ದಿನದ ಸುದ್ದಿ
ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ

ಸುದ್ದಿದಿನ,ದಾವಣಗೆರೆ:ಇತ್ತೀಚಿನ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೊಟ್ಟ ಮಾತಿನಂತೆ ನಡೆದ ಚಿತ್ರ ನಟ ದರ್ಶನ್ ಅವರು ಮಂಗಳವಾರ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಕುದುರೆಯ ತಡಿ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ಹುಬ್ಬಳ್ಳಿಯಲ್ಲಿ ರಾಬರ್ಟ್ ಸಿನಿಮಾದ ಪ್ರೀ ರಿಲೀಸಿಂಗ್ ಇವೆಂಟ್ ಮುಗಿಸಿದ ನಟ ದರ್ಶನ್ ದಾವಣಗೆರೆಗೆ ಭೇಟಿ ನೀಡಿ ಮಲ್ಲಿಕಾರ್ಜುನ ಅವರನ್ನು ಸೌಹಾರ್ದ ಮಾತುಕತೆ ನಡೆಸಿದರು.
ಕಾಂಗ್ರೆಸ್ ನಾಯಕ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಒಡೆತನದ ಬಾಪೂಜಿ ಅತಿಥಿ ಗೃಹಕ್ಕೆ ತೆರಳಿದ ವೇಳೆ ನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ರವಿಶಂಕರ್ ಕೂಡ ಜೊತೆಗಿದ್ದರು.
ಮೊದಲಿನಿಂದಲೂ ಎಸ್.ಎಸ್.ಮಲ್ಲಿಕಾರ್ಜುನ್ಗೆ ನಟ ದರ್ಶನ್ ಆಪ್ತರಾಗಿದ್ದು, ಕಳೆದ ಬಾರಿ ದರ್ಶನ್‌ಗೆ ಮಲ್ಲಿಕಾರ್ಜುನ್ ಕುದುರೆಯೊಂದನ್ನ ಉಡುಗೊರೆಯಾಗಿ ನೀಡಿದ್ದರು.
ಅಮೇರಿಕಾದಿಂದ ತಂದ್ದಿದ ಕುದುರೆಯ ತಡಿ (ಜೀನ್ )ನನ್ನು ಉಡುಗೊರೆಯಾಗಿ ನೀಡಿದರು.ನಂತರ ಮಲ್ಲಿಕಾರ್ಜುನ್ ರವರ ಒಡೆತನದ ಮುದೋಳದ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 20 ಲಕ್ಷ ಟನ್ ಕಬ್ಬ ಅರೆದಿದ್ದು, ಮಲ್ಲಿಕಾರ್ಜುನ ಅವರನ್ನು ದರ್ಶನ್ ಅವರು ರೈತರ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಬಿ.ಕೆ.ಪರಶುರಾಮ ಸೇರಿದಂತೆ ಮಲ್ಲಿಕಾರ್ಜುನ ಮತ್ತು ದರ್ಶನ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಧಿಕಾರಿಗಳ ಮೇಲೆ ಸುಳ್ಳು ಕೇಸು ದಾಖಲಿಸಿದರೆ 3 ವರ್ಷಗಳ ಜೈಲು ಶಿಕ್ಷೆ : ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ

ಸುದ್ದಿದಿನ,ದಾವಣಗೆರೆ:ಸ್ವಾರ್ಥಕ್ಕಾಗಿ ಕೆಲ ವ್ಯಕ್ತಿ ಹಾಗೂ ಸಂಘಟನೆಗಳು, ಅಧಿಕಾರಿಗಳ ಮೇಲೆ ಸುಳ್ಳು ಕೇಸು ದಾಖಲಿಸುತ್ತಿರುವುದು ಭ್ರಷ್ಟಾಚಾರ ಆರೋಪ ಪ್ರಕರಣಗಳ ವಿಚಾರಣೆ ವೇಳೆ ಲೋಕಾಯುಕ್ತ ಗಮನಕ್ಕೆ ಬರುತ್ತಿವೆ. ಲೋಕಾಯುಕ್ತ ಕಾಯ್ದೆ ಸೆಕ್ಷನ್ 20 ಅಡಿ ಅಧಿಕಾರಿಗಳ ಮೇಲೆ ಸುಳ್ಳು ಕೇಸು ದಾಖಲಿಸಿದರೆ 6 ತಿಂಗಳಿನಿಂದ 3 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ, ಗುರುವಾರ ಕರ್ನಾಟಕ ಲೋಕಾಯುಕ್ತ ವತಿಯಿಂದ ಆಯೋಜಿಸಲಾದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಪ್ರಕರಣಗಳ ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಅಧಿಕಾರಿಗಳು ಭಷ್ಟಾಚಾರದಲ್ಲಿ ತೊಡಗಿರುವ ಹಲವಾರು ಪ್ರಕರಣಗಳು ಸತ್ಯಾಂಶವೂ ಇದೆ. ಆದರೆ ಕೆಲ ವ್ಯಕ್ತಿಗಳು ಸ್ವಾರ್ಥಕ್ಕಾಗಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಇದನ್ನು ಲೋಕಾಯುಕ್ತ ಸಹಿಸುವುದಿಲ್ಲ. ಅಧಿಕಾರಿಗಳನ್ನು ಬೆದರಿಸಲು ಮಾಹಿತಿ ಹಕ್ಕು ಹಾಗೂ ಲೋಕಾಯುಕ್ತ ಕಾಯ್ದೆಯ ದುರುಪಯೋಗ ಮಾಡಿಕೊಂಡ ಪ್ರಕರಣಗಳು ನಮ್ಮ ಮುಂದಿವೆ. ವೈಕ್ತಿಯೋರ್ವ 5 ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿರುವುದು ವಿಚಾರಣೆಯಲ್ಲಿ ಕಂಡುಬಂದಿತ್ತು. ಪ್ರಕರಣದ ತೀರ್ಪಿನಲ್ಲಿ ವ್ಯಕ್ತಿಗೆ ಕಠಿಣ ಎಚ್ಚರಿಕೆ ನೀಡಿ, ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ನ್ಯಾ.ಬಿ.ವೀರಪ್ಪ ತಿಳಿಸಿದರು.
ಭ್ರಷ್ಟರ ಸಂಹಾರಕ್ಕಾಗಿ ಲೋಕಾಯಕ್ತ
ಕರ್ನಾಟಕ ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯಾಗಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮುಲಾಜಿಗೆ ಬಿದ್ದು ಕೆಲಸ ಮಾಡುತ್ತಿಲ್ಲ. ಭ್ರಷ್ಟರ ಸಂಹಾರಕ್ಕಾಗಿ ಲೋಕಾಯಕ್ತ ಸಂಸ್ಥೆ ಅವಿರತ ಪ್ರಯತ್ನ ಮಾಡುತ್ತಿದೆ. ಉಪಲೋಕಾಯುಕ್ತನಾಗಿ ನಿಯುಕ್ತಿಯಾದ ಮೇಲೆ ನನ್ನ ಸಂಪೂರ್ಣ ಆಸ್ತಿ ವಿವರವನ್ನು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದೇನೆ. ಎಲ್ಲರೂ ತಮ್ಮ ಆಸ್ತಿ ವಿವರವನ್ನು ಪ್ರಕಟಿಸಬೇಕು. ಅಧಿಕಾರಿಗಳನ್ನು ಬೆಂಗಳೂರಿನ ಲೋಕಾಯಕ್ತ ಕಚೇರಿ ಕರೆಯಿಸಿ ವಿಚಾರಣೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ಇಬ್ಬರು ಉಪಲೋಕಾಯುಕ್ತರು ಸೇರಿ ಎಲ್ಲಾ ಜಿಲ್ಲೆಗಳನ್ನು ಹಂಚಿಕೊಂಡು, ಪ್ರತಿ ಜಿಲ್ಲೆಗೆ 3 ದಿನಗಳ ಪ್ರವಾಸ ಕೈಗೊಂಡು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸಿ, ವಿಲೆ ಮಾಡಲು ಕ್ರಮ ವಹಿಸಲಾಗಿದೆ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.
ಆತಿಥ್ಯ ಸ್ವೀಕರಿಸಲು ಜಿಲ್ಲೆಗೆ ಆಗಮಿಸಿಲ್ಲ
ಬೆಂಗಳೂರಿನಿಂದ ಲೋಕಾಯುಕ್ತ ಅಧಿಕಾರಿಗಳ ತಂಡವನ್ನು ಕರೆದುಕೊಂಡು ಸ್ವಂತ ವಾಹನದಲ್ಲಿ ದಾವಣಗೆರೆ ಜಿಲ್ಲೆಗೆ ಆಗಮಿಸಿದ್ದೇನೆ. ಅಧಿಕಾರಿಗಳು ನೀಡುವ ಆತಿಥ್ಯ ಸ್ವೀಕರಿಸಲು ಜಿಲ್ಲೆಗೆ ಆಗಮಿಸಿಲ್ಲ. ಶಿಷ್ಟಾಚಾರದ ಅನುಸಾರ ಅಧಿಕಾರಿಗಳು ಭದ್ರತೆ ನೀಡಿದ್ದಾರೆ. ಲೋಕಾಯುಕ್ತದಲ್ಲಿ ಕೆಲಸ ಮಾಡುವ ನಮಗೆ ಜೀವ ಬೆದರಿಕೆಯೂ ಇದೆ. ನಗರದ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿ.ಪಂ.ಸಿಇಓ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಭದ್ರತಾ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಮ್ಮ ವಾಹನಗಳಲ್ಲಿ ಸಂಚರಿಸಿದ್ದಾರೆ.
64 ವರ್ಷದ ನಾನು ನಡೆದುಕೊಂಡು ಕಚೇರಿಗಳಿಗೆ ಭೇಟಿ ನೀಡುವುದು ಸಾಧ್ಯವಿಲ್ಲ. ಹಾಗಾಗಿ ವಾಹನ ಬಳಿಸಿ ಸಂಚರಿಸಿದ್ದೇನೆ. ಇದು ದುಂದುವೆಚ್ಚ ಆಡಂಬರದ ವಿಷಯವಲ್ಲ. ಯಾವುದೇ ಕಚೇರಿ ಭೇಟಿಯ ವೇಳೆ ಅಧಿಕಾರಿಗಳು ನೀಡುವ ನೀರನ್ನು ಸಹ ಕುಡಿಯದೇ, ಪರಿಶೀಲನೆ ನಡೆಸಿದ್ದೇನೆ. ಅಕ್ರಮಗಳನ್ನು ಕಂಡು ಬಂದಲ್ಲಿ ಮುಲಾಜು ಇಲ್ಲದೇ ಸ್ವಂ ಪ್ರೇರಿತ ಪ್ರಕರಣ ದಾಖಲಿಸಿದ್ದೇನೆ. ಸಾರ್ವಜನಿಕರಿಗೆ ಲೋಕಾಯುಕ್ತ ಸಂಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗದಂತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.
ಶೇ.90 ರಷ್ಟು ವಿದ್ಯಾವಂತರಿಗೆ ಕಾನೂನು ಅರಿವಿಲ್ಲ
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಸಾಕ್ಷರತೆ ಶೇ.18 ರಷ್ಟಿತ್ತು. ಇಂದು ಸಾಕ್ಷರತೆ ಪ್ರಮಾಣ ಶೇ.80 ರಷ್ಟಿದೆ, ಆದರೆ ಸಾಕ್ಷರರಾದ ಶೇ.90 ರಷ್ಟು ವಿದ್ಯಾವಂತರಿಗೆ ಕಾನೂನುಗಳ ಅರಿವಿಲ್ಲ ಎಂದು ನ್ಯಾ.ಬಿ.ವೀರಪ್ಪ ಹೇಳಿದರು. ಹೆಚ್ಚಿನ ಪ್ರಕರಣ, ತಂಟೆ ತಕರಾರುಗಳು ವಿದ್ಯಾವಂತರಿಂದ ಆಗುತ್ತಿವೆ. ಡಾ.ಡಿ.ವಿ.ಗುಂಡಪ್ಪನವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ ಮುಂದೊಂದು ದಿನ ಈ ದೇಶ ವಿದ್ಯಾವಂತ ಮೋಸಗಾರರಿಂದಲೇ ಅಧೋಗತಿ ತಲುಪುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೋವಿಡ್ ನಂತರ ಭ್ರಷ್ಟಾಚಾರ ಹೆಚ್ಚಳ
ಕೋವಿಡ್-19 ಬಂದ ಸಂದರ್ಭದಲ್ಲಿ ಇಡಿ ವಿಶ್ವವೇ ತಲ್ಲಿಣಿಸಿ ಹೋಗಿತ್ತು. ಜನರಿಗೆ ಜೀವ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ದೇಶದಲ್ಲಿ ವಕೀಲರು,ಪೊಲೀಸರು, ವೈದ್ಯರು, ಸೇರಿದಂತೆ ಸಾವಿರಾರು ಜನರು ಕೋವಿಡ್‌ನಿಂದ ಮೃತ ಪಟ್ಟರು. ಕೋವಿಡ್ ವೈರಸ್ ಜನರಿಗೆ ನಿಜ ಬದುಕಿನ ಅನಾವರಣೆ ಮಾಡಿ, ಬುದ್ದಿ ಕಲಿಸಿದೆ, ಉತ್ತಮ ಮಾರ್ಗದಲ್ಲಿ ಜೀವಿಸಲು ಕಾರಣವಾಗಿದೆ ಎಂದು ಭಾವಿಸಿದ್ದಾಗಿ ನ್ಯಾ.ವಿ.ವೀರಪ್ಪ ಹೇಳಿದರು. ಆದರೆ, 2021ರ ನಂತರ ನಾಯಿ ಬಾಲ ಡೊಂಕು ಎಂಬಂತೆ ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಸ್ವಾರ್ಥಿ ಮನುಷ್ಯನಿಂದ ಪ್ರಕೃತಿ ನಾಶ
ಸ್ವಾರ್ಥಿಯಾದ ಮನುಷ್ಯನಿಂದ ನಿಸ್ವಾರ್ಥಿಯಾದ ಗಿಡಮರಗಳು, ಪ್ರಾಣಿ ಪಕ್ಷಿಗಳು ಸೇರಿದಂತೆ ಪ್ರಕೃತಿಯ ನಾಶವಾಗುತ್ತಿದೆ. ಇದರಿಂದ ಪ್ರಾಕೃತಿಕ ಅವಘಡಗಳು ಸಂಭವಿಸುತ್ತಿವೆ. ಪ್ರಾಣಿ ಹಾಗೂ ಮನುಷ್ಯ ನಡುವೆ ಸಂಘರ್ಷ ಹೆಚ್ಚಾಗಿದೆ. ಜಿಲ್ಲೆಯ ಗಣಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಪರವಾನಿಗೆ ಪಡೆದ ಪ್ರದೇಶಕ್ಕಿಂತ ಹೆಚ್ಚಿನ ಜಾಗದಲ್ಲಿ ಗಣಿಗಾರಿಕೆ ನಡೆಸಲಾಗಿದೆ. ಇದಕ್ಕೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ಸ್ವಯಂ ಪ್ರೇರಿತ ಲೋಕಾಯುಕ್ತ ದೂರು ದಾಖಲಿಸಿಕೊಳ್ಳುವುದಾಗಿ ನ್ಯಾ.ಬಿ.ವೀರಪ್ಪ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಗ್ರರನ್ನು ಸದೆಬಡಿಯಲು ಕೇಂದ್ರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಪಹಲ್ಗಾಮ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಭರತ್ ಭೂಷಣ್ ಅವರ ಪಾರ್ಥಿವ ಶರೀರವನ್ನು ಮತ್ತಿಕೆರೆಯ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಕೇಂದ್ರ ಸಚಿವ ವಿ. ಸೋಮಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಮಧ್ಯಾಹ್ನದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಮ್ಮ ಸರ್ಕಾರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ, ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾಗಿರುವ ಮಂಜುನಾಥ ರಾವ್ ಹಾಗೂ ಭರತ್ ಭೂಷಣ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಭಯೋತ್ಪಾದಕ ದಾಳಿಯಂತಹ ಹೀನ ಕೃತ್ಯದಲ್ಲಿ ಅಮಾಯಕ ಜೀವಗಳು ಬಲಿಯಾಗಿರುವುದು ಅತ್ಯಂತ ದುಃಖದ ವಿಚಾರ. ಈ ದಾಳಿಯಲ್ಲಿ ಮಡಿದ ಕನ್ನಡಿಗರ ಅಂತ್ಯಸಂಸ್ಕಾರವನ್ನು ಗೌರವದಿಂದ ನೆರವೇರಿಸಬೇಕಿರುವುದು ನಮ್ಮ ಸರ್ಕಾರದ ಕರ್ತವ್ಯವೆಂದು ಭಾವಿಸಿ, ಈ ನಿರ್ಣಯ ತೆಗೆದುಕೊಂಡಿದ್ದೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅರಿವಿನ ವಿಸ್ತಾರದ ಪ್ರಕ್ರಿಯೆಯೇ ಸಂಶೋಧನೆ : ಡಾ.ಚಿತ್ತಯ್ಯ

ಸುದ್ದಿದಿನ,ಚನ್ನಗಿರಿ:ಭೂತದ ಮಾಹಿತಿ ಕೆದಕುತ್ತಾ ವರ್ತಮಾನಕ್ಕೆ ಹೊಸ ಹೊಳಹು ನೀಡುವ ಕ್ರಮ ಮತ್ತು ಅರಿವಿನ ವಿಸ್ತಾರದ ಪ್ರಕ್ರಿಯೆಯನ್ನೇ ನಾವು ಸಂಶೋಧನೆ ಎಂದು ಕರೆಯುತ್ತೇವೆ ಎಂದು ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಚಿತ್ತಯ್ಯ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕನ್ನಡ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ‘ಸಂಶೋಧನಾ ವಿಧಾನಗಳು’ ವಿಷಯ ಕುರಿತು ಅವರು ಮಾತನಾಡಿದರು.
ಏನು?ಏಕೆ?ಹೇಗೆ?ಎಲ್ಲಿ?ಯಾವಾಗ? ಎಂಬ ಪ್ರಶ್ನೆಗಳಿಗೆ ಸಂಶೋಧನೆಯ ಮೂಲಕ ನಾವು ಉತ್ತರ ಕಂಡುಕೊಳ್ಳಬಹುದು. ನಮ್ಮಲ್ಲಿನ ಪ್ರಶ್ನಾ ಮನೋಭಾವವು ಸಂಶೋಧನಾ ದಾರಿ ಎಡೆಗೆ ಕೊಂಡುಯ್ಯುತ್ತದೆ. ಯಾವುದೋ ಒಂದು ವಿಷಯ ನಮ್ಮನ್ನು ಕಾಡುವ ಕ್ರಮವೇ ಸಂಶೋಧನೆ. ಕಾಡಿಸದಿದ್ದರೆ ಅಲ್ಲಿ ಸಂಶೋಧನೆ ಆಗಲಾರದು. ಸಂಶೋಧನೆಗೆ ಅದೊಂದು ಮೆಟ್ಟಿಲಹಾಗೆ ಕಾರ್ಯನಿರ್ವಹಿಸುತ್ತದೆ ಎಂದರು.
ಸಂಶೋಧನ ಮೀಮಾಂಸೆ’ಯು ಡಾಕ್ಟರೇಟ್ ಪದವಿಗಾಗಿ ನಿಬಂಧ ಸಿದ್ಧಪಡಿಸುವ ಮತ್ತು ಸಲ್ಲಿಸುವ ನಾಲ್ಕು ವರ್ಷದ ಮಟ್ಟಿಗೆ ಸಂಶೋಧಕರಿಗಾಗಿ ಸಿದ್ಧಪಡಿಸಿದ ಮಾರ್ಗದರ್ಶಿ ಎಂದು ತಿಳಿಯಬೇಕಾಗುತ್ತದೆ. ಏಕೆಂದರೆ ಪದವಿಯ ಹಂಗಿಲ್ಲದೆ ಸಂಶೋಧನೆಯನ್ನು ಬಾಳಿನ ಮುಖ್ಯ ಉದ್ದೇಶವಾಗಿರಿಸಿಕೊಂಡ ಸಂಶೋಧಕರ ನಡುವಿನ ಸೂಕ್ಷ್ಮ ಗೆರೆಯನ್ನು ರಹಮತ್ ತರೀಕೆರೆ ಗುರುತಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅಮೃತೇಶ್ವರ ಬಿ.ಜಿ ಅವರು ಮಾಡಿದರು. ಉಪನ್ಯಾಸಕ ಡಾ.ಶಕೀಲ್ ಅಹಮ್ಮದ್ ಸ್ವಾಗತಿಸಿದರು. ವಿದ್ಯಾರ್ಥಿ ರೇಣುಕ ನಿರೂಪಿಸಿದರು. ಸೃಷ್ಟಿ ವಂದಿಸಿದರು. ತೇಜು ಆಶಯ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರವಿ, ಸಹಾಯಕ ಪ್ರಾಧ್ಯಾಪಕ ಷಣ್ಮುಕಪ್ಪ ಕೆ.ಎಚ್, ಉಪನ್ಯಾಸಕ ಹನುಮಂತಪ್ಪ, ಗೋವರ್ಧನ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ6 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ ಕಾರ್ಯನಿರ್ವಹಣಾ ಸಮಿತಿ ರಚನೆ
-
ದಿನದ ಸುದ್ದಿ6 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ | ಮೌಲಾನಾ ಅಜಾದ್ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ