Connect with us

ದಿನದ ಸುದ್ದಿ

ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಮಾದರಿಯಲ್ಲಿ ಬೌದ್ಧ ಧರ್ಮ ಕಟ್ಟಲು ಬಾಬಾಸಾಹೇಬ್ ಅಂಬೇಡ್ಕರರು ರೂಪಿಸಿದ್ದ ನೀಲನಕ್ಷೆ

Published

on

  • ರಘೋತ್ತಮ ಹೊ.ಬ

1954 ಡಿಸೆಂಬರ್ 4 ರಂದು ಬರ್ಮಾದ ರಂಗೂನ್ ನಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯುತ್ತದೆ. ಆ ಸಮ್ಮೇಳನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರು ಮುಖ್ಯ ಅತಿಥಿಯಾಗಿರುತ್ತಾರೆ. ಆ ಸಂದರ್ಭದಲ್ಲಿ ಬೌದ್ಧ ಶಾಸನ ಕೌನ್ಸಿಲ್ ನಲ್ಲಿ ಅವರು ಭಾರತದಲ್ಲಿ ಬೌದ್ಧ ಧರ್ಮ ಬೆಳೆಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ವಿವರಿಸಲು ಸಭೆಗೆ ನೀಲನಕ್ಷೆ ಮಾದರಿಯಲ್ಲಿ ಒಂದು ಮನವಿ ಪತ್ರ ಸಲ್ಲಿಸುತ್ತಾರೆ.

ಆ ನೀಲನಕ್ಷೆಯ ಮುಖ್ಯಾಂಶಗಳನ್ನು ದಾಖಲಿಸುವುದಾದರೆ

ಮೊದಲಿಗೆ ಬಾಬಾಸಾಹೇಬರು ಹೇಳುವುದು ಮತಾಂತರ ಹೊಂದಿದವರಿಗೆ ಅಗತ್ಯವಾಗಿರುವ ಒಂದು ಬೌದ್ಧ ಧರ್ಮಗ್ರಂಥದ ಬಗ್ಗೆ. ಈ ನಿಟ್ಟಿನಲ್ಲಿ ಕ್ರೈಸ್ತ ಧರ್ಮ ಹೋಲಿಸುವ ಅವರು ಕ್ರೈಸ್ತ ಧರ್ಮ ಬೆಳೆಯಲು ಕಾರಣ ಅವರಲ್ಲಿ ಇರುವ ಬೈಬಲ್ ನಂತಹ ಯಾರಾದರೂ ಸುಲಭವಾಗಿ ಇಟ್ಟುಕೊಳ್ಳಬಹುದಾದ ಸಣ್ಣ ಪುಸ್ತಕ. ಆದರೆ ಬೌದ್ಧ ಧರ್ಮಕ್ಕೆ ಅಂತಹ ಅನುಕೂಲ ಇಲ್ಲ ಎನ್ನುತ್ತಾರೆ.

ಇದಕ್ಕೆ ಅವರು ಕೊಡುವ ಕಾರಣ ಸಾಮಾನ್ಯ ಅನುಯಾಯಿಯೊಬ್ಬ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪಾಳಿ ಭಾಷೆಯ 73 ಆ ಬೃಹತ್ ಸಂಪುಟಗಳನ್ನು ಓದಲಾರ ಎಂಬುದು. ಖಂಡಿತ, ಬಾಬಾಸಾಹೇಬರು ಹೇಳುವಂತೆ 73 ಆ ಬೃಹತ್ ಸಂಪುಟಗಳನ್ನು ಸಾಮಾನ್ಯ ಓದುಗನಿರಲಿ ಪಂಡಿತರೂ ಕೂಡ ಓದಲಾರರು. ಈ ನಿಟ್ಟಿನಲ್ಲಿ ಬೈಬಲ್ ಮಾದರಿಯಲ್ಲೇ ಬೌದ್ಧಧರ್ಮಕ್ಕೂ ಧರ್ಮ ಗ್ರಂಥವೊಂದನ್ನು ತಯಾರಿಸುವ ಇಂಗಿತ ವ್ಯಕ್ತಪಡಿಸುವ ಬಾಬಾಸಾಹೇಬರು ಆ ಗ್ರಂಥದಲ್ಲಿ ಬುದ್ಧನ ಸಾಮಾಜಿಕ ಮತ್ತು ನೈತಿಕ ನಿಲುವಿಗೆ ಹೆಚ್ಚು ಒತ್ತು ಕೊಡಬೇಕಾದ ಅಗತ್ಯತೆ ಹೇಳುತ್ತಾರೆ.

ಯಾಕೆಂದರೆ ಅವರು ಹೇಳುವುದು ಇದುವರೆಗೂ ಬೌದ್ಧ ಗ್ರಂಥಗಳಲ್ಲಿ ಆದ್ಯತೆ ಕೊಟ್ಟಿರುವುದು ಧ್ಯಾನ, ಚಿಂತನೆ ಮತ್ತು ಅಭಿಧಮ್ಮಕ್ಕೆ. ಈ ದಿಸೆಯಲ್ಲಿ ಈ ಮಾದರಿಯಲ್ಲಿ ಅಂದರೆ ಧ್ಯಾನ, ಚಿಂತನೆ ಮತ್ತು ಅಭಿಧಮ್ಮದ ಮಾದರಿಯಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಹರಡುವುದನ್ನು ಮುಂದುವರೆಸಿದ್ದೇ ಆದರೆ ಅದು ಅಕ್ಷರಶಃ ಬೌದ್ಧ ಧರ್ಮದ ಬೆಳವಣಿಗೆಗೆ ಮಾರಣಾಂತಿಕವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಅಂಬೇಡ್ಕರರು.

ಇನ್ನು ಎರಡನೇ ಅಂಶ ತಮ್ಮ ಆ ನೀಲನಕ್ಷೆಯಲ್ಲಿ ಬಾಬಾಸಾಹೇಬರು ಹೇಳುವುದು; ಬೌದ್ಧ ಧರ್ಮದಲ್ಲಿ ಸಾಮಾನ್ಯ ಅನುಯಾಯಿಗಳಿಗೆ ಕ್ರೈಸ್ತ ಧರ್ಮದ ಮಾದರಿಯಲ್ಲಿ ದೀಕ್ಷೆ ನೀಡುವ ಪದ್ಧತಿ ಆರಂಭಿಸುವ ಬಗ್ಗೆ. ಯಾಕೆಂದರೆ ಅವರು ಹೇಳುವುದು ಬೌದ್ಧ ಧರ್ಮದಲ್ಲಿ ಭಿಕ್ಕುಗಳಿಗೆ ಮಾತ್ರ ಈ ಥರದ ದೀಕ್ಷಾ ನೀಡುವ ಪದ್ಧತಿ ಇದ್ದು ಮತಾಂತರ ಆಗುವ ಸಾಮಾನ್ಯ ಅನುಯಾಯಿಗಳಿಗೆ ಅಂತಹ ಯಾವುದೇ ದೀಕ್ಷಾ ಪದ್ಧತಿ ಇಲ್ಲ ಎಂದು.

ಈ ಹಿನ್ನೆಲೆಯಲ್ಲಿ ಎಷ್ಟೋ ಜನ ಬೌದ್ಧ ಧರ್ಮಕ್ಕೆ ಸೇರುತ್ತಾರದರೂ ಅಂತಹ ಒಂದು ದೀಕ್ಷಾ ಪದ್ಧತಿ ಇಲ್ಲದ್ದರಿಂದಾಗಿ ಇದ್ದಕ್ಕಿದ್ದಂತೆ ಅವರು ಬಿಟ್ಟು ಹೋಗುತ್ತಿದ್ದಾರೆ. ಆದ್ದರಿಂದ ಕ್ರೈಸ್ತ ದೀಕ್ಷೆಯ ಮಾದರಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಬೌದ್ಧ ಎನಿಸಿಕೊಳ್ಳಲು ಕಡ್ಡಾಯವಾಗಿ ಅಂತಹ ಒಂದು ದೀಕ್ಷೆ ಸ್ವೀಕರಿಸುವ ಅಗತ್ಯತೆ ಅವರು ಹೇಳುತ್ತ ಅಂತೆಯೇ ಒಂದು ಬೌದ್ಧ ದೀಕ್ಷಾ ಪದ್ಧತಿಯನ್ನು ಆರಂಭಿಸುವ ಬಗ್ಗೆ ಅಂಬೇಡ್ಕರ್ ರು ಸ್ಪಷ್ಟವಾಗಿ ಒತ್ತಿ ಹೇಳುತ್ತಾರೆ.

ಹಾಗೆಯೇ ಆ ದೀಕ್ಷೆಯಲ್ಲಿ ಕೇವಲ ಪಂಚಶೀಲ ಉಚ್ಛರಿಸಿದರಷ್ಟೆ ಸಾಲದು ಜೊತೆಗೆ ಅಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸಬೇಕು ಹೇಗೆಂದರೆ ದೀಕ್ಷೆ ಸ್ವೀಕರಿಸಿದ ತಕ್ಷಣ ಆತನಲ್ಲಿ ತಾನು ಹಿಂದೂ ಎಂಬ ಮನೋಭಾವ ಹೋಗಬೇಕು ಆತ ಹೊಸ ಮನುಷ್ಯನಂತೆ ಆಗಬೇಕು ಎಂದು ಅಂಬೇಡ್ಕರರು ತಮ್ಮ ಆ ದೀಕ್ಷಾ ಪದ್ಧತಿ ಇರಬೇಕಾದ ರೀತಿಯನ್ನು ಹೇಳುತ್ತಾರೆ.

ಮುಂದುವರಿದು ಬೌದ್ಧ ಧರ್ಮ ಬೆಳವಣಿಗೆಯ ತಮ್ಮ ಆ ಬೃಹತ್ ಯೋಜನೆಯ ನೀಲನಕ್ಷೆಯಲ್ಲಿ ಅವರು ಹೇಳುವುದು ಬೌದ್ಧ ಧರ್ಮ ಬೋಧಕರ ಬಗ್ಗೆ. ಈ ನಿಟ್ಟಿನಲ್ಲಿ ಬೌದ್ಧ ಧರ್ಮ ಬೋಧಕರನ್ನು ನೇಮಿಸಿಕೊಳ್ಳಬೇಕೆನ್ನುವ ಅಂಬೇಡ್ಕರರು ಅಂತಹ ಬೋಧಕರು ಸಾಮಾನ್ಯ ಅನುಯಾಯಿಗಳಿಗೆ ಧಮ್ಮ ಬೋಧಿಸಬೇಕು ಮತ್ತು ಅನುಯಾಯಿಗಳು ಬುದ್ಧನ ಆ ಧಮ್ಮವನ್ನು ಹೇಗೆ ಪಾಲಿಸುತ್ತಿದ್ದಾರೆ ಎಂಬುದನ್ನೂ ಗಮನಿಸುತ್ತಿರಬೇಕು ಎನ್ನುತ್ತಾರೆ.

ಹಾಗೆಯೇ ಆ ಬೋಧಕರಿಗೆ ಸಂಬಳ ನೀಡುವ ಅಗತ್ಯತೆ ಹೇಳುವ ಅಂಬೇಡ್ಕರರು ಮದುವೆಯಾಗಿರುವವರನ್ನು ಕೂಡ ಅಂತಹ ಬೌದ್ಧ ಧಮ್ಮ ಬೋಧಕ ವೃತ್ತಿಗೆ ನೇಮಿಸಿಕೊಳ್ಳಬಹುದು ಎನ್ನುತ್ತಾರೆ, ಜೊತೆಗೆ ಅಂತಹವರು ಆರಂಭದಲ್ಲಿ ಪಾರ್ಟ್ ಟೈಮ್ ವೃತ್ತಿ ಮಾಡುತ್ತಿದ್ದರು ಕೂಡ ತಪ್ಪೇನಿಲ್ಲ ಎನ್ನುತ್ತಾರೆ. ಅಂದರೆ ಬಾಬಾಸಾಹೇಬರ ಪ್ರಕಾರ ಅಂತಹ ಧಮ್ಮ ಬೋಧಕರು ತಮ್ಮ ಧಮ್ಮ ಬೋಧನೆಯ ಜೊತೆ ಜೊತೆಗೆ ತಮ್ಮ ಸಂಸಾರ ಮತ್ತು ತಮ್ಮ ವೃತ್ತಿಯನ್ನೂ ಕೂಡ ನಿರ್ವಹಿಸಬಹುದು.

ಮುಂದುವರಿದು ಬಾಬಾಸಾಹೇಬರು ಹೇಳುವುದು ಬೌದ್ಧ ಧಾರ್ಮಿಕ ಪೂಜಾ ಶಾಲೆಗಳನ್ನು ಸ್ಥಾಪಿಸುವ ಬಗ್ಗೆ. ಅಂದಹಾಗೆ ಅಂತಹ ಶಾಲೆಗಳಲ್ಲಿ ಉದ್ದೇಶಿತ ಆ ಧಮ್ಮ ಬೋಧಕರು ಬೌದ್ಧ ಧರ್ಮವನ್ನು ಬೋಧಿಸಬಹುದು, ಅದರ ಜೊತೆಗೆ ಇತರ ಧರ್ಮಗಳನ್ನು ಬೌದ್ಧ ಧರ್ಮದ ಜೊತೆಗೆ ಹೋಲಿಸಿ ಧಮ್ಮದ ಅಧ್ಯಯನ ಮಾಡಬಹುದು ಎನ್ನುತ್ತಾರೆ.

ಈ ಸಂದರ್ಭದಲ್ಲಿ ಬಾಬಾಸಾಹೇಬರು ಒಂದು ಪ್ರಮುಖ ವಿಚಾರ ಪ್ರಸ್ತಾಪಿಸುತ್ತಾರೆ. ಅದು ವಿಹಾರದಲ್ಲಿ ಪ್ರತಿ ಭಾನುವಾರ ಬೌದ್ಧ ಪೂಜಾ ಸಂಪ್ರದಾಯವೊಂದನ್ನು ಆರಂಭಿಸುವ ಬಗ್ಗೆ. ಅಂದಹಾಗೆ ಅಂತಹ ಪೂಜೆಯ ನಂತರ ಧಮ್ಮ ಪ್ರವಚನ ಮಾಡಬೇಕು ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.

ಒಟ್ಟಾರೆ ಬಾಬಾಸಾಹೇಬ್ ಅಂಬೇಡ್ಕರ ಈ ನೀಲನಕ್ಷೆಯಂತೆ ಒಂದು ಬೌದ್ಧ ಧರ್ಮ ಗ್ರಂಥ ರಚಿಸುವುದು, ಒಂದು ಬೌದ್ಧ ದೀಕ್ಷಾ ಪದ್ಧತಿ ಸೃಷ್ಟಿಸುವುದು, ಬೌದ್ಧ ಬೋಧಕರನ್ನು ನೇಮಿಸಿಕೊಳ್ಳುವುದು ಮತ್ತು ಪೂಜಾ ಪದ್ಧತಿಯೊಂದನ್ನು ಪ್ರಾರಂಭಿಸಿ ಪ್ರತಿ ಭಾನುವಾರ ಬೌದ್ಧ ಅನುಯಾಯಿಗಳು ಅಂತಹ ವಾರದ ಪ್ರಾರ್ಥನೆಯಲ್ಲಿ ಕಡ್ಡಾಯ ವಾಗಿ ಪಾಲ್ಗೊಳ್ಳುವಂತೆ ಮಾಡುವುದು ಅವರ ಆ ಮಹತ್ವದ ಯೋಜನೆ ಮತ್ತು ಯೋಚನೆಯಾಗಿತ್ತು.

ಹಾಗಿದ್ದರೆ ಧಮ್ಮ ಬೆಳೆಸಲು ಇದಿಷ್ಟೇ ಸಾಕೆ? ವಿಹಾರಗಳು ಬೇಡವೆ? ಇದಕ್ಕೂ ತಮ್ಮ ನೀಲನಕ್ಷೆಯಲ್ಲಿ ಹೇಳುವ ಬಾಬಾಸಾಹೇಬರು ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅಂದರೆ ಮದ್ರಾಸ್, ಬಾಂಬೆ, ನಾಗಪುರ ಮತ್ತು ದೆಹಲಿಯಲ್ಲಿ ದೊಡ್ಡ ದೊಡ್ಡ ಬೌದ್ಧ ದೇಗುಲಗಳನ್ನು ವಿಹಾರಗಳನ್ನು ನಿರ್ಮಿಸುವ ವಿಚಾರ ಪ್ರಸ್ತಾಪಿಸುತ್ತಾರೆ. ಹಾಗೆಯೇ ಮಿಶನರಿ ಮಾದರಿಯಲ್ಲಿ ಈ ನಾಲ್ಕು ನಗರಗಳಲ್ಲಿ ಅಂದರೆ ಮದ್ರಾಸ್, ಬಾಂಬೆ, ನಾಗಪುರ ಮತ್ತು ದೆಹಲಿಯಲ್ಲಿ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಕೂಡ ಬಾಬಾಸಾಹೇಬರು ತಮ್ಮ ಆ ನಕ್ಷೆಯಲ್ಲಿ ಹೇಳುತ್ತಾರೆ.

ಮುಂದುವರಿದು ಎಲ್ಲಾ ಧರ್ಮದವರಲ್ಲಿ ಬೌದ್ಧ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಬೌದ್ಧ ಧರ್ಮದ ಬಗ್ಗೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ, ಗೆದ್ದವರಿಗೆ ಬಹುಮಾನ ನೀಡುವ ಮಾತನ್ನೂ ಬಾಬಾಸಾಹೇಬರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಪುನರುತ್ಥಾನಕ್ಕೆ ತಾನು ಹೀಗೆ ಪ್ರಾಥಮಿಕ ತಯಾರಿ ಮಾಡಿಕೊಂಡಿದ್ದೇನೆ ಮತ್ತು ಮುಂದೆಂದೂ ಅದು ಭಾರತದಿಂದ ಕಾಣೆಯಾಗದಂತೆ ನಾನು ಎಚ್ಚರಿಕೆ ವಹಿಸುವುದಾಗಿ ಬರ್ಮಾದ ಆ ಅಂತರರಾಷ್ಟ್ರೀಯ ಸಭೆಗೆ ಅವರು ತಿಳಿಸುತ್ತಾರೆ.

ನಿಜ ಹೇಳಬೇಕೆಂದರೆ ಅಂಬೇಡ್ಕರರು ಹಾಕಿಕೊಂಡಿದ್ದ ಈ ನೀಲ ನಕ್ಷೆ ಕಾರ್ಯ ರೂಪಕ್ಕೆ ಬಂದಿದ್ದರೆ ಖಂಡಿತ ಭಾರತದಲ್ಲಿ ಬೌದ್ಧ ಧರ್ಮ ಅಕ್ಷರಶಃ ಪುನರುಜ್ಜೀವನ ಗೊಂಡಿರುತ್ತಿತ್ತು. ಆದರೆ ದುರಂತ ಎಂದರೆ ಅವರು ಆ ನೀಲನಕ್ಷೆ ತಯಾರಿಸಿದ ಎರಡೇ ವರ್ಷದಲ್ಲಿ ಪರಿನಿಬ್ಬಾಣ ಹೊಂದಿದ್ದರು. ಈ ನಡುವೆ ಮತ್ತೂ ದುರಂತವೆಂದರೆ ಬಾಬಾಸಾಹೇಬರ ಅನುಯಾಯಿಗಳಿಗೆ ಅದನ್ನು ಅಂದರೆ ಬೌದ್ಧ ಧರ್ಮವನ್ನು ಪುನರುಜ್ಜೀವನ ಗೊಳಿಸುವ ಮಾತಿರಲಿ ಅಂಬೇಡ್ಕರರು ಹಾಕಿ ಕೊಂಡಿದ್ದ ಆ ನೀಲನಕ್ಷೆಯತ್ತ ಕಣ್ಣೆತ್ತಿ ನೋಡುವ ತಾಳ್ಮೆಯೂ ಇಲ್ಲದಿರುವುದು. ಈ ನಿಟ್ಟಿನಲ್ಲಿ ತಡವಾಗಿದ್ದರೂ ಈಗಲಾದರೂ ಬೌದ್ಧ ಧರ್ಮದ ಪುನರುತ್ಥಾನಕ್ಕೆ ಬಾಬಾಸಾಹೇಬರು ಹಾಕಿದ್ದ ನೀಲನಕ್ಷೆಯತ್ತ ಅವರ ಅನುಯಾಯಿಗಳು ನೋಡಲಿ. ಬೌದ್ಧ ಧರ್ಮದ ಪುನರುತ್ಥಾನಕ್ಕೆ, ಪುನರುಜ್ಜೀವನಕ್ಕೆ ಪಣ ತೊಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Bigg Boss Kannada 13: ಹೊಸ ಥೀಮ್, ಹೊಸ ಸ್ಪರ್ಧಿಗಳು, 24×7 ಲೈವ್‌; ಕಿಚ್ಚ ಸುದೀಪ್‌ ಸಾರಥ್ಯದ ಬಿಗ್‌ಬಾಸ್‌ ಕನ್ನಡ 13ರ ವಿಶೇಷತೆಗಳೇನು?

Published

on

Source: Vijayakarnataka
Bigg Boss Kannada 13: ಅರಮನೆಗೆ ಗುಡ್‌ಬೈ, ಈ ಬಾರಿ ‘ಫ್ಲೈಟ್’ನಲ್ಲಿ ಬಿಗ್‌ಬಾಸ್‌ ಪ್ರಯಾಣ; ಸೆ.6ರಿಂದ ಹೊಸ ಸೀಸನ್‌ ಶುರು!

ಸುದ್ದಿದಿನ,ಬೆಂಗಳೂರು: ಅಂತೂ ಇಂತೂ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ **‘ಬಿಗ್‌ಬಾಸ್‌ ಕನ್ನಡ ಸೀಸನ್‌ 13’**ಗೆ ಅಧಿಕೃತ ಚಾಲನೆ ಸಿಗುವ ಸಮಯ ಬಂದಿದೆ. ಈಗಾಗಲೇ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಮೂಲಕ ಕುತೂಹಲ ಹೆಚ್ಚಿಸಿರುವ ಕಾರ್ಯಕ್ರಮದ ಟಿವಿ ಸೀಸನ್‌ ಸೆಪ್ಟೆಂಬರ್‌ 6ರಿಂದ ಆರಂಭವಾಗಲಿದೆ. ಹೊಸ ಸೀಸನ್‌ನಲ್ಲಿ ಮನೆ, ಥೀಮ್‌, ಸ್ಪರ್ಧಿಗಳ ಆಯ್ಕೆ ಹಾಗೂ ವೀಕ್ಷಣಾ ಅನುಭವದಲ್ಲೂ ಹಲವು ವಿಶೇಷತೆಗಳನ್ನು ಪರಿಚಯಿಸಲಾಗುತ್ತಿದೆ.

ಕಳೆದ 12 ಸೀಸನ್‌ಗಳಂತೆ ಈ ಬಾರಿಯೂ ಕಿಚ್ಚ ಸುದೀಪ್‌ ಕಾರ್ಯಕ್ರಮದ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಸತತ 13 ಸೀಸನ್‌ಗಳನ್ನು ನಿರೂಪಣೆ ಮಾಡುತ್ತಿರುವುದು ಬಿಗ್‌ಬಾಸ್‌ ಇತಿಹಾಸದಲ್ಲೇ ಗಮನಾರ್ಹ ದಾಖಲೆಯಾಗಿದೆ.

ಹೈಲೈಟ್ಸ್: ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್‌ ಹವಾ

  • ಸೆಪ್ಟೆಂಬರ್‌ 6ರಂದು ಸಂಜೆ 7ಕ್ಕೆ ಬಿಗ್‌ಬಾಸ್‌ ಕನ್ನಡ 13ರ ಗ್ರ್ಯಾಂಡ್‌ ಪ್ರೀಮಿಯರ್‌
  • ಈ ಬಾರಿ ‘Flight’ ಥೀಮ್‌ನಲ್ಲಿ ಬಿಗ್‌ಬಾಸ್‌ ಮನೆ ಮತ್ತು ಕಾರ್ಯಕ್ರಮ
  • ಸೆಲೆಬ್ರಿಟಿಗಳ ಜತೆಗೆ ಮೂವರು ಸಾಮಾನ್ಯ ಸ್ಪರ್ಧಿಗಳಿಗೆ ಅವಕಾಶ
  • ಜಿಯೋಹಾಟ್‌ಸ್ಟಾರ್‌ನಲ್ಲಿ 24×7 ಲೈವ್‌ ವೀಕ್ಷಣೆಯ ಸೌಲಭ್ಯ
  • ಕಿಚ್ಚ ಸುದೀಪ್‌ ಸತತ 13ನೇ ಸೀಸನ್‌ಗೂ ನಿರೂಪಕರಾಗಿ ಮುಂದುವರಿಕೆ

http://Visit : www.suddidina.com

ಈ ಬಾರಿ ‘Flight’ ಥೀಮ್‌ ಏಕೆ ವಿಶೇಷ?

ಕಳೆದ ಸೀಸನ್‌ನಲ್ಲಿ ವೀಕ್ಷಕರು ಅರಮನೆ ಮಾದರಿಯ ಬಿಗ್‌ಬಾಸ್‌ ಮನೆಯನ್ನು ಕಂಡಿದ್ದರು. ಆದರೆ ಈ ಬಾರಿ ಇಡೀ ಕಾರ್ಯಕ್ರಮದ ಕಲ್ಪನೆಯೇ ಬದಲಾಗಿದೆ. ‘Flight’ ಥೀಮ್‌ ಆಧಾರಿತವಾಗಿ ಸೀಸನ್‌ 13 ರೂಪಿಸಲಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲೂ ಇದರ ಝಲಕ್‌ ಕಾಣಿಸಿಕೊಂಡಿದೆ.

ವಿಶೇಷವೆಂದರೆ ಫ್ಲೈಟ್‌ ಥೀಮ್‌ ಕೇವಲ ಪ್ರೋಮೋಗೆ ಸೀಮಿತವಾಗಿಲ್ಲ. ಬಿಗ್‌ಬಾಸ್‌ ಮನೆಯ ವಿನ್ಯಾಸದಲ್ಲೂ ಇದೇ ಪರಿಕಲ್ಪನೆಯನ್ನು ಬಳಸಲಾಗಿದೆ. ಹೀಗಾಗಿ ಈ ಬಾರಿ ಮನೆ ಹೇಗೆ ಕಾಣಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಸೆಲೆಬ್ರಿಟಿಗಳ ಜತೆಗೆ ಕಾಮನ್‌ ಮ್ಯಾನ್‌ ಎಂಟ್ರಿ

ಬಿಗ್‌ಬಾಸ್‌ ಕನ್ನಡದ ಪ್ರತಿ ಸೀಸನ್‌ನಲ್ಲೂ ಸ್ಪರ್ಧಿಗಳ ಆಯ್ಕೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಬಾರಿ ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗುವ ಮೂವರು ಸಾಮಾನ್ಯ ಸ್ಪರ್ಧಿಗಳು ಸೀಸನ್‌ 13ರ ಮನೆಗೆ ಪ್ರವೇಶಿಸಲಿದ್ದಾರೆ. ಇದರಿಂದ ಮನೆಯಲ್ಲಿ ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವಿನ ಸಂವಹನ, ಅಭಿಪ್ರಾಯ ಭೇದ ಹಾಗೂ ಹೊಸ ರೀತಿಯ ಸ್ಪರ್ಧೆ ಮೂಡುವ ನಿರೀಕ್ಷೆಯಿದೆ.

ಮನೆಯ ಪ್ರತಿಕ್ಷಣವೂ 24×7 ಲೈವ್‌

ಈ ಬಾರಿ ವೀಕ್ಷಕರಿಗೆ ಮತ್ತೊಂದು ದೊಡ್ಡ ಸೌಲಭ್ಯ ಸಿಗಲಿದೆ. ಟಿವಿ ಎಪಿಸೋಡ್‌ಗಳಿಗೆ ಮಾತ್ರ ಸೀಮಿತವಾಗದೆ, ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್‌ ಮನೆಯ 24×7 ಲೈವ್‌ ವೀಕ್ಷಣೆ ಲಭ್ಯವಿರಲಿದೆ.

ಅಂದರೆ ದಿನದ ಎಪಿಸೋಡ್‌ನಲ್ಲಿ ಪ್ರಸಾರವಾಗದ ಮನೆಯೊಳಗಿನ ಹಲವು ಬೆಳವಣಿಗೆಗಳನ್ನೂ ವೀಕ್ಷಕರು ಗಮನಿಸಬಹುದು. ಸ್ಪರ್ಧಿಗಳ ನಡುವಿನ ಮಾತುಕತೆ, ಚಟುವಟಿಕೆಗಳು ಹಾಗೂ ಅನಿರೀಕ್ಷಿತ ಘಟನೆಗಳನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ.

ಪ್ರಸಾರದ ಸಮಯವೂ ಫಿಕ್ಸ್‌

ಸೆಪ್ಟೆಂಬರ್‌ 6ರಂದು ಸಂಜೆ 7 ಗಂಟೆಗೆ ಗ್ರ್ಯಾಂಡ್‌ ಪ್ರೀಮಿಯರ್‌ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಹೊಸ ಸಂಚಿಕೆಗಳು ಪ್ರಸಾರವಾಗಲಿವೆ.

ಇನ್ನು ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ನಡೆಸಿಕೊಡುವ ಶನಿವಾರ ಮತ್ತು ಭಾನುವಾರದ ವಿಶೇಷ ಸಂಚಿಕೆಗಳು ರಾತ್ರಿ 9 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿವೆ.

ಬಿಗ್‌ಬಾಸ್‌ ಪ್ರಯಾಣ ಯಾವ ದಿಕ್ಕಿಗೆ?

ಫ್ಲೈಟ್‌ ಥೀಮ್‌, ಹೊಸ ಮುಖಗಳು, ಸಾಮಾನ್ಯ ಸ್ಪರ್ಧಿಗಳ ಪ್ರವೇಶ ಮತ್ತು 24×7 ಲೈವ್‌ ವೀಕ್ಷಣೆಯೊಂದಿಗೆ ಸೀಸನ್‌ 13 ಕುತೂಹಲ ಮೂಡಿಸಿದೆ. ಈ ‘ಫ್ಲೈಟ್‌’ನಲ್ಲಿ ಯಾರು ಟೇಕಾಫ್‌ ಆಗುತ್ತಾರೆ, ಯಾರು ಮಧ್ಯದಲ್ಲೇ ಎಲಿಮಿನೇಟ್‌ ಆಗುತ್ತಾರೆ ಮತ್ತು ಕೊನೆಯವರೆಗೂ ಯಾರು ಪ್ರಯಾಣ ಮುಂದುವರಿಸುತ್ತಾರೆ ಎಂಬುದೇ ಮುಂದಿನ ದಿನಗಳ ಪ್ರಮುಖ ಪ್ರಶ್ನೆ.

Continue Reading

ದಿನದ ಸುದ್ದಿ

ಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಏಕೀಕೃತ ವ್ಯವಸ್ಥೆ; ಶನಿವಾರ ಜನಸಂಪರ್ಕ, ಬುಧವಾರ ಮೂರು ಹಂತದ ಪರಿಶೀಲನೆ

Published

on

Prajaseva Abhiyana: ಇನ್ಮುಂದೆ ಕಚೇರಿಗೆ ಅಲೆದಾಟ ಬೇಡ; ಜನರ ಮನೆ ಬಾಗಿಲಿಗೇ ಸರ್ಕಾರ, ಸೆ.5ರಿಂದ ‘ಪ್ರಜಾಸೇವಾ’ಗೆ ಚಾಲನೆ!

ಬೆಂಗಳೂರು: ಸರ್ಕಾರಿ ಸೇವೆ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ದಿನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಪ್ರಜಾಸೇವಾ ಅಭಿಯಾನ’ಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಭಿಯಾನ ಆರಂಭವಾಗಲಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವ ವ್ಯವಸ್ಥೆ ರೂಪಿಸಲಾಗಿದೆ.

ಇದುವರೆಗೆ ವಿವಿಧ ಇಲಾಖೆ, ಯೋಜನೆ ಅಥವಾ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಲು ಜನರು ಹಲವು ಬಾರಿ ಕಚೇರಿಗಳಿಗೆ ತೆರಳಬೇಕಾಗುತ್ತಿತ್ತು. ಇದೀಗ ಈ ಅಲೆದಾಟ ಕಡಿಮೆ ಮಾಡಿ ಜನರ ಮನೆ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ಯುವುದು ಪ್ರಜಾಸೇವೆಯ ಪ್ರಮುಖ ಉದ್ದೇಶವಾಗಿದೆ.

ಹೈಲೈಟ್ಸ್: ಸೆ.5ರಿಂದ ಹೊಸ ಆಡಳಿತ ವ್ಯವಸ್ಥೆಗೆ ಚಾಲನೆ

  • ಸೆಪ್ಟೆಂಬರ್ 5ರಿಂದ ಕೂಡ್ಲಿಗಿಯಲ್ಲಿ ಪ್ರಜಾಸೇವಾ ಅಭಿಯಾನಕ್ಕೆ ಚಾಲನೆ
  • ಪ್ರತಿ ಶನಿವಾರ ತಾಲ್ಲೂಕು/ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ
  • ಬುಧವಾರ ತಾಲ್ಲೂಕು, ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಪರಿಶೀಲನೆ
  • ಗ್ರಾಮ ಒನ್ ಕೇಂದ್ರ ಹಾಗೂ ಸಭಾ ಸ್ಥಳದಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ
  • 1902 ಸಹಾಯವಾಣಿ ಮತ್ತು IPGRS ಮೂಲಕ ಕುಂದುಕೊರತೆ ದಾಖಲಿಸುವ ಅವಕಾಶ

http://Visit : www.suddidina.com

ಪ್ರತಿ ಶನಿವಾರ ಜನರೊಂದಿಗೆ ನೇರ ಸಂಪರ್ಕ

ಪ್ರತಿ ಶನಿವಾರ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಸಭೆಗಳನ್ನು ಪರ್ಯಾಯವಾಗಿ ನಡೆಸಲು ನಿರ್ಧರಿಸಲಾಗಿದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತದೆ.

ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಮನೆ-ಮನೆಗೆ ಕರಪತ್ರ ವಿತರಿಸುವುದರ ಜತೆಗೆ AI ಆಧಾರಿತ ಕಾಲ್ ಸೆಂಟರ್ ಮೂಲಕ ಸಭೆಯ ದಿನಾಂಕ, ಸ್ಥಳ ಹಾಗೂ ಸಮಯದ ಕುರಿತು ಮಾಹಿತಿ ನೀಡಲಾಗುತ್ತದೆ.

ಗ್ರಾಮ ಒನ್‌ನಲ್ಲೇ ಅರ್ಜಿ ಸಲ್ಲಿಕೆ

ಜನರು ತಮ್ಮ ಅರ್ಜಿ ಹಾಗೂ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿ ಸಲ್ಲಿಸಬಹುದು. ಸಭಾ ಸ್ಥಳದಲ್ಲಿಯೂ ಗ್ರಾಮ ಒನ್ ಮಳಿಗೆ ಸ್ಥಾಪಿಸಿ ಕಂಪ್ಯೂಟರ್, ಪ್ರಿಂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತದೆ.

ಈ ಸಭೆಗಳಲ್ಲಿ ಹೊಸ ಅಹವಾಲುಗಳು ಮತ್ತು ಈಗಾಗಲೇ ದೂರು ದಾಖಲಿಸಿದ್ದರೂ ಪರಿಹಾರವಾಗದ ಅಹವಾಲುಗಳಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. 21 ದಿನಗಳ ಬಳಿಕವೂ ಸಮರ್ಪಕ ಪರಿಹಾರ ಸಿಗದ ಪ್ರಕರಣಗಳನ್ನೂ ಆದ್ಯತೆಯಿಂದ ಪರಿಗಣಿಸಲಾಗುತ್ತದೆ.

ಬುಧವಾರ ಮೂರು ಹಂತದ ಪರಿಶೀಲನೆ

ಪ್ರಜಾಸೇವಾ ಸಭೆಗಳಲ್ಲಿ ಸ್ವೀಕರಿಸಿದ ಅರ್ಜಿ ಮತ್ತು ಅಹವಾಲುಗಳ ಮೇಲೆ ಪ್ರತಿ ಬುಧವಾರ ಮೂರು ಹಂತದ ಪರಿಶೀಲನೆ ನಡೆಯಲಿದೆ. ಬೆಳಗ್ಗೆ 9ರಿಂದ 11ರವರೆಗೆ ತಾಲ್ಲೂಕು ಮಟ್ಟದಲ್ಲಿ, 11ರಿಂದ ಮಧ್ಯಾಹ್ನ 1ರವರೆಗೆ ಉಪವಿಭಾಗ ಮಟ್ಟದಲ್ಲಿ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಯಲಿದೆ.

ತಾಲ್ಲೂಕಿನಲ್ಲಿ ಬಗೆಹರಿಯದ ಸಮಸ್ಯೆಗಳು ಉಪವಿಭಾಗಾಧಿಕಾರಿಗೆ, ಅಲ್ಲಿಂದ ಜಿಲ್ಲಾಧಿಕಾರಿಗೆ ಮೇಲ್ದರ್ಜೆಗೆ ವರ್ಗಾವಣೆಯಾಗಲಿವೆ. ನಿಗದಿತ ಅವಧಿಯಲ್ಲಿ ಪರಿಹಾರವಾಗದ ಪ್ರಕರಣಗಳು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಮಟ್ಟಕ್ಕೂ ಸ್ವಯಂಚಾಲಿತವಾಗಿ ಎಸ್ಕಲೇಷನ್ ಆಗುವ ವ್ಯವಸ್ಥೆ ಇರಲಿದೆ.

ಸ್ಥಳದಲ್ಲೇ ಮಂಜೂರಾತಿ, ಆನ್‌ಲೈನ್‌ನಲ್ಲಿ ಸ್ಥಿತಿ

ಅರ್ಹ ಫಲಾನುಭವಿಗಳಿಗೆ ಕೆಲವು ಯೋಜನೆಗಳ ಮಂಜೂರಾತಿ ಪತ್ರವನ್ನು ಸ್ಥಳದಲ್ಲೇ ನೀಡಲು ಅವಕಾಶವಿದೆ. ಅರ್ಜಿ ಅಥವಾ ದೂರು ಯಾವ ಹಂತದಲ್ಲಿದೆ ಎಂಬುದನ್ನು ಸಾರ್ವಜನಿಕರು ನೈಜ-ಸಮಯದ ಸ್ಥಿತಿ ಪರಿಶೀಲನಾ ವ್ಯವಸ್ಥೆಯ ಮೂಲಕ ತಿಳಿದುಕೊಳ್ಳಬಹುದು.

ಇದಲ್ಲದೆ, ಪ್ರತಿ ಸಭೆಯ ಸಂಪೂರ್ಣ ವಿವರ, ಛಾಯಾಚಿತ್ರ, ವೀಡಿಯೋ ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಸಾರ್ವಜನಿಕರು 1902 ಸಹಾಯವಾಣಿ ಅಥವಾ ಅಧಿಕೃತ IPGRS ಪೋರ್ಟಲ್ ಮೂಲಕವೂ ಕುಂದುಕೊರತೆ ದಾಖಲಿಸಬಹುದು.

ಆಡಳಿತಕ್ಕೆ ಹೊಣೆಗಾರಿಕೆ, ಜನರಿಗೆ ಉತ್ತರ

ಪ್ರಜಾಸೇವಾ ಅಭಿಯಾನದ ಯಶಸ್ಸು ಕೇವಲ ಸಭೆ ನಡೆಸುವುದರಲ್ಲಿ ಇಲ್ಲ; ದೂರು ಸ್ವೀಕರಿಸಿ, ಕಾಲಮಿತಿಯಲ್ಲಿ ಪರಿಹರಿಸಿ, ಅದರ ಹೊಣೆಗಾರಿಕೆಯನ್ನು ನಿಗದಿಪಡಿಸುವುದರಲ್ಲಿ ಇದೆ. ಜಿಲ್ಲಾಉಸ್ತುವಾರಿ ಕಾರ್ಯದರ್ಶಿಗಳು, ಅಧಿಕಾರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳ ನಿರಂತರ ಮೇಲ್ವಿಚಾರಣೆಯ ಮೂಲಕ ಬಾಕಿ ಪ್ರಕರಣಗಳ ವಿಲೇವಾರಿಗೆ ಒತ್ತು ನೀಡಲಾಗಿದೆ. ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸುವ ಈ ವ್ಯವಸ್ಥೆ ಆಡಳಿತದ ಹೊಸ ಮಾದರಿಯಾಗುವ ನಿರೀಕ್ಷೆ ಮೂಡಿಸಿದೆ.

Continue Reading

ದಿನದ ಸುದ್ದಿ

Fake Doctors in Karnataka: ಜೀವದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರು; ದಾಳಿ, ದಂಡ, ಕೇಸ್‌ಗಳ ನಡುವೆಯೂ ಮುಂದುವರಿದ ಜಾಲ

Published

on

karnataka-fake-doctors-582-cases-health-department-action
Fake Doctors in Karnataka: ಕರ್ನಾಟಕದಲ್ಲಿ ನಕಲಿ ವೈದ್ಯರ ಹಾವಳಿ; 3 ವರ್ಷದಲ್ಲಿ 582 ಪ್ರಕರಣ, ಕ್ಲಿನಿಕ್‌ಗಳಿಗೆ ಬೀಗ!

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಕಳಪೆ ಔಷಧ ಪ್ರಕರಣಗಳು ಚರ್ಚೆಯಲ್ಲಿರುವ ನಡುವೆಯೇ, ವೈದ್ಯಕೀಯ ಕ್ಷೇತ್ರದ ಮತ್ತೊಂದು ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಅನಧಿಕೃತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ನಕಲಿ ವೈದ್ಯರ ಹಾವಳಿ ಮುಂದುವರಿದಿದ್ದು, ಕಳೆದ ಮೂರು ವರ್ಷಗಳಲ್ಲಿ ಆರೋಗ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 582 ನಕಲಿ ವೈದ್ಯರ ಪ್ರಕರಣಗಳು ದಾಖಲಾಗಿವೆ. ಇವರಿಗೆ ಸೇರಿದ ಅನಧಿಕೃತ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದ್ದು, ಹಲವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚೆಗೆ ಕೋನಸಾಗರದಲ್ಲಿ ನಕಲಿ ವೈದ್ಯೆಯೊಬ್ಬರು ನೀಡಿದ ಚುಚ್ಚುಮದ್ದಿನ ಬಳಿಕ ರೈತರೊಬ್ಬರು ಮೃತಪಟ್ಟಿರುವ ಆರೋಪದ ಪ್ರಕರಣ ನಕಲಿ ವೈದ್ಯರ ಜಾಲದ ಅಪಾಯಕಾರಿ ಮುಖವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅನಧಿಕೃತವಾಗಿ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಕೆಲವರು ಮನೆಯಲ್ಲೇ ಕ್ಲಿನಿಕ್‌ಗಳನ್ನು ನಡೆಸುತ್ತಿರುವುದು ಹಾಗೂ ಪ್ರಯೋಗಾಲಯಗಳನ್ನೂ ನಿರ್ವಹಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಹೈಲೈಟ್ಸ್: ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ತೀವ್ರ

  • ಮೂರು ವರ್ಷದಲ್ಲಿ ಕರ್ನಾಟಕದಲ್ಲಿ 582 ನಕಲಿ ವೈದ್ಯರ ಪ್ರಕರಣ ದಾಖಲು
  • 87 ಮಂದಿಗೆ ದಂಡ; 128 ಮಂದಿ ದಂಡ ಪಾವತಿಸಿಲ್ಲ
  • 29 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ
  • ಕಲಬುರಗಿ, ರಾಯಚೂರು, ಧಾರವಾಡ, ವಿಜಯಪುರದಲ್ಲಿ ಪ್ರಕರಣಗಳು ಹೆಚ್ಚು
  • ಅನಧಿಕೃತ ವೈದ್ಯಕೀಯ ವೃತ್ತಿಗೆ 3 ವರ್ಷ ಜೈಲು, ₹1 ಲಕ್ಷದವರೆಗೆ ದಂಡದ ಅವಕಾಶ

http://Visit : www.suddidina.com

582 ಪ್ರಕರಣ, 87 ಮಂದಿಗೆ ದಂಡ

ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಮೂರು ವರ್ಷಗಳ ಅವಧಿಯಲ್ಲಿ 582 ನಕಲಿ ವೈದ್ಯರ ಪ್ರಕರಣಗಳು ದಾಖಲಾಗಿವೆ. ಇವರ ಕ್ಲಿನಿಕ್‌ಗಳನ್ನು ಮುಚ್ಚುವ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 87 ನಕಲಿ ವೈದ್ಯರಿಗೆ ದಂಡ ವಿಧಿಸಲಾಗಿದ್ದು, 128 ಮಂದಿ ಇನ್ನೂ ದಂಡ ಪಾವತಿಸಿಲ್ಲ. ಇದೇ ಅವಧಿಯಲ್ಲಿ 29 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿವೆ.

ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ವ್ಯಾಪ್ತಿಯಲ್ಲಿಯೂ ನೋಂದಣಿ ಅಥವಾ ಅಗತ್ಯ ಪರವಾನಗಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುತ್ತಿರುವವರ ವಿರುದ್ಧ ದಾಳಿ ನಡೆಸಲಾಗಿದೆ.

ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಜಾಲ

ನಕಲಿ ವೈದ್ಯರನ್ನು ಪತ್ತೆಹಚ್ಚಲು ರಾಜ್ಯ ಸರಕಾರ 2017ರಲ್ಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ವಿಶೇಷ ಪಡೆ ರಚಿಸಿತ್ತು. ಇದರಲ್ಲಿ ಪೊಲೀಸ್‌ ಇಲಾಖೆ, ಆಯುಷ್‌ ಅಧಿಕಾರಿಗಳು ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ.

ನಿರಂತರ ದಾಳಿಗಳ ನಡುವೆಯೂ ನಕಲಿ ವೈದ್ಯರ ಜಾಲ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ವಿಶೇಷವಾಗಿ ಸಣ್ಣಪುಟ್ಟ ಗಲ್ಲಿ, ಕೊಳೆಗೇರಿ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಹೆಸರಿನಲ್ಲಿ ಇಂತಹವರು ಕಾರ್ಯನಿರ್ವಹಿಸುತ್ತಿರುವ ಆರೋಪಗಳಿವೆ. ನಗರ ಪ್ರದೇಶಗಳಲ್ಲೂ ಇಂತಹ ಅನಧಿಕೃತ ಕ್ಲಿನಿಕ್‌ಗಳು ಪತ್ತೆಯಾಗುತ್ತಿವೆ.

ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಕರಣ

ಕಾರ್ಯಾಚರಣೆಯಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ವೈದ್ಯರು ಪತ್ತೆಯಾಗುತ್ತಿದ್ದಾರೆ. ಕಲಬುರಗಿ, ರಾಯಚೂರು, ಧಾರವಾಡ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ಹಣದಲ್ಲಿ ಚಿಕಿತ್ಸೆ ಸಿಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕರು ಅರ್ಹತೆ ಮತ್ತು ನೋಂದಣಿ ಪರಿಶೀಲಿಸದೆ ಇಂತಹವರನ್ನು ಸಂಪರ್ಕಿಸುವುದು ಸಮಸ್ಯೆಗೆ ಕಾರಣವಾಗುತ್ತಿದೆ.

ಕಾನೂನು ಉಲ್ಲಂಘಿಸಿದರೆ ಜೈಲು, ದಂಡ

ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವುದು ಪತ್ತೆಯಾದರೆ ಕೆಪಿಎಂಇ ತಿದ್ದುಪಡಿ ಅಧಿನಿಯಮ 2017ರ ಸೆಕ್ಷನ್ 19ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ನೋಂದಣಿ ಇಲ್ಲದೆ ಖಾಸಗಿ ವೈದ್ಯಕೀಯ ಸಂಸ್ಥೆ ನಡೆಸಿದರೆ ಅದನ್ನು ಮುಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ದಂಡ ಹಾಗೂ ನೋಂದಣಿ ರದ್ದತಿಯಂತಹ ಕ್ರಮಗಳಿಗೂ ಅವಕಾಶವಿದೆ.

ನಕಲಿ ವೈದ್ಯರ ವಿರುದ್ಧದ ಕಾನೂನು ಕ್ರಮದ ಜತೆಗೆ ಸಾರ್ವಜನಿಕರ ಜಾಗೃತಿಯೂ ಅತ್ಯಂತ ಮುಖ್ಯ. ವೈದ್ಯರನ್ನು ಸಂಪರ್ಕಿಸುವ ಮುನ್ನ ಅವರ ವೈದ್ಯಕೀಯ ನೋಂದಣಿ, ಅರ್ಹತೆ ಮತ್ತು ಕ್ಲಿನಿಕ್‌ನ ಕಾನೂನುಬದ್ಧ ನೋಂದಣಿ ಪರಿಶೀಲಿಸುವುದು ಜೀವ ರಕ್ಷಣೆಯ ಮೊದಲ ಹೆಜ್ಜೆಯಾಗಬಹುದು.

ಸಿಕ್ಕಿಬಿದ್ದ ನಕಲಿ ವೈದ್ಯರು ಅಂಕಿ-ಅಂಶ (2024-2026)

  • ಕಲಬುರಗಿ: 127
  • ರಾಯಚೂರು: 124
  • ಧಾರವಾಡ: 75
  • ಕೋಲಾರ: 31
  • ವಿಜಯಪುರ: 24
  • ಬಳ್ಳಾರಿ: 23
  • ದಕ್ಷಿಣ ಕನ್ನಡ: 20
  • ಬೆಂಗಳೂರು ನಗರ: 16

“ನಕಲಿ ಔಷಧಿ ಜಾಲದಂತೆ ನಕಲಿ ವೈದ್ಯರಿಗೂ ಕಡಿವಾಣ ಹಾಕಲಾಗುವುದು. ಅಂಥವರ ಪತ್ತೆಗೆ ಯೋಜನೆ ರೂಪಿಸುತ್ತೇವೆ. ಸಿಕ್ಕಿಬಿದ್ದಲ್ಲಿ ವಿಳಂಬವಿಲ್ಲದೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತೇವೆ. ಜನರು ಮಾಹಿತಿ ಕೊಟ್ಟರೂ ಕ್ರಮ ವಹಿಸುತ್ತೇವೆ.”

             – ಯು.ಟಿ.ಖಾದರ್ ಆರೋಗ್ಯ ಸಚಿವ

Continue Reading

Trending