Connect with us

ದಿನದ ಸುದ್ದಿ

ದಾವಣಗೆರೆ | ಏಪ್ರಿಲ್-ಮೇ ನಲ್ಲಿ 26 ಬಾಲ್ಯ ವಿವಾಹ ಪ್ರಕರಣಗಳು ದಾಖಲು : ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 26 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 25 ನ್ನು ತಡೆಗಟ್ಟಿ 2 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಎಲ್ಲಾದರೂ ಬಾಲ್ಯ ವಿವಾಹ ಕಂಡು ಬಂದಲ್ಲಿ, ಅಂತಹ ಪೋಷಕರ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಪರಿಶೀಲನಾ ಸಭೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲ್ಯವಿವಾಹ ಒಂದು ಸಾಮಾಜಿಕ ಪಿಡೂಗಾಗಿದ್ದು, ಇದನ್ನು ತಡೆಗಟ್ಟಲು ವ್ಯಾಪಕವಾಗಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳಿಂದ ಬರುವ ಜುಲೈ ತಿಂಗಳಲ್ಲಿ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಅಭಿಯಾನದ ರೀತಿ ಆಯೋಜಿಸಲು ಸೂಚಿಸಿದರು.

ಕಾರ್ಮಿಕರ ಮಕ್ಕಳು, ತಾಂಡಾಗಳಲ್ಲಿ ಮತ್ತು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಕುಟುಂಬಗಳಲ್ಲಿ ಹೆಚ್ಚಾಗಿ ಬಾಲ್ಯ ವಿವಾಹಗಳು ವರದಿಯಾಗುತ್ತಿರುವುದರಿಂದ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಕೂಲಿ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿ, ಬಾಲ್ಯವಿವಾಹ ನಡೆಯದೆ ಇರುವ ಮತ್ತು ಹದಿಹರೆಯದ ಬಾಲಕಿಯರು, ಗರ್ಭಿಣಿ ಆಗದೆ ಇರುವಂತಹ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮಾ. ಕರೆಣ್ಣವರ್ ಮಾತನಾಡಿ ಮಕ್ಕಳ ಬಾಲ್ಯ ವಿವಾಹದಿಂದಾಗುವ ಪರಿಣಾಮಗಳ ಬಗ್ಗೆ ತಿಳಿಸಬೇಕು. ಬಾಲ್ಯ ವಿವಾಹ ಮಾಡುವುದರಿಂದ ಉಂಟಾಗುವ ಕಾನೂನಾತ್ಮಕ ತೊಡಕುಗಳ ಬಗ್ಗೆ ಪೋಷಕರಲ್ಲಿ ಮನವರಿಕೆ ಮಾಡಿಕೊಡಬೇಕೆಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ 2024 ರ ಏಪ್ರಿಲ್, ಮೇ ತಿಂಗಳಲ್ಲಿ ಒಟ್ಟು 26 ದೂರುಗಳು ಬಂದಿದ್ದು, ಅವುಗಳಲ್ಲಿ 25 ಬಾಲ್ಯವಿವಾಹಗಳನ್ನು ತಡೆದು 2 ಪ್ರಕರಣಗಳಲ್ಲಿ ಕೋರ್ಟ್‍ನಿಂದ ತಡೆಯಾಜ್ಞೆ ಪಡೆಯಲಾಗಿದೆ. 1 ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಬಾಲ ನ್ಯಾಯ ಮಂಡಳಿಯಲ್ಲಿ ಹಿಂದಿನ 54, ಹೊಸದಾಗಿ 20 ಸೇರಿ 74, ಇದರಲ್ಲಿ 11 ಖುಲಾಸೆಯಾಗಿವೆ. ಪೋಕ್ಸೊದಡಿ 10 ಪ್ರಕರಣಗಳಿದ್ದು 2 ಖುಲಾಸೆಯಾಗಿ 8 ಬಾಕಿ ಇವೆ. ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ 61 ಹಾಗೂ ಬಾಲಕರ ಬಾಲ ಮಂದಿರದಲ್ಲಿ 32 ಮಕ್ಕಳಿದ್ದಾರೆ. ಇದರಲ್ಲಿ ಅನಾಥ ಮಕ್ಕಳು, ಏಕಪೋಷಕ ಮಕ್ಕಳು, ಇಬ್ಬರು ಪೋಷಕರಿರುವ ಮಕ್ಕಳು ಇದ್ದಾರೆ ಎಂದು ತಿಳಿಸಿದರು.

ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9989346243

ದಿನದ ಸುದ್ದಿ

ಹೊಸ ಮೂರು ಅಪರಾಧ ಕಾಯ್ದೆಗಳು ಇಂದಿನಿಂದ ಜಾರಿ : ಇಲ್ಲಿದೆ ಸಂಪೂರ್ಣ ಮಾಹಿತಿ ; ಮಿಸ್ ಮಾಡ್ದೆ ಓದಿ

Published

on

ಸುದ್ದಿದಿನಡೆಸ್ಕ್:ಹೊಸ ಮೂರು ಅಪರಾಧ ಕಾಯ್ದೆಗಳು ಇಂದಿನಿಂದ ಜಾರಿಗೆ ಬರಲಿದೆ. ಭಾರತೀಯ ನ್ಯಾಯ ಸಂಹಿತಾ-2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ-2023, ಭಾರತೀಯ ಸಾಕ್ಷ್ಯ ಅಧಿನಿಯಮ-2023 ಇಂದಿನಿಂದ ಜಾರಿಗೆ ಬರಲಿದೆ.

ಕಳೆದ ವರ್ಷ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಹೊಸ ಕ್ರಿಮಿನಲ್ ಕಾನೂನುಗಳು ಭಾರತೀಯ ನಾಗರಿಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಕಾನೂನುಗಳು ಎಲ್ಲರಿಗೂ ಹೆಚ್ಚು ಬೆಂಬಲ ನೀಡುವ ಮತ್ತು ಸಮರ್ಥ ನ್ಯಾಯ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿವೆ. ಹೊಸ ಕ್ರಿಮಿನಲ್ ಕಾನೂನುಗಳ ಪ್ರಮುಖ ಘಟನೆಗಳನ್ನು ಆನ್‌ಲೈನ್‌ನಲ್ಲಿ ವರದಿ ಮಾಡುವುದು, ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವುದು ಮತ್ತು ಸಂತ್ರಸ್ತರು ಎಫ್‌ಐಆರ್‌ನ ಉಚಿತ ನಕಲನ್ನು ಪಡೆಯಬಹುದಾಗಿದೆ. ಬಂಧನದ ಸಂದರ್ಭದಲ್ಲಿ, ವ್ಯಕ್ತಿಯು ತನ್ನ ಆಯ್ಕೆಯ ವ್ಯಕ್ತಿಗೆ ಅವರ ಪರಿಸ್ಥಿತಿಯ ಬಗ್ಗೆ ತಿಳಿಸುವ ಹಕ್ಕನ್ನು ಹೊಂದಿರುತ್ತಾನೆ. ಹೊಸ ಕಾನೂನುಗಳು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ತನಿಖೆಗೆ ಆದ್ಯತೆ ನೀಡಿವೆ, ಮಾಹಿತಿಯನ್ನು ದಾಖಲಿಸಿದ ಎರಡು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿದೆ.

ಹೊಸ ಕ್ರಿಮಿನಲ್ ಕಾನೂನುಗಳಲ್ಲಿ, ಫೋರೆನ್ಸಿಕ್ ತಜ್ಞರು ಗಂಭೀರ ಅಪರಾಧಗಳಿಗೆ ಅಪರಾಧದ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಸಾಕ್ಷ್ಯವನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ. ಸಮನ್ಸ್ ಅನ್ನು ಈಗ ವಿದ್ಯುನ್ಮಾನವಾಗಿ ಸಲ್ಲಿಸಬಹುದು, ಕಾನೂನು ಪ್ರಕ್ರಿಯೆಗಳನ್ನು ತ್ವರಿತಗೊಳಿಸಬಹುದು, ದಾಖಲೆಗಳನ್ನು ಕಡಿಮೆ ಮಾಡಬಹುದು ಮತ್ತು ಸಮರ್ಥ ಸಂವಹನಕ್ಕೆ ಆದ್ಯತೆ ನೀಡಲಾಗಿದೆ. ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲು, ವ್ಯವಸ್ಥೆಯಲ್ಲಿ ಸುಗಮ ಪರಿವರ್ತನೆಗಾಗಿ ಪೊಲೀಸ್ ಮತ್ತು ತನಿಖಾ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.

ದೂರದರ್ಶನ ಮತ್ತು ಆಕಾಶವಾಣಿಯ ಸುದ್ದಿ ಬುಲೆಟಿನ್‌ಗಳು, ಕಾರ್ಯಕ್ರಮಗಳು ಮತ್ತು ಚರ್ಚೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಚರ್ಚೆಗಳು ಮತ್ತು ಆಳವಾದ ವಿಶ್ಲೇಷಣೆ ಪ್ರಸಾರ ಮಾಡಲಾಗುತ್ತಿದೆ. ಸಾರ್ವಜನಿಕ ಜಾಗೃತಿ, ಸಂವಾದ ಕಾರ್ಯಕ್ರಮಗಳು, ಮಾಹಿತಿ ವೆಬ್‌ಸೈಟ್‌ಗಳು, ಸಚಿವರ ಮಟ್ಟದ ವೆಬ್‌ನಾರ್‌ಗಳನ್ನು ಸಹ ನಡೆಸಲಾಗಿದೆ. ಹೆಚ್ಚುವರಿಯಾಗಿ, ಶಾಲೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್ ಮಾಡ್ಯೂಲ್‌ಗಳನ್ನು ಕಡ್ಡಾಯವಾಗಿ ಸೇರಿಸುವುದು ಸೇರಿದಂತೆ ಹಲವು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಸಿಎಫ್‌ಐಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ದಿನದ ಚಟುವಟಿಕೆ ಆಯೋಜಿಸಲಾಗಿದೆ. ಇದರಲ್ಲಿ ಗುಂಪು ಚರ್ಚೆಗಳು, ಕಾರ್ಯಾಗಾರಗಳು, ಪ್ರಶ್ನೋತ್ತರ ಅವಧಿಗಳು, ವಿವಿಧ ವಿಷಯಗಳ ಕುರಿತು ರಸಪ್ರಶ್ನೆಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಹೊಸ ಕ್ರಿಮಿನಲ್ ಕಾನೂನುಗಳ ನಿಬಂಧನೆಗಳು. ಈ ಮೂರು ಕ್ರಿಮಿನಲ್ ಕಾನೂನುಗಳ ಪ್ರಾರಂಭದೊಂದಿಗೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಯಿಂದ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹೊಸ ಕಾನೂನು ಬಗ್ಗೆ ಮಾತನಾಡಿದ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಇದರಲ್ಲಿ ನ್ಯಾಯದಾನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮುಂಬೈನಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯ ನಿರ್ವಹಣೆಯಲ್ಲಿ ಭಾರತದ ಪ್ರಗತಿಪರ ಪಥ ಕುರಿತಂತೆ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದರು. ಹಳೆಯ ಕಾನೂನುಗಳು ಶಿಕ್ಷೆ ಬಗ್ಗೆ ಹೆಚ್ಚು ಕೇಂದ್ರೀಕೃತವಾಗಿದ್ದವು. ಇದಕ್ಕೆ ವ್ಯತಿರಿಕ್ತವಾಗಿ ಹೊಸ ಕಾನೂನಿನಲ್ಲಿ ನ್ಯಾಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ.

ಭಾರತೀಯ ನ್ಯಾಯ ಸಂಹಿತಾ-2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ-2023, ಭಾರತೀಯ ಸಾಕ್ಷ್ಯ ಅಧಿನಿಯಮ-2023, ಈ ಮೂರು ಕಾನೂನುಗಳ ಬಗ್ಗೆ ಅರಿವು ಮೂಡಿಸುವ ವಿಶೇಷ ಸಮಾವೇಶಗಳನ್ನು ಮುಂದಿನ ದಿನಗಳಲ್ಲಿಯೂ ಆಯೋಜಿಸುವ ಚಿಂತನೆ ಇದೇ ಎಂದು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಸ್ಕಿ | ಸರ್ಕಾರಿ ಸೇವೆಯ ಜೊತೆಗೆ ಸಮಾಜ ಸೇವೆಗೂ ನಿಂತ ತಹಶೀಲ್ದಾರ್ ಅರಮನೆ ಸುಧಾ

Published

on

ಸುದ್ದಿದಿನ,ಮಸ್ಕಿ:ಕಳೆದ 3 ವರ್ಷದಿಂದ ನಡೆದುಕೊಂಡು ಬರುತ್ತಿರುವ ಅನಾಥ, ವಿಕಲಚೇತನ ಹಾಗೂ ಬಡ ಮಕ್ಕಳ ಆಶ್ರಮ ಆಗಿರುವಂತಹ ಅಭಿನಂದನ್ ಸ್ಫೂರ್ತಿ ಧಾಮದಲ್ಲಿ ಪ್ರಸ್ತುತ 40 ಕ್ಕೂ ಹೆಚ್ಚು ಮಕ್ಕಳನ್ನು ಸಲಹುತ್ತಾ ಅವರಿಗೆ ಉಚಿತ ಊಟ ವಸತಿ ಸಹಿತ ಶಿಕ್ಷಣ ನೀಡಲಾಗುತ್ತಿದೆ.

ಈ ಆಶ್ರಮದ ಮಕ್ಕಳ ವಾಸಕ್ಕಾಗಿ ಇರುವಂತಹ ಕಟ್ಟಡ ಪ್ರಸ್ತುತ ಇರುವಂತ ಸಂಖ್ಯೆಯ ಮಕ್ಕಳ ವಾಸಕ್ಕೆ ಚಿಕ್ಕದಾಗಿದೆ. ಅದಕ್ಕಾಗಿ ಅನ್ನ ಪ್ರಸಾದ ಭವನದ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ನಡೆದ ಭೂಮಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಮಸ್ಕಿ ತಹಶೀಲ್ದಾರ್ ಸುಧಾ ಅರಮನೆ ಅವರು ಮಸ್ಕಿಯ ಶೈಕ್ಷಣಿಕ ಕ್ರಾಂತಿಗೆ ಕಾರಣಗಳಲ್ಲಿ ಅಭಿನಂದನ್ ಸಂಸ್ಥೆಯು ಒಂದಾಗಿದೆ.

ಸಾಮಾಜಿಕ, ಶೈಕ್ಷಣಿಕ, ಪರಸರ ಮತ್ತು ಸ್ವಚ್ಛತೆಯ ಕಾರ್ಯಗಳಲ್ಲಿ ಅವರು ಕೈಗೊಂಡ ಸೇವೆಗಳು ಅಮೋಘವಾಗಿವೆ. ಅವರು ಮಾಡುತ್ತಿರುವ ಈ ಮಕ್ಕಳ ಸೇವೆಗೆ ಮತ್ತೊಂದು ವಿಶೇಷ ಸೇವೆ ಆಗಿರುವ ಅಭಿನಂದನ್ ಸ್ಫೂರ್ತಿ ಧಾಮವು ನಮ್ಮ ಮಸ್ಕಿ ನಗರಕ್ಕೆ ಹೆಮ್ಮೆಯಾಗಿದೆ.

ಇಂತಹ ಸಂಸ್ಥೆಯು ನಿರ್ಮಾಣ ಮಾಡಲು ಮುಂದಾಗಿರುವ ಅನ್ನ ಪ್ರಸಾದ ಭವನದ ಕಾರ್ಯಗಳಿಗೆ ಯಾವುದೇ ತೊಂದರೆ ಉಂಟಾಗದೆ ಯಶಸ್ವಿಯಾಗಿ ಮುಗಿಯಲಿ ಮಕ್ಕಳಿಗೆ ಒಳ್ಳೆಯದನ್ನು ಮಾಡುವ ಇವರ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ಅವರಿಗೆ ನಮ್ಮಿಂದ ಆದಷ್ಟು ಸಹಕಾರ ನೀಡುತ್ತೇವೆ ಎಂದರು.

ಈ ಸಂಧರ್ಭದಲ್ಲಿ ಅಮರಪ್ಪ ಗುಡದೂರ, ಯಲ್ಲಪ್ಪ ಮಾಸ್ಟರ್ ,ಶರಣಬಸವ ವಕೀಲರು, ಬಸವರಾಜ್ ಮಿಟ್ಟಿಮನಿ, ಡಾಕ್ಟರ್ ನಾಗನಗೌಡ, ಶಿವಶಂಕರಪ್ಪ ಹಳ್ಳಿ , ಮಲ್ಲಿಕಾರ್ಜುನ ಕುಚ್ಚಾ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ,ಕಳಕಪ್ಪ ಹಾದಿಮನಿ, ಮಹಾಂತೇಶ ಜಾಫರಮಿಯಾ, ಅರುಣಕುಮಾರ ಶ್ರೇಷಿ, ಮಲ್ಲಿಕಾರ್ಜುನ ಬಡಿಗೇರ್ ಹಾಗೂ ಅಭಿನಂದನಾ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಉಸಿರು

Published

on

ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ

ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ

ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ

ನೆಲದಿಂದುದ್ಭವಿಸಲಿಲ್ಲ, ಸಹಜ ಸೃಷ್ಟಿಯಲ್ಲ, ದೈವಿಕವಲ್ಲ ಪಂಚಭೂತಗಳಿಂದಾದವನಲ್ಲ, ನಾ ಎಂಬುದೇ ಇಲ್ಲ

ಇಹದಲೂ ಪರದಲ್ಲೂ ನನ್ನ ಕುರುಹಿಲ್ಲ ಆಡಂ ಈವರ ವಂಶದ ಕುಡಿಯಲ್ಲ

ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ಕಾಯವಲ್ಲ, ಆತ್ಮವೂ ಅಲ್ಲ, ನಿಶ್ಲೇಷದ ಶೇಷ

ನಾ ಪ್ರೇಮಿಯವ, ಲೋಕವೆರೆಡನೊಂದೇ ಆಗಿ ಕಂಡವ ಕರೆವುದು ಪ್ರೇಮ ನನ್ನ, ಅರಿತುಕೊಳುವುದು ತನ್ನ ತಾ..

ಮೊದಲ, ಕೊನೆಯ, ಹೊರ, ಒಳ
ಎಲ್ಲವೂ ಪ್ರೇಮ, ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು.

ಉಸಿರಾಡು ಮನುಜ.

(ಈ ಕವಿತೆಯನ್ನು ಲಡಾಯಿ ಪ್ರಕಾಶನ ಗದಗ ಇವರು ಪ್ರಕಟಿಸಿರುವ ‘ಉರಿಯ ಕುಡಿಯ ನಟ್ಟ ನಡುವೆ‘ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಜಲಾಲುದ್ದೀನ್ ರೂಮಿಯ ಕವಿತೆಗಳನ್ನು ಕನ್ನಡಕ್ಕೆ ಡಾ.ಎಚ್.ಎಸ್. ಅನುಪಮ ಅವರು ಅನುವಾದಿಸಿರುವ ಕೃತಿ ಇದಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending