ರಾಜಕೀಯ
ನೌಕರರು, ನಾಯಕರು ಮತ್ತು ಆಡಳಿತ
ಇತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರ ಗೋಷ್ಠಿಯಲ್ಲಿ ಇಬ್ಬರು ಭಾಷಣಕಾರರು ಕಾರ್ಯಾಂಗದ ಅನುಷ್ಠಾನ ಬದ್ಧತೆಯ ಕೊರತೆಯ ಕಾರಣಕ್ಕಾಗಿ ಈ ದೇಶದಲ್ಲಿ ನಾಯಕರ ಸುಧಾರಣೆಯ ಕನಸುಗಳು ಸಾಕಾರಗೊಳ್ಳುತ್ತಿಲ್ಲ ಎಂಬ ತಕರಾರು ಎತ್ತಿದರು. ಅಷ್ಟೇ ಅಲ್ಲ, ಅವರು ಇನ್ನೂ ಸ್ಪಷ್ಟವಾಗಿ ಕಾರ್ಯಾಂಗದ ವೈಖರಿಯ ಮೇಲೆ ಅತ್ಯಂತ ಸರಳೀಕೃತವಾದ ತಾರ್ಕಿಕವಲ್ಲದ ಜಾಳುಜಾಳಾದ ಹೇಳಿಕೆಯನ್ನು ತೇಲಿಬಿಟ್ಟರು. ಜನಸಾಮಾನ್ಯನ ಪ್ರಾಮಾಣಿಕತೆಯ ಕಾರಣಕ್ಕಾಗಿ ಸಂದಾಯವಾಗುತ್ತಿರುವ ತೆರಿಗೆಯ ಹಣಕ್ಕೆ ಪ್ರತಿಯಾಗಿ ಕಾರ್ಯಾಂಗವು ಕೇವಲ ನೋವು, ಹತಾಶೆಗಳನ್ನಷ್ಟೇ ನೀಡುತ್ತಿದೆಯೇ ಹೊರತು ತಕ್ಕುದಾದ ಫಲಶೃತಿಗಳನ್ನಲ್ಲ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಈ ಹೇಳಿಕೆಯಲ್ಲಿರುವ ಪೂರ್ವಗ್ರಹಪೀಡಿತ ದೃಷ್ಟಿಕೋನದ ಅಪಾಯಕಾರಿ ಸ್ವರೂಪ ಅಲ್ಲಿದ್ದವರ್ಯಾರ ಗಮನಕ್ಕೆ ಬರಲೇ ಇಲ್ಲ. ಹಾಗೆ ಬರದ ಹಾಗೆ ಅವರಿಬ್ಬರ ಭಾಷಿಕ ಪ್ರೌಢಿಮೆಯು ತನ್ನ ಚಾಣಾಕ್ಷತೆಯನ್ನು ಮೆರೆದಿತ್ತು. “ಸುಧಾರಣೆಯ ಹೆಜ್ಜೆಗಳು ಎಲ್ಲ ಕಾಲದ ನಾಯಕರ ಆಳ್ವಿಕೆಯ ವೇಳೆ ಕಾಣಿಸಿಕೊಳ್ಳುತ್ತವೆ. ಆದರೆ, ಸುಧಾರಣೆಯ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಕಾರ್ಯಾಂಗ ನಿರ್ಲಿಪ್ತವಾಗಿರುವುದರಿಂದಲೇ ಅನೇಕ ಸಮಸ್ಯೆಗಳಿವೆ” ಎಂದು ತೀರ್ಪು ನೀಡಿಬಿಟ್ಟರು.ಸಂಕೀರ್ಣ ವಾಸ್ತವಾಂಶಗಳುಈ ಹೇಳಿಕೆಯನ್ನು ಯಥಾವತ್ತಾಗಿ ಮುಗ್ಧವಾಗಿ ಸ್ವೀಕರಿಸಿದರೆ ಸಮಸ್ಯೆಯ ಸಂಕೀರ್ಣತೆಯ ಹಿಂದಿನ ವಾಸ್ತವಾಂಶಗಳು ಗಮನಕ್ಕೇ ಬರುವುದಿಲ್ಲ. ಗಮನಕ್ಕೆ ತಂದುಕೊಂಡರೂ ನಾಯಕರೆಡೆಗಿನ ಭಾವನಾತ್ಮಕ ಅಭಿಮಾನದ ಪ್ರಭಾವಳಿ ಅಂಥ ಸಾಧ್ಯತೆಯನ್ನು ಆ ಕ್ಷಣಕ್ಕೇ ಮೊಟಕುಗೊಳಿಸಿಬಿಡುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿಸಿಕೊಳ್ಳಬಹುದಾದರೆ, ಈ ಹೇಳಿಕೆಯ ಮೊನಚಾದ ದಾಳಿ ಸರ್ಕಾರಿ ನೌಕರರ ಮೇಲೆಯೇ ನಡೆದಿತ್ತು. ಟೀಕೆ, ಅಸಮಾಧಾನ, ಆಕ್ರೋಶ, ವ್ಯಂಗ್ಯ, ಹಾಸ್ಯ, ಅಪಹಾಸ್ಯ ಸೇರಿದಂತೆ ನಿಂದನೆಯ ನಾನಾ ಬಗೆಗಳಿಗೆ ಈಡಾಗುತ್ತಲೇ ನಿರಂತರವಾಗಿ ಸವಾಲುಗಳನ್ನು ನೌಕರವರ್ಗ ಎದುರಿಸುತ್ತಲೇ ಇದೆ. ಭ್ರಷ್ಟಾಚಾರ ಮತ್ತು ವಿಳಂಬನೀತಿ ಎಂಬ ಎರಡು ನಕಾರಾತ್ಮಕ ಸಂಗತಿಗಳು ನೌಕರರ ನಿಜವಾದ ಶಕ್ತಿಯನ್ನು ಹಿನ್ನೆಲೆಗೆ ಸರಿಸಿವೆ.
ಶಾಸಕಾಂಗವು ಶಾಸನಗಳನ್ನು ರೂಪಿಸುವ ಹೊಣೆಗಾರಿಕೆ ನಿಭಾಯಿಸುತ್ತದೆ. ಅವುಗಳನ್ನು ಜಾರಿಗೆ ತರುವ ಜವಾಬ್ದಾರಿ ಕಾರ್ಯಾಂಗದ್ದು. ಅಂದರೆ ಉನ್ನತ ಹಂತದಿಂದ ಹಿಡಿದು ಕೆಳಹಂತದವರೆಗಿನ ಆಡಳಿತಾತ್ಮಕ ಪ್ರಕ್ರಿಯೆಯು ಕಾರ್ಯಾಂಗವನ್ನು ಪ್ರತಿನಿಧಿಸುವ ನೌಕರರಿಂದಲೇ ಏರ್ಪಡುತ್ತದೆ. ಹೀಗೆ ಏರ್ಪಡುವ ಕಾಲಕ್ಕೇ ಬದಲಾವಣೆಯು ಕಾಣಿಸಿಕೊಳ್ಳುತ್ತಿರುತ್ತದೆ. ಈ ಬದಲಾವಣೆಯು ಆಯಾ ದೇಶಗಳ ನಾಯಕರು, ರಾಜಕಾರಣ ಮತ್ತು ಜನರ ಬೌದ್ಧಿಕ ವಿವೇಚನೆಗೆ ತಕ್ಕಂತೆಯೇ ನಡೆಯುತ್ತದೆ. ಈ ವಿವೇಚನೆ ಇಲ್ಲದಿದ್ದಾಗ ನಾಯಕರು ಕಾಣಿಸಿಕೊಳ್ಳುವುದಿಲ್ಲ. ನಾಯಕರೇ ಇಲ್ಲವೆಂದ ಮೇಲೆ ರಾಜಕಾರಣವು ಒಂದು ನಿರ್ದಿಷ್ಟ ಗೊತ್ತುಗುರಿಯಿಲ್ಲದೆ ತನ್ನ ನಕಾರಾತ್ಮಕ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ.ಸ್ಥಾಯಿಯಾದ ಯಥಾಸ್ಥಿತಿವಾದ
ಈ ಹಂತದಲ್ಲಿಯೇ ಸಮಾಜದಲ್ಲಿ ಬದಲಾವಣೆಯ ಬದಲು ಯಥಾಸ್ಥಿತಿಯು ಸ್ಥಾಯಿಯಾಗಿಬಿಡುತ್ತದೆ. ಬದಲಾವಣೆಯ ಗಮ್ಯವನ್ನು ಮುಖ್ಯವಾಗಿಸಿಕೊಂಡ ಪ್ರಜಾಪ್ರಭುತ್ವದ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತವೆ. ಸಂವಿಧಾನದ ನಮ್ಯತೆಯ ಗುಣಲಕ್ಷಣವನ್ನು ಹದಗೆಡಿಸುವ ಹುನ್ನಾರಗಳು ನಡೆದುಬಿಡುತ್ತವೆ. ಅನಿವಾರ್ಯವಾಗಿ ಆಗಲೇಬೇಕಾದ ಬದಲಾವಣೆಯ ಪ್ರಯತ್ನಗಳು ನಿಂತುಬಿಡುವುದು ಇಂಥ ಹುನ್ನಾರಗಳ ಕಾರಣಕ್ಕಾಗಿಯೇ. ಸರ್ಕಾರಿ ನೌಕರರೆಂಬ ಜೀವಿಗಳು ಸಂಕಟ-ಸಂಕೀರ್ಣತೆಯ ನಡುವೆ ಕಾರ್ಯನಿರ್ವಹಿಸುವ ಮುಜುಗರದ ಅನುಭವಗಳೊಂದಿಗಿರಬೇಕಾಗುತ್ತದೆ. ಶಾಸಕಾಂಗವೇ ನೀತಿಗಳನ್ನು ನಿರೂಪಿಸುವ ಸಂವಿಧಾನಾತ್ಮಕ ಸಂಸ್ಥೆಯಾಗಿರುವುದರಿಂದ ಬದಲಾವಣೆಯ ಚಿಂತನೆಯು ಅಲ್ಲಿಂದಲೇ ಶುರುವಾಗಬೇಕಾಗುತ್ತದೆ. ಆದರೆ ಈ ದೇಶದಲ್ಲಿ ಹಾಗಾಗುತ್ತಿಲ್ಲ. ಈಗಾಗಲೇ ಇರುವ ನೀತಿಗಳ ಜಾಗದಲ್ಲಿ ಹೊಸದಾದುವುಗಳನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳೇ ಆಗುತ್ತಿಲ್ಲ. ಹಳೆಯ ನೀತಿಗಳಿದ್ದರೆ ಭ್ರಷ್ಟಾಚಾರದ ಸ್ವಹಿತಾಸಕ್ತ ಉದ್ದೇಶ ಈಡೇರುತ್ತದೆ. ಹೊಸ ನೀತಿಗಳು ಬಂದರೆ ತಮ್ಮ ಅಸ್ತಿತ್ವಕ್ಕೇ ಕೊಡಲಿಪೆಟ್ಟು ಬೀಳುತ್ತದೆ ಎಂದುಕೊಳ್ಳುವ ನಾಯಕರಲ್ಲದ ರಾಜಕಾರಣಿಗಳು ತಮ್ಮ ತಮ್ಮ ಪಕ್ಷಗಳ ಸಾಂಸ್ಥಿಕ ಶ್ರೇಷ್ಠತೆಯನ್ನು ಮೊಟಕುಗೊಳಿಸಿಕೊಳ್ಳುವ ಹಾಗೆಯೇ ವರ್ತಿಸುತ್ತಾರೆ. ಯಥಾಸ್ಥಿತಿವಾದವನ್ನು ಉಳಿಸಿ ಅದರ ಮೇಲೆ ತಮ್ಮ ಅಸ್ತಿತ್ವವವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಹಂಬಲಗಳನ್ನೇ ಕಾಡಿಸಿಕೊಳ್ಳುತ್ತಾರೆ.ಉದ್ದೇಶಪೂರ್ವಕ ಹುನ್ನಾರ
ಅವರು ಜನರಿಗೆ ಬಹುಕಾಲದವರೆಗೆ ಅನುಕೂಲ ಒದಗಿಸಿಕೊಡುವ ಶಾಶ್ವತವಾದ ಯೋಜನೆಗಳನ್ನು ರೂಪಿಸುವ ಬದಲು ಬರೀ ಜನರ ತಾತ್ಪೂರ್ತಿಕ ಆಸೆಗಳನ್ನು ಈಡೇರಿಸುವಂಥ ಜನಪ್ರಿಯ ನೀತಿಗಳನ್ನು ರಚಿಸುತ್ತಾರೆ. ಅವುಗಳು ಅಂಗೀಕೃತವಾಗುವಂತೆಯೂ ನೋಡಿಕೊಳ್ಳುತ್ತಾರೆ. ಮತಗಳಿಕೆಯ ಲೆಕ್ಕಾಚಾರದ ಉದ್ದೇಶಗಳನ್ನೇ ಮುಖ್ಯವಾಗಿಸಿಕೊಂಡು ಯಶಸ್ವಿಯಾಗುತ್ತಾರೆ. ಜನಪ್ರಿಯ ಯೋಜನೆಗಳ ಅನುಷ್ಠಾನದಲ್ಲಿ ನೌಕರರು ಕಾರ್ಯನಿರ್ವಹಿಸಿದರೂ ಅದರ ಕ್ರೆಡಿಟ್ ಅವರಿಗೆ ಹೋಗುವುದಿಲ್ಲ. ನಾಯಕರೆನಿಸಿಕೊಂಡವರ ಪಾಲಾಗುತ್ತದೆ. ಅವರು ದೂರದೃಷ್ಟಿಯ ಚಿಂತನೆಗಳನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಿಬಿಡುತ್ತಾರೆ. ಜನಪ್ರಿಯ ಯೋಜನೆಗಳಿಗೆ ಯಶಸ್ಸು ದೊರಕಿದರೆ ಅದರ ಲಾಭವನ್ನು ತಾವು ಪಡೆಯುತ್ತಾರೆ. ಟೀಕೆಗೀಡಾದರೆ ವೈಫಲ್ಯಕ್ಕೆ ಸರ್ಕಾರಿ ನೌಕರರೆಡೆಗೆ ಬೊಟ್ಟು ಮಾಡುತ್ತಾರೆ.
ಹಿಂದೊಮ್ಮೆ ಬ್ರಿಟಿಷ್ ಹಿಡಿತಕ್ಕೊಳಗಾಗಿದ್ದ ಈ ದೇಶದಲ್ಲಿ ಅದರ ಆಡಳಿತಾತ್ಮಕ ಪಳೆಯುಳಿಕೆಯ ಹಲವು ವಿಧಾನಗಳು ಈಗಲೂ ಅನುಸರಿಸಲ್ಪಡುತ್ತಿವೆ. ಏಣಿಶ್ರೇಣಿ ವ್ಯವಸ್ಥೆಯ ವಿವಿಧ ಹಂತಗಳು ಉನ್ನತ ಅಧಿಕಾರಿಗಳ ಪ್ರತಿಷ್ಠೆಯ ಹಂಗುಗಳ ಚೌಕಟ್ಟುಗಳಡಿ ನಲುಗುತ್ತಿವೆ. ರಾಜಕಾರಣಿ ಮತ್ತು ಉನ್ನತ ಹಂತದ ಅಧಿಕಾರಿಗಳ ನಡುವಿನ ಅಸಂಬದ್ಧ ಮೈತ್ರಿಯ ನಡೆಗಳು ಆಡಳಿತವನ್ನು ಸುಧಾರಿಸುವ ಬದಲು ಅದರ ಒಟ್ಟು ಶಕ್ತಿಯನ್ನು ಕಳೆದಿಡುತ್ತಿವೆ.ಸಮಗ್ರ ಒಳಗೊಳ್ಳುವಿಕೆಯ ಕೊರತೆ ಉನ್ನತಾಧಿಕಾರ ಕೇಂದ್ರದ ನಂತರದ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಆದೇಶಗಳನ್ನು ಪಾಲಿಸುವುದಕ್ಕಷ್ಟೇ ಸೀಮಿತವಾಗುಳಿಯುವ ಅನಿವಾರ್ಯತೆ ಎದುರಿಸುತ್ತಾರೆ. ಅವರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತದೆ. ಒಂದು ವೇಳೆ ಎಲ್ಲ ಹಂತಗಳ ಸರ್ಕಾರಿ ನೌಕರರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಪ್ರಕ್ರಿಯೆಯು ಏರ್ಪಟ್ಟಿದ್ದಿದ್ದರೆ ಸರ್ಕಾರದ ಕಾರ್ಯವೈಖರಿ ಖಾಸಗಿ ವಲಯಕ್ಕಿಂತ ಭಿನ್ನ ಎಂದೆನ್ನಿಸಿಕೊಳ್ಳುತ್ತಿತ್ತು. ಆದರೆ, ಹಾಗಾಗಲಿಲ್ಲ. ಆಡಳಿತದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಶೋಷಣೆಗೊಳಗಾಗುತ್ತಲೇ ಹೋದರು. ಸರ್ಕಾರಿ ಇಲಾಖೆಗಳ ಕಾರ್ಯವೈಖರಿ ಅಷ್ಟೇನೂ ಸರಿಯಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ, ಟೀಕೆಗಳಿಗೆ ಗುರಿಯಾಗಬೇಕಾಯಿತು.ಹೀಗಳೆಯುವ ಉಡಾಫೆಯ ವ್ಯಂಗ್ಯಕ್ಕೀಡಾದ ನೌಕರರು ಇಷ್ಟೇ ಅಲ್ಲದೇ, ಪ್ರತಿ ಸಲ ವೇತನ ಹೆಚ್ಚಳದ ವರದಿಗಳು ಮುಖಪುಟದ ಆದ್ಯತೆಯೊಂದಿಗೆ ಪ್ರಕಟವಾದಾಗಲಂತೂ ಇವರಿಗೇಕೆ ಸಂಬಳ ಹೆಚ್ಚಿಸಬೇಕು ಎಂಬ ಸರಳೀಕೃತವಾದ ಪ್ರಶ್ನೆಗಳನ್ನು ಅವರು ಎದುರಿಸುತ್ತಲೇ ಇದ್ದಾರೆ. ವೇತನ ಹೆಚ್ಚಳ ಆಯಾ ಕಾಲದ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯುತ್ತದೆ. ಇದು ಅತ್ಯಂತ ಸಹಜವಾದ ಆಡಳಿತಾತ್ಮಕ ಪ್ರಕ್ರಿಯೆ. ಇದು ಸಾಧ್ಯವಾಗುವುದಕ್ಕೂ ನೌಕರರು ಬಹುದಿನಗಳ ಕಾಲ ಕಾಯಬೇಕಾಗುತ್ತದೆ. ಆಡಳಿತದ ಚುಕ್ಕಾಣಿ ಹಿಡಿದವರಿಗೆ ಮತ್ತೆ ಮತ್ತೆ ನೆನಪಿಸಬೇಕಾಗುತ್ತದೆ. ಬೇಡಿಕೆ ಮುಂದಿಡಬೇಕಾಗುತ್ತದೆ. ಸರ್ಕಾರದ ನೇತೃತ್ವ ವಹಿಸಿದವರು ರಾಜಕೀಯ ಲೆಕ್ಕಾಚಾರದೊಂದಿಗೇ ಉನ್ನತಾಧಿಕಾರಿಗಳ ಜೊತೆಗೆ ಚರ್ಚಿಸಿ ವೇತನ ಹೆಚ್ಚಳದ ಘೋಷಣೆ ಮಾಡುತ್ತಾರೆ. ಕೊನೆಗೂ ಸರ್ಕಾರ ಸ್ಪಂದಿಸಿತು ಎಂಬ ಕೃತಾರ್ಥ ಭಾವ ನೌಕರರದ್ದಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ಸುದ್ದಿ ಪ್ರಚುರವಾದಾಗ ಸರ್ಕಾರಿ ನೌಕರರನ್ನು ಹೀಗಳೆಯುವ ಉಡಾಫೆಯ ವ್ಯಂಗ್ಯದ ತಿವಿತಗಳಿಗೆ ಈಡಾಗಬೇಕಾಗುತ್ತದೆ. ಹೀಗಾಗಿಯೇ ನೌಕರರು ಒಂದು ಬಗೆಯ ಅಸಮಾಧಾನ, ಅತೃಪ್ತಿಯೊಂದಿಗೇ ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಇಲಾಖಾವಾರು ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅಡಗಿರುವ ಹತ್ತುಹಲವು ಲೋಪದೋಷಗಳು.
ಅತಾರ್ಕಿಕ ಟೀಕೆಗಳು
ಈ ಹಂತದಲ್ಲಿಯೇ ಸರ್ಕಾರಿ ಕೆಲಸ ಮತ್ತು ಸರ್ಕಾರಿ ನೌಕರರು ಸರಳೀಕೃತವಾದ, ಅತಾರ್ಕಿಕ ಟೀಕೆಗಳಿಗೆ ತುತ್ತಾಗಬೇಕಾಯಿತು. ಕ್ಲೀಷೆ ಎನ್ನಿಸುವಷ್ಟರ ಮಟ್ಟಿಗೆ ಟೀಕೆಗೆ ಒಳಗಾದ, ವ್ಯಂಗ್ಯಕ್ಕೆ ತುತ್ತಾದ ಒಂದು ಜನಜನಿತ ಉಲ್ಲೇಖವೆಂದರೆ ‘ಸರ್ಕಾರಿ ಕೆಲಸ ದೇವರ ಕೆಲಸ’. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ತಪ್ಪಾಗಿ ಗ್ರಹಿಸಲಾಗಿದೆ. ಸರ್ಕಾರದ ಕೆಲಸ ದೇವರದ್ದಾಗಿರುವುದರಿಂದ ಮನುಷ್ಯರಿಗೆ ಅಲ್ಲಿ ನಿರ್ವಹಿಸಲು ಕೆಲಸವೇ ಇರುವುದಿಲ್ಲ, ಹಾಗಾಗಿಯೇ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಕೆಲಸಗಳಾಗುವುದಿಲ್ಲ ಎಂಬ ಉಲ್ಲೇಖಗಳು ವ್ಯಂಗ್ಯಾತ್ಮಕವಾಗಿಯೇ ವ್ಯಕ್ತವಾಗುತ್ತವೆ.
ಈ ಉಲ್ಲೇಖವನ್ನು ಹೀಗೆ ತಪ್ಪಾಗಿ ಅರ್ಥೈಸಿಕೊಳ್ಳುವುದಕ್ಕಿಂತ ಅದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ನೌಕರರೊಳಗೆ ನೈತಿಕ ಶ್ರದ್ಧೆಯನ್ನು ರೂಪಿಸುವ ಒತ್ತಾಸೆಯೊಂದಿಗೆ ಸರ್ಕಾರದ ಕೆಲಸವನ್ನು ದೇವರ ಕೆಲಸಕ್ಕೆ ಹೋಲಿಸಿ ವ್ಯಾಖ್ಯಾನಿಸಿರಬಹುದು. ದೇವರ ಕೆಲಸವೆಂದರೆ ನೌಕರರೊಳಗೆ ಶ್ರದ್ಧೆ ಹುಟ್ಟಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಅಂಥದ್ದೊಂದು ವ್ಯಾಖ್ಯಾನ ಹುಟ್ಟಿಕೊಂಡಿರಬಹುದು. ಆದರೆ, ಹಾಗಾಗಲಿಲ್ಲ. ಬದಲಾಗಿ ಸರ್ಕಾರಿ ನೌಕರರು ಕೆಲಸ ಮಾಡದೇ ಇದ್ದರೂ ನಡೆಯುತ್ತದೆ ಎಂಬ ಮನೋಭಾವದೊಂದಿಗೆ ಈ ಉದ್ಧರಣ ತಳುಕುಹಾಕಿಕೊಂಡಿತು. ಈ ಉದ್ಧರಣಕ್ಕಿಂತ ಮುಖ್ಯವೆನ್ನಿಸುವ ಉದಾತ್ತವಾದುದು ‘ಕಾಯಕವೇ ಕೈಲಾಸ’ ಪರಿಕಲ್ಪನೆ. ನಿರ್ವಹಿಸಬೇಕಾದ ಕೆಲಸವನ್ನು ಕೈಲಾಸಕ್ಕೆ ಸಮೀಕರಿಸಿ ನೋಡುವ ಈ ದೃಷ್ಟಿಕೋನವನ್ನು ಆಧರಿಸಿ ಸರ್ಕಾರಿ ಆಡಳಿತ ಮರುರೂಪುಗೊಂಡರೆ ಬೆಳವಣಿಗೆಯ ಪ್ರಕ್ರಿಯೆಗೆ ಹೊಸ ಆಯಾಮ ದೊರಕುತ್ತದೆ.
ಸೀಮಿತ ಗ್ರಹಿಕೆಯ ಮಿತಿಗಳು
ಭಾರತದಲ್ಲಿ ಸಾರ್ವಜನಿಕ ಆಡಳಿತದ ಪರಿಕಲ್ಪನೆಯು ಚಲನೆಯ ಸಂಕೇತವಾಗಿ ಚಾಲ್ತಿಗೆ ಬರಲೇ ಇಲ್ಲ. ಅದು ಕೇವಲ ಸರ್ಕಾರದ ಕೆಲಸ ಎಂಬರ್ಥದ ಸೀಮಿತ ಗ್ರಹಿಕೆಯೇ ಆದ್ಯತೆ ಪಡೆದು ಉನ್ನತ ಹಂತದ ನಾಯಕರೆನ್ನಿಸಿಕೊಂಡವರು ಅದಕ್ಕನುಗುಣವಾಗಿಯೇ ಆಡಳಿತವನ್ನು ವ್ಯಾಖ್ಯಾನಿಸಿಕೊಂಡರು. ಬದಲಾವಣೆ, ಬೆಳವಣಿಗೆ, ಪ್ರಗತಿ, ಅಭಿವೃದ್ಧಿ ಎಂಬ ಪದಗಳೊಂದಿಗೆ ಆಡಳಿತವನ್ನು ಜೋಡಿಸಿ ಮಾತನಾಡುವ ಜಾಣ್ಮೆಯನ್ನು ರೂಢಿಸಿಕೊಂಡರೇ ಹೊರತು ಅದನ್ನು ದೇಶ ಮತ್ತು ಜನತೆಯ ಉಜ್ವಲ ಭವಿಷ್ಯವನ್ನು ಸಾಧ್ಯವಾಗಿಸುವ ಸಂಕಲ್ಪಕ್ಕೆ ಸಂಯೋಜಿಸುವುದರ ಕಡೆಗೆ ಗಮನವನ್ನೇ ಹರಿಸಲಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ ಕೆಲವರು ಈ ಕುರಿತು ಯೋಚಿಸಿ ಯೋಜಿಸಿದರೂ ಆಡಳಿತಾತ್ಮಕ ಕಾರ್ಯಾನುಷ್ಠಾನ ಸಾಧ್ಯವಾಗಲಿಲ್ಲ. ಭಿನ್ನವಾಗಿ ಯೋಚಿಸುವ ನಾಯಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗಲೂ ಇದೇ ಸಮಸ್ಯೆ ಮುಂದುವರೆಯಿತು. ಹೀಗೆ ಆಲೋಚಿಸುವ ನಾಯಕರಿದ್ದಾಗ ಉನ್ನತ ಹಂತಗಳ ಅಧಿಕಾರಿವರ್ಗ ಹಾಗೆ ಯೋಚಿಸಲಿಲ್ಲ. ಹಾಗೆ ಯೋಚಿಸುವ ಅಧಿಕಾರಿ ವರ್ಗ ಉನ್ನತ ಹಂತಗಳಲಿದ್ದಾಗ ಸ್ಪಂದಿಸುವ ಗುಣದ ದಾರ್ಶನಿಕ ನಾಯಕತ್ವದ ಕೊರತೆ ಕಾಡಿತು.
ಅಗಾಧ ಶ್ರಮದ ಅಪವ್ಯಯ
ಇಂಥ ಸಂಕೀರ್ಣತೆಯ ಮಧ್ಯೆಯೇ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕಾಯಿತು. ಜನಹಿತದ ಪ್ರಶ್ನೆಗಳನ್ನು ಕಾಡಿಸಿಕೊಂಡು ಕಾರ್ಯನಿರ್ವಹಿಸುವ ಸಾಮೂಹಿಕ ಹೊಣೆಗಾರಿಕೆಯ ಪ್ರಜ್ಞೆ ಇದ್ದರೂ ಅದು ಪ್ರಯೋಗಕ್ಕೊಳಪಡಲಿಲ್ಲ.ಪ್ರಯೋಗಕ್ಕೊಳಪಡದಂತೆ ಅಡತಡೆಗಳನ್ನು ಉಂಟುಮಾಡುವ ಸಂಕುಚಿತ ರಾಜಕಾರಣ ಚಿಗುರೊಡೆಯಿತು. ಅದನ್ನು ರಾಜಕೀಯ ಪಕ್ಷಗಳು ಅತ್ಯಂತ ಚಾಣಾಕ್ಷಯುತವಾಗಿ ಪೋಷಿಸಿದವು. ನೌಕರರ ಅಗಾಧ ಶ್ರಮದ ಅಪವ್ಯಯ ಇಲ್ಲಿಂದಲೇ ಆರಂಭವಾಯಿತು. ನಾವಿನ್ನೂ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವುದರ ಕಡೆಗೇ ಶ್ರಮವನ್ನು ವ್ಯಯಿಸುತ್ತಿದ್ದೇವೆ ಎಂಬ ಟೀಕೆ ತಾರ್ಕಿಕವೆನ್ನಿಸತೊಡಗಿತು. ಇದನ್ನು ಅಲ್ಲಗಳೆಯುವ ಆಡಳಿತಾತ್ಮಕ ದಿಟ್ಟಹೆಜ್ಜೆಗಳು ನಾಯಕರೆನ್ನಿಸಿಕೊಂಡವರಿಂದಾಗಲೀ, ಕಾರ್ಯಾಂಗದ ರಚನಾತ್ಮಕತೆಯನ್ನು ವಿಸ್ತರಿಸುವ ಹೊಣೆಗಾರಿಕೆಯುಳ್ಳ ಉನ್ನತ ಹಂತದ ಅಧಿಕಾರಿ ವರ್ಗದಿಂದಾಗಲೀ ವ್ಯಕ್ತವಾಗಲಿಲ್ಲ. ರಾಜಕಾರಣಿಗಳ ಅಪ್ರಬುದ್ಧತೆ ಆಡಳಿತವನ್ನು ಸಡಿಲಗೊಳಿಸಿತು. ಉನ್ನತಾಧಿಕಾರಿ ವರ್ಗದ್ದು ಕೇವಲ ಮೂಕಪ್ರೇಕ್ಷಕ ಪಾತ್ರವಾಯಿತು. ಆಡಳಿತದ ಅನುಕೂಲಕ್ಕಾಗಿ ರೂಪುಗೊಂಡಿದ್ದ ಏಣಿಶ್ರೇಣಿ ವ್ಯವಸ್ಥೆ ಪ್ರತಿಷ್ಠೆಯ ಚೌಕಟ್ಟಿನೊಳಗೆ ಬಂಧಿಯಾಯಿತು. ದರ್ಪ, ದರ್ಬಾರು, ನಿಂದನೆ, ಕಿರುಕುಳ ಮತ್ತು ಶೋಷಣೆಗಳ ನಡುವೆ ಕೆಲಸ ಮಾಡುವ ಅನಿವಾರ್ಯತೆ ನಂತರದ ಆಡಳಿತಾತ್ಮಕ ಹಂತಗಳ ನೌಕರರಿಗೆ ಎದುರಾಯಿತು.
ಆಕ್ರಾಮಕ ನೀತಿಗಳ ಸವಾರಿ ಸರ್ಕಾರಿ ನೌಕರರು ಮತ್ತು ಅವರ ನೌಕರಿಯನ್ನು ಅಪವ್ಯಾಖ್ಯಾನಿಸಿ ಅವರ ಅಸ್ತಿತ್ವವನ್ನು ನಗಣ್ಯವಾಗಿಸಿ ಅಪವ್ಯಾಖ್ಯಾನಕ್ಕೆ ಒಳಪಡಿಸುವ ಹುನ್ನಾರ ರಾಜಕಾರಣ ಮತ್ತು ಆಡಳಿತಾತ್ಮಕ ಉನ್ನತ ಹಂತಗಳಿಂದಲೇ ಶುರುವಾಯಿತು. ಈ ಅಪವ್ಯಾಖ್ಯಾನ ಸರ್ಕಾರಿ ವಲಯವನ್ನು ನೆಗೆಟಿವ್ ಆಗಿ ನೋಡುವುದಕ್ಕೆ ಪ್ರಚೋದಿಸಿತು. ಆಡಳಿತವನ್ನು ಯಂತ್ರವನ್ನಾಗಿ ತಪ್ಪಾಗಿ ಬಿಂಬಿಸಿತು. ನೌಕರರನ್ನು ದುಡಿಯುವ ಯಂತ್ರಗಳನ್ನಾಗಿ ನೋಡುವ ವಿಚಿತ್ರ ವಾತಾವರಣ ಸೃಷ್ಟಿಯಾಯಿತು. ನೌಕರರು ಯಂತ್ರಗಳಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿತ್ತು. ತೊಂಭತ್ತರ ದಶಕದ ಆಕ್ರಾಮಕ ನೀತಿಗಳ ಸವಾರಿ ಆರಂಭವಾಗಿತ್ತು. ಬೃಹತ್ ಕಂಪನಿಗಳ ವಾಣಿಜ್ಯಿಕ ಕೌಶಲ್ಯಗಳು ಶ್ರೇಷ್ಠ ಎಂದೆನ್ನಿಸಿ ನಮ್ಮದೇ ಸರ್ಕಾರದ ವಿವಿಧ ಹಂತಗಳು ಪೇಲವ ಎನ್ನಿಸತೊಡಗಿದವು. ಇಡೀ ಸಾರ್ವಜನಿಕ ಆಡಳಿತ ಟೊಳ್ಳು ಎಂಬ ಭಾವನೆಯನ್ನು ಉದ್ದೇಶಪೂರ್ವಕವಾಗಿ ಬಿತ್ತಲಾಯಿತು.
ಆದ್ಯತಾವಲಯಗಳೆಡೆಗೆ ನಿರ್ಲಕ್ಷ್ಯ
ಆದರೆ, ಸ್ವಾತಂತ್ರ್ಯಾನಂತರ ಇಡೀ ದೇಶ ಆಡಳಿತಾತ್ಮಕವಾಗಿ ಮಹತ್ವದ್ದನ್ನು ಸಾಧಿಸಬೇಕಾಗಿತ್ತು. ಆಡಳಿತವನ್ನು ಸಂಪನ್ಮೂಲ ಕೇಂದ್ರವಾಗಿಸುವ ದಾರ್ಶನಿಕತೆಯ ವ್ಯಕ್ತವಾಗಬೇಕಾಗಿತ್ತು. ಅಂಥ ದಾರ್ಶನಿಕತೆಯನ್ನು ನಿರೂಪಿಸುವ ನಾಯಕರ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ನೌಕರರನ್ನು ಮಕ್ಕಳಂತೆ ನೋಡುವ ತಾಯಿಯ ಅಂತಃಕರಣ ಉನ್ನತ ಹಂತದ ನಾಯಕತ್ವ ಮತ್ತು ಅತ್ಯುನ್ನತ ಹಂತದ ಅಧಿಕಾರ ವಲಯದಿಂದ ಅಭಿವ್ಯಕ್ತಗೊಳ್ಳಬೇಕಿತ್ತು. ಅಂಥ ಉದಾತ್ತತೆಯ ಬದಲು ಆಡಳಿತ ಸುಧಾರಣೆಯ ನೆಪದಲ್ಲಿ ನೌಕರರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲಾಯಿತು. ಪ್ರಯೋಜನವಾದಿ ವಾಣಿಜ್ಯಿಕ ಲಾಭದ ಉದ್ಯಮದ ವ್ಯಾಪ್ತಿಗೆ ಸರ್ಕಾರಿ ವ್ಯವಸ್ಥೆಯನ್ನು ತರಲಾಯಿತು. ನೌಕರರ ಸಂಖ್ಯೆ ತಗ್ಗಿಸುವ ಯೋಚನೆ, ಪಿಂಚಣಿ ಸೌಲಭ್ಯ ನಿರಾಕರಣೆ, ಖಾಸಗಿಯವರೊಂದಿಗೆ ಗುರುತಿಸಿಕೊಳ್ಳುವ ಪ್ರಯೋಜನವಾದಿ ಹಂಬಲ, ನೇಮಕಾತಿ, ಬಡ್ತಿ ಮತ್ತಿತರ ಸಂಗತಿಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟುಗಳು ನಿರಂತರವಾದವು. ಈ ಬಿಕ್ಕಟ್ಟುಗಳು ಬಿಗಡಾಯಿಸಿದಾಗ ಯಥಾಸ್ಥಿತಿವಾದದ ಹ್ಯಾಂಗ್ ಓವರ್‍ಗೆ ಆಡಳಿತ ಮತ್ತು ನಾಯಕತ್ವ ಈಡಾಗಬೇಕಾಯಿತು. ಸಾಮಾಜಿಕತೆ, ಶಿಕ್ಷಣ, ಆರೋಗ್ಯ, ಮಾನವ ಸಂಪನ್ಮೂಲ ಸೇರಿದಂತೆ ಮಹತ್ವದ ಆದ್ಯತಾ ವಲಯಗಳು ನಿರ್ಲಕ್ಷ್ಯಕ್ಕೆ ತುತ್ತಾದವು.
ಆಶಾವಾದದ ಮಾರ್ಗ ಹಾಗಾದರೆ, ಸರ್ಕಾರಿ ನೌಕರರೂ ಸೇರಿದಂತೆ ವಿವಿಧ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳೇ ಇಲ್ಲವೇ? ಹಾಗೆ ನಿರಾಸೆಗೊಳ್ಳಬೇಕಿಲ್ಲ. ಬಲದಾವಣೆಯು ಮೇಲುಹಂತದಿಂದ ಕೆಳಹಂತದವರೆಗೆ ಪ್ರವಹಿಸುವಂಥ ಪ್ರಕ್ರಿಯೆ ತೀವ್ರಗೊಳ್ಳಬೇಕು. ರಾಜಕಾರಣಿಗಳು ದಾರ್ಶನಿಕ ನಾಯಕರಾಗಿ ಮಾರ್ಪಾಡಾಗಬೇಕು. ವಿವಿಧ ವಲಯಗಳನ್ನು ಪ್ರತಿನಿಧಿಸಿ ಮಹತ್ವದ್ದನ್ನು ಸಾಧಿಸುವಂಥ ಮಹತ್ವಾಕಾಂಕ್ಷೆಯೊಂದಿಗೆ ರಾಜಕಾರಣವನ್ನು ಜನಮುಖಿಯಾಗಿಸಬೇಕು. ಕಾರ್ಯಾಂಗದ ಚಲನಶೀಲತೆಯನ್ನು ತೀವ್ರಗೊಳಿಸುವ ಸಂಕಲ್ಪದೊಂದಿಗೆ ಶಾಸಕಾಂಗ ಹೆಜ್ಜೆಯಿರಿಸಬೇಕು. ಆ ಮೂಲಕ ತನ್ನ ಶಕ್ತಿಯನ್ನು ಮರುರೂಪಿಸಿಕೊಳ್ಳಬೇಕು. ಅಂಥ ಶಕ್ತಿಯನ್ನು ವಿಸ್ತರಿಸಲು ಸಾಧ್ಯವಾಗಿಸುವಂತೆ ಸಾರ್ವಜನಿಕ ಆಡಳಿತಾಂಗವನ್ನು ಪ್ರತಿನಿಧಿಸುವ ಉನ್ನತ ಮತ್ತು ತದನಂತರದ ಹಂತಗಳ ಅಧಿಕಾರಿಗಳು ನೋಡಿಕೊಳ್ಳಬೇಕು. ಸರ್ಕಾರಿ ನೌಕರರರ ಸಂಪನ್ಮೂಲ ಸಾಮಥ್ರ್ಯವನ್ನು ವಿಸ್ತರಿಸಬೇಕು. ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತಲೇ ಸಾರ್ವಜನಿಕ ಆಡಳಿತವನ್ನು ಪುನಃಶ್ಚೇತನಗೊಳಿಸಿ ಪ್ರಜಾಪ್ರಭುತ್ವದ ಸದಾಶಯಗಳ ಸಾಕಾರಕ್ಕೆ ಶ್ರಮಿಸಬೇಕು. ಆ ಮೂಲಕ ಸಾರ್ವಜನಿಕ ವಲಯದ ಅಸ್ತಿತ್ವವನ್ನು ಉಳಿಸಿಕೊಂಡು ಅಪ್ಪಟ ದೇಶಿ ಪ್ರಜ್ಞೆಯ ಆಧಾರದಲ್ಲಿ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ನಡೆಗಳು ಪುನರಾವರ್ತಿತವಾಗಬೇಕು.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನಗೊಂಡನಹಳ್ಳಿಯಲ್ಲಿ ಸ್ವಚ್ಛ ಸಂಕೀರ್ಣ, ಕೂಸಿನ ಮನೆ ಉದ್ಘಾಟನೆ: ಸುಸ್ಥಿರ ಗ್ರಾಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕಗಳನ್ನು ಗ್ರಾಮಸ್ಥರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಶುಕ್ರವಾರದಂದು ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಸಂಕೀರ್ಣ ಘಟಕ, ಕೂಸಿನ ಮನೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 39 ಕಸ ವಿಲೇವಾರಿ ಘಟಕಗಳ ಪೈಕಿ, ಕನಗೊಂಡನಹಳ್ಳಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. ಇದರ ನಿರ್ವಹಣೆಗಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರೇ ಘಟಕಗಳನ್ನು ನಿರ್ವಹಿಸಿದರೆ ಗ್ರಾಮದ ಆರ್ಥಿಕತೆಗೆ ಬಲ ಬರುತ್ತದೆ. ಇದರ ಜೊತೆಗೆ ಚರಂಡಿ ಸ್ವಚ್ಛತೆಯಲ್ಲೂ ಗ್ರಾಮಸ್ಥರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ತಕ್ಷಣವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತರ ಉದ್ಘಾಟನೆಗಳು
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂಸದರು ಹೊಸಕೊಳೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ‘ಕೂಸಿನ ಮನೆ’ ಮತ್ತು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ತದನಂತರ ಹಳೆಕೊಳೇನಹಳ್ಳಿಯಲ್ಲಿ ಮೂರು ಹೊಸ ಶಾಲಾ ಕೊಠಡಿಗಳು ಹಾಗೂ ಅಡುಗೆ ಕೊಠಡಿಯನ್ನು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠಲರಾವ್, ತಾಲ್ಲೂಕು ಪಂಚಾಯಿತಿ ಇಓ ರಾಮ್ ಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ
ಸುದ್ದಿದಿನ,ದಾವಣಗೆರೆ:ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಜ.25 ರಂದು ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸುಗುಮವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪ್ರಾಂಶುಪಾಲರು, ಮೇಲ್ವಿಚಾರಕರು, ವೀಕ್ಷಕರೊಂದಿಗೆ ಚರ್ಚಿಸಲು ಆಯೋಜಿಸಿದ್ದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು .ಮತ್ತು ಪರೀಕ್ಷಾ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಎಲ್ಲಾ ಕೇಂದ್ರಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಪರೀಕ್ಷೆಗೆ 45 ನಿಮಿಷ ಮುಂಚಿತವಾಗಿ ಬಂದು ಪರೀಕ್ಷಾ ಕೊಠಡಿಯಲ್ಲಿ ವರದಿ ಸಿದ್ದಪಡಿಸಿಕೊಳ್ಳಬೇಕು. ಹಾಗೂ ಪರೀಕ್ಷೆ ನಡೆಯುವ ಕೊಠಡಿಯ ಒಳಗೆ ವಾಚ್, ಕ್ಯಾಲುಕಿಲೇಟರ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಬರುವಂತಿಲ್ಲ್ಲ. ಪರೀಕ್ಷೆ ಮುಗಿದ ನಂತರ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಡೇಟ್ ಮಾಡಿಸಬೇಕು. ಕೊಠಡಿಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಿಸಬೇಕು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಳನಿವಿಲೋ ದೊರೆಸ್ವಾಮಿ ಮಾತನಾಡಿ, ಜ.25 ರಂದು ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯು ನಗರದ 18 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಕೇಂದ್ರಗಳಿಗೂ ಮೇಲ್ವಿಚಾರಕರು, ಮತ್ತು ವೀಕ್ಷಕರನ್ನು ನೇಮಿಸಲಾಗಿದೆ.
ಬೆಳಿಗ್ಗೆ 10.30 ರಿಂದ 12.30 ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ 4.30 ರವೆರೆಗೆ ಪತ್ರಿಕೆ-2 ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಎಲ್ಲ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರನ್ನೆ ಸಂಪರ್ಕಿಸಿ, ಪ್ರತಿ 24 ಅಭ್ಯರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕರಂತೆ ಅವಶ್ಯವಿರುವಷ್ಟು ಕೊಠಡಿ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮೂಲಕ ಪಡೆಯುವ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಿಗೆ ಜಾಮರ್ (Jamar) ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನೀಡಲಾಗಿದ್ದು, ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಪ್ರತಿ ಕೇಂದ್ರಕ್ಕೆ ಅಗತ್ಯವಿರುವಷ್ಟು ಹೋಮ್‍ಗಾರ್ಡ್‍ಗಳನ್ನು ನಿಯೋಜಿಸಬೇಕು. ತಪಾಸಣೆ ಮಾಡುವ ಸಿಬ್ಬಂದಿಗಳಿಗೆ ಸಹಾಯವಾಗುವಂತೆ ಪ್ರತಿ ಕೇಂದ್ರಕ್ಕೆ ಎರಡು ಹ್ಯಾಂಡ್ ಮೆಟಲ್ ಡಿಟೆಕ್ಟರ್‍ಗಳನ್ನು ಒದಗಿಸಲಾಗುವುದು.
ಕಾಲೇಜಿನ ಪ್ರಾಂಶುಪಾಲರನ್ನು ಆಯಾ ಕಾಲೇಜಿಗೆ ಮೇಲ್ವಿಚಾರಕರನ್ನಾಗಿ ನೇಮಿಸಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಪರೀಕ್ಷಾ ವೇಳಾಪಟ್ಟಿಯನ್ನು ಅಲ್ಲಲ್ಲಿ ಅಳವಡಿಸಿರಬೇಕು. ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಗಡಿಯಾರಗಳನ್ನು ಅಳವಡಿಸಬೇಕು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಯುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಮತ್ತು ಸಮೀಪವಿರುವ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರ ಸಹಾಯದಿಂದ ಮುಚ್ಚಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ 18 ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಹಾಗೂ ಪರೀಕ್ಷಾ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ5 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ3 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ8 hours agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ8 hours agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ


