ಬಹಿರಂಗ
ಅಂಬೇಡ್ಕರ್ ಮತ್ತು ಹಿಂದೂ ಕೋಡ್ ಬಿಲ್..!
- ವಿ.ಎಸ್.ಬಾಬು
ಸ್ವಾತಂತ್ರ್ಯ ನಂತರದ ಸರ್ಕಾರ ಅಂಬೇಡ್ಕರ್ ಅವರನ್ನು ಗಂಭೀರವಾಗಿ ಪಲಗಣಿಸಿತು. ಈ ಮೂಲಕ ಅವರಿಗೆ ನಿರ್ದಿಷ್ಟ ಜವಾಬ್ದಾರಿಯುತವಾದ ಹುದ್ದೆಯನ್ನು ವಹಿಸಿತು. ಆಗ ಅವರು ಜಾತಿಯ ತಾಳಿಕೆ-ಬಾಳಿಕೆ ಅಡಗಿರುವುದೇ ಸ್ವಜಾತಿ ವಿವಾಹ ಪದ್ಧತಿಯಲ್ಲ ಎಂದುಕೊಂಡರು. ಅಂಬೇಡ್ಕರ್ ಅದನ್ನು ವಿರೋಧಿಸುತ್ತಿದ್ದ ತಾತ್ವಿಕ ವಿಷಯಗಳಿಗೆ ಪರ್ಯಾಯವಾದ ಸಂಗತಿಗಳನ್ನು ಹಿಂದೂ ಕೋಡ್ಬಿಲ್ನ ಮುಖಾಂತರ ಜಾರಿಗೊಳಿಸಲು ಪ್ರಯತ್ನಿಸಿದರು.
ಹಾಗಾಗಿ ಹಿಂದೂ ಕೋಡ್ ಬಿಲ್ ರಚಿಸಲು ಅಂಬೇಡ್ಕರ್ ಕಾತುರರಾದರು.ಅಲ್ಲದೆ ಮನು ಮತ್ತು ಅತನ ತರಹದ ಎಲ್ಲರ ವಿವಾಹ ಸಂಬಂಧಿ ಆಲೋಚನೆಗಳನ್ನು ಪರಿಶೀಲಿಸಿದರು.ಆದರೂ ಅದರಲ್ಲಿ ಪುರುಷರಿಗೆ ಸ್ತ್ರೀಯರನ್ನು ಅಧೀನಗೊಳಿಸಲೆಂದೇ ಅಸ್ತಿತ್ವ ಪಡೆದ ಪಿತೃ ಪ್ರಧಾನತೆ ವಿವಾಹ ಸಂಸ್ಥೆಯೊಳಗಿನ ಲಿಂಗಾಧಾರಿತ ತಾರತಮ್ಯವನ್ನು ಇಟ್ಟುಕೊಳ್ಳುವುದರ ಮೂಲಕವೇ ಸ್ವಜಾತಿ ವಿವಾಹ ಪದ್ಧತಿಯನ್ನು ಅಂದರೆ ಬ್ರಾಹ್ಮಣ ಪಿತೃಪ್ರಧಾನತೆ ನಿರ್ಮೂಲನೆಗೊಳಿಸಲು ಅಗತ್ಯವಾದ ತಿದ್ದುಪಡಿಗಳನ್ನು ತರಲು ಪ್ರಯತ್ನಿಸಿದರು.ಈ ಎಲ್ಲ ಅಂಶಗಳನ್ನು ಒಳಗೊಂಡ ‘ಕೂಸೆ’ ಹಿಂದೂ ಕೋಡ್ ಬಿಲ್ ಆಗಿದೆ.
ಆದ್ದರಿಂದ ಹಿಂದೂ ಕೋಡ್ ಬಿಲ್ ನಲ್ಲಿ ಮಹಿಳೆ ಸಂಬಂಧ ಎಲ್ಲ ಅಂಶಗಳು ಜಾತಿ ಪದ್ಧತಿಯನ್ನು ಉಳಿಸಿಕೊಂಡಿರುವ ಮೌಲ್ಯಗಳು ಮತ್ತು ಮಹಿಳಾ ವಿರೋಧಿ ಸಂಗತಿಗಳಾದ ವಿಧವೆ, ಆಸ್ತಿ ನಿರಾಕರಣಿ ಇತ್ಯಾದಿ ಸಂಗತಿಗಳನ್ನು ನಿರ್ವಹಿಸುತ್ತದೆ. ಇದು ಪಿತೃಪ್ರಧಾನತೆಯನ್ನು ಮುಂದುವರೆಸುತ್ತಿರುವ ವಿವಾಹ ಸಂಸ್ಥೆಯ ಲಿಂಗತಾರತಮ್ಯ ಗುಣಲಕ್ಷಣಗಳನ್ನು ನಿರ್ಮೂಲನೆ ಗೊಳಿಸುವುದರಲ್ಲಿ ಸಫಲವಾಗಲು ಸಾಧ್ಯವಿಲ್ಲ. ಈ ವಿವಾಹ ಸಂಬಂಧಿ ಮಸೂದೆ ಜಾತಿ ಒಳಗಿರುವ ಪಿತೃಪ್ರಧಾನತೆಯ ಮೌಲ್ಯಗಳಿಂದ ಗ್ರಹಿತವಾದವು.
ಈ ಹಿನ್ನೆಲೆಯಲ್ಲಿ ಹಿಂದೂ ಕೋಡ್ ಬಿಲ್ನ್ನು ಪರಿಶೀಲಿಸುವುದಾದರೆ ಇದು ಹಿಂದೂ ಸ್ತ್ರೀ-ಪುರುಷರ ಅಂತರಜಾತಿಯ ವಿವಾಹಗಳಿಗೆ ಕಾನೂನಾತ್ಮಕ ಅನುಮೋದನೆ ನೀಡಿದ್ದಲ್ಲದೆ, ಮಹಿಳೆಗೆ ವಿಚ್ಛೇದನೆ ಪಡೆಯುವ ಹಕ್ಕನ್ನು ಮನುಸ್ಮೃತಿ ಮಹಿಳೆಯರ ಮೇಲೆ ಹೇರಿದ್ದ ನಿಯಂತ್ರಣಗಳನ್ನು ತರ್ಕಬದ್ಧವಾಗಿ ಮಂಡಿಸುವ ಅಂಬೇಡ್ಕರ್ ಅದರಿಂದ ಹೊರಬರಲು ಬಯಸುವ ಮಹಿಳೆಯರಿಗೆ ವಿಚ್ಛೇದನೆ ಹಕ್ಕು ಅಗತ್ಯ ಎಂದು ತಿಳಿದು ಈ ಸಂಗತಿಯನ್ನು ಸೇರಿಸಿದ್ದಾರೆ.
ಹಾಗೆಯೇ ಜಾತಿಪದ್ಧತಿಯೊಂದಿಗೆ ಮತ್ತು ಪಿತೃಪ್ರಧಾನತೆಯೊಂದಿಗೆ ಮೈಗೂಡಿಸಿಕೊಂಡಿದ್ದ ಭಾರತದ ಜಮೀನ್ದಾರಿ ಪದ್ಧತಿ ಆಸ್ತಿಯ ಹಕ್ಕನ್ನು ಪುರುಷರಿಗೆ ವಹಿಸಿತ್ತು. ಇದು ಭೂಮಿಯ ಒಡೆತನ, ಕುಟುಂಬ ಆದಾಯದಲ್ಲಿ ಪಾಲು, ಕೃಷಿ ಉತ್ಪನ್ನದ ವಿತರಣೆ ಎಲ್ಲದರಿಂದಲೂ ಮಹಿಳೆಯರನ್ನು ಪ್ರತ್ಯೇಕಿಸಲಾಗಿತ್ತು.ಜೊತೆಗೆ ಭೂಮಿಯಲ್ಲಿ ದಿನನಿತ್ಯ ಕೆಲಸ ಮಾಡುವ ಮಹಿಳೆಯರ ದುಡಿಮೆಯನ್ನು ಅದೃಶ್ಯಗೊಳಿಸುವ ಮೂಲಕವೇ ಆಸ್ತಿಹಕ್ಕನ್ನು ನಿರಾಕರಿಸಲಾಗಿತ್ತು. ಈ ಕುರಿತು “ಮನು ಆಸ್ತಿಯ ವಿಚಾರದಲ್ಲಿ ಹೆಂಡತಿಯನ್ನು ಗುಲಾಮಳ ಸ್ಥಾನಕ್ಕೆ ಇಳಿಸಿದ್ದ” (ಬಾ.ಸಾ.ಅಂ.ಬ.ಭಾ, 1999, ಸಂ.4, ಪು.51), ಅಂಬೇಡ್ಕರ್ ಈ ಮಸೂದೆ ಮುಖಾಂತರ ಮಹಿಳೆಗೆ ಆಸ್ತಿಹಕ್ಕನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಒದಗಿಸಲು ಮುಂದಾದರು.
ಈ ಕುರಿತು 1956ರಲ್ಲಿ ಅಂಬೇಡ್ಕರ್ ಸಿದ್ದಾರ್ಥ ಕಾಲೇಜಿನಲ್ಲಿ ಮಾತನಾಡುತ್ತಿದ್ದರು. ಅವರ ಪ್ರಕಾರ ಹಿಂದೂ ವಿವಾಹ ಕಾಯಿದೆಯ ಕೊನೆಯ ಬದಲಾವಣೆ ಮಹಿಳೆಯ ಆಸ್ತಿಹಕ್ಕಿಗೆ ಸಂಬಂಧಿಸಿದ್ದು.1937ಕ್ಕೆ ಮುನ್ನ ಆಕೆ ಒಂದು ಕುಟುಂಬದ ಸೊಸೆ ಆಗಲಿ ಅಥವಾ ವಿಧವೆ ಸೊಸೆಯಾಗಲಿ ಆ ಕುಟುಂಬದಲ್ಲಿ ಆಸ್ತಿಯ ಪಾಲನ್ನು ಕೇಳುವಂತಿರಲಿಲ್ಲ. ಆದರೆ 1937ರ ಕಾಯ್ದೆಯಲ್ಲಿ ವಿಧವೆಗೆ ತಮ್ಮ ಮೃತಪತಿಯ ಆಸ್ತಿಯನ್ನು ಪಡೆಯುವ ಹಕ್ಕನ್ನು ನೀಡಿತು. ಆದರೂ ಮಹಿಳೆಯ ಆಸ್ತಿಯ ಹಕ್ಕು ಅಪೂರ್ಣವಾಗಿತ್ತು. ಆದರೆ ಈಗ ಹಿಂದೂ ವಿವಾಹ ಕಾಯ್ದೆ ಮೂಲಕ ಮನೆಯ ಮಗಳಿಗೂ ಸಹ ಮಗನಷ್ಟೇ ಆಸ್ತಿ ಮೇಲೆ ಹಕ್ಕು ಇರುವ ಸಂಗತಿಯನ್ನು ಒಳಗೊಂಡಿದೆ. ಇದು ಸಮಾಜದಲ್ಲಿ ಅಳವಡಿಸಲಾಗಿರುವ ಮೌಲ್ಯಗಳನ್ನು ಸಮಾಜದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜಾತಿ ಪದ್ಧತಿಯಲ್ಲಿನ ಆಮೂಲಾಗ್ರ ಬದಲಾವಣೆಗೆ ಸಾಧ್ಯವಾಗುವುದೆಂದು ಹಿಂದೂ ಕೋಡ್ ಬಿಲ್ಲನ್ನು ರೂಪಿಸಲಾಗಿದೆ” ಎಂದರು. (ಅಂಬೇಡ್ಕರ್, ಉದ್ಧತ; ಅಹಲಾರಂಗ್ಲೀಕರ್, 1991, ಪು.241).
ಇಷ್ಟೆಲ್ಲ ಸಂಗತಿಗಳನ್ನು ಒಳಗೊಂಡ ಈ ಕಾಯ್ದೆಯ ಮಂಡನೆಯ ಸಂದರ್ಭದಲ್ಲಿ ಅಂಬೇಡ್ಕರ್ ಅಪಾರವಾದ ವಿರೋಧವನ್ನು ಎದುರಿಸಬೇಕಾಯಿತು.ಅದನ್ನು ಸಮರ್ಥಿಸುವಾಗ ಅಂಬೇಡ್ಕರ್ ಪಾರ್ಲಿಮೆಂಟಿನಲ್ಲಿ ಎದ್ದು ನಿಂತು ಹೀಗೆ ನುಡಿದರು. “ಮಹಿಳೆಯ ಆಸ್ತಿಹಕ್ಕನ್ನು ಸಮರ್ಥಿಸುವ ಬೃಹಸ್ಪತಿಯನ್ನು, ವಿಚ್ಛೇದನ ಸಿದ್ಧಾಂತವನ್ನು ಪ್ರತಿಪಾದಿಸುವ ‘ಪರಾಶರ ಸ್ಮೃತಿ’ಯನ್ನು ಹಿಂದೂ ಮೂಲಭೂತವಾದಿ ಮುಖಂಡರ ಮುಂದೆ ಎತ್ತಿಹಿಡಿದರು. ಇದು ಹಿಂದೂಕೋಡ್ ಬಿಲ್ನಲ್ಲಿರುವ ತಮ್ಮ ಸಿದ್ಧಾಂತದ ಮೂಲಭೂತ ಸತ್ಯ” ಎಂದರು (ಬಾ.ಸಾ.ಅಂ.ಬ.ಭಾ, 1994, ಪು.622), ಹೀಗೆ ಅಂಬೇಡ್ಕರ್ ಹಿಂದೂಕೋಡ್ ಮಸೂದೆಯನ್ನು ಮಂಡಿಸಿದರು.
ಆದರೆ ಇದು ಪಿತೃಪ್ರಧಾನ, ಧರ್ಮಪ್ರಧಾನ, ಹಾಗೂ ಜಾತಿಪ್ರಧಾನ ಗುಣಗಳನ್ನು ಸಮರ್ಥಿಸುವ ಸದಸ್ಯರ ಪ್ರತಿರೋಧದಿಂದಾಗಿ ಈ ಮಸೂದೆ ಬಹುಮತ ಗಳಿಸುವಲ್ಲಿ ವಿಫಲವಾಯಿತು.ಈ ಘಟನೆಯಿಂದ ತುಂಬಾ ಬೇಸರಗೊಂಡ ಅಂಬೇಡ್ಕರ್ ತಮ್ಮ ಮಂತ್ರಿ ಪದವಿಗೆ ಸೆಪ್ಟೆಂಬರ್ 27, 1951ರಂದು ರಾಜೀನಾಮೆ ಸಲ್ಲಿಸಿದರು.ಇದು ಈ ಮಸೂದೆಯ ಜಾತಿ ಸಂಬಂಧಿ ಪರಿಹಾರದ ಬದ್ಧತೆಯನ್ನು ತೋರಿಸುತ್ತದೆ.ಜೊತೆಗೆ ಮಹಿಳೆಯರ ಬಗೆಗಿನ ಉದಾರ ಮನೋಭಾವನೆಯನ್ನು ಬಿಚ್ಚಿಡುತ್ತದೆ” ಎಂದು ಭಾವಿಸಿದವರು ಸಹ ನಂತರ ಈ ಘಟನೆಗೆ ಪ್ರತಿಕ್ರಿಯಿಸಿದರು.
ಅನೇಕ ಸಮಾಜಶಾಸ್ತ್ರಜ್ಞರು ಇದೊಂದು ದುರದೃಷ್ಟಕರ ಪ್ರಸಂಗ ಎಂದು ವಿಷಾದ ವ್ಯಕ್ತಪಡಿಸಿದರು. ಅದರಲ್ಲೂ ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಪಿ.ಬಿ.ಗಜೇಂದ್ರ ಗಡಕರ್ ಅವರು ಅಂಬೇಡ್ಕರ್ ಅವರು ವಹಿಸಿದ ಪಾತ್ರದ ಬಗ್ಗೆ ಹೀಗೆ ಅಭಿಪ್ರಾಯಪಟ್ಟಿದ್ದಾರೆ. “The Honourable Dr. Ambedkar has played an important role in the progress of this bill and in introducing the code before the Parliment. He has shown his determination to persuade the legislature to see it through without delay. It is well known that Dr. Ambedkar can legitimately and justly feel proud for the substantial work done by him in the drafting for our Constitution. It with the active co-operation and support of the Prime Minister who fortunately shares his Law Minister enthusiasm. The code Dr. Ambedkar is able to give it the pride of place in her statue book. I for one would hail it as time sweet revenglon the Hindu society as a whole. If Dr. Ambedkar gave us hindus our code his achievement would go down in history as a very eloquent piece of poetic justice indeed.”
ಇನ್ನು ಕೆಲವರು ಇದನ್ನು “ಚರಿತ್ರೆಯ ಹಿನ್ನಡೆ” ಎಂದರು. ಅಂದರೆ ಆಧುನಿಕ ಭಾರತದಲ್ಲಿಯೂ ಮಹಿಳೆಯ ಪರಿಸ್ಥಿತಿಗಳು ಹಿಂದಿನಂತೆಯೇ ಯಥಾಪ್ರಕಾರ ಮುಂದುವರೆದಿವೆ ಎಂದರು.
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯನ್ನು ಬೌದ್ಧಿಕವಾಗಿ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಕಡೆಗಣಿಸಲಾಗಿತ್ತು.ಗಂಡು ಹೆಣ್ಣಿನ ನಡುವೆ ಇರುವ ಈ ಲಿಂಗ ತಾರತಮ್ಯವು ಜಾತಿ ತಾರತಮ್ಯದ ಜೊತೆಗೆ ಸಂಬಂಧ ಪಡೆದಿತ್ತು. ಹಿಂದೂ ಧರ್ಮದಲ್ಲಿ ಶೂದ್ರನು ಕೀಳು ಮಾನವನಾದರೆ ಸ್ತ್ರೀ ನೀಚಳೆಂದು ಪರಿಗಣಿಸಲ್ಪಟ್ಟಿದ್ದಾಳೆ. ಇದರಿಂದಾಗಿ ಸ್ತ್ರೀಯು ವಿವಿಧ ಹಂತದಲ್ಲಿ ಸಾಮಾಜಿಕ ಭಿನ್ನತೆಯಿಂದ ಶೂದ್ರರಿಗಿಂತ ಹೆಚ್ಚಿಗೆ ಗುರಿಯಾಗಿದ್ದಾಳೆ. ಸ್ತ್ರೀ ಕಿರುಬನ ಹೃದಯದ ವಳು (ಋಗ್ವೇದದ) ಅವಳು ಎಲ್ಲ ಕೆಡುಕಿನ ಬೇರು (ಮಹಾಭಾರತ), ಅವಳು ಚಂಚಲೆ ಖಡ್ಗದಂತೆ ಹರಿತವಾದವಳು, ಬಿರುಗಾಳಿಯಂತೆ ಅಸ್ಥಿರಳು(ರಾಮಾಯಣ), ಹೆಂಗಸು ಕಾಮಪಿಪಾಸೆ ಉಳ್ಳವಳು, ಕುಟಿಲೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಎಂದಿಗೂ ಅನರ್ಹಳು (ಮನು) ಸ್ತ್ರೀ ಒಂದು ವಸ್ತು, ಪದಾರ್ಥ, ಶಾಕ್ತ ಮುಂತಾಗಿ ಸ್ತ್ರೀಯನ್ನು ವೇದೋಪನಿಷತ್ತುಗಳ ಕಾಲದಿಂದಲೂ ಕಡೆಗಣಿಸಿಕೊಂಡು ಬರಲಾಗಿತ್ತು.” (ಅದೇ, ಪು.51,53) ಮಹಿಳೆ ಇಂತಹ ದಿಗ್ಟಂಧನಗಳಿಗೆ ಗುರಿಯಾದುದರಿಂದ ಅವಳ ಬಿಡುಗಡೆಗಾಗಿ ಪ್ರಯತ್ನಗಳು ಹೋರಾಟಗಳು ಚರಿತ್ರೆಯ ಉದ್ದಕ್ಕೂ ನಡೆದಿವೆ. ಜ್ಯೋತಿಬಾ ಫುಲೆ, ರಾಜಾರಾಮ ಮೋಹನರಾಯ್ರಂತವರು ಇಲ್ಲಿ ಉಲ್ಲೇಖನಾರ್ಹರು. ಇದರಲ್ಲಿ ಅಂಬೇಡ್ಕರ್ ಅವರು ಮಹಿಳೆಗೆ ಸಮಾನಹಕ್ಕು ಅಧಿಕಾರಗಳನ್ನು ಕೊಡಿಸಿಕೊಡುವಲ್ಲಿ ಮಾಡಿದ ಪ್ರಯತ್ನಗಳು ಮಹತ್ವದ್ದಾಗಿವೆ.
1955ರ ಜನವರಿಯಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಗಳು ನಡೆದವು.ನಂತರ ಬಹುಮತದ ಸರ್ಕಾರದ ಪಾರ್ಲಿಮೆಂಟ್ನ ಎರಡು ಸದನಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ನಾಲ್ಕು ಮಸೂದೆಗಳನ್ನು ಒಂದಾದ ಮೇಲೆ ಒಂದರಂತೆ ಮಂಡಿಸಿದರು.ಈ ನಾಲ್ಕು ಮಸೂದೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ.ಎರಡು ಸದನಗಳ ಅನುಮೋದನೆ ದೊರೆಯಿತು.ಆದ್ದರಿಂದ 1955-56ರಲ್ಲಿ ಮಂಡಿತವಾದ ಹಿಂದೂ ಕೋಡ್ ಬಿಲ್ಗೆ ಮಹಿಳಾ ನೆಲೆಯಿಂದ ಪ್ರಮುಖವಾದ ಸ್ಥಾನ ಹೊಂದಿದೆ. ಇದು ವಿವಾಹ ಸಂಬಂಧಿತವಾದ ಮಹಿಳೆಯರ ಹಲವು ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿತವಾದ ಕಾಯ್ದೆಯಾಗಿದ್ದು, ಅದರ ಪ್ರಮುಖ ಅಂಶಗಳು ಈ ರೀತಿಯಿವೆ:
ಒಂದು : ಬಹುಪತ್ನಿತ್ವವನ್ನು ನಿಷೇಧಿಸಿ, ಏಕಪತಿ-ಪತ್ನಿತ್ವವನ್ನು ಕಾನೂನು ಬದ್ಧಗೊಳಿಸುವುದು (Hindu Marriage Act), ಹಿಂದೂ ವಿವಾಹ ಕಾಯ್ದೆ (1955) ಬಹುಪತ್ನಿತ್ವವನ್ನು ಅಪರಾಧವಾಗಿ ಪರಿಗಣಿಸಿದೆ. ಜೊತೆಗೆ ಏಕಪತ್ನಿತ್ವಕ್ಕೆ ಅನುಮತಿಯಿದೆ. ಅಂದರೆ ಇದರಲ್ಲಿ “ಅಂಬೇಡ್ಕರ್ ಅವರು ಎರಡು ರೀತಿಯ ವಿವಾಹ ಪದ್ಧತಿಗಳನ್ನು ಪ್ರಸ್ತಾಪಿಸಿದ್ದರು.ಮೊದಲನೆಯದು ಪಾರಂಪರಿಕ ವಿವಾಹಪದ್ಧತಿ (Sacramintal Marriage), ಎರಡನೆಯದು ನಾಗರಿಕ ವಿವಾಹಪದ್ಧತಿ (ಅತುಟ ಒಚಿಡಿಡಿಚಿರಜ), ಈ ಎರಡು ಪದ್ಧತಿಗಳು ಸಂಪೂರ್ಣವಾಗಿ ಸಂಪ್ರದಾಯದಿಂದ ಭಿನ್ನವಾಗಿರಲಿಲ್ಲ. ಏಕೆಂದರೆ ಭಾರತೀಯ ಸಂಸ್ಕೃತಿಯಲ್ಲಿಯೇ ಈ ಎರಡು ಬಗೆಯ ವಿವಾಹಗಳಿದ್ದವು.ಸಾಂಪ್ರದಾಯಿಕವಾಗಿ ಗುರು ಹಿರಿಯರು ನಿರ್ಧರಿಸಿದ ವಿವಾಹ ಮೊದಲ ಬಗೆಯದಾಗಿದ್ದರೆ, ಪರಸ್ಪರ ಪ್ರೀತಿಸಿ ಮದುವೆಯಾಗುವುದು ಗಾಂಧರ್ವ ವಿವಾಹಪದ್ಧತಿ ಎನಿಸಿತ್ತು.
ಗಾಂಧರ್ವ ವಿವಾಹಪದ್ಧತಿಗೆ ಹೊಸ ಅಂಶಗಳನ್ನು ಸೇರಿಸಿ ಅಂಬೇಡ್ಕರ್ ಅವರು ನಾಗರಿಕ ವಿವಾಹ ಪದ್ಧತಿಯನ್ನು ರೂಪಿಸಿದಂತೆ ಕಾಣುತ್ತದೆ. ಆದರೆ ಅಂಬೇಡ್ಕರ್ ನಾಗರಿಕ ವಿವಾಹಪದ್ಧತಿಗೆ ಕಾನೂನಿನ ರಕ್ಷೆಯನ್ನು ಒದಗಿಸಿದರು. ಇದು ಎಲ್ಲ ಮತೀಯ ಸ್ತ್ರೀಯರನ್ನು ಸಮಾನವಾಗಿ ಪರಿಗಣಿಸಿದ ಕಾನೂನಾಗಿತ್ತು.” (ಬಾ.ಸಾ.ಅಂ.ಬ.ಭಾ, 2004,ಪು.600,800) ಈ ಮೂಲಕವೇ ಅಂತರ್ಜಾತಿಯ ವಿವಾಹ ಬಹಿಷ್ಕ್ರುತವಲ್ಲ ಎಂದು ಏಕಪತ್ನಿತ್ವ ವ್ಯವಸ್ಥೆಯನ್ನು ಜಾರಿಗೊಳಿಸಿ, ಇದನ್ನು ಕಾನೂನು ಬದ್ಧಗೊಳಿಸಲಾಗಿದೆ. ಯಾವುದೇ ವ್ಯಕ್ತಿ ಮೊದಲನೆಯ ಪತ್ನಿ ಜೀವಂತವಿದ್ದು, ಅವಳಿಂದ ವಿಚ್ಛೇದನ ಪಡೆಯದೆ ಮರುವಿವಾಹವಾಗುವಂತಿಲ್ಲ. ಈ ರೀತಿ ವಿವಾಹಕ್ಕೆ ಕಾನೂನು ಮನ್ನಣೆ ಇರುವುದಿಲ್ಲ.
ಬಹುಪತ್ನಿತ್ವ ಪದ್ಧತಿ ಭಾರತ ದಂಡಸಂಹಿತೆ ಪ್ರಕಾರ ಅಪರಾಧ ಎಂದು ಪರಿಗಣಿಸಲಾಗಿದೆ.ಪ್ರಾಚೀನ ಹಿಂದೂ ಸಮಾಜದಲ್ಲಿ ಬಹುಪತ್ನಿತ್ವ ರೂಢಿಯಲ್ಲಿತ್ತು.ಈಗ ಭಾರತೀಯ ದಂಡಸಂಹಿತೆ 494 ಮತ್ತು 495ನೇ ಕಲಂನ ಪ್ರಕಾರ ಶಿಕ್ಷೆಗೆ ಅರ್ಹರಾಗುತ್ತಾರೆ. ಹಾಗೆಯೇ ಯಾವುದೇ ವ್ಯಕ್ತಿಯ ತಂದೆಯ ಸಂಬಂಧ ಮೇಲುಮುಖವಾಗಿ 5ನೇ ತಲೆಮಾರಿನವರೆಗೆ ತಾಯಿಯ ಸಂಬಂಧ ಮೇಲುಮುಖವಾಗಿ 3ನೇ ತಲೆಮಾರಿನವರಿಗೆ ಸಂಬಂಧದಲ್ಲಿ ವಿವಾಹವಾಗುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.
ಒಬ್ಬ ವ್ಯಕ್ತಿ ಭಾರತದಲ್ಲಿ ಮದುವೆಯಾಗಿ ನಂತರ ವಿದೇಶಕ್ಕೆ ತೆರಳಿ ಅಲ್ಲಿ ಮರುವಿವಾಹವಾದರೂ ಕೂಡ ಅಪರಾಧಿ ಎಂದು ಕಾನೂನಿನ ಅನ್ವಯ ಪರಿಗಣಿಸಲ್ಪಡುತ್ತಾನೆ. ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಮರುವಿವಾಹಕ್ಕೆ ಈ ಕಾಯ್ದೆಯಲ್ಲಿ ಅವಕಾಶವಿಲ್ಲ ವಿಚ್ಛೇದನ ಕ್ರಿಯೆ ಪೂರ್ಣಗೊಳ್ಳುವವರೆಗೆ ಆತ ಮತ್ತು ಆಕೆ ಮರುವಿವಾಹ ಮಾಡಿಕೊಳ್ಳುವಂತಿಲ್ಲ. ಈ ಕಾನೂನಿನ ಕಣ್ಣುತಪ್ಪಿಸಿ ಈ ರೀತಿಯ ವಿವಾಹವಾದರು ಕೂಡ ಅದು ಅನೂರ್ಜಿತವೆಂದೇ ಹೇಳುತ್ತದೆ. ಅಷ್ಟೇ ಅಲ್ಲ, ಈ ಕಾಯ್ದೆಯಲ್ಲಿ ಪ್ರತಿಯೊಂದು ಸಮಾಜದ ಜನತೆ ಸ್ತ್ರೀಯನ್ನು ಹೇಗೆ ಕಾಣುತ್ತಾ ಬಂದಿದೆ ಎಂಬುದನ್ನು ಆಧಾರ ಸಹಿತವಾಗಿ ಸಾಬೀತುಪಡಿಸಲು ಪ್ರಯತ್ನಿಸಿದ ಅಂಬೇಡ್ಕರ್ ಭಾರತೀಯ ಪ್ರಾಚೀನ ಕಾಲದಿಂದ ನಿರಾಕರಿಸಿದ ವಿವಾಹ ವಿಚ್ಛೇದನ ಹಕ್ಕನ್ನು ಕಲ್ಪಿಸಿದರು. ಅವರ ಪ್ರಕಾರ “ಸಕಾರಣಗಳಿಲ್ಲದೆ ಪುರುಷನಾಗಲೀ, ಸ್ತ್ರೀಯಾಗಲೀ ತಾಳಿಯನ್ನು ಹರಿದುಕೊಳ್ಳುವುದಕ್ಕೆ ಬರುವುದಿಲ್ಲ. ಹಾಗೆಯೇ ಕೆಲವು ಸಕಾರಣಗಳು ಹಾಗೂ ಮೂಲಭೂತ ನ್ಯೂನತೆಗಳು ಪುರುಷನಲ್ಲಿದ್ದರೆ ಅಂತಹ ವ್ಯಕ್ತಿಯಿಂದ ವಿವಾಹ ವಿಚ್ಛೇದನವನ್ನು ಪಡೆಯಬಹುದು.” (ಬಾ.ಸಾ. ಅಂ.ಬ.ಭಾ, ಅದೇ, ಪು.721, 777) ಎಂದು ಹೇಳುತ್ತಾರೆ. ವಿವಾಹ ವಿಚ್ಛೇದನೆಗೆ ಕಾರಣಗಳ ಪಟ್ಟಿ ನೀಡುತ್ತಾರೆ. ಅವುಗಳೆಂದರೆ:
1. ಮದುವೆ ಮಾಡಿಕೊಂಡ ವ್ಯಕ್ತಿ ಇಲ್ಲವೆ ಹೆಣ್ಣು ಸುಮಾರು ಎರಡು ವರ್ಷ ದೂರಾಗಿ ದೇಶ್ಯಾಂತರ ಹೋಗಿದ್ದರೆ,
2. ಇನ್ನೊಬ್ಬಳು ಭಾಗಿದಾರನೊಂದಿಗೆ ಬದುಕು ನಡೆಸಿದ್ದರೆ,
3. ತಾನು ಮಾಡಿಕೊಂಡ ಪುರುಷನಿಗೆ ಯಾವುದಾದರೊಂದು ಭಯಾನಕ ಸೋಂಕು ರೋಗ ತಗುಲಿದ್ದರೆ,
4. ಗುಹ್ಯರೋಗದಿಂದ ಪೀಡಿತನಾಗಿದ್ದರೆ,
5. ಸಾಂಕ್ರಮಿಕ ಕುಷ್ಠರೋಗದಿಂದ ನರಳುತ್ತಿದ್ದರೆ,
6. ಮದುವೆಯಾದಂದಿನಿಂದ ಮನಸ್ವಾಸ್ಥ ಇರದಿದ್ದರೆ,
7. ವ್ಯಭಿಚಾರಿಯಾಗಿದ್ದರೆ,
8. ಗಂಡನು ಷಂಡನಾಗಿದ್ದರೆ,
9, ಉಪಪತ್ನಿಯನ್ನು ಇಟ್ಟುಕೊಂಡರೆ,
10. ಅನ್ಯಮತಕ್ಕೆ ಮತಾಂತರಗೊಂಡಿದ್ದರೆ,
11. ಪುರುಷ ಹುಚ್ಚು ಇಲ್ಲವೆ ಬುದ್ಧಿಭ್ರಮಣೆ ಹೊಂದಿದ್ದರೆ, ವಿಚ್ಛೇದನಕ್ಕೆ ದಾವೆ ಹಾಕಿ ವಿಚ್ಛೇದನೆಯನ್ನು ಪಡೆಯಬಹುದು(ಅದೇ, ಪು.733). ಹಾಗೆಯೇ ವಿಚ್ಚೇದನೆ ಜೊತೆಗೆ ಗಂಡನು ತನ್ನ ಆಸ್ತಿಯಲ್ಲಿ ಜೀವನಾಂಶ ಕೊಡಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ವಿವರಣೆ ಹೀಗಿದೆ;
1. ಗಂಡನ ನಿವ್ವಳ ವರಮಾನದ ಐದನೆಯ ಒಂದು ಭಾಗಕ್ಕೆ ಮೀರದಂತೆ ಹಣವನ್ನು ಪತ್ನಿಗೆ ಕೊಡತಕ್ಕದ್ದು.
2. ಪತಿಯ ಆಸ್ತಿಯಲ್ಲಿ ಒಂದು ಭಾಗವನ್ನು ಕೊಡತಕ್ಕದ್ದು.
3. ಆಸ್ತಿಯಲ್ಲಿ ಒಂದು ಮೊತ್ತವನ್ನು ಕೊಡತಕ್ಕದ್ದು.
4. ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ಕೊಡತಕ್ಕದ್ದು.
5. ಅವಳಿಗೂ ಆಸ್ತಿ ಇದ್ದರೆ ಗಂಡ ಮತ್ತು ಹೆಂಡತಿಯ ಈರ್ವರ ಆಸ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.” (ಉದ್ಧೃತ : ಬಾಬುರಾವ್ ಮುಡಬಿ, 2005, ಪು.146)
ಹೀಗೆ ಈ ವಿವಾಹ ಕಾಯ್ದೆಯಲ್ಲಿ 1956 ವಿಚ್ಛೇದನಕ್ಕೆ ಪರಸ್ಪರ ಇಬ್ಬರಲ್ಲಿ ಒಬ್ಬರು ದೋಷಾರೋಪಣೆಗೆ ಒಳಪಟ್ಟಾಗ (ಶೀಲ, ಆರೋಗ್ಯದ ಬಗ್ಗೆ ಇತ್ಯಾದಿ) ಮಾತ್ರ ವಿಚ್ಛೇದನಕ್ಕೆ ಅವಕಾಶವಿತ್ತು.ಆದರೆ 1976ರಲ್ಲಿ ಜಾರಿಗೆ ಬಂದ ವಿವಾಹ ವಿಶೇಷ ಕಾನೂನು ಭಾಗ 13ರ (ಬಿ) ಪ್ರಕಾರ ಗಂಡ ಹೆಂಡತಿ ಪರಸ್ಪರ ಒಪ್ಪಿಗೆಯಿಂದಲೂ ದಾಂಪತ್ಯದಿಂದ ಬಿಡುಗಡೆ ಹೊಂದಬಹುದು.
“ವಿವಾಹ ವಿಚ್ಛೇದನೆ ಕುರಿತು ಮೊಕದ್ದಮೆಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಪತ್ನಿ ಜೀವನಾಂಶಕ್ಕೆ ಅರ್ಹಳಾಗಿರುತ್ತಾಳೆ.ನ್ಯಾಯಾಲಯವು ಪತಿಯ ಒಟ್ಟು ವರಮಾನದ ಐದನೆಯ ಭಾಗದಷ್ಟು ವರಮಾನವನ್ನು ಜೀವನಾಂಶ ನೀಡುವಂತೆ ಆದೇಶವಿದೆ.ಮೊಕದ್ದಮೆ ಇತ್ಯರ್ಥವಾದಾಗ ಪತಿಯಿಂದ ಪತ್ನಿಗೆ ಒಟ್ಟಾಗಿ ಒಂದೇ ಮೊತ್ತದಲ್ಲಿ ಅಥವಾ ಆಕೆ ಬದುಕಿರುವವರೆಗೆ ಮಾಸಿಕವಾಗಿ ಜೀವನಾಂಶ ನೀಡುವಂತೆ ಕಲ್ಪಿಸಲಾಗಿದೆ.ಆದರೆ ವಿಚ್ಛೇದನೆ ಹೊಂದಿದ ಪತ್ನಿ, ಮರು ವಿವಾಹವಾದ ಸಂದರ್ಭದಲ್ಲಿ ಆಕೆ ಜೀವನಾಂಶಕ್ಕೆ ಅರ್ಹಳಾಗಿರುವುದಿಲ್ಲ” ಎಂದು ಹೇಳುತ್ತದೆ.
ವಿವಾಹ ವಿಚ್ಛೇದನ ಕುರಿತು ಕಾನೂನಿನಲ್ಲಿ ಇಷ್ಟೆಲ್ಲ ಅವಕಾಶಗಳು ಇದ್ದಾಗ್ಯೂ ಸಂಪ್ರದಾಯವಾದಿಗಳು ಇರುವ ಈ ಸಮಾಜದಲ್ಲಿ “ವಿವಾಹ ವಿಚ್ಛೇದನೆ” ಎಂಬುದು ವಾಸ್ತವವಾಗಿ ಹಿಂದೂ ಧರ್ಮದ ವಿರೋಧಿ ಅಂಶವಾಗಿ ನಿರೂಪಿತಗೊಳ್ಳುತ್ತದೆ.ಆದ್ದರಿಂದ ಇಂದಿಗೂ ಕೂಡ ಬಹುತೇಕ ಮಹಿಳೆಯರು ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೊಕ್ಕಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.ದಾಖಲಾದ ಪ್ರಕರಣಗಳನ್ನೇ ವೈಭವೀಕರಿಸಲಾಗುವುದು. ವಿವಾಹ ವಿಚ್ಛೇದನೆ ಎಂಬುದು ಮಹಿಳೆಯರನ್ನು ಹಿಂಸೆಗೆ ಒಳಪಡಿಸುವ ಬಹುಮುಖ್ಯವಾದ ಸಂಪ್ರದಾಯವಾಗಿದೆ.ಅದರ ಜೊತೆಗೆ “ಧರ್ಮಬಾಹಿರ ಮಕ್ಕಳನ್ನು ಧರ್ಮಸಮ್ಮತಿಗೊಳಿಸುವುದು, ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15 ವರ್ಷಕ್ಕೆ (ಈಗ 18 ವರ್ಷ ಆಗಿದೆ) ಏರಿಸುವುದರ ಮೂಲಕ ಅವರಿಗೆ ಸ್ವಾತಂತ್ರ್ಯವನ್ನು ಒದಗಿಸುವುದಾಗಿದೆ.ಆದರೆ ಜಾತಿ, ಮತ್ತು ಪಿತೃಪ್ರಧಾನ ಲೈಂಗಿಕ ಪಾವಿತ್ರ್ಯ ಗುಣಗಳಿಂದಾಗಿ ಇದು ಇಂದಿಗೂ ನಮ್ಮ ಸಮಾಜದ ಬಹು ಮುಖ್ಯ ಸಾಮಾಜಿಕ ಸಮಸ್ಯೆಯಲ್ಲಿ ಚರ್ಚೆಗೊಳ್ಳುತ್ತಿರುವುದು. ಇದು ಬಾಲ್ಯವಿವಾಹ, ವೈಧವ್ಯ, ಪತಿವ್ರತೆ, ಶೀಲ-ಅಶ್ಲೀಲಗಳಲ್ಲಿ ಸುತ್ತುವರೆಯುತ್ತಿದೆ.ಇವು ಶಿಶ್ನಕೇಂದ್ರಿತ ಆಧಿಪತ್ಯವನ್ನು ಅನಾವರಣಗೊಳಿಸುತ್ತವೆ.
ಮಹಿಳೆಗೂ ಆಸ್ತಿ ಹಕ್ಕನ್ನು ಕಾನೂನುಬದ್ಧಗೊಳಿಸಲಾಯಿತು. ಅಂದರೆ ಮಹಿಳೆಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು (Succession Act (1956) ಜಾರಿಗೊಳಿಸಲಾಯಿತು.ಅದರ ಪ್ರಕಾರ “ಗಂಡ ಸತ್ತರೆ ಆತನ ಆಸ್ತಿಯು ಆತನ ಹೆಂಡತಿಗೆ ಸೇರುತ್ತದೆ. ಹೆಣ್ಣು ಮಕ್ಕಳಿಗೆ ತನ್ನ ತಂದೆ ಆಸ್ತಿಯಲ್ಲಿ ಸಮಪಾಲು ಇದ್ದು, ಅವರು ತಮ್ಮ ಆಸಕ್ತಿ ಹಾಗೂ ಇಚ್ಛೆಗೆ ಅನುಸಾರವಾಗಿ ಮಾರಾಟ ಮಾಡಬಹುದು. ಈ ವಿಷಯದಲ್ಲಿ ಅವಳು ಸಂಪೂರ್ಣ ಸ್ವತಂತ್ರಳು.ಹಾಗೆಯೇ ಇದು ಸಂವಿಧಾನದ 15ನೇ ವಿಧಿಗೆ ಸಂಬಂಧಿಸಿದೆ. ಇದರಲ್ಲಿ ಹಿಂದೂ ಮಹಿಳೆಯು ಈ ಕಾನೂನಿನ ಜಾರಿಯ ನಂತರ ಆಸ್ತಿಯ ಕುರಿತು ಅಂತಿಮ ಇಷ್ಟಪತ್ರವನ್ನು ಬರೆಯದೆ ಮರಣ ಹೊಂದಿದ್ದರೆ, ಅವಳ ಆಸ್ತಿಗೆ ಸಮನಾದ ಉತ್ತರಾಧಿಕಾರದ ಕ್ರಮವು ಅನ್ವಯಿಸುತ್ತದೆ” ಇತ್ಯಾದಿ ಅಂಶಗಳನ್ನು ತಿಳಿಸುತ್ತದೆ.(ಉದ್ಧತ: ಅರವಿಂದ ಮಾಲಗತ್ತಿ, 1991, ಪು.143) ಜೊತೆಗೆ ಈ ಕಾಯ್ದೆಯ ಮಹತ್ವದ ಬದಲಾವಣೆಯ ಅಂಶಗಳೆಂದರೆ:
1. ಇದುವರೆಗೆ ಧಾರ್ಮಿಕ ಫಲಾನುಭವಕ್ಕೂ, ಆಸ್ತಿಹಕ್ಕಿಗೂ ಇದ್ದ ಸಂಬಂಧವನ್ನು ತೆಗೆದುಹಾಕಿ ವಾರಸುದಾರಿಕೆ ಹಕ್ಕು ಮತ್ತು ವಾರಸುದಾರಿಕೆ ಕ್ರಮವನ್ನು ವಿಧಿಸಲಾಗಿದೆ.
2. ಇದುವರೆಗೆ ಸ್ತ್ರೀಯರಿಗಿದ್ದ ಪರಿಮಿತ ಹಕ್ಕು (ಜೀವನ ಪದ್ಯಂತ ಅನುಭವಿಸುವ ಹಕ್ಕು) ತೆಗೆದುಹಾಕಿ, ಸ್ತ್ರೀಯರಿಗೆ ಯಾವುದೇ ರೀತಿಯಲ್ಲಿ ಆಸ್ತಿ ಲಭಿಸಿರಲಿ ಅವರು ಪುರುಷರಂತೆ ಸಂಪೂರ್ಣ ಹಕ್ಕುದಾರರಾಗುವರೆಂದು ಘೋಷಿಸಲಾಗಿದೆ.
3. ವಾರಸುದಾರಿಕೆಯ ಅನುಕ್ರಮಣಿಯಲ್ಲಿ ಬಹಳ ಕೆಳಗೆ ಇದ್ದ ಮೃತ ಮಗನ ಹಾಗೂ ಮೃತ ಮಗಳ ಮಗಳನ್ನು ಬಹಳ ಮುಂದೆ ತಂದು ಅವರನ್ನು ಮಗ ಮೃತ ಮಗನ ವಿಧವೆ, ಮೃತ ಮಗನ ಮಗ, ಅವನ ವಿಧವೆ, ಮೃತ ಮಗನ ಮಗ (ಮೊಮ್ಮಗ) ಅವನ ವಿಧವೆ, ಮಗಳು, ಮೃತ ಮಗಳು, ಮಗ ಮುಂತಾದವರನ್ನು ಪ್ರಥಮ ದರ್ಜೆಯ ವಾರಸುದಾರರನ್ನಾಗಿ ಮಾಡಲಾಗಿದೆ. ಧಾರ್ಮಿಕ ಕಾರಣದಿಂದಾಗಿ ದೂರವಿಟ್ಟಿದ್ದ ಈ ಸ್ತ್ರೀ ಸಂಬಂಧಗಳನ್ನು ಮೃತವ್ಯಕ್ತಿಗೆ ಹತ್ತಿರದ ರಕ್ತ ಸಂಬಂಧಿಗಳಾಗುತ್ತಾರೆಂಬ ಕಾರಣದಿಂದ ಈ ಬದಲಾವಣೆ ಮಾಡಲಾಗಿದೆ.
4. ಮಿತಾಕ್ಷರದ ಛಾಯಾಭಾಗದಲ್ಲಿ ಎರಡು ಶಾಖೆಗಳಿಗೂ ಒಂದೇ ವಾರಸುದಾರಿಕೆ ನಿಯಮಾವಳಿಯನ್ನು ಅನ್ವಯಿಸಲಾಗಿದೆ.
5. ಸ್ತ್ರೀಯರ ಆಸ್ತಿ(ಸ್ತ್ರೀಧನಕ್ಕೆಗೆ ಸಂಬಂಧಿಸಿದಂತೆ ವಾರಸುದಾರಿಕೆ ನಿಯಮಗಳನ್ನು ಏಕರೂಪಗೊಳಿಸಲಾಗಿದೆ. ಸ್ತ್ರೀಧನದ ಲಕ್ಷಣಗಳ ಮೇಲೆ ಈಗ ಅದು ಅವಲಂಬಿಸುವುದಿಲ್ಲ. ಸ್ತ್ರೀಧನದ ಬಗ್ಗೆ ಈವರೆಗೆ ಇದ್ದ ಎಲ್ಲ ಗೊಂದಲಗಳನ್ನು ನಿವಾರಿಸಿ ಸ್ತ್ರೀಗೆ ಯಾವ ಮೂಲದಿಂದ ಯಾವಾಗ ಯಾವ ಆಸ್ತಿಯೇ ಬರಲಿ ಅದು ಅವಳ ಸಂಪೂರ್ಣ ಆಸ್ತಿಯಾಗುತ್ತದೆಂದು ತಿಳಿಸುತ್ತದೆ.
6. ಸ್ತ್ರೀ ಹಾಗೂ ಪುರುಷರ ಆಸ್ತಿ ಸಂಬಂಧವಾಗಿ ಈವರೆಗೆ ಸ್ತ್ರೀಪುರುಷರೆ ವಾರಸುದಾರರಲ್ಲಿ ಇದ್ದ ಭೇದಭಾವನ್ನು ಈ ಕಾನೂನು ತೆಗೆದುಹಾಕುತ್ತದೆ. ಒಂದೇ ಶ್ರೇಣಿಯ ಸಂಬಂಧಿಕರಾದಲ್ಲಿ ಸ್ತ್ರೀಪುರುಷರಿಬ್ಬರೂ ಸಮಾನ ಹಕ್ಕಿನ ವಾರಸುದಾರರಾಗುತ್ತಾರೆ.
7. ಈವರೆಗೆ ವ್ಯಭಿಚಾರದ ಕಾರಣದಿಂದಾಗಿ ಸ್ತ್ರೀ ವಾರಸುದಾರರಿಗೆ ಇದ್ದ ಅನರ್ಹತೆಯನ್ನು ತೆಗೆದುಹಾಕಿ ಅಂತಹ ಸ್ತ್ರೀಯರ ವಾರಸುದಾರಿಕೆ ಹಕ್ಕನ್ನು ಮಾನ್ಯ ಮಾಡಲಾಗಿದೆ.
8. ಮಗನು ತಮ್ಮ ಹುಟ್ಟಿನಿಂದ ಪಡೆಯುವ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಉಳಿಸಿಕೊಂಡಿದ್ದರೂ, ಮಗಳಿಗೆ ಜನ್ಮಸಿದ್ಧ ಹಕ್ಕನ್ನು ಕೊಡದಿದ್ದರೂ, ತಾಯಿ, ಹೆಂಡತಿ, ಮಗಳು, ಮೊಮ್ಮಗಳು ಈಗ ಒಂದನೇ ದರ್ಜೆಯ ವಾರಸುದಾರ ರಾಗುವುದರಿಂದ ಮಗ, ಮೊಮ್ಮಗ, ಮರಿ ಮಗನಿಗೆ ದೊರಕುವ ಆಸ್ತಿಯ ಪಾಲು ಕಡಿಮೆ ಆಗುತ್ತದೆ.
9. ವಾಸದ ಮನೆಯ ಬಗ್ಗೆ ಕುಟುಂಬದ ಕೆಲವು ಸದಸ್ಯರಿಗೆ ಮೊದಲು ಕೊಳ್ಳುವ ಹಕ್ಕನ್ನು ಕೊಡಲಾಗಿದೆ.
10. ಮೊಟ್ಟ ಮೊದಲ ಬಾರಿಗೆ ಅವಿಭಕ್ತ ಕುಟುಂಬದ ಆಸ್ತಿಯಲ್ಲಿರುವ ತನ್ನ ಪಾಲಿನ ಬಗ್ಗೆ ಮೃತಪತ್ರ ಬರೆಯುವ ಅಧಿಕಾರವನ್ನು ಸಹಭಾಗೀದಾರರಿಗೆ ಕೊಡಲಾಗಿದೆ. ಹಾಗೆಯೇ ಪ್ರಥಮ ದರ್ಜೆಯ ಸ್ತ್ರೀ ವಾರಸುದಾರರಿದ್ದಾಗ ಸಹಭಾಗಿದಾರನ ಪಾಲು ಬದುಕಿರುವ ಉಳಿದ ಸಹಭಾಗಿದಾರರಿಗೆ ಹೋಗದೆ, ವಾರಸುದಾರಿಕೆ ಮೂಲಕ ಅವನ ವಾರಸುದಾರರಿಗೆ ಸಮಾನವಾಗಿ ಹೋಗುತ್ತದೆ. ಸ್ವಯಾರ್ಜಿತ ಆಸ್ತಿ ಸ್ತ್ರೀ ಪುರುಷ ಸಂಬಂಧಿಗಳಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ.
11. ಕಾನೂನುಬಾಹಿರ ಸಂಬಂಧದಲ್ಲಿ ಹುಟ್ಟಿದ ಮಕ್ಕಳಿಗೆ ತಾಯಿಯ ಆಸ್ತಿಯಲ್ಲಿ ಈವರೆಗೆ ಇದ್ದ ವಾರಸುದಾರಿಕೆಯ ಹಕ್ಕನ್ನು ಉಳಿಸಿಕೊಳ್ಳಲಾಗಿದೆ. ಆದರೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಆ ಹಕ್ಕು ಇರುವುದಿಲ್ಲ” (ಬಾಬುರಾವ್ ಮುಡಬಿ: 2005, ಪು-145, 150).
ಇವಿಷ್ಟು ಮಹಿಳೆ ಆಸ್ತಿಯ ಸಂಬಂಧ ಸಂಗತಿಗಳಾಗಿದ್ದು, ಇವನ್ನು ಪ್ರಕರಣಗಳ ಮೂಲಕ ತೋರಿಸಲಾಗಿದೆ. ಆದ್ದರಿಂದ ಈ ಅಧಿನಿಯಮ ಎಂಟನೇ ಪ್ರಕರಣದಲ್ಲಿ ಸ್ತ್ರೀಯರ ಆಸ್ತಿ ಹಕ್ಕಿಗೆ ಹೊಸದಾಗಿ ಸೇರಿದ ನಿಯಮಗಳೆಂದರೆ:
ವಿವಾಹ ಕಾನೂನು ಜಾರಿಗೆ ಬಂದ ಮೇಲೆ ಹಿಂದೂ ಪುರುಷನೊಬ್ಬನು ಮೃತನಾದರೆ ಹಾಗೂ ಅವನಿಗೆ ಮಿತಾಕ್ಷರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದ್ದಲ್ಲಿ ಹಾಗೂ ಅವನಿಗೆ ಒಂದನೇ ದರ್ಜೆಯ ಸ್ತ್ರೀ ಸಂಬಂಧಿಗಳು(ತಾಯಿ, ಹೆಂಡತಿ, ಮಗಳು, ಮೃತ ಮಗನ, ಮಗಳು, ಮೃತ ಮಗಳು, ಮೃತ ಮಗನ ಹೆಂಡತಿ / ಮೃತ ಮೊಮ್ಮಗನ ಹೆಂಡತಿ ಅಥವಾ ಮಗಳು) ಇದ್ದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿನ ಅವನ ಪಾಲು ಒಂದನೇ ದರ್ಜೆಯ ಎಲ್ಲ ಸ್ತ್ರೀ ಪುರುಷ ವಾರಸುದಾರರಿಗೆ ಸಮಾನವಾಗಿ ವಾರಸುದಾರಿಕೆಯ ಮೂಲಕ ಹೋಗುತ್ತದೆ. ಹಿಂದೂ ಪುರುಷನ ಒಂದೇ ದರ್ಜೆಯ ವಾರಸುದಾರರಲ್ಲಿ ಮೇಲ್ಕಂಡ ಸ್ತ್ರೀ ಸಂಬಂಧಿಗಳಲ್ಲದೆ, ಅವನ ಮಗ, ಮೊಮ್ಮಗ… ಹೀಗೆ ಪುರುಷ ಸಂಬಂಧಿಗಳು ಬರುತ್ತಾರೆ. ಮೇಲೆ ತಿಳಿಸಿದ ಸ್ತ್ರೀ ಸಂಬಂಧಿಗಳು ಯಾರೂ ಇಲ್ಲದಿದ್ದಲ್ಲಿ ಅವರ ಪಾಲು ಹಿಂದಿನ ಹಿಂದೂ ಮಿತಾಕ್ಷರ ನಿಯಮದಂತೆ ಅವರ ಪುರುಷ ಸಂಬಂಧಿಗಳಿಗೆ ಉಳಿದವರ ಹಕ್ಕಿನ ಪ್ರಕಾರ ಹೋಗುತ್ತದೆ.
ಅಧಿನಿಯಮದ ಮತ್ತೊಂದು ಮಹತ್ವದ ಬದಲಾವಣೆ 14ನೇ ಪ್ರಕರಣದಲ್ಲಿ ಇದೆ.ಹಿಂದೂ ಸ್ತ್ರೀಯೊಬ್ಬಳು ಈ ಅಧಿನಿಯಮ ಜಾರಿಗೆ ಬರುವ ಮೊದಲಾಗಲಿ ಅನಂತರವಾಗಲಿ ಯಾವುದೇ ಆಸ್ತಿಯನ್ನು ಪಡೆದಿದ್ದಲ್ಲಿ ಅವಳು ಈ ಆಸ್ತಿಯ ಸಂಪೂರ್ಣ ಮಾಲೀಕಳಾಗುತ್ತಾಳೆಂದು ಈ ಪ್ರಕರಣ ತಿಳಿಸುತ್ತದೆ.ಹಿಂದಿನ ಹಿಂದೂ ಕಾನೂನಿನಲ್ಲಿ ಕೆಲವು ಹಿಂದೂ ಸ್ತ್ರೀ ಸಂಬಂಧಿಗಳಿಗೆ ಮಾತ್ರ ಆಸ್ತಿ ಹಕ್ಕು ದೊರಕುತ್ತಿದ್ದು ಅವರ ಸ್ತ್ರೀ ಧನವನ್ನುಳಿದ ಎಲ್ಲ ಆಸ್ತಿಗಳಲ್ಲಿ ಕೇವಲ ಜೀವಿತಾವಧಿಯವರೆಗೆ ಅನುಭವಿಸುವ ಹಕ್ಕನ್ನು ಮಾತ್ರ ಹೊಂದಿರುತ್ತಿದ್ದರು.ಅವರ ಮರಣಾನಂತರ ಆ ಆಸ್ತಿ ಪನಃ ಪುರುಷ ಸಂಬಂಧಿಗಳಿಗೆ ಹಿಂದಿರುಗುತ್ತಿತ್ತು ಎನ್ನುವ ಹಿನ್ನೆಲೆಯಲ್ಲಿ ಈ ತಿದ್ದುಪಡಿಯನ್ನು ಅರ್ಥ ಮಾಡಿಕೊಂಡಾಗ ಅದರ ಮಹತ್ವ ತಿಳಿಯುತ್ತದೆ.ಈ ಪ್ರಕರಣ ಸ್ತ್ರೀಧನ ಹಾಗೂ ಉಳಿದ ಆಸ್ತಿ ಹಕ್ಕಿನ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿ ಎಲ್ಲ ಆಸ್ತಿಯನ್ನು ಸ್ತ್ರೀಯರ ಸಂಪೂರ್ಣ ಒಡೆತನದ ಆಸ್ತಿಯಾಗಿ ಘೋಷಿಸುತ್ತದೆ.ಸ್ತ್ರೀಯರಿಗೂ ತಮ್ಮ ಆಸ್ತಿಯನ್ನು ಮಾರುವ, ದಾನಕೊಡುವ, ಮೃತಪತ್ರ ಬರೆಯುವ ಹಕ್ಕನ್ನು ಒದಗಿಸಿದೆ.
ಸ್ತ್ರೀ ವಾರಸುದಾರರನ್ನು (ತಾಯಿ, ಹೆಂಡತಿ, ಅವಿವಾಹಿತೆ, ವಿಧವೆ, ಗಂಡನಿಂದ ಬೇರೆಯಾದ ಮಗಳು) ಈ ಮನೆಯಲ್ಲಿ ವಾಸಿಸುತ್ತಿದ್ದು, ಗಂಡು ಮಕ್ಕಳು ಬೇರೆ ಮನೆಯಲ್ಲಿ ಬೇರೆ ಊರಿನಲ್ಲಿ ವಾಸಿಸಬಹುದಾದ ಸಂದರ್ಭವನ್ನು ಇದು ಕಲ್ಪಿಸಿಕೊಳ್ಳುವುದೇ ಇಲ್ಲ. ಇಂತಹ ಕುಟುಂಬಗಳು ದಕ್ಷಿಣ ಭಾರತದ ಕೇರಳ ಹಾಗೂ ಮಂಗಳೂರಿನ ಕರಾವಳಿ ಪ್ರದೇಶಗಳಲ್ಲಿ ಇದ್ದವು. ಅವು ಅಳಿಯತನ ಪದ್ಧತಿಯನ್ನು ಹೊಂದಿದ್ದವು.ಅಂದರೆ ಗಂಡಸರು ಸಹ ಮದುವೆಯಾದ ನಂತರ ಹೆಂಡತಿಯ ಮನೆಯಲ್ಲಿ ವಾಸಿಸುತ್ತಿದ್ದರು.ಈ ಮೂಲಕವೇ ಅವರು ಹುಟ್ಟಿದ ಮನೆಯ ವಾರಸುದಾರಿಕೆಯನ್ನು ಕಳೆದುಕೊಳ್ಳುತ್ತಿದ್ದರು. ಹಾಗಾಗಿ ಈ ಕಾನೂನಿನ ಪ್ರಕಾರ ಗಂಡು ಮಕ್ಕಳು ಮನೆಯನ್ನು ವಿಭಾಗ ಮಾಡಿಕೊಂಡು ಮಾರಾಟ ಮಾಡಿ ಸ್ತ್ರೀ ವಾರಸುದಾರರಿಗೆ ವಾಸಿಸುವ ಮನೆ ಇಲ್ಲದಂತೆ ಮಾಡಬಹುದು. ಹೀಗೆ ಪುರುಷ ವಾರಸುದಾರರ ಹಿತವನ್ನು ರಕ್ಷಿಸುವ ಈ ನಿಯಮ ಸೀ ವಾರಸುದಾರರ ಹಿತವನ್ನು ಕಡೆಗಣಿಸಿದೆ.ಆದ್ದರಿಂದ ಇದು ಮಹಿಳೆಗೆ ಆಸ್ತಿ ನೀಡುವ ಮೇಲ್ಪದರ ನೆಲೆಗಳನ್ನು ಮಾತ್ರ ಹೊಂದಿದೆ.ಪರಿಣಾಮ ಈ ಕಾನೂನು ಮಹಿಳೆ ಸ್ವಲ್ಪ ಚಲನಶೀಲಗೊಳ್ಳಲು ಸಾಧ್ಯವಾಗಿದೆ.
ತಾಯಿಯನ್ನು ಮಗುವಿನ ಸಹಜ ಪೋಷಕಳೆಂದು ನಿರ್ಧರಿಸುವುದು Hindu Minorities and Guardianship oಛಿಣ (1956), ಇದು ಒಳಗೊಂಡ ಸಂಗತಿಗಳೆಂದರೆ “ತಾಯಿಯ ತಂದೆಯು ನೇಮಿಸಿದ ರಕ್ಷಕನನ್ನು ಬದಲಾಯಿಸಿ ಹೊಸ ರಕ್ಷಕನನ್ನು ತನ್ನ ಇಚ್ಚೆಗೆ ಅನುಸಾರವಾಗಿ ನೇಮಿಸುವುದು.ಅಪ್ರಾಪ್ತ ವಯಸ್ಕ ಮಗುವಿನ ತಾಯಿಯು ಜೀವಂತವಿದ್ದಾಗ ತಂದೆಯು ಆ ಮಗುವಿಗೆ ರಕ್ಷಕನನ್ನು ನೇಮಿಸುವುದನ್ನು ಈ ಕಾನೂನು ನಿಷೇಧಿಸುತ್ತದೆ.”
ಮಹಿಳೆ ದತ್ತು ಸ್ವೀಕಾರ ಹಕ್ಕು ಹಾಗೂ ವಿಚ್ಛೇದನದ ಸಂದರ್ಭದಲ್ಲಿ ನಿರ್ವಹಣಾ ಹಕ್ಕು Adoption and Maintenance Right (1956).ಈ ಕಾಯ್ದೆಯು ಹಲವು ಸಂಗತಿಗಳನ್ನು ಒಳಗೊಂಡಿದೆ. ಅವುಗಳೆಂದರೆ :
ಅ. ಕಾನೂನಿನ ಪ್ರಕಾರ ಗಂಡು ಮತ್ತು ಹೆಣ್ಣು ಮಗುವನ್ನು ಯಾವುದೇ ವ್ಯತ್ಯಾಸವಿಲ್ಲದೆ ದತ್ತು ಸ್ವೀಕರಿಸಬಹುದು. ಆದರೆ ಹಿಂದಿನ ಹಿಂದೂ ಕಾನೂನಿನಲ್ಲಿ ಹೆಣ್ಣುಮಗುವನ್ನು ದತ್ತು ಸ್ವೀಕರಿಸುವ ಅವಕಾಶವಿರಲಿಲ್ಲ.
ಆ. ಈ ಕಾನೂನಿನ ಪ್ರಕಾರ ಪ್ರತಿ ಜೀವಂತವಾಗಿದ್ದಾಗ ಪತ್ನಿ ತನ್ನ ಇಚ್ಛೆಗೆ ಅನುಸಾರವಾಗಿ ದತ್ತು ಸ್ವೀಕರಿಸಬಹುದು. ಆದರೆ ಹಿಂದಿನ ಕಾನೂನಿನಲ್ಲಿ ಮಹಿಳೆಗೆ ಈ ಅವಕಾಶವನ್ನು ನಿರಾಕರಿಸಲಾಗಿತ್ತು.
ಇ. ಹಿಂದಿನ ಹಿಂದೂ ಕಾನೂನಿನ ಪ್ರಕಾರ ಕನ್ಯ ಮತ್ತು ವಿಧವೆಗೆ ದತ್ತು ಸ್ವೀಕರಿಸುವ ಹಕ್ಕು ಇರಲಿಲ್ಲ. ಆದರೆ ಹಿಂದೂ ನೀತಿಸಂಹಿತೆ ಈ ಭಾಗದಲ್ಲಿ ಅವರಿಗೆ ದತ್ತು ಸ್ವೀಕರಿಸುವ ಹಕ್ಕನ್ನು ತೋರಿಸಿದೆ.
ಈ. ಹಿಂದೂ ಕಾನೂನಿನ ಪ್ರಕಾರ ಪತಿ ಮಕ್ಕಳನ್ನು ದತ್ತು ಪಡೆಯುವಾಗ ಪತ್ನಿಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿರಲಿಲ್ಲ. ಆದರೆ ಹಿಂದೂ ನೀತಿಸಂಹಿತೆಯ ಪ್ರಕಾರ ಈ ಎರಡು ಕ್ರಮಗಳನ್ನು ಪತಿ ಕೈಗೊಳ್ಳುವಾಗ ಪತ್ನಿಯ ಒಪ್ಪಿಗೆಯನ್ನು ಪಡೆಯಬೇಕು.
ಉ. ಸಂವಿಧಾನದ ಹನ್ನೊಂದನೇ ವಿಭಾಗದ ಪ್ರಕಾರ ತಂದೆ ತನಗಿಂತ ಕನಿಷ್ಠ 21 ವರ್ಷ ಸಣ್ಣ ಪ್ರಾಯದ ಮಗಳನ್ನು ಮಾತ್ರ ದತ್ತು ಸ್ವೀಕರಿಸಬಹುದು (ವಿಶೇಷ: ಬಾ.ಸಾ.ಅಂ.ಬ.ಭಾ: ಸಂ-14-1, 2: ಗಮನಿಸಿ).
ಒಟ್ಟಿನಲ್ಲಿ ಬಹುಪತ್ನಿತ್ವ ಬಾಲ್ಯವಿವಾಹ, ವಿಧವೆ ಇತ್ಯಾದಿ ಅಂಶಗಳು ಮಹಿಳಾ ಚಳುವಳಿಗಳು ಸ್ವಾತಂತ್ರ್ಯದಿಂದಲೇ ಕೈಗೆತ್ತಿಕೊಂಡಿದ್ದ ವಿಚಾರಗಳಾಗಿದ್ದರೂ ಅಂಬೇಡ್ಕರ್ ಅವಕ್ಕೊಂದು ಗಟ್ಟಿಯಾದ ನೆಲೆಯನ್ನು ಒದಗಿಸಲು ಪ್ರಯತ್ನಿಸಿದರು.ಮಹಿಳಾ ಚಳುವಳಿಗಳು ಮಹಿಳೆಯರ ಕೊರತೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಒತ್ತಾಯ ತರುತ್ತಿದ್ದಾಗ ಅಂಬೇಡ್ಕರ್ ಮಹಿಳೆಯರಿಗಿಂತ ಹೆಚ್ಚಿನದಾಗಿ ಪುರುಷನು ಅನುಭವಿಸುತ್ತಿರುವ ಸ್ವಾತಂತ್ರ್ಯ ಅವಕಾಶದ ಬಗ್ಗೆ ಗಮನ ಹರಿಸಿದರು.ಈ ಪೂರ್ವದ ಕಾನೂನು ಸ್ತ್ರೀಯರ ಪುನರ್ವಿವಾಹದ ಸಾಧ್ಯತೆಗಳನ್ನು ಕಾನೂನುಬದ್ಧಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಪುರುಷನ ಒಂದಕ್ಕಿಂತ ಹೆಚ್ಚಿನ ವಿವಾಹ, ಆಸ್ತಿಯ ಮೇಲಿನ ಏಕಸ್ವಾಮ್ಯ, ಸಂತಾನದ ಮೇಲಿನ ಏಕಸ್ವಾಮ್ಯ ಇತ್ಯಾದಿಗಳನ್ನು ನಿಯಂತ್ರಿಸುವುದು ಅಗತ್ಯವೆಂದು ಪ್ರಸ್ತುತಪಡಿಸಿದರು.ಈ ಸಮಾಜ ಲಿಂಗಭೇದವು ಸ್ತ್ರೀಗೆ ಹಾಕಿದ ನಿರ್ಬಂಧಗಳಿಂದಷ್ಟೆ ಅಲ್ಲದೇ ಪುರುಷನಿಗೆ ಒದಗಿಸಿದ ಸ್ಟೇಟ್ಸ್ ಕೂಡ ಉಲ್ಬಣಿಸಿರುವುದನ್ನು ಕಾನೂನಿನ ಮೂಲಕ ಸರಿಪಡಿಸಲು ಪ್ರಯತ್ನಿಸಿದರು.
ಅಂಬೇಡ್ಕರ್ ರೂಪಿಸಿದ ಕೋಡ್ ಬಿಲ್ ಕೇವಲ ಸುಧಾರಣೆ ಗುಣವನ್ನಷ್ಟೇ ಹೊಂದಿದ್ದಲ್ಲದೆ ಈ ಜಾತಿಪ್ರಧಾನ, ಪಿತೃಪ್ರಧಾನ ಸಮಾಜ ರಚನೆಯ ತಳಹದಿಯನ್ನು ಬುಡಮೇಲು ಮಾಡುವ ಅಂಶಗಳನ್ನು ಹೊಂದಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಭಿನ್ನಾಭಿಪ್ರಾಯ ಉಂಟಾಯಿತು.ಬೇರೆಲ್ಲ ವಿಚಾರಗಳಲ್ಲಿ ಅತ್ಯಂತ ಪ್ರಗತಿಪರರೆಂದು ಗುರುತಿಸಿಕೊಂಡ ಅನೇಕ ಪುರುಷರು ಕೂಡ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ನೀಡಿದ ಸಮಾನ ಅವಕಾಶಗಳ ಕುರಿತು ಆಕ್ಷೇಪವೆತ್ತಿದರು ಮತ್ತೆ ಕೆಲವರು ಮೇಲ್ನೋಟಕ್ಕೆ ಸಮಾಧಾನದಿಂದ ಇದ್ದಂತೆ ಕಂಡುಬಂದರೂ ಒಳಗೆ ಅಸಮಾಧಾನದಿಂದ ಕುದಿಯುತ್ತಿದ್ದರು. ಸ್ವತಃ ಅಂದಿನ ರಾಷ್ಟ್ರಪತಿಗಳಾದ ಶ್ರೀ ರಾಜೇಂದ್ರಪ್ರಸಾದ್ ಅವರೇ ಇದಕ್ಕೆ ಅಸಮ್ಮತಿ ಸೂಚಿಸಿದರು ಎಂಬುದೇ ವಿಪರ್ಯಾಸ.
ಉಲ್ಲೇಖಗಳು
1. ಬಾ.ಸಾ.ಅಂ.ಬ.ಭಾ: 1999, ಸಂ.03, ಪು.51.
2. ಸಂ.ಮಾ.ಭರಣಿ, 1991, ಶತಮಾನದ ಅಂಬೇಡ್ಕರ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ತುಮಕೂರು, ಪು.241.
3. ಬಾ.ಸಾ.ಅಂ.ಬ.ಭಾ: 1994, ಸಂ.03, ಪು.622.
4. ಬಾ.ಸಾ.ಅಂ.ಬ.ಭಾ: 1994, ಸಂ.03, ಪು.51,53.
5. ಬಾ.ಸಾ.ಅಂ.ಬ.ಭಾ: 2004, ಸಂ.14: ಭಾಗ.1, ಪು.600,800
6. ಬಾ.ಸಾ.ಅಂ.ಬ.ಭಾ: 2004, ಸಂ.14: ಭಾಗ.2, ಪು.771,800.
7. ಬಾಬುರಾವ್ ಮುಡಬಿ, 2005, ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಟಿಕೋನ, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಪು. 146.
8. ಅರವಿಂದ ಮಾಲಗತ್ತಿ, 1999, ಡಾ.ಅಂಬೇಡ್ಕರ್ ವಿಚಾರಧಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, ಪು. 143.
9. ಬಾಬುರಾವ್ ಮುಡಬಿ, 2005, ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಟಿಕೋನ, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಮ. 145.
(ಡಾ. ಯರ್ರಿಸ್ವಾಮಿಯವರ ಅಧ್ಯಯನದೊಂದಿಗೆ ಬಹು ಮುಖ್ಯವಾದ ಈ ಲೇಖನವನ್ನು ಮತ್ತೊಮ್ಮೆ ಬರೆದಿದ್ದೇನೆ.- ವಿ.ಎಸ್.ಬಾಬು ಅವರ ಫೇಸ್ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮೆಚ್ಚುಗೆ ಪಡೆದ ಕತೆ | ಸತ್ಯದರ್ಶನ
~ಸುಜಾತ ಎಸ್.ಎನ್ ರೆಡ್ಡಿ, ಬೆಂಗಳೂರು
ಅತ್ತೇ , ಇವತ್ತು ಜಯಂತ್ ಮಾವ ಜೈಲಿನಿಂದ ಬಿಡುಗಡೆಯಾಗಿ ಇಲ್ಲಿಗೇ ಬರ್ತಿದ್ದಾರಂತೆ..! ಅಮ್ಮ ತುಂಬಾ ದಿನಗಳ ನಂತರ ಖುಷಿಯಾಗಿ ಕಾಣ್ತಾ ಇದ್ದಾರೆ. ಅವರನ್ನ ಹಿಡಿಯಕ್ಕೇ ಆಗ್ತಿಲ್ಲಾ ಅನ್ನಿ..!” ಕಾಲಿಗೆ ತೊಡರುತ್ತಿದ್ದ ರೇಷ್ಮೆಲಂಗವನ್ನು ಹಿಡಿದು ಮಹಡಿ ಮೆಟ್ಟಿಲೇರಿ ಖುಷಿಯಿಂದ ಓಡುತ್ತಾ ಬಂದವಳು, ನನ್ನ ನಿರ್ಲಿಪ್ತ ಮುಖಭಾವವನ್ನು ಗಮನಿಸಿ,”ಅತ್ತೇ,ನಿಮಗೆ ಖುಷಿ ಇಲ್ವಾ..!? ಮಾವ ಹತ್ತುವರ್ಷಗಳ ನಂತರ ಜೈಲಿನಿಂದ ಮತ್ತೆ ಮನೆಗೆ ಬರ್ತಿರೋದು..!?” ಏದುಸಿರು ಬಿಡುತ್ತಾ ಕಂಗಳನ್ನು ಕಿರಿದಾಗಿಸಿಕೊಂಡು ಮುಗ್ಧವಾಗಿ ಕೇಳಿದಳು ನಮ್ಮನೆಯ ಚೈತನ್ಯ ಚಿಲುಮೆ ಮೌನಿಕ.
”ನಾವೆಲ್ಲ ಖುಷಿಪಡುವ ಸಾಧನೆಯ ಕೆಲಸವೇನೂ ಮಾಡಿಲ್ಲ ನಿಮ್ಮ ಮಾವ ಮೌನಿ. ನನ್ನಣ್ಣ ಅಂದ್ರೆ ನಿಮ್ಮಪ್ಪನನ್ನ ಕೊಂದು ಜೈಲಿಗೆ ಹೋಗಿರೋದು! ಅಂಥವನ ಮುಖ ನೋಡಕ್ಕೂ ನನಗಿಷ್ಟವಿಲ್ಲ!” ನನ್ನೊಳಗಿನ ಅಸಹನೆ, ಕೋಪ, ನಿರಾಸೆ ಎಲ್ಲವೂ ನಾನಾಡುವ ಪ್ರತಿಪದದಲ್ಲಿಯೂ ತುಂಬಿ ತುಳುಕುತ್ತಿದ್ದರೆ, ನಾ ಮಡಚಿಡುತ್ತಿದ್ದ ಕಂಬಳಿಯನ್ನು ನನ್ನ ಕೈಯಿಂದ ಕಿತ್ತೆಸೆದು ಕೊರಳಿಗೆ
ನೇತುಬೀಳುತ್ತಾ,”ಕಣ್ಣಿಂದ ನೋಡಿದ್ದೆಲ್ಲವೂ ಸತ್ಯವಲ್ಲ. ಪೂರ್ತಿ ವಿಚಾರ ತಿಳಿಯದೆ ಯಾರನ್ನೂ ದೂಷಿಸಬಾರದು, ದ್ವೇಷಿಸಬಾರದು ಅಂತ ಅಮ್ಮ ಹೇಳಿದ್ದಾರೆ. ಹಾಗೇ, ಉದ್ದೇಶಗಳು ಒಳ್ಳೆಯದಿದ್ರೆ ಕೆಲವೊಂದು ಕೆಲಸಗಳಿಗೆ ರಕ್ತದಕಲೆ ಅಂಟಲ್ವಂತೆ! ಮಾವ ಒಳ್ಳೆಯವರು. ಅವರು ಉದ್ದೇಶಪೂರ್ವಕವಾಗಿ ಅಪ್ಪನನ್ನ ಕೊಂದಿಲ್ಲ. ಇದನ್ನ ಅಮ್ಮನೊಡನೆ ನಾನೂ ನಂಬ್ತೀನಿ ಅತ್ತೆ…!”
”ನಿಮಗೆಲ್ಲರಿಗೂ ಅವ ಒಳ್ಳೆಯವನು ಅನ್ನೋ ಭ್ರಾಂತು ಹಿಡಿದಿದೆ! ತಾನೊಬ್ಬ ಸತ್ಯಸಂಧ ಅಂತ ನಿಮ್ಮೆಲ್ಲರನ್ನು ನಂಬಿಸಿ ಮಂಕುಬೂದಿ ಎರಚಿದ್ದಾನೆ ಆ ನಿನ್ನ ಮಾವ ಜಯಂತ್! ಅದಕ್ಕೇ ನೀವೆಲ್ಲಾ ಹೀಗಾಡ್ತಿರೋದು!” ಅಂತರಾಳದಲ್ಲಿ ನೋವಿನಸೆಲೆ ಉಕ್ಕುತ್ತಿದ್ದರೆ ಕಂಬನಿಯನ್ನು ಕಾಣದಂತೆ ತಡೆದು ತುಸು ಬಿರುಸಾಗಿಯೇ ಅವಳಿಗೆ ಉತ್ತರಿಸಿದೆ. ಕೋಪದಲ್ಲಿರುವಂತೆ ಕಂಡ ನನ್ನೊಡನೆ ಮತ್ತೇನು ಮಾತನಾಡಬೇಕೆಂದು ತಿಳಿಯದೆ ಒಂದುಕ್ಷಣ ದಿಟ್ಟಿಸಿ ನೋಡಿ ಮೌನವಾಗಿಯೇ ಕೆಳಗಿಳಿದು ಹೋದಳು ಮೌನಿಕ.
ಯಾಕೋ ಮನಸ್ಸೆಲ್ಲಾ ಕದಡಿದಂತಾಗಿತ್ತು..! ಹೃದಯವೂ ನೆನಪುಗಳಿಂದ ಭಾರವಾಗಿತ್ತು. ಬದುಕಿನ ನೀಲನಕ್ಷೆಯಲ್ಲಿ ಅನಿರೀಕ್ಷಿತ ತಿರುವುಗಳು ನೆಮ್ಮದಿಯ ಜೀವನಪಥವನ್ನು ಹೇಗೆ ಮಗ್ಗಲಾಗಿಸಿಬಿಡುತ್ತವೆಂದು ಚಿಂತಿಸುತ್ತಾ ಮನಸ್ಸು ಹಗುರಾಗಲೆಂದು ಮಹಡಿಯ ಕಿಟಕಿಯನ್ನು ವಿಶಾಲವಾಗಿ ತೆರೆದು, ಹೊರಗಡೆ ಇಣುಕಿ ನೋಡಿದ್ದೆ. ಸುತ್ತಲೂ ಹಸಿರು ಹೊದ್ದ ಘಟ್ಟಪ್ರದೇಶ. ನೇಸರನ ಜಾಡಿಲ್ಲದೆ ಕವಿದಿದ್ದ ಹಿಮವಿನ್ನೂ ಕರಗಿರಲಿಲ್ಲ. ದೂರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಗೂಡಿನಂತಹಾ ಮನೆಗಳಿಂದ ಮುಂಜಾನೆಯ ಮಂಜನು ಸೀಳುತ್ತಾ ಹೊರಟ ಸುರುಳಿಯಾಕಾರದ ಹೊಗೆ ಅಲ್ಲೊಂದು ಜೀವಚೈತನ್ಯವನ್ನು, ಬದುಕಿನೆಡೆಗಿನ ಅಪರಿಮಿತ ಒಲವನ್ನು ತಿಳಿಸುತ್ತಿದ್ದರೆ ಮುದುಡಿದ್ದ ನನ್ನ ಮನಕ್ಕೆ, ಬದುಕಿಗೆ ಮಾತ್ರ ಆ ಚಿತ್ರಣ ಯಾವ ಹುರುಪನ್ನೂ ತುಂಬಲಾರದೆ ಸೋತಿತ್ತು. ಮಾಗಿಯ ಚಳಿಗೆ ಕಂಪಿಸುತ್ತಿದ್ದ ಒಡಲನ್ನು ಶಾಲಿನಿಂದ ಬೆಚ್ಚಗಾಗಿಸಿ ನಾನು ಮಾತ್ರ ನೆನಪುಗಳ ಸಂತೆಯಲ್ಲಿ ಕಳೆದುಹೋಗಿದ್ದೆ.
****
ಹೆಚ್ಚೂ ಕಮ್ಮಿ ಇದೇ ಮಾಘಮಾಸದ ದಿನಗಳಲ್ಲಿಯೇ ಅಣ್ಣ ಅಶ್ವಿನ್ ಗೆ ಚಂದ್ರಚಕೋರಿಯಂತಹ ಪ್ರವಸ್ಥಿಯೊಡನೆ ಮದುವೆಯಾಗಿತ್ತು. ಅವರದ್ದು ಪ್ರೇಮವಿವಾಹ. ಅತ್ತಿಗೆಯಂತೂ ಗುಣದಲ್ಲಿ ಅಪರಂಜಿ! ಚಿಕ್ಕಂದಿನಿಂದಲೂ ಅಣ್ಣನೊಡನೆ ನನ್ನ ಬಾಂಧವ್ಯ ಅಷ್ಟಕ್ಕಷ್ಟೇ! ಅವನೆಂದರೆ ಒಂದು ವಿಧವಾದ ಅಸ್ಪಷ್ಟ ಭಯ! ಅವನ ಒರಟು ಸ್ವಭಾವ, ಗಡಸುಮಾತು ಅವನಿಂದ ದೂರವಿಟ್ಟಿತ್ತಾ ಅನ್ನೋದು ನೆನಪಿಲ್ಲ. ಆದರೆ ಅತ್ತಿಗೆ ಮಾತ್ರ ತನ್ನ ಕಲ್ಮಶವಿಲ್ಲದ ನಡೆನುಡಿಯಿಂದ ಬಂದ ಹೊಸದರಲ್ಲಿಯೇ ಮನೆಯ ಎಲ್ಲರ ಮನಸ್ಸುಗಳನ್ನೂ ಗೆದ್ದುಬಿಟ್ಟಿದ್ದಳು. ಒಂದೆರಡು ವರ್ಷ ಚಿಕ್ಕವಳಾದ ನನ್ನೊಡನೆ ಆತ್ಮೀಯ ಗೆಳತಿಯಂತೆ ಬೆರೆತು ಹೋಗಿದ್ದಳು. ಚಿನ್ನಾರಿ ಮೌನಿಕಳ ಆಗಮನವಾದ ನಂತರವಂತೂ ನಮ್ಮ ಮನೆ ನಂದಗೋಕುಲವಾಗಿತ್ತು.
ಆ ದಿನಗಳಲ್ಲಿಯೇ ನನ್ನ ಜೀವನದಲ್ಲಿಯೂ ಮಾಧುರ್ಯದ ಪ್ರೇಮಪಲ್ಲವಿಸಿ ಹರೆಯಕ್ಕೆ ರಂಗುರಂಗಿನ ಕನಸು ತುಂಬಿತ್ತು. ಆ ಸವಿಭಾವದ ಒಲವ ಲಹರಿಗೆ ಕಾರಣನಾದವನು ಅತ್ತಿಗೆಯ ಅಣ್ಣ ಜಯಂತ್. ನೋಡಲೆಷ್ಟು ಸ್ಫುರದ್ರೂಪಿಯೋ ಅಷ್ಟೇ ಹೊನ್ನಿನ ಗುಣವುಳ್ಳವನು! ಅಣ್ಣನ ಮದುವೆಯ ಸಮಯದಲ್ಲಿಯೇ ಮನಸ್ಸನ್ನು ಕದ್ದ ಚೆಲುವ ಚೆನ್ನಿಗರಾಯ ನಂತರದಲ್ಲಿ ತಂಗಿಯನ್ನು ನೋಡುವ ನೆಪದಲ್ಲಿ ಮನೆಗೆ ಬಂದು ಹೋಗುತ್ತಲೇ ಹಸನಾದ ಮನಸ್ಸಿನಲ್ಲಿ ಪ್ರೀತಿಯೆಂಬ ಬೀಜ ಬಿತ್ತನೆ ಮಾಡಿದ್ದ. ಅದು ಮೊಳಕೆಯೊಡೆದು, ಚಿಗುರುತುಂಬಿ ಹೆಮ್ಮರವಾಗಲು ಐದಾರು ವರ್ಷಗಳೇ ಹಿಡಿದಿದ್ದವು.
ಆ ಸಮಯದಲ್ಲಿ ನನ್ನ ಬದುಕನ್ನು ಅವನೆಷ್ಟು ಆವರಿಸಿಕೊಂಡಿದ್ದನೆಂದರೆ ಅವನಿಲ್ಲದೆ ಕಳೆವ ಒಂದೊಂದು ಕ್ಷಣಗಳು ಕೂಡ ಯುಗಗಳಂತೆ ಭಾಸವಾಗುತ್ತಿತ್ತು. ಗಾಢ ಪ್ರೀತಿಯಲ್ಲಿ ಬೆಸೆದಿದ್ದ ನಾವು ಒಬ್ಬರನ್ನೊಬ್ಬರು ಬಿಟ್ಟಿರಲಾರೆವು ಎಂದರಿವಾದಾಗ ತಡಮಾಡದೆ ತನ್ನ ಹೆತ್ತವರೊಡನೆ ಮನೆಗೆ ಬಂದು ಧೈರ್ಯವಾಗಿ ಹೆಣ್ಣು ಕೇಳಿದ್ದ. ಅಷ್ಟರಲ್ಲಿ ನನ್ನ ಸ್ನಾತಕೋತ್ತರ ಪದವಿಯೂ ಪೂರ್ಣಗೊಂಡಿತ್ತು. ಜಯಂತ್ ಕೂಡ ತಂಗಿಯ ಮದುವೆಗಾಗಿ ಮಾಡಿದ್ದ ಸಾಲದ ಹೊರೆಯನ್ನು ಇಳಿಸಿಕೊಂಡು ಸುಭದ್ರವಾದ ಮತ್ತೊಂದು ಉದ್ಯೋಗವನ್ನರಸಿಕೊಂಡಿದ್ದ. ಈಗ ಬೇಡವೆನ್ನಲು ಮನೆಯಲ್ಲಿ ಕಾರಣಗಳೇ ಇಲ್ಲದ್ದರಿಂದ ಅಮ್ಮ, ಅಣ್ಣ ಖುಷಿಯಿಂದಲೇ ನಮ್ಮ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಅಸ್ತು ಎಂದಿದ್ದರು. ಅತ್ತಿಗೆಯ ಸಂತೋಷಕ್ಕಂತೂ ಪಾರವೇ ಇರಲಿಲ್ಲ! “ಈ ಮನೆಯ ಪುಟ್ಗೌರಿ ನನ್ನ ತವರನ್ನು ಬೆಳಗಲು ಹೋಗ್ತಿದ್ದಾಳೆ..!” ಎಂದು ಎಲ್ಲರಿಗೂ ಹೇಳಿಕೊಂಡು ಸಂತೋಷಪಟ್ಟಿದ್ದಳು.
ಆದರೆ ಕ್ರೂರವಿಧಿಗೆ ನಮ್ಮ ಈ ಸಂತೋಷ ಕಣ್ಣುಕುಕ್ಕಿತ್ತೇನೋ..! ಮನೆಯಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದಾಗಲೇ ಬರಸಿಡಿಲಿನಂತೆ ಅಣ್ಣನ ಹತ್ಯೆಯ ಸುದ್ದಿ ಬಂದು ಅಪ್ಪಳಿಸಿತ್ತು! ಅದಕ್ಕಿಂತಲೂ ಘೋರ ದುರಂತವೆಂದರೆ ಆ ಕೊಲೆಯನ್ನು ಜಯಂತ್ ಮಾಡಿದ್ದ ಎನ್ನುವುದು..! ಸುದ್ದಿ ಕೇಳಿ ಕಾಲ ಕೆಳಗಿನ ಭೂಮಿ ಒಮ್ಮೆಲೇ ಕುಸಿದ ಅನುಭವವಾಗಿತ್ತು! ನಾನಂತೂ ದಿಗ್ಭ್ರಾಂತಿಗೆ ಗುರಿಯಾಗಿ ಥರಥರನೆ ನಡುಗಿ ಹೋಗಿದ್ದೆ! ತೋಟದ ಮನೆಯಲ್ಲಿ ರಕ್ತದ ಮಡುವಿನ ನಡುವಲ್ಲಿ ಬಿದ್ದಿದ್ದ ಅಣ್ಣನನ್ನು ಕಂಡು ಜೀವ ಬಾಯಿಗೆ ಬಂದಿತ್ತು. ಏನಾಯ್ತು,!? ಯಾಕಾಯ್ತು..!? ಎಂಬುದೇ ಅರ್ಥವಾಗಿರಲಿಲ್ಲ. ಅತ್ತಿಗೆಯಂತೂ ಆಘಾತಕ್ಕೆ ಒಳಗಾದಂತೆ ಶೂನ್ಯವನ್ನು ದಿಟ್ಟಿಸುತ್ತಾ ಮೌನದ ಮೊರೆ ಹೊಕ್ಕಿಬಿಟ್ಟಿದ್ದಳು. ಊಹಿಸಿಕೊಳ್ಳಲು ಕೂಡ ಸಾಧ್ಯವಾಗದ ಈ ಘಟನೆ ನಮ್ಮೆಲ್ಲರ ಬಾಳಲ್ಲಿ ಕತ್ತಲೆ ತುಂಬಿ ಸಂತೋಷಗಳನ್ನು ಆವಿಯಾಗಿಸಿತ್ತು.
ಮೊದಲಿಗೆ ಜಯಂತ್ ಕೊಲೆಗಾರನೆಂದರೆ ನನ್ನ ಮನಸ್ಸು ಕೂಡ ಒಪ್ಪಿಕೊಂಡಿರಲೇ ಇಲ್ಲ. ಅದನ್ನೇ ಜೈಲಿನ ಕಂಬಿಗಳ ಹಿಂದೆ ನಿಂತಿದ್ದ ಅವನಲ್ಲಿ ಪ್ರಶ್ನಿಸಿದ್ದೆ. ಆದರೆ ನನ್ನೆಲ್ಲಾ ಕೇಳುಗಳಿಗೂ ಅವನದ್ದು ಮೌನವೇ ಉತ್ತರವೆಂದಾದಾಗ ನನ್ನ ಸಹನೆಯ ಕಟ್ಟೆಯೊಡೆದಿತ್ತು.
“ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೊಲ್ಲುವುದು ಅಷ್ಟು ಸುಲಭವೇ..!? ಆ ಸಮಯದಲ್ಲಿ ನಿನ್ನನ್ನೇ ನಂಬಿರುವ ನಾನು, ಪ್ರವಸ್ಥಿ, ಅಪ್ಪನಿಲ್ಲದೆ ಬದುಕಬೇಕಾದ ನಮ್ಮ ಮೌನಿ.. ಇವರ್ಯಾರೂ ನೆನಪಾಗಲಿಲ್ಲವೇ..!? ಎಲ್ಲರ ನಾಳೆಗಳನ್ನೂ ಪ್ರಶ್ನಾರ್ಥಕವಾಗಿಸಿದೆಯಲ್ಲಾ ನಿನ್ನದೆಂಥ ಕ್ರೂರ ಮನಸ್ಥಿತಿ..!?” ಎಂದು ಕೋಪಾವೇಷದಲ್ಲಿ ತೀವ್ರ ವೇದನೆಯನ್ನನುಭವಿಸುತ್ತಾ ನೇರಾನೇರ ಪ್ರಶ್ನಿಸಿ ಬಂದಿದ್ದೆ! ಅವನೇ ಕೊಲೆಗಾರನೆಂದು ಸಾಕ್ಷಿಗಳೆಲ್ಲವೂ ದೃಢೀಕರಿಸಿದ ನಂತರದಲ್ಲಿ ಇಷ್ಟು ಜನರ ಜೀವನವನ್ನು ಅಂಧಕಾರಕ್ಕೆ ದೂಡಿದ ಅವನನ್ನು ನೋಡಬೇಕೆಂದು ಮತ್ತೆ ನನಗನ್ನಿಸಲೇ ಇಲ್ಲ.
ಆದರೆ ಬದುಕಿನ ಪುಟಗಳು ತಿರುವಿಕೊಂಡಂತೆಲ್ಲಾ ಸಾಗುತ್ತಿದ್ದ ಜೀವನ ‘ಪಡಸಾಲೆಯ ಕರಿಕಂಬದಂತೆ’ ನಿರಾಳವಾಗಿ ಕಂಡರೂ ಅಂತರ್ಗತವಾಗಿ ಏಕಾಂಗಿಭಾವದ ಛಾಯೆ ಮಾಸಿರಲಿಲ್ಲ. ಅದಕ್ಕೆ ಕಾರಣನಾದವನನ್ನು ಆಗಾಗ ಶಪಿಸಿಕೊಳ್ಳುತ್ತಲೇ ಇದ್ದೆ. ಆದರೆ ಅತ್ತಿಗೆ ಮಾತ್ರ ಅವಳಣ್ಣನ ಬಗ್ಗೆ ಯಾವ ನಕಾರಾತ್ಮಕ ನಿಲುವನ್ನೂ ತಾಳಿರಲಿಲ್ಲ! ತಾನು ಪ್ರೀತಿಸಿ ಮದುವೆಯಾದ ಗಂಡನನ್ನು ಬಲಿತೆಗೆದುಕೊಂಡು ತನ್ನ ಜೀವನವನ್ನು ಅಸ್ತವ್ಯಸ್ತಗೊಳಿಸಿದನೆಂಬ ಕೋಪ ಅವಳಲ್ಲಿರಲೇ ಇಲ್ಲ! ತನ್ನಣ್ಣ ಎಂಬ ಅತಿಯಾದ ವಾತ್ಸಲ್ಯವೇನೋ ಗೊತ್ತಿಲ್ಲ ನನಗದು! ಅದನ್ನೇ ಒಂದುದಿನ ಸಹಿಸಲಾರದೆ ಅವಳಲ್ಲಿ ಕೇಳಿದ್ದಕ್ಕೆ…
”ಜಯಂತ್ ಅಣ್ಣ ಹೇಗೆ ಅನ್ನೋದು ನಿನಗೂ ಗೊತ್ತಿದೆ ಮೃದುಲ. ಇಷ್ಟು ವರ್ಷದ ಒಡನಾಟದಲ್ಲಿ ಅವನೇನೆಂಬುದನ್ನು ನೀನು ಸರಿಯಾಗಿ ಅರಿತುಕೊಂಡಿದ್ದರೆ ಇಂದು ಈ ಪ್ರಶ್ನೆಯನ್ನು ನನ್ನೆದುರಲ್ಲಿ ಕೇಳ್ತಿರಲಿಲ್ಲ..” ಎಂದಷ್ಟೇ ಮಾರ್ಮಿಕವಾಗಿ ಉತ್ತರಿಸಿದ ಪ್ರವಸ್ಥಿ ಅವನ ಒಳಿತಿಗಾಗಿ ನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಇದು ನನಗೆ ಉಗುಳಲಾರದ ಬಿಸಿತುಪ್ಪವಾಗಿದ್ದರೂ ಅವಳನ್ನು ಮಾತ್ರ ದ್ವೇಷಿಸಿ ದೂರವಿಡಲು ನನ್ನಿಂದ ಸಾಧ್ಯವಾಗಿರಲಿಲ್ಲ. ಗಂಡನ ಸಾವಿನ ದುಃಖವನ್ನು ನುಂಗಿಕೊಂಡು ಅವಳು ಕುಟುಂಬಕ್ಕಾಗಿ ನಿಂತ ಪರಿ ಎಂತಹವರನ್ನೂ ನಿಬ್ಬೆರಗಾಗಿಸುವಂತಿತ್ತು..! ಈ ಹತ್ತುವರ್ಷಗಳಲ್ಲಿ ಗಂಡುದಿಕ್ಕಿಲ್ಲದ ಮನೆಯನ್ನು, ತೋಟವನ್ನು ಅವನಿಗಿಂತ ಉತ್ತಮ ರೀತಿಯಲ್ಲಿ ಸಂಭಾಳಿಸಿಕೊಂಡು ಹೋಗುತ್ತಿದ್ದ ಸೊಸೆಯ ಬಗ್ಗೆ ಅಮ್ಮನಲ್ಲಿಯೂ ಯಾವುದೇ ದೂರುಗಳಿರಲಿಲ್ಲ.
ಕಾಲೇಜಿನ ಉಪನ್ಯಾಸಕಿಯಾಗಿ ಬೆಳಗನ್ನು ವಿದ್ಯಾರ್ಥಿಗಳೊಡನೆ ಹೇಗೋ ಕಳೆದುಬಿಟ್ಟರೂ ಕತ್ತಲೆಯ ಸುಧೀರ್ಘ ರಾತ್ರಿಗಳು ಮೈಲಿಗೆಯ ಘಮವನ್ನು ಅಂಟಿಸುತ್ತಾ ಬದುಕನ್ನು ಕಟ್ಟಿಹಾಕಿ ನನ್ನನ್ನು ಅಣಕಿಸುತ್ತಿದ್ದವು. ಅಂತರಂಗದಲ್ಲಿ ಅವನ ಸ್ಥಾನವನ್ನು ತೆರವುಗೊಳಿಸಿದ್ದರೂ ಕಾಡುವ ನೆನಪುಗಳಿಂದ ಮಾತ್ರ ವಂಚಿತಳಾಗಲು ಸಾಧ್ಯವಾಗಿರಲಿಲ್ಲ! ಅಮ್ಮ ಮದುವೆಯಾಗೆಂದು ಬಲವಂತಪಡಿಸಿದಾಗಲೆಲ್ಲಾ ನನ್ನದೆನ್ನುವ ಭಾವಗಳೆಲ್ಲವನ್ನೂ ಅವನಿಗೆ ವರ್ಗಾಯಿಸಿ ಖಾಲಿಯಾದ ಹೃದಯಕ್ಕೆ ಬೀಗ ಜಡಿದಿದ್ದೇನೆಯೇ ಎಂದೆನಿಸುತ್ತಿತ್ತು. ಅವನ ಬಗ್ಗೆ ಕಠಿಣ ನಿಲುವುಗಳಿದ್ದರೂ ಭಾವವಿಲ್ಲದ ಮನಸ್ಸಿನಲ್ಲಿ ಮತ್ತೊಬ್ಬರನ್ನು ಕೂರಿಸುವ ಸಾಹಸಕ್ಕಂತೂ ಅಪ್ಪಿತಪ್ಪಿಯೂ ಇಳಿದಿರಲಿಲ್ಲ.
****
ಹೀಗೆ ನೆನಪುಗಳ ಸುಳಿಯಲ್ಲಿ ಸಿಲುಕಿರುವಾಗಲೇ ಕೆಳಗಡೆ ಅವ ಬಂದ ಸದ್ದಾಗಿತ್ತು! ಇಲ್ಲಿ ಹೃದಯವೊಮ್ಮೆ ಜೋರಾಗಿ ಬಡಿದುಕೊಂಡಿತ್ತು! ಅತ್ತಿಗೆಯ ಅಂತಃಕರಣದಲ್ಲಿ, ಮೌನಿಯ ಮುಗ್ಧನಗುವಿನಲ್ಲಿ ಪ್ರತಿದಿನ ಸಿಹಿಕಹಿ ನೆನಪಾಗಿ ಕಾಡುವವ ಹತ್ತುವರ್ಷದ ಕಠಿಣಸಜೆಯನ್ನು ಪೂರ್ಣಗೊಳಿಸಿಕೊಂಡು ಇಂದು ತನ್ನವರನ್ನು ನೋಡುವ ಸಲುವಾಗಿ ಮನೆಗೆ ಬಂದಿದ್ದ.(!?) ಅತ್ತಿಗೆಯ ಸಡಗರವನ್ನಂತೂ ಹೇಳತೀರದು. ಅವನಿಗಿಷ್ಟವಾದ ಖಾದ್ಯಗಳ ಪರಿಮಳ ಮನೆಯ ತುಂಬೆಲ್ಲಾ ಹರಡಿ ನನ್ನನ್ನು ಮತ್ತಷ್ಟು ಕ್ಷೋಭೆಗೆ ದೂಡುತ್ತಿದ್ದರೆ ಕೆಳಗೆ ಅಡುಗೆಮನೆಯಲ್ಲಿ ಹಬ್ಬದೌತಣ ತಯಾರಾಗುತ್ತಿತ್ತು.
ಹೂವಿನ ಮಕರಂದದಂತೆ ಮಧುರವಾಗಿದ್ದ ನಮ್ಮಿಬ್ಬರ ನಡುವಿನ ಬಂಧ ಬೇವಿನ ಕಹಿಯಂತೆ ಬದಲಾಗಿದ್ದರ ಬಗ್ಗೆ ಯಾವಾಗಲೂ ನನ್ನ ಆಕ್ಷೇಪವಿದ್ದೇ ಇದೆ. ಆದರೆ ಹಿಂದಿನ ಅದೇ ಪ್ರೀತಿ ತೋರುವ ಅತ್ತಿಗೆ ಮಾತ್ರ ನನಗೆ ವಿಚಿತ್ರವೆನ್ನಿಸಿಬಿಟ್ಟಿದ್ಲು! ಅಣ್ಣನ ಸಾವು ನನ್ನನ್ನೇ ಇಷ್ಟರ ಮಟ್ಟಿಗೆ ಕಾಡ್ತಿದ್ರೆ ಪ್ರೀತಿಸಿ ಮದುವೆಯಾದ ಅವಳನ್ನ ಇನ್ನೆಷ್ಟು ಕಾಡ್ಬೇಕು!? ಆದ್ರೆ ಏನೂ ನಡೆದೇ ಇಲ್ಲವೆನ್ನುವಂತೆ ಮನೆಗೆ ಬಂದ ಜಯಂತ್ ಗೆ ಕೆಳಮನೆಯಲ್ಲಿ ಉಪಚರಿಸುತ್ತಿರುವ ಸದ್ದು ನನ್ನೆದೆಯಲ್ಲಿ ಅಸಹನೆಯ ಹೊಗೆಯಾಡುವಂತೆ ಮಾಡಿತ್ತು.
ಆಗಲೇ ನನ್ನನ್ನರಸಿ ಮೆಟ್ಟಿಲೇರಿ ಬಂದ ಅತ್ತಿಗೆ, “ಅವನ ಕಣ್ಣುಗಳೆಲ್ಲವೂ ನಿನಗಾಗಿಯೇ ಹುಡುಕುತ್ತಿವೆ. ತುಂಬಾ ಬಳಲಿದ್ದಾನೆ! ನೋಯಿಸಬೇಡ. ಎಲ್ಲವನ್ನು ಮರೆತು ಅವನಿಗೊಮ್ಮೆ ಕಾಣಿಸು..” ನನ್ನೆದೆಯ ಬಿರುಕನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತ್ತು ನನ್ನೆದುರು ನಿಂತು ಅವಳಾಡಿದ ನುಡಿಗಳು. ಸರ್ರನೆ ತಲೆಯೆತ್ತಿ ನೋಡಿದ್ದೆ. ಒಳಗೆ ಲಾವಾರಸ ಕುದಿಯುತ್ತಿತ್ತು.
“ಸತ್ತಿದ್ದು ನನ್ನಣ್ಣ ಅಲ್ವಾ…ನಿನ್ನಣ್ಣ ಆಗಿದ್ರೆ ನನ್ನೆದೆಯ ನೋವು ನಿನಗೂ ಅರ್ಥವಾಗ್ತಿತ್ತು..!” ಸಿಟ್ಟಿನ ಭರದಲ್ಲಿ ಮಾತು ಜಾರಿತ್ತು.
ಅಷ್ಟೇ, ಯಾವ ಆವೇಶದಲ್ಲಿದ್ದಳೋ ಕೆನ್ನೆಗೊಂದು ಬಿಗಿದುಬಿಟ್ಟಿದ್ದಳು! ”ನೀನು ಪ್ರೀತಿಸಿ ಮದುವೆಯಾದವನೇ ನಿನ್ನ
ಕರುಳಕುಡಿಯ ಮೇಲೆ ಲೈಂಗಿಕ ದೌರ್ಜನ್ಯವೆಸೆಗಿದ್ರೆ ಆಗ ಗೊತ್ತಾಗಿರೋದು ನಿನಗೂ ಈ ತಾಯಿಯೊಡಲ ದಳ್ಳುರಿ! ಆ ಕ್ರೌರ್ಯವನ್ನ ಕಣ್ಣಾರೆ ಕಂಡು ಸಹಿಸಲಾರದ ಆವೇಶದಲ್ಲಿ ಆ ಕಾಮಪಿಶಾಚಿಯನ್ನ ಕೊಂದರೆ, ತಂಗಿಯನ್ನ ರಕ್ಷಿಸುವ ಸಲುವಾಗಿ ಯಾವ ತಪ್ಪೂ ಮಾಡದ ಒಡಹುಟ್ಟಿದವನು ಹರಕೆಯ ಕುರಿಯಂತೆ ಬಲಿಯಾಗಿ ವರ್ಷಗಳ ಕಾಲ ಕಠಿಣಶಿಕ್ಷೆ ಅನುಭವಿಸಿದ್ದರೆ ಆಗ ಅರ್ಥವಾಗಿರೋದು ನಿನಗೂ ನಮ್ಮ ಮನಸ್ಸಿಗಾದ ಆಘಾತ, ಸಂಕಟ ಎಂತಹದೆಂದು…””ಪುಟ್ಟಾ.!” ಆಗಲೇ ಮೆಟ್ಟಿಲೇರಿ ಬಂದ ಜಯಂತ್ ಆತಂಕದಿಂದ ಅವಳ ಮಾತನ್ನು ತಡೆಯಲು ಪ್ರಯತ್ನಿಸಿದ್ದ.”ಇನ್ನು ನನ್ನಿಂದ ಆಗ್ಲಿಲ್ಲಣ್ಣಾ..!” ಕಂಬನಿಗೆರೆಯುತ್ತಾ ಜಯಂತನನ್ನು ಅಪ್ಪಿಬಿಟ್ಟಳು.
ಅಷ್ಟೇ… ಭೂಕಂಪವಾದಂತೆ ತಲ್ಲಣಗೊಂಡಿತ್ತು ನನ್ನೆದೆ! ಕುಸಿದು ಕುಳಿತುಬಿಟ್ಟೆ. ಅವರು ನನಗೆ ಮತ್ತೇನೂ ಹೇಳುವ ಅವಶ್ಯಕತೆಯೇ ಅಲ್ಲಿ ಉಳಿದಿರಲಿಲ್ಲ. ಅದಾಗಲೇ ನನ್ನ ಮನಸ್ಸು ಎಲ್ಲವನ್ನೂ ಗ್ರಹಿಸಿಬಿಟ್ಟಿತ್ತು! ಅಮ್ಮ ಯಾಕೆ ಚಿಕ್ಕಂದಿನಿಂದಲೂ ನನ್ನನ್ನು ಅಣ್ಣನ ಬಳಿಗೆ ಹೆಚ್ಚು ಹೋಗಲು ಬಿಡುತ್ತಿರಲಿಲ್ಲ, ನಾನ್ಯಾಕೆ ಅವನಿಂದ ದೂರವೇ ಉಳಿದುಬಿಟ್ಟೆ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿತ್ತು. ಕಣ್ಣಾರೆ ಕಂಡದ್ದನ್ನು ಪರಾಮರ್ಶಿಸದೆ ಅದೇ ಸತ್ಯವೆಂದು ನಂಬಿದ್ದಕ್ಕೆ ನನ್ನನ್ನು ನಾನೇ ಹಳಿದುಕೊಂಡೆ. ಉನ್ನತ ಹೃದಯಿಗಳಿಗೆ ಅರಿಯದೆ ನೋವು ಕೊಟ್ಟ ಪಾಪಕ್ಕೆ ಕೈಮುಗಿದು ಕಂಬನಿ ಮಿಡಿಯುತ್ತಾ ಕ್ಷಮಾಪಣೆ ಕೇಳಿದೆ. ನಮಗದರ ಅವಶ್ಯಕತೆಯಿಲ್ಲಾ ಎಂಬಂತೆ
ಅವರ ತೋಳತೆಕ್ಕೆಯಲ್ಲಿ ನನ್ನನ್ನೂ ಬಂಧಿಸಿಕೊಂಡು ಸಂತೈಸಿದ್ದರು. ಆ ಅಪ್ಪುಗೆಯಲ್ಲಿ ಭರವಸೆಯ ಹಿತವಿತ್ತು. ಪ್ರೀತಿಗೆದ್ದ ಸಂತಸವಿತ್ತು. ಪ್ರಖರವಾಗಿ ಬೆಳಗುವ ಸೂರ್ಯನಿಂದ ಮುಂಜಾನೆಯ ಇಬ್ಬನಿ ಹೇಗೆ ಕರಗಿ ಪ್ರಕೃತಿಗೆ ಜೀವಚೈತನ್ಯ ತುಂಬುವುದೋ ಹಾಗೆಯೇ ಸತ್ಯದರ್ಶನದಿಂದ ನನ್ನನ್ನಾವರಿಸಿದ್ದ ದ್ವೇಷವೆಂಬ ಮಾಯರೆಡ್ಡಿ , ಮನವು ತಿಳಿಯಾಗಿ ಬದುಕು ಹಸನಾಗಿತ್ತು.
*****
ಕತೆಗಾರ್ತಿ ಪರಿಚಯ
ಸುಜಾತ ಎಸ್.ಎನ್ ರೆಡ್ಡಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಮನೋವಿಜ್ಞಾನದ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಮೈಸೂರಿನ ವಿದ್ಯಾ ಫ್ಯಾಶನ್ ಅಕಾಡೆಮಿಯಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನರ್ ಆಗಿ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿರುವ ಎ. ನಾಗ ಸುಬ್ಬಾರೆಡ್ಡಿ ಅವರ ಧರ್ಮಪತ್ನಿಯಾಗಿರುವ ಇವರು, ವೃತ್ತಿ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ತಮ್ಮದೇ ಆದ ಆಸಕ್ತಿಯ ಹೆಜ್ಜೆಗುರುತು ಮೂಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಬೃಹತ್ ಸಾಹಿತ್ಯ ವೇದಿಕೆಯಾದ ‘ಕಥಾಗುಚ್ಚ’ದಲ್ಲಿ ಕಳೆದ ಮೂರು ವರ್ಷಗಳಿಂದ ನಿರ್ವಾಹಕಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಮೇಲಿನ ಒಲವಿನ ಫಲವಾಗಿ ‘ಪ್ರೇಮ ಕಾವ್ಯ’ ಹಾಗೂ ‘ಅನುರಾಗದ ಈ ಬಂಧನ’ ಎಂಬ ಎರಡು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಬಿ ಟ್ರೆಂಡ್ಸ್’ ಪತ್ರಿಕೆಯ ‘ಸುವಿಚಾರ’ ಅಂಕಣದಲ್ಲಿ ಬರೆಯುವುದರ ಜೊತೆಗೆ ಕಥೆ, ಕವನ ಹಾಗೂ ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯ ಲೋಕದಲ್ಲಿಯೂ ತಮ್ಮ ಅಭಿವ್ಯಕ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಸೃಜನಶೀಲತೆ, ಅಧ್ಯಯನಶೀಲತೆ ಮತ್ತು ಸಾಹಿತ್ಯಾಸಕ್ತಿಯನ್ನು ಬದುಕಿನ ಭಾಗವಾಗಿಸಿಕೊಂಡಿರುವ ಇವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ.

ಅಂತರಂಗ
ಮೆಚ್ಚುಗೆ ಪಡೆದ ಕವಿತೆ | ಬಂದಿದ್ದಾರೆ; ಆದರೆ ಸಿಕ್ಕಿಲ್ಲ
~ಕವಿತ ಎ. ವಿ. ಶ್ಯಾಗಲೆ, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ
ಈಗೀಗ
ಮೆದುಳು – ಕಿಡ್ನಿಗಳ
ಜಾಗ ಬದಲಾಗಿರಬೇಕು.
ಸರ್ಜರಿಗೆಂದು ಕೆಲವರನ್ನು
ವೈದ್ಯರ ಬಳಿ
ಕೂರಿಸಿದೆ…
ಔಷಧಿಯೂ ಸಿಗಲಿಲ್ಲ
ಶಸ್ತ್ರ ಚಿಕಿತ್ಸೆಯೂ ನಡೆಯಲಿಲ್ಲ.
ಹಳೆ ಗುಜುರಿ ಸಾಮಾನುಗಳ
ರಿಪೇರಿ ಮಾಡುವವರು
ಬಂದಿದ್ದಾರೆ.
ಮುರಿದ ಮನಸ್ಸುಗಳ ತಂದಿಟ್ಟೆ
ಯಾಕೋ ಅಂಗಡಿಯಣ್ಣ ಆಗಲ್ಲವೆಂದ.
ಸೋಪು ಮಾರುವವರು
ಬೀಡುಬಿಟ್ಟಿದ್ದಾರೆ ಇಲ್ಲಿಯೇ!
ಅವರಂಗಡಿಯಲ್ಲೂ ಕೇಳಿದೆ.
ಮನಸ್ಸು-ಮೆದುಳು
ತೊಳೆಯುವ ನೊರೆಯೂ
ಸಿಗಲಿಲ್ಲ.
ಹಾವು ಹಿಡಿಯುವವರು
ಬೆಕ್ಕು ಹಿಡಿಯುವವರು
ಬಲೆ ಹಿಡಿದು ಬಂದಿದ್ದಾರೆ.
ಒAದು ತಲೆಯ,
ಎರಡು ಕಾಲಿನ
ಪ್ರಾಣಿ ಸಿಕ್ಕಿರಬಹುದೇ?
ಇಣುಕಿ ನೋಡಿದೆ.
ಅನಿಸಿದ್ದು:
ಕಬ್ಬಿಣದ ಬೆಸುಗೆ ಹಾಕುವ
ಕಮ್ಮಾರ ಸಾಗಿ ಹೋಗುತ್ತಿದ್ದಾನೆ ಕೇಳಿನೋಡೋಣವೆ?
ಒಡೆದ ಮನಸುಗಳ ಬೆಸುಗೆಗೆ ಹಣವೆಷ್ಟು ತಗಲುವುದೆಂದು?
ಬೀಗ ಹಾಕುವವರೂ
ಬಂದಿದ್ದಾರೆ.
ಮನೆಗೆ ಹಾಕುವ ಬದಲು
ಮಂದಿಗೆ ಹಾಕಿದ್ದರೆ
ಮನಗಳಾದರೂ ಉಳಿಯುತ್ತಿತ್ತೇನೋ!
ಜಿಪ್ಪು ಹಾಕುವವರು ಬಂದಿದ್ದಾರೆ.
ಬ್ಯಾಗಿಗೆ ಹಾಕುವ ಬದಲು
ಬಾಯಿಗೆ ಹಾಕಿದ್ದರೇ
ಒಲ್ಲದ ಮಾತುಗಳನ್ನಾದರೂ
ಅಲ್ಲೇ ಮುಗಿಸಬಹುದಿತ್ತು!
ಈಗೀಗಂತೂ
ಕೊಳೆತ ಮನಸ್ಸುಗಳು ನಾರುತಿಹುದು ಜಗದ ತುಂಬಾ!
ಸುಗAಧ ದ್ರವ್ಯವನ್ನಾದರೂ ಸಿಂಪಡಿಸಬೇಕು.
ಅವರ ದಾರಿಯನ್ನೇ ಕಾಯುತ್ತಿದ್ದೇನೆ.
ಯಾಕೋ ಇನ್ನೂ ಬಂದಿಲ್ಲ!
ಕುಮಾರಿ. ಕವಿತ ಎ. ವಿ. ಅವರು ಶ್ರೀ ವಿರೂಪಾಕ್ಷಪ್ಪ ಮತ್ತು ಶ್ರೀಮತಿ ಮಹಾದೇವಮ್ಮ ದಂಪತಿಗಳ ಮಗಳಾಗಿ ದಿನಾಂಕ: 26.05.2001ರಲ್ಲಿ ದಾವಣಗೆರೆ(ತಾ/ಜಿ)ಯ ಶ್ಯಾಗಲೆ ಎಂಬ ಗ್ರಾಮದಲ್ಲಿ ಜನಿಸಿರುತ್ತಾರೆ. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಅವರ ಹುಟ್ಟೂರಿನಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಹೊಳಲ್ಕೆರೆ ತಾಲೂಕಿನ ಮುತ್ತುಗದೂರು ಎಂಬ ಗ್ರಾಮದಲ್ಲಿ ಪೂರ್ಣಗೊಳಿಸಿ, ಪದವಿ ಹಾಗೂ ಬಿ.ಇಡಿ ಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆ ವಾಚನ ಮಾಡಿದ್ದಾರೆ. ಅಲ್ಲದೆ ಕ್ರೆಸ್ಟ್ ವಿಶ್ವವಿದ್ಯಾನಿಲಯದ ದ.ರಾ. ಬೇಂದ್ರೆ ಸ್ಮೃತಿ ಕಾವ್ಯ ಬಹುಮಾನ (2025) ಮತ್ತು ರಾಷ್ಟç ಮಟ್ಟದ ಕ್ಲಾರೆಟ್ ಕಾವ್ಯ ಪ್ರಶಸ್ತಿ (2025)ಗಳು ಇವರಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ದೊರೆತಿವೆ.

ಅಂತರಂಗ
ಮೆಚ್ಚುಗೆ ಪಡೆದ ಕತೆ | ವೆಂಕಟನ ಸ್ವೆಟರ್
~ ಚಂದ್ರಿಕಾ ನಾಗರಾಜ್ ಹಿರಿಯಡಕ
ತಟ್ಟೆಗೆ ಹಾಕಿದ್ದ 4 ಇಡ್ಲಿಯಲ್ಲಿ ಎರಡನ್ನು ಪೇಪರ್ ನಲ್ಲಿ ಕಟ್ಟಿಟ್ಟು, ಉಳಿದೆರಡು ಇಡ್ಲಿಯನ್ನು ಹಿಚಿಕಿ ಸಾಂಬಾರಿಗಾಗಿ ಕಾದು ಕುಳಿತ್ತಿದ್ದ ವೆಂಕಟ. ಅನ್ನಪೂರ್ಣಮ್ಮ ಸಾಂಬಾರು ಬಡಿಸಿ ಒಳಗೆ ಹೋಗುತ್ತಿದ್ದಂತೆ ಸಾಂಬಾರಿನೊಂದಿಗೆ ಇಡ್ಲಿಯನ್ನು ಹಿಚಿಕಿ ಮೆಲ್ಲಲಾರಂಭಿಸಿದ್ದ. ಅವನು ಇಡ್ಲಿ ಹಿಚುಕುವಾಗ ಕೈ ಬೆರಳ ಸಂದಿಯಿಂದ ಇಡ್ಲಿಯ ಚೂರುಗಳು ಪಚಕ್ಕನೆ ಇಣುಕುವುದು ನೋಡುವವರಿಗೆ ವಾಕರಿಕೆ ತರಿಸುತ್ತಿತ್ತು. ಹೀಗಾಗಿ ಆತನೊಂದಿಗೆ ಇತರರು ತಿಂಡಿಗಾಗಲಿ, ಊಟಕ್ಕಾಗಲಿ ಜೊತೆಯಾಗುತ್ತಿರಲಿಲ್ಲ. ಗಬಗಬನೆ ತಿಂದು ಮುಗಿಸುವ ವೆಂಕಟ ಹೊಟ್ಟೆಗಾಗಿ ತಿನ್ನುವವನಂತೆ ಕಾಣುವುದಿಲ್ಲ.
‘ಇನ್ನೊಂದು ಇಡ್ಲಿ ತರ್ಲೇನೋ ವೆಂಕಟು’ ಅನ್ನಪೂರ್ಣಮ್ಮ ಕೇಳಿದಾಗ ಬೇಡ ಎಂಬಂತೆ ತಲೆ ಆಡಿಸಿದ. ತಣ್ಣಗಾಗಿದ್ದ ಚಹಾವನ್ನು ಒಂದೇ ಗುಟುಕಿಗೆ ಕುಡಿದು ಮುಗಿಸಿದ್ದ.
ಕಟ್ಟಿಟ್ಟಿದ್ದ ಇಡ್ಲಿಯ ಪೊಟ್ಟಣವನ್ನು ತನ್ನ ಸ್ವೆಟ್ಟರಿನ ಜೇಬಿಗಿಳಿಸಿ, ಕೈ ತೊಳೆದ. ತಟ್ಟೆ, ಲೋಟವನ್ನು ತನಗೆ ತಿಳಿದಷ್ಟು ನೀಟಾಗಿ ತೊಳೆದು ಅನ್ನಪೂರ್ಣಮ್ಮನ ಕೈಗಿಟ್ಟವನೆ ಕೆಲಸಕ್ಕೆ ಕೈ ಹಚ್ಚಿದ.
ವೆಂಕಟ ಹಾಗೆನೇ ಮಾತು ಕಮ್ಮಿ ಅನ್ನುವುದಕ್ಕಿಂತ ಮಾತೇ ಆಡಲ್ಲ ಅನ್ನೋದು ಹೆಚ್ಚು ಸೂಕ್ತ. ಹು, ಹಾ ಅಷ್ಟೆ. ಅಷ್ಟಕ್ಕೂ ಅವನೊಂದಿಗೆ ಮಾತನಾಡಲು ಯಾರೂ ಬಯಸುತ್ತಿರಲಿಲ್ಲ ಅನ್ನೋದು ಬಹು ಮುಖ್ಯ ಅಂಶ.
ತೆಂಗಿನ ಸಿಪ್ಪೆಯಂತಾಗಿರುವ ಬಿಳಿ ಮಿಶ್ರಿತ ಕಂದು ತಲೆಗೂದಲು, ಅಷ್ಟೇ ಒರಟುತನದ ಮೀಸೆ, ಬಿಳಿ ಗಡ್ಡ, ಕಳಾಹೀನ ಕೆಂಬಣ್ಣದ ಕಣ್ಣುಗಳು, ಉದ್ದ ಮೂಗು, ಬಣ್ಣ ಮಾಸಿದ ಶರ್ಟ್, ಪಂಚೆ…ಶರ್ಟ್ ಮೇಲೆ ನಿತ್ಯ ಧರಿಸುವ ಸ್ವೆಟ್ಟರ್.
ಆ ಸ್ವೆಟ್ಟರ್ ನಿಂದಾಗಿಯೇ ವೆಂಕಟ ಹೆಸರುವಾಸಿಯಾಗಿದ್ದ. ‘ವೆಂಕಟ ಇದ್ದಾನಲಾ’ ಎಂದು ಯಾರಾದರೂ ಅವನ ವಿಚಾರ ಎತ್ತಿದರೆ, ‘ಯಾರು ಸ್ವೆಟ್ಟರ್ ವೆಂಕಟನೇ…?’ ಎನ್ನುವುದಿದೆ. ದಿನ ಅದೊಂದೇ ಸ್ವೆಟ್ಟರ್ ಧರಿಸುವ ವೆಂಕಟ, ಯಾರು ಏನೇ ಕೊಟ್ಟರು ಕಾಗದದಲ್ಲಿ ಕಟ್ಟಿ ಅದರೊಳಗೆ ಇಡುವ ಕೆಲಸ ಮಾಡುತ್ತಿದ್ದ. ಇದನ್ನೇ ಲೇವಡಿಯಾಗಿ ‘ಸ್ವೆಟ್ಟರ್ ವೆಂಕಟ’ ಎಂದು ಬಹಳಷ್ಟು ಮಂದಿ ಕರೆಯುತ್ತಿದ್ದರು.
ವೆಂಕಟನಿಗೆ ಸುಬ್ಬಣ್ಣ ಗೌಡ್ರು ಒಂದು ಮನೆ ಕೊಟ್ಟಿದ್ದರು. ಗಾರೆ ಕಾಣದ ಹಂಚಿನ ಮನೆ ಅದು. ಅಡುಗೆ ಕೋಣೆ, ಬಚ್ಚಲು ಕೋಣೆ, ಚಾವಡಿ ಇಷ್ಟೆ…ಚಿಕ್ಕ ಟಾಯ್ಲೆಟ್ ಹೊರಗೆ ಕಟ್ಟಿಸಿಕೊಟ್ಟಿದ್ದರು. ವೆಂಕಟ 7 ಗಂಟೆಗೆ ಮನೆಯೊಳಗೆ ಹೊಕ್ಕರೆ ಬೆಳಿಗ್ಗೆ 5 ಗಂಟೆಗೆ ಹೊರಗೆ ಕಾಣಿಸಿಕೊಳ್ಳುತ್ತಿದ್ದ. ಹಾಗಂತ ಅವನು ಕುಡಿದು ಮಲಗುತ್ತಿದ್ದ ಎಂದು ಅನ್ನಿಸುವುದಿಲ್ಲ. ಯಾಕಂದ್ರೆ, ಅವರು ಬಾರಿನ ಬಳಿ ಯಾರಿಗೂ ಇದುವರೆಗೂ ಕಾಣ ಸಿಕ್ಕಿಲ್ಲ.
‘ವೆಂಕಟ, ಇನ್ನು ಆಗಿಲ್ವೇನೋ…ಮಳೆ ಶುರು ಆಗೋ ಮುಂಚೆ ಸೌದೆ ಕೊಟ್ಟಿಗೆ ಸೇರಿರ್ಬೇಕು ನೋಡು’ ಎಂದು ಸುಬ್ಬಣ್ಣ ಗೌಡ್ರು ವೀಳ್ಯದೆಲೆ ತಿಂದು ಕೆಂಪಾಗಿಸಿಕೊಂಡಿದ್ದ ಬಾಯನ್ನು ಆಕಳಿಸುತ್ತಾ ಹೇಳಿದರು. ವೆಂಕಟ ಅವರತ್ತ ನೋಡದೆ, ಗೋಣೂ ಅಲ್ಲಾಡಿಸದೆ ಸೌದೆ ಒಡೆಯುತ್ತಿದ್ದ.
‘ಯಾಕಿಷ್ಟು ಬಾಯಾಕಳಿಸ್ತಿದ್ಯೋ ಮಾರಾಯಾ’ ಎಂದು ಗೌಡ್ರು ಹೇಳುತ್ತಿದ್ದಂತೆ ಪಕ್ಕದಲ್ಲಿದ್ದ ಆಳು ಶಂಕರ ಕಿಸಕ್ಕನೆ ನಕ್ಕು…’ಆಕಿ ನಿಮ್ನೆ ನೆನಪ್ ಮಾಡ್ಕೋತ್ತಿರ್ಬೋದ್’ ಎಂದು ಮೆತ್ತಗೆ. ‘ಏಯ್ …ತೆಗ್ದು ನಾಲ್ಕು ಬಿಟ್ಟಾ ಅಂದ್ರೆ ಮೂತಿ ಊದ್ಕೊಂಡ್ ಬಿಡ್ಬೇಕ್…’ಎಂದು ಸುತ್ತಲೊಮ್ಮೆ ನೋಡಿದ ಗೌಡ್ರು, ‘ಗೌಡ್ತಿ ಕೇಳಿಸ್ಕೊಂಡ್ರೆ …’ ಎಂದು ಮೆಲ್ಲನುಸಿರಿದರು. ‘ಅವ್ರಿಗೇನ್ ಈ ವಿಚಾರ ಗೊತ್ತಿಲ್ವಾ ಗೌಡ್ರೆ’ ಎಂದ ಶಂಕರ. ಅಷ್ಟು ಹೊತ್ತು ಏನೂ ಅರಿಯದಂತೆ ಸೌದೆ ಒಡೆಯುತ್ತಿದ್ದ ವೆಂಕಟ ಕೊಡಲಿ ಕೆಳಗಿಟ್ಟ. ‘ಇವನಿಗೆ ಕೇಳಿಸ್ತೆ’ ಎಂದು ಇಬ್ಬರು ಮುಖ ಮುಖ ನೋಡಿಕೊಂಡರು. ವೆಂಕಟ ಅವರಿಬ್ಬರತ್ತ ನೋಡಿ ಮತ್ತೆ ಕೆಲಸ ಶುರು ಮಾಡಿದ. ಅವನ ಒಂದು ಸಣ್ಣ ನೋಟ ಗೌಡರ ಎದೆಗಿರಿದಂತಾಗಿತ್ತು. ‘ಇವ ಏನ್ ಹೆದರಿಸೋದ್…ಹೆಂಡ್ತಿಯನ್ನ ಕೊಂದವ’ ಎಂದು ಕೆಂಗಣ್ಣು ಬೀರಿ ಅಲ್ಲಿಂದ ನಡೆದರು. ವೆಂಕಟ ಮರದ ದಿಮ್ಮಿಗೆ ಎರಡೇಟು ಜೋರಾಗಿ ಬಡಿದ.
*
ವೆಂಕಟನಿಗೆ ಬೆಳಿಗ್ಗೆ ಚಾ ತಿಂಡಿ, ಮಧ್ಯಾಹ್ನ ಊಟ, ಸಂಜೆಯ ಚಾ ಗೌಡರ ಮನೆಯಲ್ಲೆ. ಸಂಜೆ ಮನೆಗೆ ಹೋದವ ಅಡುಗೆ ಮಾಡುತ್ತಿರಲಿಲ್ಲ. ಅಡುಗೆ ಕೋಣೆ ನಾಮಕವಸ್ಥೆ ಅಷ್ಟೆ. ಸ್ಟೆಟರ್ ನಲ್ಲಿ ಕಟ್ಟಿ ತಂದ ತಿಂಡಿಯೇ ರಾತ್ರಿಯ ಮೃಷ್ಟಾನ್ನ ಭೋಜನ ಅವನಿಗೆ.
ಈ ವಿಚಾರ ಗೊತ್ತಿದ್ದ ಅನ್ನಪೂರ್ಣಮ್ಮ ಸಂಜೆ ಆತನಿಗೆ ಚಹಾನೊಂದಿಗೆ ಏನಾದರೂ ತಿನ್ನಲು ಕೊಡುತ್ತಿದ್ದರು. ಅದನ್ನು ಆತ ಚೂರು ತಿಂದು ಉಳಿದುದನ್ನು ಸ್ವೆಟ್ಟರ್ ನೊಳಗೆ ತುರುಕುತ್ತಿದ್ದ.
‘ವೆಂಕಟ, ಗೌಡ್ರು ಹೇಳಿದ್ದಕ್ಕೆ ಬೇಜಾರ್ ಮಾಡ್ಬೇಡ್ವೋ…’ ಅನ್ನಪೂರ್ಣಮ್ಮ ಹೇಳಿದಾಗ, ವೆಂಕಟ ಪ್ರಶ್ನಾರ್ಥಕವಾಗಿ ನೋಡಿದ.
‘ಮಕ್ಕಳಿಲ್ಲದ ಸಂಕಟ ಅವರಿಗಿದೆ ವೆಂಕಟ. ಈ ಆಸ್ತಿಗೆಲ್ಲ ವಾರಸ್ದಾರ ಇಲ್ಲ ನೋಡು…ಅದ್ಕೆ ಹಾಗಾಡ್ತಾರೆ, ಅವ್ರ ಹಾಗೂ ಸೇವಂತಿ ವಿಷ್ಯ ಹೊಸದಲ್ಲ ನಂಗೆ. ಆ ವಿಚಾರ ಊರೆಲ್ಲ ವಾಸನೆ ಹೊಡಿವಾಗ ನನ್ನ ಮೂಗಿಗೆ ಬಡ್ದಿಲ್ವಾ ಹೇಳು? ಆದ್ರೆ, ಈ ವಿಚಾರದಲ್ಲಿ ನೀ ಹೆಂಡ್ತಿನಾ ಸಾಯ್ಸಿದ್ದೀಯಾ ಅಂದಿದ್ದು ನಂಗೆ ನೋವಾಯ್ತ್ ವೆಂಕಟ…ನಿಂಗು ನೋವಾಗಿರುತ್ತೆಂತ ಗೊತ್ತು…ಕ್ಷಮಿಸಪ್ಪ…’ ಎಂದ ಅನ್ನಪೂರ್ಣಮ್ಮರ ಕಂಡು ವೆಂಕಟ ಕೈ ಮುಗಿದು ಬಿಟ್ಟ. ‘ಅವ್ವ’ ಎಂದವನ ಕಣ್ತುಂಬಿ ಬಂದವು. ಅಷ್ಟೆ ವೆಂಕಟ ಹೆಚ್ಚು ಮಾತಾಡಲಿಲ್ಲ…ಅಥವಾ ಅವನಿಗೆ ಮಾತಾಡಲು ಬರಲ್ಲವೋ ಗೊತ್ತಿಲ್ಲ. ಅಲ್ಲಿಗೆ ಆ ಭಾರವಾದ ಎರಡು ಹೃದಯಗಳ ಮಾತು ಮುಕ್ತಾಯಗೊಂಡಿತು.
ವೆಂಕಟ ನಿಜವಾಗ್ಲೂ ಪತ್ನಿಯನ್ನು ಸಾಯಿಸಿದ್ನಾ? ಹೀಗೆ ಪ್ರಶ್ನೆ ಮಾಡುವವರಿಲ್ಲ ಆ ಊರಲ್ಲಿ. ಪ್ರಪಂಚನೇ ಹಾಗೆ, ಗಾಳಿ ಸುದ್ದಿಗಳಿಗೆ ರೆಕ್ಕೆ ಪುಕ್ಕ ಸಿಕ್ಕಿಸಿ ಹಾರಿಸಿ ಬಿಡುತ್ತದೆ. ಹಿಡಿದು ಬಚ್ಚಿಟ್ಟೋ ಅಥವಾ ಅದಕ್ಕೆ ಸತ್ಯದ ಲೇಪ ಹಾಕಿ ಹಾರಿಸಲ್ಲ.
ಆದರೆ, ವೆಂಕಟನ ಪತ್ನಿಯನ್ನು ಆ ಊರಲ್ಲಿ ಯಾರೂ ನೋಡಿಲ್ಲ. ಅದು ಪಕ್ಕದೂರಿನ ಗಾಳಿಯಲ್ಲಿ ಬಂದ ಸುದ್ದಿ. ವೆಂಕಟ ಇದ್ದಿದ್ದು ಪಕ್ಕದೂರಿನ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲಿ ಹೆಂಡತಿಯೊಂದಿಗೆ ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದ. ಆಗ ವೆಂಕಟನಿಗೆ ಕುಡಿಯುವ ಅಭ್ಯಾಸವಿತ್ತು, ಚಟವಿರಲಿಲ್ಲ. ಯಾರಾದರೂ ಸಿಕ್ಕರೆ ಬಾಯ್ತುಂಬಾ ಮಾತಾಡುತ್ತಿದ್ದ. ಪರಿಚಯಸ್ಥರೇ ಆಗಬೇಕಾಗಿಲ್ಲ. ಅವನ ಹೆಂಡತಿ ಹೊರಗೆ ಕಾಣಿಸಿಕೊಳ್ಳುತ್ತಿದ್ದುದು ಬಹಳ ಕಮ್ಮಿ. ಅಪರೂಪವೆಂಬಂತೆ ಇಬ್ಬರೂ ಸಂತೆಯಲ್ಲಿ ದರ್ಶನ ಕೊಡುತ್ತಿದ್ದರಷ್ಟೆ. ವೆಂಕಟನ ಹೆಂಡತಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಮಾತು ಕಮ್ಮಿ. ಎದುರು ಸಿಕ್ಕವರು ಮುಗುಳ್ನಕ್ಕರೆ ತಣ್ಣಗೊಂದು ನಸು ನಗೆ ಬೀರುತ್ತಿದ್ದಳು.
ವೆಂಕಟ ಹೆಂಡತಿಯೊಂದಿಗೆ ಜಗಳವಾಡುವುದನ್ನು ಯಾರೂ ನೋಡಿರಲಿಲ್ಲ. 5 ವರ್ಷದ ಮದುವೆಯ ಬಾಂಧವ್ಯ ಅದು. ಮಕ್ಕಳಿಲ್ಲದ ಕೊರಗು ಅವರಿಗಿತ್ತೋ ಗೊತ್ತಿಲ್ಲ. ಆದರೆ, ಊರಿನವರಿಗೆ ಆ ಚಿಂತೆ ಇತ್ತು. ಸಿಕ್ಕಾಗೆಲ್ಲ, ಏನ್ ಮಾರಾಯ, ಹೆಂಡ್ತಿ ಬಸುರಿ ಆಗಿಲ್ವೆ…ಟೆಸ್ಟ್ ಮಾಡಿಸ್ಬಾರ್ದೆ? ಏನಮ್ಮ ಏನಾರ ವಿಶೇಷ ಇತ್ತೆ? ಎಂದು ಕೇಳಿ ಕೊರತೆಯನ್ನು ಕೆದಕುತ್ತಿದ್ದರು. ವೆಂಕಟ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ…ಆ ಹೆಣ್ಣು ಜೀವಕ್ಕೆ ಎಷ್ಟು ನೋವಾಗುತ್ತಿತ್ತೋ ದೇವರೇ ಬಲ್ಲ.
ಅಂದು ಇದ್ದಕ್ಕಿದ್ದಂತೆ ವೆಂಕಟನ ಹೆಂಡತಿ ಮೃತಪಟ್ಟಳೆಂಬ ಸುದ್ದಿ ಹರಡಿತು. ಅವಳ ಶವದ ಬಳಿ ವಿಷದ ಬಾಟಲಿ ಬಿದ್ದಿತ್ತು. ವೆಂಕಟನೇ ವಿಷ ಕುಡಿಸಿದ ಎಂದರು ಜನ. ಮೌನಿಯಾಗಿ ಹೋದ ವೆಂಕಟ…ಮಕ್ಕಳಿಲ್ಲ ಎಂದು ಮಾತಿನಲ್ಲೇ ಚುಚ್ಚಿ ಕೊಂದವರು ಜನರಲ್ಲವೇ…!?
ಆಮೇಲೆ ವೆಂಕಟ ಆ ಊರಿಗೆ ವಿದಾಯ ಹೇಳಿದ್ದ. ಆ ಒಂದು ಸ್ಟೆಟ್ಟರ್ …ಕಬ್ಬಿಣದ ಪೆಟ್ಟಿಗೆಯೊಂದಿಗೆ. ಈ ಊರಿಗೆ ಬಂದವ ನಿತ್ಯ ಆ ಸ್ಟೆಟ್ಟರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ. ವೆಂಕಟ ‘ಸ್ವೆಟ್ಟರ್ ಒಗಿಯಲ್ವೇ’ ಎಂದು ಜನ ಆಡಿಕೊಂಡರೂ ಅವನು ಕಿವಿಗೆ ಹಾಕಿಕೊಳ್ಳದವನಂತಿರುತ್ತಿದ್ದ. ಕುಡಿಯುವ ಹವ್ಯಾಸ ಬಿಟ್ಟಿದ್ದ.
*
ಅಂದು ವೆಂಕಟ ಅನ್ನಪೂರ್ಣಮ್ಮ ಕೊಟ್ಟ ಇಡ್ಲಿಗಳಲ್ಲಿ ಎರಡನ್ನು ಸ್ವೆಟ್ಟರ್ ನ ಜೇಬಿಗಿಳಿಸಿದ. ಉಳಿದವನ್ನು ಎಂದಿನಂತೆ ಹಿಚುಕಿ ತಿಂದು ಮುಗಿಸಿದ್ದ. ಚಹಾವನ್ನು ಕುಡಿದು. ತಟ್ಟೆ ತೊಳೆದಿಟ್ಟ. ಸೌದೆ ಒಡೆಯುವ ಕೆಲಸ ಅಂದಿಗೆ ಪೂರ್ಣಗೊಂಡಿತ್ತು. ಗೌಡರ ಆಜ್ಞೆಯಂತೆ ಮಳೆಗಾಲ ಶುರು ಆಗುವ ಮುನ್ನ ವೆಂಕಟ ಕೆಲಸ ಮುಗಿಸಿದ್ದ. ಸಂಜೆ ಮನೆ ಹೋಕ್ಕಿದ್ದ.
**
‘ಸ್ಟೆಟ್ಟರ್ ವೆಂಕಟ ಕೆಲಸಕ್ಕೆ ಬಂದಿಲ್ಲ’, ‘ಊರು ಬಿಟ್ನಾ ಏನ್ ಕಥೆ’ ಆಳಿನವರ ಮಾತುಗಳು ಕಿವಿಗೆ ಬಿದ್ದು ಅನ್ನಪೂರ್ಣಮ್ಮ ಗಾಬರಿಗೆ ಬಿದ್ದರು. ‘ನಡಿ, ಅವ್ನ ಮನೆ ಕಡೆ’ ಗೌಡ್ರು ಒಬ್ಬ ಆಳಿನ ಜತೆ ಹೊರಡುತ್ತಿದ್ದಂತೆ, ಅನ್ನಪೂರ್ಣಮ್ಮ ಹೊರಗೋಡಿ ಬಂದು ಚಪ್ಪಲಿ ಹಾಕಿಕೊಂಡರು. ತಿರುಗಿ ನೋಡಿದ ಗೌಡ್ರು, ಬೇಡ ಎನ್ನಲಿಲ್ಲ.
ಬಣ್ಣ ಮಾಸಿದ ಆ ಸಿಮೆಂಟ್ ಶೀಟಿನ ಮನೆಯ ಬಾಗಿಲು ಸ್ವಲ್ಪ ತೆರೆದಿತ್ತು. ಗೌಡರು ಬಾಯ್ದೆರೆಯುವ ಮುಂಚೆಯೇ ಅನ್ನಪೂರ್ಣಮ್ಮ, ‘ವೆಂಕಟು…ವೆಂಕಟು…’ ಎಂದು ಕರೆದರು. ಒಳಗಿನಿಂದ ಪ್ರತಿಕ್ರಿಯೆ ಬರಲಿಲ್ಲ. ಚಾಪೆಯ ಮೇಲೆ ವೆಂಕಟ ಮಲಗಿದ್ದ. ಗೌಡ್ರು ಆಳಿಗೆ ಸಂಜ್ಞೆ ಮಾಡಿದರು.
‘ವೆಂಕಟ’ ಎಂದು ಆತ ಎಬ್ಬಿಸಿದ. ಆತ ಹೋ ಎಂದು ಉದ್ಗರಿಸಿ…’ಹೋಗ್ಬಿಟ್ಟವ್ನೆ’ ಎಂದ. ಅನ್ನಪೂರ್ಣಮ್ಮ ಗೋಡೆಗೊರಗಿ ಬಿಕ್ಕಳಿಸಿದರು. ಗೌಡ್ರು ಹೊರನಡೆದರು.
ಪಕ್ಕದಲ್ಲಿ ತೆರೆದಿಟ್ಟಿದ್ದ ಪೆಟ್ಟಿಗೆ…ಅದರೊಳಗಿದ್ದ ಹಸಿರು ಬಳೆ…ಮೂಗುತಿ…ತಾಳಿ ಸರ…ಉಣ್ಣೆಯ ದಾರ, ಹೆಣಿಗೆ ದಾರಗಳು…ಅರ್ಧ ಹೊಲಿದಿದ್ದ ಪುಟ್ಟ ಸ್ವೆಟ್ಟರ್…ಕಣ್ಣೀರು ತುಂಬಿದ್ದ ಅನ್ನಪೂರ್ಣಮ್ಮನ ಕಣ್ಣಿಗೆ ಅನುರಾಗದ ಸೊಗಡಾಗಿ ಕಂಡವು. ತಣ್ಣಗೆ ಮಲಗಿದ್ದ ವೆಂಕಟನತ್ತ ಕಣ್ಣು ಹೊರಳಿಸಿದರು. ವೆಂಕಟ ಅದೇ ಹಳೇ ಪಂಚೆ, ಶರ್ಟ್ ತೊಟ್ಟಿದ್ದ….ಅವನ ಸ್ವೆಟ್ಟರ್ ಎಲ್ಲಿ? ಅವರ ಕಣ್ಣು ಹೊರನಡೆದವು. ತಂತಿ ಮೇಲೆ ಅರ್ಧ ಒಣಗಿತ್ತು…ವೆಂಕಟ ಅಂದು ಸ್ಟೆಟ್ಟರ್ ಒಗೆದಿದ್ದ.





