Connect with us

ದಿನದ ಸುದ್ದಿ

ಸುಳ್ಳಿನ ಸರದಾರರ ನಡುವೆ ಒಂದು ಡ್ರೋನ್ ವಿಹಾರ

Published

on

  • ನಾ ದಿವಾಕರ

ತ್ಯಮೇವ ಜಯತೇ ” ಈ ಘೋಷಣೆಯೇ ಭಾರತೀಯರಿಗೆ ಮೈ ನವಿರೇಳುವಂತೆ ಮಾಡುತ್ತದೆ. ಈ ಎರಡು ಪದಗಳಲ್ಲಿ ಅಂತಹ ಮಾಂತ್ರಿಕ ಶಕ್ತಿ ಇದೆ. ಸಾಮಾನ್ಯವಾಗಿ ಜನರಲ್ಲಿ ಇಂತಹ ಒಂದು ವಿಶ್ವಾಸ ಇದ್ದೇ ಇರುತ್ತದೆ. ನ್ಯಾಯ ಎಂದೂ ಸೋಲುವುದಿಲ್ಲ, ಸತ್ಯ ಎಂದಿಗೂ ಸೋಲುವುದಿಲ್ಲ ಹೀಗೆ.

ನಮ್ಮ ಚಲನಚಿತ್ರಗಳಲ್ಲೂ ನಾಯಕ ಶಿಖಾಮಣಿಗಳು ಇದನ್ನೇ ಘೋಷಿಸುತ್ತಾ ಬಂದಿದ್ದಾರೆ. ಸತ್ಯ ಮತ್ತು ನ್ಯಾಯ ಎರಡೂ ಪದಗಳ ಸೋಂಕು ಸಹ ಇಲ್ಲದ ರಾಜಕೀಯ ವಲಯದಲ್ಲೂ ಇದು ಕೇಳಿಬರುತ್ತದೆ. ಏಕೆಂದರೆ ಸತ್ಯ ಎನ್ನುವ ಒಂದು ಸಾಪೇಕ್ಷ ಪದ ಸಾರ್ವತ್ರೀಕರಣಗೊಂಡು ಸ್ವೀಕೃತವಾಗಿಬಿಟ್ಟಿದೆ.

ಹುದುಗಿ ಹೋದ ಸತ್ಯಗಳ ನಡುವೆಯೇ ನಾವು “ ವಸುದೈವ ಕುಟುಂಬಕಂ ” ಎಂಬ ಮತ್ತೊಂದು ಪ್ರಾಚೀನ ಘೋಷವಾಕ್ಯವನ್ನು ಬಳಸುತ್ತಾ ಬಂದಿದ್ದೇವೆ. ಶತಮಾನಗಳ ಕಾಲ ನಾವೇ ನಿರ್ಮಿಸಿಕೊಂಡಿರುವ ನಾಲ್ಕು ಗೋಡೆಗಳ ನಡುವೆಯೇ “ ಅನ್ಯರನ್ನು ” ಗುರುತಿಸಿ ಪ್ರತ್ಯೇಕಗೊಳಿಸಿ ಕ್ವಾರಂಟೈನ್ ಮಾಡುವ ಸಂಸ್ಕøತಿಯನ್ನು ಪೋಷಿಸಿಕೊಂಡು ಬಂದಿದ್ದರೂ, ನಾವು ಇಡೀ ಜಗತ್ತೇ ಒಂದು ಕುಟುಂಬದಂತೆ ಎಂದು ಹೇಳುತ್ತಾ ಬಂದಿದ್ದೇವೆ. ಅದನ್ನೇ ನಂಬುತ್ತಲೂ ಬಂದಿದ್ದೇವೆ. ಈ ಕುಟುಂಬದ ಒಳಗೇ ನಡೆಯುವ ಅತ್ಯಾಚಾರ, ಕೊಲೆ, ದಬ್ಬಾಳಿಕೆ ದೌರ್ಜನ್ಯಗಳ ನಡುವೆಯೂ ಆಗೊಮ್ಮೆ ಈಗೊಮ್ಮೆ “ ಸತ್ಯಮೇವ ಜಯತೇ ” ಎಂದು ಅರಚುತ್ತಾ ಸಮಾಧಾನದಿಂದಿರುತ್ತೇವೆ.

ಕಳೆದ ಕೆಲವು ವರ್ಷಗಳಿಂದ ರಾಜಕೀಯ ವಲಯದಲ್ಲಿ ವಿವಿಧ ದೇವರುಗಳ ಮೇಲೆ ಆಣೆ ಪ್ರಮಾಣ ಮಾಡಿ ತಮ್ಮ ಸತ್ಯ ಸಂಧತೆಯನ್ನು ಸಾಬೀತುಪಡಿಸುವ ರಾಜಕೀಯ ನಾಯಕರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಾನು ಹೇಳಿದ್ದೇ ಸತ್ಯ ಎಂದು ವಾದಿಸುವ ಪ್ರತಿಯೊಬ್ಬ ಸುಳ್ಳುಗಾರನೂ ಹೀಗೆ ಆಣೆ ಪ್ರಮಾಣ ಮಾಡಬಹುದು ಏಕೆಂದರೆ ಅಲ್ಲಿ ಮೂಲತಃ ಸತ್ಯದ ಸಮಾಧಿಯಾಗಿಬಿಟ್ಟಿರುತ್ತದೆ.

ಇತ್ತೀಚಿನ ದಿನಗಳಲ್ಲಿ “ ಸತ್ಯಮೇವ ಜಯತೇ” ಘೋಷವಾಕ್ಯದ ತವರು ಮನೆ ಎನ್ನಬಹುದಾದ ನ್ಯಾಯಾಂಗದ ಆವರಣದಲ್ಲೂ ಈ ವಿದ್ಯಮಾನವನ್ನು ಕಾಣುತ್ತಿದ್ದೇವೆ. ಚಾರಿತ್ರಿಕ ಸತ್ಯಗಳನ್ನೂ ಮಿಥ್ಯೆ ಎಂದು ವಾದಿಸುವ ಒಂದು ಬೃಹತ್ ಬೌದ್ಧಿಕ ಸೇನೆಯನ್ನೇ ಸಿದ್ಧಪಡಿಸಿರುವ ಭಾರತದ ಆಳುವ ವರ್ಗಗಳು ಮಿಥ್ಯೆಗೂ ನಿಲುಕದ ಅವಾಸ್ತವಿಕ ವಿದ್ಯಮಾನಗಳನ್ನು ಸತ್ಯದ ಚೌಕಟ್ಟಿನಲ್ಲಿ ಬಂಧಿಸುತ್ತಿವೆ. ಕೆಲವೊಮ್ಮೆ ನ್ಯಾಯಾಂಗವೂ ಇದಕ್ಕೆ ಅವಕಾಶ ನೀಡುತ್ತಿದೆ.

ಕನ್ನಡದ ಸುದ್ದಿಮನೆಗಳಿಗೆ ಈಗ ಇಂತಹ ಒಂದು ಸತ್ಯ ಮತ್ತು ಸುಳ್ಳಿನ ನಡುವಿನ ಕಲಹ ಮಾರುಕಟ್ಟೆಯ ವಸ್ತುವಾಗಿದೆ. ಡ್ರೋನ್ ಪ್ರತಾಪ್ ಎಂದೇ ಹೆಸರಾಗಿರುವ ಒಬ್ಬ ಹುಡುಗನ ವೈಜ್ಞಾನಿಕ ಎನ್ನಲಾಗುವ ಸಾಧನೆ ಮತ್ತು ಸಾಹಸಗಾಥೆಗಳಿಗೆ ಎರಡು ವರ್ಷಗಳ ಹಿಂದೆಯೇ ಅನಗತ್ಯ ಪ್ರಚಾರ ನೀಡಿ, ಅವನನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದ ಸುದ್ದಿಮನೆಗಳು ಈಗ ಅವನ ಡ್ರೋನ್ ಹರಿಕಥೆಯನ್ನು ಪೊಳ್ಳು ಎಂದು ಬಯಲು ಮಾಡಲು ಸಜ್ಜಾಗಿದ್ದು, ಹಂತಹಂತವಾಗಿ ಕಂದಕಕ್ಕೆ ತಳ್ಳುತ್ತಿವೆ. ಪ್ರತಾಪ್ ಡ್ರೋನ್ ಅವಿಷ್ಕಾರ ಮಾಡಿಲ್ಲ, ತನ್ನದೇ ಆದ ಬೌದ್ಧಿಕ ಸಾಮಥ್ರ್ಯ ಬಳಸಿ ಡ್ರೋನ್ ತಯಾರಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ.

ಎರಡು ವರ್ಷಗಳ ಹಿಂದೆ ಅವನ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನೂ ತಿಳಿಯದೆ, ಯಾವುದೇ ಪರಿಶೀಲನೆ ನಡೆಸದೆ, ವಿಜ್ಞಾನ ಸಂಸ್ಥೆಗಳ ದೃಢೀಕರಣ ಪಡೆಯದೆ ಆ ಹುಡುಗನನ್ನು 21ನೆಯ ಶತಮಾನದ ವಿಜ್ಞಾನಿಯಂತೆ ಬಿಂಬಿಸುವ ಅವಶ್ಯಕತೆ ಮಾಧ್ಯಮಗಳಿಗೆ ಇರಲಿಲ್ಲ. ಏಕೆಂದರೆ ಡ್ರೋನ್ ಪ್ರತಾಪ್ ವಿಜ್ಞಾನಿ ಅಲ್ಲ. ಸಂಶೋಧನಾ ವಿದ್ಯಾರ್ಥಿಯೂ ಅಲ್ಲ. ಅವನು ಸಂಶೋಧನೆ ಮಾಡಿದ್ದೇ ಆದಲ್ಲಿ ವಿಜ್ಞಾನ ಸಂಸ್ಥೆಗಳಿಂದ ಪ್ರಮಾಣ ಪತ್ರ ಇರಬೇಕು. ಅವಿಷ್ಕಾರ ಮಾಡಿದ್ದೇ ಆದಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳ ದೃಢೀಕರಣ ಇರಬೇಕು. ಸ್ಥಳೀಯ ವಿಜ್ಞಾನಿಗಳ ಪ್ರಮಾಣೀಕರಣ ಇರಬೇಕು. ಇದಾವುದೂ ಇಲ್ಲದೆಯೇ ಪ್ರತಾಪನ ಪ್ರತಾಪವನ್ನು ಕೊಂಡಾಡಿ ಮೆರೆಸಿದ ನಾಯಕರ ದಂಡೇ ನಮ್ಮ ನಡುವೆ ಇದೆ.

ಎಲ್ಲವನ್ನೂ ಸುದ್ದಿಮನೆಯಲ್ಲೇ ಉತ್ಪಾದಿಸುವ ಒಂದು ಕೆಟ್ಟ ಸಂಪ್ರದಾಯ ನಮ್ಮ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇರುವುದರಿಂದ ಇದಾವುದೂ ಇಲ್ಲದೆಯೇ ಅರಳುವ ಮೊಗ್ಗುಗಳನ್ನು ಹಿಸುಕಿಹಾಕಲಾಗುತ್ತಿದೆ. ಗಾಯಕ ಹನುಮ ಹೀಗೆಯೇ ಸುದ್ದಿಮನೆಗಳ ಒರಳಲ್ಲಿ ರುಬ್ಬಿಸಿಕೊಂಡು ಹೈರಾಣಾಗುತ್ತಿದ್ದಾನೆ. ಈಗ ಡ್ರೋನ್ ಪ್ರತಾಪ್.

ಈ ಹುಡುಗ ಏನೋ ಒಂದು ಸಾಧನೆ ಮಾಡಿರುವುದಾಗಿ ಸಾಬೀತಾದರೆ ಸಂತೋಷ, ಇಲ್ಲವಾದರೆ ಅವನ ಅನಗತ್ಯ ಸಾಹಸ ಮತ್ತು ಸುಳ್ಳುಗಳ ಸರಪಣಿಗೆ ಕಡಿವಾಣ ಹಾಕಲು ಕಾಯ್ದೆ ಕಾನೂನುಗಳಿವೆ. ಏನೇ ಆದರೂ ಇದು ನಮ್ಮ ಸುತ್ತಲಿನ ಸಮಾಜವನ್ನು ಬಾಧಿಸುವ ವಿಚಾರವಲ್ಲ. ವ್ಯಕ್ತಿ ಕೇಂದ್ರಿತ ಪ್ರಹಸನವಾಗಿಯೇ ಉಳಿದುಬಿಡುತ್ತದೆ. ಕೆಲವು ವರ್ಷಗಳ ಹಿಂದೆ ನೀರಿನಿಂದ ಪೆಟ್ರೋಲ್ ಉತ್ಪಾದಿಸುವ ಒಬ್ಬ ಹುಡುಗನ ಬಗ್ಗೆ ಇದೇ ರೀತಿಯ ಸಮರೋತ್ಸಾಹ ಕಂಡುಬಂದಿದ್ದನ್ನು ಸ್ಮರಿಸಬಹುದು.

ಇಲ್ಲಿ ಪ್ರಶ್ನೆ ಇರುವುದು ನಮ್ಮ ಆದ್ಯತೆಗಳ ಬಗ್ಗೆ. ಮತ್ತು ಪ್ರಶ್ನಿಸಲೇಬೇಕು ಎನ್ನುವ ಇಚ್ಛಾಶಕ್ತಿ ನಮ್ಮ ಸುದ್ದಿಮನೆಗಳಿಗೆ ಇದ್ದರೆ, ನಾವು ಪ್ರಶ್ನಿಸಬಹುದಾದ ಸುಳ್ಳುಗಳ ಬಗ್ಗೆ. ಚಕ್ರವರ್ತಿ ಸೂಲಿಬೆಲೆಯಂತಹ ಸುಳ್ಳಿನ ಕಾರ್ಖಾನೆಗಳನ್ನೂ ಪಕ್ಕಕ್ಕಿಡೋಣ. ಏಕೆಂದರೆ ಇವರ ಸುಳ್ಳುಗಳು ಒಂದು ರಾಜಕೀಯ ಕಾರ್ಯಸೂಚಿಯ ಭಾಗ. ಇಂಥವರನ್ನು ರೂಪಿಸುವುದೇ ಸುಳ್ಳನ್ನು ಸತ್ಯ ಎಂದು ನಿರೂಪಿಸಲು.

ಜನಸಾಮಾನ್ಯರ ನಡುವೆ ನೈಜ ಇತಿಹಾಸವನ್ನು ಮರೆಮಾಚಿ ಮಿಥ್ಯೆಯನ್ನು ಸತ್ಯ ಎಂದು ಬಿಂಬಿಸಲು. ಇವೆಲ್ಲಾ ವ್ಯವಸ್ಥಿತವಾಗಿ ಬಿತ್ತಲಾಗುವ ಬೀಜಗಳು. ಇತಿಹಾಸವನ್ನು ಬುಡಮೇಲು ಮಾಡಲು ಇಂತಹ ಸುಳ್ಳುಗಳನ್ನು ಅಸ್ತ್ರದಂತೆ ಬಳಸುವ ಪ್ರವೃತ್ತಿಗೆ ದೀರ್ಘ ಇತಿಹಾಸವೇ ಇದೆ. ಜರ್ಮನಿಯ ಹಿಟ್ಲರ್ ಈ ತಂತ್ರವನ್ನು ಅನುಸರಿಸಿಯೇ ಜಗತ್ತಿನ ಸರ್ವನಾಶಕ್ಕೆ ಮುಂದಾಗಿದ್ದ. ಈ ಗೋಬೆಲ್ಸ್ ತಂತ್ರ ಇಂದಿಗೂ ಜಾರಿಯಲ್ಲಿದೆ.

ಕೋವಿದ್ 19 ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆ ನಮ್ಮ, ಅಂದರೆ ನಾಗರಿಕ ಸಮಾಜದ ಆದ್ಯತೆ ಈ ಪಿಡುಗಿನ ಸುತ್ತ ಹಬ್ಬಿದ, ಹಬ್ಬಿರುವ, ಹಬ್ಬುತ್ತಲೇ ಇರುವ ಸುಳ್ಳುಗಳನ್ನು ಬಯಲು ಮಾಡುವುದಾಗಿರಬೇಕು. ಪ್ರಜಾತಂತ್ರ ವ್ಯವಸ್ಥೆಯ ಮತ್ತು ನಾಗರಿಕ ಸಮಾಜದ ಸಾಕ್ಷಿ ಪ್ರಜ್ಞೆಯಂತೆ ಕಾರ್ಯ ನಿರ್ವಹಿಸಬೇಕಾದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ಸುದ್ದಿಮನೆಗಳು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸತ್ಯಮೇವ ಜಯತೇ ಘೋಷಣೆಯನ್ನು ತಮ್ಮ ಮೂಲಮಂತ್ರದಂತೆ ಬಳಸಬೇಕಿತ್ತು. ದುರಂತ ಎಂದರೆ ಸುಳ್ಳಿನ ಸರದಾರರ ನಿಯಂತ್ರಣದಲ್ಲಿರುವ ಮಾಧ್ಯಮಗಳು, ಸುದ್ದಿಮನೆಗಳು ತಮ್ಮ ಹೊಣೆಗಾರಿಕೆ ಮತ್ತು ನೈತಿಕ ಕರ್ತವ್ಯ, ಆದ್ಯತೆಗಳನ್ನು ಮರೆತಿವೆ.

ಈ ಹಿಂದೆ ಜಗತ್ತು ಎದುರಿಸಿದ ಅತ್ಯಂತ ಕಠಿಣ ಬಿಕ್ಕಟ್ಟುಗಳನ್ನು ಗಮನಿಸಿದಾಗ ಆರೋಗ್ಯ ಸಮಸ್ಯೆಗಳಾದ ಎಬೊಲಾರ್, ಹೆಚ್‍ಐವಿ-ಏಡ್ಸ್ ಮತ್ತು ನೈಸರ್ಗಿಕ ವಿಕೋಪಗಳಾದ ಬರಗಾಲ, ಕ್ಷಾಮ ಎದುರಾದಾಗಲೆಲ್ಲಾ ಮಾಧ್ಯಮಗಳ ಪಾತ್ರ ನಿರ್ಣಾಯಕವಾಗಿದ್ದುದನ್ನು ಸ್ಮರಿಸಬೇಕು. 1943ರ ಬಂಗಾಲದ ಭೀಕರ ಕ್ಷಾಮದ ಸಂದರ್ಭದಲ್ಲಿ ಪ್ರಜಾತಂತ್ರದ ಕಾವಲುಗಾರರು ಎಂದೇ ಪರಿಗಣಿಸಲಾಗುವ ಸ್ವತಂತ್ರ ಮಾಧ್ಯಮಗಳು, ನ್ಯಾಯಾಂಗ ಮತ್ತು ಸಾಮಾಜಿಕ ಆಂದೊಲನಗಳು ಸಕ್ರಿಯವಾಗಿದ್ದುದನ್ನು ಇತಿಹಾಸದಲ್ಲಿ ಗಮನಿಸಬಹುದು. ಇದೇ ತತ್ವವನ್ನು ಖ್ಯಾತ ಅರ್ಥಶಾಸ್ತ್ರಜ್ಞ ಅಮಾತ್ರ್ಯ ಸೆನ್ ಸಹ ಪ್ರತಿಪಾದಿಸುತ್ತಾರೆ. ಆದರೆ ಇಂದು ಮಾಧ್ಯಮಗಳು ಅಧಿಕಾರಸ್ಥರ ತುತ್ತೂರಿಗಳಂತೆ ಕಾರ್ಯ ನಿರ್ವಹಿಸುತ್ತಿವೆ.

ಡ್ರೋನ್ ಪ್ರತಾಪನ ಸುಳ್ಳುಗಳನ್ನು ಬೆನ್ನಟ್ಟುವುದರ ಬದಲು ನಮ್ಮ ಸುದ್ದಿಮನೆಗಳು ತಾವೇ ಸೃಷ್ಟಿಸಿದ ಸುಳ್ಳುಗಳನ್ನು ಬೆನ್ನಟ್ಟಿದರೆ ಕೊರೋನಾ ಬಿಕ್ಕಟ್ಟಿನ ಉಲ್ಬಣಕ್ಕೆ ಮೂಲ ಕಾರಣಗಳು ದೊರೆಯುತ್ತವೆ. ಎರಡು ತಿಂಗಳ ಕಾಲ ನಮ್ಮ ಸುತ್ತಲಿನ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಗಳ ಬಗ್ಗೆ ಸೊಲ್ಲೆತ್ತದೆ, ಆಳುವ ವರ್ಗಗಳನ್ನು ಸಂತೃಪ್ತಿಪಡಿಸುವುದರಲ್ಲಿ ತೊಡಗಿದ್ದ ಸುದ್ದಿಮನೆಗಳಿಗೆ ಈಗ ಜ್ಞಾನೋದಯವಾದಂತಿದೆ.

ಆದರೆ ಆಸ್ಪತ್ರೆ, ಹಾಸಿಗೆಗಳು, ಔಷಧಿ, ವೈದ್ಯರು ಈ ಎಲ್ಲ ಕೊರತೆಗಳು ಲಾಕ್ ಡೌನ್ ಸಡಿಲಿಕೆಯ ನಂತರ ಸೃಷ್ಟಿಯಾದದ್ದಲ್ಲ ಅಲ್ಲವೇ ? ಪಾದರಾಯನ ಪುರದ ಧೂಳಿನಲ್ಲಿ, ತಬ್ಲೀಗಿಗಳ ಛಾಯೆಯಲ್ಲಿ, ಜಮಾತಿಗಳ ಆವರಣದಲ್ಲಿ, ಹೊಂಗಸಂದ್ರದ ಅಂಗಳದಲ್ಲಿ, ವಲಸೆ ಬಾಂಬುಗಳ ಸಂಗ್ರಹಾಲಯಗಳಲ್ಲಿ ತಮ್ಮ ಪ್ರಜ್ಞೆಯನ್ನೇ ಒತ್ತೆ ಇಟ್ಟು ಕರ್ತವ್ಯಪ್ರಜ್ಞೆಯನ್ನೇ ಮರೆತ ಸುದ್ದಿಮನೆಗಳಿಗೆ ಡ್ರೋನ್ ಪ್ರತಾಪನ ಸುಳ್ಳು ನಿತ್ಯ ಸುದ್ದಿಯಂತೆ , ರೋಚಕವಾಗಿ ಕಾಣುವುದು ದುರಂತ.

ಕಳೆದ ಆರು ವರ್ಷಗಳ ರಾಜಕೀಯ ಬೆಳವಣಿಗೆಗಳಲ್ಲಿ ಕಂಡಿರುವ ಸುಳ್ಳುಗಳನ್ನು ಪೋಣಿಸುತ್ತಾ ಹೋದರೆ ಇಡೀ ದೇಶವನ್ನು ಒಮ್ಮೆ ಸುತ್ತುಹಾಕಬಹುದು. ಆದರೆ ಈ ಸುಳ್ಳುಗಳನ್ನು ಪ್ರಶ್ನಿಸುವ ನೈತಿಕತೆಯನ್ನು ಮಾಧ್ಯಮ ಲೋಕ ಕಳೆದುಕೊಂಡಿದೆ. ಸ್ವಿಸ್ ಬ್ಯಾಂಕಿನಲ್ಲಿರುವ ಅಕ್ರಮ ಹಣವನ್ನು ನೂರು ದಿನದೊಳಗೆ ಭಾರತಕ್ಕೆ ತರುವ ಒಂದು ಭರವಸೆ ಭ್ರಷ್ಟಾಚಾರ ವಿರೋಧಿ ಆಂದೋಲನದ ರಣಕಹಳೆಯಂತೆ ಕಂಡಿತ್ತು.

ಭಾರತದ ಕಾರ್ಪೋರೇಟ್ ವಲಯದ ಈ ಅಕ್ರಮ ಸಂಪತ್ತು ಇಂದಿಗೂ ಸುಭದ್ರವಾಗಿದೆ. ನೋಟು ರದ್ದತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸೆದ ಸುಳ್ಳುಗಳಿಗೆ ತಮ್ಮದೇ ಆದ ವ್ಯಾಖ್ಯಾನ ನೀಡುತ್ತಾ , ದೇಶದ ಆರ್ಥಿಕತೆ ಅಧೋಗತಿಗಿಳಿಯುತ್ತಿದ್ದರೂ ಗಮನಿಸದೆ ಹೋದ ಸುದ್ದಿಮನೆಗಳಿಗೆ, ಡ್ರೋನ್ ಪ್ರತಾಪ್ ಏಕೆ ಮಹಾ ಸುಳ್ಳನಂತೆ ಕಾಣಬೇಕು ?

ನೋಟು ರದ್ದತಿಯಿಂದ ದೇಶದಲ್ಲಿ ಕಪ್ಪುಹಣ ಇಲ್ಲವಾಗುತ್ತದೆ, ನಕಲಿ ನೋಟುಗಳ ದಂಧೆ ಸಂಪೂರ್ಣ ನಾಶವಾಗುತ್ತದೆ, ನಕ್ಸಲ್ ಚಟುವಟಿಕೆಗೆ ಅಕ್ರಮ ಹಣ ಪೂರೈಕೆ ಸ್ಥಗಿತಗೊಳ್ಳುತ್ತದೆ, ಭಯೋತ್ಪಾದನೆ ನಿಯಂತ್ರಣಕ್ಕೆ ಬರುತ್ತದೆ ಹೀಗೆ ಹತ್ತು ಹಲವಾರು ಸುಳ್ಳು ಆಶ್ವಾಸನೆಗಳನ್ನು ನೀಡಿ ದೇಶದ ಆರ್ಥಿಕತೆಯನ್ನು ಅಧೋಗತಿಗೆ ತಂದಿಟ್ಟ ಸರ್ಕಾರದ ಎಲ್ಲ ಸುಳ್ಳುಗಳೂ ಸುದ್ದಿಮನೆಗಳಿಗೆ ಸಂಭಾವ್ಯ ದಿಗ್ವಿಜಯದ ಸಂಕೇತದಂತೆ ಕಂಡಿದ್ದವು.

ಈ ಪೊಳ್ಳು ಭರವಸೆಗಳನ್ನು ಬಯಲು ಮಾಡುವ ನೈತಿಕತೆಯನ್ನೂ ಕಳೆದುಕೊಂಡಿದ್ದ ಮಾಧ್ಯಮಗಳು, ಇದರ ವಿರುದ್ಧ ಮಾತನಾಡಿದವರನ್ನು ದೇಶದ್ರೋಹಿಗಳಂತೆ ಬಿಂಬಿಸಿದ್ದವು. ನೋಟು ರದ್ದತಿಯ ಹಿಂದಿನ ತಾತ್ವಿಕ ನೆಲೆಗಳನ್ನು ಪ್ರಶ್ನಿಸಿದ ಖ್ಯಾತ ಅರ್ಥಶಾಸ್ತ್ರಜ್ಞರು, ಸುಳ್ಳಿನ ಸರದಾರರ ನಡುವೆ ನಿರ್ಲಕ್ಷ್ಯಕ್ಕೊಳಗಾದರು, ಮಾಧ್ಯಮಗಳ ಕೃಪೆಯಿಂದ.

ಅಧಿಕಾರದ ಗದ್ದುಗೆ ಹಿಡಿಯಲು ರಾಜಕೀಯ ನಾಯಕರು ಸುಳ್ಳಿನ ಸರಮಾಲೆಯನ್ನು ಪೋಣಿಸುವುದು ಹೊಸತೇನಲ್ಲ, ಆದರೆ ಹಿಂದೆಲ್ಲಾ ಮಾಧ್ಯಮಗಳು ಈ ಸುಳ್ಳುಗಳನ್ನು ಭೇದಿಸಿ ಜನತೆಯ ಮುಂದೆ ಸತ್ಯಾಂಶವನ್ನು ಮಂಡಿಸುತ್ತಿದ್ದವು. ಆದರೆ 21ನೆಯ ಶತಮಾನದ ಮಾಧ್ಯಮಗಳು ಜನಸಾಮಾನ್ಯರಿಂದ ಸತ್ಯಾಂಶವನ್ನು ಮರೆಮಾಚಿ, ಆಳುವ ವರ್ಗಗಳ ಸುಳ್ಳುಗಳನ್ನು ಮೆರೆಸುತ್ತಿವೆ. ಕಳೆದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬಲಿಯಾದ 59 ಯೋಧರ ಹತ್ಯೆಗೆ ಕಾರಣವೇನು ? ಈ ದಾಳಿಯ ರೂವಾರಿಗಳು ಯಾರು ? ಪ್ರತೀಕಾರದ ಕ್ರಮವಾಗಿ ಭಾರತ ಬಾಲಕೋಟ್‍ನಲ್ಲಿ ನಡೆಸಿದ ದಾಳಿಯಲ್ಲಿ ಮೃತಪಟ್ಟವರೆಷ್ಟು ? ಇದರ ಸತ್ಯಾಸತ್ಯತೆಗಳೇನು ?

ಈ ಪ್ರಶ್ನೆಗಳಿಗೆ ಉತ್ತರ ಶೋಧಿಸುವುದು ಸುದ್ದಿಮನೆಗಳ ನೈತಿಕ ಜವಾಬ್ದಾರಿಯಲ್ಲವೇ ? ಸರ್ಕಾರ ಸುಳ್ಳು ಹೇಳುತ್ತಿಲ್ಲ ಎಂದಾದರೆ ಸತ್ಯಾಂಶವೇನು ? ಸತ್ಯಾಂಶ ಹೊರಬರುವವರೆಗೂ ಯಾವುದೇ ವಿದ್ಯಮಾನವಾದರೂ ಅರ್ಧಸತ್ಯವಾಗಿಯೇ ಉಳಿಯುತ್ತದೆ ಅಲ್ಲವೇ ? ಇದನ್ನು ಪ್ರಶ್ನಿಸುವ ವ್ಯವಧಾನವನ್ನೇ ಕಳೆದುಕೊಂಡಿರುವ ಮಾಧ್ಯಮಗಳಿಗೆ, ಸುದ್ದಿಮನೆಗಳಿಗೆ ಡ್ರೋನ್ ಪ್ರತಾಪ್ ಎಂಬ ಹುಡುಗನನ್ನು ಗಂಟೆಗಟ್ಟಲೆ ಪ್ರಶ್ನಿಸುವ ನೈತಿಕ ಹಕ್ಕು ಇದೆಯೇ ? ದೇಶಭಕ್ತಿ-ದೇಶದ್ರೋಹದ ಸಮೂಹ ಸನ್ನಿ ಸೃಷ್ಟಿಯಾಗುವುದೇ ಸತ್ಯದ ಸಮಾಧಿಯ ಮೇಲೆ, ಸುಳ್ಳಿನ ಬೇಲಿಗಳ ಒಳಗೆ ಎನ್ನುವ ಸತ್ಯ ಸುದ್ದಿಮನೆಗಳಿಗೆ ತಿಳಿದಿಲ್ಲವೇ ?

ರಾಜಕಾರಣ ಒತ್ತಟ್ಟಿಗಿರಲಿ, ಕಳೆದ ಮೂರು ದಶಕಗಳಲ್ಲಿ ವಿದ್ಯುನ್ಮಾನ ಮಾಧ್ಯಮ ಒಂದು ಸ್ಪಷ್ಟ ನೆಲೆ ಪಡೆದುಕೊಂಡ ನಂತರ ಎಷ್ಟು ಸುಳ್ಳುಗಳನ್ನು ಬಯಲಿಗೆಳೆದಿವೆ. ತಮ್ಮ ಸಿದ್ಧಿ ಸಮಾಧಿ ಯೋಗದ ಮೂಲಕ 2010ರ ವೇಳೆಗೆ ಇಡೀ ವಿಶ್ವವನ್ನೇ ರೋಗಮುಕ್ತವನ್ನಾಗಿ ಮಾಡುವ ತ್ರಿಬಲ್ ಶ್ರೀ ರವಿಶಂಕರ್ ಹಲವರ ಪಾಲಿಗೆ ಸೀದಾ ಸಮಾಧಿ ಯೋಗ ದಯಪಾಲಿಸಿದ್ದರಲ್ಲವೇ ? ತಮ್ಮ ರೀಕೀ ಚಿಕಿತ್ಸೆಯ ಮೂಲಕ ಸರ್ವ ರೋಗಗಳನ್ನೂ ಗುಣಪಡಿಸುವ ಸುಳ್ಳು ಆಶ್ವಾಸನೆ ನೀಡಿದ್ದರಲ್ಲವೇ ? ಬಾಬಾ ರಾಮ್‍ದೇವ್ ಇದೇ ರೀತಿಯ ಸುಳ್ಳು ಪ್ರಚಾರ ಗಿಟ್ಟಿಸಿ ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿಯಾಗಲಿಲ್ಲವೇ ? ಇಂತಹ ಢೋಂಗಿಗಳ ಎಷ್ಟು ಸುಳ್ಳುಗಳನ್ನು ಸುದ್ದಿಮನೆಗಳು ಬಯಲಿಗೆಳೆದಿವೆ ?

ಬದಲಾಗಿ ಇಂದು ಪ್ರತಿನಿತ್ಯ ಮುಂಜಾನೆ ಸುಳ್ಳಿನ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕುವುದರಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸುದ್ದಿಮನೆಗಳು ನಿರತರಾಗಿವೆ. ಅಸಂಖ್ಯಾತ ಗುರೂಜಿಗಳು, ಜ್ಯೋತಿಷಿಗಳು, ಹರ್ಬಲ್ ಔಷಧಿಗಳ ತಯಾರಕರು, ಅಧ್ಯಾತ್ಮ ಗುರುಗಳು ತಮ್ಮ ಸುಳ್ಳು ಭರವಸೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಕೊರೋನಾ ಮೇ 15ಕ್ಕೆ ಅಂತ್ಯವಾಗುತ್ತದೆ ಎಂದು ಜಗತ್ತಿಗೇ ತಿಳಿಯುವಂತೆ ಸಾರಿ ಸಾರಿ ಹೇಳಿದ ವಿನಯ್ ಕುಮಾರ್ ಎಂಬ ಢೋಂಗಿ ಜ್ಯೋತಿಷಿ ಮತ್ತು ಒಬ್ಬ ಯಕಶ್ಚಿತ್ ಬಾಲಕ ಸುದ್ದಿಮನೆಗಳಲ್ಲಿ ರಾರಾಜಿಸಿಬಿಟ್ಟರಲ್ಲವೇ ? ಇಂದಿಗೂ ಸಹ ಕೊರೋನಾ ಹೋಗಲಾಡಿಸುವ ಸಂಜೀವಿನಿಗಳ ಸುಳ್ಳು ಸುದ್ದಿಗಳು ಪ್ರಸಾರವಾಗುತ್ತಲೇ ಇವೆ.

ಮತ್ತೊಂದೆಡೆ ಚೀನಾ ಕುರಿತ ಸುಳ್ಳು ಸುದ್ದಿಗಳೂ ಪ್ರಸಾರವಾಗುತ್ತಲೇ ಇವೆ. ಗಡಿ ಪ್ರದೇಶದಲ್ಲಿ ಸಂಘರ್ಷ ಕೊನೆಯಾಗುತ್ತಿದೆ. ಮಾತುಕತೆಗಳ ಮೂಲಕ ಶಾಂತಿ ಕಾಪಾಡಲಾಗುತ್ತಿದೆ. ಪರಸ್ಪರ ಒಪ್ಪಿಗೆಯ ಮೇಲೆ ಉಭಯ ದೇಶಗಳ ಸೇನೆಗಳು ಹಿಂದೆ ಸರಿಯುತ್ತಿವೆ. ಆದರೂ ನಮ್ಮ ಸುದ್ದಿಮನೆಗಳಲ್ಲಿ ಪ್ರಧಾನಿ ಮೋದಿ ಚೀನಾವನ್ನು ಉಡೀಸ್, ಮಟಾಷ್, ಖಲಾಸ್ ಮಾಡುತ್ತಲೇ ಇದ್ದಾರೆ. ಗಡಿಯಲ್ಲಿನ ವಾಸ್ತವ ಸುದ್ದಿಗಳನ್ನು ಬಿತ್ತರಿಸಲೂ ಸಾಧ್ಯವಾಗದ ಸುದ್ದಿಮನೆಗಳು ಸುಳ್ಳುಗಳನ್ನು ಪ್ರಸಾರ ಮಾಡುವುದರ ಮೂಲಕ ಒಂದೆಡೆ ಸ್ವಾಮಿನಿಷ್ಠೆಯನ್ನು ಮೆರೆಯುವ ಸುದ್ದಿಮನೆಗಳು ಮತ್ತೊಂದೆಡೆ ಮಾರುಕಟ್ಟೆಗೂ ಸ್ಪಂದಿಸುತ್ತಿವೆ, ಟಿ ಆರ್ ಪಿಯನ್ನೂ ಹೆಚ್ಚಿಸಿಕೊಳ್ಳುತ್ತಿವೆ.

ಕೋವಿದ್ 19 ಬಿಕ್ಕಟ್ಟಿನ ನಡುವೆ ರಾಜ್ಯ ಸರ್ಕಾರ, ಸಚಿವರು, ಅಧಿಕಾರಶಾಹಿ ಹೇಳುತ್ತಿರುವ ಸುಳ್ಳುಗಳ ಬಗ್ಗೆ ಸೊಲ್ಲೆತ್ತದ ಮಾಧ್ಯಮಗಳಿಗೆ ಒಂದು ಡ್ರೋನ್ ತಯಾರಿಸಿದ್ದಾಗಿ ಸುಳ್ಳು ಹೇಳಿರುವ ಡ್ರೋನ್ ಪ್ರತಾಪ್ ಮಹಾ ದ್ರೋಹಿಯಂತೆ ಕಾಣುತ್ತಿರುವುದು, ಮಾಧ್ಯಮ ಲೋಕದ ನೈತಿಕ ಅಧಃಪತನಕ್ಕೆ ಕನ್ನಡಿ ಹಿಡಿದಂತಿದೆ. ಡ್ರೋನ್ ಪ್ರತಾಪ್ ಸುಳ್ಳು ಹೇಳಿದ್ದರೆ ಶಿಕ್ಷಿಸಲು ಕಾಯ್ದೆ ಕಾನೂನು ಇದೆ. ಈ ಒಂದು ಸುಳ್ಳಿನಿಂದ ಆ ಹುಡುಗನ ವೈಯಕ್ತಿಕ ಪ್ರತಿಷ್ಠೆಗೆ ಧಕ್ಕೆ ಉಂಟಾಗಬಹುದಷ್ಟೇ. ಆದರೆ ಸರ್ಕಾರಗಳು, ಸಚಿವರು ಹೇಳುತ್ತಿರುವ ಸುಳ್ಳುಗಳಿಗೆ ಸಾವಿರಾರು ಜನರು ಬಲಿಯಾಗುತ್ತಿದ್ದಾರೆ. ಇದು ಸುದ್ದಿಮನೆಗಳಿಗೆ ಕಾಣುತ್ತಿಲ್ಲ. ಆದರೂ ಸತ್ಯಮೇವ ಜಯತೇ ಮಂತ್ರವನ್ನು ಮರೆತಿಲ್ಲ.

ಕೋವಿದ್ 19 ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಆಳುವ ವರ್ಗಗಳು ಸತ್ಯದ ಸಮಾಧಿಯನ್ನು ನಿರ್ಮಿಸಿ ಸುಳ್ಳಿನ ಸಾಮ್ರಾಜ್ಯವನ್ನು ಕಟ್ಟುತ್ತಿದ್ದಾರೆ. ಈ ಸುಳ್ಳುಗಳನ್ನು ಜನತೆಯ ಮುಂದಿಡುವುದು, ಸತ್ಯಾಂಶವನ್ನು ಬಿಂಬಿಸುವುದು ಸುದ್ದಿಮನೆಗಳ ಆದ್ಯತೆಯಾಗಬೇಕು. ಡ್ರೋನ್ ಪ್ರತಾಪ್ ಸಮಾಜ ಘಾತುಕನಲ್ಲ. ಪ್ರಶಸ್ತಿ, ಸಮ್ಮಾನದ ಮಾಯಾಜಿಂಕೆಯನ್ನು ಹಿಂಬಾಲಿಸಿ ಹೋದ ಪ್ರತಾಪ ಸಮಾಜದ ದೃಷ್ಟಿಯಲ್ಲಿ ಸಣ್ಣ ಅಪರಾಧಿಯಷ್ಟೆ. ಇವನನ್ನು ಸ್ಟುಡಿಯೋದಲ್ಲಿ ಗಂಟೆಗಳ ಕಾಲ ಕೂರಿಸಿ ಚಿತ್ರಹಿಂಸೆ ನೀಡುವ ಬದಲು, ಅಧಿಕಾರ ಕೇಂದ್ರಗಳಲ್ಲಿದ್ದುಕೊಂಡು ತಮ್ಮ ಸುಳ್ಳಿನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವ ಸುಳ್ಳಿನ ಸರದಾರರನ್ನು ಪ್ರಶ್ನಿಸುವ ವಿವೇಚನೆ, ವಿವೇಕ ಮತ್ತು ಬದ್ಧತೆ ಸುದ್ದಿಮನೆಗಳಿಗೆ ಇದ್ದರೆ ಸಾರ್ಥಕವಾದೀತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಯಶಸ್ವಿ ಬೃಹತ್ ಉದ್ಯೋಗ ಮೇಳಕ್ಕೆ ಕ್ರಮವಹಿಸಿ: ಡಿಸಿ ಗಂಗಾಧರ್ ಸ್ವಾಮಿ

Published

on

ಸುದ್ದಿದಿನ,ದಾವಣಗೆರೆ:ನಗರದ ಎಂಸಿಸಿ ಬ್ಲಾಕ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆಬ್ರವರಿ 23 ರಂದು ಉದ್ಯೋಗ ಮೇಳ ನಡೆಯಲಿದೆ, ಮೇಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ತಿಳಿಸಿದರು .

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು .

ಬೃಹತ್ ಉದ್ಯೋಗ ಮೇಳಕ್ಕಾಗಿ ಈಗಾಗಲೇ ಪೋರ್ಟಲ್ ಮೂಲಕ ನೋಂದಣಿ ಆರಂಭವಾಗಿದ್ದು, 45ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಿಕೊಂಡಿವೆ. ಇನ್ನು ಸುಮಾರು 20 ಕಂಪನಿಗಳು ಬರುವ ಸಾಧ್ಯತೆ ಇದೇ, ಇದರಲ್ಲಿ ಐಟಿ, ಮಾಸ್ಟರ್ ಡಿಗ್ರಿ, ಐಟಿಐ ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿ ಅಭ್ಯರ್ಥಿಗಳಿಗೆ ಐಟಿ ವಲಯ ಬ್ಯಾಂಕ್ ಕ್ಷೇತ್ರ, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಫಾರ್ಮಸಿಟಿಕಲ್ ಸೇರಿದಂತೆ ಇನ್ನು ಅನೇಕ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ನೀಡುವ ವಿವಿಧ ಕಂಪನಿಗಳು ಸೇರಿವೆ. ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಕಾಲೇಜುಗಳಿಗೆ ಪತ್ರ ವ್ಯವಹಾರ ಮಾಡಿದ್ದು ಪ್ಲೇಸ್‌ಮೆಂಟ್ ಆಫೀಸರ್‌ಗಳ ಭೇಟಿ ಮಾಡಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ, ಪೋಸ್ಟರ್‌ಗಳು, ಜಿಂಗಲ್ಸ್ ಮತ್ತು ಸ್ವಚ್ಛ ಭಾರತ್ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಮಾಡಲು ಕೈಗೊಳ್ಳಬೇಕು, ಸುಮಾರು 4,000 ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಸಾಧ್ಯತೆ ಇದೆ, ಆದುದರಿಂದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು,
ವಿದ್ಯಾರ್ಥಿಗಳಿಗೆ ಲಘು ಉಪಹಾರ, ನೀರು, ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ವ್ಯವಸ್ಥೆ, ವಿಶೇಷ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಸುಮಾರು 1,200 ಅಭ್ಯರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಗೆ ಸಚಿವರು, ಗಣ್ಯರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೃಹತ್ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಯೋಜನಾ ನಿರ್ದೇಶಕ ಮಹಾಂತೇಶ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ‍್ವಾಮಿ.ಜಿ.ಎಂ.ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending