ದಿನದ ಸುದ್ದಿ
ದಾವಣಗೆರೆ ದಕ್ಷಿಣ ಉಪಚುನಾವಣೆ ತಯಾರಿ ; ಕರಡು ಮತದಾರರ ಪಟ್ಟಿ ಪ್ರಕಟ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಚುನಾವಣೆ ಆಯೋಗವು ಸಿದ್ದತೆ ನಡೆಸಿದ್ದು, ಮತದಾರರ ಪಟ್ಟಿ ಪರಷ್ಕರಣೆ ಪ್ರಕ್ರಿಯೆಯೂ ಸಹ ಆರಂಭವಾಗಿದ್ದು, 2026ರ ಜನವರಿ 03ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳೊಂದಿಗೆ ಉಪಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2026 ಜನವರಿ 1 ಕ್ಕೆ ಸಂಬಂಧಿಸಿದಂತೆ 2026ರ ಜನವರಿ 3 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು-ಆಕ್ಷೇಪಣೆಗಳಿದ್ದಲ್ಲಿ ಜನವರಿ 24 ರೊಳಗೆ ಸಲ್ಲಿಸಬೇಕು. ಅಂತಿಮ ಮತದಾರರ ಪಟ್ಟಿಯನ್ನು 2026 ರ ಫೆಬ್ರವರಿ 14 ರಂದು ಪ್ರಕಟಿಸಲಾಗುವುದು ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪನವರ ನಿಧನದಿಂದ ಕ್ಷೇತ್ರ ತೆರವಾಗಿರುತ್ತದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 113538 ಪುರುಷ, 117479 ಮಹಿಳಾ ಮತದಾರರು ಹಾಗೂ 47 ಇತರೆ ಮತದಾರರು ಸೇರಿದಂತೆ ಒಟ್ಟು 2,31,062 ಮತದಾರಿದ್ದು, ಒಟ್ಟು 217 ಮತಗಟ್ಟಿಗಳನ್ನೊಳಗೊಂಡಿದೆ.
4857 ಯುವ ಮತದಾರರು
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2497 ಪುರುಷ ಮತ್ತು 2360 ಮಹಿಳಾ ಯುವ ಮತದಾರರಿದ್ದಾರೆ. ಹಾಗೆಯೇ 1395 ಪುರುಷ, 1146 ಮಹಿಳಾ ವಿಶೇಷಚೇತನ ಮತದಾರರು ಸೇರಿದಂತೆ ಒಟ್ಟು 2541 ವಿಶೇಷಚೇತನ ಮತದಾರರಿದ್ದಾರೆ ಎಂದು ತಿಳಿಸಿದರು.
ರಾಷನಲೈಸೇಷನ್ ಪ್ರಕ್ರಿಯೆ
ಈ ಕ್ಷೇತ್ರ ವ್ಯಾಪ್ತಿಯಲ್ಲಿನ ಮತಗಟ್ಟೆಗಳ ಭೌತಿಕ ಪರಿಶೀಲನೆ ನಂತರ ರಾಷನಲೈಸೇಷನ್ ಪ್ರಕ್ರಿಯೆ ಕೈಗೊಂಡು 300ಕ್ಕಿಂತ ಕಡಿಮೆ ಮತದಾರರಿರುವ ಮತ್ತು 1200 ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಯುಕ್ತೀಕರಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ 67 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಕಟ್ಟಡ ಬದಲಾವಣೆ ಕಾರಣದಿಂದ 24 ಮತಗಟ್ಟೆ ಸ್ಥಳಾಂತರ ಹಾಗೂ 2 ಮತಗಟ್ಟೆಗಳ ಹೆಸರು ಬದಲಾವಣೆ ಸೇರಿದಂತೆ ರಾಷನಲೈಸೇಷನ್ ಪ್ರಕ್ರಿಯೆ ಕೈಗೊಂಡು ಒಟ್ಟು 284 ಮತಗಟ್ಟೆಗಳನ್ನು ಸ್ಥಾಪನೆ ಮಾಡುವ ಅಗತ್ಯತೆಯ ಕುರಿತಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿದರು.
ಕ್ಷೇತ್ರದ ಮತದಾರರು ತಮ್ಮ ಮತಪಟ್ಟಿ ವಿವರಗಳನ್ನು ವೋಟರ್ ಹೆಲ್ಪ್ ಲೈನ್ ಆಪ್ ಮುಖಾಂತರ ಪರಿಶೀಲಿಸಕೊಳ್ಳಬಹುದಾಗಿದೆ. ಮತದಾರರು ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ಫೋಟೊ ಬದಲಾವಣೆ ಹಾಗೂ ಸ್ಥಳಾಂತರಗೊಂಡಿದ್ದಲ್ಲಿ ನಮೂನೆ-8ರ ಅರ್ಜಿಯನ್ನು ವೋಟರ್ ಹೆಲ್ಪ್ ಲೈನ್ ಮುಖಾಂತರ ಸಲ್ಲಿಸಬಹುದು ಎಂದು ತಿಳಿಸಿದರು.
ಯುವ ಮತದಾರರು ವೋಟರ್ ಹೆಲ್ಪ್ ಲೈನ್ ಆಪ್ ಮುಖಾಂತರ ನಮೂನೆ-6ರ ಅರ್ಜಿಯನ್ನು ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಸಾರ್ವಜನಿಕರು ಆನ್‌ಲೈನ್ https://voters.eci.gov.in/ ಮುಖಾಂತರ ಮತದಾರರ ಪಟ್ಟಿಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್‌ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್‌ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್‌ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್‌ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ, 4 ಸದಸ್ಯರಿರುವ ಪ್ರತಿ ಕಾರ್ಡಿಗೆ 40 ಕೆ.ಜಿ ಅಕ್ಕಿ, 5 ಸದಸ್ಯರಿರುವ ಪ್ರತಿ ಕಾರ್ಡಿಗೆ 50 ಕೆ.ಜಿ ಅಕ್ಕಿ, 6 ಸದಸ್ಯರಿರುವ ಪ್ರತಿ ಕಾರ್ಡಿಗೆ 60 ಕೆ.ಜಿ ಅಕ್ಕಿ, 7 ಸದಸ್ಯರಿರುವ ಪ್ರತಿ ಕಾರ್ಡಿಗೆ 70 ಕೆ.ಜಿ ಅಕ್ಕಿ, 8 ಸದಸ್ಯರಿರುವ ಪ್ರತಿ ಕಾರ್ಡಿಗೆ 80 ಕೆ.ಜಿ ಅಕ್ಕಿ, 9 ಸದಸ್ಯರಿರುವ ಪ್ರತಿ ಕಾರ್ಡಿಗೆ 90 ಕೆ.ಜಿ, 10 ಸದಸ್ಯರಿರುವ ಪ್ರತಿ ಕಾರ್ಡಿಗೆ 100 ಕೆ.ಜಿ ಅಕ್ಕಿಯನ್ನು ನೀಡಲಾಗುವುದು.
ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಅಂತರ್ ರಾಜ್ಯ ಅಥವಾ ಜಿಲ್ಲೆಯ ಪಡಿತರ ಚೀಟಿಗಳಿಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆಯಲು ಅವಕಾಶವಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜನರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯ : ಡಾ.ಹೆಚ್.ಕೃಷ್ಣ
ಸುದ್ದಿದಿನ,ದಾವಣಗೆರೆ:ಆಹಾರ ಪಡೆಯುವುದು ಜನರ ಹಕ್ಕು, ಅದನ್ನು ಅನುಷ್ಠಾನಗೊಳಿಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸಹ ನಮ್ಮೆಲ್ಲರ ಜವಾಬ್ದಾರಿ. ಜನರಿಗೆ ಕೇವಲ ಆಹಾರ ಧಾನ್ಯಗಳನ್ನು ಒದಗಿಸುವುದು ಅಷ್ಟೇ ಸಾಕಾಗುವುದಿಲ್ಲ. ಜನರಿಗೆ ಸರಿಯಾದ ಪ್ರಮಾಣದ, ಗುಣಮಟ್ಟದ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರವನ್ನು ಸಮುದಾಯದ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ಆಹಾರವನ್ನು ಒದಗಿಸಿದಾಗ ಮಾತ್ರ ಆಹಾರ ಭದ್ರತೆಯನ್ನು ಕೊಟ್ಟಿದ್ದೇವೆ ಎಂದು ಹೇಳಲು ಸಾಧ್ಯವಾಗುತ್ತದೆ ಎಂದು ಆಹಾರ ಭದ್ರತಾ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನುಷ್ಠಾನದ ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ನಮ್ಮ ರಾಜ್ಯ ಆಹಾರ ಆಯೋಗಕ್ಕೆ ಇದೆ. ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾದರೆ, ಇಲ್ಲಿ ಹಾಜರಿರುವ ಎಲ್ಲಾ ಇಲಾಖೆಗಳು ಸಮನ್ವಯ ಮತ್ತು ಸಹಕಾರದ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ವಿವಿಧ ಇಲಾಖೆಗಳ ನಡುವೆ ಈ ರೀತಿಯ ಸಮನ್ವಯವನ್ನು ಸಾಧಿಸಲು ಆಹಾರ ಭದ್ರತಾ ಕಾಯ್ದೆಯ ಜಾರಿಯಲ್ಲಿ ಕುಂದುಕೊರತೆ ನಿವಾರಣಾ ಅಧಿಕಾರಿಗಳಾದ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಅವರ ಕಚೇರಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಸುರಕ್ಷಿತ ಕುಡಿಯುವ ನೀರು, ಸ್ವಚ್ಛತೆ, ಆರೋಗ್ಯ ಸೇವೆಗಳ ಲಭ್ಯತೆ, ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ಪ್ರಮುಖವಾದಂತಹ ವಿಷಯಗಳು. ಇದರ ಜೊತೆಗೆ ಸಾಮಾಜಿಕ, ದೈಹಿಕ ಹಾಗೂ ಆರ್ಥಿಕ ದುರ್ಬಲತೆಗಳ ಬಗ್ಗೆ ಸ್ಪಷ್ಟವಾದ ಗಮನಹರಿಸುವುದು ಅತ್ಯಂತ ಅವಶ್ಯಕ. ಲಿಂಗ, ಜಾತಿ, ವರ್ಗ, ಉದ್ಯೋಗದ ಆಧಾರದ ಅಸಮಾನತೆಗಳು ಮತ್ತು ಬಡತನ ಈ ಸವಾಲುಗಳನ್ನು ಯಾವಾಗಲೂ ನಮ್ಮ ದೇಶವನ್ನ, ರಾಜ್ಯದಲ್ಲಿ ಇರುವಂತಹ ಸಮಸ್ಯೆಗಳು. ಆದ್ದರಿಂದ ರಾಜ್ಯದಲ್ಲಿ ಆಹಾರ ಅಭಾವ ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನೆಗೊಳಿಸಬೇಕಾದರೆ ನಾವು, ನೀವೆಲ್ಲರೂ ಒಟ್ಟಾಗಿ ಸೇರಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಮತ್ತೊಂದು ಪ್ರಮುಖ ಅಂಶವೆಂದರೆ ಜೀವನ ಚಕ್ರ ದೃಷ್ಟಿಕೋನ. ಗರ್ಭಧಾರಣೆಯಿಂದ ಆರಂಭಿಸಿ ಜನನ, ಬಾಲ್ಯ, ಯೌವ್ವನ, ಪ್ರೌಢಾವಸ್ಥೆ ಹಾಗೂ ವೃದ್ಧಾಪ್ಯದವರೆಗೆ ಮಾನವನ ಜೀವನದ ಎಲ್ಲಾ ಹಂತಗಳ ಅಗತ್ಯಗಳನ್ನು ಈ ಕಾಯ್ದೆ ಗಮನದಲ್ಲಿಟ್ಟುಕೊಂಡಿದೆ. ಒಂದು ಹಕ್ಕು ಆಧಾರಿತ ಕಾನೂನು. ಅಂದರೆ ಐ.ಸಿ.ಡಿ.ಎಸ್ (ICDS), ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಟಿ.ಪಿ.ಡಿ.ಎಸ್ (TPDS) ಮತ್ತು ಮಾತೃತ್ವದ ಹಕ್ಕುಗಳು. ಈ ನಾಲ್ಕು ಯೋಜನೆಗಳ ಮೂಲಕ ದೊರೆಯುವ ಸೇವೆಗಳು ಈಗ ಕಾನೂನಾತ್ಮಕವಾಗಿ ಬೇಡಿಕೆ ಇಡಬಹುದಾದ ಹಕ್ಕುಗಳಾಗಿವೆ. ಆದ್ದರಿಂದ ಅನುಷ್ಠಾನದಲ್ಲಿ ಜನರನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ವ್ಯವಸ್ಥೆಯನ್ನು ಜವಾಬ್ದಾರಿಯುತ, ಪಾರದರ್ಶಕ ಹಾಗೂ ಸಮಾನತೆಯ ತತ್ವದ ಮೇಲೆ ಕಾರ್ಯ ನಿರ್ವಹಿಸಬೇಕು, ಅನ್ನೋದು ನನ್ನ ನಂಬಿಕೆ ಎಂದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಆಹಾರ ಸುರಕ್ಷತೆ ಹಾಗೂ ಅದರೊಂದಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಭಾವಿಸಿದ್ದೇನೆ. ಎಲ್ಲರೂ ಒಟ್ಟಾಗಿ ಬದ್ಧತೆಯಿಂದ ಹಕ್ಕು ಆಧಾರಿತ ದೃಷ್ಟಿಕೋನದೊಂದಿಗೆ ಈ ಕಾಯ್ದೆಯನ್ನು ಅದರ ನಿಜವಾದ ಅರ್ಥದಲ್ಲಿ ಜಾರಿಗೆ ತಂದರೆ ಆಹಾರದ ಹಕ್ಕನ್ನು ಸಹಕಾರಗೊಳಿಸುವಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗುವುದು. ಭಾರತದಲ್ಲಿ ಆಹಾರ ಭದ್ರತೆ, ಅದು ಹಕ್ಕು ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಈ ಹಕ್ಕಿಗೆ ಕಾನೂನಾತ್ಮಕ ಬಲ ನೀಡಿದ ಮಹತ್ವದ ಕಾಯ್ದೆ ಈ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ,
ಕೇಂದ್ರ ಅಥವಾ ರಾಜ್ಯ ಸರ್ಕಾರದ ಯೋಜನೆಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸರಿಯಾಗಿ ಜಾರಿಗೆ ಬರಬೇಕು. ಅದಕ್ಕೆ ಅಧಿಕಾರಿಗಳು ಆಹಾರದ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಅವರ ಸಮಸ್ಯೆಗಳನ್ನ ಕೇಳಬೇಕು. ದೂರುಗಳಿದ್ದರೆ ಅದನ್ನ ಸರಿಮಾಡಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ ತೂಕದಲ್ಲಿನ ಮೋಸವನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ತರಲು, ಅಂಗಡಿಗಳಲ್ಲಿ ‘ಜಿಯೋ ಫೆನ್ಸಿಂಗ್’ (Geo-fencing) ತಂತ್ರಜ್ಞಾನವನ್ನು ಅಳವಡಿಸುವುದು ಅವಶ್ಯಕ, ಇದು ಅಂಗಡಿಯ 10 ಮೀಟರ್ ಒಳಗೆ ಮಾತ್ರ ವ್ಯವಹಾರ ನಡೆಯುವಂತೆ ಮಾಡುತ್ತದೆ, ಈವರೆಗೆ ತೂಕದಲ್ಲಿ ವ್ಯತ್ಯಾಸ ಮತ್ತು ಇತರ ಅಕ್ರಮಗಳಿಗಾಗಿ ಸುಮಾರು 23 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳನ್ನು ಅಧಿಕಾರಿಗಳ ತಂಡೊಂದಿಗೆ ಖುದ್ದಾಗಿ ಭೇಟಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ಬಡ ಜನರಿಗೆ ಸಿಗಬೇಕಾದ ಪಡಿತರ ಸರಿಯಾದ ತೂಕದಲ್ಲಿ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಸಭೆಗೆ ತಿಳಿಸಿದರು.
ಆಹಾರ ಭದ್ರತಾ ಆಯೋಗದ ಸದಸ್ಯರಾದ ಲಿಂಗರಾಜ್ ಕೋಟೆ , ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣ, ಕೆ.ಎಸ್. ವಿಜಯಲಕ್ಷ್ಮಿ, ರೋಹಿಣಿ ಪ್ರಿಯಾ, ಸದಸ್ಯ ಕಾರ್ಯದರ್ಶಿ ಮತ್ತು ಅಪರ ನಿರ್ದೇಶಕರಾದ ಸುಜಾತಾ ಹೊಸಮನಿ , ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


