Connect with us

ದಿನದ ಸುದ್ದಿ

ಬೌದ್ಧಧರ್ಮ ಮತ್ತು ಅಂಬೇಡ್ಕರ್ ಯಾನ

Published

on

  • ರಘೋತ್ತಮ ಹೊ.ಬ

ಬೌದ್ಧ ಧರ್ಮದಲ್ಲಿ ಎರಡು ಪಂಥಗಳಿವೆ.

  1. ಹೀನಯಾನ
  2. ಮಹಾಯಾನ

ಬಾಬಾಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸಿದಾಗ ಅವರ ಪಂಥವನ್ನು ನವಯಾನ ಎಂದು ಕರೆದರು. ಹಾಗೆಯೇ ಮಹಾರಾಷ್ಟ್ರದ ಬೌದ್ಧರನ್ನು ನವಬೌದ್ಧರು ಅಥವಾ ಹೊಸಬೌದ್ಧರು ಎಂದು ಕರೆಯಲಾಗುತ್ತದೆ.

ಆದರೆ ಶೋಷಿತರು ಹಳೆಯ ಬೌದ್ಧರು. ಯಾಕೆಂದರೆ ಅಂಬೇಡ್ಕರರೇ ಒಂದೆಡೆ ಹೇಳಿದ್ದಾರೆ “ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು ನಾವು” ಎಂದು. ಈ ದಿಸೆಯಲ್ಲಿ ಸದ್ಯ “ಯಾನ” ಎಂದರೇನು? ಎಂಬುದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ.

“ಯಾನ” ಎಂದರೆ ಪಯಣ ಎಂದರ್ಥ. ಅಂದರೆ ಬೌದ್ಧ ಪಯಣ ಎಂದರ್ಥ. Its way of life ಎನ್ನಬಹುದು. ಹಾಗಿದ್ದರೆ ಬಾಬಾಸಾಹೇಬ್ ಅಂಬೇಡ್ಕರ್ ರು ಬೌದ್ಧ ಧರ್ಮ ಸ್ವೀಕರಿಸಿದಾಗ ಆಗ ಅಸ್ತಿತ್ವದಲ್ಲಿದ್ದ ಬೌದ್ಧ ಧರ್ಮವನ್ನು ಯಥಾವತ್ ಸ್ವೀಕರಿಸಿದರೆ? ಊಹ್ಞೂಂ.

ನಿಜ ಹೇಳಬೇಕೆಂದರೆ ಬುದ್ಧ ಅರಮನೆ ತೊರೆದು ಪರಿವ್ರಾಜಕನಾಗಲು ಸಂಬಂಧಿಸಿದ ಮೂಲ ಕತೆಯಾದ, ಪ್ರಸಿದ್ಧ ಕತೆಯಾದ ಆತ ರೋಗಿಯೊಬ್ಬನನ್ನು ನೋಡಿದ, ವೃದ್ಧನೊಬ್ಬನನ್ನು ನೋಡಿದ, ಸತ್ತ ಮನುಷ್ಯನೊಬ್ಬನನ್ನು ನೋಡಿದ ಎಂಬ ಆ very basic ಸಾಂಪ್ರದಾಯಿಕ ಕತೆಯನ್ನೇ ಅಂಬೇಡ್ಕರರು ನಿರಾಕರಿಸಿದರು.

ಇದಕ್ಕೆ ಅವರು ಕೊಡುವ ಕಾರಣ “ಪರಿವ್ರಾಜಕ(ಸನ್ಯಾಸ)ವನ್ನು ಬುದ್ಧ ಸ್ವೀಕರಿಸಿದ್ದು ಆತನ 29ನೇ ವಯಸ್ಸಿನಲ್ಲಿ. ಆ ಮೂರು ದೃಶ್ಯಗಳನ್ನು(ರೋಗಿ, ವೃದ್ಧ, ಸತ್ತ ಮನುಷ್ಯ) ನೋಡಿ ಆತ ಸನ್ಯಾಸ ಸ್ವೀಕರಿಸಿದನೆನ್ನುವುದಾದರೆ ಅದಕ್ಕೂ ಮೊದಲು ಅಂದರೆ ಆತನ 29ನೇ ವಯಸ್ಸಿಗೂ ಮೊದಲು ಆ ಮೂರು ದೃಶ್ಯಗಳನ್ನು ಅತ ನೋಡಿಯೇ ಇರಲಿಲ್ಲ ಎನ್ನುವುದು ಅದು ಹೇಗೆ ಸಾಧ್ಯ?” ಎಂದು (Buddha and his Dhamma, by Ambedkar. Introduction page).

ಮುಂದುವರೆದು ಅವರು “ಮುಪ್ಪು, ರೋಗ, ಸಾವು ಇವು ದಿನಾಲೂ ನೂರಾರು ಸಂಖ್ಯೆಯಲ್ಲಿ ಸಂಭವಿಸುವ ಘಟನೆಗಳಾಗಿದ್ದು ಬುದ್ಧ ಅವುಗಳನ್ನು ನೋಡಿಯೇ ನೋಡಿರುತ್ತಾನೆ. ಆದ್ದರಿಂದ ಇವುಗಳನ್ನೆಲ್ಲ ಮೊದಲು ನೋಡಿ ಆತ ಪರಿವ್ರಾಜಕನಾದ ಎಂಬ ಸಾಂಪ್ರದಾಯಿಕ ವಿವರಣೆಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ.

ಈ ನಿಟ್ಟಿನಲ್ಲಿ ಈ ವಿವರಣೆ ತೋರಿಕೆಯದ್ದಾಗಿದ್ದು, ಯಾರಾದರೂ ಪ್ರಶ್ನಿಸಿದಾಗ ಅವರಿಗೆ ಈ ವಿವರಣೆ ಅಕ್ಷರಶಃ ಒಪ್ಪಿಗೆಯಾಗುವಂಥದ್ದಲ್ಲ. ಹೀಗಿರುವಾಗ ಬುದ್ಧ ಅರಮನೆ ತೊರೆದು ಸನ್ಯಾಸ ಸ್ವೀಕರಿಸಲು ಇದು ಉತ್ತರ ಅಲ್ಲವಾದರೆ ನಿಜವಾದ ಉತ್ತರವಾದರು ಏನು?” ಎಂದು ಪ್ರಶ್ನಿಸುತ್ತಾರೆ. ಹಾಗೆಯೇ ಉತ್ತರವನ್ನು ಕಂಡುಕೊಳ್ಳುತ್ತಾರೆ.

ಒಟ್ಟಾರೆ ಅರ್ಥವಾಗುವುದು ಬುದ್ಧ ರೋಗಿಯೊಬ್ಬನನ್ನು, ವೃದ್ಧನೊಬ್ಬನನ್ನು, ಸತ್ತ ವ್ಯಕ್ತಿಯೊಬ್ಬನನ್ನು ನೋಡಿ ಅರಮನೆ ತೊರೆದ ಎಂಬ ಮೂಲ ಕತೆಯನ್ನೇ ಅಂಬೇಡ್ಕರ್ ರು ಒಪ್ಪಲಿಲ್ಲ. ಅದನ್ನು ಸಕಾರಣದ ಮೂಲಕ ಪ್ರಶ್ನಿಸಿ ಬೇರೆ ವಿವರಣೆ ಇರಬಹುದಾ ಎಂದು ಹುಡುಕಿದರು ಎಂಬುದು. ಇದಕ್ಕಾಗಿ ಅಂಬೇಡ್ಕರರು ಕಂಡುಕೊಂಡ ಉತ್ತರ, ಆ ಕಾಲದಲ್ಲಿ “ಶಾಕ್ಯರು ಮತ್ತು ಕೋಲೀಯ ಎಂಬ ರಾಜ್ಯಗಳ ನಡುವೆ ರೋಹಿಣಿ ನದಿ ನೀರಿನ ಹಂಚಿಕೆ ವಿಚಾರವಾಗಿ ಸಂಘರ್ಷ ನಡೆಯುತ್ತದೆ.

ಆ ಸಂಘರ್ಷದಲ್ಲಿ ಬುದ್ಧ ಪ್ರತಿನಿಧಿಸುವ ಶಾಕ್ಯನ್ನರ ಶಾಕ್ಯ ಸಂಘ ಕೋಲೀಯರ ಮೇಲೆ ಯುದ್ಧ ಸಾರುವ ಬಹುಮತದ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಸಂಘಧ ಸದಸ್ಯನಾದ ರಾಜಕುಮಾರ ಸಿದ್ಧಾರ್ಥ(ಬುದ್ಧ) ಹಿಂಸೆಯ ಅಂಶ ಮುದ್ದೊಡ್ಡಿ ಸಂಘ ಕೈಗೊಂಡ ಈ ಯುದ್ಧದ ತೀರ್ಮಾನವನ್ನು ವಿರೋಧಿಸುತ್ತಾನೆ.

ಪರಿಣಾಮ ಸಂಘದ ನಿಯಮ ಉಲ್ಲಂಘಿಸಿದ ರಾಜಕುಮಾರ ಸಿದ್ಧಾರ್ಥ ಶಾಕ್ಯ ಸಂಘದ ನಿಯಮದಂತೆ ಸಂಘದಿಂದ ಶಿಕ್ಷೆಗೊಳಗಾಗುವ ಎಚ್ಚರಿಕೆ ಎದುರಿಸಬೇಕಾಗುತ್ತದೆ. ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಕೂಡ. ಇದರಂತೆ ಸಿದ್ಧಾರ್ಥನಿಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.

  1. ಶಾಕ್ಯ ಸಂಘದ ನಿಯಮವನ್ನು ಕಡೆ ಗಳಿಗೆಯಲ್ಲಾದರೂ ಒಪ್ಪಿ ಕೋಲೀಯರ ವಿರುದ್ಧದ ಯುದ್ಧದಲ್ಲಿ ಭಾಗವಹಿಸುವುದು.
  2. ಶಿಕ್ಷೆ ಅನುಭವಿಸಲು ಒಪ್ಪಿ ನೇಣು ಅಥವಾ ದೇಶಭ್ರಷ್ಟನಾಗಿ ಗಡಿಪಾರು ಶಿಕ್ಷೆ ಅನುಭವಿಸುವುದು.
  3. ಆತನ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲು ಮತ್ತು ‌ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಂಘಕ್ಕೆ ಅನುಮತಿ ನೀಡುವುದು.

ಅಂದಹಾಗೆ ಶಾಂತಿ ಧೂತ ಬುದ್ಧ ಮೊದಲನೆಯ ತೀರ್ಮಾನ ಅಂದರೆ ಖಡಾಖಂಡಿತವಾಗಿ ಕೋಲೀಯರ ವಿರುದ್ಧ ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸುತ್ತಾನೆ. ಮೂರನೆಯ ತೀರ್ಮಾನ ಅಂದರೆ ತನ್ನ ಕುಟುಂಬದ ಸದಸ್ಯರಿಗೆ ತನ್ನಿಂದ ತೊಂದರೆಯಾಗುವುದನ್ನು ಆತ ಒಪ್ಪುವುದಿಲ್ಲ.

ಈ ನಿಟ್ಟಿನಲ್ಲಿ ತಪ್ಪು ತನ್ನದಾಗಿರುವುದರಿಂದ ಶಿಕ್ಷೆ ತನಗೆ ಮಾತ್ರ ಸಲ್ಲಬೇಕು ಎಂದು ನೇಣು ಶಿಕ್ಷೆಗೆ ಅಥವಾ ರಾಜ್ಯದಿಂದ ಗಡಿಪಾರು ಶಿಕ್ಷೆಗೆ ತನ್ನನ್ನು ಒಳಪಡಿಸಬಹುದು ಎಂದು ಆತ ಶಾಕ್ಯ ಸಂಘಕ್ಕೆ ಹೇಳುತ್ತಾನೆ. ಅದರಂತೆ ಶಾಕ್ಯಸಂಘ ರಾಜಕುಮಾರ ಸಿದ್ಧಾರ್ಥನಿಗೆ ಗಡಿಪಾರು ಶಿಕ್ಷೆ ವಿಧಿಸುತ್ತದೆ, ಸಿದ್ಧಾರ್ಥ ರಾಜ್ಯ ತೊರೆಯುತ್ತಾನೆ.

ಅಂಬೇಡ್ಕರ್ ರು ಕೊಡುವ ಈ ವಿವರಣೆಯಲ್ಲಿ ಖಂಡಿತ ಅವಾಸ್ತವಿಕವಾದ ಅಂಶ ಕಿಂಚಿತ್ತು ಇಲ್ಲ. ನಿಜ, ಇಲ್ಲಿ ರೋಚಕತೆ ಇಲ್ಲದಿರಬಹುದು ಆದರೆ ರಾಜ್ಯ ತೊರೆಯಲು ಪ್ರಮುಖ ಕಾರಣವಂತು ಇದೇ ಆಗುತ್ತದೆ ಮತ್ತು ಇದನ್ನು ಯಾರೂ ಕೂಡ ಪ್ರಶ್ನಿಸಲಾರರು. ಹಾಗಿದ್ದರೆ ಇದಕ್ಕೆ ಆಕರ ಗ್ರಂಥವಾಗಿ ಅಂಬೇಡ್ಕರ್ ರು ಯಾವ ಗ್ರಂಥ ಬಳಸುತ್ತಾರೆ? ಅದಕ್ಕೂ ಕೂಡ ಉತ್ತರ ಇದೆ.

ಅದೆಂದರೆ ಅಂಬೇಡ್ಕರ್ ರವರು ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿದಾಗ ಸನ್ಮಾನ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ತಾವೇ ಬರೆದ ಗೌತಮ ಬುದ್ಧರ ಜೀವನ ಚರಿತ್ರೆಯ ಪುಸ್ತಕವನ್ನು ಬಾಲಕ ಅಂಬೇಡ್ಕರ್ ಗೆ ಕೊಡುತ್ತಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತು.

ಮರಾಠಿಯಲ್ಲಿ ಬುದ್ಧನ ಆ ಜೀವನ ಚರಿತ್ರೆ ಬರೆದು(ಬರೆದ ವರ್ಷ 1898) ಬಾಲಕ ಅಂಬೇಡ್ಕರರಿಗೆ ಕೊಡುಗೆ ಇತ್ತವರು ಅಂದಿನ ಸಮಾಜ ಸುಧಾರಕರಾದ ಬಾಂಬೆಯ ವಿಲ್ಸನ್ ಹೈಸ್ಕೂಲ್ ನ ಮಾಜಿ ಪ್ರಾಂಶುಪಾಲರಾದ ಕೃಷ್ಣಾಜಿ ಅರ್ಜುನ್ ಕೆಲೂಸ್ಕರ್ ರವರು. ಈ ನಿಟ್ಟಿನಲ್ಲಿ ರೋಹಿಣಿ ನದಿಯ ನೀರಿನ ವಿಚಾರವಾಗಿ ಸಿದ್ಧಾರ್ಥನು ರಾಜ್ಯ ತೊರೆದ ಪ್ರಸಂಗವನ್ನು ಅಂಬೇಡ್ಕರರು ತಾವು ಪಡೆದದ್ದು ಕೆಲೂಸ್ಕರ್ ರ ಆ ಕೃತಿಯಲ್ಲೇ!

ನಾಲ್ಕು ಆರ್ಯ ಸತ್ಯಗಳನ್ನು ಒಪ್ಪದ ಅಂಬೇಡ್ಕರರು: ಬೌದ್ಧ ಧರ್ಮದಲ್ಲಿ ನಾಲ್ಕು ಆರ್ಯ ಸತ್ಯಗಳು ಎಂಬ ಪ್ರಮುಖ ಅಂಶ ಬರುತ್ತದೆ. ಸಾಮಾನ್ಯವಾಗಿ ಮಹಾಬೋಧಿ ಸೊಸೈಟಿ ಪ್ರಕಟಿಸುವ ಕೃತಿಗಳನ್ನು ಓದಿದ ಬೌದ್ಧರಿಗೆ ಅವು ಯಾವುವು ಎಂದು ತಿಳಿದಿರುತ್ತವೆ.

ಅವುಗಳೆಂದರೆ

  • ದುಃಖ ಸತ್ಯ
  • ದುಃಖಕ್ಕೆ ಮೂಲ ಇದೆ ಎಂಬ ಸತ್ಯ
  • ದುಃಖವನ್ನು ಕೊನೆಗಾಣಿಸಬಹುದು ಎಂಬ ಸತ್ಯ
  • ಆ ದುಃಖವನ್ನು ಕೊನೆಗಾಣಿಸುವ ಮಾರ್ಗ ಯಾವುದೆಂಬ ಸತ್ಯ.

ಆಶ್ಚರ್ಯವೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ರವರು ಈ ನಾಲ್ಕು ಆರ್ಯ ಸತ್ಯಗಳನ್ನು ಒಪ್ಪುವುದಿಲ್ಲ. ಅವರು ಹೇಳುವುದು “ಈ ಆರ್ಯ ಸತ್ಯಗಳ ಸೂತ್ರ ಬೌದ್ಧ ಧರ್ಮದ ಮೂಲ ಬೇರನ್ನೇ ಕತ್ತರಿಸುತ್ತದೆ” ಎಂದು. ಏಕೆಂದರೆ ಅವರು ಹೇಳುವುದು “ಆರ್ಯ ಸತ್ಯಗಳ ಪ್ರಕಾರ ಈ ಜೀವನ ದುಃಖ, ಸಾವು ಕೂಡ ದುಃಖ, ಪುನರ್ಜನ್ಮ ಕೂಡ ದುಃಖ, ಆದ್ದರಿಂದ ಪ್ರತಿಯೊಂದಕ್ಕೂ ಕೊನೆ ಎಂಬುದಿದೆ ಎಂದಾದರೆ ತತ್ವಜ್ಞಾನವಿರಲಿ ಅಥವಾ ಧರ್ಮವಿರಲಿ ಯಾವುದೂ ಕೂಡ ಈ ಪ್ರಪಂಚದಲ್ಲಿ ಮನುಷ್ಯ ಸಂತಸದಿಂದಿರಲು ಸಹಾಯ ಮಾಡುವುದಿಲ್ಲ.

ಏಕೆಂದರೆ ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುವುದಾದರೆ ಜೀವನದಲ್ಲಿ ಸಹಜವಾಗಿ ಅಂತರ್ಗತವಾಗಿರುವ ಆ ದುಃಖದಿಂದ ಮನುಷ್ಯನನ್ನು ತಪ್ಪಿಸಲು ಬುದ್ಧನಾದರೂ ಏನು ಮಾಡಲು ಸಾಧ್ಯ? ಧರ್ಮವಾದರೂ ಏನು ಮಾಡಲು ಸಾಧ್ಯ? ಆದ್ದರಿಂದ ನಾಲ್ಕು ಆರ್ಯ ಸತ್ಯಗಳು ಮನುಷ್ಯನಿಗೆ ಭರವಸೆಯನ್ನು ನಿರಾಕರಿಸುತ್ತವೆ. ಈ ನಿಟ್ಟಿನಲ್ಲಿ ಆ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಗಳನ್ನು ನಿರಾಶವಾದದ ಬೋಧನೆಗಳನ್ನಾಗಿ ಮಾಡುತ್ತವೆ” ಎನ್ನುತ್ತಾರೆ.

ಅದರಲ್ಲೂ ಅವರು ಹೇಳುವುದು “ಬೌದ್ಧರಲ್ಲದವರಿಗೆ ಬೌದ್ಧ ಧರ್ಮದ ಬೋಧನೆಗಳನ್ನು ಒಪ್ಪಲು ಈ ನಾಲ್ಕು ಆರ್ಯಸತ್ಯಗಳು ಬಹುದೊಡ್ಡ ತಡೆಯಾಗಿವೆ” ಎಂದು. ಈ ಹಿನ್ನೆಲೆಯಲ್ಲಿ ಅವರು ಅನುಮಾನ ವ್ಯಕ್ತಪಡಿಸುವುದು ಇವು ಈ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಯ ಮೂಲ ತಿರುಳಾಗಿತ್ತೇ ಅಥವಾ ಇವು ಭಿಕ್ಕುಗಳು ನಂತರ ಸೇರಿಸಿದ ಅಂಶಗಳಾಗಿರಬಹುದೇ ಎಂದು.

ಮುಂದುವರಿದು ಅಂಬೇಡ್ಕರರು “ಭಿಕ್ಕುಗಳನ್ನು ಬುದ್ಧ ಸೃಷ್ಟಿಸಿದ್ದೇತಕೆ?” ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಅದಕ್ಕೆ ಅವರು ಹೇಳುವುದು “ಬುದ್ಧ, ಭಿಕ್ಕು ಗಣವನ್ನು ಅವರು ಪರಿಪೂರ್ಣ ಮನುಷ್ಯರಾಗಲಿ ಎಂದು ಸೃಷ್ಟಿಸಿದನೇ ಅಥವಾ ಸಮಾಜ ಸೇವಕರಾಗಿ ಜನತೆಗೆ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ, ತತ್ವಜ್ಞಾನಿಗಳಾಗಿ ಜನರಿಗಾಗಿ ತಮ್ಮ ಜೀವನ ಮುಡಿಪಿಡಲಿ ಎಂದು ಸೃಷ್ಟಿಸಿದನೇ? ಈ ದಿಸೆಯಲ್ಲಿ ಭಿಕ್ಕು ಪರಿಪೂರ್ಣ ಮನುಷ್ಯನಾದರೆ ಧಮ್ಮದ ಬೆಳವಣಿಗೆಯ ಹಿನ್ನೆಲೆಯಲ್ಲಿ ಆತ ಉಪಯೋಗಕ್ಕೆ ಬರುವುದಿಲ್ಲ.

ಏಕೆಂದರೆ ಮನುಷ್ಯ ಪರಿಪೂರ್ಣನಾದರೂ ಆತ ಸ್ವಾರ್ಥಿಯಾಗಿರುತ್ತಾನೆ. ಆದರೆ ಭಿಕ್ಕು ಸಮಾಜ ಸೇವಕನಾದರೆ ಖಂಡಿತ ಬೌದ್ಧ ಧರ್ಮಕ್ಕೆ ಆತ ಬಹು ದೊಡ್ಡ ಭರವಸೆಯಾಗುತ್ತಾನೆ” ಎನ್ನುತ್ತಾರೆ.(ಆಧಾರ: Buddha and His Dhamma, Ambedkar writings and speeches, Vol.11, introduction part).

ಖಂಡಿತ, ಬುದ್ಧ ಪರಿವ್ರಾಜಕ(ಸನ್ಯಾಸ) ಸ್ವೀಕರಿಸಲು ಬಾಬಾಸಾಹೇಬ್ ಅಂಬೇಡ್ಕರ್ ರವರು ಹೇಳುವ ಈ ಕತೆ, ನಾಲ್ಕು ಆರ್ಯ ಸತ್ಯಗಳನ್ನು ಅವರು ಒಪ್ಪದಿರುವುದು, ಹಾಗೆ ಭಿಕ್ಕುಗಳನ್ನು ಸಮಾಜ ಸೇವಕರು ಎನ್ನುವ ಅವರ ವ್ಯಾಖ್ಯೆ ಅಕ್ಷರಶಃ ಬೌದ್ಧ ಧರ್ಮಕ್ಕೆ ಹೊಸ ರೂಪ ಕೊಡುತ್ತದೆ.

ಈ ನಿಟ್ಟಿನಲ್ಲಿ ಆ ರೂಪವನ್ನು ನಾವು ನಿಸ್ಸಂಶಯವಾಗಿ ಅಂಬೇಡ್ಕರ್ ಹಾದಿ ಎನ್ನಬಹುದು, ಹೀನಯಾನ ಮತ್ತು ಮಹಾಯಾನದಂತೆ “ಅಂಬೇಡ್ಕರ್ ಯಾನ” ಎನ್ನಬಹುದು. ಬುದ್ಧನ ಹಾದಿಯಲ್ಲಿಂದು ಕೋಟ್ಯಂತರ ಜನರು ಸಾಗುತ್ತಿದ್ದಾರೆ. ಅದರಲ್ಲೂ ಶೋಷಿತ ಸಮುದಾಯಗಳ ಬಂಧುಗಳು ಬುದ್ಧನೆಡೆ ದಿಟ್ಟಹೆಜ್ಜೆ ಇಟ್ಟಿದ್ದಾರೆ. ಖಂಡಿತ, ಅಂತಹವರೆಲ್ಲರಿಗೆ ಅಂಬೇಡ್ಕರ್ ಯಾನ ಹೊಸ ಮಾರ್ಗ ಆಗಲಿದೆ ಹೊಸ ಬೆಳಕು ಆಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

ದಿನದ ಸುದ್ದಿ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

Published

on

ಕರ್ನಾಟಕದ ವೈಟ್‌ಫೀಲ್ಡ್-ಬಂಗಾರಪೇಟೆ, ಹೊಸೂರು-ಓಮಲೂರು ಮಾರ್ಗ ಸೇರಿ 9 ರಾಜ್ಯಗಳ 1200 ಕಿ.ಮೀ ರೈಲು ಜಾಲ ವಿಸ್ತರಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.

http://Visit : www.suddidina.com

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.

ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.

3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.

4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.

ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.

ಕರ್ನಾಟಕಕ್ಕೆ ಏನು ಲಾಭ?

ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.

ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.

ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Continue Reading

ದಿನದ ಸುದ್ದಿ

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

Published

on

ಸೆ.10 ರಂದು ವಿಧಾನಸೌಧದಲ್ಲಿ ಶತದಿನೋತ್ಸವ ಸಮಾರಂಭ; ಮಾಜಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ, ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 

ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:

ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

http://Visit : www.suddidina.com

ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ

ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.

100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Continue Reading

Trending