ದಿನದ ಸುದ್ದಿ
ದಾವಣಗೆರೆ ಜಿ.ಪಂ ಸಾಮಾನ್ಯ ಸಭೆ | ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವಂತೆ ಸದಸ್ಯರ ಒತ್ತಾಯ
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳವನ್ನು ಖರೀದಿಸುವಂತೆ ಹಾಗೂ ಪಡಿತರ ವಿತರಣೆಯಲ್ಲಿ(ಪಿಡಿಎಸ್) ಮೆಕ್ಕಜೋಳವನ್ನು ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಇವರ ಅಧ್ಯಕ್ಷತೆಯಲ್ಲಿ ಇಂದು ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಡಿ.ಜಿ.ವಿಶ್ವನಾಥ್ ಮಾತನಾಡಿ, ಜಿಲ್ಲೆಯ ಮುಕ್ಕಾಲು ಭಾಗದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ.
ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ರೈತರು ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದು, ಪ್ರತಿ ಕ್ವಿಂಟಾಲ್ಗೆ ಸುಮಾರು ರೂ.500 ನಷ್ಟ ಅನುಭವಿಸುವಂತಾಗಿದೆ. ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವಾಗಿದ್ದು, ರೈತರು ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಆದ ಕಾರಣ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಸರ್ಕಾರದ ಮೇಲೆ ಒತ್ತಡ ತಂದು ಅವಕಾಶ ಮಾಡಿಕೊಡಬೇಕು ಎಂದರು.
ಸದಸ್ಯರಾದ ಬಸವರಾಜಪ್ಪ ಮಾತನಾಡಿ, ಮೆಕ್ಕೆಜೋಳಕ್ಕೆ ದರ ನಿಗದಿಪಡಿಸಿ ಎಪಿಎಂಸಿ ಆವರ್ತನಿಧಿಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು ಎಂದರು.
ಸದಸ್ಯರಾದ ಎ.ಆರ್. ಮಹೇಶ್ ಮಾತನಾಡಿ, ಕೇಂದ್ರ ಸರ್ಕಾರ ತಂದಿರುವ ಎಪಿಎಂಸಿ ತಿದ್ದುಪಡಿಯನ್ನು ಜನರು ಒಪ್ಪುತ್ತಿಲ್ಲ. ನಮ್ಮ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇರುವುದರಿಂದಲೇ ರೈತರ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದಾಗ ಸದಸ್ಯರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು.
ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ಕೇಂದ್ರ ನೀತಿ ಜಿಲ್ಲಾ ಪಂಚಾಯತ್ ವ್ಯಾಪ್ತಿ ಮೀರಿದ್ದಾಗಿದ್ದು, ನಮ್ಮ ವ್ಯಾಪ್ತಿಗೆ ಸಂಬಂಧಿಸಿದ ಚರ್ಚೆ ಮಾಡಿದರೆ ಒಳಿತು ಎಂದು ಸಲಹೆ ನೀಡಿದರು.
ಇದನ್ನೂ ಓದಿ | ಕೃಷಿ ಸಿಂಚಾಯಿ ಯೋಜನೆ | ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿ ಜಿಲ್ಲೆಯಲ್ಲಿನ ಮೆಕ್ಕೆಜೋಳ ಉತ್ಪಾದನೆ ಕುರಿತು ಮಾಹಿತಿ ಪಡೆದು ಜಿಲ್ಲಾಧಿಕಾರಿಗಳು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 5.5 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆ ಇದ್ದು, ರೂ.1825 ಮಾರುಕಟ್ಟೆ ದರ ನಿಗದಿಪಡಿಸಲಾಗಿದೆ.
ಆದರೆ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚನ ಪೂರೈಕೆ ಇರುವುದರಿಂದ ದರ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬಳಕೆ ಮಾಡುವ ಕೈಗಾರಿಕೋದ್ಯಮಿಗಳನ್ನು ಕರೆದು ಸಭೆ ನಡೆಸಿ, ಮಾರುಕಟ್ಟೆ ದರದಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು.
ಮೊದಲಿನಿಂದಲೂ ಮೆಕ್ಕೆಜೋಳ ಪಡಿತರ (ಪಿಡಿಎಸ್-ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಂ) ವಾಗಿ ಪಡಿತರ ಅಂಗಡಿಗಳಲ್ಲಿ ವಿತರಣೆಯಾಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಆದ ಕಾರಣ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಇದನ್ನು ಖರೀದಿಸುತ್ತಿಲ್ಲ. ಆದರೂ ಜಿಲ್ಲಾಡಳಿತದ ವತಿಯಿಂದ ಪ್ರಸ್ತಾವನೆ ಹೋಗಿದೆ ಎಂದರು.
ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು ಮಾತನಾಡಿ, ಕಳೆದ ಆರು ವರ್ಷಗಳಿಂದ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುತ್ತಿಲ್ಲ. ಆವರ್ತ ನಿಧಿ ರಾಜ್ಯ ವ್ಯಾಪ್ತಿಗೆ ಬರಲಿದ್ದು, ಸರ್ಕಾರ ಆದೇಶಿಸಿದರೆ ಕೆಎಂಎಫ್ ಮೂಲಕ ಖರೀದಿಸಬಹುದು ಎಂದರು.
ಸದಸ್ಯ ಬಸವರಾಜಪ್ಪ, ರೈತರ ಹಿತದೃಷ್ಟಿಯಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಆವರ್ತ ನಿಧಿ ಬಳಕೆ ಮಾಡಿಕೊಂಡು ಮೆಕ್ಕೆಜೋಳ ಖರೀದಿ ಮಾಡಬೇಕು. ಪಕ್ಕದ ಶಿಕಾರಿಪುರದಲ್ಲಿ ಕೆಎಂಎಫ್ ಮೂಲಕ ಖರೀದಿ ಮಾಡುತ್ತಿದ್ದಾರೆ ಎಂದರು.
ಸದಸ್ಯ ಮಹೇಶ್ ಪ್ರತಿಕ್ರಿಯಿಸಿ, ಮೆಕ್ಕೆಜೋಳ ಸೋಮಾರಿಗಳ ಬೆಳೆ ಎಂಬ ಹಣೆಪಟ್ಟಿ ಹೊತ್ತಿದ್ದು, ಮೆಕ್ಕೆಜೋಳ ಕಡಿಮೆ ಮಾಡಿ ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಬೇಕೆಂದರು.
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಗೆ ಪೂರಕ ವಾತಾವರಣವಿದ್ದು ಸಂಪೂರ್ಣ ಯಾಂತ್ರೀಕೃತವಾಗಿರುವುದರಿಂದ ಎಲ್ಲರೂ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ ಅಡಿಕೆ ಹೆಚ್ಚು ಬೆಳೆಯುತ್ತಿದ್ದಾರೆ. ಇಲಾಖೆಯಿಂದ ಜೋಳ ಇಳುವರಿ ಕಡಿಮೆ ಮಾಡಲು ಅಂತರ ಬೆಳೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಆಯ್ದ ಕೃಷಿಕರಿಗೆ ಗೂಗಲ್ ಮೀಟ್ ಮೂಲಕ 6:1 ಅನುಪಾತ ಅಂದರೆ ಆರು ಸಾಲಿಗೆ ಒಂದು ಸಾಲು ತೊಗರಿ ಬೆಳೆಯಂತೆ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ. ಇದರಿಂದ ರೈತರ ಆದಾಯವೂ ಹೆಚ್ಚಲಿದೆ. ತೊಗರಿಗೆ ರೂ.6 ಸಾವಿರ ಬೆಂಬಲ ಬೆಲೆ ಇದ್ದು ಪೂರ್ವನಿಯೋಜಿತವಾಗೇ ಖರೀದಿ ಕೇಂದ್ರದ ವ್ಯಾಪ್ತಿಗೆ ಬರುವುದು. ಮುಂಬರುವ ದಿನಗಳಲ್ಲಿ ಸಿರಿಧಾನ್ಯಗಳು ಕೂಡ ಪಿಡಿಎಸ್ ವ್ಯವಸ್ಥೆಗೆ ಒಳಪಡುವ ಸಾಧ್ಯತೆ ಇದೆ.
ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ದ್ವಿದಳ ಧಾನ್ಯ ಬೆಳೆ ಹೆಚ್ಚುವ ಸಂಭವ ಇದೆ ಎಂದ ಅವರು ಬೀಜ ಲಭ್ಯತೆ ಹೆಚ್ಚಿಸಬೇಕಾಗಿದೆ. ಒಂದೇ ಬೆಳೆಗೆ ಜೋತು ಬೀಳದೆ ನಮ್ಮ ಪೂರ್ವಜರಂತೆ ಅಂತರ ಬೆಳೆ, ಮಿಶ್ರ ಬೆಳೆಗೆ ಒಲವು ತೋರಬೇಕೆಂದರು.
ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ, ಇಲಾಖೆ ರೈತರಿಗೆ ಒಂದು ಬೆಳೆ ಬಗ್ಗೆ ಸಂಪೂರ್ಣ ಯೋಜನೆ ಹಾಕಿಕೊಡಬೇಕು. ಕ್ರಾಪ್ ಪ್ರಾಜೆಕ್ಟ್ ಜೊತೆಗೆ ಬೀಜ, ಬೆಲೆ ಸೇರಿದಂತೆ ‘ಸೀಡ್ ಟು ಮಾರ್ಕೆಟ್’ ವ್ಯವಸ್ಥೆ ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಕೃಷಿ ಜಂಟಿ ನಿರ್ದೇಶಕರು, ಕೃಷಿಕರು ಒಂದು ನಿರ್ದಿಷ್ಟ ಪ್ರಾಜೆಕ್ಟ್ ತಯಾರಿಸಿ ಕೇಂದ್ರ ಸರ್ಕಾರದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದಲ್ಲಿ ರೂ.2 ಕೋಟಿವರೆಗೆ ರಿಯಾಯತಿ ಲಭಿಸಲಿದೆ ಎಂದರು.
ಸದಸ್ಯ ಸುರೇಂದ್ರನಾಯ್ಕ, ಬೆಳೆ ಸುಟ್ಟು, ಫಂಗಸ್ ಇತರೆ ರೀತಿಯಲ್ಲಿ ನಷ್ಟವಾದರೆ ಪ್ರತಿ ಎಕರೆಗೆ ನೀಡುವ ರೂ.20 ಸಾವಿರ ಮರು ಬಿತ್ತನೆ ಮಾಡಲು ಬೀಜ, ಗೊಬ್ಬರಕ್ಕೂ ಸಾಕಾಗುವುದಿಲ್ಲ. ಇದನ್ನು ಹೆಚ್ಚಿಸಬೇಕೆಂದರೆ, ಸದಸ್ಯ ವಿಶ್ವನಾಥ್ ಮೊನ್ನೆ ಬಿದ್ದ ಅಕಾಲಿಕ ಮಳೆಗೆ ಹೊನ್ನಾಳಿಯಲ್ಲಿ ಸುಮಾರು 4 ರಿಂದ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಿಳಿ ಜೋಳ ಪೂರ್ತಿ ಕಪ್ಪಾಗಿದ್ದು ಹಾಳಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕೆಂದರು.
ಸದಸ್ಯರಾದ ಮಂಜುನಾಥ್ ಮಾತನಾಡಿ, ಜಗಳೂರು ಹಿಂದುಳಿದ ತಾಲ್ಲೂಕಾಗಿದ್ದು ಇಲ್ಲಿ ಮೆಕ್ಕೆಜೋಳ ಮುಖ್ಯ ಬೆಳೆ. ತೋಟಗಾರಿಕೆ ಬೆಳೆ ಬೆಳೆಯಲು ಹೋಗಿ ತಾವೇ ಸ್ವತಃ ಕೈಸುಟ್ಟುಕೊಂಡಿದ್ದೇನೆ. ತೋಟಗಾರಿಕೆಗೆ ಇಲ್ಲಿನ ವಾತಾವರಣ ಪೂರಕವಾಗಿಲ್ಲ ಎಂದರು.
ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಹಿಂದೆಯೂ ಮೆಕ್ಕೆಜೋಳದ ಬಗ್ಗೆ ಚರ್ಚೆ ನಡೆದಿದೆ. ಮೆಕ್ಕೆಜೋಳವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮತ್ತು ಪಿಡಿಎಸ್ ವ್ಯವಸ್ಥೆಗೆ ಒಳಪಡಿಸುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಸದಸ್ಯೆ ಮಂಜುಳ ಟಿ.ವಿ.ರಾಜು ಮಾತನಾಡಿ, ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳು ಮೀಟಿಂಗ್ ಇನ್ನಿತರೆ ಕಚೇರಿ ಕೆಲಸದಲ್ಲಿ ಅತಿ ಹೆಚ್ಚಾಗಿ ನಿರತರಾಗಿರುತ್ತಾರೆ. ಆದರೆ ಅವರ ಅವಶ್ಯಕತೆ ರೈತರ ಕ್ಷೇತ್ರದಲ್ಲಿ ಹೆಚ್ಚಾಗಿದೆ. ತಾವೇ ತಮ್ಮ ತೋಟಕ್ಕೆ ಕರೆಸಲು ಕಷ್ಟಪಡುತ್ತಿದ್ದು, ಸಹಾಯಕ ನಿರ್ದೇಶಕರು ರೈತರ ಬಳಿಗೆ ಹೋಗಲು ಅವಕಾಶ ಮಾಡಿಕೊಡಬೇಕು.
ತಮ್ಮದೇ ತೋಟದಲ್ಲಿ ಅಡಿಕೆ ಗೊಳ್ಳು ಉದುರುತ್ತಿದೆ. ಮಣ್ಣು ಆರೋಗ್ಯ ಚೀಟಿ ಮಾಡಿಸುವ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ಇಲ್ಲ. ಆದ ಕಾರಣ ಅಧಿಕಾರಿ/ಸಿಬ್ಬಂದಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದರೆ, ಸದಸ್ಯರಾದ ತೇಜಸ್ವಿ ಪಟೇಲ್ ಮತ್ತಿತರರು ತಾಲ್ಲೂಕು ಮಟ್ಟದಲ್ಲಿ ಮಣ್ಣು ಆರೋಗ್ಯ ಕೇಂದ್ರದ ಅವಶ್ಯಕತೆ ಇದ್ದು, ತಾಲ್ಲೂಕುಗಳಲ್ಲಿ ತರೆಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಕೋರಿದರು.
ಸಿಇಓ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಹಾಗೂ ಪಿಆರ್ಇಡಿ ವಿಭಾಗದ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಮುಗಿಸಬೇಕು. ಹಾಗೂ ಸದಸ್ಯ ಹದಡಿ ನಿಂಗಪ್ಪನವರು ಹೇಳಿದ ಜವಳಘಟ್ಟದ ಸ್ಕೂಲ್ ಕಾಮಗಾರಿ ಬದಲಾವಣೆ ಬಗ್ಗೆ ತಾವು ಶಿಕ್ಷಣ ಇಲಾಖೆ ಸಿಪಿಐ ರವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಾಂತಕುಮಾರಿ, ಚಿಕ್ಕಮ್ಮನಟ್ಟಿಯ ಅಂಗನವಾಡಿಯಲ್ಲಿ ನೀರು ನುಗ್ಗುತ್ತಿದ್ದು ಇದನ್ನು ಸರಿಸಪಡಿಸುವಂತೆ ಇಓ ರವರಿಗೆ ಸೂಚಿಸಿದರು.
ಸದಸ್ಯ ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅನೇಕ ಯೋಜನೆಗಳಿದ್ದು ಜನರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾಗಿ ಜನರಿಗೆ ತಲುಪುತ್ತಿಲ್ಲ. ತಮ್ಮ ತಾಲ್ಲೂಕಿನಲ್ಲಿ ಅನೇಕ ಬಾಲ್ಯ ವಿವಾಹಗಳಾಗಿದ್ದು ಬಾಲ್ಯ ವಿವಾಹ ತಡೆ ಕುರಿತು ಸರಿಯಾದ ಜಾಗೃತಿ ಇಲ್ಲವಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಬಾಲ್ಯ ವಿವಾಹ ತಡೆಯಲು ಸಕ್ರಿಯವಾಗಿ ಎಲ್ಲ ತಾಲ್ಲೂಕುಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಬಾಲ್ಯ ವಿವಾಹವಾದ ನಂತರೂ ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಬಾಲ್ಯ ವಿವಾಹ ತಡೆಯಲು ಸ್ಥಳೀಯರೂ ಕೂಡ ಸಹಕರಿಸಬೇಕು ಎಂದರು.
ಸಿಇಓ ಪ್ರತಿಕ್ರಿಯಿಸಿ, ಅಂಗನವಾಡಿ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಲಾಗುತ್ತಿದೆ. ಅಂಗನವಾಡಿ ಸೇರಿದಂತೆ ಎಲ್ಲೆಡೆ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ಹಾಗೂ ಸದಸ್ಯರು ಹೇಳಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೀಟಿಂಗ್ಗಳನ್ನು ಕಡಿಮೆ ಮಾಡಲಾಗುವುದು. ಮಕ್ಕಳ ಸಹಾಯವಾಣಿ 1098 ಸಂಖ್ಯೆಯನ್ನು ಗ್ರಾ.ಪಂ ಕಚೇರಿ ಕಟ್ಟಡಗಳು ಇತರೆಡೆ ಬರೆಸಿ ಹಾಗೂ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯಿಂದ ಸಹ ಜಾಗೃತಿ ಮೂಡಿಸಲಾಗುವುದು ಎಂದರು.
ಗ್ರಾ.ಪಂ ನಿರ್ವಹಣೆ ಟೆಂಡರ್ : ಸದಸ್ಯರಾದ ನಟರಾಜ್ ಮಾತನಾಡಿ, ಗ್ರಾ.ಪಂ ಗಳಿಗೆ 15 ನೇ ಹಣಕಾಸು ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತಿದೆ. ಇದನ್ನು ದುರುಪಯೋಗಪಡಿಸುತ್ತಿರುವುದು ಸಹ ಎಲ್ಲರಿಗೆ ತಿಳಿದಿದೆ. ಇದರ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಈ ಹಣಕಾಸು ನಿರ್ವಹಣೆಗೆ ಟೆಂಡರ್ ಕರೆಯಬೇಕು. ಈ ಬಗ್ಗೆ ಜಿ.ಪಂ ನಿಂದ ಆದೇಶಿಸಬೇಕೆಂದರು. ಬೇರೆ ಜಿಲ್ಲೆಗಳಲ್ಲಿ ಹಣಕಾಸು ನಿರ್ವಹಣೆಗೆ ಪ್ರತ್ಯೇಕ ಟೆಂಡರ್ ಕರೆದಿದ್ದು, ನಮ್ಮ ಜಿಲ್ಲೆಯಲ್ಲಿಯೂ ಕರೆಯಬೇಕು. ಹಣ ದುರುಪಯೋಗ ನಿಲ್ಲಿಸಬೇಕೆಂದರು.
ಸದಸ್ಯರಾದ ಸುರೇಂದ್ರನಾಯ್ಕ, ಗ್ರಾಮದಲ್ಲಿ ಸುಮಾರು 8 ರಿಂದ 10 ಬೋರ್ ಪಂಪ್ಗಳಿದ್ದು ಅದರ ನಿರ್ವಹಣೆಗೆ ಟೆಂಡರ್ ಕರೆಯಬೇಕು ಎಂದರು.
ಸಿಇಓ ಪ್ರತಿಕ್ರಿಯಿಸಿ, ಪಂಚಾಯತ್ ರಾಜ್ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾ.ಪಂಗಳಿಗೆ ಪ್ರಮಾಧಿಕಾರ ನೀಡಲಾಗಿದ್ದು, ಜಿ.ಪಂ ಹಣಕಾಸು ನಿರ್ವಹಣೆ ಕುರಿತು ಟೆಂಡರ್ ಕರೆಯುವಂತೆ ಆದೇಶಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಈ ಹಣಕಾಸಿನಲ್ಲಿ ಶೇ.25 ಕುಡಿಯುವ ನೀರು, ಶೇ.25 ಸ್ವಚ್ಚತೆ ಈ ರೀತಿ ವರ್ಗೀಕರಣ ಇದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದಸ್ಯ ತೇಜಸ್ವಿ ಪಟೇಲ್, ನೇರ ನಿರ್ವಹಣೆ ಮತ್ತು ಟೆಂಡರ್ ಎರಡೂ ಕಳಪೆಯಾಗಿರುವುದನ್ನು ಸಹ ನೋಡಿದ್ದು, ನಿರ್ವಹಣೆ ವಿಧಾನ ಹೇಗಿರಬೇಕು ಎಂಬುದಕ್ಕಿಂತ ಸಮರ್ಪಕ ಫಲಿತಾಂಶದ ಬಗ್ಗೆ ಗಮನಹರಿಸಬೇಕು ಎಂದರು.
ಸದಸ್ಯೆ ಮಂಜುಳಾ ಟಿ ವಿ ರಾಜು, ಗ್ರಾ.ಪಂ 15 ನೇ ಹಣಕಾಸಿನಲ್ಲಿ ಸದಸ್ಯರು ಹಣ ಹಂಚಿಕೆ ಮಾಡಿಕೊಳ್ಳುತ್ತಿದ್ದು, ಸಿಇಓ ಈ ಬಗ್ಗೆ ಗ್ರಾ.ಪಂ ವಾರು ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ಹಣ ಸದ್ಬಳಕೆ ಆಗುವಂತೆ ಮಾಡಬೇಕೆಂದರು.
ಸದಸ್ಯ ಓಬಳಪ್ಪ ಮಾತನಾಡಿ, ಗ್ರಾ.ಪಂ ಯಲ್ಲಿ ಪರಮಾಧಿಕಾರ ಇದೆ. ಜೊತೆಗೆ ಹಣ ಕೂಡ ದುರುಪಯೋಗ ಆಗುತ್ತಿರುವುದು ಎಲ್ಲರಿಗೆ ತಿಳಿದ ವಿಷಯ. ಇದಕ್ಕೆ ಕಡಿವಾಣ ಹಾಕಲು ಸಿಇಓ ಸಲಹೆ ನೀಡಬೇಕೆಂದರು.
ಸದಸ್ಯೆ ಸವಿತಾ ಮಾತನಾಡಿ ತಮ್ಮ ಕ್ಷೇತ್ರ ಜಗಳೂರಿನಲ್ಲಿ ಕುಡಿಯುವ ನೀರಿಗೆ ತುಂಬಾ ಸಮಸ್ಯೆ ಇದೆ. ಅದರಲ್ಲಿ ಮುಸ್ಟೂರು, ಹನುಮಂತಾಪುರ ಇತರೆ ಗ್ರಾ.ಪಂ ಯವರು 6 ತಿಂಗಳಲ್ಲಿ 56 ಲಕ್ಷ ಹಣ ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಆಗಬೇಕೆಂದರು.
ಸದಸ್ಯ ವಾಗೀಶ್ಸ್ವಾಮಿ, 15 ಹಣಕಾಸು ಬಂದಿರೋದೇ ತಪ್ಪು ಎನ್ನುವಂತಾಗಿದ್ದು, ಅವೈಜ್ಞಾನಿಕವಾಗಿ ಕೆಲಸಗಳು ಆಗುತ್ತಿವೆ. ಈ ಕುರಿತು ಬಿಸಿ ಮುಟ್ಟಿಸುವ ಕೆಲಸ ಆಗಬೇಕು ಎಂದರೆ ಸದಸ್ಯ ಸುರೇಂದ್ರನಾಯ್ಕ ಇನ್ನು ಒಂದು ತಿಂಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮದ ಫಲಿತಾಂಶ ತಮಗೆ ಲಭಿಸಬೇಕೆಂದರು.
ಸದಸ್ಯ ತೇಜಸ್ವಿ ಪಟೇಲ್, ಜಿ.ಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿರುವ ಎಲ್ಲ ಗ್ರಾ.ಪಂ ವಾರು ಸಿಇಓ ಭೇಟಿ ನೀಡಿ ಎಲ್ಲ ಖರ್ಚುಗಳನ್ನು ಪರಿಶೀಲನೆ ಮಾಡಿದರೆ ಒಳಿತು ಎಂದರು.
ಸಿಇಓ ಪ್ರತಿಕ್ರಿಯಸಿ, ಕಾಯ್ದೆ ಉಲ್ಲಂಘನೆ ಯಾರೇ ಮಾಡಿದ್ದರೂ ಕ್ರಮ ವಹಿಸಲಾಗುವುದು. ಸೋಷಿಯಲ್ ಆಡಿಟ್ನಲ್ಲಿ ವರದಿಯಾಗಿರುತ್ತದೆ. ಜೊತೆಗೆ ತಮ್ಮ ಸಲಹೆ ಮೇರೆಗೆ ಪರಿಶೀಲನೆ ನಡೆಸಲಾಗುವುದು. ಪ್ರಾಥಮಿಕವಾಗಿ ತಾಲ್ಲೂಕಿನ ಇಓ ನನಗೆ ವರದಿ ನೀಡಿದ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದರು.
ಕೊನೆಯ ಸಾಮಾನ್ಯ ಸಭೆ
ಇದು ಜಿ.ಪಂ ನ ಈ ಅವಧಿಯ ಕೊನೆಯ ಸಾಮಾನ್ಯ ಸಭೆಯಾಗಿದ್ದು, ಎಲ್ಲ ಸದಸ್ಯರು ಕೊನೆಯ ಸಾಮಾನ್ಯ ಸಭೆಯ ಪ್ರಸ್ತಾಪ ಮಾಡಿದರು. ಕೊನೆಯ ಸಾಮಾನ್ಯ ಸಭೆಯನ್ನಾದರೂ ಅಜೆಂಡಾ ಪ್ರಕಾರ ಮಾಡಬೇಕೆಂದು ಹಲವು ಸದಸ್ಯರು ಒತ್ತಾಯಿಸಿದರು. ಸದಸ್ಯರ ಹಾಸ್ಯ ಚಟಾಕಿ ಮತ್ತು ತಿಳಿ ವಾತಾವರಣ ಸಭೆಯಲ್ಲಿ ಕಂಡುಬಂತು.
ಸಭೆಯಲ್ಲಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಫಕೀರಪ್ಪ, ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ವೀರಶೇಖರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್, ಸದಸ್ಯರು, ತಾ.ಪಂ ಅಧ್ಯಕ್ಷರು, ಜಿ.ಪಂ ಉಪ ಕಾರ್ಯದರ್ಶಿ ಆನಂದ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.
ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ2 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ2 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

