ಅಂತರಂಗ
ಅರಿಮೆಯ ಅರಿವಿರಲಿ – 1 : ಕನ್ನಡಿ ಮತ್ತು ಫೋಟೋಗಳ ನಡುವೆ
- –ಯೋಗೇಶ್ ಮಾಸ್ಟರ್
ನಾನೊಬ್ಬ ಡಾನ್, ನನ್ನ ಆರ್ಡರ್ ಕೇಳಿಸಿಕೊಂಡು ಒಂದಷ್ಟು ಜನ ‘ಎಸ್ ಬಾಸ್’ ಎಂದು ತಕ್ಷಣವೇ ನಡೆದುಕೊಳ್ಳಬೇಕು ಅಂತ ಏನೋ ಇಷ್ಟಪಟ್ಟರೆ ಒಂದು ವೇಳೆ ಒಂದು ಹಂತಕ್ಕೆ ಆಗಬಹುದೇನೋ. ಅದಕ್ಕೆ ಬಲವಿರಬೇಕು. ದೈಹಿಕ ಬಲವೋ, ಅಧಿಕಾರದ ಬಲವೋ, ಹಣದ ಬಲವೋ; ಎಂತದ್ದೋ ಒಂದು ಬಲವಿರಬೇಕು. ಒಂದಷ್ಟು ಜನ ‘ಎಸ್ ಬಾಸ್’ ಎನ್ನುತ್ತಾರೆ. ಆದರೆ ನಾನು ಹೇಳುವ ಮಾತುಗಳನ್ನು ‘ಎಸ್ ಬಾಸ್’ ಎಂದು ಹೇಳಿದ ತಕ್ಷಣ ಒಪ್ಪಿಕೊಳ್ಳದೇ ಇರುವ ವ್ಯಕ್ತಿ ಎಂದರೆ ನಾನೇ. ಕನಿಷ್ಟಪಕ್ಷ ನನ್ನ ವಿಷಯಗಳಲ್ಲಿ ನಾನೊಬ್ಬ ಡಾನ್ ಅಂತ ಅಂದುಕೊಳ್ಳಲೂ ಮೊದಲ ತೊಡಕು ನಾನೇ. ನನ್ನ ಬಾಯಿಯ ಮಾತುಗಳನ್ನು ನನ್ನ ಕಿವಿಯೇ ಕೇಳುವುದಿಲ್ಲ. ಇದೊಳ್ಳೆ ಸಮಸ್ಯೆ!
ಇನ್ನೂ ಒಂದು ಸಮಸ್ಯೆ ಇದೆ. ಅದೇನೆಂದರೆ ನನ್ನಲ್ಲಿಯೂ ಕೆಲವು ಮಾತುಗಳಿವೆ. ನಾನು ಅವುಗಳನ್ನು ಹೇಳುತ್ತಿದ್ದೇನೆ. ಅದನ್ನು ಒಪ್ಪದೇ ನಾನು ಮೊಂಡಾಟ ಮಾಡುತ್ತಿದ್ದೇನೆ ಎಂದು ಕೂಡಾ ಕೆಲವರಿಗೆ ತಿಳಿಯುವುದಿಲ್ಲ.
ಸರಿ, ಈಗ ಇದನ್ನು ಸ್ವಲ್ಪ ಸರಳವಾಗಿ ಅರ್ಥ ಮಾಡಿಕೊಳ್ಳೋಣ.ನಿಮ್ಮ ಮುಂದೆ ಒಂದು ಕನ್ನಡಿ ಇದೆ. ನೀವು ಕನ್ನಡಿಯನ್ನು ನೋಡಿಕೊಳ್ಳುತ್ತೀರಿ. ನೀವು ನಕ್ಕರೆ ಕನ್ನಡಿಯೊಳಗಿರುವ ನಿಮ್ಮ ಪ್ರತಿಬಿಂಬ ನಗುತ್ತದೆ. ಅದನ್ನು ನೋಡುತ್ತೀರಿ. ನೀವು ಮೂತಿ ಉದ್ದ ಮಾಡಿದರೆ ಅದೂ ಮಾಡುತ್ತದೆ. ಅದನ್ನೂ ನೋಡುತ್ತೀರಿ. ಮುಖದ ಮೇಲೆ ಏನೋ ಮೆತ್ತಿಕೊಂಡಿದೆ ಎಂದರೆ ಅದು ಕಾಣುತ್ತದೆ. ಅದು ಇರಲಿ ಎಂದರೆ ಬಿಡುತ್ತೀರಿ. ಅದು ಚೆನ್ನಾಗಿ ಕಾಣುತ್ತಿಲ್ಲ ಎಂದರೆ ಅದನ್ನು ತೆಗೆದುಹಾಕುತ್ತೀರಿ. ಕನ್ನಡಿಯ ಉಪಯೋಗಗಳು ಎಂದು ಕೈಪಿಡಿಯೊಂದನ್ನು ನೀವು ಓದಿ ಅದನ್ನು ಬಳಸುವಷ್ಟು ಅಜ್ಞಾನಿಗಳೇನಲ್ಲ ನೀವು.
ನಮ್ಮ ಸುರೂಪ ಅಥವಾ ಕುರೂಪ ಎಷ್ಟು ರೂಪುಗೊಂಡಿದೆ ಎಂದು ನೋಡಿಕೊಳ್ಳಲು ಈ ಕನ್ನಡಿ ನಮಗೆ ಬೇಕು. ಏಕೆಂದರೆ ಈ ಕನ್ನಡಿ ಬರೀ ನಾವು ನಮ್ಮ ಕಣ್ಣಿಗೆ ಹೇಗೆ ಕಾಣುತ್ತೇವೆ ಎಂದು ಮಾತ್ರ ನೋಡಿಕೊಳ್ಳುವುದಕ್ಕಲ್ಲ. ಮೊದಲು ಹಾಗೆ ನೋಡಿಕೊಂಡಾದ ಮೇಲೆ ನಮ್ಮನ್ನು ನೋಡುವ ಇತರರಿಗೆ ನಾವು ಹೇಗೆ ಕಾಣುತ್ತೇವೆ ಎಂಬುದರ ಬಗ್ಗೆ ಕೂಡಾ ನಮಗೆ ಅರಿವಿದೆ. ಅದಕ್ಕೆ ನಾವು ಕನ್ನಡಿಯಲ್ಲಿ ನೋಡಿಕೊಂಡಾದ ಮೇಲೆ ‘ನಾನು ಹೀಗೆ ಇತರರಿಗೆ ಕಾಣುತ್ತೇನೆ’ ಎಂದು ವಿಶ್ವಾಸದಿಂದ ಕನ್ನಡಿಯನ್ನು ಬಿಟ್ಟು ಹೊರಡುತ್ತೇವೆ.
ಸರಿ, ಹಾಗೆಯೇ ನಿಮ್ಮ ಮುಂದೆ ಒಂದು ಚೌಕಟ್ಟು ಹಾಕಿರುವ ನಿಮ್ಮದೊಂದು ಫೋಟೋ ಇದೆ. ಅದು ನಿಮ್ಮದೇ ಭಾವಚಿತ್ರ. ಆ ಚಿತ್ರದಲ್ಲಿ ತುಂಬಾ ಒಳ್ಳೆಯ ಬಟ್ಟೆ ಹಾಕಿದ್ದೀರಿ. ಚೆನ್ನಾಗಿ ತಲೆ ಬಾಚಿದ್ದೀರಿ. ಒಳ್ಳೆ ಮೇಕಪ್ ಇದೆ ಮುಖದಲ್ಲಿ. ಅದನ್ನು ನೋಡಿದಾದ ಮೇಲೆ ‘ನಾನು ಹೀಗೆ ಇತರರಿಗೆ ಕಾಣುತ್ತೇನೆ’ ಎಂದು ವಿಶ್ವಾಸದಿಂದ ಆ ಭಾವಚಿತ್ರವನ್ನು ಬಿಟ್ಟು ಹೊರಡುತ್ತೇವೆಯೇ. ಆ ಚಿತ್ರವು ನನ್ನದೇ ಆಗಿದ್ದರೂ, ಅದೆಷ್ಟೇ ಚೆನ್ನಾಗಿದ್ದರೂ ಅದು ನನ್ನ ಪ್ರಸ್ತುತ ಜೀವಂತಿಕೆಯ ಮುಖವನ್ನು ತೋರುತ್ತಿಲ್ಲ. ಅದು ಚಿತ್ರವೇ ಹೊರತು ವಾಸ್ತವವಲ್ಲ ಎಂಬ ಅರಿವು ನಮಗಿದೆ. ಆ ಫೋಟೋದಲ್ಲಿದ್ದಂತೆ ನಾನೀಗ ಇಲ್ಲ ಎಂದು ಗೊತ್ತಿರುತ್ತದೆ.
ಕೆಲವರಿಗೆ ಈ ಅರಿವು ಇರುವುದಿಲ್ಲ. ತಮ್ಮ ಕೈಯಲ್ಲಿ ತಮ್ಮ ಯಾವುದೋ, ಯಾವಾಗಿನದೋ ಫೋಟೋ ಹಿಡಿದುಕೊಂಡು ನಾನು ಇರುವುದೇ ಹೀಗೆ. ನಾನು ಈಗಲೂ ಹೀಗೇ ಇದ್ದೇನೆ ಎಂದು ನಂಬಿರುತ್ತಾರೆ. ಪಾಪ ಅವರು ಕನ್ನಡಿ ಹಿಡಿದುಕೊಂಡು ನೋಡಿಕೊಳ್ಳಬೇಕಾಗಿರುವ ಸಮಯದಲ್ಲೆಲ್ಲಾ ಫೋಟೋ ಹಿಡಿದುಕೊಂಡಿರುತ್ತಾರೆ. ಅದರಂತೆ ತಾನಿದ್ದೇನೆ ಎಂಬ ಭ್ರಮೆಯಲ್ಲಿ ಓಡಾಡುತ್ತಿರುತ್ತಾರೆ. ಅವರು ತಾವು ಹೀಗಿದ್ದೇವೆ ಎಂದು ಎಷ್ಟೇ ನಂಬಿದ್ದರೂ ಅವರನ್ನು ನೋಡುವ ಇತರರಿಗೆ ಅವರು ಹೇಗಿದ್ದಾರೆ ಎಂದು ಗೊತ್ತಾಗುತ್ತದೆ. ಅವರಿಗೆ ಹೇಳಿದರೆ ಅವರು ಕೇಳಬಹುದು. ಕೆಲವರು ಕೇಳುವುದಿಲ್ಲ. ಏಕೆಂದರೆ ಅವರಿಗೆ ನಿಮ್ಮ ಮಾತಿನ ಮೇಲೆ ನಂಬಿಕೆ ಇರುವುದಿಲ್ಲ. ಅವರು ನೋಡಿಕೊಂಡಿರುವ, ನೋಡಿಕೊಳ್ಳುತ್ತಿರುವ ಚೌಕಟ್ಟಿನ ಚಿತ್ರವನ್ನು ತಾವೆಂದುಕೊಂಡಿರುತ್ತಾರೆ.
ಸೂಟು ಬೂಟು ಹಾಕಿಕೊಂಡಿರುವ ಅಥವಾ ಮಹಾರಾಜನ ಫೋಷಾಕಿನಲ್ಲಿರುವ ತನ್ನ ಚಿತ್ರವನ್ನು ನೋಡಿಕೊಂಡು ತನ್ನ ಹಳೆಯ, ಹರಿದ ಅಥವಾ ಮಾಸಲು ಬಟ್ಟೆಯನ್ನು ನೋಡಿಕೊಳ್ಳದಿರುವುದು ಒಬ್ಬ ಚಿತ್ರವನ್ನು ನೋಡಿಕೊಳ್ಳುವುದರ ಅಥವಾ ಕನ್ನಡಿ ನೋಡಿಕೊಳ್ಳುವುದರ ವ್ಯತ್ಯಾಸ. ಇನ್ನೂ ಕೆಲವು ಸಲ ಕೆಲವರು ತಾವು ನೋಡುವ ಚಿತ್ರವೋ ಅವರದ್ದೇ ಆಗಿರುವುದಿಲ್ಲ. ಡಾ ರಾಜ್ ಕುಮಾರ್ ಅವರ ಚಿತ್ರವನ್ನು ನೋಡಿ ಇವರಂತೆ ನಾನೂ ಒಬ್ಬ ಒಳ್ಳೆಯ ಕಲಾವಿದ ಆಗಬೇಕು ಎಂದರೆ ನೀವು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೆ “ಸರಿ ಆಗಪ್ಪಾ ಒಳ್ಳೆಯದಾಗಲಿ” ಅಂತೀರಿ. ಅದೇ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದಿದ್ದರೆ, “ನಿನ್ನ ಮುಖ ನೋಡು” ಅಂತೀರಿ. ಏನಾದರೂ ನನಗೂ ಮತ್ತು ನಿಮಗೂ ಆ ಚಿತ್ರದಲ್ಲಿರುವ ವ್ಯಕ್ತಿ ನಾನಲ್ಲ ಎಂದು ತಿಳಿದಿದೆ. ಆದರೆ “ಇದು ನನ್ನ ಚಿತ್ರ” ಎಂದು ರಾಜ್ ಕುಮಾರ್ ಚಿತ್ರವನ್ನು ತೋರಿಸಿದರೆ? ತಮಾಷೆ ಮಾಡುತ್ತಿದ್ದೇನೆ ಎಂದು ನಗುತ್ತೀರಿ.
ಆದರೆ, “ಇದು ನಿಜ. ನೀವು ನಂಬುತ್ತಿಲ್ಲ” ಎಂದು ನಾನು ವಾದಿಸಿದರೆ ‘ತಿಕ್ಕಲ’ ಅಂತೀರಿ.
ನಾನು ಪ್ರಾಮಾಣಿಕವಾಗಿ ನಂಬಿದ್ದರೂ ನನ್ನ ನಂಬಿಕೆಯನ್ನು ತಿಕ್ಕಲುತನ ಎಂದಿರಿ. ಹೌದು, ನಮ್ಮಗಳಲ್ಲಿ ಈ ಬಗೆಯ ಅನೇಕಾನೇಕ ತಿಕ್ಕಲುತನಗಳಿವೆ. ಒಬ್ಬ ಎಲ್ಲಾ ಸಮಯದಲ್ಲಿ ಚೌಕಟ್ಟಿನ ಚಿತ್ರವಾಗುವುದೇ ಅರಿಮೆ ಅಥವಾ ಕಾಂಪ್ಲೆಕ್ಸ್, ಮಾನಸಿಕ ಸಮಸ್ಯೆಗಳಲ್ಲೊಂದು. ಚೌಕಟ್ಟಿನ ಚಿತ್ರದ ಬದಲು ಕನ್ನಡಿಯನ್ನು ನೋಡಿಕೊಳ್ಳುವುದೇ ಅರಿವು. ಅಂದರೆ ಆತ್ಮಾವಲೋಕನ. ಮಾನಸಿಕ ಸಮಸ್ಯೆಗೆ ಪರಿಹಾರಗಳಲ್ಲೊಂದು.
ಕನ್ನಡಿ ಮತ್ತು ಫೋಟೋ ಸಂಘರ್ಷ
ನಾವು ಸಾಮಾನ್ಯವಾದ ಹಲವು ದೋಷಗಳನ್ನು ನಮ್ಮದಾಗಿಸಿಕೊಂಡಿದ್ದು, ಆ ದೋಷಗಳು ನಮ್ಮಲ್ಲಿ, ಇತರರಲ್ಲಿ ಸದಾ ಕಾಣುತ್ತಿರುವುದರಿಂದ ‘ಇದು ಸಹಜ, ಸ್ವಾಭಾವಿಕ’ ಎಂದು ಇಡೀ ಮನುಷ್ಯರ ಸಮೂಹದಲ್ಲಿ ನಮ್ಮನ್ನು ಗುರುತಿಸಿಕೊಂಡು ಆ ಸಮಸ್ಯೆಗಳನ್ನೆಲ್ಲಾ ಸಾಮಾನ್ಯೀಕರಿಸಿಕೊಂಡುಬಿಟ್ಟಿರುತ್ತೇವೆ.
ಮನುಕುಲದಲ್ಲಿ ಇದರಷ್ಟು ದೊಡ್ಡ ದುರಂತ ಮತ್ತೊಂದಿಲ್ಲ. ಭ್ರಷ್ಟಾಚಾರವನ್ನು ವ್ಯವಸ್ಥೆಯ ಭಾಗ ಎಂದು ಒಪ್ಪಿಕೊಂಡ ಹಾಗೆ. ನಮ್ಮ ದೋಷಗಳು ಅಥವಾ ಸಮಸ್ಯೆಗಳು ನಮಗೆ ಕಾಣದೇ ಹೋಗುವ ಬಹು ಮುಖ್ಯ ಕಾರಣವೆಂದರೆ ಅವುಗಳನ್ನು ಸಾಮಾನ್ಯವೆಂದೂ, ಸಹಜವೆಂದೂ, ಮನುಷ್ಯರಾದವರಲ್ಲೆಲ್ಲಾ ಇರುವುದೆಂದೂ ಒಪ್ಪಿಕೊಂಡುಬಿಡುವುದು. ಯಾವುದನ್ನು ಒಪ್ಪಿಕೊಳ್ಳುತ್ತೇವೋ ಅದು ನಮ್ಮನ್ನು ಅಪ್ಪಿಕೊಂಡುಬಿಡುತ್ತದೆ. ಆಮೇಲೆ ಬಿಟ್ಟಗಲಿ ಇರಲಾಗದಂತಹ ಪ್ರೇಮಿಗಳಾಗಿ ಒಂದಾಗಿ ಬಾಳ್ವೆ! ನಮ್ಮ ಅನೇಕಾನೇಕ ಮಾನಸಿಕ ಸಮಸ್ಯೆಗಳು ನಮ್ಮೊಡನೆ ಇರುವುದು ಮಾತ್ರವಲ್ಲ, ನಾವಾಗಿಯೇ ಇರುವುದು ಹೀಗೆ.
ಸಾಲದಕ್ಕೆ ಸಣ್ಣ ಮಗುವಿನಿಂದಲೂ ನಾವು ಹೀಗಿರಬೇಕು, ಹಾಗಿರಬೇಕು ಕೇಳಿಕೊಂಡು, ಒಂದಷ್ಟು ಮಾದರಿಗಳ ಚೌಕಟ್ಟು ಹಾಕಿರುವ ಚಿತ್ರಗಳನ್ನು ನೋಡಿಕೊಂಡು ಬೆಳೆದಿರುತ್ತೇವೆ. ಮಕ್ಕಳಿಗೆ ಕನ್ನಡಿ ತೋರಿಸುವ ಬದಲು ಚಿತ್ರಗಳನ್ನು ತೋರಿಸುವ ಕಾರಣದಿಂದ ಅವರು ತಮ್ಮ ಮುಖದ ಮೇಲೆ ಇರುವ ವ್ಯತ್ಯಾಸಗಳನ್ನು, ಮಸಿ, ಗಲೀಜು, ಸೌಂದರ್ಯ ಇತ್ಯಾದಿಗಳನ್ನು ನೋಡಿಕೊಳ್ಳುವ ಬದಲು ಚಿತ್ರಗಳನ್ನೇ ಕಣ್ತುಂಬಿಕೊಂಡು ತಮ್ಮ ಸಮಸ್ಯೆಗಳನ್ನು ನೋಡಿಕೊಳ್ಳಲು ಹೋಗುವುದೇ ಇಲ್ಲ.
ಕೊನೆಗೆ ಅವರು ಚಿತ್ರಗಳಾಗಿಯೇ ಸಮಾಜದಲ್ಲಿ ಪ್ರದರ್ಶಿತರಾಗುತ್ತಿರುತ್ತಾರೆ. ಅವರ ಪ್ರದರ್ಶನದಲ್ಲಿ ಪ್ರಾಮಾಣಿಕತೆ ಇರುತ್ತದೆ. ತಮ್ಮ ಚಿತ್ರವೀಕ್ಷಣೆಯ ನಂಬಿಕೆಯ ಕುರುಹಾದ ಪ್ರಾಮಾಣಿಕ ಪ್ರದರ್ಶನವಿರುತ್ತದೆ. ನಂಬಿಕೆ ಎನ್ನುವುದು ವಾಸ್ತವಕ್ಕೆ ಶತ್ರು. ನಂಬಿಕೆ ಮತ್ತು ವಿಶ್ವಾಸ ಈ ಎರಡನ್ನೂ ಒಟ್ಟಿಗೇ ಬಳಸುವ ರೂಢಿ ಇದೆ. ಆದರೆ ಮನಸ್ಸಿನ ವಿಚಾರದಲ್ಲಿ ನಂಬಿಕೆಗೂ ಮತ್ತು ವಿಶ್ವಾಸಕ್ಕೂ ವ್ಯತ್ಯಾಸಗಳಿವೆ.
ಚಿತ್ರವನ್ನು ನೋಡಿಕೊಂಡವನು ತನ್ನ ಚಿತ್ರಣ ಹೀಗಿದೆ ಎಂದು ಭಾವಿಸುವುದು ನಂಬಿಕೆ.ಕನ್ನಡಿಯನ್ನು ನೋಡಿಕೊಂಡವನು ತನ್ನ ಚಿತ್ರಣ ಹೀಗಿದೆ ಎಂದು ತಿಳಿಯುವುದು.ಚಿತ್ರವನ್ನು ನೋಡಿಕೊಂಡವನಿಗೆ ತಾನು ಭಾವಿಸುವುದನ್ನೇ ನಂಬಿರುತ್ತಾನೆ. ಕನ್ನಡಿ ನೋಡಿಕೊಂಡವನು ತನ್ನ ತೋರಿಸುತ್ತಿರುವ ವಸ್ತುವನ್ನು ವಿಶ್ವಾಸಿಸುತ್ತಾನೆ. ನಂಬಿಕೆಯ ಕೇಂದ್ರ ಒಬ್ಬನ ಒಳಗಿರುತ್ತದೆ.ವಿಶ್ವಾಸ ಆಧಾರ ಹೊರಗಿನದ್ದು.
ನಂಬಿಕೆ ಭ್ರಮೆಯನ್ನು ಸೃಷ್ಟಿಸಿದರೆ, ವಿಶ್ವಾಸ ಭ್ರಮೆಯನ್ನು ಹೋಗಲಾಡಿಸುತ್ತದೆ.
ಇದೇ ಅರಿಮೆಗೂ ಮತ್ತು ಅರಿವಿಗೂ ಇರುವ ವ್ಯತ್ಯಾಸ. ಅರಿಮೆ (ಕಾಂಪ್ಲೆಕ್ಸ್) ಮನುಷ್ಯನಲ್ಲಿ ಭ್ರಮೆಗಳನ್ನು ಸೃಷ್ಟಿಸುತ್ತದೆ. ನಮ್ಮಲ್ಲಿ ಕೆಲವರಿಗೆ ಅರಿಮೆಯೂ ಇರುತ್ತದೆ, ಅರಿವೂ ಇರುತ್ತದೆ. ಅಂದರೆ ಅಲ್ಲಿ ಕನ್ನಡಿ ಮತ್ತು ಫೋಟೋ ಸಂಘರ್ಷವಿರುತ್ತದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ದೇವನಗರಿ ಸುದ್ದಿದಿನ ಕನ್ನಡ ದಿನಪತ್ರಿಕೆ, ಏಕಾಂತಗಿರಿ ಟ್ರಸ್ಟ್, ದಾವಣಗೆರೆ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ‘ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿ–2026’ ಘೋಷಿಸಲಾಗಿದ್ದು, ಅರ್ಹ ಬರಹಗಾರರಿಂದ ಕಾದಂಬರಿ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಂತನೆ, ಸೃಜನಶೀಲತೆ ಹಾಗೂ ವಿಭಿನ್ನ ಕಥನ ಸಾಧ್ಯತೆಗಳನ್ನು ಹೊಂದಿರುವ ಕಾದಂಬರಿಕಾರರನ್ನು ಪರಿಚಯಿಸುವ ಆಶಯದೊಂದಿಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದುವರೆಗೆ ಯಾವುದೇ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದ ಬರಹಗಾರರಿಗೆ ತಮ್ಮ ಸೃಜನಶೀಲತೆಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲು ಇದು ಉತ್ತಮ ವೇದಿಕೆಯಾಗಲಿದೆ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿರುವ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗೆ ಸಲ್ಲಿಸುವ ಕಾದಂಬರಿಯು ಸಂಪೂರ್ಣ ಸ್ವತಂತ್ರ ಹಾಗೂ ಲೇಖಕರ ಸ್ವಂತ ರಚನೆಯಾಗಿರಬೇಕು. ಕಾದಂಬರಿಯ ಯಾವುದೇ ಭಾಗವು ಈ ಮೊದಲು ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಿರಬಾರದು ಅಥವಾ ಪ್ರಸಾರವಾಗಿರಬಾರದು. ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಕಾದಂಬರಿಗಳನ್ನು ಪರಿಗಣಿಸಲಾಗುವುದಿಲ್ಲ. ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ.
ಹಸ್ತಪ್ರತಿಯನ್ನು A4 ಅಳತೆಯ ಹಾಳೆಯಲ್ಲಿ ನುಡಿ ಅಥವಾ ಯುನಿಕೋಡ್ ಕನ್ನಡ ಫಾಂಟ್ ಬಳಸಿ, 12 ಪಾಯಿಂಟ್ ಅಕ್ಷರ ಗಾತ್ರದಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿರಬೇಕು. ಕಾದಂಬರಿಯು ಕನಿಷ್ಠ 120 ಪುಟಗಳಿಗಿಂತ ಕಡಿಮೆ ಇರಬಾರದು. ಹಸ್ತಪ್ರತಿಯ ಮೊದಲ ಪುಟದಲ್ಲಿ ಕಾದಂಬರಿಯ ಶೀರ್ಷಿಕೆಯನ್ನು ಮಾತ್ರ ನಮೂದಿಸಬೇಕು. ಲೇಖಕರ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಹಾಗೂ ಕಾದಂಬರಿಯ ಸಂಕ್ಷಿಪ್ತ ಪರಿಚಯವನ್ನು ಪ್ರತ್ಯೇಕ ಲಕೋಟೆಯಲ್ಲಿ ಕಳುಹಿಸಬೇಕು. ಕೃತಿಯು ಸ್ವತಂತ್ರ ರಚನೆಯಾಗಿದ್ದು, ಈ ಮೊದಲು ಪ್ರಕಟವಾಗಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರವನ್ನೂ ಲಗತ್ತಿಸುವುದು ಕಡ್ಡಾಯವಾಗಿದೆ.
ಕೃತಿಗಳ ಆಯ್ಕೆಯಲ್ಲಿ ಸಾಹಿತ್ಯಕ ಗುಣಮಟ್ಟ, ಭಾಷಾ ಸೊಗಸು, ಕಥನ ತಂತ್ರ, ಸೃಜನಶೀಲತೆ, ವೈಚಾರಿಕತೆ ಹಾಗೂ ಸಾಮಾಜಿಕ ಪ್ರಸ್ತುತತೆಗೆ ಆದ್ಯತೆ ನೀಡಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಸಲ್ಲಿಸಿದ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.
ಆಯ್ಕೆಯಾಗುವ ಕಾದಂಬರಿಗೆ ₹10,000 ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಆಸಕ್ತರು ತಮ್ಮ ಹಸ್ತಪ್ರತಿಗಳನ್ನು ಡಿಸೆಂಬರ್ 30, 2026ರೊಳಗೆ ಕಳುಹಿಸಬೇಕು.
ಹಸ್ತಪ್ರತಿಗಳನ್ನು ‘ಸಂಪಾದಕರು, ದೇವನಗರಿ ಸುದ್ದಿದಿನ–ಕನ್ನಡ ದಿನಪತ್ರಿಕೆ, #3231/01, ಸಂಜೀವ ಸದನ, 11ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್, ದಾವಣಗೆರೆ–577004’ ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9980346243 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಅಂತರಂಗ
ಸಂತೆಬೆನ್ನೂರು ಫೈಜ್ನಟ್ರಾಜ್ ಗೆ ಮುದ್ದಣ ಕಾವ್ಯ ಪ್ರಶಸ್ತಿ
ಸುದ್ದಿದಿನ,ದಾವಣಗೆರೆ:ಮೂಡುಬಿದರೆಯ ಕಾಂತಾವರ ಕನ್ನಡ ಸಂಘ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ವತಿಯಿಂದ ಪ್ರತಿವರ್ಷ’ ಮುದ್ದಣ ಕಾವ್ಯ ಪ್ರಶಸ್ತಿ ಗಾಗಿ’ ಏರ್ಪಡಿಸುವ ಕವನ ಸಂಕಲನಗಳ ಹಸ್ತಪ್ರತಿ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ” ಅಂಗುಲಿಮಾಲನ ಎದುರು ಕೂತ ಬುದ್ಧ ನೀನಲ್ಲ” ಎಂಬ ಹಸ್ತಪ್ರತಿಗೆ 2026 ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ನಾ. ಮೊಗಸಾಲೆ ಘೋಷಣೆ ಮಾಡಿದ್ದಾರೆ.
ನಾಡಿನ ಪ್ರತಿಷ್ಠಿತ ಕವಿ ಉಡುಪಿಯ ನಂದಳಿಕೆ ಲಕ್ಷ್ಮೀ ನಾರಾಯಣ ಅಥವಾ ನಂದಳಿಕೆಯ ಮುದ್ದಣ ಹೆಸರಿನಲ್ಲಿ ಕೊಡಲ್ಪಡುವ ಈ ಪ್ರಶಸ್ತಿ ಗೆ 1979 ರಿಂದಲೂ ಈ ಸ್ಪರ್ಧೆ ನಡೆಯುತ್ತಾ ಬಂದಿದೆ.
ಇದುವರೆಗೂ ಕರ್ನಾಟಕದ ಗಮನಾರ್ಹ ಕವಿಗಳು ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈಗಾಗಲೇ ನಾಡಿನಾದ್ಯಂತ ಕಥೆ, ಕವಿತೆ, ಪ್ರಬಂಧಗಳ ಮೂಲಕ ಮನೆಮಾತಾಗಿರುವ ಮತ್ತು ಹದಿನೈದು ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಫೈಜ್ನಟ್ರಾಜ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಅಲ್ಲದೇ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಂಘ ( ಶಿವಮೊಗ್ಗ) ನೀಡುವ ಪಿ.ಲಂಕೇಶ್ ಪ್ರಶಸ್ತಿ, ಕಸಾಪದಿಂದ ಸಿಸು ಸಂಗಮೇಶ ಪ್ರಶಸ್ತಿ,, ರಾಜ್ಯಮಟ್ಟದ ಅನೇಕ ಕಥಾ ಪ್ರಶಸ್ತಿ, ವಿಭಾ ಕಾವ್ಯ ಪುರಸ್ಕಾರ ಇನ್ನೂ ಮುಂತಾದ ಪ್ರಶಸ್ತಿ ಪಡೆದಿದ್ದಾರೆ.
ವಿ.ವಿಗಳಲ್ಲೂ ಇವರ ಕತೆ, ಕವಿತೆ ಪಠ್ಯ ಆಗಿವೆ.
ಪ್ರಸ್ತುತ ಪ್ರಶಸ್ತಿಯೂ ಹತ್ತು ಸಾವಿರ ನಗದು,ತಾಮ್ರಪತ್ರ ಮತ್ತು ಸನ್ಮಾನ ಒಳಗೊಂಡಿದ್ದು 2027 ಮಾರ್ಚ್ ನಲ್ಲಿ ನಡೆಯುತ್ತದೆ.ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ಸಮಾರಂಭ ನೆರವೇರುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸದಾನಂದ ನಾರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



