Connect with us

ಲೈಫ್ ಸ್ಟೈಲ್

ಭಾರತದ ‘ಜೀವವೈವಿಧ್ಯ ಹಾಟ್ಸ್ಪಾಟ್’ ಗಳ ಬಗ್ಗೆ ನಿಮಗಿಷ್ಟು ತಿಳಿದಿರಲಿ : ಮಿಸ್ ಮಾಡ್ದೆ ಓದಿ..!

Published

on

 • ವೈಶಾಲಿ ದುರ್ಗಪ್ಪ

ಜೀವ ವೈವಿಧ್ಯವು ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿರುವ ಒಂದು ಬೃಹತ್ ಆವರಣವೇ ಆಗಿದೆ.
ಈ ‘ಜೀವವೈವಿಧ್ಯ ಹಾಟ್ಸ್ಪಾಟ್’ ಒಂದು ಸಮೃದ್ಧ ಸಸ್ಯ ಸಂಪತ್ತು ಹಾಗೂ ಪ್ರಾಣಿಸಂಕುಲವನ್ನು ಹೊಂದಿದ್ದು ಅಳಿವಿನಂಚಿನಲ್ಲಿರುವ ಜೀವವೈವಿಧ್ಯದ ಪ್ರದೇಶವಾಗಿದೆ. ಮನುಷ್ಯ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಇದರ ಮೇಲೆ ನಿರಂತರವಾಗಿ ಗಮನ ಹರಿಸುವುದರ ಮೂಲಕ ಸಂರಕ್ಷಣೆ ಮಾಡಬೇಕಾಗಿರುವ ಪ್ರದೇಶವಾಗಿದೆ.

ಹಾಟ್ಸ್ಪಾಟ್ ಗಳನ್ನು ಗುರುತಿಸುವ ಪರಿಕಲ್ಪನೆಯನ್ನು ನಾರ್ಮನ್ ಮೇಯರ್ ಸಾವಿರ 1988 ರಲ್ಲಿ ಮಂಡಿಸಿದರು. ಇಂದಿಗೆ ಒಟ್ಟು 35 ಜೀವವೈವಿಧ್ಯ ಹಾಟ್ಸ್ಪಾಟ್ ಗಳನ್ನು ಪ್ರಪಂಚದಾದ್ಯಂತ ಗುರುತಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ಉಷ್ಣವಲಯದ ಕಾಡುಗಳಲ್ಲಿವೆ.

ಭೂಮಿಯ ಮೇಲ್ಮೈಯು ಸುಮಾರು 2.3% ರಷ್ಟು ಈ ಹಾಟ್ಸ್ಪಾಟ್ ಗಳಿಂದ ಆವೃತವಾಗಿದೆ. ಇದರಲ್ಲಿ ಸುಮಾರು 50% ಸಸ್ಯ ಪ್ರಭೇದ ಹಾಗೂ 42% ಕಶೇರುಕ ಗಳನ್ನು ಒಳಗೊಂಡಿದೆ ಆದರೆ ಅತ್ಯಂತ ದುಃಖಕರ ಸಂಗತಿ ಎಂದರೆ ಈ ಜೀವವೈವಿಧ್ಯ ಹಾಟ್ಸ್ಪಾಟನ ಶೇ 86%ರಷ್ಟು ಭಾಗ ಆವಾಸಸ್ಥಾನ ಈಗಾಗಲೇ ಕಳೆದುಕೊಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಹವಾಮಾನ ಬದಲಾವಣೆ ಹಾಗೂ ಮುಖ್ಯವಾಗಿ ಮನುಷ್ಯನ ದುರ್ಬಳಕೆ ಎಂದರೆ ತಪ್ಪಾಗಲಾರದು.

ಒಂದು ಪ್ರದೇಶವನ್ನು ಹಾಟ್ಸ್ಪಾಟ್ ಎಂದು ಘೋಷಿಸಲು ಕೆಲವು ಮಾನದಂಡಗಳನ್ನು ಹೊಂದಿರ ಬೇಕು. ಜೀವವೈವಿದ್ಯವು ಕನಿಷ್ಠ 1500 ಜಾತಿಯ ನಾಳೀಯ ಸಸ್ಯಗಳು(vascular plants) ಗಳನ್ನು ಒಳಗೊಂಡಿರಬೇಕು.

ಭಾರತವು ತನ್ನ ಜೀವವೈವಿಧ್ಯದ ಶ್ರೀಮಂತಿಕೆ ಇಂದಾಗಿ, ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದನ್ನು ಭೂಮಿಯ ಜನಸಂಖ್ಯಾ ಶಾಸ್ತ್ರದಲ್ಲಿ ಕಾಣಬಹುದು. ಜೀವವೈವಿಧ್ಯದತೆ, ಜನಸಂಖ್ಯಾ ಶಾಸ್ತ್ರವು ಎರಡು ವಿಭಿನ್ನ ವಿಷಯಗಳಾಗಿದ್ದರೂ, ಮಾನವ ಜನಸಮೂಹವು ಜೀವವೈವಿಧ್ಯದತೆಯ ಮೇಲೆ ಹಲವಾರು ವಿಷಯಗಳಲ್ಲಿ ಅವಲಂಬಿತವಾಗಿದೆ. ಆದರೆ ಏರುಗತಿಯಲ್ಲಿ ಸಾಗುತ್ತಿರುವ ಜನಸಂಖ್ಯಾ ಸ್ಫೋಟವು ವನ್ಯ ಸಂಪತ್ತಿನ ಮೇಲೆ ಒತ್ತಡವನ್ನು ಹೇರುತ್ತಿದೆ.

ಭಾರತವು ಈಗಾಗಲೇ ತಿಳಿಸಿರುವಂತೆ, ಜೀವವೈವಿಧ್ಯದತೆಯಲ್ಲಿ, ಅತ್ಯಂತ ಸಂಪದ್ಭರಿತ ಹಾಗೂ ಶ್ರೀಮಂತ ರಾಷ್ಟ್ರವಾಗಿದ್ದು, ದೇಶವು ಇಂಡೋ-ಮಲಯ ಪರಿಸರ ವಲಯದಲ್ಲಿದೆ. ವಿಶ್ವದ ಒಟ್ಟು 35 ಹಾಟ್ ಸ್ಪಾಟ್ ಗಳಲ್ಲಿ, ಎರಡು ಭಾರತದಲ್ಲಿದೆ. ಇಂಡೋ-ಬರ್ಮಾ ವಲಯವು ಭಾಗಶಃ ಈಶಾನ್ಯ ಭಾಗದಲ್ಲಿದೆ.

ಭಾರತದಲ್ಲಿ ಅಂದಾಜು 350 ಸಸ್ತನಿ ಪ್ರಭೇದಗಳು (ವಿಶ್ವದ 7.6%ರಷ್ಟು)1224 ಪಕ್ಷಿ ಪ್ರಭೇದಗಳು (ವಿಶ್ವದ2.6%ರಷ್ಟು) 197 ಉಭಯಚರ ಪ್ರಭೇದಗಳು(ವಿಶ್ವದ 4.4%ರಷ್ಟು) 408 ಸರೀಸೃಪ ಪ್ರಭೇದಗಳು (ವಿಶ್ವದ 6.2%ರಷ್ಟು) 2546ಮೀನಿನ ಪ್ರಭೇದಗಳು (ವಿಶ್ವದ 11.7%ರಷ್ಟು) 15000ಹೂಬಿಡುವ ಸಸ್ಯ ಪ್ರಭೇದಗಳು (ವಿಶ್ವದ 6% ರಷ್ಟು) ಕಾಣಸಿಗುತ್ತವೆ.

ವೈಶಾಲಿ ದುರ್ಗಪ್ಪ

ಇತಿಹಾಸ

ಭಾರತವು ಮೂಲತಃ ಗೊಂಡ್ವಾನ ಭೂಭಾಗಕ್ಕೆ ಸೇರಿದ್ದು, ಇಲ್ಲಿಂದಲೇ ಅನೇಕ ಜೀವಿಗಳ ಉಗಮವಾಗಿದೆ,, ಭಾರತ ಪರ್ಯಾಯ ದ್ವೀಪವು ಲಾರೇಷಿಯನ್ ಭೂಖಂಡದೋಂದಿಗಿನ ಘರ್ಷಣೆ ಇಂದಾಗಿ ಬಹಳಷ್ಟು ಜೀವರಾಶಿ ಅದಲು-ಬದಲಾದವು… ಇದಲ್ಲದೆ, ಜ್ವಾಲಾಮುಖಿ ಸ್ಫೋಟ ಹಾಗೂ 20ಮಿಲಿಯನ್ ವರ್ಷಗಳ ಹವಾಮಾನ ಬದಲಾವಣೆ ಇಂದಾಗಿ ಜೀವವೈವಿಧ್ಯದ ವಿಕಾಸಕ್ಕೆ ಕಾರಣ ಆಗಿದೆ., ನಂತರದ ದಿನಗಳಲ್ಲಿ ಏಷಿಯಾದ ಸಸ್ತನಿಗಳು ಭಾರತಕ್ಕೆ ಹಿಮಾಲಯದ ಮೂಲಕ ಆಗಮಿಸಿದವು. ಇದರ ಪರಿಣಾಮದಿಂದಾಗಿ ಭಾರತದ ಜೀವ ಪ್ರಭೇದಗಳಲ್ಲಿ 12.6%ಸಸ್ತನಿಗಳು ಮತ್ತು 4.5% ಪಕ್ಷಿಗಳು ಹಾಗೂ 4.5%ಸರಿಸೃಪಗಳು ಮತ್ತು 55.8% ಉಭಯಚರಗಳು ಸ್ಥಾನಿಕವಾಗಿವೆ.

ಭಾರತದಲ್ಲಿ ಒಟ್ಟು ನಾಲ್ಕು ಜೀವವೈವಿಧ್ಯ ಹಾಟ್ಸ್ಪಾಟ್ ಗಳನ್ನು ಕಾಣಬಹುದು

1. ಪಶ್ಚಿಮಘಟ್ಟಗಳು

ಭಾರತ ಪರ್ಯಾಯ ದ್ವೀಪದ ದಕ್ಷಿಣ ಭಾಗದ ಪಶ್ಚಿಮದಲ್ಲಿ ಈ ಬೆಟ್ಟದ ಸಾಲುಗಳು ಕಾಣಸಿಗುತ್ತವೆ. ಸಮುದ್ರ ತೀರಕ್ಕೆ ಹೊಂದಿಕೊಂಡಿರುವುದರಿಂದ ಹೆಚ್ಚು ಉಷ್ಣಾಂಶ ಹಾಗೂ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಘಟ್ಟಗಳು ನಿತ್ಯಹರಿದ್ವರ್ಣ ಹಾಗೂ ಎಲೆ ಉದುರುವ ಕಾಡುಗಳಿಂದ ಆವರಿಸಲ್ಪಟ್ಟಿದೆ.

ಇಲ್ಲಿ ಕಂಡುಬರುವ ಸುಮಾರು 77%ರಷ್ಟು ಉಭಯಚರಗಳು ಹಾಗೂ 62%ರಷ್ಟು ಸರಿಸೃಪಗಳು ವಿಶ್ವದ ಬೇರೆ ಯಾವುದೇ ಭಾಗದಲ್ಲೂ ಗೋಚರಿಸುವುದಿಲ್ಲ. ಸುಮಾರು 450 ಕಿಲೋಮೀಟರ್ ಅಗಲವಿರುವ ಭೂ ಸೇತುವೆಯ ಮೂಲಕ ಭಾರತದೊಂದಿಗೆ ಸಂಪರ್ಕ ಹೊಂದಿರುವ ಶ್ರೀಲಂಕಾದಲ್ಲಿಯೂ ಸಹ ಘಟ್ಟದಲ್ಲಿರುವಷ್ಟೇ ಸಸ್ಯ ಹಾಗೂ ಪ್ರಾಣಿಗಳನ್ನು ಕಾಣಬಹುದು.

ಪಶ್ಚಿಮಘಟ್ಟದಲ್ಲಿ ಅಂದಾಜು 6000ಕ್ಕೂ ಹೆಚ್ಚು ನಾಳೀಯ ಸಸ್ಯಗಳು (vascular plants) ಇವೆ. ಇವುಗಳಲ್ಲಿ 3000 ದಷ್ಟು ಸಸ್ಯಗಳು ಸ್ಥಳೀಯ (endemic) ಆಗಿವೆ ಪ್ರಪಂಚದ ಎಲ್ಲಾ ಮೂಲೆಯಲ್ಲಿ ಕಂಡುಬರುವ ಕರಿಮೆಣಸು, ಏಲಕ್ಕಿಯಂತಹ ಮಸಾಲೆ ಪದಾರ್ಥಗಳು,ಪಶ್ಚಿಮ ಘಟ್ಟದಲ್ಲಿ ಹುಟ್ಟಿಕೊಂಡಿದ್ದು ಎಂದು ನಂಬಲಾಗಿದೆಯಾದರೂ, ಹೆಚ್ಚಿನ ಪ್ರಭೇದಗಳು ದಕ್ಷಿಣ ಭಾಗದಲ್ಲಿರುವ ಅಗಸ್ತ್ಯಮಲೈ ಬೆಟ್ಟದಲ್ಲಿ ಹೆಚ್ಚಾಗಿ ಕಾಣಿಸುತ್ತದೆ.ಈ ಪ್ರದೇಶದಲ್ಲಿ ಸುಮಾರು 450 ಜಾತಿಯ ಪಕ್ಷಿಗಳು 140 ಸಸ್ತನಿಗಳು 260 ಸರಿಸೃಪಗಳು ಮತ್ತು 75 ಉಭಯಚರಗಳು ವಾಸಿಸುತ್ತವೆ.

ಇಂತಹ ಸಂಪದ್ಭರಿತ ಜೀವವೈವಿಧ್ಯ ವು ಇಂದು ಅಳಿವಿನಂಚಿಗೆ ಸರಿಯುತ್ತಿರುವುದು ವಿಷಾದನೀಯವಾಗಿದೆ ಈ ಪ್ರದೇಶದ ಸಸ್ಯ ವರ್ಗವು ಮೂಲತಃ 190000 ಚದರ ಕಿಲೋಮೀಟರ್ ನಷ್ಟು ವಿಶಾಲವಾಗಿ ಹರಡಿತ್ತು. ಆದರೆ ಇಂದು 43000 ಚದರ ಕಿಲೋಮೀಟರ್ ಗೆ ಇಳಿದಿದೆ. ಮೂಲ ಕಾಡಿನ ಶೇ1.5% ರಷ್ಟು ಮಾತ್ರ ಶ್ರೀಲಂಕಾದಲ್ಲಿ ಇನ್ನೂ ಚಾಲ್ತಿಯಲ್ಲಿದೆ.

2. ಹಿಮಾಲಯ

ಭೂತಾನ್ ಈಶಾನ್ಯ ಭಾರತ ನೇಪಾಳದ ದಕ್ಷಿಣ ಮಧ್ಯ ಹಾಗೂ ಪೂರ್ವ ಭಾಗವನ್ನು ಒಳಗೊಂಡಿದೆ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿರುವ ಮೌಂಟ್ ಎವರೆಸ್ಟ್ ಹಾಗೂ k2 ಶ್ರೇಣಿಗಳು ಪ್ರಪಂಚದ ಎತ್ತರ ಶಿಖರಗಳಲ್ಲಿ ಮೊದಲ ಸ್ಥಾನದಲ್ಲಿವೆ. ಜಗತ್ತಿನ ಕೆಲವು ಮುಖ್ಯ ಜೀವನದಿಗಳು ಹಿಮಾಲಯದಲ್ಲಿ ಹುಟ್ಟಿ ಹರಿಯುತ್ತವೆ. ಹಿಮಾಲಯವು 7200 ಮೀಟರ್ ಗಿಂತ ಎತ್ತರದ 100ಕ್ಕೂ ಹೆಚ್ಚು ಪರ್ವತಗಳನ್ನು ಒಳಗೊಂಡಿದೆ.

ಈ ಪ್ರದೇಶದಲ್ಲಿ ಸುಮಾರು 163ಅಳಿವಿನಂಚಿನಲ್ಲಿರುವ ಪ್ರಭೇದಗಳಿವೆ, ಇದರಲ್ಲಿ ಒಂದು ಕೊಂಬಿನ ಖಡ್ಗಮೃಗ(one horn rhinoceros) ವೈಲ್ಡ್ ಏಷಿಯನ್ ವಾಟರ್ ಬಫಲೋ(wild asiatic Buffalo) ಮತ್ತು 45 ಜಾತಿಯ ಸಸ್ತನಿಗಳು, 50 ಜಾತಿಯ ಪಕ್ಷಿಗಳು, 12 ಉಭಯಚರಗಳು,36 ಸಸ್ಯ ಪ್ರಭೇದಗಳಿವೆ. ರಿಲಿಕ್ಟ್ ಡ್ರಾಗನ್ ಫ್ಲೈ ಹಾಗೂ ಹಿಮಾಲಯನ್ ನ್ಯೂಟ್ ಅಳಿವಿನಂಚಿನಲ್ಲಿರುವ ಮುಖ್ಯ ಪ್ರಭೇದಗಳಾಗಿವೆ.

ಹಿಮಾಲಯದಲ್ಲಿ 10000 ಜಾತಿಯ ಸಸ್ಯಗಳಿವೆ, ಅವುಗಳಲ್ಲಿ ಮೂರನೇ ಒಂದು ಭಾಗ ಸ್ಥಾನಿಕ (endemic) ಆಗಿವೆ.ಮತ್ತು ಜಗತ್ತಿನ ಯಾವ ಮೂಲೆಯಲ್ಲಿಯೂ ಕಾಣಲು ಸಾಧ್ಯವಿಲ್ಲ.ಚೀರ್ ಫೀಸೆಂಟ್(cheer pheasant) ವೆಸ್ಟರ್ನ್ ಟ್ರಾಗೋಪನ್(western tragopan) ಹಿಮಾಲಯನ್ ಕ್ವಿಲ್(himalayan quill)ಹಿಮಾಲಯನ್ ರಣಹದ್ದು(himalayan vulture) ವೈಟ್ ಬೆಲ್ಲೀಡ್ ಹೆರಾನ್(white bellied heran) ಮುಂತಾದವುಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಉದಾಹರಣೆ ಆಗಿವೆ.

3. ಇಂಡೋ-ಬರ್ಮಾ ಪ್ರದೇಶ

ಇದು ಭಾರತದ ಈಶಾನ್ಯ ಭಾಗ(ಬ್ರಹ್ಮಪುತ್ರ ನದಿಯ ದಕ್ಷಿಣ) ಮಯನ್ಮಾರ್, ಚೀನಾದ ಯುವಾನ್ ಪ್ರಾಂತ್ಯದ ದಕ್ಷಿಣ ಭಾಗ, ಲಾವೋ,ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಪ್ರಾಂತ್ಯ, ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್, ದೇಶದಲ್ಲಿ, 2ಮಿಲಿಯನ್ನಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿದೆ.

ಆದರೆ, ಕಳೆದ ಕೆಲವು ದಶಕಗಳಿಂದ ಇಂಡೋ-ಬರ್ಮಾ ವಲಯವು ಅತ್ಯಂತ ವೇಗವಾಗಿ ಕ್ಷೀಣಿಸುತ್ತಿದೆ..ಇತ್ತೀಚೆಗೆ ಈ ಪ್ರದೇಶದಲ್ಲಿ 6 ಜಾತಿಯ ಹೊಸ ಸಸ್ತನಿಗಳಾದ large-antlered muntjac,Annamite Muntjac gray-shanked douc,leaf deer, saola and Annamite striped rabbit ಕಂಡುಹಿಡಿಯಲಾಗಿದೆ ಕೋತಿಗಳು, ಲಂಗೂರ್ ಗಳು, ಗಿಬ್ಬನ್ ಗಳಂತಹ ನೂರಕ್ಕಿಂತ ಹೆಚ್ಚು ಪ್ರಭೇದಗಳನ್ನು ಇಲ್ಲಿ ಕಾಣಬಹುದು.

ಇಲ್ಲಿರುವ ಸಿಹಿನೀರಿನ ಆಮೆಗಳು (fresh water turtles)ಗಳು ಸ್ಥಳೀಯವಾಗಿ ವೆ (endemic) ವೈಟ್ ಇಯರ್ಡ್ಡ ನೈಟ್ ಹೆರಾನ್ ಗ್ರೇ ಕ್ರೌನ್ಡ್ ಕ್ರೊಸಿಯಸ್, ಆರೆಂಜ್ ನೆಕ್ಡ್,ಪ್ಯಾಟ್ರಿಡ್ಜ್ ಗಳಂತವು 13 ಸಾವಿರಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿವೆ ಹೆಚ್ಚಿನವು ಈ ವಲಯಕ್ಕೆ ಸ್ಥಾನಿಕ ಪ್ರಭೇದಗಳಿವೆ 13500 ಕ್ಕಿಂತ ಹೆಚ್ಚಿನ ಸಸ್ಯ ಪ್ರಭೇದಗಳಲ್ಲಿ ಅರ್ಧದಷ್ಟು ಈ ವಲಯಕ್ಕೆ ಸ್ಥಾನಿಕ (endemic) ಆಗಿದೆ. ಇಲ್ಲದೆ ಜಗತ್ತಿನ ಯಾವ ಭಾಗದಲ್ಲಿಯೂ ನೋಡಲು ಸಿಗುವುದಿಲ್ಲ.

4. ಸುಂಡಾಲ್ಯಾಂಡ್

ಈ ಪ್ರದೇಶವು ಏಷ್ಯಾಖಂಡದ ಆಗ್ನೇಯ ಭಾಗದ ಥೈಲ್ಯಾಂಡ್ ಸಿಂಗಾಪುರ್ ಇಂಡೋನೇಷಿಯಾ ಮಲೇಶಿಯಾ ದೇಶದಲ್ಲಿ ಈ ಪ್ರದೇಶವು ಹರಡಿಕೊಂಡಿದೆ ಭಾರತದ ನಿಕೋಬಾರ್ ದ್ವೀಪ ಸಮೂಹವು ಸಹ ಇದೇ ವಲಯದಲ್ಲಿ ಗುರುತಿಸಿಕೊಂಡಿದೆ ವಿಶ್ವಸಂಸ್ಥೆಯು ನಿಕೋಬಾರ್ ದ್ವೀಪ ಸಮೂಹವನ್ನು 2013ರಲ್ಲಿ ವಿಶ್ವ ಜೀವಮಂಡಲ ಮೀಸಲು ಪ್ರದೇಶ (ವರ್ಲ್ಡ್ ಬಯೋಗ್ರಫಿ ರಿಸರ್ವ್) ಎಂದು ಘೋಷಣೆ ಮಾಡಿತು ಈ ದ್ವೀಪಗಳು ಭೂ ಪರಿಸರ ಹಾಗೂ ಜಲ ಪರಿಸರ ವ್ಯವಸ್ಥೆ ಎರಡನ್ನು ಹೊಂದಿದೆ.

ಮ್ಯಾಂಗ್ರೋವ್ಸ್, ಸೀಗ್ರಸ್ ಬೆಡ್, ಹವಳ ಹಣ್ಣೆಗಳು, ಇಲ್ಲಿನ ಪ್ರಮುಖ ಆಕರ್ಷಣೆ ಡಾಲ್ಫಿನ್ಗಳು ತಿಮಿಂಗಿಲಗಳು ಮೀನು ಮೊಸಳೆಗಳು ಆಮೆಗಳು(turtles) ಏಡಿ ಕಡಲ ನಳ್ಳಿಗಳು, ಸೀಶೆಲ್ಗಳು ಜಲ ಪರಿಸರ ವ್ಯವಸ್ಥೆಗೆ ಮುಖ್ಯ ಉದಾಹರಣೆಗಳಾಗಿವೆ ಇಂತಹ ಅಮೂಲ್ಯ ಕಡಲ ಸಂಪನ್ಮೂಲಗಳನ್ನು ಅತಿಯಾಗಿ ಬಳಸುವುದರಿಂದ ಪರಿಸರ ವ್ಯವಸ್ಥೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಜೀವವೈವಿಧ್ಯ ಹಾಟ್ಸ್ಪಾಟ್ಗಳು ಕ್ಷೀಣಿಸಲು ಮುಖ್ಯ ಕಾರಣಗಳು

 1. ಅವಾಸಸ್ಥಾನದ ಹಾನಿ
 2. ಮಾಲಿನ್ಯ ಹಾಗೂ ಪರಿಸರ ಅವನತಿ
 3. ಪ್ರಾಣಿಗಳನ್ನು ಬೇಟೆಯಾಡುವುದು
 4. ಹವಾಮಾನ ಬದಲಾವಣೆ

ಪರಿಸರ ಸಂರಕ್ಷಣೆ ಯತ್ತ ಇತ್ತೀಚಿನ ದಿನಗಳಲ್ಲಿ ಇಕೋಟೂರಿಸಂ ಎಂಬ ಪರಿಕಲ್ಪನೆ ಒಂದು ಶುರುವಾಗಿದ್ದು, ಬಹಳ ಪರಿಣಾಮಕಾರಿ ಆಗಿದೆ., ಪ್ರವಾಸ ಮಾಡುವಾಗ ಪರಿಸರ ಸೂಕ್ಷ್ಮ ವಲಯಗಳನ್ನು ಭೇಟಿ ಮಾಡಿ, ವ್ಯಕ್ತಿ ಒಬ್ಬನು ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ಹತ್ತಿರದಿಂದ ಕಾಣುವುದರಿಂದ, ವನ್ಯಜೀವಿಗಳ ಪ್ರಾಮುಖ್ಯತೆಯನ್ನು ತಾನೇ ಸ್ವತಃ ಅನುಭವಿಸುವನು.

ಒಬ್ಬರಿಂದ ಮತ್ತೊಬ್ಬರಿಗೆ ಪರಿಸರದ ಅರಿವು ಹೆಚ್ಚಾಗಿ, ಪ್ರತಿಯೊಬ್ಬರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಪ್ರವಾಸೋದ್ಯಮದಲ್ಲಿ ಇತ್ತೀಚೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

ಒಟ್ಟಾರೆಯಲ್ಲಿ ವನ್ಯ ಸಂಪತ್ತು ಸಂಪೂರ್ಣವಾಗಿ ನಾಶ ಹೊಂದಿ ಮಾನವ ವಿನಾಶದತ್ತ ಸಾಗುವ ಮುನ್ನವೇ,ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಇಂದಿನ ಕರುವೇ ನಾಳಿನ ಹಸು..!

Published

on

 • ಡಾ.ಎನ್.ಬಿ.ಶ್ರೀಧರ,ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ,ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

“ನಮ್ಮನೇ ಕರುಗಳಿಗೆಲ್ಲಾ ಗಡಿಗೆ ಹೊಟ್ಟೆ ಸಾರ್.. ಏನೂ ಮಾಡಿದ್ರೂ ಸುಧಾರಿಸ್ತಿಲ್ಲ.. ಜಂತಿನ ಔಷಧಿ 10 ಸಲ ಹಾಕಿದ್ದೇನೆ. ಆದರೂ ಸರಿಯಾಗ್ತಿಲ್ಲ.. ಗಂಡು ಕರುಗಳೆಂತೂ ಬಿಡಿ.. ಇದೇ ಅವಸ್ಥೆ.. ಒಳ್ಳೆಯ ಟಾನಿಕ್ ಬರೆದು ಕೊಡಿ ಡಾಕ್ಟ್ರೇ !! ಇದು ಅನೇಕ ಹೈನುಗಾರರ ಕೊರಗು.

“ನಮ್ಮನೇ ಮಣಕ ಹತ್ತು ಸಲ ಇನ್ಸೆಮಿನೇಷನ್ ಆಯ್ತು. ಕಟ್ತಾನೇ ಇಲ್ಲ.. ಎಲ್ಲಾ ಔಷಧ ಆಯ್ತು.. ಏನ್ಮಾಡೋದೋ ಗೊತ್ತಾಗ್ತಾ ಇಲ್ಲ” .. ಇದೂ ಸಹ ಅನೇಕರ ಅಳಲು.!!.
ನಾವು ಗೋವು ದೇವರು, ಮೂವತ್ಮೂರು ಕೋಟಿ ದೇವರುಗಳ ಆಗರ.. ಅದು ಪೂಜ್ಯ ಗೋಮಾತೆ. ಎಂದರೂ ಸಹ ಗೋಸಂಗೋಪನೆ ಮನುಷ್ಯನ ಸ್ವಾರ್ಥಕ್ಕಾಗಿ ಮಾತ್ರ ಎಂಬುದನ್ನು ಮರೆಯಲೇಬಾರದು. “ಆಕಳನ್ನು ಸಾಕುವುದು ಅದರ ಸಂತತಿ ಅಭಿವೃದ್ಧಿಗಾಗಿ ಮತ್ತು ಅದರ ಹಾಲು ಅದರ ಕರುವಿಗಾಗಿ ಮಾತ್ರ” ಎಂದು ಆಕಳನ್ನು ಸಾಕುವವರು ಬಹಳ ವಿರಳ. ಆಕಳ ಹಾಲು ನಮಗಾಗಿ ಅಲ್ಲ.

ಅದರ ಮೇಲಿನ ನೈಸರ್ಗಿಕ ಹಕ್ಕು ಕರುವಿನದು ಮಾತ್ರ. ಯಾರೇನೇ ಹೇಳಿದರೂ ಸಹ ಕರುವಿನ ಹಾಲನ್ನು ನಾವು ಕಸಿದುಕೊಳ್ಳುತ್ತಿರುವುದು ಸತ್ಯ. ಇದನ್ನು ಪೂರ್ಣ ಪ್ರಮಾಣದಲ್ಲಿ ಕಸಿದುಕೊಂಡು ಅದಕ್ಕೆ ತಕ್ಕದಲ್ಲದ ಅಪೌಷ್ಟಿಕ ಹಿಂಡಿಯನ್ನು ಹಾಕಿದಾಗ ಆಗುವ ಅನಾಹುತವೇ ಈ ಗಡಿಗೆ ಹೊಟ್ಟೆ ಅಥವಾ ಜೋಲು ಹೊಟ್ಟೆ.

ಪುರಾತನ ಕಾಲದಲ್ಲಿ ಋಷಿ ಮುನಿಗಳು ಆಕಳನ್ನು ಸಾಕಿದಾಗ ಅದು ಮತ್ತು ಅದರ ಕರು ನೈಸರ್ಗಿಕವಾದ ಕಾಡಿನಲ್ಲಿ ಓಡಾಡಿಕೊಂಡಿದ್ದಾಗ ಅದರ ಕರು ಅದರ ಹಾಲನ್ನು ಹೊಟ್ಟೆ ತುಂಬಾ ಕುಡಿದು ಅದರ ಕಟವಾಯಿಯಿಂದ ಹಾಲು ಸಂತೃಪ್ತಿಯಿಂದ ಸುರಿದರೆ ಮಾತ್ರ ಉಳಿದ ಹಾಲನ್ನು ಕೆಚ್ಚಲಿನಿಂದ ಕರೆದುಕೊಳ್ಳುತ್ತಿದ್ದರು ಎಂಬುದನ್ನು ಹಳೆಯ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ ಎನ್ನುವುದು ಗಮನಿಸಬೇಕಾದ ವಿಷಯ.

ಗಂಡು ಕರುಗಳಿರಲಿ ಅಥವಾ ಹೆಣ್ಣು ಕರುಗಳಿರಲಿ, ಹುಟ್ಟಿದಾಗ ಒಂದು ತಿಂಗಳವರೆಗೂ ಮೈಕೈ ತುಂಬಿಕೊಂಡು ದಷ್ಟ ಪುಷ್ಟವಾಗಿರುವ ಕರುಗಳು ನಂತರ ಕ್ರಮೇಣವಾಗಿ ಗಡಿಗೆ ಹೊಟ್ಟೆ ಅಥವಾ ಜೋಲು ಹೊಟ್ಟೆ ಹೊತ್ತುಕೊಂಡು ಓಡಾಡುವ ಪರಿಸ್ಥಿತಿಯನ್ನು ತಲುಪುತ್ತವೆ. ಹಲವಾರು ಕೃಷಿಕರು ಇಂತಹ ಕರುಗಳಿಗೆ ಜಂತುನಾಶಕವನ್ನು ಮೇಲಿಂದ ಮೇಲೆ ನೀಡುವುದರಿಂದ ಗುಣಮುಖವಾಗುತ್ತವೆ ಎಂದು ಭಾವಿಸುತ್ತಾರೆ. ಅಥವಾ ಅದು ಕೂಡಲೇ ಬೆಳವಣಿಗೆ ಆಗಲು ಔಷಧಿಯನ್ನು ಬರೆದುಕೊಡಲು ಕೋರುತ್ತಾರೆ. ಇದು ಸರಿಯೇ? ಇದಕ್ಕೆ ಏನು ಕಾರಣ ಅಂತ ತಿಳಿಯೋಣ.

“ಇಂದಿನ ಮಗುವೇ ನಾಳಿನ ನಾಗರೀಕ” ಎನ್ನುವುದು ಗಾದೆ. ಇದನ್ನು ಜಾನುವಾರುಗಳಿಗೆ ಅನ್ವಯಿಸಿದರೆ ‘ಇಂದಿನ ಕರುವೇ ನಾಳಿನ ಹಸು’ ಎನ್ನಬಹುದು. ಸಾಮಾನ್ಯವಾಗಿ ಕರುಗಳಿಗೆ ಆಕಳಿನ ಹಾಲೇ ಸರ್ವಶ್ರೇಷ್ಠವಾದ ಅಹಾರ. ಹುಟ್ಟಿದ ದಿನದಿಂದಲೂ ಕನೀಷ್ಠ 3-4 ತಿಂಗಳುಗಳವರೆಗೆ ಕರುಗಳಿಗೆ ಅದರ ಶರೀರದ ತೂಕದ ಶೇ 10 ರಷ್ಟು ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40 ಕೆಜಿ ತೂಕವನ್ನು ಹೊಂದಿದ್ದು ಅದಕ್ಕೆ 4 ಲೀಟರ್‌ನಷ್ಟು ಹಾಲನ್ನು ನೀಡಬೇಕು.

ಪ್ರತಿ ದಿನ ಕರು ಸುಮಾರು 100-500 ಗ್ರಾಂನಷ್ಟು ತೂಕದಲ್ಲಿ ವರ್ಧನೆಯನ್ನು ಹೊಂದುತ್ತದೆ. ಇದಕ್ಕೆ ತಕ್ಕಂತೆ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸುವುದು ಸಹ ಬಹಳ ಮುಖ್ಯ. ಆದರೆ ಹಲವಾರು ಬಾರಿ ಹೆಚ್ಚಿನ ಹೈನುಗಾರರು ಕರುವಿಗೆ ನೀಡುವುದನ್ನು ಕಡಿಮೆ ಮಾಡಿ ಬಿಡುತ್ತಾರೆ. ಇಷ್ಟು ಹಾಲನ್ನು ನೀಡಿದರೆ ಕರುವಿಗೆ ಅಜೀರ್ಣವಾಗಿ ಬೇಧಿಯುಂಟಾಗುತ್ತದೆ ಎಂದು ಹೆದರುತ್ತಾರೆ. ಆದರೆ ಈ ರೀತಿಯ ಬೇದಿಯಾಗುವುದು ಕರುವಿಗೆ ವಿವಿಧ ಕಾರಣಗಳಿಂದ ಅಜೀರ್ಣವಾದಾಗ ಮತ್ತು ಸೂಕ್ಷ್ಮಾಣು ಜೀವಿಗಳಿಂದ ಮಲೀನವಾದ ಹಾಲನ್ನು ಕೊಟ್ಟಾಗ ಅದಕ್ಕೆ ಬಿಳಿ ಬೇದಿಯಾಗಬಹುದು.

ಅಲ್ಲದೇ ಹಾಲು ಉತ್ಪಾದಕರ ಸಂಘಕ್ಕೆ ಹಾಲನ್ನು ಮಾರಿ ಹೆಚ್ಚಿನ ಲಾಭ ಪಡೆಯುವ ಆಸೆಯೂ (ದುರಾಸೆ ??) ಸಹ ಒಂದು ಕಾರಣ. ಆದರೆ ಇದು ತಾತ್ಕಾಲಿಕ ಲಾಭ ಮಾತ್ರ. ದೂರಗಾಮಿ ದೃಷ್ಠಿಯಲ್ಲಿ ನೋಡಿದಾಗ ಕರುವಿಗೆ ಅದರ ತಾಯಿಯ ಹಾಲನ್ನು ನಿಗದಿತ ಪ್ರಮಾಣದಲ್ಲಿ ನಿಗದಿತ ದಿನಗಳವರೆಗೆ ನೀಡಿದರೆ ಮಾತ್ರ ಉತ್ತಮ ಮಣಕ ಅಥವಾ ಪಡ್ಡೆಯನ್ನು ಪಡೆಯಲು ಸಾಧ್ಯ.

ಕರುಗಳಿಗೆ ಜೋಲು ಹೊಟ್ಟೆ ಬರಲು ಮುಖ್ಯವಾದ ಕಾರಣ ಅದಕ್ಕೆ ಬೆಳವಣಿಗೆಯ ಹಂತದಲ್ಲಿ ಹಾಲನ್ನು ಮತ್ತು ಪೌಷ್ಠಿಕ ಅಹಾರವನ್ಮ್ನ ಸೂಕ್ತ ಪ್ರಮಾಣದಲ್ಲಿ ನೀಡದಿರುವುದು. ಮತ್ತೊಂದು ಕಾರಣವೆಂದರೆ ಎಳೆ ಕರುಗಳಿಗೆ ಜಾನುವಾರುಗಳಿಗೆ ನೀಡುವ ಕಡಿಮೆ ಪೌಷ್ಟಿಕಾಂಶಗಳನ್ನು ಹೊಂದಿದ ಪಶು ಅಹಾರವನ್ನು ನೀಡುವುದು. ಬಹಳಷ್ಟು ಕರುಗಳು ತುಂಬಾ ಆಸ್ಥೆಯಿಂದ ಅದರ ತಾಯಿಗೆ ನೀಡಿದ ಅಹಾರವನ್ನು ತಿನ್ನುತ್ತವೆ.

ಇದನ್ನು ಗಮನಿಸಿದ ರೈತರು ಅದಕ್ಕೆ ಹಾಲನ್ನು ಕಡಿಮೆ ಮಾಡಿ ಪಶು ಅಹಾರವನ್ನು ಏಕಾಏಕಿ ನೀಡಲು ಪ್ರಾರಂಭಿಸುತ್ತಾರೆ. ಇದೇ ಸಮಯದಲ್ಲಿ ಕರು ಹುಲ್ಲನ್ನು ತಿನ್ನಲು ಪ್ರಾರಂಭಿಸುತ್ತದೆ. ಈ ಹುಲ್ಲು ಮತ್ತು ಕಡಿಮೆ ಗುಣಮಟ್ಟದ ಅಹಾರವನ್ನು ಪಚನ ಮಾಡಲು ಅನುವಾಗುವಂತೆ ಕರುವಿನ ಹೊಟ್ಟೆ, ಕರುಳು ಮತ್ತು ಜೀರ್ಣಾಂಗದ ವಿವಿಧ ಭಾಗಗಳು ಜಾಸ್ತಿ ಬೆಳವಣಿಗೆ ಹೊಂದುತ್ತವೆ. ಅದರಲ್ಲೂ ದೊಡ್ಡ ಹೊಟ್ಟೆ ಬೇಗ “ಗುಡಾಣ” ದಂತೆ ಬೆಳೆಯುತ್ತದೆ. ಆದರೆ ಹಾಲಿನಿಂದ ಲಭ್ಯವಾಗುವ ಕ್ಯಾಲ್ಸಿಯಂ ಮತ್ತು ರಂಜಕ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗದೇ ಅಸ್ಥಿವ್ಯೂಹದ ಸರಿಯಾದ ಬೆಳವಣಿಗೆಯಾಗುವುದಿಲ್ಲ.

ಎಲುಬುಗಳು ಅದರಲ್ಲೂ ಹಿಂಬಾಗದ ಎಲುಬುಗಳು ಉತ್ತಮ ಬೆಳವಣಿಗೆ ಹೊಂದದೇ ಇರುವುದರಿಂದ ಕರುವನ್ನು ಹಿಂಬಾಗದಿಂದ ಗಮನಿಸಿದಾಗ ಜೋಲು ಹೊಟ್ಟೆ ಗುಡಾಣದಂತೆ ಎದ್ದು ಕಾಣುತ್ತದೆ. ಇದನ್ನು ಹಳ್ಳಿಯ ಭಾಷೆಯಲ್ಲಿ ‘ಹೊಟ್ಟೆ ಡುಮ್ಮಣ್ಣ ; ಕೈಕಾಲು ಸಣ್ಣಣ್ಣ’ ಎಂದು ಕರೆಯುತ್ತಾರೆ. ಪೌಷ್ಟಿಕಾಂಶದ ತೀವ್ರವಾದ ಕೊರತೆಯಿಂದ ಉದ್ದುದ್ದ ಕೂದಲುಗಳು ಬೆಳೆದು, ತೀವ್ರವಾದ ರಕ್ತಹೀನತೆಯಾಗಿ, ಕರು ನಿಸ್ತೇಜಗೊಳ್ಳುತ್ತದೆ.

ನವಜಾತ ಕರುಗಳಲ್ಲಿ ಕರುಹಾಕಿದ ತಕ್ಷಣ ಅರ್ಧಗಂಟೆಯೊಳಗೆ ಗಿಣ್ಣದ ಹಾಲನ್ನು ನೀಡಲೇ ಬೇಕು. ಕರುಗಳಿಗೆ ದೇಹ ತೂಕಕ್ಕೆ ತಕ್ಕಂತೆ ಸುಮಾರು 3 ಲೀಟರ್ ಹಾಲನ್ನು ದಿನಕ್ಕೆ 2–3 ಬಾರಿ ವಿಭಾಗಿಸಿ ನೀಡಬೇಕು. ಗಿಣ್ಣದ ಹಾಲಿನಲ್ಲಿ ಅತ್ಯಧಿಕ ಪ್ರಮಾಣದ ಸಸಾರಜನಕ, ಖನಿಜಾಂಶ, ವಿಟಮಿನ್‌ಗಳು ಮತ್ತು ರೋಗನಿರೋಧಕ ಶಕ್ತಿ ಅಡಕವಾಗಿರುವುದರಿಂದ ಕರುವಿಗೆ ಇವುಗಳ ಕೊರತೆಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ. ಮೂರು ತಿಂಗಳ ತನಕ ಕರುವಿಗೆ ತಾಯಿಯ ಹಾಲು ಅಗತ್ಯ. ಏಕಾಏಕಿ ಹಾಲು ನಿಲ್ಲಿಸಿ ಪಶು ಅಹಾರ ನೀಡುವುದು ಒಳ್ಳೆಯದಲ್ಲ.

ತಾಯಿಯ ಪಶು ಅಹಾರ ಕರುವಿಗೆ ಹಾಕುವುದು ಸಲ್ಲ. ಇದರಲ್ಲಿ ಪ್ರೊಟೀನ್ ಅಂಶ ಕಡಿಮೆ. ಕರುಗಳಿಗೆಂದೇ ಇರುವ ಪಶುಅಹಾರವನ್ನೇ ಬಳಸಿದರೆ ಈ ಸಮಸ್ಯೆ ಬರುವುದಿಲ್ಲ. ತಯಾರಕರ ನಿರ್ದೇಶನ ದಂತೆ ಮೊದಲಿಗೆ ದಿನಕ್ಕೆ 100 ಗ್ರಾಂ, 35 ದಿನದಿಂದ 2 ತಿಂಗಳವರೆಗೆ ಪ್ರತಿ ದಿನ 250 ಗ್ರಾಂ, 2 ರಿಂದ 3 ತಿಂಗಳವರೆಗೆ 500 ಗ್ರಾಂ ಕರುಗಳ ನೀಡಬೇಕು. ಕರುಗಳ ಹಿಂಡಿ ಸಿಗದಿದ್ದರೆ ಉತ್ತಮ ಗುಣಮಟ್ಟದ ನೆಲಗಡಲೆ ಹಿಂಡಿಯನ್ನು ಮೇಲೆ ಹೇಳಿದ ಅರ್ಧದಷ್ಟನ್ನಾದರೂ ಕೊಟ್ಟರೆ ಉತ್ತಮ. ಕರುವಿನ ದೇಹ ತೂಕದ ಆಧಾರದ ಮೇಲೆ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಪ್ರತಿದಿನ ಒಂದು ಕಿ.ಗ್ರಾಂ ಹಾಗೂ ಒಂದು ವರ್ಷದಿಂದ ಬೆದೆಗೆ ಬರುವ ತನಕ ಎರಡು ಕಿ.ಗ್ರಾಂ ಪಶು ಆಹಾರ ನೀಡಬೇಕು. ಉತ್ತಮ ಖನಿಜ ಮಿಶ್ರಣವನ್ನು ಸೂಕ್ತ ಪ್ರಮಾಣದಲ್ಲಿ ನೀಡುವುದೂ ಸಹ ಅಗತ್ಯ

ಹಾಗಿದ್ದರೆ ಕರುವಿನ ಆಹಾರವನ್ನು ಹೇಗೆ ತಯಾರಿಸಬೇಕು ? ಎನ್ನುವುದು ನಿಮ್ಮ ಪ್ರಶ್ನೆಯಲ್ಲವೇ? ನಿಜ. ಕರುಗಳಿಗೆ ಪ್ರತ್ಯೇಕವಾದ ಆಹಾರ ಬೇಕು. ಇದಕ್ಕೆ ಕಾಫ್ ಸ್ಟಾರ್ಟರ್ ಮತ್ತು ಕಾಫ್ ಫಿನಿಶರ್ ಎಂದು ಕರೆಯುತ್ತಾರೆ. ಮೂರು ತಿಂಗಳವರೆಗೂ ಹಾಲನ್ನೇ ನೀಡಿ ನಂತರ ಕರುವಿಗಾಗಿಯೇ ತಯಾರಿಸಿದ ವಿಶೇಷ ಆಹಾರ ತಯಾರಿಸಬಹುದು ಅಥವಾ ಮಾರುಕಟ್ಟೆಯಲ್ಲಿ ಸಿದ್ಧ ರೂಪದಲ್ಲಿ ಲಭ್ಯವಿರುವ ಕರುವಿನ ಆಹಾರವನ್ನು ನೀಡಬಹುದು. ಕರುವಿನ ಸಮತೋಲ ಆಹಾರವನ್ನು ಈ ಕೆಳಗಿನ ವಸ್ತುಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಬಹುದು;

 • ಆಹಾರದ ಅಂಶ ಪ್ರಮಾಣ (ಕೆಜಿ)
 • ಮುಸುಕಿನ ಜೋಳದ ಪುಡಿ 40
 • ಕಡಲೆ ಕಾಯಿ ಹಿಂಡಿ 40
 • ರವೆ ಬೂಸಾ 10
 • ಹಾಲಿನ ಪುಡಿ 7
 • ಖನಿಜಾಂಶ ಮಿಶ್ರಣ 2
 • ಉಪ್ಪು 1
 • ಜೀವಸತ್ವ(ಎ.ಡಿ.ಈ.) 50 ಗ್ರಾಂ
 • ಜೀವನಿರೋಧಕಗಳು (ಅವಶ್ಯಕತೆಗೆ ತಕ್ಕಷ್ಟು) 30 ಗ್ರಾಂ

ಹಾಗಿದ್ದರೆ ಈ ಹಿಂಡಿಯನ್ನು ಹೇಗೆ ನೀಡಬೇಕು ಅನ್ನುವುದು ಒಂದು ಪ್ರಶ್ನೆ. ಇದನ್ನು ಬೆಳೆಯುವ ಕರುಗಳು ದಿನಕ್ಕೆ ಸರಾಸರಿ 250-500ಗ್ರಾಂ ನಷ್ಟು ತೂಕ ಜಾಸ್ತಿ ಹೊಂದುವುದರಿಂದ ಶರೀರ ತೂಕದ ಶೇ: 5%ರಷ್ಟು ಅಂದರೆ ಮೂರನೇ ತಿಂಗಳಿಗೆ ಕರು 50 ಕಿಲೋ ತೂಗುತ್ತಿದ್ದರೆ ದಿನಕ್ಕೆ 2.5 ಕಿಲೋವನ್ನು ಬೆಳಿಗ್ಗೆ1.25 ಕಿಲೋ ಮತ್ತು ಸಾಯಂಕಾಲ 1.25 ಕಿಲೋ ರಷ್ಟು ಹಾಕಬೇಕು. ಪ್ರತಿ ದಿನವೂ ಸಹ ಇದನ್ನು 26-50ಗ್ರಾಮಿನಷ್ಟು 3-12 ತಿಂಗಳ ವರೆಗೆ ಹೆಚ್ಚಿಸುತ್ತಾ ಹೋಗಬೇಕು.

ಕರು ಪ್ರೌಢಾವಸ್ತೆಗೆ ಬಂದ ನಂತರ ಸಾಕಷ್ಟು ಉತ್ತಮ ಗುಣಮಟ್ಟದ ರಾಗಿ ಹುಲ್ಲು, ಜೋಳದ ಸಿಪ್ಪೆ ಇತ್ಯಾದಿಗಳ ಜೊತೆ ಪ್ರತಿ ದಿನ 3 ಕೆಜಿ ಹಿಂಡಿಯನ್ನು ನೀಡಲೇಬೇಕು. ಅಂದರೆ ಮಾತ್ರ ಕರು ಉತ್ತಮ ಮಣಕವಾಗಿ ಬೆಳೆದು ನಿಗದಿತ ಸಮಯದಲ್ಲಿ ಬೆದೆಗೆ ಬಂದು ಗರ್ಭಧರಿಸಿ ಕರು ಹಾಕುತ್ತದೆ.

ಇದಕ್ಕೆಲ್ಲಾ ಸಿಕ್ಕಾಪಟ್ಟೆ ಖರ್ಚು ಬರುತ್ತದಲ್ಲಾ ಎಂದು ಗೊಣಗಬೇಡಿ. ಏಕೆಂದರೆ ಇಂದಿನ ಕರುವೇ ನಾಳಿನ ಹಸು. ತೆಂಗಿನ ಸಸಿಗೆ ಹೇಗೆ ಉತ್ತಮ ಗೊಬ್ಬರ, ಮಣ್ಣು, ನೀರು ನೀಡಿದಲ್ಲಿ ಹೇಗೆ ದೊಡ್ಡ ದೊಡ್ಡ ರುಚಿಯಾದ ಎಳೆನೀರನ್ನು ನೆಟ್ಟ ಎರಡು ವರ್ಷಗಳಿಗೆ ನೀಡುತ್ತದೆಯೋ ಹಾಗೆಯೇ ಇದೂ ಸಹ.

ಗೋಮಾತೆಗೆ ಏನೇ ಖರ್ಚು ಮಾಡಿದರೂ ಅದರ ದುಪ್ಪಟ್ಟು ವಾಪಸ್ಸು ಬಂದೇ ಬರುತ್ತದೆ. ಉತ್ತಮ, ನಳನಳಿಸುವ ಹಸುವನ್ನು ಸಿದ್ಧ ಗೊಳಿಸಲು ರೂ: 50 ಸಾವಿರ ಖರ್ಚಾದರೂ ಸಹ ಅದರ ಮಾರಾಟ ಬೆಲೆ 75-80 ಸಾವಿರ ಆಗಿಯೇ ಆಗುತ್ತದೆ. ಕಾರಣ ದನ-ಕರುಗಳಿಗೆ ಹಿಂಡಿ, ಹುಲ್ಲು ಹಾಕುವಲ್ಲಿ ಖಂಡಿತಾ ಜಿಪುಣತನ ಬೇಡ. ಗೋಮಾತೆಗೆ ಬೇಕಾಗಿರುವುದು ಹೊಟ್ಟೆ ತುಂಬಾ ಹುಲ್ಲು, ಹಾಲು ನೀಡಲು ಹಿಂಡಿ ಅಷ್ಟೆ. ಇಷ್ಟು ಒದಗಿಸಿ ಗೋಮಾತೆಯ ಕೃಪೆ ಹಾಗೂ ವರಕ್ಕೆ ಪಾತ್ರರಾಗಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗ್ಯಾಸ್ಟ್ರಿಕ್‌ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!

Published

on

 • ಸಂಗಮೇಶ ಎನ್ ಜವಾದಿ

ನುಷ್ಯ ಆರೋಗ್ಯವಾಗಿ ಇರಬೇಕೆಂದರೆ,ದೇಹದ ಎಲ್ಲಾ ಭಾಗಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರಬೇಕು. ಒಂದು ವೇಳೆ ದೇಹದ ಯಾವುದೋ ಭಾಗದಲ್ಲಿ ವ್ಯತ್ಯಾಸ ಉಂಟಾದರೆ,ಮನಸ್ಸಿಗೆ ಕಸವಿಸಿ ಯಾಗುವುದಂತು ನಿಜ,ಈ ಎಲ್ಲಾ ಕಾರಣಗಳು ಗಮನಿಸಿ ಮನುಷ್ಯನ ಅತಿ ಮುಖ್ಯವಾದ ಹೊಟ್ಟೆ ಗ್ಯಾಸ್ ಸಮಸ್ಯೆಯ ಪರಿಹಾರ ಕುರಿತು ಇಲ್ಲಿ ಬರೆಯಲು ಪ್ರಯತ್ನ ಮಾಡಿರುತ್ತೇವೆ.

ಹಾಗಾಗಿ ಕೆಲವೊಮ್ಮೆ ಮನುಷ್ಯನ ಮುಜುಗರಕ್ಕೆ ಎಡೆಮಾಡುವ ಗ್ಯಾಸ್ ಸಮಸ್ಯೆಯು ಹೊಟ್ಟೆಯಲ್ಲಿ ಸೆಳೆತ, ಹೊಟ್ಟೆ ಉಬ್ಬು, ಹೊಟ್ಟೆ ಭಾರ ಹಾಗೂ ಎದೆ ಉರಿಯಂತಹ ಸಮಸ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಜೀರ್ಣಕ್ರಿಯೆ ಸುಗಮವಾಗಿ ನೆರವೇರದೆ ಅನಿಲವು ಸಂಗ್ರಹವಾಗುವ ಸ್ಥಿತಿಯೇ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ.ಹಾಗು ಇದಲ್ಲದೆ ಮನುಷ್ಯನ ಮನಸ್ಸು ಬಯಸಿದ ಊಟ-ತಿಂಡಿ ಸಿಕ್ಕಾಗ ಖುಷಿಯಿಂದ ಸೇವಿಸುತ್ತೇವೆ.

ಆದರೆ ಅದರ ಪರಿಣಾಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆಯನ್ನು ಉಂಟುಮಾಡಬಹುದು. ಪದೇ ಪದೇ ಗಾಸ್ ಬಿಡುಗಡೆಯಾಗುವುದು, ಹೊಟ್ಟೆಯಲ್ಲಿ ನೋವು ಹಾಗೂ ಬಳಲಿಕೆ ಉಂಟಾಗುತ್ತದೆ. ಕೆಲವೊಮ್ಮೆ ಸಭೆ-ಸಮಾರಂಭಗಳ ನಡುವೆ ಇರುವಾಗ ಗ್ಯಾಸ್ ಸಮಸ್ಯೆಯು ಅಧಿಕವಾಗಿ ಕಾಡುವ ಸಾಧ್ಯತೆಗಳು ಇರುತ್ತವೆ. ಆಗ ಸಾಕಷ್ಟು ಇರುಸು-ಮುರಿಸು ಉಂಟಾಗುವುದು ಸಹಜ.

ಹೊಟ್ಟೆಯಲ್ಲಿರುವ ಗ್ಯಾಸ್ ಹೊರಗೆ ಹೋದರೆ ಅಷ್ಟು ಸಮಸ್ಯೆ ಎನಿಸದು. ಅದು ಹೊಟ್ಟೆಯಲ್ಲಿಯೇ ಉಳಿದುಕೊಂಡಾಗ ಸಮಸ್ಯೆ ಅಧಿಕವಾಗುವುದಂತು ಗ್ಯಾರಂಟಿ ಎನ್ನುವುದು ಸುಳ್ಳಲ್ಲ.ಹಾಗಾಗಿ ನಾವು ಸೇವಿಸುವ ದೈನಂದಿನ ಆಹಾರ ಸಮತೋಲನ ಹಾಗೂ ಆರೋಗ್ಯ ಪೂರ್ಣವಾಗಿರಬೇಕು. ಬೀನ್ಸ್, ಎಲೆಕೋಸು, ಕಡಲೆ, ಸಕ್ಕರೆ ಯ ಪದಾರ್ಥಗಳು ಹೆಚ್ಚಿನ ಕಾರ್ಬನ್ಗಳನ್ನು ಒಳಗೊಂಡಿರುತ್ತವೆ.

ಅವು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಅವು ಕೊಲೋನ್ ಮೂಲಕ ಹಾದುಹೋಗುತ್ತವೆ. ಅಲ್ಲದೆ ಬಹಳಷ್ಟು ಬ್ಯಾಕ್ಟೀರಿಯಾಗಳಿಂದಲೂ ಕೂಡಿರುತ್ತದೆ. ಅವು ಹೆಚ್ಚು ಅನಿಲವನ್ನು ಬಿಡುಗಡೆ ಮಾಡುವುದರ ಮೂಲಕ ಅನಾರೋಗ್ಯ ಹಾಗೂ ಗ್ಯಾಸ್ ಸಮಸ್ಯೆಯನ್ನು ಸೃಷ್ಟಿಸುತ್ತವೆ.ಆದ್ದರಿಂದ ಇದನ್ನು ತಡೆಗಟ್ಟಲು ಹಲವಾರು ಕ್ರಮಗಳು ಇಂದಿನ (ಮನೆಗಳಲ್ಲಿ)ದಿನಗಳಲ್ಲಿ ಕಾಣುತ್ತೇವೆ.

ಈ ನಿಟ್ಟಿನಲ್ಲಿ ಗ್ಯಾಸ್‌ ಸಮಸ್ಯೆಗೆ ಪರಿಹಾರ, ಮನೆಮದ್ದು ಇದನ್ನು ನಾವು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಖಂಡಿತಾ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು.

ಕ್ಯಾರಮ್ ಬೀಜ

ಓಂಕಾಳು ಅಥವಾ ಕ್ಯಾರಮ್ ಬೀಜದಲ್ಲಿ ಥೈಮೋಲ್ ಎಂಬ ಸಂಯುಕ್ತವಿದೆ. ಇದು ಜೀರ್ಣ ಕ್ರಿಯೆಗೆ ಸಹಾಯ ಮಾಡುವುದು. ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ ಸಮಸ್ಯೆಯನ್ನು ನಿವಾರಿಸಲು ಕ್ಯಾರಮ್ ಬೀಜವನ್ನು ಸೇವಿಸಬೇಕು. ನಿತ್ಯವೂ ಒಂದು ಬಾರಿ ಅರ್ಧಟೀ ಚಮಚ ಓಂಕಾಳನ್ನು ಜಗೆದು ನೀರನ್ನು ಕುಡಿಯಬಹುದು. ಇಲ್ಲವೇ ನೀರಿಗೆ ಸೇರಿಸಿ, ಕಷಾಯವನ್ನು ತಯಾರಿಸಿಯೂ ಕುಡಿಯಬಹುದು. ಈ ವಿಧಾನವು ಬಹುಬೇಗ ಆರೈಕೆಯನ್ನು ಮಾಡುವುದು.

ಜೀರಿಗೆ ನೀರು (ಉಗುರು ಬೆಚ್ಚಗಿನ ನೀರು)

ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಸಮಸ್ಯೆಗೆ ಜೀರಿಗೆ ನೀರು ಕುಡಿಯುವುದು ಉತ್ತಮ ಮನೆಮದ್ದು. ಜೀರಾ ಅಥವಾ ಜೀರಿಗೆ ಜೀವಾಣು ಗ್ರಂಥಿಗಳನ್ನು ಉತ್ತೇಜಿಸುವ ಸಾರಭೂತ ತೈಲಗಳನ್ನು ಒಳಗೊಂಡಿರುತ್ತದೆ. ಇದು ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಅನಿಲದ ರಚನೆಯನ್ನು ತಡೆಯುತ್ತದೆ ಎಂದು ಎಂದು ತಜ್ಞರು ಹೇಳುತ್ತಾರೆ.

ಎರಡು ಕಪ್ ನೀರಿಗೆ ಒಂದು ಟೀ ಚಮಚ ಜೀರಿಗೆ ಸೇರಿಸಿ, 15-20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಕಾಲ ತಣಿಯಲು ಬಿಡಿ. ಊಟ ಆದ ನಂತರ ಈ ಜೀರಿಗೆ ನೀರನ್ನು ಸೇವಿಸಿ. ಆಗ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಪ್ರಕ್ರಿಯೆಯನ್ನು ಸುಲಭವಾಗಿ ತಡೆಯಬಹುದು.

ಅಸಫೊಯೆಟಿಡಾ / ಇಂಗು

ಗ್ಯಾಸ್ ಸಮಸ್ಯೆಯಿಂದ ಬಳಲುವವರು ಅರ್ಧ ಟೀ ಚಮಚ ಇಂಗ್ ಅನ್ನು ಒಂದು ಲೋಟ ಮಜ್ಜಿಗೆಗೆ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬಹುದು. ಈ ವಿಧಾನದಿಂದ ಬಹುಬೇಗ ಗ್ಯಾಸ್ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದು. ಇಂಗು ನಿಮ್ಮ ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲವನ್ನು ಉತ್ಪಾದಿಸುವ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.ಇಂಗು ವಾಯು ವಿರೋಧಿ ಆಗಿ ಕಾರ್ಯನಿರ್ವಹಿಸುತ್ತದೆ. ಆಯುರ್ವೇದದ ಪ್ರಕಾರ ದೇಹದ ವಾತ ದೋಶವನ್ನು ಸಮತೋಲನಗೊಳಿಸಲು ಇಂಗು ಸಹಾಯ ಮಾಡುತ್ತದೆ.

ಶುಂಠಿ

ಶುಂಠಿಯು ಆಯುರ್ವೇದದಲ್ಲಿ ಅತ್ಯುತ್ತಮ ಔಷಧಿ ಮೂಲ ಎಂದು ಗುರುತಿಸಲಾಗಿದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವುದು. ಗ್ಯಾಸ್ ಸಮಸ್ಯೆ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಶುಂಠಿಯ ಪರಿಹಾರ ಕಂಡುಕೊಳ್ಳಬಹುದು. ತಾಜಾ ಶುಂಠಿಯ ತುರಿಯನ್ನು ನಿಂಬೆ ರಸದೊಂದಿಗೆ ಸೇರಿಸಿ, ಸೇವಿಸಬೇಕು.

ಈ ಕ್ರಮವನ್ನು ಊಟದ ನಂತರ ಸೇವಿಸಿದರೆ ಉತ್ತಮ ಪರಿಹಾರ ನೀಡುವುದು. ಊಟದ ನಂತರ ಬೆಚ್ಚಗಿನ ಶುಂಠಿ ಚಹಾ ಸೇವಿಸುವುದರಿಂದಲೂ ಹೊಟ್ಟೆ ಉಬ್ಬರ ಗುಣಮುಖವಾಗುವುದು. ಶುಂಠಿ ನೈಸರ್ಗಿಕ ಕಾರ್ಮಿನೇಟಿವ್ ಆಗಿ ಕಾರ್ಯನಿರ್ವಹಿಸುತ್ತದೆ.

ನಿಂಬೆ ರಸ

ಮಾಂಸಹಾರ, ಸಮಾರಂಭಗಳ ಊಟ-ತಿಂಡಿಯಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಒಂದು ಟೀ ಚಮಚ ನಿಂಬೆ ಸರಕ್ಕೆ ಅರ್ಧ ಟೀ ಚಮಚ ಅಡುಗೆ ಸೋಡವನ್ನು ಸೇರಿಸಿ, ಒಂದು ಕಪ್ ನೀರಿನಲ್ಲಿ ಬೆರೆಸಿ. ನಂತರ ಸೇವಿಸಿ. ಇದರಿಂದ ಗ್ಯಾಸ್ ಸಮಸ್ಯೆ ಬಗೆಹರಿಯುವುದು. ಊಟದ ನಂತರ ಈ ಕ್ರಮ ಅನುಸರಿಸಿದರೆ ಹೊಟ್ಟೆಯಲ್ಲಿ ಉತೊತ್ತಿಯಾಗುವ ಕಾರ್ಬನ್ ಡೈ ಆಕ್ಸೈಡ್ಅನ್ನು ದೇಹದ ಹೊರಗೆ ಹೋಗುವಂತೆ ಉತ್ತೇಜನ ನೀಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುವುದು.

ತ್ರಿಫಲ ಪುಡಿ

ಕುದಿಯುವ ನೀರಿಗೆ ಅರ್ಧ ಟೀ ಚಮಚ ತ್ರಿಫಲ ಪುಡಿಯನ್ನು ಸೇರಿಸಿ, 15 -20 ನಿಮಿಷ ಕುದಿಸಿ. ನಂತರ ಒಂದೆಡೆ ಇಡಿ. ಊಟದ ನಂತರ ತ್ರಿಫಲ ದ್ರಾವಣ ಅಥವಾ ನೀರನ್ನು ಕುಡಿಯಿರಿ. ಇದನ್ನು ಅತಿಯಾಗಿ ಕುಡಿದರೂ ಹೊಟ್ಟೆ ಉಬ್ಬರ ಉಂಟಾಗುವುದು. ಹಾಗಾಗಿ ಮಿತವಾದ ಸೇವನೆ ಮಾಡುವುದು ಉಚಿತ. ಅಲ್ಲದೆ ಸಮಸ್ಯೆಯೂ ನಿವಾರಣೆಯಾಗುವುದು. ಆಗಾಗ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಅನಿಲ ತುಂಬುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಅದು ಸಾಮಾನ್ಯ ಸಂಗತಿಯಾಗಿರುತ್ತದೆ. ಇದು ನಮ್ಮಲ್ಲಿ ಹೆಚ್ಚಿನವರಿಗೆ ಸಂಭವಿಸುತ್ತದೆ. ಅದಕ್ಕಾಗಿ ಮನೆ ಮದ್ದು ಬಳಸಿದರೆ ಬಹುಬೇಗ ಶಮನವಾಗುವುದು.

ಆದರೆ ಈ ಸಮಸ್ಯೆ ನಿಯಮಿತವಾಗಿ ಬರುತ್ತಿದೆ ಅಥವಾ ಬಳಲುತ್ತಿದ್ದೀರಿ ಎಂದಾದರೆ ಇದು ಲ್ಯಾಕ್ಟೋಸ್ ಅಸಹಿಷ್ಣುತೆ, ಹಾರ್ಮೋನುಗಳ ಅಸಮತೋಲನ ಅಥವಾ ಕೆಲವು ರೀತಿಯ ಕರುಳಿನ ಅಡಚಣೆಯಂತಹ ಗಂಭೀರ ಅಸ್ವಸ್ಥತೆಯ ಸಂಕೇತವಾಗಿರ ಬಹುದು. ಮಾತ್ರೆಗಳನ್ನು ಹಾಕುವ ಬದಲು ನೈಸರ್ಗಿಕ ಪರಿಹಾರಗಳನ್ನು ಆಶ್ರಯಿಸುವುದು ಯಾವಾಗಲೂ ಒಳ್ಳೆಯದು. ಆದರೆ ಸಮಸ್ಯೆ ಮುಂದುವರಿದರೆ ನಿಮ್ಮ ವೈದ್ಯರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಪರಿಶೀಲನೆ ಹಾಗೂ ಚಿಕಿತ್ಸೆ ಪಡೆಯುವುದು ಸೂಕ್ತ.

ಕೊನೆಯ ಮಾತು

ಕೊಲೆಸ್ಟ್ರಾಲ್ ಮತ್ತು
ಮಸಾಲೆ ಪದಾರ್ಥಗಳನ್ನು ತಿನ್ನುವುದು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು ಜೊತೆಗೆ ವ್ಯಾಯಾಮ ಮಾಡುವುದು ಹಾಗ ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರು ಸೇವಿಸುವುದು ಅತ್ಯುತ್ತಮ ಎನ್ನಬಹುದಾಗಿದೆ.ಹೀಗೆ ನಾವು ನಮ್ಮ ಮನೆಯಲ್ಲಿ ಸೀಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಬೆಳ್ಗಣ್ಣ

Published

on

 • ಭಗವತಿ ಎಂ.ಆರ್, ಛಾಯಾಗ್ರಾಹಕಿ, ಕವಯಿತ್ರಿ

ಸದಾ ಚಟುವಟಿಕೆಯಿಂದ ಪುಟಿಯುವ ಹಳದಿ ಬಣ್ಣದ ಹಕ್ಕಿ ಬೆಳ್ಗಣ್ಣ. ಇದಕ್ಕೆ ಬಿಳಿಗಣ್ಣಿನ (Indian white-eye, Birds) ಚಿಟಗುಬ್ಬಿ ಎಂಬ ಮುದ್ದಾದ ಹೆಸರೂ ಇದೆ. ನೋಡಲು ಸಪೂರವಾಗಿದ್ದು, ಕಣ್ಣಿನ ಸುತ್ತ ಬಿಳಿಯ ಉಂಗುರವೇ ಇದರ ಆಕರ್ಷಣೆ. ಇವು ನೆಲದ ಮೇಲೆ ಕಾಣಿಸಿಕೊಳ್ಳುವುದು ಅಪರೂಪ. ಜೋಡಿಯಾಗಿ ಅಥವಾ ಗುಂಪುಗಳಲ್ಲಿ ಇರುತ್ತವೆ.

ಇವುಗಳ ಮುಖ್ಯ ಆಹಾರ ಕೀಟಗಳು. ಹಣ್ಣು, ಹೂವಿನ ಗಿಡಗಳಿರುವಲ್ಲಿ ಕೊಂಬೆಯಿಂದ ಕೊಂಬೆಗೆ ಹಾರುತ್ತಾ, ನೇತಾಡುತ್ತಾ ಇರುತ್ತವೆ. ಇವು ಗೂಡು ಬಟ್ಟಲಾಕಾರವಾಗಿದ್ದು, ತಿಳಿ ನೀಲಿ ಬಣ್ಣದ ಮೊಟ್ಟೆ ಇಡುತ್ತವೆ. ಸಾಧಾರಣವಾಗಿ ಎರಡರಿಂದ ಮೂರು ಮೊಟ್ಟೆಗಳನ್ನಿಡುತ್ತವೆ.

ಗೂಡು ಕಟ್ಟುವಾಗ ಬೇರೆ ಹಕ್ಕಿಗಳ ಗೂಡಿನ ವಸ್ತುಗಳನ್ನು ಇವು ಕದಿಯುತ್ತವೆ ಎಂದು ಪಕ್ಷಿತಜ್ಞರು ಹೇಳುತ್ತಾರೆ. ಹಸಿರು ಮಿಶ್ರಿತ ಹಳದಿ ಬಣ್ಣದ ಇವು ಗಿಡಗಳ ಮೇಲೆ ಕೂತದ್ದು, ಹಾರಿ ಹೋಗುವುದು ಗೊತ್ತಾಗುವುದೇ ಇಲ್ಲ. ಅಂಥ ಚುರುಕಿನ ಹಕ್ಕಿಗಳು ಇವು. ವಿಪರೀತ ಚಟುವಟಿಕೆಯ (Hyperactive) ಸ್ವಭಾವಕ್ಕೆ ಉತ್ತಮ ಉದಾಹರಣೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending