Connect with us

ದಿನದ ಸುದ್ದಿ

ದಾವಣಗೆರೆ | ರಾಜ್ಯ ಮಹಿಳಾ ನಿಲಯದಲ್ಲಿ ನವಜೀವನಕ್ಕೆ ಕಾಲಿಟ್ಟ ಮೂರು ಜೋಡಿ : ನವದಂಪತಿಗಳಿಗೆ ಹರಸಿ, ಶುಭ ಕೋರಿದ ಜಿ.ಪಂ. ಅಧ್ಯಕ್ಷೆ, ಡಿಸಿ, ಎಸ್‍ಪಿ, ಸಿಇಒ

Published

on

ಸುದ್ದಿದಿನ,ದಾವಣಗೆರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಹಿಳಾ ನಿಲಯದಲ್ಲಿ ಚಟುವಟಿಕೆಗಳು ಎಂದಿನಂತೆ ಸಾಮಾನ್ಯವಾಗಿರದೆ, ಬುಧವಾರದಂದು ಸಂಭ್ರಮ, ಗಡಿಬಿಡಿ ಮನೆಮಾಡಿತ್ತು. ಮಂಗಳವಾದ್ಯ ಮೊಳಗುತ್ತಾ, ಅಲ್ಲೊಂದು ಶುಭ ಸಮಾರಂಭವಿರುವ ಬಗ್ಗೆ ಸಂಕೇತ ನೀಡುತ್ತಿತ್ತು.

ಹೌದು, ಅದು ಶುಭ ಸಮಾರಂಭದ ಸಂದೇಶವೇ ಸರಿ. ಜೊತೆಗೆ ವಿಶೇಷ ಕಾರ್ಯಕ್ರಮದ ಮೆರಗು ಬೇರೆ. ವಿವಿಧ ಕಾರಣಗಳಿಂದ ಶೋಷಣೆಗೆ ಒಳಗಾಗಿ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಮೂವರು ಯುವತಿಯರಿಗೆ ಬದುಕು ಕಟ್ಟಿಕೊಡುವ ಶುಭ ಸಮಾರಂಭವದು. 24 ವರ್ಷದ ಮಂಜುಳಾ, 19 ವರ್ಷದ ರೇಷ್ಮಾ ಹಾಗೂ 21 ವರ್ಷದ ಕುಪ್ಪಮ್ಮ ಸೇರಿದಂತೆ ಮೂವರು ಯುವತಿಯರಿಗೆ ಸುಂದರ ಬದುಕು ಕಟ್ಟಿಕೊಡಲು ಮೂವರು ಯುವಕರು ಮುಂದಾಗಿದ್ದು ಮೂವರು ನೂತನ ವಧು ವರರ ಪಾಲಕರು, ಸ್ನೇಹಿತರು, ಬಂಧುಮಿತ್ರರು, ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರೂ ಸೇರಿದಂತೆ ಎಲ್ಲರಲ್ಲೂ ಸಂತಸ ಮೂಡಿಸಿತ್ತು.

ಮಂಜುಳಾ ಇವರನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹೆದ್ಲಿ ಹೆನಿಯಾದ ಉಮೇಶ್ ಹೆಚ್.ಜಿ ಅವರು ಬಾಳ ಸಂಗಾತಿಯಾಗಿ ಸ್ವೀಕರಿಸಿದರೆ, ರೇಷ್ಮಾ ಅವರನ್ನು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಮುಂಡಗನಮನೆ ಗ್ರಾಮದ ನಾಗರಾಜ ಸುಬ್ರಾಯ ಹೆಗಡೆ ಅವರು ಹಾಗೂ ಕುಪ್ಪಮ್ಮ ಅವರನ್ನು ಶಿರಸಿ ತಾಲ್ಲೂಕಿನ ಶಿವಳ್ಳಿಯ ದಯಾನಂದ ಆರ್. ಭಟ್ಟ ಅವರು ಬಾಳ ಸಂಗಾತಿಯಾಗಿಸಿಕೊಂಡರು.

ವಿಶೇಷ ಕಾರ್ಯಕ್ರಮದಲ್ಲಿ ನವ ಜೀವನಕ್ಕೆ ಕಾಲಿಟ್ಟ ಉಮೇಶ್ ಹೆಚ್.ಜಿ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿ, ಇಂತಹ ಮಾದರಿ ಕಾರ್ಯಕ್ರಮದಲ್ಲಿ ಮದುವೆಯಾಗುತ್ತಿರುವುದು ಸಂತಸ ತಂದಿದೆ. ಗ್ರಾಮದಲ್ಲಿ ತಾನು ಪುರೋಹಿತ ವೃತ್ತಿ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಸಮುದಾಯದಲ್ಲಿ ಪುರೋಹಿತ ವೃತ್ತಿ, ಕೃಷಿ ಮಾಡುವವರಿಗೆ ಹೆಣ್ಣು ಕೊಡುವುದು ದುಸ್ಥರವಾಗಿದೆ. ಹೀಗಾಗಿ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಪಡೆದು, ನಿಯಮಾನುಸಾರ ರಾಜ್ಯ ಮಹಿಳಾ ನಿಲಯಕ್ಕೆ ಅರ್ಜಿ ಸಲ್ಲಿಸಿ, ಕುಟುಂಬದ ಒಪ್ಪಿಗೆ ಪಡೆದು, ಮದುವೆಯಾಗುತ್ತಿದ್ದೇನೆ ಎಂದರು.

ಇವರಿಗೆ ಬಾಳ ಸಂಗಾತಿಯಾದ ಮಂಜುಳಾ ಪ್ರತಿಕ್ರಿಯಸಿ, ಉಮೇಶ್ ಅವರನ್ನು ಮದುವೆಯಾಗುತ್ತಿರುವುದಕ್ಕೆ ಖುಷಿಯಾಗಿದೆ ಎಂದರು. ಇನ್ನೋರ್ವ ನವ ವರ ದಯಾನಂದ ಭಟ್ಟ ಮಾತನಾಡಿ, ತಾನು ಮಾದರಿ ಜೀವನ ಕಟ್ಟಿಕೊಳ್ಳುವ ಯತ್ನ ಮಾಡಿದ್ದು, ನಿಲಯದ ನಿವಾಸಿಯಾಗಿದ್ದ ರೇಷ್ಮ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮೈಸೂರು ಪೇಟಾ ಧರಿಸಿ, ಮದುವೆ ಸಮಾರಂಭದ ನೇತೃತ್ವ ವಹಿಸಿದ್ದರು. ತಾವೇ ಮುಂದೆ ನಿಂತು ನೂತನ ವಧು ವರರು ವಿವಾಹ ಜೀವನಕ್ಕೆ ಕಾಲಿರಿಸಿದ ಸಂಭ್ರಮಕ್ಕೆ ಸಾಕ್ಷಿಯಾದರು. ಅಲ್ಲದೆ ಅಕ್ಷತೆಯನ್ನು ನವ ದಂಪತಿಗಳಿಗೆ ಹಾಕಿ ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ ಅವರು ಉಪಸ್ಥಿತರಿದ್ದು, ಮದುವೆ ಸಂಭ್ರಮದ ಸಂತಸ ಹಂಚಿಕೊಂಡು, ನೂತನ ದಂಪತಿಗಳಿಗೆ ಶುಭ ಕೋರಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಅವರು ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿ, ದಾವಣಗೆರೆಯಲ್ಲಿನ ರಾಜ್ಯ ಮಹಿಳಾ ನಿಲಯದ ಸಂಸ್ಥೆ 1977 ರಿಂದಲೂ ಕಾರ್ಯ ನಿರ್ವಹಿಸುತ್ತಿದೆ. ನಾನಾ ಕಾರಣಗಳಿಂದ ಶೋಷಣೆ, ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾದ, ದೈಹಿಕ ಅಥವಾ ಮಾನಸಿಕವಾಗಿ ತೊಂದರೆ ಎದುರಿಸುವ ಮಹಿಳೆಯರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವುದಲ್ಲದೆ, ಅಂತಹವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾಡುವ ಕಾರ್ಯವನ್ನು ಮಹಿಳಾ ನಿಲಯ ನಿರ್ವಹಿಸುತ್ತಿದೆ.

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ರಕ್ಷಣೆ, ಪೋಷಣೆ, ವೈದ್ಯಕೀಯ ನೆರವು, ಪುನರ್ವಸತಿ ಸೌಲಭ್ಯದ ಅವಕಾಶವಿದೆ. ಸಂಸ್ಥೆಯಲ್ಲಿ ದಾಖಲಾದ ಮಹಿಳೆಯರು ಅಥವಾ ಮಕ್ಕಳು ನ್ಯಾಯಾಲಯಗಳಿಂದ ವಿವಿಧ ಕಾನೂನುಗಳಡಿ ಇತರೆ ಪುನರ್ವಸತಿ ಅಥವಾ ಅಂತಿಮ ತೀರ್ಮಾನದವರೆಗೆ ದಾಖಲಾಗಲು ಅವಕಾಶವಿದೆ. ಸಂಸ್ಥೆಯಲ್ಲಿ ಸದ್ಯ 63 ನಿವಾಸಿಗಳು, 06 ಮಕ್ಕಳು ಆಶ್ರಯ ಪಡೆದಿದ್ದಾರೆ. ಇಂದಿನವರೆಗೆ 39 ವಿವಾಹಗಳು, 07 ನಾಮಕರಣಗಳನ್ನು ಸಂಸ್ಥೆಯಲ್ಲಿ ನೆರವೇರಿಸಲಾಗಿದೆ. ಈ ಹಿಂದೆ ಸಂಸ್ಥೆಯಲ್ಲಿ ವಿವಾಹವಾದ ಮಹಿಳೆಯರು ತಮ್ಮ ಸುಖ ಜೀವನ ನಡೆಸುತ್ತಿದ್ದಾರೆ ಎಂದರು.

ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಸುಜಾತಾ ಅಲ್ಲದೆ ನಿಲಯದ ಸಿಬ್ಬಂದಿಗಳು ವಿಶೇಷ ಮದುವೆ ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಯಶಸ್ವಿ ಬೃಹತ್ ಉದ್ಯೋಗ ಮೇಳಕ್ಕೆ ಕ್ರಮವಹಿಸಿ: ಡಿಸಿ ಗಂಗಾಧರ್ ಸ್ವಾಮಿ

Published

on

ಸುದ್ದಿದಿನ,ದಾವಣಗೆರೆ:ನಗರದ ಎಂಸಿಸಿ ಬ್ಲಾಕ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆಬ್ರವರಿ 23 ರಂದು ಉದ್ಯೋಗ ಮೇಳ ನಡೆಯಲಿದೆ, ಮೇಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ತಿಳಿಸಿದರು .

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು .

ಬೃಹತ್ ಉದ್ಯೋಗ ಮೇಳಕ್ಕಾಗಿ ಈಗಾಗಲೇ ಪೋರ್ಟಲ್ ಮೂಲಕ ನೋಂದಣಿ ಆರಂಭವಾಗಿದ್ದು, 45ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಿಕೊಂಡಿವೆ. ಇನ್ನು ಸುಮಾರು 20 ಕಂಪನಿಗಳು ಬರುವ ಸಾಧ್ಯತೆ ಇದೇ, ಇದರಲ್ಲಿ ಐಟಿ, ಮಾಸ್ಟರ್ ಡಿಗ್ರಿ, ಐಟಿಐ ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿ ಅಭ್ಯರ್ಥಿಗಳಿಗೆ ಐಟಿ ವಲಯ ಬ್ಯಾಂಕ್ ಕ್ಷೇತ್ರ, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಫಾರ್ಮಸಿಟಿಕಲ್ ಸೇರಿದಂತೆ ಇನ್ನು ಅನೇಕ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ನೀಡುವ ವಿವಿಧ ಕಂಪನಿಗಳು ಸೇರಿವೆ. ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಕಾಲೇಜುಗಳಿಗೆ ಪತ್ರ ವ್ಯವಹಾರ ಮಾಡಿದ್ದು ಪ್ಲೇಸ್‌ಮೆಂಟ್ ಆಫೀಸರ್‌ಗಳ ಭೇಟಿ ಮಾಡಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ, ಪೋಸ್ಟರ್‌ಗಳು, ಜಿಂಗಲ್ಸ್ ಮತ್ತು ಸ್ವಚ್ಛ ಭಾರತ್ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಮಾಡಲು ಕೈಗೊಳ್ಳಬೇಕು, ಸುಮಾರು 4,000 ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಸಾಧ್ಯತೆ ಇದೆ, ಆದುದರಿಂದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು,
ವಿದ್ಯಾರ್ಥಿಗಳಿಗೆ ಲಘು ಉಪಹಾರ, ನೀರು, ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ವ್ಯವಸ್ಥೆ, ವಿಶೇಷ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಸುಮಾರು 1,200 ಅಭ್ಯರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಗೆ ಸಚಿವರು, ಗಣ್ಯರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೃಹತ್ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಯೋಜನಾ ನಿರ್ದೇಶಕ ಮಹಾಂತೇಶ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ‍್ವಾಮಿ.ಜಿ.ಎಂ.ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending