ದಿನದ ಸುದ್ದಿ
ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಕೈಗಾರಿಕೆ, ಐಟಿಬಿಟಿ ಹಬ್ ಆಗದಿರುವುದು ದುರದೃಷ್ಟಕರ : ಜಿ. ಬಿ. ವಿನಯ್ ಕುಮಾರ್ ವಿಷಾದ
ಸುದ್ದಿದಿನ,ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯು ನಿಜವಾಗಿಯೂ ಇಂಡಸ್ಟ್ರಿಯಲ್, ಐಟಿಬಿಟಿ ಹಬ್ ಇಷ್ಟರೊಳಗೆ ಆಗಬೇಕಿತ್ತು. ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಖ್ಯಾತಿ ಹೊಂದಿದ್ದ ಇಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳಿಲ್ಲ, ಐಟಿಬಿಟಿ ಇಲ್ಲದಿರುವುದು ದುರದೃಷ್ಟಕರ. ವಿಶ್ವದರ್ಜೆಯ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಬರಲು ಬಿಡುತ್ತಿಲ್ಲ. ಹಾಗಾಗಿ, ಬೆಳೆಯಲು ಅವಕಾಶ ಇಲ್ಲದಂತಾಗಿದೆ ಎಂದು ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ವಿಷಾದ ವ್ಯಕ್ತಪಡಿಸಿದರು.
ನಗರದ ಯುಬಿಡಿಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ “ಎಲೆಕ್ಟ್ರಾನಿಕ್ ಅಂಡ್ ಇನ್ಸ್ಟ್ರುಮೆಂಟೇಶನ್” ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಕಾಟನ್ ಮಿಲ್ ಗಳು, ಹತ್ತಿ ಮಿಲ್ ಗಳು, ರೈಸ್ ಮಿಲ್ ಗಳು ಹೆಚ್ಚಾಗಿದ್ದವು. ಆದ್ರೆ, ಇಂದು ಕಡಿಮೆಯಾಗಿದೆ. ಈಗ ಕೆಲ ಸಕ್ಕರೆ ಕಾರ್ಖಾನೆಗಳು, ಹೈಸ್ಕೂಲ್ ಗಳು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆ ಮತ್ತು ಕಾಲೇಜುಗಳು, ಆಸ್ಪತ್ರೆಗಳು ಹೆಚ್ಚಾಗಿವೆ. ಎಲೆಕ್ಟ್ರಾನಿಕ್ ವಿಭಾಗದ ಯಾವ ಕೈಗಾರಿಕೆಗಳೂ ಇಲ್ಲ. ಐಟಿಬಿಟಿ ಬೆಳೆದೇ ಇಲ್ಲ. ಇದು ಆಗದಿರುವುದಕ್ಕೆ ಕಾರಣವೇನು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕಾದ ತುರ್ತು ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ವಿಶ್ವದಲ್ಲಿನ ಉತ್ಕೃಷ್ಟ ಗುಣಮಟ್ಟದ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಪ್ರಯತ್ನ ಪಡಿ. ಒಂದು ವೇಳೆ ಆಗದಿದ್ದರೆ ಇಲ್ಲಿಯೇ ಸಿಗುವ ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಕೊಂಡು ಕಷ್ಟಪಟ್ಟು ಓದಿ. ತಂತ್ರಜ್ಞಾನ, ಆಗುತ್ತಿರುವ ಬದಲಾವಣೆ, ಬರುತ್ತಿರುವ ಹೊಸ ಹೊಸ ಟೆಕ್ನಾಲಜಿ ಬಗ್ಗೆ ಜ್ಞಾನ ಪಡೆದುಕೊಳ್ಳಿ. ಆಗದು ಎಂದು ಕುಳಿತರೆ ಏನೂ ಆಗುವುದಿಲ್ಲ. ನಮ್ಮ ಕೈಯಲ್ಲಿ ಸಾಧ್ಯವೆಂದುಕೊಂಡು ಮುನ್ನಡೆದರೆ ಖಂಡಿತವಾಗಿಯೂ ಆಗಿಯೇ ಆಗುತ್ತದೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಮುನ್ನುಗ್ಗಿ ಎಂದು ಕರೆ ನೀಡಿದರು.
ಅತ್ಯುನ್ನತ ಸಂಸ್ಥೆಗಳಲ್ಲಿ ಪ್ರತಿಭೆ ಅನಾವರಣಗೊಳಿಸಲು, ಹೊಸದಾಗಿ ಆವಿಷ್ಕರಿಸಲು, ಜ್ಞಾನ ಹೆಚ್ಚಿಸಿಕೊಳ್ಳಲು ಹೆಚ್ಚಿನ ಅವಕಾಶ ಸಿಗುತ್ತವೆ. ಹಾಗಾಗಿ, ಇಲ್ಲಿ ವಿದ್ಯಾರ್ಥಿಗಳು ಸೇರಬೇಕೆಂಬ ಹೆಬ್ಬಯಕೆ ಹೊಂದಿರುತ್ತಾರೆ. ಪೋಷಕರೂ ಸಹ ಮಕ್ಕಳನ್ನು ಸೇರಿಸಲು ಆಸಕ್ತಿ ತೋರುತ್ತಾರೆ. ಹೊಸ ಹೊಸ ಸಂಶೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಅವಕಾಶಗಳು ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ ಎಂದು ವಿನಯ್ ಕುಮಾರ್ ಅವರು ಕಿವಿಮಾತು ಹೇಳಿದರು.
ನಾನು ಪಿಡಿಒ ಅಧಿಕಾರಿಯಾಗಿ ಇದುವರೆಗೆ ಮುಂದುವರಿದಿದ್ದರೆ ಹೆಚ್ಚಿನದ್ದು ಎಂದರೆ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುತ್ತಿದ್ದೆ. ನಾನು ಐಎಎಸ್ ಇನ್ಸೈಟ್ಸ್ ಸಂಸ್ಥೆ ಶುರು ಮಾಡಿದ ಬಳಿಕ ಕರ್ನಾಟಕದ ಅರ್ಧದಷ್ಟು ಜಿಲ್ಲೆಗಳಲ್ಲಿ ನನ್ನ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. ಹದಿನಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಡಿಸಿಪಿ, ಎಎಸ್ಪಿ, ತಹಶೀಲ್ದಾರ್, ಎಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಇಷ್ಟಪಟ್ಟು, ಶ್ರದ್ಧೆ, ಪ್ರಾಮಾಣಿಕತೆ, ನಿರಂತರ ಪರಿಶ್ರಮದಿಂದ ಸಾಧ್ಯವಾಯಿತು. ಯುವಪೀಳಿಗೆ ದೊಡ್ಡ ದೊಡ್ಡ ಕನಸು ಕಾಣಬೇಕು. ಆಗ ಕನಸು ನನಸಾಗುತ್ತದೆ. ಯಾವುದೇ ಜಿಲ್ಲೆಗಳಲ್ಲಿದ್ದರೂ ನಾನು ಯಾರಿಗೂ ಸಚಿವರಿಗೆ ಹಣ ಕೊಟ್ಟು ಹುದ್ದೆ ಕೊಡಿಸಬೇಕಿಲ್ಲ. ಇನ್ಸೈಟ್ಸ್ ಸಂಸ್ಥೆಯಲ್ಲಿ ಓದಿದವರು ಅವರ ಪರಿಶ್ರಮದಿಂದಲೇ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಎಂಜಿನಿಯರಿಂಗ್ ಓದಿದ ಮೇಲೆ ಕೆಲಸ ಸಿಗುತ್ತೋ ಇಲ್ಲವೋ, ಅಂಕ ಎಷ್ಟು ಬರುತ್ತದೆಯೋ ಏನೋ, ಕ್ಯಾಂಪಸ್ ನಲ್ಲಿ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಇರಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇರುತ್ತದೆಯೋ ಆ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಕೌಶಲ್ಯ, ಸತತ ಪರಿಶ್ರಮ, ತಿಳಿದುಕೊಳ್ಳುವ ಆಸಕ್ತಿ, ಹುಡುಕುವ ತುಡಿತ, ಉತ್ತಮ ವ್ಯಕ್ತಿತ್ವ ಸೇರಿದಂತೆ ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಹುದ್ದೆಗೇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಯುಬಿಡಿಟಿ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಪಿ. ನಾಗರಾಜಪ್ಪ, ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವೇಳೆ ಜಿ. ಬಿ. ವಿನಯ್ ಕುಮಾರ್ ಅವರು ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನನ್ನ ಬೆಸ್ಟ್ ಫ್ರೆಂಡ್ಸ್ ಬುಕ್ಸ್: ಜಿಬಿವಿ
ನನಗೆ ಪುಸ್ತಕ ಓದುವ ಹವ್ಯಾಸ ಮೊದಲಿನಿಂದಲೂ ಇತ್ತು. ನಾನು ಬೆಳೆದಿದ್ದು ಬಡತನದಲ್ಲಿ. ನಮ್ಮದು ಸಾಮಾನ್ಯ ಕುಟುಂಬ. ಪುಸ್ತಕ ಖರೀದಿಸಲು ತೊಂದರೆ ಇಲ್ಲ. ಪುಸ್ತಕಗಳು ನನ್ನ ಒಳ್ಳೆಯ ಗೆಳೆಯ. ಬೆಳಿಗ್ಗೆ ಮತ್ತು ರಾತ್ರಿಯ ವೇಳೆಯಲ್ಲಿ ಪುಸ್ತಕ ಹೆಚ್ಚಾಗಿ ಓದಿದ್ದರಿಂದ ನನಗೆ ಆತ್ಮವಿಶ್ವಾಸ, ಜ್ಞಾನ, ಪರಿಪಕ್ವತೆಗೆ ಅನುಕೂಲವಾಯಿತು. ಇಷ್ಟೊಂದು ಸಾಧನೆ ಮಾಡಲು ಪ್ರೇರಣೆ ನೀಡಿದ್ದೇ ಬುಕ್ಸ್ ಗಳು ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದರು.
ನಾನು ಕಳೆದ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ ಆಗಿತ್ತು. ಇಂಥ ತೀರ್ಮಾನಕ್ಕೆ ಬರುವುದು ಅಷ್ಟು ಸುಲಭವಲ್ಲ. ಇದರಿಂದ ಸಾಕಷ್ಟು ನಾನು ಕಲಿತಿದ್ದೇನೆ. ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಾಗಿ ಪುಸ್ತಕ ಓದಲೇಬೇಕು. ಕೇವಲ ಓದಿನಲ್ಲೇ ಮುಳುಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡರೆ ಅಕಾಡೆಮಿಕ್ ವಿಚಾರದಲ್ಲಿ ಯಶಸ್ಸು ಗಳಿಸಬಹುದು. ನಮ್ಮಲ್ಲಿ ಯಾವುದೇ ಕಾರಣಕ್ಕೂ ಅನಿಶ್ಚಿತತೆ ಇರಬಾರದು ಎಂದು ಕಿವಿಮಾತು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


