ಲೈಫ್ ಸ್ಟೈಲ್
ಮಕ್ಕಳು ‘ಸ್ಮಾರ್ಟ್ ಪೋನ್’ ಬಳಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ..?
- ಸಂಧ್ಯಾ ಸಿಹಿಮೊಗೆ
ಈ ಮಾಯಾಜಗತ್ತು ಎಷ್ಟೊಂದು ಸುಂದರ…! ಕುಳಿತ ಜಾಗದಲ್ಲೇ ನಮ್ಮನ್ನು ಕುಳಿತುಕೊಳ್ಳುವಂತೆ ಮಾಡುವ, ದೂರ ಸರಿದರೂ ಮತ್ತೆಮತ್ತೆ ತನ್ನ ಬಳಿಯೆ ಉಳಿಯುವಂತೆ ಮಾಡುವ, ದಿನ ಪೂರ್ತಿ ಊಟ, ನಿದ್ದೆ, ಸ್ನಾನ ಹೀಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಸುಮ್ಮನೆ ಒಂದೆಡೆ ಮೂಲೆಗೊರಗಿ ಕುಳಿತುಕೊಳ್ಳುವಂತೆ ಮಾಡುವ ಮಾಂತ್ರಿಕ ಶಕ್ತಿ ಹೊಂದಿರುವ ಮಾಯೆ ಈ ಮೊಬೈಲು.
ಇಂದಿನ ವೈಜ್ಞಾನಿಕ ಯುಗದಲ್ಲಿ ಮೊಬೈಲ್, ಸ್ಮಾರ್ಟ್‍ಪೋನ್, ಐಪ್ಯಾಡ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‍ನಂತಹ ವಿನೂತನ ಅತ್ಯಾಧುನಿಕ ವಿದ್ಯುನ್ಮಾನ ಸಾಧನಗಳು ಕೈಲಿದ್ದರೆ ಸಾಕು ಇಡೀ ಜಗತ್ತೇ ನಮ್ಮ ಅಂಗೈಯಲ್ಲಿ. ನಮಗೆ ಅಗತ್ಯವಿರುವ ಎಲ್ಲಾ ಬಗೆಯ ವಿಷಯ, ಜ್ಞಾನ, ಮಾಹಿತಿ, ಸಂಗೀತ, ಮನೋರಂಜನೆ, ಸುದ್ದಿ, ಕ್ರೀಡೆ, ಸಂಪರ್ಕ, ಸಂದೇಶಗಳಂತಹ ತರಹೇವಾರಿ ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಮಾನಸಿಕ ನೆಮ್ಮದಿ ನೀಡಿ ಮನಸ್ಸನ್ನು ಪುಳಕಗೊಳಿಸಬಲ್ಲ ಸಂಗತಿಗಳನ್ನು ನಾವು ಈ ಮೊಬೈಲ್ ತಂತ್ರಜ್ಞಾನದಿಂದ ಪಡೆಯಬಹುದಾಗಿದೆ.
ಮೊಬೈಲ್ ಅಥವಾ ಸ್ಮಾಟ್‍ಫೋನ್‍ನಿಂದ ಅವಶ್ಯಕ ಮಾಹಿತಿ, ಗೇಮ್, ಕಾರ್ಟೂನ್ ಮತ್ತು ಇನ್ನಿತರ ಮನಸ್ಸಿಗೆ ಮುದನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ಬೌದ್ಧಿಕ ವಿಕಾಸ ಹಾಗೂ ಕಲಿತ ವಿದ್ಯೆಯನ್ನು ಒರೆಗೆ ಹಚ್ಚುವಲ್ಲಿಯೂ ಇದು ಸಹಾಯಕವಾಗಿದೆ.
ನಾವು ಸ್ಮಾರ್ಟ್‍ಫೋನ್‍ನಂತೆ ಸ್ಮಾರ್ಟ್ ಕೂಡ ಆಗಬಹುದೆಂಬುದೇನೋ ನಿಜ. ಆದರೆ, ಮೊಬೈಲ್ ಮತ್ತು ಸ್ಮಾರ್ಟ್‍ಫೋನ್‍ಗಳನ್ನು ಮಕ್ಕಳು ಬಳಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ ?.. ಅವುಗಳಿಂದ ಆಗಬಹುದಾದ ದುಷ್ಟರಿಣಾಮಗಳ ಅರಿವಿಲ್ಲದೆ ಮೌನವಾಗಿರುವುದು ಅಪಾಯದ ಮುನ್ಸೂಚನೆಯೇ ಅಲ್ಲವೇ?.
ಇಂದಿನ ನಮ್ಮ ಬದುಕು ಮೊಬೈಲ್‍ಮಯವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಚಂದಮಾಮ ತೋರಿಸಿ, ಲಾಲಿ ಹಾಡಿ ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಇಲ್ಲದೆ ಊಟ ಮಾಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಎಂಬ ಮಾಯೆ ತನ್ನ ಪ್ರಭಾವ ಬೀರಿರುವುದು ಅತ್ಯಂತ ಕಳವಳಕಾರಿ ಸಂಗತಿ.
ನಿರಂತರವಾಗಿ ಮೊಬೈಲ್ ಬಳಸುವುದರಿಂದ ಮಕ್ಕಳು ಭವಿಷ್ಯದಲ್ಲಿ ಎದುರಿಸಬಹುದಾದ ಸಮಸ್ಯೆಗಳ ಕುರಿತು ಪೋಷಕರು ಕಿಂಚಿತ್ತು ಗಮನಹರಿಸಿದರೆ ಒಳಿತು. ಪಬ್‍ಜಿ ಗೇಮ್, ಟಿಕ್‍ಟಾಕ್, ಸಾಮಾಜಿಕ ಜಾಲತಾಣ, ಆತಂಕಕಾರಿ ಸಾಪ್ಟವೇರ್‍ಗಳು ಹಾಗೂ ಅಶ್ಲೀಲ ಸಂಗತಿಗಳು ಮಕ್ಕಳ ಕೋಮಲವಾದ ಮನಸ್ಸನ್ನು ಕೆರಳಿಸಿ, ಪ್ರಚೋದಿಸಿ ಅವರ ಗಮನ ಕೇಂದ್ರೀಕರಿಸಿಕೊಂಡು ಕೊನೆಗೆ ಜೀವಹಾನಿಯಂತಹ ಘಟನೆಗಳು ಸಂಭವಿಸುತ್ತಿರುವುದು, ವೈಚಾರಿಕ ನೆಲೆಯಿಂದ ವಿಮುಖರಾಗಿ ಕ್ರೌರ್ಯಗಳಿಗೆ, ದುಷ್ಕøತ್ಯಗಳಿಗೆ ಕಾರಣವಾಗುತ್ತಿರುವುದು ಮೊಬೈಲ್ ಬಳಸುವ ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಅತಿಯಾದ ಸ್ಮಾಟ್‍ಫೋನ್ ಬಳಕೆಯಿಂದ ಮಕ್ಕಳ ಆರೋಗ್ಯದ ಜೊತೆಗೆ ಕಲಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಫಲಿತಾಂಶ ಕುಂಠಿತವಾಗುವ ಆತಂಕವಿದೆ. ಪ್ರೀತಿ, ವಾತ್ಸಲ್ಯ, ಮಮತೆ, ಜೀವನ, ಸಂಬಂಧಗಳ ಮೌಲ್ಯ ಹಾಗೂ ಸಂಸ್ಕøತಿಗಳ ಪರಿವೆಯೇ ಇಲ್ಲದೇ ಬದುಕುವ ಪರಿಸ್ಥಿತಿ ತಂದೊಡ್ಡಿದೆ.
ದೊಡ್ಡವರು ಮಕ್ಕಳ ಮುಂದೆ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ, ಮಕ್ಕಳ ಬದುಕಿಗೆ ಮಾದರಿಯಾಗಬೇಕು. ನಮ್ಮ ಮಕ್ಕಳ ಭವಿಷ್ಯವನ್ನು ನಾವು ಮಾತ್ರವೇ ಬದಲಾಯಿಸಬಹುದು ಎಂಬುದನ್ನು ಅರಿತು ಜಾಗೃತರಾಗಬೇಕು.ಮಕ್ಕಳನ್ನು ಮೊಬೈಲ್‍ನಿಂದ ದೂರವಿರಿಸುವುದು ಇಂದು ಕಷ್ಟದ ಕೆಲಸ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು ಎಂದು ಅಧ್ಯಯನಗಳು ತಿಳಿಸಿದೆ.
ಹದಿಹರೆಯದ ಮತ್ತು ಯೌವ್ವನಾವಸ್ಥೆಯಲ್ಲಿರುವವರ ಆಲೋಚನಾ ಶಕ್ತಿ ಕುಗ್ಗಲು ಹಾಗೂ ಕ್ಷೀಣಿಸಲು ಮೊಬೈಲ್‍ನಿಂದಾಗುವ ದುಷ್ಟರಿಣಾಮಗಳು ಕಾರಣವಾಗಿದೆ. ಪಬ್‍ಜಿ ಗೇಮ್‍ನಂತಹ ಅವೇಶಭರಿತ ಆಟಗಳ ನಿಯಂತ್ರಣಕ್ಕೊಳಪಟ್ಟು ಕೊನೆಗೆ ಆಟದಲ್ಲಿ ಸೋತ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದ ಮಕ್ಕಳ ಕಣ್ಣು, ಮೆದುಳು ಮತ್ತು ವಿವಿಧ ಶಾರೀರಿಕ ಬೆಳವಣಿಗೆಯ ಮೇಲೆ ಆರೋಗ್ಯದ ಅಡ್ಡ ಪರಿಣಾಮಗಳು ಆಗುತ್ತಿವೆ. ನಿರಂತರ ಮೊಬೈಲ್ ಬಳಕೆಯಿಂದ ರಕ್ತದೊತ್ತಡ ಮತ್ತು ನರರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಇರುವುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.
ನಿದ್ದೆ ಮಾಡೋಲ್ಲ ಮತ್ತು ಹೇಳಿದ ಮಾತು ಕೇಳೊಲ್ಲ ಎಂದರೆ ನಾವು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಗೊಂಬೆಗಳ ಕಾರ್ಯಕ್ರಮ ಮತ್ತು ಗೇಮ್ ಆಡುವುದಕ್ಕೆ ಹೇಳಿ ಸುಮ್ಮನಾಗಿಸುತ್ತೇವೆ. ತಾಂತ್ರಿಕತೆ ಮತ್ತು ತಂತ್ರಜ್ಞಾನ ಯುಗದತ್ತ ಮುಖ ಮಾಡುತ್ತಿರುವ ನಾವು ನಮ್ಮ ಕಾರ್ಯಬಾಹುಳ್ಯದ ಒತ್ತಡದಿಂದಾಗಿ ಮಕ್ಕಳ ಕಡೆಗೆ ಗಮನ ಕೂಡಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಬಳಕೆಯಿಂದ ಹಲವಾರು ತೊಂದರೆಗಳು ಎದುರಾಗುತ್ತಿವೆ. ಹೀಗಾಗಿ ಮಕ್ಕಳ ಮನಸ್ಸು ಮತ್ತು ಆರೋಗ್ಯದ ಮೇಲೆ ಭೀಕರವಾದ ಪರಿಣಾಮ ಪರಿಣಾಮ ಬೀರುತ್ತಿವೆ.
ಮೊಬೈಲ್ ಫೋನ್‍ಗಳು ಮತ್ತು ಅವುಗಳ ಟವರ್‍ಗಳು ಹೊರಸೂಸುವ ತರಂಗಗಳು ಮಹಿಳೆಯರಲ್ಲಿ ಫಲವತ್ತತೆಯ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಎಂದು ವಿಶ್ವ ಆರೋಗ್ಯ ಸಂಸ್ಥೆ(WHO)ಯ ಅಧ್ಯಯನವೊಂದು ತಿಳಿಸಿದೆ. ಮೊಬೈಲ್ ಫೋನ್‍ಗಳ ನಿರಂತರ ಬಳಕೆಯು ಸದಾ ಪ್ರಶ್ನೆಯಲ್ಲಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕುಸಿತ ಮತ್ತು ಮಹಿಳೆಯರಲ್ಲಿ ಫಲವತ್ತತೆ ಕಂಠಿತ ಸೇರಿದಂತೆ ಮೊಬೈಲ್ ವಿಕಿರಣದ ದುಷ್ಪರಿಣಾಮಗಳನ್ನು ಹಲವಾರು ಅಧ್ಯಯನಗಳು ಮತ್ತು ಸಂಶೋಧನೆಗಳು ಬಹಿರಂಗಗೊಳಿಸಿವೆ. ಅಷ್ಟೇ ಅಲ್ಲ, ಮೊಬೈಲ್ ವಿಕಿರಣವು ಮೆದುಳು ಟ್ಯೂಮರ್‍ಗಳನ್ನೂ ಉಂಟುಮಾಡುತ್ತದೆ ಎಂಬುದನ್ನು ಖಚಿತಪಡಿಸಿದೆ.
ಸ್ಮಾರ್ಟ್‍ಫೋನ್‍ಗಳ ನಿರಂತರ ಬಳಕೆ ನಮ್ಮ ಪ್ರತಿದಿನ ಬದುಕಿನ ಭಾಗವಾಗಿಬಿಟ್ಟಿದೆ. ಆದರೆ ಮನಸ್ಸು ಮತ್ತು ಶರೀರದ ಮೇಲೆ ಅದರ ದುಷ್ಟಪರಿಣಾಮಗಳ ಬಗ್ಗೆಯೂ ಮೊಬೈಲ್ ಬಳಕೆದಾರರು ತಿಳಿದಿರಬೇಕು.ಮೊಬೈಲ್ ಫೋನ್‍ಗಳು ಹೊರಸೂಸುವ ವಿಕಿರಣಗಳು ಕ್ಯಾನ್ಸರ್‍ನಂತಹ ಮಾರಣಾಂತಿಕ ಕಾಯಿಲೆಯನ್ನುಂಟು ಮಾಡುವ ಅಪಾಯವಿದೆ ಎನ್ನುವುದನ್ನು WHO ಸಂಶೋಧನೆಯು ಬಹಿರಂಗಗೊಳಿಸಿದೆ. ಸೆಲ್ ಫೋನ್‍ಗಳನ್ನು ಬಳಸಿದ್ದ ಹಲವಾರು ಯುವಜನರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಹಂಗೇರಿಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಮೊಬೈಲ್ ಟವರ್‍ನ 400 ಮೀಟರ್‍ಗಳ ಪ್ರದೇಶದಲ್ಲಿರುವವರಲ್ಲಿ ಕ್ಯಾನ್ಸರ್ ಅಪಾಯದ ಸಂಭವನೀಯತೆ ಮೂರು ಪಟ್ಟು ಹೆಚ್ಚಾಗಿರುವುದನ್ನು ಜರ್ಮನಿಯಲ್ಲಿ ನಡೆಸಲಾದ ಸಂಶೋಧನೆಯೊಂದು ತೋರಿಸಿದೆ. ಈ 400 ಮೀ. ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್‍ಗಳ ಪ್ರಸರಣವು ಇತರ ಕಡೆಗಳಿಂದ 100 ಪಟ್ಟು ಹೆಚ್ಚಾಗಿರುತ್ತದೆ. ಮೊಬೈಲ್ ಫೋನ್ ಟವರ್‍ಗಳಿಂದ ಹೊರಹೊಮ್ಮುವ ವಿಕಿರಣದಿಂದಾಗಿ ಜೇನುನೊಣಗಳ ಸಂಖ್ಯೆ ಶೇ.60ರಷ್ಟು ಕುಸಿದಿದೆ ಎಂದು ಕೇರಳದಲ್ಲಿ ನಡೆಸಲಾದ ಸಂಶೋಧನೆಯೊಂದು ತಿಳಿಸಿದೆ.
ಸೆಲ್ ಫೋನ್ ಟವರ್‍ಗಳ ಸಮೀಪದಲ್ಲಿ ಕಾಗೆಗಳು ಇಡುವಂತಹ ಮೊಟ್ಟೆಗಳು 30ದಿನಗಳ ಬಳಿಕವೂ ಮರಿಗಳಾಗಿಲ್ಲ. ಸಾಮಾನ್ಯವಾಗಿ 10ರಿಂದ 14 ದಿನಗಳಲ್ಲಿ ಮೊಟ್ಟೆಗಳು ಒಡೆದು ಮರಿಗಳು ಹೊರಗೆ ಬರುತ್ತವೆ ಎನ್ನುವುದನ್ನೂ ಅಧ್ಯಯನಗಳು ಸೂಚಿಸಿವೆ. ಪೋನ್ ವಿಕಿರಣಗಳು ಆರೋಗ್ಯಕ್ಕೆ ಯಾವ ರೀತಿಯ ಅಪಾಯಗಳನ್ನು ಉಂಟುಮಾಡಬಹುದೆಂದು ತಿಳಿದರೆ ಅಚ್ಚರಿವುಂಟಾಗದಿರದು. ಮೊಬೈಲ್ ಫೋನ್ ವಿಕಿರಣವು ತಲೆನೋವು, ತಲೆಯೊಳಗೆ ಜುಮ್ಮೆನಿಸುವಿಕೆ, ನಿರಂತರ ಬಳಲಿಕೆ, ತಲೆ ಸುತ್ತುವಿಕೆ, ಖಿನ್ನತೆ, ನಿದ್ರಾಹೀನತೆ, ಮಂಪರು ನಿದ್ರೆ, ಕಣ್ಣಿನ ತೊಂದರೆ, ಏಕಾಗ್ರತೆ ನಷ್ಟ, ಕಿವಿಗಳಲ್ಲಿ ಗಂಟೆ ಬಾರಿಸಿದ ಅನುಭವ, ಶ್ರವಣ ಶಕ್ತಿ ಮತ್ತು ಜ್ಞಾಪಕ ಶಕ್ತಿ ನಷ್ಟ, ಅಜೀರ್ಣ ಸಮಸ್ಯೆ, ಅನಿಯಮಿತ ಹೃದಯಬಡಿತ ಇತ್ಯಾದಿ ನೋವುಗಳಿಗೆ ಕಾರಣವಾಗುತ್ತದೆ.
ಮೊಬೈಲ್ ವಿಕಿರಣವು ಫಲವತ್ತತೆ ನಷ್ಟ, ಕ್ಯಾನ್ಸರ್, ಮೆದುಳು ಟ್ಯೂಮರ್ ಮತ್ತು ಗರ್ಭಪಾತಕ್ಕೂ ಕಾರಣವಾಗುತ್ತವೆ ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ.
ನಮ್ಮ ಶರೀರದಲ್ಲಿ ಶೇ.70ರಷ್ಟು ಭಾಗ ನೀರಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ನಮ್ಮ ಮೆದುಳಿನ ಶೇ.90ರಷ್ಟು ಭಾಗವೂ ನೀರೇ ಆಗಿದೆ. ಈ ನೀರು ಕ್ರಮೇಣ ವಿಕಿರಣವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಸದಾಕಾಲ ಮೊಬೈಲ್ ಫೋನ್ ಬಳಸುವವರು ಕ್ಯಾನ್ಸರ್‍ಗೆ ಗುರಿಯಾಗುವ ಸಾಧ್ಯತೆಗಳಿರುತ್ತವೆ ಎಂದು WHO ವರದಿ ತಿಳಿಸಿದೆ.
1,000 ರಿಂದ 3,000 ಮೆಘಾ ಹರ್ಟ್ಸ್ ಸಾಮಥ್ರ್ಯದವರೆಗಿನ ವಿದ್ಯುತ್‍ಕಾಂತೀಯ ಅಲೆಗಳು ಮೈಕ್ರೊವೇವ್ ವಿಕಿರಣವನ್ನುಂಟು ಮಾಡುತ್ತದೆ. ಮೈಕ್ರೊವೇವ್ ಓವನ್, ಏರ್ ಕಂಡೀಷನರ್, ನಿಸ್ತಂತು ಕಂಪ್ಯೂಟರ್, ಕಾರ್ಡ್‍ಲೆಸ್ ಫೋನ್ ಮತ್ತು ಇತರ ವೈರ್‍ಲೆಸ್ ಸಾಧನಗಳೂ ವಿಕಿರಣಗಳನ್ನು ಸೂಸುತ್ತವೆ. ಆದರೆ ಹೆಚ್ಚುತ್ತಿರುವ ಸ್ಮಾರ್ಟ್‍ಫೋನ್ ಮತ್ತು ಮೊಬೈಲ್ ಬಳಕೆಯಿಂದ ಅದರ ಸಾಮೀಪ್ಯದಿಂದಾಗಿ ಮೊಬೈಲ್ ವಿಕಿರಣವು ಶರೀರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.
ಆಧುನಿಕತೆ ಮುಂದುವರೆದಂತೆ ನಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ಸಂಕೀರ್ಣವಾಗಿ ನಾಟಕೀಯತೆ, ಕೃತಕತೆ, ಸಮಯ ಸಾಧಕತನ, ಸ್ವಾರ್ಥಪರತೆ ಇತ್ಯಾದಿಗಳ ವಿಜೃಂಭಣೆಯನ್ನು ಈಗ ಎಲ್ಲೆಲ್ಲೂ ಕಾಣಬಹುದಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳು ಸೇರಿಕೊಂಡು ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸಲಾರಂಭಿಸಿವೆ ಎಂದರೆ ತಪ್ಪಾಗಲಾರದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243




