ದಿನದ ಸುದ್ದಿ
ಅಂತಾರಾಷ್ಟ್ರೀಯ, ನವೋದಯ ಮಟ್ಟದ ಉತ್ಕೃಷ್ಟ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗಬೇಕು: ಜಿ. ಬಿ. ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ:ಅಂತಾರಾಷ್ಟ್ರೀಯ, ನವೋದಯ ಶಾಲೆಗಳಲ್ಲಿ ಸಿಗುವಂಥ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗುವಂತಾಗಬೇಕು ಎಂಬ ದೊಡ್ಡ ಕನಸು ಹೊಂದಿದ್ದೇನೆ. ಇದಕ್ಕಾಗಿ ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಆಶಯ ವ್ಯಕ್ತಪಡಿಸಿದರು.
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದಲ್ಲಿ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಗಳು ಮೇಲ್ದರ್ಜೆಗೇರಬೇಕು. ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ಕೃಷ್ಟದ ಶಿಕ್ಷಣ ಸಿಗಬೇಕು ಎಂದು ಹೇಳಿದರು.
ಉನ್ನತ ಸ್ಥಾನಕ್ಕೆ ಹೋಗಬೇಕೆಂಬುದು ಪ್ರತಿಷ್ಠೆಯ ವಿಚಾರ ಅಲ್ಲ. ದೊಡ್ಡಮಟ್ಟದಲ್ಲಿ ಜನರಿಗೆ ಸೇವೆ ಮಾಡಲು. ಕರ್ನಾಟಕದಲ್ಲಿ ಇನ್ ಸೈಟ್ಸ್ ಸಂಸ್ಥೆಯ ಆರು ವಿದ್ಯಾರ್ಥಿಗಳು ಡಿಸಿ, ಸಿಇಒ ಆಗಿದ್ದಾರೆ. ಎಸ್ಪಿ, ಎಎಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಗೆ ಐಎಎಸ್, ಐಪಿಎಸ್ ತಯಾರಿಸುವ ಶಕ್ತಿ ಇದೆ. ಜೀವನ ಸಾರ್ಥಕಗೊಳಿಸಬೇಕಾದರೆ ಉನ್ನತ ಸ್ಥಾನಕ್ಕೆ ಹೋಗಬೇಕು. ಇದಕ್ಕೆ ಸತತ ಪರಿಶ್ರಮ, ಅಧ್ಯಯನ, ಪುಸ್ತಕ ಓದುವ ಹವ್ಯಾಸ, ಸಂಸ್ಕಾರ ಬೇಕು ಎಂದು ಕಿವಿಮಾತು ಹೇಳಿದರು.
ಪೋಷಕರು ಯಾವುದೇ ಕಾರಣಕ್ಕೂ ಮನೆಯಲ್ಲಿನ ಸಮಸ್ಯೆಗಳ ಬಗ್ಗೆ ಮಕ್ಕಳ ಹೇಳಬೇಡಿ. ಬಡತನವಿದೆ, ಹಣವಿಲ್ಲ ಎನ್ನಬೇಡಿ. ಸಾಧ್ಯವಾದಷ್ಟು ಒಳ್ಳೆಯ ಶಿಕ್ಷಣ ನೀಡುವ ಕಡೆಗೆ ಗಮನ ಕೊಡಿ. ಪಠ್ಯ ಶಿಕ್ಷಣ ಮಾತ್ರವಲ್ಲ, ಪಠ್ಯೇತರ ಶಿಕ್ಷಣದತ್ತಲೂ ಕಾಳಜಿ ವಹಿಸಿ. ಪುಸ್ತಕ ಓದುವ ಹವ್ಯಾಸ ನೀವೂ ಬೆಳೆಸಿಕೊಳ್ಳಿ. ಮಕ್ಕಳಲ್ಲಿಯೂ ರೂಢಿಸಿ. ಆಗ ಭಾರೀ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ನಾನು ಹತ್ತನೇ ತರಗತಿಯವರೆಗೆ ಸಾಮಾನ್ಯ ವಿದ್ಯಾರ್ಥಿ. ಐಎಎಸ್ ಎರಡು ಅಂಕಗಳಲ್ಲಿ ತಪ್ಪಿ ಹೋಯಿತು. ಪಿಡಿಒ ಆಗಿದ್ದೆ, ಕೆಎಎಸ್ ಪಾಸಾಗಿದ್ದೆ. ಸೋತಾಗ ಸುಮ್ಮನೆ ಕೂರುತ್ತಿರಲಿಲ್ಲ. ದೊಡ್ಡ ಪ್ರಯತ್ನ ಮಾಡುತ್ತಿದೆ. ಸೋತಾಗ ಕೆಲವರು ಸುಮ್ಮನಾಗಿಬಿಡುತ್ತಾರೆ. ಆದ್ರೆ, ಸುಮ್ಮನಾಗದೇ ದೊಡ್ಡ ಕನಸು ಕಾಣಬೇಕು. ಆಗ ಜೀವನದಲ್ಲಿ ಅಂದುಕೊಂಡಿದ್ದನ್ನು
ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಮಕ್ಕಳಿಗೆ ಬೈಯ್ಯಬೇಡಿ. ಜೀವನದಲ್ಲಿ ಸವಾಲು ಎದುರಿಸುವ ಗುಣ ಬೆಳೆಸಿ. ಭವಿಷ್ಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಅವರಲ್ಲಿ ಬರುತ್ತದೆ. ಪ್ರತಿಯೊಬ್ಬರೂ ಮೊದಲ ಪ್ರಯತ್ನದಲ್ಲಿ ಯಶಸ್ವಿ ಆಗುವುದು ಕಡಿಮೆ. ಸೋತಾಗ ಧೈರ್ಯ ತುಂಬಿ. ಮರಳಿ ಪ್ರಯತ್ನವ ಮಾಡು ಎಂಬ ಧೈರ್ಯ ಹೇಳಿ. ಡಾಕ್ಟರ್, ಎಂಜಿನಿಯರ್ ಆಗಿ ಎಂಬ ಒತ್ತಡ ಹೇರಬೇಡಿ. ಒಳ್ಳೆಯ ವ್ಯಕ್ತಿಯಾಗು, ಒಳ್ಳೆಯ ಮಾನವನಾಗು ಎಂಬ ಸಂದೇಶ ಹೇಳಿಕೊಡಿ. ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಮೂಡಿಸಿದರೆ ಭವಿಷ್ಯದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರು ಹಲವು ಸಮಸ್ಯೆಗಳಿದ್ದು, ಮನವಿ ನೀಡಿದ್ದಾರೆ. ಶಾಲೆಗೆ ಸುಣ್ಣಬಣ್ಣ ಬಳಿಸುವುದು, ಸ್ಮಾರ್ಟ್ ಕ್ಲಾಸ್, ಧ್ವನಿವರ್ಧಕ ಬದಲಾವಣೆ, ಆಟದ ಮೈದಾನ ಸೇರಿದಂತೆ ಇತರೆ ಬೇಡಿಕೆ ನೀಡಿದ್ದಾರೆ. ನಾನು ಎರಡು ಪ್ರಮುಖ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ಆದಷ್ಟು ಬೇಗ ಈಡೇರಿಸುತ್ತೇನೆ. ಮಕ್ಕಳಿಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ. ಮಕ್ಕಳು ದೊಡ್ಡ ಕನಸು ಕಾಣುವುದನ್ನು ರೂಢಿಸಿಕೊಳ್ಳಬೇಕು. ಕಕ್ಕರಗೊಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವುದೇ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ವಾರ್ಷಿಕೋತ್ಸವ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಮಕ್ಕಳೂ ಚಿಕ್ಕ ವಯಸ್ಸಿನಿಂದಲೇ ಐಎಎಸ್, ಐಪಿಎಸ್, ದೊಡ್ಡ ಉದ್ಯಮಿಗಳಾಗುತ್ತೇವೆ ಎಂಬ ಕನಸು ಕಂಡರೆ ಮುಂದೊಂದು ದಿನ ನನಸಾಗುವ ಸಮಯ ಬರುತ್ತದೆ. ಇಂದಿನಿಂದಲೇ ದೃಢ ನಿಶ್ಚಯ ಮಾಡಿಕೊಳ್ಳಿ. ಸತತವಾಗಿ ಪ್ರಯತ್ನ ಮಾಡಿ. ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡು ಹೆಚ್ಚಾಗಿ ಪುಸ್ತಕ ಅಧ್ಯಯನ ಮಾಡಿದರೆ ಕಷ್ಟವಾಗದು ಎಂದು ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ಆವರಗೊಳ್ಳದ ಪುರವರ್ಗ ಹಿರೇಮಠ ಶ್ರೀಕ್ಷೇತ್ರದ ಶ್ರೀ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಲೋಕೇಶ್ ಒಡೆಯರ್, ಕೆ. ಜಿ. ಶಾಂತರಾಜ್, ಪುಷ್ಪ ಕೆ. ಎನ್. ಸದಾಶಿವಪ್ಪ, ಆಶಾ ಸಿದ್ದೇಶ್, ಗುತ್ಯಪ್ಪ, ಆರ್. ಡಿ. ಕುಲಕರ್ಣಿ, ಹದಡಿ ಯಲ್ಲಪ್ಪ, ಹಂಪನೂರು ಪಾಲಾಕ್ಷಪ್ಪ, ಅಂಗಡಿ ಚಮನ್ ಸಾಬ್, ಮುಸ್ತು ಎಸ್. ಮತ್ತಿತರರು ಹಾಜರಿದ್ದರು.
ಸೋತಿದ್ದೇನೆ, ಧೃತಿಗೆಟ್ಟಿಲ್ಲ
ಲೋಕಸಭೆ ಚುನಾವಣೆಯಲ್ಲಿ ಸೋತಿರಬಹುದು. ಹಾಗೆಂದ ಮಾತ್ರಕ್ಕೆ ಧೃತಿಗೆಟ್ಟಿಲ್ಲ. ಮುಂದೊಂದು ದಿನ ಎಂಎಲ್ ಆ ಆಗಬಹುದು. ಸಚಿವರಾಗಬಹುದು. ಆಗುತ್ತೋ ಇಲ್ಲವೋ ಗೊತ್ತಿಲ್ಲ. ಇದು ಸಾಧ್ಯವಾಗುತ್ತದೆ ಎಂಬ ಆತ್ಮವಿಶ್ವಾಸ ಇದೆ. ಶಿಕ್ಷಣ ಸಚಿವರಾಗಬೇಕೆಂಬ ಆಸೆ ಇದೆ. ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸುದ್ದಿದಿನಡೆಸ್ಕ್: 2024-25ನೇ ಸಾಲಿನ ರಾಜ್ಯ ಮುಂಗಡ ಪತ್ರ ಹಿನ್ನೆಲೆಯಲ್ಲಿ ರೈತ ಸಂಘಗಳ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿಂದು ಸಭೆ ನಡೆಸಿದರು.ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಮುಂಗಡ ಪತ್ರ ಮಂಡನೆ ಹಿನ್ನೆಲೆಯಲ್ಲಿ ರೈತ ನಾಯಕರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆಯಲಾಗಿದೆ. ಬಜೆಟ್‌ನಲ್ಲಿ ಸರ್ಕಾರದ ಇತಿಮಿತಿಯಲ್ಲಿ ಏನು ಸೇರಿಸಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಗೃಹಲಕ್ಷ್ಮಿ, ಪಡಿತರ ಸಹಾಯಧನದ ಬಾಕಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ. ಈ ಸಂಬಂಧ ಹೈಕೋರ್ಟ್ ನೀಡುವ ಆದೇಶವನ್ನು ಪಾಲಿಸಲಾಗುವುದು ಎಂದು ಪುನರುಚ್ಚರಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ; 7 ರಂದು ಬಜೆಟ್ ಮಂಡನೆಗೆ ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಮಾರ್ಚ್ 7 ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮಾರ್ಚ್ 4 ರಿಂದ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಷ್ಟು ದಿನ ಅಧಿವೇಶನ ನಡೆಸಬೇಕು ಎನ್ನುವುದನ್ನು ಕಲಾಪ ಸಲಹಾ ಸಮಿತಿ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ

ಸುದ್ದಿದಿನ,ದಾವಣಗೆರೆ: ನಮಗೆ ಇಂದು ಭಕ್ತಿ ಮತ್ತು ಜ್ಞಾನ ಎರಡೂ ಮುಖ್ಯ. ಭಕ್ತಿ ಹೆಚ್ಚಿಸುವ ದೇವಾಲಯಗಳ ಜತೆಯಲ್ಲೇ ಜ್ಞಾನ ವಿಸ್ತರಿಸುವ ವಿದ್ಯಾಲಯಗಳೂ ಹೆಚ್ಚಬೇಕು ಎಂದು ಹೊಸದುರ್ಗ ಕನಕ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಹಳೆಕುಂದುವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದಿನ ಮಕ್ಕಳನ್ನು ಐಎಎಎಸ್, ಕೆಎಎಸ್‌ನಂತಹ ಉನ್ನತ ಶಿಕ್ಷಣ ಹಾಗೂ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು. ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು. ದುಂದುವೆಚ್ಚ ಕಡಿಮೆ ಮಾಡಬೇಕು ಎಂದೂ ಸಲಹೆ ನೀಡಿದರು.
ಶ್ರೀಕೃಷ್ಣನು ಕನಕನಿಗೆ, ಶ್ರೀರಾಮನು ಶಬರಿಗೆ ಒಲಿದಿದ್ದು ಜಾತಿಯಿಂದಲ್ಲ; ಅವರಲ್ಲಿದ್ದ ಭಕ್ತಿಯಿಂದಾಗಿ. ಭಕ್ತಿ ಮತ್ತು ಭಕ್ತನಿಗೆ ಜಾತಿ ಇಲ್ಲ. ಎಲ್ಲ ಸ್ವಾಮೀಜಿಗಳನ್ನು, ವರ್ಗದವರನ್ನು ಒಗ್ಗೂಡಿಸಿದ ಕುಂದುವಾಡ, ಸಾಮರಸ್ಯದ ಗ್ರಾಮವಾಗಿದೆ. ಪ್ರತಿ ಗ್ರಾಮದಲ್ಲೂ ಇಂತಹ ವಾತಾವರಣ ಇರಬೇಕು ಎಂದು ಆಶಿಸಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಆಂಜನೇಯನಿಗೆ ಸೀಮಿತ ಜಾತಿಯ ಭಕ್ತರಿಲ್ಲ. ಆತ ಜಾತ್ಯತೀತ ವ್ಯಕ್ತಿ. ಭಕ್ತಿಗೆ ಹೆಸರಾದ ಆಂಜನೇಯ ಹಾಗೂ ಸಮಾನತೆಗೆ ಹೆಸರಾದ ಬಸವೇಶ್ವರರ ದೇಗುಲ ಪ್ರತಿಷ್ಠಾಪನೆಯನ್ನು ಕುಂದುವಾಡ ಗ್ರಾಮಸ್ಥರು ಭಾವೈಕ್ಯ, ಸೌಹಾರ್ದ ಹಾಗೂ ಸಹಬಾಳ್ವೆಯಿಂದ ಮಾಡುತ್ತಿದ್ದಾರೆ. ಈ ಕುಂದುವಾಡ ಗ್ರಾಮ ಸೌಹಾರ್ದ ಗ್ರಾಮವಾಗಿ ಬದಲಾಗಲಿ ಎಂದು ಹೇಳಿದರು.
ಹದಡಿಯ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಮಾತನಾಡಿ ಎಲ್ಲವನ್ನು ಕೊಟ್ಟ ದೇವರನ್ನು ಮರೆಯುತ್ತಿದ್ದೇವೆ. ನಿಸರ್ಗವನ್ನು ಹಾಳು ಮಾಡುತ್ತ, ಮಾಲಿನ್ಯ ಹೆಚ್ಚಿಸುತ್ತಿದ್ದೇವೆ. ನಮ್ಮಲ್ಲಿ ಭಯ ಮೂಡಿಸಲು ಹಿರಿಯರು ಊರಿಗೊಂದು ದೇವಸ್ಥಾನ ನಿರ್ಮಿಸಿದ್ದಾರೆ. ಆದರೆ ನಮ್ಮೊಳಗಿರುವ ದೇವರನ್ನು ನಾವು ಕಾಣಬೇಕು. ಮದಗಳನ್ನು ಕೈಬಿಡಬೇಕು. ಧರ್ಮ ಕಾರ್ಯ, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ ಬಸವತತ್ವ ಎಲ್ಲರೂ ಕೂಡಿ ಬಾಳುವುದನ್ನು ಹೇಳಿದೆ. ಎಲ್ಲ ವರ್ಗಗಳಿಗೂ ಬಸವಣ್ಣನವರು ಸಾಮಾಜಿಕ ನ್ಯಾಯ ನೀಡಿದರು. ನಾವಿಂದು ಅವರ ದಾರಿಯಲ್ಲಿ ಸಾಗಬೇಕಿದೆ. ಬಸವಣ್ಣ ಕಂಡು ಕನಸು ಕುಂದುವಾಡ ಗ್ರಾಮದಲ್ಲಿ ಅನಾವರಣವಾಗಿದ್ದು, ಇಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಗ್ರಾಮದವರು ತುಂಬಾ ಒಗ್ಗಟ್ಟಿನಿಂದ ದೇವಾಲಯ ನಿರ್ಮಾಣ ಮಾಡಿರೋದು ಮೆಚ್ಚುವಂತಾಗಿದೆ,
ತಡವಾಗಿಯಾದರೂ ಗ್ರಾಮದಲ್ಲಿ ದೇಗುಲಗಳು ಉತ್ತಮವಾಗಿ ನಿರ್ಮಿತವಾಗಿವೆ. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.
ದಾವಣಗೆರೆ- ಹಳೇ ಕುಂದುವಾಡ ಮುಖ್ಯ ರಸ್ತೆಗೆ ಹೊಂದಿಕೊಂಡ ರಸ್ತೆ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ಇದನ್ನು ತೆರವುಗೊಳಿಸಿದಲ್ಲಿ ಗ್ರಾಮಸ್ಥರು ಬಯಸಿದಂತೆ 80 ಅಡಿ ರಸ್ತೆ ನಿರ್ಮಾಣ ಮಾಡಲು ಬದ್ಧನಿದ್ದೇನೆ. ಈ ಸಂಬಂಧ ದೂಡಾ ಅಧಿಕಾರಿಗಳು, ಜಮೀನಿನ ಮಾಲೀಕರು, ಗುತ್ತಿಗೆದಾರರನ್ನು ಸೇರಿಸಿ ಸಭೆ ನಡೆಸೋಣ ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಈ ಭಾಗದಲ್ಲಿ ದೇಗುಲಗಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರಾದರೆ ಇಂತಹ ಹತ್ತು ದೇವಸ್ಥಾನ ಕಟ್ಟುತ್ತಾರೆ, ಹೀಗಾಗಿ ಶಾಲೆಗಳ ನಿರ್ಮಾಣಕ್ಕೂ ಮಹತ್ವ ನೀಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಲಾರ ಕ್ಷೇತ್ರದ ಕಾರ್ಣಿಕ ನುಡಿಯುವ ರಾಮಪ್ಪಜ್ಜ, ಹಳೆಕುಂದುವಾಡದ ಸ್ವಾಮಿಜಿ ರಾಜಣ್ಣ, ಮುಖಂಡರಾದ ಬಿ.ಜಿ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಎಚ್. ವೆಂಕಟೇಶ್, ಜೆ.ಎನ್. ಶ್ರೀನಿವಾಸ್. ಶ್ವೇತಾ ಶ್ರೀನಿವಾಸ್, ಮುದೇಗೌಡ್ರ ಗಿರೀಶ್, ತಹಸೀಲ್ದಾರ್ ಬಿ.ಎನ್.ಅಶ್ವಥ್, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025
-
ದಿನದ ಸುದ್ದಿ6 days ago
ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ
-
ದಿನದ ಸುದ್ದಿ6 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ4 days ago
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
-
ದಿನದ ಸುದ್ದಿ3 days ago
ತುಂಬಿದ ಕೊಡ ತುಳುಕಿತಲೇ ಪರಾಕ್..!
-
ದಿನದ ಸುದ್ದಿ1 day ago
ಕವಿತೆ | ನಾನೊಲಿದೆನಯ್ಯಾ
-
ದಿನದ ಸುದ್ದಿ2 days ago
ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ
-
ದಿನದ ಸುದ್ದಿ3 hours ago
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ