ಅಂತರಂಗ
‘ಕಾಳು ಕಡಿ ಮಾರುವವ’ ಕೊರೋನಾ ತರಲಿಲ್ಲ ; ಅವನನ್ನು ಎಚ್ಚರಿಸೋಣ ಆದರೆ, ಹೊಣೆಗಾರನಾಗಿಸುವುದು ಬೇಡ
- ಶಿವಕುಮಾರ್ ಮಾವಲಿ
ನಾವೆಲ್ಲರೂ ಮನೆಗಳಲ್ಲಿರುವುದೇ ಈಗ ದಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ಪಾಲಿಸಲೇಬೇಕಂಬುದೂ ಸತ್ಯ.
ಆದರೆ …
ಈ ಸಂದರ್ಭದಲ್ಲಿ ಎಲ್ಲದಕ್ಕೂ ಕೇವಲ ಜನರನ್ನೇ ಹೊಣೆ ಮಾಡಲು ಸರ್ಕಾರ ಮತ್ತು ಮಾಧ್ಯಮಗಳು ತುದಿಗಾಲಲ್ಲಿದ್ದಂತಿದೆ. ಪೋಲೀಸರು ಹೊಡೆಯುತ್ತಿರುವ ಚಿತ್ರಗಳನ್ನು ನೋಡಿದಾಗ ಈ ತರಕಾರಿ ಮಾರುವವರು, ಹೂವು ಮಾರುವವರೇ ಕೊರೊನಾ ವೈರಸ್ ನ್ನು ತಂದು ಈ ದೇಶಕ್ಕೆ ಹರಡಿದವರಂತೆ ಭಾಸವಾಗುತ್ತದೆ.
ಕೊರೋನಾ ತಂದವರು ಯಾರು ? ವಿಮಾನಗಳಲ್ಲಿ ಓಡಡುವ ಜನ ಯಾರು ಮತ್ತು ಅವರ ಸಂಖ್ಯೆ ಎಷ್ಟು ? ಅದರಲ್ಲಿ ಮಕ್ಕಾ ಮದೀನ ಅಂದುಕೊಂಡ ಹೋದವರೆಷ್ಟು ? ಅವರನ್ನು ನಿಯಂತ್ರಿಸಲು , ಅವರನ್ನು ಪ್ರತ್ಯೇಕಗೊಳಿಸುವ ,ನಿಗಾ ವಹಿಸುವ ದೂರದೃಷ್ಟಿ ಯಾಕೆ ನಮ್ಮ ಯಾವ ನಾಯಕರುಗಳಿಗೂ ಬರಲೇ ಇಲ್ಲ ? ಹಾಗಾದರೆ ಯಾರೆಲ್ಲ ತುರ್ತಾಗಿ ಈ ವಿದೇಶಗಳಿಂದ ಬಂದು ನಮ್ಮ ದೇಶ ಸೇರಿಕೊಳ್ಳಲಿ ಎಂದು ಹರಡುತ್ತಿದ್ದರು ? ಬೀದಿಗೆ ಇಳಿದವನಿಗೆ ಹೊಡೆದಂತೆ ವಿಮಾನ ನಿಲ್ದಾಣದಲ್ಲಿ ಟೆಸ್ಟ್ ತಪ್ಪಿಸಿಕೊಂಡು ಓಡಲೆತ್ನಿಸಿದವರ ಮೇಲೂ ಹೀಗೆ ಲಾಟಿ ಬೀಸುತ್ತಿದ್ದರೆ ? ಇಡೀ ದೇಶವನ್ನು ಲಾಕ್ ಡೌನ್ ಮಾಡುವ ಅನಿವಾರ್ಯ ಸ್ಥಿತಿ ತಲುಪುವ ತನಕ ಕಾದದ್ದು ಯಾರಿಗೆ ?
ಈಗ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಆದರೆ ಇಂಥ ಸಮಯದಲ್ಲಿ ಟಿವಿ ಚಾನೆಲ್ ಗಳು ಕೇವಲ ಜಾಗೃತಿಯನ್ನು ಮಾತ್ರ ಮೂಡಿಸುತ್ತಿಲ್ಲ .ಜೊತೆಗೆ ಭಯ ಹುಟ್ಟಿಸುತ್ತ , ಪ್ರತಿ ಸಾಮಾನ್ಯ ಮನುಷ್ಯನನ್ನೂ ಅಪರಾಧಿ ಸ್ಥಾನದಲ್ಲಿ ಇರಿಸುವಂತೆ ಮಾಡುತ್ತಿರುವುದರಿಂದ ಇದನ್ನು ನೆನಪು ಮಾಡಿಕೊಳ್ಳ ಬೇಕಾಗುತ್ತದೆ. ಜೊತೆಗೆ ಅವರು ರೋಗದ ಲಕ್ಷಣಗಳು ಕಾಣಿಸಿಕೊಂಡರೂ ಭಯ ಪಡದೆ ತಕ್ಷಣ ಏನು ಮಾಡಬೇಕು ? ಇದರಿಂದ ಗುಣಮುಖರಾಗಲು ಪ್ರಯತ್ನ ಹೇಗೆ ನಡೆದಿದೆ ಎಂಬ ಮಾಹಿತಿಯನ್ನೂ ನೀಡುವ ಕಡೆ ಗಮನ ಕೊಡಬೇಕಲ್ಲವೆ ? ಅಲ್ಲದೆ , ಸಾವು , ತಿಥಿ, ಸಮಾಧಿ , ಸ್ಮಶಾನ , ಹೊಗೆ ಹಾಕೊಸ್ಕೋತೀರ ಇಂಥ ಪದಗಳ ಪ್ರಯೋಗವನ್ನು ದಯವಿಟ್ಟು ಮಾಡಬೇಡಿ. ಇದು ಮನೆಯಲ್ಲೇ ಇರುವ ಜನರನ್ನು ಅಧೈರ್ಯಗೊಳಿಸುತ್ತದೆ. ಅಗತ್ಯ ವಸ್ತುಗಳನ್ನು ತರಲು ಹೋದಾಗಲೂ ಈ ಸೋಂಕು ಅಕಸ್ಮಾತ್ ತಗುಲಬಹುದಲ್ಲವೆ ? ಅದಕ್ಕೂ ಯಾರನ್ನು ಹೊಣೆ ಮಾಡುವುದು ? ಹಾಗಾಗಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವೂ ನಿಮ್ಮಿಂದಾಗಬೇಕಿದೆ. ದಯವಿಟ್ಟು ಸುದ್ದಿಗಳನ್ನು ಓದುವಾಗ ಅರಚಾಡಬೇಡಿ. ಎಲ್ಲ ವಯಸ್ಸಿನವರೂ ಈ ಸುದ್ದಿಗಳನ್ನು ನೋಡುತ್ತಿರುತ್ತಾರೆ ಎಂಬುದನ್ನು ಮರೆಯದಿರಿ.
ಬೇರೆ ದೇಶಗಳ ಪರಿಸ್ಥಿತಿಯಿಂದ ಪಾಠ ಕಲಿಯಬೇಕು. ಹಾಗೆಯೇ ಆ ದೇಶಗಳು ಎಲ್ಲ ನಾಗರೀಕರನ್ನು ಸಮಾನವಾಗಿ ಕಾಣುವ ಪಾಠವನ್ನೂ ಕಲಿಯಬೇಕು ನಾವು. ವಿದೇಶಗಳಿಂದ ಬರುವವರನ್ನು ರಕ್ಷಿಸಲು , ದೊಡ್ಡ ಸಂಖ್ಯೆಯ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಬಗ್ಗೆ ಕಾಳಜಿ ಮರೆತು, ಈಗ ಇವರೆಲ್ಲರನ್ನು ಕಾಪಾಡಲೇಬೇಕೆಂದು ತೀರ್ಮಾನಿಸಿ, ಕಡುಬಡವರು, ನಿರ್ಗತಿಕರನ್ನು ಮರೆಯುವಷ್ಟು ಸ್ವಾರ್ಥಿಗಳಾದೆವೆ ನಾವು ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ದೇವನಗರಿ ಸುದ್ದಿದಿನ ಕನ್ನಡ ದಿನಪತ್ರಿಕೆ, ಏಕಾಂತಗಿರಿ ಟ್ರಸ್ಟ್, ದಾವಣಗೆರೆ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ‘ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿ–2026’ ಘೋಷಿಸಲಾಗಿದ್ದು, ಅರ್ಹ ಬರಹಗಾರರಿಂದ ಕಾದಂಬರಿ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಂತನೆ, ಸೃಜನಶೀಲತೆ ಹಾಗೂ ವಿಭಿನ್ನ ಕಥನ ಸಾಧ್ಯತೆಗಳನ್ನು ಹೊಂದಿರುವ ಕಾದಂಬರಿಕಾರರನ್ನು ಪರಿಚಯಿಸುವ ಆಶಯದೊಂದಿಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದುವರೆಗೆ ಯಾವುದೇ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದ ಬರಹಗಾರರಿಗೆ ತಮ್ಮ ಸೃಜನಶೀಲತೆಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲು ಇದು ಉತ್ತಮ ವೇದಿಕೆಯಾಗಲಿದೆ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿರುವ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗೆ ಸಲ್ಲಿಸುವ ಕಾದಂಬರಿಯು ಸಂಪೂರ್ಣ ಸ್ವತಂತ್ರ ಹಾಗೂ ಲೇಖಕರ ಸ್ವಂತ ರಚನೆಯಾಗಿರಬೇಕು. ಕಾದಂಬರಿಯ ಯಾವುದೇ ಭಾಗವು ಈ ಮೊದಲು ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಿರಬಾರದು ಅಥವಾ ಪ್ರಸಾರವಾಗಿರಬಾರದು. ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಕಾದಂಬರಿಗಳನ್ನು ಪರಿಗಣಿಸಲಾಗುವುದಿಲ್ಲ. ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ.
ಹಸ್ತಪ್ರತಿಯನ್ನು A4 ಅಳತೆಯ ಹಾಳೆಯಲ್ಲಿ ನುಡಿ ಅಥವಾ ಯುನಿಕೋಡ್ ಕನ್ನಡ ಫಾಂಟ್ ಬಳಸಿ, 12 ಪಾಯಿಂಟ್ ಅಕ್ಷರ ಗಾತ್ರದಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿರಬೇಕು. ಕಾದಂಬರಿಯು ಕನಿಷ್ಠ 120 ಪುಟಗಳಿಗಿಂತ ಕಡಿಮೆ ಇರಬಾರದು. ಹಸ್ತಪ್ರತಿಯ ಮೊದಲ ಪುಟದಲ್ಲಿ ಕಾದಂಬರಿಯ ಶೀರ್ಷಿಕೆಯನ್ನು ಮಾತ್ರ ನಮೂದಿಸಬೇಕು. ಲೇಖಕರ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಹಾಗೂ ಕಾದಂಬರಿಯ ಸಂಕ್ಷಿಪ್ತ ಪರಿಚಯವನ್ನು ಪ್ರತ್ಯೇಕ ಲಕೋಟೆಯಲ್ಲಿ ಕಳುಹಿಸಬೇಕು. ಕೃತಿಯು ಸ್ವತಂತ್ರ ರಚನೆಯಾಗಿದ್ದು, ಈ ಮೊದಲು ಪ್ರಕಟವಾಗಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರವನ್ನೂ ಲಗತ್ತಿಸುವುದು ಕಡ್ಡಾಯವಾಗಿದೆ.
ಕೃತಿಗಳ ಆಯ್ಕೆಯಲ್ಲಿ ಸಾಹಿತ್ಯಕ ಗುಣಮಟ್ಟ, ಭಾಷಾ ಸೊಗಸು, ಕಥನ ತಂತ್ರ, ಸೃಜನಶೀಲತೆ, ವೈಚಾರಿಕತೆ ಹಾಗೂ ಸಾಮಾಜಿಕ ಪ್ರಸ್ತುತತೆಗೆ ಆದ್ಯತೆ ನೀಡಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಸಲ್ಲಿಸಿದ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.
ಆಯ್ಕೆಯಾಗುವ ಕಾದಂಬರಿಗೆ ₹10,000 ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಆಸಕ್ತರು ತಮ್ಮ ಹಸ್ತಪ್ರತಿಗಳನ್ನು ಡಿಸೆಂಬರ್ 30, 2026ರೊಳಗೆ ಕಳುಹಿಸಬೇಕು.
ಹಸ್ತಪ್ರತಿಗಳನ್ನು ‘ಸಂಪಾದಕರು, ದೇವನಗರಿ ಸುದ್ದಿದಿನ–ಕನ್ನಡ ದಿನಪತ್ರಿಕೆ, #3231/01, ಸಂಜೀವ ಸದನ, 11ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್, ದಾವಣಗೆರೆ–577004’ ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9980346243 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಅಂತರಂಗ
ಸಂತೆಬೆನ್ನೂರು ಫೈಜ್ನಟ್ರಾಜ್ ಗೆ ಮುದ್ದಣ ಕಾವ್ಯ ಪ್ರಶಸ್ತಿ
ಸುದ್ದಿದಿನ,ದಾವಣಗೆರೆ:ಮೂಡುಬಿದರೆಯ ಕಾಂತಾವರ ಕನ್ನಡ ಸಂಘ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ವತಿಯಿಂದ ಪ್ರತಿವರ್ಷ’ ಮುದ್ದಣ ಕಾವ್ಯ ಪ್ರಶಸ್ತಿ ಗಾಗಿ’ ಏರ್ಪಡಿಸುವ ಕವನ ಸಂಕಲನಗಳ ಹಸ್ತಪ್ರತಿ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ” ಅಂಗುಲಿಮಾಲನ ಎದುರು ಕೂತ ಬುದ್ಧ ನೀನಲ್ಲ” ಎಂಬ ಹಸ್ತಪ್ರತಿಗೆ 2026 ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ನಾ. ಮೊಗಸಾಲೆ ಘೋಷಣೆ ಮಾಡಿದ್ದಾರೆ.
ನಾಡಿನ ಪ್ರತಿಷ್ಠಿತ ಕವಿ ಉಡುಪಿಯ ನಂದಳಿಕೆ ಲಕ್ಷ್ಮೀ ನಾರಾಯಣ ಅಥವಾ ನಂದಳಿಕೆಯ ಮುದ್ದಣ ಹೆಸರಿನಲ್ಲಿ ಕೊಡಲ್ಪಡುವ ಈ ಪ್ರಶಸ್ತಿ ಗೆ 1979 ರಿಂದಲೂ ಈ ಸ್ಪರ್ಧೆ ನಡೆಯುತ್ತಾ ಬಂದಿದೆ.
ಇದುವರೆಗೂ ಕರ್ನಾಟಕದ ಗಮನಾರ್ಹ ಕವಿಗಳು ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈಗಾಗಲೇ ನಾಡಿನಾದ್ಯಂತ ಕಥೆ, ಕವಿತೆ, ಪ್ರಬಂಧಗಳ ಮೂಲಕ ಮನೆಮಾತಾಗಿರುವ ಮತ್ತು ಹದಿನೈದು ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಫೈಜ್ನಟ್ರಾಜ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಅಲ್ಲದೇ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಂಘ ( ಶಿವಮೊಗ್ಗ) ನೀಡುವ ಪಿ.ಲಂಕೇಶ್ ಪ್ರಶಸ್ತಿ, ಕಸಾಪದಿಂದ ಸಿಸು ಸಂಗಮೇಶ ಪ್ರಶಸ್ತಿ,, ರಾಜ್ಯಮಟ್ಟದ ಅನೇಕ ಕಥಾ ಪ್ರಶಸ್ತಿ, ವಿಭಾ ಕಾವ್ಯ ಪುರಸ್ಕಾರ ಇನ್ನೂ ಮುಂತಾದ ಪ್ರಶಸ್ತಿ ಪಡೆದಿದ್ದಾರೆ.
ವಿ.ವಿಗಳಲ್ಲೂ ಇವರ ಕತೆ, ಕವಿತೆ ಪಠ್ಯ ಆಗಿವೆ.
ಪ್ರಸ್ತುತ ಪ್ರಶಸ್ತಿಯೂ ಹತ್ತು ಸಾವಿರ ನಗದು,ತಾಮ್ರಪತ್ರ ಮತ್ತು ಸನ್ಮಾನ ಒಳಗೊಂಡಿದ್ದು 2027 ಮಾರ್ಚ್ ನಲ್ಲಿ ನಡೆಯುತ್ತದೆ.ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ಸಮಾರಂಭ ನೆರವೇರುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸದಾನಂದ ನಾರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



