ರಾಜಕೀಯ
ಡಾ.ರಾಜ್‍ಕುಮಾರ್ ನೆನಪಾಗುತ್ತಿದ್ದಾರೆ..!
ಡಾ.ರಾಜ್‍ಕುಮಾರ್ ನೆನಪಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯವನ್ನು ಪ್ರತಿನಿಧಿಸುತ್ತಿರುವ ನಾವು ಅವರು ಸಿನಿಮಾಗಳ ಮೂಲಕ ಕಟ್ಟಿಕೊಟ್ಟ ಆಕೃತಿಗಳೊಂದಿಗೆ ಸಂವಾದ ಏರ್ಪಡಿಸಿಕೊಳ್ಳುವ ಅನಿವಾರ್ಯತೆ ಮನಗಾಣಿಸುವ ಹಾಗೆ ನನ್ನ ಪ್ರಜ್ಞೆಯ ಆವರಣವನ್ನು ಮತ್ತೆ ಮತ್ತೆ ಪ್ರವೇಶಿಸುತ್ತಿದ್ದಾರೆ. ಹಿಂದಿನ ಮಾದರಿಗಳು ಹೀಗೆ ನೆನಪಾಗುತ್ತಲೇ ಇರಬೇಕು. ಇಂಥ ನೆನಪುಗಳೊಂದಿಗಿನ ಯಾನ ಅವುಗಳನ್ನು ಸಮಾಜದಲ್ಲಿ ಅಧಿಕೃತವಾಗಿ ನೆಲೆಗೊಳಿಸಬೇಕು. ಮರೆವಿನ ಕೂಪಕ್ಕೆ ಅವು ತಳ್ಳಲ್ಪಡದ ಹಾಗೆ ಎಲ್ಲ ಕಾಲದ ಪೀಳಿಗೆಗಳಿಗೆ ದಾಟಿಕೊಳ್ಳುತ್ತಿರಬೇಕು. ಕೆಟ್ಟದ್ದು ವಿಜೃಂಭಿಸುವಾಗೆಲ್ಲಾ ಮೌಲಿಕ ಮಾದರಿಗಳ ನೆನಪುಗಳು ಧುಮ್ಮಿಕ್ಕಬೇಕು.
ಆ ಮೂಲಕ ಜನಸಮೂಹ ಹೊಸದಾಗಿ ಆಲೋಚಿಸುವುದಕ್ಕೆ ಪ್ರೇರಣೆಯಾಗಬೇಕು.
ನನ್ನೊಳಗೆ ಈಗ ರೂಪುಗೊಳ್ಳುತ್ತಿರುವ ಈ ಬಗೆಯ ಚಿಂತನೆಯ ವ್ಯಕ್ತಿಗತ ಸಾಧ್ಯತೆಯು ಜನಸಮೂಹದ ಸಾಧ್ಯತೆಯೂ ಆಗಿ ಆದ್ಯತೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದೆನ್ನಿಸುತ್ತಿದೆ. ಹಾಗಾಗುತ್ತದಾ? ಉತ್ತರಗಳ ಬದಲು ಸಂಕೀರ್ಣ ಸವಾಲುಗಳೇ ಕಣ್ಣೆದುರು ಬಂದು ನಿಲ್ಲುತ್ತವೆ. ಚಿಂತಿಸುವಿಕೆಯ ವ್ಯಕ್ತಿಗತ ಸಾಮಥ್ರ್ಯ ಜನಸಮೂಹದೊಳಗೂ ಸಮ್ಮಿಳಿತಗೊಂಡು ರೂಪುಗೊಳ್ಳಬಹುದಾದ ವೈಚಾರಿಕ ಸೌಂದರ್ಯವು ದೇಶವನ್ನು ಉನ್ನತಿಯ ಕಡೆಗೆ ಕೊಂಡೊಯ್ಯುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಇಂಥ ಸಾಧ್ಯತೆಗಳ ಕಡೆಗೆ ಗಮನಹರಿಸದ ಹಾಗೆ ಜನಸಮೂಹದ ಮನಸ್ಥಿತಿಯನ್ನು ಸಂಪೂರ್ಣವಾಗಿ ಜಡಗೊಳಿಸುವ ರೀತಿಯಲ್ಲಿ ನಮ್ಮ ಜನಪ್ರಿಯ ಸಂಸ್ಕøತಿಯ ವಿಕೃತಿಗಳು ದಟ್ಟವಾಗಿವೆ. ಇದರೊಂದಿಗೆ ಅವು ಪ್ರಜಾತಾಂತ್ರಿಕ ವ್ಯವಸ್ಥೆಯ ಜೀವಾಳವೇ ಆಗಿರುವ ಆಯ್ಕೆಯ ಸಂವೈಧಾನಿಕ ಹಕ್ಕಿನ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಹಾಗೆ ತಡೆಯೊಡ್ಡುತ್ತಿವೆ.
ತಾರೆಯರ ಅಪಕ್ವ ನಿಲುವು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಸಂಸ್ಕøತಿಯನ್ನು ಪ್ರತಿನಿಧಿಸುವ ಖ್ಯಾತನಾಮ ತಾರೆಯರ ನಡೆಯನ್ನು ತಾರ್ಕಿಕವಾಗಿ ವಿಶ್ಲೇಷಿಸಬೇಕಿದೆ. ಒಂದು ಪಕ್ಷದ ಅಥವಾ ಅಭ್ಯರ್ಥಿಯ ಪರ ನಿಂತುಕೊಳ್ಳುವ ಅಪಕ್ವ ನಿಲುವಿನೊಂದಿಗೆ ಕನ್ನಡದ ಜನಪ್ರಿಯ ಸಿನಿಮಾ ನಾಯಕ ನಟರ ನಿಲುವುಗಳು ಸುದ್ದಿಗೆ ಗ್ರಾಸ ಒದಗಿಸಿರುವಾಗ ಡಾ.ರಾಜ್‍ಕುಮಾರ್ ಎಂಬ ಹೆಸರಿನೊಂದಿಗಿನ ನೆನಪಿನ ಬಿಂಬಗಳು ಹೊಸ ಪೀಳಿಗೆಯನ್ನು ಆವರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಅಗತ್ಯ ಮಾತ್ರವಲ್ಲ, ಸಾಂದರ್ಭಿಕ ಅನಿವಾರ್ಯತೆಯೂ ಹೌದು. ಸಾರ್ವಕಾಲಿಕವಾಗಿ ನೆಲೆನಿಲ್ಲುವ ಆಲೋಚನಾಕ್ರಮಗಳನ್ನು ದಾಟಿಸುವುದಕ್ಕೆ ಬೇಕಾದ ಪೂರಕ ವಾತಾವರಣದ ವೇದಿಕೆ ನಿರ್ಮಿಸಿಕೊಳ್ಳುವ ಕಲೆ, ಪ್ರತಿಭೆ ಮತ್ತು ಸಾಮಾಜಿಕ ಅಸ್ಮಿತೆಯ ಅಪೂರ್ವ ಸಂಯೋಜನೆಯ ಪ್ರಯೋಜನ ಜನಸಮೂಹಕ್ಕೆ ದಕ್ಕಬೇಕು. ಇದಕ್ಕೆ ಸಂಬಂಧಿಸಿದಂತೆ ವಿಶಿಷ್ಠವಾದ ಮಾದರಿಗಳನ್ನು ಡಾ.ರಾಜ್‍ಕುಮಾರ್ ಅವರ ಸಾಂಸ್ಕøತಿಕ ನಾಯಕತ್ವದ ಮೂಲಕವೇ ಕಂಡುಕೊಳ್ಳಬೇಕು.
ಡಾ.ರಾಜ್ ಜನಪರ ಕಲಾತ್ಮಕತೆ
ರಾಜ್‍ಕುಮಾರ್ ಅವರು ಏಕೆ ಈ ಕ್ಷಣಕ್ಕೆ ನೆನಪಾಗಬೇಕು ಎಂಬ ಜಿಜ್ಞಾಸೆಗೆ ಪ್ರತಿಯಾಗಿ ಅವರ ಮೌಲಿಕ ಸಿನಿಮಾಗಳ ಪಾತ್ರವೈವಿಧ್ಯತೆ, ಭಾಷಿಕ ಚಳುವಳಿಯೊಂದಿಗೆ ಗುರುತಿಸಿಕೊಳ್ಳುವ ಬದ್ಧತೆ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನಸಮೂಹದ ನೆರವಿಗೆ ಧಾವಿಸಿದ ಅವರ ಕಾಳಜಿಯುತ ಮಾದರಿಗಳು ಕಣ್ಣಮುಂದೆ ಬಂದುನಿಲ್ಲುತ್ತವೆ. ಅವರು ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳ ಪರ ನಿಲ್ಲಲಿಲ್ಲ. ನಿರ್ದಿಷ್ಟ ಅಭ್ಯರ್ಥಿಯ ಪರ ಮತ ಹಾಕುವಂತೆ ಪ್ರಚಾರಗಳ ರ್ಯಾಲಿಗಳಿಗೆ ಹೋಗಲಿಲ್ಲ. ಸಮಸ್ತ ಕನ್ನಡಿಗರನ್ನು ಅಭಿಮಾನಿ ದೇವರುಗಳನ್ನಾಗಿ ಗ್ರಹಿಸಿದವರು ಅವರು. ಆ ಅಭಿಮಾನವನ್ನು ಅಧಿಕಾರ ರಾಜಕಾರಣಕ್ಕೆ ಗೆಲುವು ತಂದುಕೊಡುವ ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ. ‘ಅವರು ಕರೆದರೆ ಜೊತೆಯಾಗಿ ನಿಲ್ಲುತ್ತೇನೆ’ ಎಂಬ ಆರಾಧನಾ ಭಾವವನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ.
ಕನ್ನಡಿಗರ ಹೃದಯದ ಸಾಮ್ರಾಜ್ಯದಲ್ಲಿ ನೆಲೆಸುವ ಅಪ್ಪಟ ಕಲಾತ್ಮಕ ಹಂಬಲ ಅವರನ್ನು ಅಧಿಕಾರ ರಾಜಕಾರಣದ ಹತ್ತಿರ ಹೋಗಲು ಬಿಡಲಿಲ್ಲ. ಅತ್ಯುನ್ನತ ಸ್ಥಾನದ ಆಮಿಷವೊಡ್ಡಿದರೂ ಅದರಿಂದ ಎಚ್ಚರದ ದೂರವನ್ನು ಕಾಯ್ದುಕೊಂಡರು. ಭಾಷಿಕ ಚಳುವಳಿಗಳ ಜೊತಗೆ ಗುರುತಿಸಿಕೊಂಡರು. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಅವರ ನಡೆಯು ಕನ್ನಡ ಸಿನಿಮಾದ ಪ್ರಭಾವವನ್ನು ವಿಸ್ತರಿಸುವುದಕ್ಕೆ ನೆರವಾಗಿತ್ತು. ಅವರ ಅಭಿನಯದ ಸಿನಿಮಾಗಳು ಜನಪ್ರಿಯ ಸಂಸ್ಕøತಿ ಒಳಗೊಳ್ಳಬಹುದಾದ ಮೌಲಿಕ ಲಕ್ಷಣಗಳನ್ನು ದೃಢೀಕರಿಸಿದವು. ಈ ಹಿನ್ನೆಲೆಯ ಕಾರಣಕ್ಕಾಗಿಯೇ ರಾಜಕಾರಣಕ್ಕಿಂತಲೂ ಕನ್ನಡದ್ದೇ ಆದ ಸಾಮುದಾಯಿಕ ಕಲಾತ್ಮಕ ಪಾತ್ರನಿರ್ವಹಣೆಯ ಕಡೆಗೆ ಅವರು ಹೆಚ್ಚು ಆದ್ಯತೆ ನೀಡಿದರು.
ರಾಜಕಾರಣದ ವಿಚ್ಛಿದ್ರಕಾರಕ ಪ್ರಾಬಲ್ಯ
ಭಾರತದ ಅಧಿಕಾರ ರಾಜಕಾರಣಕ್ಕೆ ವಿಚಿತ್ರ ಬಗೆಯ ವಿಚ್ಛಿದ್ರಕಾರಕ ಪ್ರಾಬಲ್ಯವಿದೆ. ಇದರ ಆಕರ್ಷಣೀಯ ಸ್ವರೂಪವು ಈ ಪ್ರಾಬಲ್ಯದ ಸುಳಿವನ್ನು ಬಿಟ್ಟುಕೊಡುವುದೇ ಇಲ್ಲ. ಇಂಥ ರಾಜಕಾರಣವು ಪ್ರಭಾವೀ ವ್ಯಕ್ತಿತ್ವಗಳಿಂದ ಹಿಡಿದು ಜನಸಾಮಾನ್ಯರನ್ನು ಸದಾ ಆಕರ್ಷಿಸುತ್ತಲೇ ಇರುತ್ತದೆ. ಅದರ ಆಕರ್ಷಣೀಯ ಗುಣದಲ್ಲಿಯೇ ಇರುವ ಮತ್ತೊಂದು ಅಪಾಯಕಾರಿ ಮುಖ ಗೋಚರಿಸದಂತೆ ಅದು ವಿಜೃಂಭಿಸುತ್ತಿರುತ್ತದೆ. ಅಭಿನಯದ ಮೂಲಕ ಜನಜನಿತರಾಗಿ ವ್ಯಾಪಕ ಪ್ರಭಾವ ದಕ್ಕಿಸಿಕೊಂಡವರನ್ನು ಹುಡುಕಿ ಇದು ತನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತದೆ.
ಈ ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಹೊಳೆಸುವ ವೈಚಾರಿಕ ಆಕೃತಿಗಳನ್ನು ಸೃಷ್ಟಿಸುವ ಚಿಂತಕರನ್ನು, ಅವರ ನಿಲುವುಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಅಜೆಂಡಾ ಕಾರ್ಯರೂಪಕ್ಕೆ ತರುವುದರ ಕಡೆಗೇ ಅದರ ಗಮನವಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿರುವ ಯಥಾಸ್ಥಿತಿವಾದಿ ಜನಪ್ರಿಯ ತಾರೆಗಳನ್ನು, ಅವರ ಪ್ರಭಾವವನ್ನೂ ಮತಬೆಳೆಯ ಫಸಲು ತೆಗೆಯುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುತ್ತದೆ. ಬದಲಾವಣೆಯ ಚಾಲಕ ಶಕ್ತಿಯಾಗಿ ಪ್ರಮುಖ ಪಾತ್ರವಹಿಸುವ ಕಲಾತ್ಮಕ ವಲಯದ ಅಗಾಧತೆಯನ್ನು ಒಡೆದು ತನ್ನ ಅಧಿಕಾರ ಲಾಭದ ಹವಣಿಕೆಗಳಿಗಾಗಿ ಬಳಸಿಕೊಳ್ಳುತ್ತದೆ. ಡಾ.ರಾಜ್‍ಕುಮಾರ್ ಕಲಾತ್ಮಕತೆಯ ಕುರಿತಾದ ಸ್ಪಷ್ಟ ನಿಲುವುಗಳೊಂದಿಗೆ ಇದ್ದುದರಿಂದ ಅಧಿಕಾರ ರಾಜಕಾರಣದ ಆಕರ್ಷಣೆ ಮತ್ತು ಆಮಿಷಗಳಿಗೆ ಒಳಗಾಗಲಿಲ್ಲ.
ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಜನಪ್ರಿಯ ನಟ-ನಟಿಯರು ಅಧಿಕಾರ ರಾಜಕಾರಣವನ್ನು ಪ್ರವೇಶಿಸಿ ಯಶಸ್ಸು ಕಂಡ ಉದಾಹರಣೆಗಳಿದ್ದರೂ ರಾಜ್‍ಕುಮಾರ್ ಆ ಹಾದಿ ಅನುಸರಿಸಲಿಲ್ಲ. ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳ ಮುಖೇನ ತೆಲುಗು ಸಮುದಾಯವನ್ನು ಬಹುವಾಗಿ ಪ್ರಭಾವಿಸಿದ್ದ ಎನ್.ಟಿ.ರಾಮರಾವ್ ಅಲ್ಲಿ ಮುಖ್ಯಮಂತ್ರಿಯಾದರು. ಎಂ.ಜಿ.ಆರ್, ಜಯಲಲಿತಾ ತಮಿಳುನಾಡಿನಲ್ಲಿ ಅಧಿಕಾರದ ಉನ್ನತ ಹಂತ ತಲುಪಿದವರು. ಇದೀಗ ರಜನೀಕಾಂತ್ ರಾಜಕೀಯದ ಹಾದಿಗೆ ಆದ್ಯತೆ ನೀಡಿದ್ದಾರೆ. ಕುತೂಹಲದ ಸಂಗತಿ ಎಂದರೆ ಇಡೀ ಕರ್ನಾಟಕದಾದ್ಯಂತ ಪ್ರಭಾವೀಯಾಗಿದ್ದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಹಂಬಲ ರಾಜ್ ಅವರ ಹತ್ತಿರವೂ ಸುಳಿಯಲಿಲ್ಲ ಎಂಬುದು.
ಸಂಯಮಪೂರ್ಣ ಎಚ್ಚರದ ಪ್ರಜ್ಞೆ
ರಾಜ್ ಅವರೊಳಗಿದ್ದ ಅಂಥ ಸಂಯಮಪೂರ್ಣ ಎಚ್ಚರ ಈಗಿನ ನಟರಿಗೆ ಸಾಧ್ಯವಾಗುತ್ತಿಲ್ಲ. ಅಭಿನಯ ಕಲಾತ್ಮಕತೆಯ ಮೂಲಕವೇ ವಿವಿಧ ಬಗೆಗಳಲ್ಲಿ ಜನಸಮೂಹದ ಮೇಲೆ ಪ್ರಭಾವ ಬೀರುವ ಬದ್ಧತೆ ರೂಢಿಸಿಕೊಳ್ಳುವ ಅನಿವಾರ್ಯತೆಯನ್ನು ಕಾಡಿಸಿಕೊಳ್ಳುತ್ತಿಲ್ಲ. ‘ನನಗೆ ಇಂತಿಷ್ಟು ವರ್ಷ ಜನಪ್ರಿಯತೆ ಇರುತ್ತದೆ, ಈ ಅವಧಿಯಲ್ಲಿ ಹಣ ದುಡಿದುಕೊಳ್ಳಬೇಕು’ ಎಂಬ ಆಸೆಯೇ ಈಗಿನ ನಟರನ್ನು ನಿಯಂತ್ರಿಸುತ್ತಿದೆ. ಬೆಂಗಳೂರಿನ ಹೊರಗೆ ಜಿಲ್ಲಾಕೇಂದ್ರಗಳಲ್ಲಿ ಒಳ್ಳೆಯ ಉದ್ದೇಶದೊಂದಿಗೆ ಆಯೋಜಿತವಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅತಿಹೆಚ್ಚು ಸಂಭಾವನೆ ಬೇಡುವ ಮನಸ್ಥಿತಿ ಇವರೊಳಗಿನ ಕಲಾತ್ಮಕತೆಯನ್ನು ಕೊಲ್ಲುತ್ತಿದೆ.
ಸದಭಿರುಚಿ ಮೂಡಿಸುವ ನಿಜವಾದ ಕಾಳಜಿ ಇದ್ದಿದ್ದರೆ ಇವರು ‘ಒಳ್ಳೆಯ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ’ ಎಂಬ ಕೊರಗು ವ್ಯಕ್ತಪಡಿಸುವ ಬದಲು ರಾಜ್ಯದಾದ್ಯಂತ ಅರಿವಿನ ಆಂದೋಲನ ಕೈಗೊಳ್ಳುತ್ತಿದ್ದರು. ಕೆಟ್ಟದ್ದರ ಕಡೆಗೆ ವಾಲಿದ ಅಭಿಮಾನಿ ಸಂಸ್ಕøತಿಯ ಊನಗಳನ್ನು ಸರಿಪಡಿಸಿ ಸದಭಿರುಚಿಯ ಸಿನಿಮಾಗಳಿಗೆ ವ್ಯಾಪಕ ಬೆಂಬಲ ತಂದುಕೊಳ್ಳುವುದರ ಕಡೆಗೆ ಗಮನ ಹರಿಸುತ್ತಿದ್ದರು. ಬೇರೆ ರಾಜ್ಯಗಳಲ್ಲಿ ಕನ್ನಡದ ಸಿನಿಮಾ ನಿರ್ಮಾಣದ ಚಟುವಟಿಕೆಗಳು ನಡೆಯುತ್ತಿದ್ದ ಕಾಲದಲ್ಲಿ ಕನ್ನಡಿಗರಿಗೆ ಹತ್ತಿರವಾಗಿ ಇಲ್ಲಿಯ ಸಿನಿಮಾವನ್ನು ಜನಜನಿತವಾಗಿಸಿದ ರಾಜ್ ಮಾದರಿಯನ್ನು ಮುಂದುವರೆಸುವ ಕಾರ್ಯದಲ್ಲಿ ನಿರತರಾಗುತ್ತಿದ್ದರು.
ರಾಜಕೀಯ ಸಾಮಂಜಸ್ಯದ ಪ್ರಶ್ನೆ
ಹಾಗಾಗುವುದಕ್ಕೆ ಜನಪ್ರಿಯ ಸಂಸ್ಕøತಿಯ ಒಳಗೇ ಇರುವ ವಿಕಾರಗಳು ಅವರನ್ನು ಬಿಡುತ್ತಿಲ್ಲ. ಇದರ ಜೊತೆಗೆ ಅಧಿಕಾರ ರಾಜಕಾರಣದ ಯಥಾಸ್ಥಿತಿವಾದದೊಂದಿಗಿನ ಹುನ್ನಾರದ ಪ್ರಾಬಲ್ಯ ನಟರೊಳಗೂ ಆರಾಧನಾ ಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ನಟರೊಳಗಿನ ಕಲಾತ್ಮಕತೆಯನ್ನು ಸೋಲಿಸುವ ಅದರ ಕಾರ್ಯಸೂಚಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಬಲ ಬಂದಿದೆ. ಈ ಕಾರಣಕ್ಕಾಗಿಯೇ ಜನಪ್ರಿಯ ಸಿನಿಮಾ ನಟರು ರಾಜಕೀಯ ರಂಗವನ್ನು ಪ್ರವೇಶಿಸಿ ಆರ್ಥಿಕವಾಗಿ ಬಲಾಢ್ಯರಾಗುವ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಒಂದು ಕ್ಷೇತ್ರ ಪ್ರತಿನಿಧಿಸುವವರೊಬ್ಬರು ರಾಜಕೀಯ ರಂಗವನ್ನು ಪ್ರವೇಶಿಸುವುದರ ಹಿಂದೆ ಪ್ರಾಮಾಣಿಕ ಕಳಕಳಿಗಳ ಆಧಾರವಿರಬೇಕಾಗುತ್ತದೆ. ಅದರ ಬದಲು ಯಥಾಸ್ಥಿತಿವಾದದ ಜೊತೆಗೇ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುವ ಮನುಷ್ಯಸಹಜ ದೌರ್ಬಲ್ಯ ಪ್ರದರ್ಶಿಸುವುದು ರಾಜಕೀಯ ಸಾಮಂಜಸ್ಯದ ( Politically Correct) ನಡೆ ಎನ್ನಿಸಿಕೊಳ್ಳುವುದಿಲ್ಲ.
ರಾಜಕೀಯ ಪ್ರಬುದ್ಧತೆಯನ್ನು ಅಳವಡಿಸಿಕೊಳ್ಳುವ ಹಂಬಲವೂ ಇಂಥವರೊಂದಿಗೆ ಇರುವುದಿಲ್ಲ.
ರಾಜಕೀಯ ಪ್ರಬುದ್ಧತೆ ಪ್ರದರ್ಶಿಸುವ ಸಾಮಥ್ರ್ಯ ಇದ್ದವರೂ ಸದ್ಯದ ಸುದ್ದಿವಾಹಿನಿಗಳ ಪ್ರಬಲರ ಪರವಾದ ಅಜೆಂಡಾಕ್ಕೆ ಅನುಗುಣವಾದ ವಿಧ್ವಂಸಕ ಪ್ರಯತ್ನಗಳ ಹೊಡೆತಕ್ಕೀಡಾಗಿ ಹಿನ್ನೆಲೆಗೆ ಸರಿದುಬಿಡುತ್ತಾರೆ. ಸುದ್ದಿವಾಹಿನಿಗಳ ಈ ಬಗೆಯ ಪ್ರಹಾರ ಕಲಾವಲಯದವರಲ್ಲಿ ಭಯ ಮೂಡಿಸಿಬಿಡುತ್ತದೆ. ಆಗ ತಮ್ಮ ಜನಪ್ರಿಯತೆಯನ್ನು ಅಧಿಕಾರ ರಾಜಕಾರಣದ ಪಾದಗಳಿಗೆ ಸಮರ್ಪಿಸುವ ಮನೋಧರ್ಮವನ್ನು ಮೂಡಿಸಿಬಿಡುತ್ತದೆ. ಇರುವಷ್ಟು ದಿನ ಚಾಲ್ತಿಯಲ್ಲಿರಬೇಕು ಎಂಬ ಆಸೆ ಚಿಗುರೊಡೆದು ಅವರೊಳಗಿನ ಕಲಾಶಕ್ತಿಯನ್ನು ನಲುಗಿಸಿಬಿಡುತ್ತದೆ.
ಜನಪ್ರಿಯ ಪ್ರತಿಭಾನ್ವಿತರು ಅಧಿಕಾರ ರಾಜಕಾರಣದ ಪ್ರಾಬಲ್ಯವನ್ನು ಅಧಿಕೃತವಾಗಿ ಪ್ರಶ್ನಿಸಬಹುದು ಎಂಬ ಭರವಸೆಯನ್ನು ಕಳೆದ ಸಲ ಲೋಕಸಭೆ ಚುನಾವಣೆಯ ಸಂದರ್ಭ ಮೂಡಿಸಿತ್ತು. ಈ ದೇಶಕ್ಕೆ ಪ್ರಶ್ನಾತೀತ ನಾಯಕ ಇರಬಾರದು, ಪ್ರಶ್ನೆಗಳನ್ನು ಆಲಿಸಿ ಬದಲಾವಣೆಯನ್ನು ನೆಲೆಗೊಳಿಸುವ ಚಿಂತಕ ನಾಯಕ ಬೇಕು ಎಂಬ ಸಂವಾದವನ್ನು ಅಧಿಕೃತವಾಗಿ ದೇಶಾದ್ಯಂತ ಹುಟ್ಟುಹಾಕುವ ಪ್ರಯತ್ನವನ್ನು ಪ್ರಕಾಶ್ ರೈ ನಿರ್ವಹಿಸಿದರು. ಆದರೆ, ಸುದ್ದಿವಾಹಿನಿಗಳ ಜನಪ್ರಿಯ ವರಸೆಗಳು ಈ ಸಂವಾದವನ್ನು ವಿಸ್ತರಿಸುವ ಬದಲು ಮೊಟಕುಗೊಳಿಸಿದವು. ಅದರೊಂದಿಗೆ ಅಧಿಕಾರ ರಾಜಕಾರಣದ ಎಲ್ಲ ಬಗೆಯ ವಿಕೃತಿಗಳ ದಾಳಿ ಹೊಸದಾಗಿ ಆಲೋಚಿಸುವ ಶಕ್ತಿಯನ್ನೇ ಕುಂದಿಸಿತು. ಜನಪ್ರಿಯ ಸುದ್ದಿಯ ಕೇಂದ್ರಗಳು ಮತ್ತು ರಾಜಕಾರಣದ ಸಂಕುಚಿತತೆಯ ಮನಸ್ಥಿತಿಗಳು ಒಟ್ಟಾಗಿ ಇಂಥದ್ದೊಂದು ಸಾಧ್ಯತೆಯನ್ನೇ ಇಲ್ಲವಾಗಿಸುವಲ್ಲಿ ಯಶಸ್ಸು ಕಂಡಿವೆ.
ಕಾಡುತ್ತಿರುವ ರಾಜ್ ಆಕೃತಿಗಳು
ಈ ಹಂತದಲ್ಲಿಯೇ ಮತ್ತೊಂದು ಲೋಕಸಭೆ ಚುನಾವಣೆ ಎದುರಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣ ಪಕ್ಷಾತೀತವಾಗಿ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿದೆ. ಸಮಸ್ಯೆಗಳಿಂದ ಇಡೀ ದೇಶ ಜರ್ಝರಿತವಾಗುತ್ತಲೇ ಇದೆ. ಎಲ್ಲ ಕಾಲದಲ್ಲೂ ಸುಧಾರಣೆಯ ಹೆಜ್ಜೆಗಳು ಕಂಡರೂ ಅವುಗಳ ವೇಗವನ್ನು ಹೆಚ್ಚಿಸುವ ದಾರ್ಶನಿಕ ನಾಯಕತ್ವವನ್ನು ಕಂಡುಕೊಳ್ಳುವಲ್ಲಿ ಇಲ್ಲಿಯ ಪ್ರಜಾಸತ್ತಾತ್ಮಕ ಪ್ರಯೋಗಶಾಲೆ ಸೋತಿದೆ. ಭಾರೀ ಬದಲಾವಣೆಯಾಗುತ್ತಿದೆ ಎನ್ನುವ ಭಾವ ಬರುವ ಹಾಗೆ ಜನಪ್ರಿಯ ಮಾಧ್ಯಮಗಳು ಭ್ರಮೆಗಳನ್ನು ಹುಟ್ಟಿಸಿವೆ. ಜನಪ್ರಿಯ ನಟರು ಪಕ್ಷಗಳ ಮತಬೆಳೆ ತೆಗೆಯಲು ಬೇಕಾಗುವ ಸರಕಿನ ಗೊಂಬೆಗಳಾಗಿದ್ದಾರೆ. ಇದನ್ನು ದೃಢಪಡಿಸುವಂತೆ ಖ್ಯಾತ ನಟ ಅಂಬರೀಷ್ ಪತ್ನಿ ಸುಮಲತಾ ಅವರ ಗೆಲುವಿಗೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟರು ಬೆಂಬಲವಾಗಿ ನಿಂತಿದ್ದಾರೆ.
ಸ್ಪಷ್ಟವಾಗಿರುವ ಯಾವುದೇ ಬಗೆಯ ರಾಜಕೀಯ ನಿಲುವು ತಳೆಯದೇ ಪ್ರಚಾರದ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ಮನ್ನಣೆ ನೀಡಿದ ಕನ್ನಡಿಗರಿಗೆ ಪ್ರತಿಯಾಗಿ ಸಾಮಾಜಿಕ ನೆಲೆಯಲ್ಲಿ ಋಣ ತೀರಿಸುವ ಸಮಂಜಸ ರಾಜಕೀಯ ಪ್ರಜ್ಞೆ ನಿರೂಪಿಸುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ. ಡಾ.ರಾಜ್‍ಕುಮಾರ್ ಸಾಧ್ಯವಾಗಿಸಿಕೊಂಡ ಸಾಂಸ್ಕøತಿಕ ನಾಯಕತ್ವದ ಗುಣಸ್ವಭಾವಗಳೂ ಗೋಚರಿಸುತ್ತಿಲ್ಲ. ಈ ಇಲ್ಲಗಳ ಮಧ್ಯೆಯೇ ‘ರಾಜ್ ಮನೋಧರ್ಮದ’ ಸೃಜನಶೀಲ ಆಕೃತಿಗಳು ಈಗ ಮತ್ತೆ ಮತ್ತೆ ಕಾಡುತ್ತಿವೆ. ಇವು ಕನ್ನಡದ ಜನಪ್ರಿಯ ಸಂಸ್ಕøತಿಯ ಆವರಣದೊಳಗೆ ಮತ್ತೆ ಪ್ರಾಶಸ್ತ್ಯ ಪಡೆಯುತ್ತವೆಯೇ? ಅಂಥದ್ದೊಂದು ಆಶಾವಾದಿ ನಿರೀಕ್ಷೆಯಲ್ಲಿ……
–ಡಾ.ಎನ್.ಕೆ. ಪದ್ಮನಾಭ
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಕ್ರೀಡೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ
ಸುದ್ದಿದಿನಡೆಸ್ಕ್:ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸುವುದಾಗಲಿ ಅಥವಾ ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಅನ್ನು ಬದಲಿಸಿ ಬೇರೆ ಕರೆನ್ಸಿಗಳನ್ನು ಬೆಂಬಲಿಸುವ ಕೆಲಸ ಮಾಡದಿರಲು ಬದ್ಧವಾಗಿರಬೇಕು, ಇಲ್ಲವಾದಲ್ಲಿ, 100 ಪ್ರತಿಶತ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಅವರು, ಈ ದೇಶಗಳು ಯುಎಸ್ ಡಾಲರ್ ಅನ್ನು ಬದಲಿಸುವ ಕೆಲಸ ಮಾಡುವುದಿಲ್ಲ ಎಂಬ ಬದ್ಧತೆಯ ಅಗತ್ಯವಿದೆ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಬ್ರಿಕ್ಸ್ ಅಮೆರಿಕಾ ಡಾಲರ್ ಅನ್ನು ಬದಲಿಸುವ ಯಾವುದೇ ಅವಕಾಶವಿಲ್ಲ, ಮತ್ತು ಇದನ್ನು ಪ್ರಯತ್ನಿಸುವ ಯಾವುದೇ ದೇಶ ಅಮೆರಿಕದೊಂದಿಗಿನ ಸಂಬಂಧಗಳಿಗೆ ವಿದಾಯ ಹೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ವಿಶ್ವ ಏಡ್ಸ್ ದಿನ; ಎಚ್‌ಐವಿ ಚಿಕಿತ್ಸೆ – ನಿರ್ಮೂಲನೆ ಕುರಿತು ಜಾಗೃತಿ ಅಭಿಯಾನ
ಸುದ್ದಿದಿನಡೆಸ್ಕ್:ಅಕ್ವೈರ್ಡ್ ಇಮ್ಯುನೊ ಡೆಫಿಷಿಯನ್ಸಿ ಸಿಂಡ್ರೋಮ್-ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ.
ಎಚ್‌ಐವಿ ವಿರುದ್ಧದ ಹೋರಾಟದಲ್ಲಿ ಜನರು ಒಂದಾಗಲು ಮತ್ತು ಎಚ್‌ಐವಿ ಯೊಂದಿಗೆ ಬದುಕು ಸಾಗಿಸುತ್ತಿರುವವರಿಗೆ ಬೆಂಬಲ ಸೂಚಿಸಲು ಈ ದಿನವು ಅವಕಾಶವನ್ನು ಒದಗಿಸುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿಂದು ವಿಶ್ವ ಏಡ್ಸ್ ದಿನ 2024 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವರ್ಷದ ವಿಶ್ವ ಏಡ್ಸ್ ದಿನ, ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ಚಿಕಿತ್ಸಾ ವಿಧಾನಗಳನ್ನು ಉತ್ತೇಜಿಸುವುದು ಮತ್ತು ಎಚ್‌ಐವಿ-ಏಡ್ಸ್ ನಿಂದ ಪೀಡಿತರ ವಿರುದ್ಧದ ತಾರತಮ್ಯವನ್ನು ತೊಡೆದುಹಾಕುವುದರ ಮೇಲೆ ಕೇಂದ್ರೀಕರಿಸುತ್ತದೆ. ’ಸರಿಯಾದ ಮಾರ್ಗವನ್ನು ತೆಗೆದುಕೊಳ್ಳಿ’ ಎಂಬುದು 2024 ರ ಘೋಷವಾಕ್ಯವಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಎನ್‌ಎಸಿಓ, 1992 ರಿಂದ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತಿದೆ. ಈ ಆಚರಣೆಗಳು 2030 ರ ವೇಳೆಗೆ ಏಡ್ಸ್ಅನ್ನು ನಿರ್ಮೂಲನೆಗೊಳಿಸುವ ಜಾಗತಿಕ ಗುರಿಯನ್ನು ಅನುಸರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಕ್ರೀಡೆ6 days ago
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ರಾಘವೇಂದ್ರ ಎನ್ ಬಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
-
ಕ್ರೀಡೆ6 days ago
ಅದ್ವಿತೀಯ 2024ರಲ್ಲಿ ಜಿಎಂಐಟಿ ಕಾಲೇಜಿನ ಸಿಎಸ್ಇ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನ
-
ದಿನದ ಸುದ್ದಿ4 days ago
ಚನ್ನಗಿರಿ |ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ
-
ದಿನದ ಸುದ್ದಿ7 days ago
ಫೆಂಗಲ್ ಚಂಡಮಾರುತ | ರಾಜ್ಯದ ವಿವಿಧೆಡೆ ಮಳೆ ; ಕೆಲವು ಜಿಲ್ಲೆಯಲ್ಲಿ ರಜೆ ಘೋಷಣೆ
-
ಕ್ರೀಡೆ7 days ago
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ4 days ago
ವಿಶಾಖಪಟ್ಟಣಂನಲ್ಲಿ ಆಲ್ ಇಂಡಿಯ ಕ್ರೀಡಾಕೂಟಕ್ಕೆ ಪೇದೆ ಕೆ.ಆರ್.ಹುಲಿರಾಜ ಆಯ್ಕೆ
-
ದಿನದ ಸುದ್ದಿ21 hours ago
ದಾವಣಗೆರೆ | 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಎ.ಬಿ.ರಾಮಚಂದ್ರಪ್ಪ ಆಯ್ಕೆ