ದಿನದ ಸುದ್ದಿ
ಕೋವಿದ್19-ಪಾಠ ಕಲಿಯದ ಸಮಾಜ, ದಾರಿ ತಿಳಿಯದ ಸರ್ಕಾರ..!
- ನಾ ದಿವಾಕರ
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೇ ಭಾರತ ಮತ್ತೊಮ್ಮೆ ಸಾಂಕೇತಿಕ ಆಚರಣೆಗಳಿಗೆ ಮೊರೆ ಹೋಗುತ್ತಿದೆ. ಕರ್ನಾಟಕ ಸರ್ಕಾರ ಮಾಸ್ಕ್ ದಿನಾಚರಣೆ ಆಚರಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗುತ್ತಿದೆ. ಕೇಂದ್ರ ಸರ್ಕಾರ ಯೋಗದಿನವನ್ನು ಮನೆಯಲ್ಲೇ ಆಚರಿಸಲು ನಿರ್ಧರಿಸಿದೆ.
ಜೂನ್ 1 ರಿಂದ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಲಾಕ್ ಡೌನ್ ಸಡಿಲಗೊಳಿಸಿರುವುದು ಕೊರೋನಾ ಕ್ಷಿಪ್ರ ಗತಿಯಲ್ಲಿ ವ್ಯಾಪಿಸಲು ನೆರವಾಗುತ್ತಿರುವುದು ಸ್ಪಷ್ಟ. ಅರ್ಥವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ದೃಷ್ಟಿಯಿಂದ ಲಾಕ್ ಡೌನ್ ಸಡಿಲಗೊಳಿಸಿರುವುದನ್ನು ಆಕ್ಷೇಪಿಸಲಾಗುವುದಿಲ್ಲ. ಆದರೆ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆಯೂ ಗಮನಹರಿಸುವುದು ಅತ್ಯವಶ್ಯ.
ಎರಡು ತಿಂಗಳ ಕಟ್ಟುನಿಟ್ಟಿನ ಲಾಕ್ ಡೌನ್ ಅವಧಿಯಲ್ಲಿ ಜನರು ಮತ್ತು ಸರ್ಕಾರಗಳು ಸಾಕಷ್ಟು ಪಾಠ ಕಲಿಯಬಹುದಿತ್ತು. ಒಂದು ಸಾಂಕ್ರಾಮಿಕ ರೋಗ ಹೇಗೆ ಇಡೀ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿಬಿಡುತ್ತದೆ ಎನ್ನುವುದನ್ನು ಸರ್ಕಾರ ಈ ವೇಳೆಗೆ ಅರ್ಥಮಾಡಿಕೊಂಡಿರಬೇಕು. ಸ್ವತಂತ್ರ ಭಾರತದಲ್ಲಿ ಯಾವ ಸರ್ಕಾರಗಳೂ ಎದುರಿಸದ ಸಂದರ್ಭವನ್ನು ಇಂದು ನಾವು ಎದುರಿಸುತ್ತಿದ್ದೇವೆ.
ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಗೆ ಅನುಭವದ ಕೊರತೆ ಎದ್ದು ಕಾಣುವುದು ಸಹಜ. ಅಧಿಕಾರದಲ್ಲಿರುವ ಸರ್ಕಾರಗಳಲ್ಲಿ ಗೊಂದಲ ಇರುವುದೂ ಸಹಜ. ಈ ಆತಂಕ ಮತ್ತು ಗೊಂದಲಗಳನ್ನು ನಿವಾರಿಸುವ ಮಾರ್ಗೋಪಾಯಗಳು ನಮ್ಮ ನಡುವೆಯೇ ಇವೆ. ಸರ್ಕಾರದ ಮತ್ತು ಜನತೆಯ ಕಣ್ಣು ಕಿವಿ ಸಕ್ರಿಯವಾಗಿರಬೇಕಷ್ಟೇ.
ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯವಾದ ಎಚ್ಚರಿಕೆಯ ಮಾರ್ಗ. ಆದರೆ ಲಾಕ್ ಡೌನ್ ಸಡಿಲಿಕೆಯಾದ ಕೂಡಲೇ ಜನರು ಧರಿಸುತ್ತಿರುವ ಮಾಸ್ಕ್ ಸಹ ಸಡಿಲವಾಗಿ, ಕುತ್ತಿಗೆಗೆ ಜಾರುತ್ತಿರುವುದನ್ನು ಎಲ್ಲೆಡೆ ಕಾಣಬಹುದು. ಯುವ ಜನತೆ ಈ ನಿಟ್ಟಿನಲ್ಲಿ ಬಹುದೊಡ್ಡ ಅಪರಾಧಿಗಳಂತೆ ಕಾಣುತ್ತಾರೆ.
ಶೇ 80ರಷ್ಟು ಜನರು ಮಾಸ್ಕ್ ಧರಿಸದೆಯೇ ಓಡಾಡುವುದನ್ನು ಎಲ್ಲೆಡೆ ಕಾಣಬಹುದು. ಮಾರುಕಟ್ಟೆಗಳಲ್ಲಿ, ಸಂತೆಪೇಟೆಗಳಲ್ಲಿ ಯಾವುದೇ ವ್ಯಾಪಾರಿ ಮಾಸ್ಕ್ ಧರಿಸುವುದನ್ನು ಕಾಣಲಾಗುವುದಿಲ್ಲ. ಹೆಚ್ಚು ಜಾಗೃತರಾಗಬೇಕಾದ ವಿದ್ಯಾರ್ಥಿ ಯುವಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎನ್ನುವ ಎಚ್ಚರಿಕೆ ಬಹುಶಃ ಹಾಳೆಯ ಮೇಲೆ ಉಳಿದಿದೆ. ಮಾರುಕಟ್ಟೆಯ ಮಳಿಗೆಗಳತ್ತ ಒಮ್ಮೆ ಗಮನ ಹರಿಸಿದರೆ ದಂಡದ ಹೊಳೆಯೇ ಹರಿದುಬಿಡುತ್ತದೆ.
ಲಾಕ್ ಡೌನ್ ಅವಧಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಗಳು ಈಗ ಸ್ತಬ್ಧವಾಗಿವೆ. ಅಂಗಡಿ ಮುಂಗಟ್ಟುಗಳ ಮುಂದೆ ಅನುಸರಿಸಬೇಕಾದ ದೈಹಿಕ ಅಂತರದ ನಿಯಮಗಳು ಮಾಯವಾಗಿವೆ. ಸಮಾರಂಭಗಳಿಗೆ ವಿಧಿಸಿದ್ದ ನಿರ್ದಿಷ್ಟ ಜನರ ಹಾಜರಿಯ ನಿಯಮ ಬಹುಶಃ ಅಧಿಕಾರಶಾಹಿಯ ನಿರ್ಲಕ್ಷ್ಯತೆ ಮತ್ತು ಪಕ್ಷಪಾತ ಧೋರಣೆಗೆ ಬಲಿಯಾಗಿದೆ.
ಸುತ್ತಲೂ ನಡೆಯುತ್ತಿರುವ ವಿವಾಹ, ನಿಶ್ಚಿತಾರ್ಥ ಮುಂತಾದ ಸಮಾರಂಭಗಳನ್ನು ಗಮನಿಸಿದರೆ ಸರ್ಕಾರದ ನಿಯಮಗಳು ಜಾರಿಯಲ್ಲಿವೆಯೇ ಎಂದು ಅನುಮಾನ ಮೂಡುತ್ತದೆ. ಇನ್ನು ಈ ನಿಯಮಗಳನ್ನು ಉಲ್ಲಂಘಿಸುವುದರಲ್ಲಿ ನಮ್ಮ ರಾಜಕೀಯ ನಾಯಕರೇ ಮುಂಚೂಣಿಯಲ್ಲಿದ್ದಾರೆ. ರಾಜ್ಯ ಆರೋಗ್ಯ ಸಚಿವರೇ ಮುಂದಾಳತ್ವ ವಹಿಸಿರುವುದನ್ನು ಕಂಡಿದ್ದೇವೆ.
ಕಾನೂನು ನಿಯಮ ರೂಪಿಸುವ ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸಿದರೆ ಜನಸಾಮಾನ್ಯರು ಹೇಗೆ ಪಾಲಿಸಲು ಸಾಧ್ಯ ? ಮಾಸ್ಕ್ ದಿನಾಚರಣೆ ಆಚರಿಸುವ ಮುನ್ನ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕುರಿತು ಯೋಚಿಸಬೇಕಲ್ಲವೇ ? ಸರ್ಕಾರ ಒಂದಾದಮೇಲೊಂದರಂತೆ ಕರಾಳ ಶಾಸನಗಳನ್ನು ಜಾರಿಗೊಳಿಸುತ್ತಾ ರೈತರ, ಕಾರ್ಮಿಕರ, ಬಡ ಜನರ ಕತ್ತುಹಿಸುಕುತ್ತಿರುವ ಸಂದರ್ಭದಲ್ಲಿ ಪ್ರತಿಭಟನಕಾರರು ಸರ್ಕಾರದ ನಿಯಮಗಳನ್ನು ಬದ್ಧತೆಯಿಂದ ಅನುಸರಿಸುತ್ತಿದ್ದಾರೆ. ಆದರೆ ನಿಯಮ ರೂಪಿಸುವ ಸಚಿವರು, ರಾಜಕೀಯ ನಾಯಕರು ಉಲ್ಲಂಘಿಸುತ್ತಿದ್ದಾರೆ. ಇದು ಹೊಣೆಗೇಡಿತನದ ಪರಮಾವಧಿ ಅಲ್ಲವೇ ?
ಕೃಷಿ ಕ್ಷೇತ್ರವನ್ನೇ ಸಾರಾ ಸಗಟಾಗಿ ಹರಾಜು ಹಾಕಲು ಸಜ್ಜಾಗಿರುವ ಸರ್ಕಾರದ ನೀತಿಯ ವಿರುದ್ಧ ದನಿ ಎತ್ತುವ ರೈತ ಸಮುದಾಯದ ಪ್ರತಿಭಟನೆಗೆ , ಲಾಕ್ ಡೌನ್ ನಿಯಮ ಮುಂದಿಟ್ಟುಕೊಂಡು, ಅವಕಾಶ ನೀಡದ ಸರ್ಕಾರ ರಾಜಕೀಯ ನಾಯಕರ ಕೌಟುಂಬಿಕ ಸಮಾರಂಭಗಳಿಗೆ, ಪಕ್ಷದ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರ್ಕಾರದ ಹೊಣೆಗೇಡಿತನ ಅಲ್ಲವೇ ?
ಕೋವಿದ್ ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಬೇಕಾದ ಆರೋಗ್ಯ ಸಚಿವರು ಯಾವುದೇ ಲಾಕ್ ಡೌನ್ ನಿಯಮ ಪಾಲಿಸದೆ ಮೆರವಣಿಗೆ ನಡೆಸುತ್ತಾರೆ. ಮತ್ತೊಬ್ಬ ಶಾಸಕರು ನೂರಾರು ಜನರನ್ನು ಸೇರಿಸಿ ಮಗಳ ಮದುವೆ ನಡೆಸುತ್ತಾರೆ. ಮುಖ್ಯಮಂತ್ರಿಯೇ ಕೊರೋನಾ ಹೋಗಲಾಡಿಸಲು ಧನ್ವಂತರಿ ಹೋಮ ನಡೆಸುತ್ತಾರೆ. ಈ ರೀತಿಯ ಹೊಣೆಗೇಡಿತನದ ನಡುವೆ ಜನಸಾಮಾನ್ಯರಿಂದ ನಿಯಮ ಪಾಲನೆ ಅಪೇಕ್ಷಿಸುವುದಾದರೂ ಹೇಗೆ ?
ಲಾಕ್ ಡೌನ್ ಕೊರೋನಾ ಹರಡುವುದನ್ನು ತಡೆಗಟ್ಟುವ ಒಂದು ಮಾರ್ಗ ಮಾತ್ರ ಎನ್ನುವುದು ಸರ್ಕಾರಕ್ಕೂ ತಿಳಿದಿದೆ. ಕೊರೋನಾ ವಿರುದ್ಧ ಹೋರಾಡಲು ಬೇಕಿರುವುದು ವೈದ್ಯಕೀಯ ಸೌಲಭ್ಯ ಮತ್ತು ಜನಸಾಮಾನ್ಯರ ಜಾಗೃತಿ. ಈ ಜಾಗೃತಿ ಮೂಡಿಸಲು ಸಾಕಷ್ಟು ಮಾನವ ಶ್ರಮವೂ ಅಗತ್ಯ. ಒಂದು ದಿನ ಎಲ್ಲರೂ ಮಾಸ್ಕ್ ಧರಿಸಿದರೆ ಅಂದು ಶಂಖ ಜಾಗಟೆ ಸದ್ದು ಮಾಡಿದಂತೆಯೇ ಆಗುತ್ತದೆ.
ಅಥವಾ ಧನ್ವಂತರಿ ಹೋಮದಿಂದ ಕೊರೋನಾ ಹೋಗುವುದೇ ಆಗಿದ್ದರೆ ಎರಡು ತಿಂಗಳ ಕಾಲ ದೇವಸ್ಥಾನಗಳ ಬಾಗಿಲು ಬಡಿದಿದ್ದೇಕೆ ? ಮೊದಲ ದಿನವೇ ಎಲ್ಲೆಡೆ ಹೋಮ ನಡೆಸಿದ್ದರೆ ಭಾರತದಲ್ಲಿ 9000 ಜನರ ಪ್ರಾಣವಾದರೂ ಉಳಿಯುತ್ತಿತ್ತಲ್ಲವೇ ? ದೇವಸ್ಥಾನದ ದರ್ಶನವಿಲ್ಲದೆಯೂ ಮನುಷ್ಯ ಬದುಕಬಹುದು ಎಂದು ನಿರೂಪಿಸಿರುವ ಆ ಸೂಕ್ಷ್ಮ ವೈರಾಣುವಿನ ವಿರುದ್ಧ ಹೋಮ ಯಜ್ಞದ ಮೂಲಕ ಹೋರಾಡುವುದನ್ನು ನೋಡಿದರೆ ನಮಗಿಂತಲೂ ಕೊರೋನಾ ಹೆಚ್ಚು ಬುದ್ಧಿಮತ್ತೆ ಹೊಂದಿದೆ ಎನ್ನಬಹುದೇನೋ !
ಯಾವುದೇ ಸರ್ಕಾರಕ್ಕೆ ಒಂದು ಸಾರ್ವಜನಿಕ ನೀತಿ ನಿಯಮಗಳನ್ನು ರೂಪಿಸುವ ಮುನ್ನ ಸಮಾಜದ ಗ್ರಹಿಕೆಯ ಸಾಮಥ್ರ್ಯದ ಅರಿವೂ ಇರಬೇಕು. ನಮ್ಮ ಸುತ್ತಲಿನ ಸಮಾಜ ವೈಜ್ಞಾನಿಕ ಅಂಶಗಳನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳುತ್ತದೆ ಎನ್ನುವ ಪ್ರಜ್ಞೆಯೂ ಆಡಳಿತ ವ್ಯವಸ್ಥೆಗೆ ಇರಬೇಕು.
ಸರ್ಕಾರದ ವತಿಯಿಂದ ಕೊರೋನಾ ಹೋಗಲಾಡಿಸಲು ಹೋಮ ಯಜ್ಞ ನಡೆಸಿ, ಸಾಮಾನ್ಯ ಜನರಿಗೆ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದರೆ ಹೇಗೆ ತಾನೇ ಕೇಳಿಯಾರು ? ಅವರೂ ದೇವಸ್ಥಾನಗಳ ಮೊರೆ ಹೋಗುತ್ತಾರೆ.
ಜ್ಯೋತಿಷಿಗಳ, ಪಂಡಿತರ ಮೊರೆ ಹೋಗುತ್ತಾರೆ. ಮೂರು ತಿಂಗಳಿಂದ ವ್ಯಾಪಾರ ಇಲ್ಲದೆ ಬಸವಳಿದಿರುವ ದೇವಾಲಯಗಳಿಗೆ ಲಾಭ ಹೆಚ್ಚಾಗುತ್ತದೆ. ವೈಚಾರಿಕತೆ ಸಾಯುತ್ತದೆ. ಕೊರೋನಾ ಶಾಶ್ವತವಾಗಿ ನಮ್ಮ ನಡುವೆ ಉಳಿಯುತ್ತದೆ. ಈ ಪರಿಜ್ಞಾನ ಸರ್ಕಾರಕ್ಕೆ, ಅಧಿಕಾರಶಾಹಿಗೆ ಇರಬೇಕಲ್ಲವೇ ?
ಮೂರು ತಿಂಗಳ ನಂತರ ಕೊರೋನಾ ಸಮಾಜದ ಎಲ್ಲ ವರ್ಗಗಳನ್ನೂ ಕಾಡುತ್ತಿದೆ. ಭಾರತದ 600ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದೆ. ಗ್ರಾಮಗಳಿಗೂ ವ್ಯಾಪಿಸುತ್ತಿದೆ. ನಗರ ಪ್ರದೇಶಗಳಲ್ಲಿ ಹಿತವಲಯಗಳನ್ನೂ ಪ್ರವೇಶಿಸಿದೆ. ಇತ್ತೀಚಿನ ದಿನಗಳಲ್ಲಿ ಸಿ ಆರ್ ಪಿ ಎಫ್ ಯೋಧರು, ಪೊಲೀಸ್ ಸಿಬ್ಬಂದಿ, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು, ವೈದ್ಯರು, ಶುಶ್ರೂಷಕಿಯರು ಹೀಗೆ ಕೊರೋನಾ ವಾರಿಯರ್ಸ್ ಎಂದು ಹೆಮ್ಮೆಯಿಂದ ಕರೆಯಲ್ಪಡುವವರಿಗೂ ಕೊರೋನಾ ಸೋಂಕು ಕಾಡುತ್ತಿದೆ.
ಇದು ಆಡಳಿತ ವ್ಯವಸ್ಥೆಯ ನಿರ್ಲಜ್ಜ ನಿರ್ಲಕ್ಷ್ಯದ ದ್ಯೋತಕ ಎನಿಸುವುದಿಲ್ಲವೇ ? ಮುಂಚೂಣಿಯಲ್ಲಿ ನಿಂತು ಕೊರೋನಾ ಹರಡದಂತೆ ಎಚ್ಚರ ವಹಿಸುವ ಸಿಬ್ಬಂದಿಗೆ ಸೂಕ್ತ ರಕ್ಷಣಾ ಉಪಕರಣಗಳನ್ನು ಒದಗಿಸಿದ್ದಲ್ಲಿ ಈ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿತ್ತಲ್ಲವೇ ?
ತನ್ನೊಳಗಿನ ಕೊರತೆಯ ಪರಿಜ್ಞಾನ ಇಲ್ಲದಿದ್ದರೆ ಅಥವಾ ಇದ್ದರೂ ಸ್ವೀಕರಿಸುವ ಮನಸ್ಥಿತಿ ಇಲ್ಲದಿದ್ದರೆ ಯಾವುದೇ ವ್ಯಕ್ತಿಯೂ ಊರ್ಜಿತವಾಗುವುದಿಲ್ಲ. ಇದು ಒಂದು ದೇಶದ ಸರ್ಕಾರ, ಆಡಳಿತ ವ್ಯವಸ್ಥೆಗೂ ಅನ್ವಯಿಸುತ್ತದೆ. ಭಾರತ ಸರ್ಕಾರ ಇದೇ ಪ್ರಮಾದ ಎಸಗುತ್ತಿದೆ.
ಕೊರೋನ ವೈರಾಣುವಿನ ಸಮುದಾಯ ಪ್ರಸರಣ ಮಾರ್ಚ್ ತಿಂಗಳಲ್ಲೇ ಅರಂಭವಾಗಿದೆ ಎಂದು ಹಲವಾರು ವೈದ್ಯಕೀಯ ತಜ್ಞ ವರದಿಗಳು ಹೇಳುತ್ತಲೇ ಇದ್ದರೂ ನಿರಾಕರಿಸುತ್ತಲೇ ಇರುವ ಸರ್ಕಾರ , ಸಮುದಾಯ ಪ್ರಸರಣದ ವಿರುದ್ಧ ಹೋರಾಡಲು ಅಗತ್ಯವಾದ ರೂಪುರೇಷೆಗಳನ್ನೂ ರೂಪಿಸದೆ ಜನಸಾಮಾನ್ಯರನ್ನು ಅಪಾಯದ ಕೂಪಕ್ಕೆ ತಳ್ಳುತ್ತಿದೆ. ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಇತರೆಡೆಗೆ ಹೋಲಿಸಿದರೆ ಸಾವಿನ ಪ್ರಮಾಣ, ಸೋಂಕಿನ ಪ್ರಮಾಣ ಕಡಿಮೆ ಇದೆ ಎಂದು ಬೆನ್ನುತಟ್ಟಿಕೊಳ್ಳಲು ಇದು ಐಪಿಎಲ್ ಕ್ರಿಕೆಟ್ ಪಂದ್ಯ ಅಲ್ಲ, ಅಲ್ಲವೇ ?
ಇದು ಅಮಾಯಕ ಜೀವಗಳ ಪ್ರಶ್ನೆ. ಅಸಹಜ ಸಾವಿನ ಪ್ರಶ್ನೆ. 9000 ಸಾವುಗಳು ಸಾವೇ ಅಲ್ಲ ಎನ್ನಲಾಗುವುದೇ ? ಒಂದು ಜೀವ ಅಸಹಜವಾಗಿ ಅಸುನೀಗಿದರೂ ಮಿಡಿಯುವ ಮನಸು ಮಾತ್ರ ಸಂಯಮಶೀಲ ಸಮಾಜವನ್ನು ಕಟ್ಟಲು ಸಾಧ್ಯ, ಸಂವೇದನಾಶೀಲ ಸಮಾಜವನ್ನು ರೂಪಿಸಲು ಸಾಧ್ಯ. ಒಂದು ಚುನಾಯಿತ ಸರ್ಕಾರಕ್ಕೂ ಇದೇ ವ್ಯವಧಾನ, ಸಂಯಮ, ಸಂವೇದನೆ ಇರಬೇಕು.
ಸಾವನ್ನು ಲೆಕ್ಕಿಸದ ಸರ್ಕಾರ ಮಾರುಕಟ್ಟೆಯ ದಲ್ಲಾಳಿಯಂತೆ ಕಾಣುತ್ತವೆ. ಭಾರತದಂತಹ ಸಮಾಜದಲ್ಲಿ ಇಂತಹ ಸರ್ಕಾರಗಳು ಇನ್ನೂ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಪ್ರಾಥಮಿಕ ಆರೋಗ್ಯ ರಕ್ಷಣೆಯ ಪರಿವೆಯೇ ಇಲ್ಲದ ಅಸಂಖ್ಯಾತ ಜನಸಮುದಾಯ ನಮ್ಮ ನಡುವೆ ಇದೆ ಏಕೆಂದರೆ ಈ ಅರಿವು ಮೂಡಿಸುವ ಪ್ರಯತ್ನವನ್ನು ನಮ್ಮ ಸರ್ಕಾರಗಳು ಮಾಡಿಯೇ ಇಲ್ಲ.
ಇಂತಹ ಒಂದು ಸಂದರ್ಭದಲ್ಲಿ ನಾವು ಕೊರೋನಾದಂತಹ ಮಾರಣಾಂತಿಕ ಪಿಡುಗು ಎದುರಿಸುತ್ತಿದ್ದೇವೆ. ಮೂರು ತಿಂಗಳ ಅವಧಿಯಲ್ಲಿ ಜನಸಾಮಾನ್ಯರೂ ಸಾಕಷ್ಟು ಪಾಠ ಕಲಿಯಬಹುದಿತ್ತು. ಆದರೆ ಸುಶಿಕ್ಷಿತರೂ ಪಾಠ ಕಲಿತಿಲ್ಲ ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ. ಸಭೆ, ಸಮಾರಂಭ, ಕೌಟುಂಬಿಕ ಸಂಭ್ರಮಗಳಿಗೆ ಸೇರುವ ಜನದಟ್ಟಣೆಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಜಿಲ್ಲಾಧಿಕಾರಿಗಳೋ, ಪೊಲೀಸ್ ಆಯುಕ್ತರೋ ಶಿಫಾರಸು ಮಾಡಿಬಿಟ್ಟರೆ ಎಷ್ಟು ಜನರನ್ನು ಬೇಕಾದರೂ ಜಮಾಯಿಸಬಹುದು ಎನ್ನುವ ಭ್ರಷ್ಟ ಚಿಂತನೆಯ ನಡುವೆಯೇ ಈ ಸಮಾರಂಭಗಳು ನಡೆಯುತ್ತಿವೆ. ಆದರೆ ಕೊರೋನಾ ವೈರಾಣುವಿಗೆ ಇದರ ಪರಿಜ್ಞಾನ ಇರುವುದಿಲ್ಲ. ಮದುವೆ ಮನೆಯಲ್ಲಿ ಹರಡುವ ವೈರಾಣು ಧನ್ವಂತರಿ ಹೋಮದ ನಡುವೆಯೂ ಹರಡುತ್ತದೆ ರಾಜಕೀಯ ಸಭೆಯಲ್ಲೂ ಹರಡುತ್ತದೆ. ಬಹುಪಾಲು ಜನರು ಮಾಸ್ಕ್ ಧರಿಸುವುದನ್ನು ಮರೆತಿದ್ದಾರೆ, ದೈಹಿಕ ಅಂತರ ಸಂಪೂರ್ಣ ಇಲ್ಲವಾಗಿದೆ.
ಇದನ್ನು ಜಾರಿಗೊಳಿಸುವುದು ಹೇಗೆ ? ಇದು ಸರ್ಕಾರದ ಮುಂದಿರುವ ಸವಾಲು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದಾಗಿ ಘೋಷಿಸಲಾಗಿದ್ದರೂ ಇದನ್ನು ಗಮನಿಸುವವರಾರು ? ಅಷ್ಟು ಪೊಲೀಸ್ ಸಿಬ್ಬಂದಿ ನಮ್ಮಲ್ಲಿದೆಯೇ ? ಲಾಕ್ ಡೌನ್ ಅವಧಿಯಲ್ಲಿ ಲಭ್ಯವಿದ್ದ ಪೊಲೀಸ್ ಸಿಬ್ಬಂದಿ ಈಗ ತಮ್ಮ ನಿತ್ಯ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.
ಆಸ್ಪತ್ರೆಗಳಲ್ಲೂ ಈ ನಿಯಮಗಳ ಉಲ್ಲಂಘನೆಯಾಗುತ್ತಿರುವುದನ್ನು ಗಮನಿಸಬಹುದು. ಇಲ್ಲಿ ಜನತೆಗೆ ಬುದ್ಧಿ ಇಲ್ಲ ಎನ್ನುವುದೊಂದೇ ಮಂತ್ರವಾಗಬಾರದು. ಜನರಲ್ಲಿ ವಿಶ್ವಾಸ ಮೂಡಿಸುವಂತಹ ಜಾಗೃತಿಯ ಪ್ರಯತ್ನಗಳು ನಡೆಯುತ್ತಿವೆಯೇ ಎಂದು ಯೋಚಿಸಬೇಕಾಗುತ್ತದೆ. ನಿಯಮ ಪಾಲನೆಯನ್ನು ಗಮನಿಸುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆಯೇ ಎನ್ನುವುದೂ ಮುಖ್ಯವಾಗುತ್ತದೆ.
ಸರ್ಕಾರಕ್ಕೆ ಎಲ್ಲೆಡೆಯೂ ಕಾಡುವುದು ಸಿಬ್ಬಂದಿಯ ಕೊರತೆ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಕೊರತೆಯೇ ತೀವ್ರವಾಗಿದೆ. ಇಡೀ ಭಾರತದಲ್ಲಿ ಒಟ್ಟು 19 ಲಕ್ಷ ಆಸ್ಪತ್ರೆಯ ಹಾಸಿಗೆಗಳಿವೆ, 95 ಸಾವಿರ ಐಸಿಯು ಹಾಸಿಗೆಗಳಿವೆ, 47 ಸಾವಿರ ವೆಂಟಿಲೇಟರ್ ಗಳಿವೆ. ಇವುಗಳ ಪೈಕಿ ಶೇ 60ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿವೆ. ಶೇ 74ರಷ್ಟು ವೈದ್ಯರು ನಗರಗಳಲ್ಲಿನ ಶೇ 28ರಷ್ಟು ಜನತೆಗೆ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನುಳಿದ ಶೇ 26ರಷ್ಟು ವೈದ್ಯರು ಶೇ 72 ಜನರ ಕಾಳಜಿ ವಹಿಸಬೇಕಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ. ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಬ್ಬಂದಿಯ ಸಂಖ್ಯೆ ಅವಶ್ಯಕತೆಗೆ ಅನುಗುಣವಾಗಿಲ್ಲ ಎನ್ನುವುದು ಸ್ಪಷ್ಟ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೊರೋನಾ ಸಂದರ್ಭದಲ್ಲೂ ಯಾವುದೇ ಪ್ರಯತ್ನ ನಡೆಯದಿರುವುದು ಈ ದೇಶದ ದುರಂತ.
ಈ ಗೊಂದಲಗಳು ಮತ್ತು ನಿರಾಕರಣೆಯ ರಾಜಕಾರಣದ ನಡುವೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಜನಸಾಮಾನ್ಯರ ಆತಂಕಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸದ ನಮ್ಮ ದೇಶದ ಆಡಳಿತ ವ್ಯವಸ್ಥೆ ಕೊರೊನಾ ಸಂದರ್ಭದಲ್ಲೂ ಇದೇ ನೀತಿ ಅನುಸರಿಸುತ್ತಿದೆ. ಗಡಿ ಸಂಘರ್ಷ, ಯುದ್ಧೋನ್ಮಾದ, ಆತ್ಮನಿರ್ಭರತೆ ಇವೆಲ್ಲದರ ನಡುವೆಯೂ ನಾವು ಒಂದು ವಿನಾಶಕಾರಿ ವೈರಾಣುವಿನೊಡನೆ ಸೆಣಸಬೇಕಿದೆ.
ಹೆಚ್ಚುತ್ತಿರುವ ಸಾವು, ಸೋಂಕಿತರ ಸಂಖ್ಯೆ ಜನಸಾಮಾನ್ಯರನ್ನು ಆತಂಕಕ್ಕೆ ದೂಡಿದೆ. ಈ ಆತಂಕದ ನಡುವೆಯೇ ಜನರು ಬದುಕು ಸವೆಸಬೇಕಿದೆ. ಬಹುಶಃ ಶಾಲಾ ಮಕ್ಕಳೂ ಈ ಸನ್ನಿವೇಶವನ್ನು ಎದುರಿಸಲಿದ್ದಾರೆ. ಒಂದು ದೇಶದ ಆರೋಗ್ಯ ವ್ಯವಸ್ಥೆ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆಗೆ ಕೊರೋನಾ ಉತ್ತರ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.
ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ2 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ2 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

