Connect with us

ರಾಜಕೀಯ

ಭಾರತದಲ್ಲಿ ಟ್ರಂಪ್ : ಮೋದಿ ಸರಕಾರದ ಅಡಿಯಾಳುತನದ ಪ್ರದರ್ಶನ

Published

on

  • ಈ ಟ್ರಂಪ್ ಭೇಟಿ, ಭಾರತವನ್ನು ಅಮೆರಿಕಾದ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹಕ್ಕೆ ಸಂಪೂರ್ಣವಾಗಿ ಲಗತ್ತಿಸಿ ಮೋದಿ ಭಾರತದ ಎಲ್ಲ ಹಿತಾಸಕ್ತಿಗಳನ್ನು ಆ ಗುರಿ ಸಾಧನೆಗೆ ಅಡಿಯಾಳಾಗಿಸಿದ್ದನ್ನು ತೋರಿಸಿಕೊಟ್ಟಿದೆ. ಭೇಟಿಯ ಕೊನೆಯಲ್ಲಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಇದು ಚೆನ್ನಾಗಿ ಬಿಂಬಿತವಾಗಿದೆ. ಅಮೆರಿಕಾದ ಪ್ರಾಥಮಿಕ ಗುರಿ ಭಾರತವನ್ನು ಒಂದು ನಂಬಿಕಸ್ಥ ವ್ಯೂಹಾತ್ಮಕ ಮತ್ತು ಮಿಲಿಟರಿ ಮಿತ್ರನಾಗಿ ಮಾಡುವುದು ಎಂಬುದು ಭಾರತ-ಅಮೆರಿಕ ಪರಮಾಣು ವ್ಯವಹಾರಕ್ಕೆ ಸಹಿ ಹಾಕಿದಂದಿನಿಂದಲೇ ಸ್ಪಷ್ಟವಾಗಿತ್ತು. ಅಮೆರಿಕಾಕ್ಕೆ ಎದುರಾಗಿ ಭಾರತದ ಹಿತಗಳಿಗೆ ಅತ್ಯಗತ್ಯವಾದ ಒಂದು ವ್ಯಾಪಾರ, ವಾಣಿಜ್ಯ, ದತ್ತಾಂಶ ಸ್ಥಳೀಯಕರಣ ಅಥವ ಬೇರೆ ಯಾವುದೇ ವಿಷಯದಲ್ಲಿ ಮಾತುಕತೆಗಳಿಗೆ ಮೋದಿ ಸರಕಾರಕ್ಕೆ ಯಾವುದೇ ಅವಕಾಶ ಉಳಿದಿಲ್ಲ.

-ಪ್ರಕಾಶ ಕಾರಟ್

ಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ಭಾರತ ಭೇಟಿ ಇತ್ತೀಚಿನ ಸಮಯದಲ್ಲಿ ಯಾವುದೇ ಅಮೆರಿಕನ್ ಅಧ್ಯಕ್ಷರ ಭೇಟಿಯಂತಿರಲಿಲ್ಲ. ಇದೊಂದು ಅಧಿಕೃತ ಭೇಟಿಯಾದರೂ, ಅಹಮದಾಬಾದಿನ ಮೊಟೆರ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಇವೆಂಟ್ ಈ ಭೇಟಿಯ ಪ್ರಧಾನ ಸಂಗತಿಯಾಗಿತ್ತು. ಇಲ್ಲಿ ನರೇಂದ್ರ ಮೋದಿ ಕಳೆದ ವರ್ಷ ಅಮೆರಿಕಾದ ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿಯ ಭಾರತೀಯ ಆವೃತ್ತಿಯನ್ನು ಪ್ರದರ್ಶಿಸಿದರು. ಆದರೆ ಈ ಪ್ರದರ್ಶನವನ್ನು ಕೇವಲ ಒಂದು ತಮಾಷೆ ಎಂದು ತಳ್ಳಿ ಹಾಕುವಂತಿಲ್ಲ. ಇದು ಮೋದಿಯ ಭಾರತ ಟ್ರಂಪ್‌ನ ಅಮೆರಿಕಾಕ್ಕೆ ಸಂಪೂರ್ಣ ನಿಷ್ಠೆಯನ್ನು-ತಾತ್ವಿಕವಾಗಿ, ರಾಜಕೀಯವಾಗಿ, ವ್ಯೂಹಾತ್ಮಕವಾಗಿ ಮತ್ತು ಸಾಮರಿಕವಾಗಿ- ಘೋಷಿಸಿರುವ ಪರಿ. ಹಿಂದೆಂದೂ ಬಲಪಂಥೀಯ ರಾಜಕೀಯ ಮತ್ತು ಸಿದ್ಧಾಂತ ಇಂದಿನಷ್ಟು ಭಾರತ-ಅಮೆರಿಕ ಸಂಬಂಧಗಳನ್ನು ಜೋಡಿಸುವ ಅಂಟು ಆಗಿರಲಿಲ್ಲ. ಮೋದಿ ಈ ನಮಸ್ತೆ ಟ್ರಂಪ್ನ್ನು ನವಂಬರ್ ತಿಂಗಳ ಅಧ್ಯಕ್ಷೀಯ ಚುನಾವಣೆಗಲ್ಲಿ ತನ್ನ ಗೆಳೆಯ ಟ್ರಂಪ್‌ರವರ ಪ್ರಚಾರಕ್ಕೆಂದೇ ರೂಪಿಸಿದಂತಿದೆ.

ಈ ಟ್ರಂಪ್ ಭೇಟಿ, ಭಾರತವನ್ನು ಅಮೆರಿಕಾದ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹಕ್ಕೆ ಸಂಪೂರ್ಣವಾಗಿ ಲಗತ್ತಿಸಿ ಮೋದಿ ಭಾರತದ ಎಲ್ಲ ಹಿತಾಸಕ್ತಿಗಳನ್ನು ಆ ಗುರಿ ಸಾಧನೆಗೆ ಅಡಿಯಾಳಾಗಿಸಿದ್ದನ್ನು ತೋರಿಸಿಕೊಟ್ಟಿದೆ.

ಭೇಟಿಯ ಕೊನೆಯಲ್ಲಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಇದು ಚೆನ್ನಾಗಿ ಬಿಂಬಿತವಾಗಿದೆ. ಸಮಗ್ರ ಭೌಗೋಳಿಕ-ವ್ಯೂಹಾತ್ಮಕ ಭಾಗೀದಾರಿಕೆ ಎಂದು ಅದರಲ್ಲಿ ಪ್ರಕಟಿಸಿರುವಂತದ್ದು ಭಾರತವು ಅಮೆರಿಕ ಸಂಯುಕ್ತ ಸಂಸ್ಥಾನಗಳ ವ್ಯೂಹಾತ್ಮಕ, ರಕ್ಷಣಾ ಮತ್ತು ಭದ್ರತಾ ಹಿತಾಸಕ್ತಿಗಳೊಂದಿಗೆ ತನ್ನನ್ನು ಏಕೀಭವಿಸಿಕೊಂಡಿದೆ ಎಂಬ ಘೊಷಣೆಯಲ್ಲದೆ ಬೇರೇನೂ ಅಲ್ಲ.

ಅಮರಿಕಾದ ಪ್ರಾಥಮಿಕ ಗುರಿ ಭಾರತವನ್ನು ಒಂದು ನಂಬಿಕಸ್ಥ ವ್ಯೂಹಾತ್ಮಕ ಮತ್ತು ಮಿಲಿಟರಿ ಮಿತ್ರನಾಗಿ ಮಾಡುವುದು ಎಂಬುದು ಭಾರತ-ಅಮೆರಿಕ ಪರಮಾಣು ವ್ಯವಹಾರಕ್ಕೆ ಸಹಿ ಹಾಕಿದಂದಿನಿಂದಲೇ ಸ್ಪಷ್ಟವಾಗಿತ್ತು. ಅಧ್ಯಕ್ಷ ಟ್ರಂಪ್ ತನ್ನ ಅಹಮದಾಬಾದ್ ಭಾಷಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು ಭಾರತದ ಪ್ರಧಾನ ರಕ್ಷಣಾ ಭಾಗೀದಾರನಾಗಬೇಕು ಎಂಬುದು ನನ್ನ ನಂಬಿಕೆ, ಆ ರೀತಿಯಲ್ಲಿ ಅದು ಕೆಲಸ ಮಾಡುತ್ತಿದೆ ಎಂದರು.

ಭಾರತ ಈಗಾಗಲೇ ಕಳೆದ ಒಂದು ದಶಕದಲ್ಲಿ ಅಮೆರಿಕಾದಿಂದ 15ರಿಂದ 18 ಬಿಲಿಯ ಡಾಲರುಗಳ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಉಪಕರಣಗಳನ್ನು ಖರೀದಿಸಿದೆ. ಅಮೆರಿಕಾದೊಡನೆ ಭಾರತ ವ್ಯಾಪಾರದಲ್ಲಿ ಸರಿಯಾದ ರೀತಿಯಲ್ಲಿ ವ್ಯವಹರಿಸುತ್ತಿಲ್ಲ ಎಂಬ ಟ್ರಂಪ್ ಮಾತಿನ ಹಿಂದೆ ಇರುವುದು ಭಾರತ ಅಮೆರಿಕನ್ ಶಸ್ತಾಸ್ತ್ರ ಉತ್ಪಾದಕರಿಂದ ಹೆಚ್ಚೆಚ್ಚು ವೆಚ್ಚದಾಯಕ ಶಸ್ತ್ರಾಸ್ತೃಗಳನ್ನು ಖರೀದಿಸಬೇಕು ಎಂಬ ಒತ್ತಡವೇ. ಈ ಭೇಟಿ ಕಾಲದಲ್ಲಿ 3 ಬಿಲಿಯ ಡಾಲರುಗಳ ಮೌಲ್ಯದ 24 ಎಂಹೆಚ್ 60 ಆರ್ ನಾವಿಕ ಹೆಲಿಕಾಪ್ಟರ್‌ಗಳನ್ನು ಮತ್ತು ಆರು ಅಪಾಚೆ ಹೆಲಿಕಾಪ್ಟರುಗಳನ್ನು ಖರೀದಿಸುವ ಒಪ್ಪಂದವನ್ನು ಪ್ರಕಟಿಸಲಾಯಿತು.

ಬುನಾದಿ ಮಿಲಿಟರಿ ಒಪ್ಪಂದಗಳು ಎನ್ನಲಾದ ಮೂರು ಒಪ್ಪಂದಗಳಲ್ಲಿ ಎರಡಕ್ಕೆ ಸಹಿ ಹಾಕಿದ ಮೇಲೆ ಮೂರನೇ ಒಪ್ಪಂದ, ಮೂಲ ವಿನಿಮಯ ಸಹಕಾರ ಒಪ್ಪಂದ ಎಂಬುದನ್ನು ಬೇಗನೇ ಪೂರ್ಣಗೊಳಿಸಲಾಗುವುದು ಎಂದು ಜಂಟಿ ಹೇಳಿಕೆ ಸೂಚಿಸುತ್ತದೆ. ಈ ತ್ರಿವಳಿ ಒಪ್ಪಂದಗಳೊಂದಿಗೆ, ಭಾರತದ ಸಶಸ್ತ್ರ ಪಡೆಗಳು ಅಂತರ್ನಿರ್ವಹಣೆ ಮತ್ತು ಜಂಟಿ ಚಟುವಟಿಕೆಗಳ ರೂಪದಲ್ಲಿ ಏಷ್ಯಾದಲ್ಲಿ ಅಮೆರಿಕಾದ ಮಿತ್ರರುಗಳ, ಅಂದರೆ ಜಪಾನ್ ಮತ್ತು ದಕ್ಷಿಣ ಕೊರಿಯಾದ ಸಶಸ್ತ್ರ ಪಡೆಗಳಾಗಿ ಬಿಡುತ್ತವೆ.

ಈ ಜಂಟಿ ಹೇಳಿಕೆ, ಮೋದಿ ಸರಕಾರ ಅಮೆರಿಕ ಸಂಯುಕ್ತ ಸಂಸ್ಥಾನಗಳ ಭಾರತ-ಶಾಂತಸಾಗರ ಕಾರ್ಯವ್ಯೂಹದೊಂದಿಗೆ ತನ್ನನ್ನು ಸಂಪೂರ್ಣವಾಗಿ ಹೊಂದಿಸಿಕೊಂಡಿದೆ ಎಂಬುದನ್ನು ಬಿಂಬಿಸುತ್ತದೆ. ಅದು ಅಮೆರಿಕ-ಭಾರತ-ಜಪಾನ್ ತ್ರಿಪಕ್ಷೀಯ ಶೃಂಗ ಮತ್ತು ಅಮೆರಿಕ, ಜಪಾನ್ಮ ಆಸ್ಟ್ರೇಲಿಯ ಮತ್ತು ಭಾರತ ಇರುವ ಚತುರ್ಪಕ್ಷೀಯ ವೇದಿಕೆಯನ್ನು ಬಲಪಡಿಸುವ ಮಾತಾಡುತ್ತದೆ.

ಆಂತರಿಕ ಭದ್ರತಾ ರಂಗದಲ್ಲಿ ಭಾರತ ಅಮೆರಿಕಾದ ಆಂತರಿಕ ಭದ್ರತಾ ಇಲಾಖೆಯೊಂದಿಗೆ ಸಹಕಾರವನ್ನು ಬೆಳೆಸುತ್ತದೆ, ಅಂದರೆ ನಾವು ಅಮೆರಿಕನ್ ಭದ್ರತಾ ಏಜೆಂಸಿಗಳು ಭಾರತದ ಆಂತರಿಕ ಭದ್ರತಾ ವ್ಯವಹಾರಗಳಲ್ಲಿ ಹೆಚ್ಚಿನ ಪಾತ್ರವಹಿಸುವುದನ್ನು ನಿರೀಕ್ಷಿಸಬಹುದು.

ಈಗ ಭಾರತ-ಅಮೆರಿಕಾ ಸಂಬಂಧಗಳನ್ನು ಬಾಧಿಸುತ್ತಿರುವ ಪ್ರಶ್ನೆಯೆಂದರೆ, ವ್ಯಾಪಾರ ಸಂಬಂಧಗಳು. ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವುದು, ಭಾರತದ ಸಾಮಾನ್ಯೀಕೃತ ವ್ಯಾಪಾರ ಆದ್ಯತೆಗಳ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವುದು ಮುಂತಾದ ಟ್ರಂಪ್ ಆಡಳಿತದ ವೈಷಮ್ಯಭರಿತ ನಡೆಗಳ ನಂತರ, ಅಮೆರಿಕ ಡಬ್ಲ್ಯುಟಿಒ ದಲ್ಲಿ ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಇನ್ನು ಮುಂದೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದು ವರ್ಗೀಕರಿಸಬಾರದು ಎಂದು ಹೇಳುವವರ ನೇತೃತ್ವವನ್ನು ವಹಿಸಿಕೊಂಡಿದೆ.

ಒಂದು ಸಮತ್ವಹೀನ ಇ-ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ಭಾರತದ ಮೇಲೆ ಅಮೆರಿಕಾ ಒತ್ತಡ ಹೇರುತ್ತಿದೆ, ಮತ್ತು ವೈದ್ಯಕೀಯ ಉಪಕರಣಗಳ ಮೇಲೆ ಬೆಲೆ ನಿಯಂತ್ರಣ ಹಾಕುವ ಭಾರತದ ಧೋರಣೆಯನ್ನು ವಿರೋಧಿಸುತ್ತಿದೆ. ಇವೆಲ್ಲವನ್ನು ಕುರಿತಂತೆ ಭಾರತದ ಯಾವೊಂದೂ ನಿಲುವನ್ನು ಅಮೆರಿಕಾ ಒಪ್ಪುವಂತೆ ಮಾಡಲು ಸಾಧ್ಯವಾಗಿಲ್ಲ ಎಂಬುದು ಭೇಟಿ ಕಾಲದಲ್ಲಿನ ಹೇಳಿಕೆಗಳಿಂದ ಸ್ವಯಂವೇದ್ಯವಾಗುತ್ತದೆ. ಜಂಟಿ ಹೇಳಿಕೆ ಒಂದು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಪ್ರಸ್ತಾವಿತ ಮೊದಲ ಹಂತದ ಬಗ್ಗೆ ಮಾತುಕತೆಗಳ ಬಗ್ಗೆಯಷ್ಟೇ ಹೇಳುತ್ತದೆ.

ಅಮೆರಿಕಾಕ್ಕೆ ಎದುರಾಗಿ ಭಾರತದ ಹಿತಗಳಿಗೆ ಅತ್ಯಗತ್ಯವಾದ ಒಂದು ವ್ಯಾಪಾರ, ವಾಣಿಜ್ಯ, ದತ್ತಾಂಶ ಸ್ಥಳೀಯಕರಣ ಅಥವ ಬೇರೆ ಯಾವುದೇ ವಿಷಯದಲ್ಲಿ ಮಾತುಕತೆಗಳಿಗೆ ಮೋದಿ ಸರಕಾರಕ್ಕೆ ಯಾವುದೇ ಅವಕಾಶ ಉಳಿದಿಲ್ಲ.

ಭಾರತದ ವ್ಯೂಹಾತ್ಮಕ ಸ್ವಾಯತ್ತತೆ ಮತ್ತು ಒಂದು ಸ್ವತಂತ್ರ ವಿದೇಶಾಂಗ ಧೋರಣೆಯನ್ನು ಅನುಸರಿಸುವ ಸಾಮರ್ಥ್ಯವನ್ನು ತೀವ್ರವಾಗಿ ಸೀಮಿತಗೊಳಿಸುವಂತಹ ಒಂದು ಹಂತವನ್ನು ಭಾರತ-ಅಮೇರಿಕ ವ್ಯೂಹಾತ್ಮಕ ಸಂಬಂಧಗಳಲ್ಲಿ ತಲುಪಿಯಾಗಿದೆ. ಇತ್ತೀಚೆಗೆ, ಅಮೆರಿಕ ಇರಾನಿನ ಉನ್ನತ ಸೇನಾಧಿಕಾರಿ ಸುಲೆಮಾನ್‌ರ ಹತ್ಯೆ ಮಾಡಿದಾಗ ಭಾರತ ಅದನ್ನು ಖಂಡಿಸಲಿಲ್ಲ. ಈ ಮೊದಲು, ಇರಾನಿನಿಂದ ತೈಲ ಆಮದು ಮಾಡಿ ಕೊಳ್ಳಬಾರದು ಎಂದು ಆಗ್ರಹಿಸಿದಾಗ ಮೋದಿ ಸರಕಾರ ತಕ್ಷಣವೇ ಅದನ್ನು ಪಾಲಿಸಿತು.

ಇದರ ಬದಲು ಈಗ ಭಾರತ ಅಮೆರಿಕಾದಿಂದ ತೈಲ ಮತ್ತು ಅನಿಲವನ್ನು ಖರೀದಿಸುವ ಒತ್ತಡಕ್ಕೆ ಒಳಗಾಗಿದೆ, ಮೋದಿ ಸರಕಾರ ಇದನ್ನೇ ಒಂದು ಸಾಧನೆಯಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಸಂಪೂರ್ಣವಾಗಿ ಏಕಪಕ್ಷೀಯವಾದ ಶಾಂತಿಯ ಪ್ರಸ್ತಾವವನ್ನು ಭಾರತ ಟೀಕಿಸಲೂ ಇಲ್ಲ. ಈ ಪ್ರಸ್ತಾವದ ಪ್ರಕಾರ ಇಸ್ರೇಲ್ ಸುಮಾರಾಗಿ ಎಲ್ಲ ಆಕ್ರಮಿತ ಪ್ರದೇಶಗಳನ್ನು ಸ್ವಾಧೀನಕ್ಕೆ ಪಡೆಯಬಹುದು. ಆಘಾತಕಾರಿ ಸಂಗತಿಯೆಂದರೆ ವಿದೇಶಾಂಗ ವ್ಯವಹಾರಗಳ ಮಂತ್ರಾಲಯ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ಗೆ ಈ ಟ್ರಂಪ್ ಶಾಂತಿ ಪ್ರಸ್ತಾವವನ್ನು ಪರಿಶೀಲಿಸಬೇಕು ಎಂದು ಹೇಳಿದೆ.

ಭಾರತ ಈ ರೀತಿಯಲ್ಲಿ ಒಂದು ಗಿರಾಕಿ ಸ್ಥಾನಮಾನಕ್ಕೆ ಇಳಿಸಲ್ಪಟ್ಟಿದ್ದರೂ, ಈ ದಿಕ್ಕಿನಲ್ಲಿ ಮೋದಿ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಭಾರತಕ್ಕೆ ಒಂದು ಮಹಾಮುನ್ನಡೆ ಎಂದು ಆಳುವ ವಲಯಗಳು ಮತ್ತು ಕಾರ್ಪೊರೇಟ್ ಮಾಧ್ಯಮಗಳು ಹಾಡಿ ಹೊಗಳುತ್ತಿರುವುದು ಈಗಿನ ಕಾಲಾವಧಿಯ ಲಕ್ಷಣ. ಟ್ರಂಪ್‌ಗೆ ಅಡಿಯಾಳುತನದ ಮೋದಿ ನಿಲುವು ಭಾರತಕ್ಕೆ ಮಾಡಿರುವ ಅನಾಹುತ ಅಪಾರ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.

ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.

ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.

ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕನಗೊಂಡನಹಳ್ಳಿಯಲ್ಲಿ ಸ್ವಚ್ಛ ಸಂಕೀರ್ಣ, ಕೂಸಿನ ಮನೆ ಉದ್ಘಾಟನೆ: ಸುಸ್ಥಿರ ಗ್ರಾಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕಗಳನ್ನು ಗ್ರಾಮಸ್ಥರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಶುಕ್ರವಾರದಂದು ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಸಂಕೀರ್ಣ ಘಟಕ, ಕೂಸಿನ ಮನೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 39 ಕಸ ವಿಲೇವಾರಿ ಘಟಕಗಳ ಪೈಕಿ, ಕನಗೊಂಡನಹಳ್ಳಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. ಇದರ ನಿರ್ವಹಣೆಗಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರೇ ಘಟಕಗಳನ್ನು ನಿರ್ವಹಿಸಿದರೆ ಗ್ರಾಮದ ಆರ್ಥಿಕತೆಗೆ ಬಲ ಬರುತ್ತದೆ. ಇದರ ಜೊತೆಗೆ ಚರಂಡಿ ಸ್ವಚ್ಛತೆಯಲ್ಲೂ ಗ್ರಾಮಸ್ಥರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ತಕ್ಷಣವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇತರ ಉದ್ಘಾಟನೆಗಳು

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂಸದರು ಹೊಸಕೊಳೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ‘ಕೂಸಿನ ಮನೆ’ ಮತ್ತು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ತದನಂತರ ಹಳೆಕೊಳೇನಹಳ್ಳಿಯಲ್ಲಿ ಮೂರು ಹೊಸ ಶಾಲಾ ಕೊಠಡಿಗಳು ಹಾಗೂ ಅಡುಗೆ ಕೊಠಡಿಯನ್ನು ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠಲರಾವ್, ತಾಲ್ಲೂಕು ಪಂಚಾಯಿತಿ ಇಓ ರಾಮ್ ಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ

Published

on

ಸುದ್ದಿದಿನ,ದಾವಣಗೆರೆ:ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಜ.25 ರಂದು ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸುಗುಮವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪ್ರಾಂಶುಪಾಲರು, ಮೇಲ್ವಿಚಾರಕರು, ವೀಕ್ಷಕರೊಂದಿಗೆ ಚರ್ಚಿಸಲು ಆಯೋಜಿಸಿದ್ದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು .ಮತ್ತು ಪರೀಕ್ಷಾ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಎಲ್ಲಾ ಕೇಂದ್ರಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಪರೀಕ್ಷೆಗೆ 45 ನಿಮಿಷ ಮುಂಚಿತವಾಗಿ ಬಂದು ಪರೀಕ್ಷಾ ಕೊಠಡಿಯಲ್ಲಿ ವರದಿ ಸಿದ್ದಪಡಿಸಿಕೊಳ್ಳಬೇಕು. ಹಾಗೂ ಪರೀಕ್ಷೆ ನಡೆಯುವ ಕೊಠಡಿಯ ಒಳಗೆ ವಾಚ್, ಕ್ಯಾಲುಕಿಲೇಟರ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಬರುವಂತಿಲ್ಲ್ಲ. ಪರೀಕ್ಷೆ ಮುಗಿದ ನಂತರ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಡೇಟ್ ಮಾಡಿಸಬೇಕು. ಕೊಠಡಿಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಿಸಬೇಕು ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಳನಿವಿಲೋ ದೊರೆಸ್ವಾಮಿ ಮಾತನಾಡಿ, ಜ.25 ರಂದು ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯು ನಗರದ 18 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಕೇಂದ್ರಗಳಿಗೂ ಮೇಲ್ವಿಚಾರಕರು, ಮತ್ತು ವೀಕ್ಷಕರನ್ನು ನೇಮಿಸಲಾಗಿದೆ.
ಬೆಳಿಗ್ಗೆ 10.30 ರಿಂದ 12.30 ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ 4.30 ರವೆರೆಗೆ ಪತ್ರಿಕೆ-2 ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಎಲ್ಲ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರನ್ನೆ ಸಂಪರ್ಕಿಸಿ, ಪ್ರತಿ 24 ಅಭ್ಯರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕರಂತೆ ಅವಶ್ಯವಿರುವಷ್ಟು ಕೊಠಡಿ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮೂಲಕ ಪಡೆಯುವ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಿಗೆ ಜಾಮರ್ (Jamar) ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನೀಡಲಾಗಿದ್ದು, ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಪ್ರತಿ ಕೇಂದ್ರಕ್ಕೆ ಅಗತ್ಯವಿರುವಷ್ಟು ಹೋಮ್‍ಗಾರ್ಡ್‍ಗಳನ್ನು ನಿಯೋಜಿಸಬೇಕು. ತಪಾಸಣೆ ಮಾಡುವ ಸಿಬ್ಬಂದಿಗಳಿಗೆ ಸಹಾಯವಾಗುವಂತೆ ಪ್ರತಿ ಕೇಂದ್ರಕ್ಕೆ ಎರಡು ಹ್ಯಾಂಡ್ ಮೆಟಲ್ ಡಿಟೆಕ್ಟರ್‍ಗಳನ್ನು ಒದಗಿಸಲಾಗುವುದು.

ಕಾಲೇಜಿನ ಪ್ರಾಂಶುಪಾಲರನ್ನು ಆಯಾ ಕಾಲೇಜಿಗೆ ಮೇಲ್ವಿಚಾರಕರನ್ನಾಗಿ ನೇಮಿಸಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಪರೀಕ್ಷಾ ವೇಳಾಪಟ್ಟಿಯನ್ನು ಅಲ್ಲಲ್ಲಿ ಅಳವಡಿಸಿರಬೇಕು. ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಗಡಿಯಾರಗಳನ್ನು ಅಳವಡಿಸಬೇಕು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಯುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಮತ್ತು ಸಮೀಪವಿರುವ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರ ಸಹಾಯದಿಂದ ಮುಚ್ಚಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ 18 ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಹಾಗೂ ಪರೀಕ್ಷಾ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending