡುತ್ತಿಲ್ಲ ಸಾಕೆಂದರು ನಿಲ್ಲುತ್ತಿಲ್ಲ ಆಕ್ರಂದನ.

ಹಳ್ಳಿಯ ಜೀವನ ನೆಮ್ಮದಿಯ ಜೀವನ, ಅದೊಂದು ಸ್ವರ್ಗವೇ ಸರಿ ಎಂಬಂತಿದ್ದ ದಿನ ಈಗ ಮರುಭೂಮಿಯಂತಾಗಿದೆ. ಇಲ್ಲಿನ ಹಾಡು , ಹರಟೆ ,ಮೋಜು ಎಲ್ಲವು ಮುಸುಕು ಹಾಕಿಕೊಂಡು ತಮ್ಮ ತಮಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿಕೊಂಡಿರುವಂತೆ ಭಾಸವಾಗುತ್ತಿದೆ.

ಚಂದದೊಂದು ಸಂಸಾರ ಹೆಂಡತಿ, ಗಂಡ, ಇಬ್ಬರು ಮಕ್ಕಳು. ದಿಢೀರನೆ ಕರೋನ ಎಂಬ ಬರಸಿಡಿಲು ಆ ಸಂಸಾರಕ್ಕೆ ಬಡಿದಾಗ ಮನಸ್ಸೇ ಅಯೋಮಯವಾದಂತಾಯಿತು. ಮೊದಲು ಅಷ್ಟೇನು ಸ್ಥಿತಿ ಗಂಭೀರವಾಗಿರಲಿಲ್ಲ ಏಕೆಂದರೆ ಆ ವ್ಯಕ್ತಿಗೆ ಯಾವುದೇ ಬೇರೆ ರೀತಿಯ ಖಾಯಿಲೆಯಾಗಲಿ, ತೊಂದರೆಯಾಗಲಿ ಇರಲಿಲ್ಲ. ಮೂರು ದಿನ ಚಿಕಿತ್ಸೆ ಪಡೆದು ಮೊದಲಿನಂತೆ ಹಿಂತಿರುಗಿ ಬಂದರು.

ಧಡಕ್ಕನೆ ಅದೇ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲತೊಡಗಿದರು ತಕ್ಷಣವೇ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಆ ವ್ಯಕ್ತಿಗೆ ಅದೇನು ನೋವೋ ಏನೋ? ತಿಳಿಯದು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗುತ್ತಿರಲಿಲ್ಲವೆಂದು ನನ್ನ ಭಾವನೆ. ಕೃತಕ ಉಸಿರಾಟದ ವ್ಯವಸ್ಥೆಯಿದ್ದರೂ ಅವರ ಸ್ಥಿತಿ ಗಂಭೀರವಾಗಿಯೇ ಇದೆ. ಅದೆಷ್ಟೋ ದಿನಗಳು ಆಸ್ಪತ್ರೆಯಲ್ಲಿ ಕಳೆಯಿತು. ದಿಢೀರನೆ ಆಸ್ಪತ್ರೆಯಿಂದ ಕರೆ ಬಂದಿತು.

ನಿಮ್ಮ ಮನೆಯವರಿಗೆ ಚಿಕಿತ್ಸೆ ಫಲಿಸುತ್ತಿಲ್ಲ , ಸ್ಥಿತಿ ಚಿಂತಾಜನಕವಾಗಿದೆ ತಕ್ಷಣವೇ ಪ್ಲಾಸ್ಮ ಬೇಕಾಗಿದೆ ಶೀಘ್ರವಾಗಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದರು.
ಪಾಪ! ಆ ವ್ಯಕ್ತಿಯ ಹೆಂಡತಿಗೆ ದಿಕ್ಕೇ ತೋಚದಂತಾಗಿ ಗೋಳಾಡಲಾರಂಭಿಸಿದರು. ನಿಜಕ್ಕೂ ಆ ಸ್ಥಿತಿ ಯಾರಿಗೂ ಬರಬಾರದೆಂದಷ್ಟೇ ಕೇಳಿಕೊಳ್ಳಲು ಸಾಧ್ಯವಾಗಿದ್ದು, ಏಕೆಂದರೆ ಎಷ್ಟೇ ಸಮಾಧಾನದ ಮಾತು ಅವರ ಜೀವ ಉಳಿಸಲು ಸಾಧ್ಯವಾಗದು. ಪರಿಸ್ಥಿತಿ ಬಿಗುಡಾಯಿಸುತ್ತಲೇ ಇದೆ ಆದರೆ ಪ್ಲಾಸ್ಮಾದ ವ್ಯವಸ್ಥೆ ಆಗುತ್ತಿಲ್ಲ .

ನಾನು ಎಲ್ಲರನ್ನು ಸಂಪರ್ಕಿಸಿದೆ ಆದರೆ ಎಲ್ಲರಿಂದಲೂ ಬಂದ ಉತ್ತರ ಒಂದೇ. ಇಲ್ಲ ಮೇಡಂ ನಮ್ಮ ಮನೆಯವರಿಗೆ ಬೇಕು, ನಮ್ಮ ಸ್ನೇಹಿತರಿಗೆ ಬೇಕು ಕೊಡಲಾಗುವುದಿಲ್ಲವೆಂದು. ಆ ತಾಯಿಯ ರೋಧನೆ ನೋಡಲಾಗುತ್ತಿಲ್ಲ . ಅವರ ಮಕ್ಕಳಿಗಂತೂ ಇದರ ಪರಿವೇ ಇಲ್ಲ . ಆಟವಾಡುವ ವಯಸ್ಸು ಅವಕ್ಕೆ. ಆಗ ನನಗನಿಸಿದ್ದು ಇಷ್ಟೇ . ಎಲ್ಲಿಯ ಜೀವನ? ಎಲ್ಲಿಯ ಹಣ? ಎಲ್ಲಿಯ ಸೌಂದರ್ಯ? ಎಲ್ಲವು ಶೂನ್ಯ. ಜೀವ ಉಳಿಸಲಾಗದ ನಿಧಿ ಇದ್ದರೇನು? ಜೀವಕ್ಕೆ ಬೆಲೆಯೆ ಇಲ್ಲ.

ಹೇಗೋ ದೇವರ ನಿಮಿತ್ತವೋ ಏನೋ ಅವರ ತೊಳಲಾಟಕ್ಕೆ ಮರುಗಿಯೋ ಏನೋ ಪ್ಲಾಸ್ಮ ದೊರಕಿತು. ಚಿಕಿತ್ಸೆ ಕೊಂಚ ಫಲಕಾರಿಯಾದಂತಾಗಿ ಅವರ ಮನೆಯವರೆಲ್ಲಾ ನಿಟ್ಟುಸಿರು ಬಿಟ್ಟರು. ಆದರೂ ಅವರಿನ್ನು ಸುಧಾರಿಸಿಲ್ಲ . ಆ ತಾಯಿಗೆ ಅಷ್ಟಾಗಿ ಪ್ರಪಂಚದ ಬಗ್ಗೆ ಅರಿವಿರಲಿಲ್ಲ ನಮಗೆ ಕರೆ ಮಾಡಿ ಏನದರೂ ಗೊತ್ತಾಯಿತ? ಡಿಸ್ಚಾರ್ಜ್ ಯಾವಾಗ? ಹೇಗಿದ್ದಾರೆ? ಎಂದು ಕೇಳಿದರೆ ಮನ ಕಲಕುವಂತಿರುತ್ತದೆ. ಆ ವ್ಯಕ್ತಿಯನ್ನು ಸಂಪರ್ಕಿಸಲು ಯಾವುದೇ ಮಾರ್ಗವಿಲ್ಲ . ನೋಡಿ ಎಂತಹ ಸ್ಥಿತಿ ತಮ್ಮವರಿಂದ ಸಾಂತ್ವಾನ ಕೇಳುವ ಭಾಗ್ಯ ಆ ವ್ಯಕ್ತಿಗಿಲ್ಲ. ಇಲ್ಲಿ ಹೆಂಡತಿಯ ತೊಳಲಾಟ ತಪ್ಪುತ್ತಿಲ್ಲ.

ಎಲ್ಲಿ ನೋಡಿದರೂ ಪಾಸಿಟಿವ್ ಕೇಸ್ಗಳು , ಸೀಲ್ಡೌನ್, ಕಂಟೈನ್ಮೆಂಟ್ ಜೋನ್ಗಳು . ಒಂದು ಕ್ಷಣ ಜೀವನವನ್ನೇ ತಬ್ಬಿಬ್ಬಾಗಿಸಿ ಬಿಡುತ್ತದೆ. ಇನ್ನೂ ಆ ಹೆಂಡತಿ ತನ್ನ ಗಂಡನ ದಾರಿಯನ್ನೇ ಎದುರು ನೋಡುತ್ತ ತನ್ನ ಆರೋಗ್ಯವನ್ನು ಹದಗೆಡಿಸಿಕೊಂಡಿದ್ದಾರೆ. ಇಂತಹ ಸ್ಥಿತಿ ನಿಮಗು ಎದುರಾಗಬಹುದು ನೀವು ನಿರ್ಲಕ್ಷ್ಯ ತೋರಿದರೆ. ಒಂದು ಕ್ಷಣ ಯೋಚಿಸಿ ಆ ಸ್ಥಿತಿ ನಿಮ್ಮದಾಗಿದ್ದರೇ? ನಿಮ್ಮ ಜೊತೆಗೆ ನಿಮ್ಮ ಮನೆಯವರ ಜೀವನವು ಹಾಳಾಗುತ್ತದೆ. ಒಮ್ಮೆಯಾದರೂ ನಿಮ್ಮವರ ಖುಷಿಗಾಗಿ ಒಳಿತು ಮಾರ್ಗದಲ್ಲಿ ನಡೆಯಿರಿ.

ಈ ಚಿಂತಾಜನಕ ಸ್ಥಿತಿಯಲ್ಲಿ ನಮ್ಮವರೆ ನಮ್ಮ ಬಳಿ ಬರಲು ಹಿಂಜರಿಯುತ್ತಾರೆ ಅಂತಹುದರಲ್ಲಿ ಯಾವುದೇ ರಕ್ತ ಸಂಬಂಧವಿಲ್ಲ , ಮಿತ್ರರಲ್ಲ. ತಮ್ಮ ಜೀವನವನ್ನು ಲೆಕ್ಕಿಸದೆ ತಮ್ಮವರಿಂದ ದೂರ ಸರಿದು ಹಗಲಿರುಳೆನ್ನದೆ ಅದೆಷ್ಟೋ ಸರ್ಕಾರಿ ನೌಕರರು ಹೊತ್ತೊತ್ತಿಗೆ ಊಟ, ತಿಂಡಿ, ನೀರು , ನಿದಿರೆ ಇಲ್ಲದೆ ಆಸ್ಪತ್ರೆ ಸಿಬ್ಬಂದಿಗಳು, ಆರಕ್ಷಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು ಹೀಗೆ ಹಲವಾರು ಮಂದಿ ತಮ್ಮ ಜೀವದ ಹಂಗು ತೊರೆದು ನಮ್ಮಗಳ ಹಿತಕ್ಕಾಗಿ ಪರಿಶ್ರಮಿಸುತ್ತಿದ್ದಾರೆ.

ಅದೆಲ್ಲ ಒಂದೆಡೆಯಾದರೆ ದೇಶಕ್ಕಾಗಿ ನೆತ್ತರನ್ನು ಲೆಕ್ಕಿಸದೆ ಮಳೆ , ಬಿಸಿಲು, ಚಳಿ ಯೆನ್ನದೆ ದೇಶ ಕಾಯುವ ವೀರ ಯೋಧರಿಗೆಲ್ಲರಿಗು ಅನಂತ ಕೋಟಿ ನಮನ. ಅವರೆನಾದರೂ ನನ್ನಿಂದ ಆಗದು ದೇಶ ಕಾಯಲು ಎಂದು ಕೈ ಚೆಲ್ಲಿ ಕುಳಿತ್ತಿದ್ದರೆ ಈ ದಿನ ನಾವ್ಯಾರು ದಿನ ಉದಯಿಸೋ ಸೂರ್ಯನನ್ನ ನೋಡುವಂತಾಗುತ್ತಿರಲಿಲ್ಲ. ಅವರೆಲ್ಲರು ತಮ್ಮ ಮನೆಯವರಿಂದ ದೂರವಿದ್ದೂ, ಹೆಂಡತಿ , ಗಂಡ, ಮಕ್ಕಳು, ಅಪ್ಪ, ಅಮ್ಮ , ಬಂಧು ಬಳಗ, ಮಿತ್ರರೊಡನೆ ಕಾಲ ಕಳೆಯಲು ಸಮಯವಿಲ್ಲ.

ಆದರೆ ರಾಜ್ಯದ ಜನತೆಗೆಲ್ಲ ಜನತಾ ಕರ್ಫ್ಯೂ ಆದೇಶಿಸಿ ಎಲ್ಲರನ್ನೂ ಮನೆಯಲ್ಲಿಯೇ ಇದ್ದೂ ಕೊರೋನ ಸರಪಳಿಯನ್ನು ಮುರಿಯಲು ಸಹಕರಿಸೆಂದು ಬೇಡಿಕೊಳ್ಳುತ್ತಿದ್ದರು ಸಹ, ಈ ಜನತೆ ನನಗಲ್ಲ ಹೇಳುತ್ತಿರುವುದು ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಈ ಘಟನೆಯನ್ನೂ ನೋಡಿದ ಬಳಿಕ ಕರುನಾಡ ಜನರ ಮೇಲಿದ್ದ ಪೂಜ್ಯ ಭಾವನೆ ಬೇಸರ ತರಿಸಿದೆ.

ನೀರು ಕೇಳಿದರೆ ಅಮೃತವನ್ನೇ ಕೊಡುತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಪಿಸುವ ಬದಲು ದಯಮಾಡಿ ದೇಶಕ್ಕಾಗಲಿ, ನಾಡಿಗಾಗಲಿ ಏನನ್ನು ಕೊಡದಿದ್ದರು ಸರಿಯೇ . ನಿಮ್ಮ ನಿಮ್ಮ ಮನೆಯಲ್ಲಿರಿ, ನಿಮ್ಮವರೊಂದಿಗೆ ಕಾಲ ಕಳೆಯಿರಿ. ಯಾರೊಬ್ಬರು ಕೊರೋನ ಪಾಸಿಟಿವ್ ರಿಪೋರ್ಟ್ ಕೊಡದಂತೆ ಸಹಕರಿಸಿ. ಇದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಂದು ಜೀವಕ್ಕೂ ಅಮೂಲ್ಯವಾದ ಬೆಲೆಯಿದೆ. ದಯಮಾಡಿ ನಿಮ್ಮ ಜೀವದ ಜೊತೆ ನಿಮ್ಮವರ ಜೀವವನ್ನು ಕಾಪಾಡಿ.

ಈ ಮುಂದಿನ ೧೫ ದಿನಗಳಲ್ಲಿ ಕಟ್ಟು ನಿಟ್ಟಾಗಿ ನಿಯಮ ಪಾಲನೆ ಮಾಡಿದ್ದೇ ಆಗಿದ್ದಲ್ಲಿ ಕೋರೋನ ಸರಪಳಿಯನ್ನೂ ಖಂಡಿತವಾಗಿಯೂ ಮುರಿಯುವಲ್ಲಿ ಯಶಸ್ವಿಯಾಗುತ್ತೇವೆ .
ನನ್ನ ಮಾತಿಗಾದರೂ ಬೇಡ ಕನಿಷ್ಠ ದೇಶಕಾಯುವ ಯೋಧರಿಗಾಗಿ, ಕೊರೋನ ವಾರಿಯರ್ಸ್ ಗಳ ಪರಿಶ್ರಮಕ್ಕಾದರು ಬೆಲೆ ಕೊಟ್ಟು ಪ್ರಜ್ಞಾಪೂರಕವಾಗಿ, ವಿವೇಚನೆಯಿಂದ ನಡೆದುಕೊಳ್ಳಿ. ಭಾರತೀಯರಾದ ನಾವು ಪ್ರಬುದ್ಥರಾಗಿ ಆಲೋಚನೆಯಿಂದ ನಡೆಯಬೇಕಾಗಿದೆ.

ಅಷ್ಟೇನೂ ಸುಸಜ್ಜಿತ ವ್ಯವಸ್ಥೆಯಿಲ್ಲ , ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ , ವೆಂಟಿಲೇಟರ್ಗಳ ಕೊರತೆ, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ , ನೀಡಿದ ಚಿಕಿತ್ಸೆ ಫಲಿಸುತ್ತಿಲ್ಲ. ಬೆಡ್ಗಳು ಸಿಗದೆ ಆಸ್ಪತ್ರೆಯ ಮುಂಬಾಗಿಲಲ್ಲೇ ಚಿಕಿತ್ಸೆಗಾಗಿ ಹಾತೊರೆತು ನಿಂತ ಅದೆಷ್ಟೋ ಜೀವಗಳು. ಯಾರ್ಯಾರ ಕೈ ಕಾಲಿಡಿದು ಚಿಕಿತ್ಸೆಗಾಗಿ ಹೋರಾಡುತ್ತಿರು ಜೀವಗಳು. ಅದೆಂಥಾ ಕ್ರೂರ ವಿಧಿಯಿರಬೇಕು. ಸಾಯುವಾಗ ನಮ್ಮವರ ಅಪ್ಪುಗೆ ಇಲ್ಲ , ಒಂದು ತೊಟ್ಟು ನೀರು ಕೊಡುವವರಿಲ್ಲ, ವಿಧಿ ವಿಧಾನಗಳ ಸಮಾಧಿಯಿಲ್ಲ, ಬಂಧು ಮಿತ್ರರ ಕಂಬನಿಯಿಲ್ಲ, ನಮ್ಮವರಿಂದ ಮಣ್ಣು ಮಾಡಿಸಿಕೊಳ್ಳುವಂತ ಪುಣ್ಯವೂ ಇಲ್ಲ.

ಯಾರ ಕೈಯಿಂದಲೋ ತೂದೆಸೆದು ಹಿಂತಿರುಗಿಯು ನೋಡದೆ ಬರುವವರಿಂದ ಅಂತಿಮ ಕಾರ್ಯವೂ ಇಲ್ಲದೆ ಪರಲೋಕ ಯಾನ ಮಾಡುವ ಜೀವ ಅದೇನು ಪಾಪ ಮಾಡಿತ್ತು? ಮೂಟೆಯ ಹಾಗೆ ಬಿಸಾಡಿ ಬೆಂಕಿ ಹೊತ್ತಿಸಿ ಕೈ ತೊಳೆದುಕೊಳುವರು. ಈ ಜನ ಇದಕ್ಕಾದರು ಎಚ್ಚೆತ್ತುಕೊಳ್ಳಬೇಕು.

ಮಾಧ್ಯಮಗಳಲ್ಲಿ ಇಂತಹ ನೈಜ್ಯ ಘಟನೆಗಳ ಅನಾವರಣ ಮಾಡುವುದಿಲ್ಲ. ಕೆಲಸಕ್ಕೆ ಬಾರದ ಮಾಹಿತಿಯನ್ನು ಪದೇ ಪದೇ ಹೇಳಿ ಹುಚ್ಚೆಬ್ಬಿಸುತ್ತಾರಷ್ಟೇ. ತಕ್ಷಣದ ವದಂತಿಯೆಂದರೆ ಆಮ್ಲಜನಕದ ಕೊರತೆಯಿಂದಾಗಿ 24 ಮಂದಿಯ ದುರ್ಮರಣ ಎಂದು ಒಂದೊಂದು ಚಾನಲ್ ನವರು ಒಂದೊಂದು ರೀತಿ ಚಿತ್ರಿಸುತ್ತಿದಾದರೆಯೆ ವಿನಃ ಪರಿಹಾರ ಮಾರ್ಗೋಪಾಯ ತೋರಿಸುತ್ತಿಲ್ಲ.

ಅವರಿಗೇನು ಬೇಕಾಗಿದ್ದು ವದಂತಿಯಷ್ಟೇ ಸಿಕ್ಕಿದ್ದನ್ನು 4 ದಿನವಾದರೂ ಬಿಡದೆ ಅದದೇ ವಿಚಾರವನ್ನು ಬೇರೆಯೇ ರೀತಿ ಚಿತ್ರಿಸುವುದನ್ನು ಬಿಟ್ಟು ಯಾವ ಆಸ್ಪತ್ರೆಯಲ್ಲಿ ಏನು ಕೊರತೆಯಿದೆ ? ಎಷ್ಟು ಬೆಡ್ ಖಾಲಿಯಿದೆ? ಎಲ್ಲೆಲ್ಲಿ ಪ್ಲಾಸ್ಮ ದೊರಕುತ್ತದೆ? ಈತರಹದ ಮಾಹಿತಿ ಬಿಟ್ಟು ಜನರ ಮಧ್ಯೆ ಬೆಂಕಿಯಿಲ್ಲದಿದ್ದರೂ ಇವರೇ ಕಿಡಿ ಹೊತ್ತಿಸಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡುತ್ತಾರಷ್ಟೇ. ನಿಮ್ಮ ನೆರವಿಗೆ ಯಾರು ಬರುವುದಿಲ್ಲ . ನಿಮ್ಮ ಹಿತ ನಿಮ್ಮ ಕೈಯಲ್ಲೇಯಿದೆ.

ನಿಮ್ಮವರ ಜೀವ ಹೋದ ಮೇಲೆ ಎಲ್ಲರನ್ನೂ ದೂರುವ ಬದಲು ಅರಿತು ನಡೆಯಿರಿ. ಅದೆಲ್ಲವೂ ಅಧಿಕಾರಿಗಳ ನಿರ್ಲಕ್ಷವೋ? ಆಸ್ಪತ್ರೆಗಳವರ ನಿರ್ಲಕ್ಷವೋ? ಅಥವಾ ರೋಗಿಗಳ ನಿರ್ಲಕ್ಷವೋ? ತಿಳಿಯದು. ನನ್ನ ಪ್ರಕಾರ ಇದಕ್ಕೆ ಯಾವ ರಾಜ್ಯ ಸರ್ಕಾರವಾಗಲಿ , ಮಂತ್ರಿಗಳಾಗಲಿ , ಅಧಿಕಾರಿಗಳಾಗಲಿ ಹೊಣೆಯಾಗುವುದಿಲ್ಲ. ಏಕೆಂದರೆ
ಅವರು ನಮ್ಮ ಒಳಿತಿಗಾಗೇ ಲಾಕ್ಡೌನ್ ಮಂತ್ರ ಪಠಿಸುತ್ತಿರುವುದು.

ಅವರ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸಿದ್ದರೆ ಇಂದು ಇಷ್ಟೆಲ್ಲಾ ಸಾವು ನೋವು ಜೀವ ಹಾನಿಯಾಗುತ್ತಿರಲಿಲ್ಲ. ಪ್ರಜ್ಞಾವಂತರಾಗಿ ನಡೆದಿದ್ದರೆ ಅದೆಂದೋ ಈ ಮಹಾಮಾರಿಗೆ ವಿದಾಯ ಹೇಳಬಹುದಿತ್ತು, ದುರದೃಷ್ಠ ವಶಾ ಕೋರೊನವೆ ನಮ್ಮೆಲ್ಲರಿಗು ವಿದಾಯ ಹೇಳುತ್ತಿದೆ. ಇದೆಲ್ಲದ್ದಕ್ಕೂ ನೇರವಾಗಿ ನಾವೇ ಹೊಣೆಯಾಗುತ್ತೇವೆ. ಸತ್ತ ನಂತರ ಅವರಿವರಿಗೆ ಶಪಿಸಿ ನೋವನುಭವಿಸುವ ಬದಲು ರೋಗಕ್ಕೆ ತುತ್ತಾದದಂತೆ ಎಚ್ಚರದಿಂದಿರೋಣ.

ದಯಮಾಡಿ ಈಗಲಾದರೂ ಅರಿತು ನಡೆಯಿರಿ. ಸತ್ತ ಮೇಲೆ ಯಾವುದು ಮರಳಿ ಬರುವುದಿಲ್ಲ. ಮನುಕುಲ ಉಳಿಸಿ , ಗಿಡ ಬೆಳೆಸಿ . ಸುಂದರ ಪರಿಸರ ನಿರ್ಮಾಣ ಮಾಡೋಣ . ಇಲ್ಲವಾದಲ್ಲಿ ನಿಮ್ಮವರ ಜೀವ ಕಳೆದುಕೊಳ್ಳುವ ಸ್ಥಿತಿ ಬರುವ ಸಮಯ ದೂರವೇನು ಇಲ್ಲ. ಎಲ್ಲರಿಗೂ ಸಮಸ್ಯೆ ಇದ್ದೇ ಇದೆ ಹಾಗಂತ ಅದನ್ನೇ ದೊಡ್ಡದಾಗಿ ಮಾಡಿ ವರ್ತಿಸುವುದಲ್ಲ. ಮೊದಲು ಜವಬ್ದಾರಿಯುತ ನಾಗರೀಕರಾಗಿ ನಡೆಯಿರಿ. ಕೊರೊನಾದ ಬಗ್ಗೆ ಭಯಬೇಡ ಎಚ್ಚರಿಕೆಯಿರಲಿ.
ಮಾಸ್ಕ್ ಧರಿಸಿ , ತೀರ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ , ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಗತ್ಯ ಸುರಕ್ಷಾ ಕ್ರಮ ಪಾಲಿಸಿ.

“ಸ್ವರ್ಗ ನರಕ ಎಲ್ಲ ಮೇಲಿಲ್ಲ ಕೇಳು ಎಲ್ಲವೂ ಇಲ್ಲಿಯೆ ನಾವು ಮಾಡಿದ್ದನ್ನು ನಾವೆ ಅನುಭವಿಸಿ ತೀರಬೇಕು. ನಾನು ಎಂಬ ಅಹಃ ಮಣ್ಣು ಕೇಳು.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

Advertisement

ದಿನದ ಸುದ್ದಿ

ನಟ ‘ಸಂಚಾರಿ’ ವಿಜಯ್ ಇನ್ನಿಲ್ಲ..!

Published

on

ಸುದ್ದಿದಿನ, ಬೆಂಗಳೂರು: ಶನಿವಾರ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ‌’ಸಂಚಾರಿ’ ವಿಜಯ್ ( 38) ಮೆದುಳು ನಿಷ್ಕ್ರಿಯಗೊಂಡು ನಿಧನರಾಗಿದ್ದಾರೆ.

ಸ್ನೇಹಿತನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಕರೆಂಟ್ ಕಂಬಕ್ಕೆ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋವಿಡ್ ಮೂರನೇ ಅಲೆ ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Published

on

ಸುದ್ದಿದಿನ,ಶಿವಮೊಗ್ಗ: ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸರ್ಕಾರ ಎಲ್ಲಾ ಮುಜಾಗರೂಕತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಭೀತಿಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಕೋವಿಡ್ ನಿರ್ವಹಣೆ ಹಾಗೂ ವಿವಿಧ ಅಭಿವೃದ್ದಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರನೇ ಅಲೆ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸರ್ಕಾರ ಡಾ.ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಈಗಾಗಲೇ ರಚಿಸಿದೆ. ಈ ಸಮಿತಿ ಮೂರ್ನಾಲ್ಕು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದು, ಸಮಿತಿಯ ವರದಿಯ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ವರದಿಗಳಿದ್ದು, ಕೋವಿಡ್‍ನಿಂದ ಮಕ್ಕಳನ್ನು ರಕ್ಷಿಸಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 75 ಮಕ್ಕಳ ಐಸಿಯು ಬೆಡ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ,.5ಕ್ಕಿಂತ ಕೆಳಗೆ ಇಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ವೈದ್ಯಕೀಯ ಸೇವೆ ಉತ್ತಮಪಡಿಸಲು ಸರ್ಕಾರ ಹಲವು ದಿಟ್ಟ ಹೆಜ್ಜೆ ಇರಿಸಿದೆ. ಇದೇ ಮೊದಲ ಬಾರಿಗೆ 1780 ವೈದ್ಯರನ್ನು ರಾಜ್ಯದಲ್ಲಿ ನೇರ ನೇಮಕಾತಿ ಮೂಲಕ ಪಡೆದುಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಗೆ 83 ವೈದ್ಯರ ನೇಮಕ ಮಾಡಲಾಗಿದ್ದು, ಇದರಲ್ಲಿ 29 ಮಂದಿ ತಜ್ಞ ವೈದ್ಯರಿದ್ದಾರೆ. ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಸುಧಾರಣೆ ಕುರಿತು ಪರಿಶೀಲನೆ ನಡೆಸಲು ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ತಜ್ಞರ ಸಮಿತಿಯಿಂದ ಆಡಿಟ್

ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸಾವುಗಳ ಕುರಿತು ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಆಡಿಟ್ ನಡೆಸಿ ವರದಿಯನ್ನು ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಾಗಿರಲು ಕಾರಣವನ್ನು ಕಂಡುಕೊಳ್ಳಲು ಬೆಂಗಳೂರಿನಿಂದ ತಜ್ಞರ ಸಮಿತಿಯನ್ನು ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾದ 72ಗಂಟೆಯೊಳಗೆ ಸಾವಿಗೀಡಾದವರ ಪ್ರಮಾಣ ಹೆಚ್ಚಾಗಿದ್ದು, ಈ ಕುರಿತು ಸಮಿತಿ ಪರಿಶೀಲನೆ ನಡೆಸಿ ವರದಿಯನ್ನು ನೀಡಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಹೋಂ ಐಸೋಲೇಷನ್‍ಗೆ ಅವಕಾಶ ನೀಡದರೆ ಕೋವಿಡ್ ಕೇರ್ ಸೆಂಟರ್‍ಗಳಲ್ಲಿಯೇ ಪೀಡಿತರಿಗೆ ಚಿಕಿತ್ಸೆ ಒದಗಿಸಬೇಕು. ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಇದಕ್ಕೆ ಅನುಗುಣವಾಗಿ ವೈದ್ಯರು ಸೇರಿದಂತೆ ಮೂಲಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು, ನರ್ಸ್‍ಗಳು ಹಾಗೂ ಡಿ ಗ್ರೂಪ್ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆಯಿದ್ದು, ಈ ಕುರಿತು ಆದಷ್ಟು ಬೇಗನೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಜಿಲ್ಲೆಯ ಕೋವಿಡ್ ನಿರ್ವಹಣೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಮಾಹಿತಿಯನ್ನು ನೀಡಿದರು.

ನಗರಾಭಿವೃದ್ಧಿ ಸಚಿವ ಬಿ.ಬಸವರಾಜು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜೂನ್ 14,16,18 ರಂದು ಬೆಳಿಗ್ಗೆ 6 ರಿಂದ 12 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ; ಜೂನ್ 14 ರಿಂದ 21 ರವರೆಗೆ ಲಾಕ್‍ಡೌನ್ ಮುಂದುವರಿಕೆ : ಜಿಲ್ಲಾಧಿಕಾರಿ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಜೂನ್ 14 ರವರೆಗೆ ಇದ್ದ ಲಾಕ್‍ಡೌನ್ ಅನ್ನು ಜೂನ್ 21 ರ ಬೆಳಿಗ್ಗೆ 6 ರವೆರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ಜಿಲ್ಲಾಡಳಿತ ಭವನದಲ್ಲಿ ಇಂದು (ಶನಿವಾರ) ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ಈ ಹಿಂದಿನ ಮಾರ್ಗಸೂಚಿಯಂತೆ ಲಾಕ್‍ಡೌನ್‍ನ ಎಲ್ಲಾ ನಿರ್ಬಂಧಗಳು ಮುಂದುವರೆದಿದ್ದು, ಜೂನ್ 14, 16, 18 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು ಹಾಗೂ ಮದ್ಯದ ಅಂಗಡಿಗಳು, ಕೋವಿಡ್-19 ನಿರ್ವಹಣೆಯ ಸಂಬಂಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಅನುಮತಿಸಲಾಗಿರುತ್ತದೆ.

ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಸಲಾಗಿರುವ ಹಿನ್ನೆಲೆಯಲ್ಲಿ ಕಟ್ಟಡ ಕೆಲಸ, ಕಾಮಗಾರಿಗಳು, ಕಟ್ಟಡ ಕಾಮಗಾರಿ ಸಾಮಾಗ್ರಿ ಮತ್ತು ಅಗತ್ಯ ವಸ್ತುಗಳಾದ ಸಿಮೆಂಟ್, ಕಬ್ಬಿಣ, ಪೇಂಟ್ಸ್, ಹಾರ್ಡ್‍ವೇರ್, ಗ್ಲಾಸ್, ಪ್ಲೆ-ವುಡ್, ಸಾಮಿಲ್ಸ್, ಎಲೆಕ್ಟ್ರೀಕಲ್ಸ್, ಟೈಲ್ಸ್ ಅಥವಾ ಮಾರ್ಬಲ್ಸ್, ಸ್ಯಾನಿಟರಿ ವೈರ್ಸ್ ಅಂಗಡಿಗಳ ಚಟುವಟಿಕೆಗಳನ್ನು ನಡೆಸಲು ಜೂನ್ 14, 16, 18 ರ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ಮೂರು ದಿನ ಅವಕಾಶ ಕಲ್ಪಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜನಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು ಈ ಸಾಂಕ್ರಮಿಕವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು 25 ಗ್ರಾಮಗಳಲ್ಲಿ ವರದಿಯಾಗಿದ್ದು, ಆ ಗ್ರಾಮಗಳನ್ನು ಕಂಟೆನ್ಮೆಂಟ್ ಜೋನ್ ಮಾಡಲಾಗಿದೆ. ಈ ಗ್ರಾಮಗಳಲ್ಲಿ ವೈದ್ಯಕೀಯ ತುರ್ತು ಹಾಗೂ ಅಗತ್ಯ ಸೇವೆಗಳ ಹೊರತುಪಡಿಸಿ ಗ್ರಾಮದಿಂದ ಹೊರ ಹಾಗೂ ಒಳ ಸಂಚಾರವನ್ನು ಕಟ್ಟುನಿಟ್ಟಾಗಿ ಬಿಗಿಗೊಳಿಸಲಾಗಿದೆ.

ನರೇಗಾ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಉಳಿದ ದಿನ ಹಾಲು ಮೊಟ್ಟೆ, ಮೆಡಿಕಲ್ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ತರಕಾರಿ ಹಣ್ಣುಗಳನ್ನು ತಳ್ಳುಗಾಡಿ ಮುಖಾಂತರ ಮನೆ ಮನೆಗೆ ಹೋಗಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ.

ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು,
6-10 ಪ್ರಕರಣಗಳಿರುವ 64 ಗ್ರಾಮಗಳಲ್ಲಿ ಸರ್ವೇಕ್ಷಣೆಯನ್ನು ತೀವ್ರಗೊಳಿಸಿ ಸ್ಥಳೀಯ ಗ್ರಾಮಪ್ರತಿನಿಧಿಗಳು, ಪಿಡಿಓ ಇವರುಗಳಿಂದ ಜಾಗೃತಿ ಮೂಡಿಸಿ ಟೆಸ್ಟ್ ಗಳನ್ನು ಹೆಚ್ಚು ಮಾಡಲು ನಿರ್ದೇಶಿಸಲಾಗಿದೆ. ಹಾಗೂ ಜಿಲ್ಲೆಯಲ್ಲಿ ಜೂ.1 ರಂದು ಶೇ.23.47, ಜೂ.9 ರಂದು ಶೇ.12.65, ಜೂ.10 ರಂದು ಶೇ.10.23, ಜೂ.11 ರಂದು ಶೇ.6.81 ರಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವ್ ದರ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರಿಯಬೇಕು ಎಂದರೆ ನಿರ್ಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದರು.

ಅನಗತ್ಯವಾಗಿ ಮನೆಯಿಂದ ಯಾರು ಹೊರ ಬರಬಾರದು ಹಾಗೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರನ್ನು ನೋಡಿಕೊಳ್ಳುವ ಅಟೆಂಡರ್‍ಗಳು ಸುಮ್ಮಸುಮ್ಮನೆ ಕಾರಣ ಹೇಳಿ ಹೊರಬರಬಾರದು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ 26 ಕಡೆ ಚೆಕ್‍ಪೋಸ್ಟ್ ಇದ್ದು ಅಲ್ಲಿ ಸಿಬ್ಬಂದಿಗಳನ್ನು ಹೆಚ್ಚಳ ಮಾಡಲಾಗುವುದು. ಕೆಲವೆಡೆ ಇಬ್ಬರು ಸಿಬ್ಬಂದಿ ಇದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಇದೆ. ಹಾಗಾಗಿ ಹೋಂ ಗಾರ್ಡ್ ಗಳನ್ನು ಪಡೆದು ಸಿಬ್ಬಂದಿ ನೇಮಕ ಮಾಡಲಾಗುವುದು.

ಹಾಗೂ ನಿಯಾಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಾಗಿಸಲಾಗುವುದು. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರನ್ನು ದಂಡ ವಿಧಿಸಿ ವಾಹನಗಳನ್ನು ಸೀಜ್ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಪ್ಯಾಟ್ರೋಲ್ ವಾಹನಗಳಿಂದ ಗಸ್ತು ನಡೆಸಲಾಗುವುದು. ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳುವವರು ಹೆಚ್ಚಾಗಿದ್ದು ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿ ಜನದಟ್ಟನೆ ನಿಯಂತ್ರಿಸಲಾಗುವುದು ಎಂದರು.

ಇದನ್ನೂ ಓದಿ | ದಾವಣಗೆರೆ | ಜಿಲ್ಲೆಯ 25 ಗ್ರಾಮಗಳು ನಿಯಂತ್ರಿತ ವಲಯ : ಜಿಲ್ಲಾಧಿಕಾರಿ https://suddidina.com/davanagere-25-villages-in-the-district-controlled-zone-district-collector/

ಜಿ.ಪಂ. ಸಿಇಒ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹಾಗೂ ಪಾಸಿಟಿವ್ ದರ ಕಡಿಮೆಯಾಗುತ್ತಿದೆ. ಸೋಂಕಿತರನ್ನ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲು ತಿಳಿಸಲಾಗುತ್ತಿದೆ ಎಂದರು.

ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾಹಿತಿ ನೀಡಿ ಜಿಲ್ಲೆಯಲ್ಲಿ ಈಗಾಗಲೇ 3,69,925 ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.

ಸಭೆಯಲ್ಲಿ ಎಸಿ ಮಮತ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಒ ಡಾ.ನಾಗರಾಜ್, ಯೋಜನಾಧಿಕಾರಿ ನಜ್ಮಾ, ಎಎಸ್‍ಪಿ ರಾಜೀವ್, ಡಾ.ನಟರಾಜ್, ಡಾ.ಯತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

25 ಗ್ರಾಮಗಳು ಕಂಟೆನ್ಮೆಂಟ್ ಜೋನ್ ವ್ಯಾಪ್ತಿಗೆ

ದಾವಣಗೆರೆ ತಾಲ್ಲೂಕಿನ ಅಣಬೇರು, ಕುಕ್ಕುವಾಡ, ಕೈದಾಳೆ, ಕುರ್ಕಿ, ತುರ್ಚಘಟ್ಟ, ಬೇತೂರು, ಕಾಶೀಪುರ, ಮಳಲಕೆರೆ ಗ್ರಾಮಗಳು, ಹರಿಹರ ತಾಲ್ಲೂಕಿನ ಗುತ್ತೂರು, ಕೆ.ಬೇವಿನಹಳ್ಳಿ, ನಂದಿತಾವರೆ, ಭಾನುವಳ್ಳಿ, ಹೊಳೆಸಿರಿಗೆರೆ, ಹಾಲಿವಾಣ ಗ್ರಾಮಗಳು, ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ, ಹನುಮನಹಳ್ಳಿ, ಕೂಲಂಬಿ, ಗೊಲ್ಲರಹಳ್ಳಿ, ಐನೂರು ಗ್ರಾಮಗಳು, ನ್ಯಾಮತಿ ತಾಲ್ಲೂಕಿನ ದಾನಿಹಳ್ಳಿ, ಕುಂಕೊವ, ಫಲವನಹಳ್ಳಿ, ಸುರಹೊನ್ನೆ ಗ್ರಾಮಗಳು, ಚನ್ನಗಿರಿ ತಾಲ್ಲೂಕಿನ ಸಿದ್ದನಮಠ ಗ್ರಾಮ ಹಾಗೂ ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮಗಳಲ್ಲಿ ಹತ್ತಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಗ್ರಾಮಗಳನ್ನು ಕಂಟೆನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending