ಬಹಿರಂಗ
ಭಾರತದ ಇತಿಹಾಸದ ಅಂಬೇಡ್ಕರ್‌ವಾದಿ ವಿಶ್ಲೇಷಣೆ
- ರಘೋತ್ತಮ ಹೊ.ಬ
ಭಾರತದ ಇತಿಹಾಸ ಅದು ಹೇಗಿದೆ ಎಂದು ಯಾರಾದರೂ ತಾವು ಕಲಿತದ್ದನ್ನು ನೆನಪಿಸಿಕೊಂಡರೆ ಅಥವಾ ಕಲಿಯಲು ಹೊರಟರೆ ಅವರಿಗೆ ತಿಳಿದುಬರುವುದು ಬರೀ ಮುಸ್ಲಿಂ ಆಕ್ರಮಣಕಾರರ ಧಾಳಿಯ ಅನುಕ್ರಮಣಿಕೆ ಎಂಬುದು. ನಿಜ, ಅಲ್ಲಿ ತದನಂತರ ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಹೀಗೆ ವಿದೇಶಿ ಧಾಳಿಕೋರರ ದಾಖಲೀಕರಣವೂ ಇದೆ. ಆದರೆ ಅತಿ ಮಹತ್ವದ್ದಾಗಿ ಅಂದರೆ ಎರಡು ಅಥವಾ ಎರಡೂವರೆ ಸಾವಿರ ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ವ್ಯಾಪಕವಾಗಿ ಕಾಣಬರುವುದೆಂದರೆ ಅಥವಾ ಕಾಣಿಸಲ್ಪಡುವುದೆಂದರೆ ಅದು ಮುಸ್ಲಿಂ ಆಕ್ರಮಣ ಮತ್ತು ಧಾಳಿಗಳು. ಯಾಕೆ ಹೀಗೆ? ಈ ನಿಟ್ಟಿನಲ್ಲಿ ಹೇಳುವುದಾದರೆ ಭಾರತದ ಇತಿಹಾಸದ ಈ ಬಗೆಯ ದಾಖಲೀಕರಣವೇ ತಪ್ಪು ಎಂಬುದು.
ಹೇಗೆ? ಅಂಬೇಡ್ಕರ್‌ರವರ ಸಂಶೋಧನಾಭರಿತ ಬರಹಗಳ (ಇಂಗ್ಲಿಷ್ ಸಂ.3, ಪು.275) ಆಧಾರದ ಮೇಲೆ ಹೇಳುವುದಾದರೆ ಭಾರತದ ಇತಿಹಾಸ ಬರೆದಿರುವ ಅಥವಾ ದಾಖಲಿಸಿರುವ ಕಾರ್ಯವೇ ತಪ್ಪು ಮಾರ್ಗದಲ್ಲಿ ನಡೆದಿದೆ ಅಥವಾ ಕೆಲವು ತಪ್ಪು ಕಲ್ಪನೆಗಳ ಹಾದಿಯಲ್ಲಿ ಅದು ಬರೆಯಲ್ಪಟ್ಟಿದೆ ಎಂಬುದು. ಹಾಗಿದ್ದರೆ ಭಾರತದ ಇತಿಹಾಸದ ದಾಖಲೀಕರಣ ಮಾಡಿಕೊಂಡ ಅಥವಾ ದಾಖಲಿಸಿದವರು ಮಾಡಿದ ಮೊದಲ ತಪ್ಪು ಕಲ್ಪನೆ ಏನು? ಉತ್ತರ: ಮೊದಲನೆಯದು, ಇಡೀ ಇತಿಹಾಸದ ಉದ್ದಕ್ಕೂ ಭಾರತದ ಸಂಸ್ಕೃತಿ ಒಂದೇ ತೆರನಾಗಿತ್ತು ಎಂದುಕೊಂಡದ್ದು. ಎರಡನೆಯದು, ಭಾರತದ ರಾಜಕಾರಣದಲ್ಲಿ ನಡೆದ ಸಂಘರ್ಷಗಳೆಲ್ಲವೂ ಕೇವಲ ರಾಜಕೀಯ ಮತ್ತು ವಂಶಪರಂಪರೆಯ ಅಂಶಗಳನ್ನಷ್ಟೆ ಹೊಂದಿದ್ದವು, ಮತ್ತಾವುದೇ ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಅದು ಒಳಗೊಂಡಿರಲಿಲ್ಲ ಎಂದುಕೊಂಡದ್ದು.
ಸತ್ಯ, ಉದಾಹರಣೆಗೆ ಭಾರತದ ಇತಿಹಾಸ ಭಾರತವನ್ನು ಉದ್ದಕ್ಕೂ ಒಂದೇ ಸಂಸ್ಕೃತಿ ಹೊಂದಿತ್ತು ಎಂದು ಕಲ್ಪಿಸಿಕೊಂಡಿತ್ತು ಎಂಬ ಪರಿಕಲ್ಪನೆಗೆ ಪೂರಕವಾಗಿ ಹೇಳುವುದಾದರೆ ಭಾರತದ ಇತಿಹಾಸ ಬ್ರಾಹ್ಮಣಧರ್ಮ, ಬೌದ್ಧಧರ್ಮ ಮತ್ತು ಜೈನಧರ್ಮಗಳನ್ನು ತನ್ನ ಇತಿಹಾಸದ ವಿವಿಧ ಹಂತಗಳು ಎಂದುಕೊಳ್ಳಲಿಲ್ಲ! ಹಾಗೆಯೇ ಅವುಗಳ ನಡುವೆ ಯಾವುದೇ ಮೂಲಭೂತ ಸಂಘರ್ಷಗಳು ತಿಕ್ಕಾಟಗಳು ನಡೆದೇ ಇಲ್ಲ ಎಂದುಕೊಂಡದ್ದು! ಇತಿಹಾಸದ ದಾಖಲೀಕರಣದ ಇಂತಹ ತಪ್ಪು ನಡೆಯಿಂದಾಗಿ ಭಾರತದ ಇತಿಹಾಸ ಒಂದು ಯಾಂತ್ರಿಕ ಪ್ರಕ್ರಿಯೆಯಾಗಿ ದಾಖಲಾಗಿದೆ. ಹೇಗೆಂದರೆ ಒಂದು ವಂಶದ ನಂತರ ಮತ್ತೊಂದು ವಂಶ…, ಒಬ್ಬ ಆಡಳಿತಗಾರನ ನಂತರ ಮತ್ತೊಬ್ಬ ಆಡಳಿತಗಾರ… ಹೀಗೆ.
ಹಾಗಿದ್ದರೆ ಇತಿಹಾಸ ರಚಿಸಲ್ಪಟ್ಟ ಈ ಮಾದರಿಗೆ ಸೂಚಿಸಬಹುದಾದ ಅಥವಾ ಅಳವಡಿಸಬಹುದಾದ ಪರಿಹಾರ ಸಾಮಗ್ರಿಗಳು? ಮೊದಲನೆಯದು, ಭಾರತದಲ್ಲಿ ಸಾಮಾನ್ಯ ಸಂಸ್ಕೃತಿ ಎಂಬುದು ಇರಲೇ ಇಲ್ಲ ಎಂಬುದನ್ನು ಅರಿಯುವುದು. ಎರಡನೆಯದು, ಮುಸ್ಲಿಮರ ಧಾಳಿಗಿಂತಲಿನ ಮೊದಲಿನ ಇತಿಹಾಸ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವಿನ ಮಾರಕ ಕಾಳಗ ಎಂಬುದನ್ನು ಅರಿಯುವುದು, ಗುರುತಿಸುವುದು.
ಸಾಮಾನ್ಯ ಸಂಸ್ಕೃತಿ ಇಲ್ಲ ಎಂಬುದರ ಬಗ್ಗೆ ಹೇಳುವುದಾದರೆ, ಇತಿಹಾಸದಲ್ಲಿ ಭಾರತದಲ್ಲಿ ಮೂರು ಬಗೆಯ ಭಾರತಗಳಿದ್ದವು. 1.ಬ್ರಾಹ್ಮಣ ಭಾರತ 2.ಬೌದ್ಧ ಭಾರತ 3.ಹಿಂದೂ ಭಾರತ. ಈ ಮೂರೂ ಪ್ರತಿಯೊಂದೂ ತನ್ನದೇ ಆದ ಪ್ರತ್ಯೇಕ ಸಂಸ್ಕೃತಿಗಳನ್ನು ಹೊಂದಿದ್ದವು. ಹಾಗೆಯೇ ಮುಸ್ಲಿಂ ಆಕ್ರಮಣಕ್ಕಿಂತ ಮೊದಲು ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವೆ ಮಾರಕ ಕಾಳಗ ನಡೆದಿತ್ತು ಎಂಬುದರ ಬಗ್ಗೆ ಹೇಳುವುದಾದರೆ, ಭಾರತದ ಇತಿಹಾಸದ ಈ ಪ್ರಮುಖ ಅಂಶವನ್ನು ಕಡೆಗಣಿಸಿದರೆ ಅಥವಾ ಇತಿಹಾಸ ಅಧ್ಯಯನಕಾರರು ಗುರುತಿಸುವಲ್ಲಿ ವಿಫಲರಾದರೆ ಭಾರತದ ನೈಜ ಇತಿಹಾಸ ಆ ಮೂಲಕ ಇತಿಹಾಸ ಎಂಬ ಆ ಪದದ ಅರ್ಥ ಮತ್ತು ಉದ್ದೇಶ ಈಡೇರುವುದು ಸಾಧ್ಯವೇ ಇಲ್ಲ ಎಂಬುದು.
ಆದ್ದರಿಂದ ಈ ಅಂಶಗಳ ಬಗ್ಗೆ , ಅದರಲ್ಲೂ ಭಾರತದ ಇತಿಹಾಸ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವಿನ ಸಂಘರ್ಷ ಎಂಬ ಬಗ್ಗೆ ನಾವು ತಿಳಿದುಕೊಳ್ಳುವುದಾದರೆ ಈ ಅಂಶ ಹೆಕ್ಕುವ ಅಂಬೇಡ್ಕರ್‌ರವರ ವಿಚಾರಗಳನ್ನು ದಾಖಲಿಸುವುದಾದರೆ ಅಂಬೇಡ್ಕರ್‌ರವರು ಹೇಳುವುದು “ಭಾರತದ ಇತಿಹಾಸದಲ್ಲಿ ಭಾರತದ ಮೇಲೆ ನಡೆದಿರುವ ಮುಸ್ಲೀಮರ ಧಾಳಿಯ ಅಂಶಗಳ ಬಗ್ಗೆ ಸಿಕ್ಕಾಪಟ್ಟೆ ಒತ್ತು ನೀಡಲಾಗಿದೆ. ಹಿಮಪಾತ ಉಂಟಾಗುವಾಗ ಒಂದು ಅಲೆಯಾದ ಮೇಲೆ ಮತ್ತೊಂದು ಅಲೆ ಬರುವಂತೆ ಒಟ್ಟಾರೆ ಒಂದು ಬೃಹತ್ ಹಿಮಪಾತದ ರೀತಿ ಮುಸ್ಲಿಂ ಧಾಳಿಕೋರರು ಭಾರತಕ್ಕೆ ಬಂದರು, ಈ ಜನರನ್ನು ಸುತ್ತುವರಿದರು ಮತ್ತು ಇಲ್ಲಿಯ ರಾಜರನ್ನು ಕೆಳಗಿಳಿಸಿದರು… ಹೀಗೆ ರೀಲುಗಟ್ಟಲೆ ಬರೆಯಲಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಂಕುಚಿತ ದೃಷ್ಟಿಕೋನದಲ್ಲಿ ನೋಡಿದರು ಕೂಡ ಈ ಅಧ್ಯಯನಯೋಗ್ಯ ಇಂತಹ ಧಾಳಿಗಳಲ್ಲಿ ಕೇವಲ ಮುಸ್ಲಿಂ ಧಾಳಿಗಳಷ್ಟೇ ಅಲ್ಲ, ಇತರ ಧಾಳಿಗಳೂ ಕೂಡ ಮಹತ್ವ ಪಡೆಯುತ್ತವೆ ಎಂಬುದು. ಹಾಗೆಯೇ ಇತರೆ ಆಕ್ರಮಣಗಳು, ಧಾಳಿಗಳು ಅಂತಹ ಪ್ರಮುಖವಾದುವಲ್ಲ ಎನಿಸಿದರೂ ಕೂಡ ಅವು ಮುಸ್ಲಿಂ ಧಾಳಿಗಳಷ್ಟೆ ಮಹತ್ವ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಹಿಂದೂ ಭಾರತವನ್ನು ಮುಸ್ಲಿಂ ಧಾಳಿಕೋರರು ಆಕ್ರಮಿಸಿದರೆ ಬೌದ್ಧ ಭಾರತವನ್ನು ಬ್ರಾಹ್ಮಣ ಆಕ್ರಮಣಕಾರರು ಆಕ್ರಮಿಸಿದರು”. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.3, ಪು.273).
ಅರೆ, ಇದೇನಿದು? ಬ್ರಾಹ್ಮಣ ಆಕ್ರಮಣಕಾರರು? ಎಂದು ಯಾರಿಗಾದರೂ ಅನಿಸದಿರದು. ಆದರೆ ಭಾರತದ ಇತಿಹಾಸ ಇದನ್ನು ಗುರುತಿಸುವಲ್ಲಿ ವಿಫಲವಾಗಿರುವುದು ಅಥವಾ ಗುರುತಿಸದೆ ಮರೆಮಾಚಿರುವುದು ಏಕೆ ಎಂಬ ಪ್ರಶ್ನೆ ಎಂಥವರಿಗಾದರೂ ಕಾಡದಿರದು. ಹಾಗೆಯೇ ಅದಕ್ಕೆ ಉತ್ತರವೂ ಕೂಡ ಅಷ್ಟೆ ಸುಲಭವಾಗಿ ಸಿಗುತ್ತದೆ. ಇರಲಿ, ಅದನ್ನು ಮುಂದೆ ಎಂದಾದರೂ ಚರ್ಚಿಸೋಣ. ಈ ದಿಸೆಯಲ್ಲಿ ಮತ್ತೆ ಈ ಲೇಖನದ ಮುಖ್ಯ ಉದ್ದೇಶಕ್ಕೆ ಬರುವುದಾದರೆ, ಹಾಗಿದ್ದರೆ ಮುಸ್ಲಿಂ ಆಕ್ರಮಣ ಮತ್ತು ಬ್ರಾಹ್ಮಣರ ಆಕ್ರಮಣಗಳ ನಡುವೆ ಏನಾದರೂ ಸಾಮ್ಯತೆ ಇತ್ತಾ? ಅಂಬೇಡ್ಕರರ ಪ್ರಕಾರ ಎರಡು ಆಕ್ರಮಣಗಳಲ್ಲೂ ಸಾಕಷ್ಟು ಸಾಮ್ಯತೆ ಇತ್ತು. ಉದಾಹರಣೆಗೆ ತಮ್ಮ ವಂಶಪಾರಂಪರ್ಯ ಆಳ್ವಿಕೆಯ ಉಳಿಯುವಿಕೆಗಾಗಿ ಮುಸ್ಲಿಂ ಆಕ್ರಮಣಕಾರರು ಪರಸ್ಪರ ಕಾದಾಡಿದರೆ ಉದಾಹರಣೆಗೆ ಹೇಳುವುದಾದರೆ ಅರಬ್ಬರು, ಟರ್ಕರು, ಮಂಗೋಲಿಯನ್ನರು, ಆಪ್ಘನ್ನರು… ಹೀಗೆ ಪರಸ್ಪರ ಕಾದಾಡಿದರೆ ಬ್ರಾಹ್ಮಣ ಆಕ್ರಮಣಕಾರರು ಕೂಡ ಪರಸ್ಪರ ಕಾದಾಡಿದರು. ಆದರೆ ಒಂದು ವ್ಯತ್ಯಾಸವೆಂದರೆ ಮುಸ್ಲಿಮರು ಹಿಂದೂ ಭಾರತದ ಮೇಲೆ ಧಾಳಿ ನಡೆಸಿದರೆ ಬ್ರಾಹ್ಮಣ ಆಕ್ರಮಣಕಾರರು ಬೌದ್ಧಧರ್ಮ ಮತ್ತು ಬೌದ್ಧ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯದ ಮೇಲೆ ಧಾಳಿ ನಡೆಸಿದರು. ಈ ಹಿನ್ನೆಲೆಯಲ್ಲಿ ಹಿಂದೂ ಭಾರತದ ಮೇಲೆ ಮುಸ್ಲಿಂ ಆಕ್ರಮಣಕಾರರು ನಡೆಸಿದ ಧಾಳಿ ಅಧ್ಯಯನಯೋಗ್ಯವಾದುದಾದರೆ ಬೌದ್ಧ ಭಾರತದ ಮೇಲೆ ಬ್ರಾಹ್ಮಣ ಆಕ್ರಮಣಕಾರರು ನಡೆಸಿದ ಧಾಳಿ ಕೂಡ ಅಷ್ಟೇ ಅಧ್ಯಯನಯೋಗ್ಯವಾದುದು. ಹಾಗಂತ ಬೌದ್ಧಧರ್ಮ ಆ ಮೂಲಕ ಬೌದ್ಧ ಭಾರತ ನಾಶಗೊಳಿಸಲು ಬ್ರಾಹ್ಮಣ ಆಕ್ರಮಣಕಾರರು ನಡೆಸಿದ ಧಾಳಿ ಹಿಂದೂ ಭಾರತದ ಮೇಲೆ ಮುಸ್ಲಿಂ ಆಕ್ರಮಣಕಾರರು ನಡೆಸಿದ ಧಾಳಿಗಿಂತ ಭಿನ್ನವೇನಿರಲಿಲ್ಲ. ಒಟ್ಟಾರೆ ಬೌದ್ಧ ಭಾರತದ ಮೇಲೆ ಬ್ರಾಹ್ಮಣ ಆಕ್ರಮಣಕಾರರು ನಡೆಸಿದ ಧಾಳಿ ಮುಸ್ಲಿಂ ಆಕ್ರಮಣಕಾರರಷ್ಟೇ ಭೀಕರ ಮತ್ತು ಹಿಂಸಾತ್ಮಕವಾಗಿತ್ತು.
ಮತ್ತೂ ಮುಂದುವರೆದು ಹೇಳುವುದಾದರೆ ಜನತೆಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದ ಮೇಲೆ ಬೀರಿದ ಶಾಶ್ವತ ಪರಿಣಾಮಗಳ ಆಧಾರದ ಮೇಲೆ ಹೇಳುವುದಾದರೆ ಬೌದ್ಧಭಾರತದ ಮೇಲೆ ಬ್ರಾಹ್ಮಣ ಆಕ್ರಮಣಕಾರರ ಧಾಳಿ ಅದೆಷ್ಟು ತೀವ್ರವಾಗಿತ್ತೆಂದರೆ ಇದಕ್ಕೆ ಹೋಲಿಸಿದರೆ ಹಿಂದೂ ಭಾರತದ ಮೇಲೆ ಮುಸ್ಲಿಮರ ಆಕ್ರಮಣ ಏನೇನೂ ಅಲ್ಲದ್ದಾಗಿತ್ತು. In fact ಆ ಧಾಳಿ ಭಾರತದ ಮೇಲೆ ಕೇವಲ ಅಲ್ಪಪ್ರಮಾಣದ ತೆಳು ಪರಿಣಾಮ ಬೀರಿತ್ತಷ್ಟೆ. ಏಕೆಂದರೆ ಮುಸ್ಲಿಂ ಆಕ್ರಮಣಕಾರರು ದೇವಸ್ಥಾನಗಳು, ಮಠಗಳು… ಹೀಗೆ ಹಿಂದೂ ಧರ್ಮದ ಹೊರ ರಚನೆಗಳ ಮೇಲೆ ಧಾಳಿ ನಡೆಸಿದರಷ್ಟೆ ಹೊರತು ಸಂಪೂರ್ಣ ಹಿಂದೂ ಧರ್ಮವನ್ನೇ ನಿರ್ಮೂಲನೆಗೊಳಿಸುವುದಾಗಲೀ ಅಥವಾ ಜನತೆಯ ಆಧ್ಯಾತ್ಮಿಕ ಜೀವನದ ಮೇಲೆ ಆಳವಾದ ಪರಿಣಾಮ ಬೀರಿದ್ದ ಹಿಂದೂ ಧರ್ಮದ ಶಾಸ್ತ್ರಗಳು-ಪುರಾಣಗಳು, ತತ್ವಗಳಿಗೆ ಧಕ್ಕೆಯುಂಟುಮಾಡುವ, ನಾಶಗೊಳಿಸುವ ಯಾವುದೇ ಕ್ರಿಯೆಯನ್ನು ಮುಸ್ಲಿಂ ಆಕ್ರಮಣಕಾರರು ಮಾಡಲಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಬೌದ್ಧಧರ್ಮದ ಮೇಲೆ ನಡೆದ ಬ್ರಾಹ್ಮಣ ಆಕ್ರಮಣ ಬೌದ್ಧ ತತ್ವಗಳನ್ನು ಸಂಪೂರ್ಣವಾಗಿ ಬದಲಿಸಿತು. ಹೇಗೆಂದರೆ ಬೌದ್ಧತತ್ವ ತಮ್ಮ ಆಧ್ಯಾತ್ಮಿಕ ಜೀವನದ ಶಾಶ್ವತ ಮತ್ತು ಸತ್ಯದ ತತ್ವವೆಂದು ಜನತೆ ಶತಶತಮಾನಗಳ ಕಾಲ ಒಪ್ಪಿದ್ದನ್ನು, ಜೀವನಮಾರ್ಗವಾಗಿ ಅಳವಡಿಸಿಕೊಂಡಿದ್ದನ್ನು ಬ್ರಾಹ್ಮಣ ಆಕ್ರಮಣ ಸಂಪೂರ್ಣವಾಗಿ ನಾಶಗೊಳಿಸಿತು.
ಇದನ್ನು ದಾಖಲಿಸುತ್ತಾ ಅಂಬೇಡ್ಕರ್‌ರವರು ಇದನ್ನು ನೀರಿನ ಕೊಳವೊಂದರಲ್ಲಿ ಆಟವಾಡುತ್ತಿರುವ ಒಂದು ಮಗುವಿಗೆ ಹೋಲಿಸುತ್ತಾ ಹೇಳುವುದು “ಮುಸ್ಲಿಂ ಆಕ್ರಮಣಕಾರರು ಮಗು ಆಟ ಆಡುತ್ತಿದ್ದ ಆ ನೀರಿನ ತೊಟ್ಟಿಯನ್ನು ತುಸು ಕದಡಿದರಷ್ಟೆ, ಅದೂ ಸ್ವಲ್ಪ ಸಮಯ. ನಂತರ ನೀರನ್ನು ಕದಡಿ ಕದಡಿ ಸುಸ್ತಾದ ಮುಸ್ಲಿಂ ಆಕ್ರಮಣಕಾರರು ಅದನ್ನು ಹಾಗೆಯೇ ಬಿಟ್ಟರು. ಪರಿಣಾಮ ಪದರ ಪದರಾಗಿ ಕಸ ತಳ ಸೇರಿಸುವ ಕೆಲಸವನ್ನಷ್ಟೆ ಅವರು ಮಾಡಿದರು. ಅಂದಹಾಗೆ ನೀರಿನಲ್ಲಿ ಆಟವಾಡುತ್ತಿದ್ದ ಮಗುವನ್ನು ಹಿಂದೂ ತತ್ವಗಳು ಎನ್ನುವುದಾದರೆ ಆ ‘ಮಗುವನ್ನು’ ಹೊರಗೆಸೆಯುವ ಕ್ರಿಯೆಯನ್ನು ಮುಸ್ಲಿಂ ಆಕ್ರಮಣಕಾರರು ಎಂದಿಗೂ ಮಾಡಲಿಲ್ಲ. ದುರಂತವೆಂದರೆ ಇದಕ್ಕೆ ವಿರುದ್ಧವಾಗಿ ಬೌದ್ಧಧರ್ಮದೊಂದಿಗಿನ ತನ್ನ ಸಂಘರ್ಷದಲ್ಲಿ ಬ್ರಾಹ್ಮಣರು ಆ ನೀರಿನ ತೊಟ್ಟಿಯನ್ನು ಸಂಪೂರ್ಣ ಗುಡಿಸಿಹಾಕಿದ್ದರು. ಹೇಗೆಂದರೆ ನೀರನ್ನು ಸಂಪೂರ್ಣ ಖಾಲಿಗೊಳಿಸಿದ ಬ್ರಾಹ್ಮಣಧರ್ಮ ಅದರೊಳಗಿದ್ದ ಬೌದ್ಧ ಮಗುವನ್ನು ಹೊರತೆಗೆದು ತನ್ನ ನೀರನ್ನು ಅಲ್ಲಿ ತುಂಬಿಸಿ ತನ್ನ ಮಗುವನ್ನು ಅಲ್ಲಿ ಇಟ್ಟಿತು. ಈ ದಿಸೆಯಲ್ಲಿ ಬೌದ್ಧಧರ್ಮದಿಂದ ಹರಿದುಬಂದಿದ್ದ ಪರಿಶುದ್ಧವಾದ ಸುಗಂಧಭರಿತವಾದ ಶ್ರೇಷ್ಠ ನೀರಿಗೆ ಹೋಲಿಸಿದಾಗ ತನ್ನ ನೀರು ಅದೆಷ್ಟು ಕೊಳಕಾಗಿದೆ, ಅದೆಷ್ಟು ಗಲೀಜಾಗಿದೆ ಎಂಬುದು ತಿಳಿದಿದ್ದರೂ ಬ್ರಾಹ್ಮಣಧರ್ಮ ಅದರ ಬಗ್ಗೆ ಕೊಂಚವೂ ತಲೆಕೆಡಸಿಕೊಳ್ಳಲಿಲ್ಲ”. (ಅದೇ ಕೃತಿ, ಪು.274)
ಹಾಗೆಯೇ ಬೌದ್ಧ ಮಗುವಿಗೆ ಹೋಲಿಸಿಕೊಂಡರೆ ತನ್ನ ಮಗು ಅದೆಷ್ಟು ಕೊಳಕು, ಭಯಂಕರ ಎಂಬ ಬಗ್ಗೆಯೂ ಬ್ರಾಹ್ಮಣಧರ್ಮ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ನೀರಿನ ಕೊಳದಲ್ಲಿದ್ದ ಆ ನೀರನ್ನು (ಬೌದ್ಧತತ್ವಗಳು) ಸಂಪೂರ್ಣ ಖಾಲಿಗೊಳಿಸಿ ಅದರಲ್ಲಿದ್ದ ಮಗುವನ್ನು(ಬೌದ್ಧಧರ್ಮ) ಹೊರತೆಗೆದು ಅದರಲ್ಲಿ ತನ್ನ ನೀರನ್ನು(ಬ್ರಾಹ್ಮಣ ತತ್ವಗಳು) ತುಂಬಿ ತನ್ನ ಮಗುವನ್ನು(ಬ್ರಾಹ್ಮಣ ಧರ್ಮವನ್ನು) ಬ್ರಾಹ್ಮಣಧರ್ಮ ಇಟ್ಟಿತು. ಈ ದಿಸೆಯಲ್ಲಿ ಹೇಳುವುದಾದರೆ ಬ್ರಾಹ್ಮಣಧರ್ಮ ತನ್ನ ಆಕ್ರಮಣದಿಂದ ತಾನು ಗಳಿಸಿದ ರಾಜಕೀಯ ಅಧಿಕಾರವನ್ನು ಬೌದ್ಧಧರ್ಮವನ್ನು ನಾಶಗೊಳಿಸಲು ಬಳಸಿಕೊಂಡಿತು ಮತ್ತು ಹಾಗೆ ನಾಶಗೊಳಿಸಿತೂ ಕೂಡ. ಇದಕ್ಕೆ ವ್ಯತಿರಿಕ್ತವಾಗಿ ಇಸ್ಲಾಂ ಧರ್ಮ ಹಿಂದೂ ಧರ್ಮವನ್ನು ಅತಿಕ್ರಮಿಸಲಿಲ್ಲ, ಇಸ್ಲಾಂ ತನ್ನ ಯೋಜನೆಯ ಉದ್ದೇಶವನ್ನು ಪರಿಪೂರ್ಣವಾಗಿ ಕಾರ್ಯರೂಪಕ್ಕೆ ತರಲಿಲ್ಲ. ಆದರೆ ಬ್ರಾಹ್ಮಣಧರ್ಮ ಕಾರ್ಯರೂಪಕ್ಕೆ ತಂದಿತು. ಒಂದು ಧರ್ಮವಾಗಿ ಅದು ಬೌದ್ಧಧರ್ಮವನ್ನು ಹೊಡೆದೋಡಿಸಿ ಅದರ ಜಾಗದಲ್ಲಿ ತನ್ನ ಧರ್ಮವನ್ನು ಪ್ರತಿಷ್ಠಾಪಿಸಿತು.
ಇಂತಹ ಪ್ರತಿಷ್ಠಾಪನೆಯ ಕೆಲಸ ಅದು ಒಂದು ತಿಂಗಳು, ಎರಡು ತಿಂಗಳು ಅಥವಾ ಒಂದು ವರ್ಷ, ಎರಡು ವರ್ಷಗಳೂ ನಡೆದಿದ್ದಲ್ಲ. ಬದಲಿಗೆ ಒಂದು ಸಾವಿರ ವರ್ಷಗಳವರೆಗೆ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವೆ ಇಂತಹ ಸಂಘರ್ಷ ನಡೆದಿದೆ. ಕ್ರಿ.ಪೂ.185ರಲ್ಲಿ ಪುಷ್ಯಮಿತ್ರ ಶುಂಗನಿಂದ ಆರಂಭವಾದ ಇಂತಹ ಸಂಘರ್ಷ ದೇಶದ ಉದ್ದಗಲಕ್ಕೂ [ಯಾಕೆಂದರೆ ಅಶೋಕನ ಕಾಲದಲ್ಲಿ(ಕ್ರಿ.ಪೂ.268-ಕ್ರಿ.ಪೂ.232) ಬೌದ್ಧಧರ್ಮ ಇಡೀ ಭಾರತವನ್ನು ಆಕ್ರಮಿಸಿತ್ತು] ನಡೆದಿದೆ. ದುರಂತವೆಂದರೆ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವೆ ನಡೆದಿರುವ ಇಂತಹ ಸಂಘರ್ಷ ಅಥವಾ ಮಾರಕ ಕಾಳಗವನ್ನು ಭಾರತದ ಇತಿಹಾಸ ಗಮನಿಸಲೇಹೋಗಿಲ್ಲ, ದಾಖಲಿಸಲೇಹೋಗಿಲ್ಲ. ಈ ದಿಸೆಯಲ್ಲಿ ಇತಿಹಾಸದ ಈ ಮಗ್ಗುಲನ್ನು ಅಂದರೆ ಬ್ರಾಹ್ಮಣಧರ್ಮ ಮತ್ತು ಬೌದ್ಧಧರ್ಮಗಳ ನಡುವಿನ ನಿರಂತರ ಕಾಳಗವನ್ನು ಅಧ್ಯಯನ ಮಾಡದೇ ಅಥವಾ ಆ ದೃಷ್ಟಿಕೋನದಲ್ಲಿ ಭಾರತದ ಇತಿಹಾಸವನ್ನು ನೋಡದೆ ಹೋದರೆ ಭಾರತದ ಈಗಿನ ಸಾಮಾಜಿಕ ಸ್ಥಿತಿಗತಿಯನ್ನು, ಜಾತಿ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಖಂಡಿತ ಸಾಧ್ಯವಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

-
ದಿನದ ಸುದ್ದಿ7 days agoಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ: ಪ್ರತಿ ತಿಂಗಳು ಎರಡು ದಿನ ಪ್ರವಾಸ
-
ದಿನದ ಸುದ್ದಿ7 days agoಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್ಕಟ್ ಹೇಳಿದ ಡಿಕೆಶಿ
-
ದಿನದ ಸುದ್ದಿ5 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ5 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ5 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ5 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ5 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?
-
ದಿನದ ಸುದ್ದಿ5 days agoಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ


