Connect with us

ದಿನದ ಸುದ್ದಿ

ಜಾಗತಿಕ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟು

Published

on

  • ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ಸಿಕ್ಕಿದ ದೇಶ ದೇಶಗಳು ಆ ಸುಳಿಯಲ್ಲಿಯೇ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಬಿಕ್ಕಟ್ಟೂ ಮುಂದುವರೆಯುತ್ತದೆ, ಮತ್ತಷ್ಟು ಹದಗೆಡುತ್ತದೆ. ಇಂತಹ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರಲು, ಪ್ರತಿಯೊಂದು ದೇಶದ ಒಳಗೂ, ಒಂದು ಪರ್ಯಾಯ ಅಜೆಂಡಾದೊಂದಿಗೆ ದುಡಿಯುವ ಜನತೆಯನ್ನು ಅಣಿನೆರೆಸಬೇಕಾಗುತ್ತದೆ.

ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಆಗಾಗ ಅಥವಾ ಚಕ್ರೀಯವಾಗಿ ಬಿಕ್ಕಟ್ಟುಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ, ವ್ಯವಸ್ಥೆಯ ಚೌಕಟ್ಟಿನೊಳಗೆ, ಅಂದರೆ ವ್ಯವಸ್ಥೆಯ ಪ್ರಚಲಿತ ವರ್ಗಗಳ ರೂಪ ರಚನೆ ಇವುಗಳಿಗೆ ಅನುಗುಣವಾಗಿ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗತ್ತದೆ. ಇದರಿಂದ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದಷ್ಟೇ. ಈ ಅರ್ಥದಲ್ಲಿ ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಈ ತೇಪೆದಾರಿಗಿಂತಲೂ ಹೆಚ್ಚು ಉಪಯುಕ್ತ ಎನ್ನುವ ಕ್ರಮ ಕೈಗೊಂಡರೂ ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಹೋಗುತ್ತದೆ. ಈ ಮಾತಿಗೆ ಉದಾಹರಣೆಯಾಗಿ ಅಮೇರಿಕಾದಲ್ಲಿ ಟ್ರಂಪ್, ಚೀನಾ, ಭಾರತ ಮತ್ತು ಇತರ ಕೆಲವು ದೇಶಗಳ ಆಮದುಗಳ ಮೇಲೆ ಅಧಿಕ ಸುಂಕ ಹೇರುವ ಮೂಲಕ ಕೈಗೊಂಡಿರುವ ರಕ್ಷಣಾತ್ಮಕ ಕ್ರಮಗಳನ್ನು ಗಮನಿಸಬಹುದು.

ಆದರೆ, ನವ ಉದಾರವಾದಿ ಜಾಗತೀಕರಣದ ವಿಶಾಲ ಚೌಕಟ್ಟನ್ನು ಮೀರದ ಹೊರತು, ಅಂದರೆ, ಈ ಜಾಗತೀಕರಣದ ಚಾಲಕ ಶಕ್ತಿಯೇ ಆಗಿರುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರದ ಹೊರತು, ಟ್ರಂಪ್ ಎಷ್ಟೇ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡರೂ ಬಿಕ್ಕಟ್ಟು ಪರಿಹಾರವಾಗುವುದಿಲ್ಲ. ಅದು ಇನ್ನಷ್ಟು ಹದಗೆಡುತ್ತದೆ.

ಈ ಬಿಕ್ಕಟ್ಟಿನ ರೋಗ ಲಕ್ಷಣಗಳು ಸ್ಪಷ್ಟವಾಗಿಯೇ ಪ್ರಕಟಗೊಂಡಿವೆ. 2008ರ ಬಿಕ್ಕಟ್ಟಿನ ನಂತರ, ಬಡ್ಡಿದರಗಳನ್ನು ಹತ್ತಿರ ಹತ್ತಿರ ಸೊನ್ನೆಯ ಮಟ್ಟಕ್ಕೆ ಇಳಿಸುವ ಅಗ್ಗದ ಬಡ್ಡಿ ನೀತಿಯನ್ನು ಅಮೇರಿಕಾ ಮತ್ತು ಹಲವು ದೇಶಗಳು ಅನುಸರಿಸಿದವು. ಈ ಕ್ರಮದಿಂದಾಗಿ ಜಾಗತಿಕ ಬಂಡವಾಳಶಾಹಿಗೆ ಉಸಿರಾಟ ಸರಾಗವಾಯಿತು. ಅಷ್ಟಾಗಿಯೂ, ವಿಶ್ವವು ಈಗ ಮತ್ತೊಮ್ಮೆ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಅಮೇರಿಕಾದಲ್ಲಿ ವ್ಯವಹಾರ ಮತ್ತು ಉದ್ದಿಮೆಗಳ ಮೇಲಿನ ಹೂಡಿಕೆ ಇಳಿಯುತ್ತಿದೆ. ಈ ವರ್ಷದ ಜುಲೈನಲ್ಲಿ ಅಮೇರಿಕಾದ ಕೈಗಾರಿಕಾ ಉತ್ಪಾದನೆ ಅದರ ಹಿಂದಿನ ತಿಂಗಳಿಗಿಂತ ಶೇ.0.2 ಕಡಿಮೆ ಇತ್ತು. ಈ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಬ್ರಿಟನ್ನಿನ ಮತ್ತು ಜರ್ಮನಿಯ ಅರ್ಥವ್ಯವಸ್ಥೆಗಳೂ ಕುಗ್ಗಿದವು. ಇಟಲಿ, ಬ್ರೆಜಿಲ್, ಮೆಕ್ಸಿಕೊ, ಅರ್ಜೆಂಟೈನಾ ಮತ್ತು ಭಾರತದಂತಹ ದೇಶಗಳಲ್ಲೂ ಅದೇ ಪರಿಸ್ಥಿತಿ ಇದೆ. ಈ ಜಾಗತಿಕ ಹಿಂಜರಿತದ ಪರಿಣಾಮವಾಗಿ ಚೀನಾದಲ್ಲೂ ಬೆಳವಣಿಗೆಯ ದರ ಇಳಿಯುತ್ತಿದೆ.

ಈಗ ತಲೆದೋರುತ್ತಿರುವ ಆರ್ಥಿಕ ಹಿಂಜರಿತಕ್ಕೆ ಎಲ್ಲ ದೇಶಗಳ ನೀತಿ-ನಿರೂಪಕರು ಮತ್ತೊಮ್ಮೆ ಬಡ್ಡಿ ದರಗಳ ಮತ್ತಷ್ಟು ಇಳಿಕೆ ಮಾಡುವ ಮೂಲಕವೇ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಬಡ್ಡಿ ದರಗಳನ್ನು ಹತ್ತಿರ ಹತ್ತಿರ ಋಣಾತ್ಮಕ ಮಟ್ಟಕ್ಕೆ ಇಳಿಸಿರುವ ಯೂರೋಪಿಯನ್ ಕೇಂದ್ರೀಯ ಬ್ಯಾಂಕ್, ಬಡ್ಡಿ ದರಗಳನ್ನು ಇನ್ನೂ ಕೆಳಗಿಳಿಸುವ ಯೋಜನೆಯಲ್ಲಿದೆ. ಭಾರತದಲ್ಲೂ ಸಹ ಈಗಾಗಲೇ ಬಡ್ಡಿ ದರಗಳ ಇಳಿಕೆಯಾಗಿದೆ. ಈ ರೀತಿಯಲ್ಲಿ ಬಡ್ಡಿ ದರಗಳನ್ನು ಇಳಿಕೆ ಮಾಡುತ್ತಿರುವ ಉದ್ದೇಶ ಏನೆಂದರೆ, ಬಡ್ಡಿ ದರ ಕಡಿಮೆ ಇದ್ದರೆ ಬಂಡವಾಳ ಹೂಡಿಕೆ ವೃದ್ಧಿಸುತ್ತದೆ ಎಂಬುದಕ್ಕಿಂತಲೂ ಹೆಚ್ಚಾಗಿ; ಕಡಿಮೆಯ ಬಡ್ಡಿ ದರಗಳಿಂದಾಗಿ ಆಸ್ತಿಗಳ ಬೆಲೆ ಗುಳ್ಳೆಗಳು ಏಳುತ್ತವೆ ಎಂಬುದು. ಇವರ ಪ್ರಕಾರ, ಆಸ್ತಿಗಳ ಬೆಲೆ ಗುಳ್ಳೆಗಳು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುತ್ತವೆ. ಹೇಗೆಂದರೆ, ಆಸ್ತಿಗಳ ಬೆಲೆ ಗುಳ್ಳೆಗಳು ತಮ್ಮ ಸಂಪತ್ತನ್ನು ಹೆಚ್ಚಿಸಿವೆ ಆಸ್ತಿಯ ಒಡೆಯರಿಗೆ ಅನಿಸುತ್ತದೆ. ಅನೇಕ ರೀತಿಯಲ್ಲಿ ಹೆಚ್ಚು ಖರ್ಚುಮಾಡುತ್ತಾರೆ, ಅದರಿಂದಾಗಿ ಬೇಡಿಕೆ ವೃದ್ದಿಸುತ್ತದೆ.

ಎಲ್ಲ ದೇಶಗಳ ನೀತಿ-ನಿರೂಪಕರೂ ಇದೇ ಮಾದರಿಯಲ್ಲೇ ಏಕೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಎರಡನೆಯ ಮಹಾ ಯುದ್ಧದ ನಂತರದ ಅವಧಿಯಲ್ಲಿ-ಅಂದರೆ, ನವ ಉದಾರವಾದಿ ಜಾಗತೀಕರಣವು ಹೆಜ್ಜೆ ಇಡುವ ಮುನ್ನ, ಆರ್ಥಿಕ ಹಿಂಜರಿತದ ಸೂಚನೆ ಇದ್ದಾಗ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಬಹುದಿತ್ತು. ಸರ್ಕಾರಗಳು, ಅಗತ್ಯವಿದ್ದರೆ, ತಮ್ಮ ವಿತ್ತೀಯ ಕೊರತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಏಕೆಂದರೆ, ಆ ಸಮಯದಲ್ಲಿ ಬಂಡವಾಳದ ಹರಿದಾಡುವಿಕೆಯ ಮೇಲೆ ನಿಯಂತ್ರಣವಿತ್ತು. ಹಾಗಾಗಿ, ವಿತ್ತೀಯ ಕೊರತೆಯ ಮಟ್ಟ ಏರಿದ ಕಾರಣದಿಂದಲೇ ಬಂಡವಾಳವು ಪಲಾಯನ ಗೈಯ್ಯುವ ಅಪಾಯವಿರಲಿಲ್ಲ.

ಯುದ್ದಾನಂತರದಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಶಿಲ್ಪಿಗಳಲ್ಲಿ ಒಬ್ಬರಾದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ವಿಶ್ವ ಹೀಗಿರಬೇಕು ಎಂದು ಕಲ್ಪಿಸಿಕೊಂಡಿದ್ದ ದೃಶ್ಯ ಇದಾಗಿತ್ತು. ಹಣಕಾಸು ಬಂಡವಾಳದ ಅಂತಾರಾಷ್ಟ್ರೀಕರಣವನ್ನು ಕೀನ್ಸ್ ವಿರೋಧಿಸಿದ್ದರು. (ಹಣಕಾಸು ಬಂಡವಾಳವು ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರೀಯವಾಗಿಯೇ ಇರಬೇಕು ಎಂದು ಅವರು ಹೇಳಿದ್ದರು).

ಉದ್ಯೋಗ ಸೃಷ್ಟಿಯ ಉದ್ದೇಶಕ್ಕಾಗಿ ಸರ್ಕಾರವು ಕೈಗೊಳ್ಳುವ ಹೆಚ್ಚು ಹೆಚ್ಚು ಖರ್ಚಿನ ಕ್ರಮಗಳನ್ನು ಯಾವತ್ತೂ ವಿರೋಧಿಸುವ ಹಣಕಾಸು ಬಂಡವಾಳವು ಪ್ರಭುತ್ವವನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳುವ ಮೂಲಕ, ರಾಷ್ಟ್ರ-ಪ್ರಭುತ್ವದ ಉದ್ಯೋಗ ಸೃಷ್ಟಿಯ ಸಾಮರ್ಥ್ಯವನ್ನು ಒಳಗೊಳಗೇ ನಾಶಪಡಿಸುತ್ತದೆ ಎಂಬ ನೆಲೆಯಲ್ಲಿ ಅವರು ಹಣಕಾಸು ಬಂಡವಾಳವು ಅಂತಾರಾಷ್ಟ್ರೀಕರಣಗೊಳ್ಳುವುದನ್ನು ವಿರೋಧಿಸಿದ್ದರು. ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸಂರಕ್ಷಕರಾಗಿದ್ದ ಕೀನ್ಸ್, ರಾಷ್ಟ್ರ-ಪ್ರಭುತ್ವವು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸದ ಹೊರತು, ಸಮಾಜವಾದವು ಒಡ್ಡಿದ ಬೆದರಿಕೆಯಿಂದ ಬಂಡವಾಳಶಾಹಿಗೆ ಉಳಿಗಾಲವಿಲ್ಲ ಎಂದು ಭಯಪಟ್ಟಿದ್ದರು.

ಆದರೆ, ಯುದ್ದಾನಂತರದ ಕೆಲವು ವರ್ಷಗಳ ಕಾಲಾವಧಿಯಲ್ಲಿ, ಅಮೇರಿಕಾದ ಪಾವತಿ ಶೇಷದ ಚಾಲ್ತಿ ಖಾತೆಯಲ್ಲಿ ಸತತವಾಗಿ ಬಹಳ ಕಾಲ ಭಾರಿ ಮೊತ್ತದ ಕೊರತೆಯ ಹಣ (ಇದು ಬೇರೆ ಬೇರೆ ದೇಶಗಳು ತಮ್ಮ ರಫ್ತುಗಳ ಮೂಲಕ ಗಳಿಸಿದ ಹಣ), ಮತ್ತು, ತದನಂತರದ ಅವಧಿಯಲ್ಲಿ, ಅಂದರೆ 197೦ರ ದಶಕದಲ್ಲಿ, ತೈಲ ಬೆಲೆಗಳ ವಿಪರೀತ ಹೆಚ್ಚಳದಿಂದಾಗಿ ತೈಲ ಉತ್ಪಾದಕ ದೇಶಗಳ ಅಪಾರ ಲಾಭದ ಆದಾಯವು ಅಭಿವೃದ್ಧಿ ಹೊಂದಿದ ದೇಶಗಳ ಮಹಾ ನಗರ ಕೇಂದ್ರಿತ ಬ್ಯಾಂಕ್‌ಗಳಲ್ಲಿ ಶೇಖರಣೆಯಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಬಂಡವಾಳದ ಹರಿದಾಡುವಿಕೆಯ ಮೇಲಿದ್ದ ನಿಯಂತ್ರಣವನ್ನು ಕಿತ್ತುಹಾಕುವಂತೆ ಹಣಕಾಸು ಬಂಡವಾಳವು ಒತ್ತಡ ಹೇರಿತು. ತನಗೆ ಎಲ್ಲಿಗೆ ಬೇಕೊ ಅಲ್ಲಿಗೆ ಮುಕ್ತವಾಗಿ ಚಲಿಸಲು ಅನುವಾಗುವಂತೆ ಇಡೀ ವಿಶ್ವವನ್ನೇ ತೆರೆದಿಡಬೇಕು ಎಂದು ಹಣಕಾಸು ಬಂಡವಾಳವು ಬಯಸಿತು ಮತ್ತು ಆ ಪ್ರಯತ್ನದಲ್ಲಿ ಕೊನೆಗೆ ಯಶಸ್ವಿಯೂ ಆಯಿತು. ಈ ರೀತಿಯಲ್ಲಿ ಹಣಕಾಸು ಬಂಡವಾಳವು ಜಾಗತಿಕವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಿಕೊಂಡಿತು.

ಈ ವಿದ್ಯಮಾನವು, ಉದ್ಯೋಗ ಸೃಷ್ಟಿಯ ಮಟ್ಟ ಕಾಯ್ದುಕೊಳ್ಳುತ್ತಿದ್ದ ತನ್ನ ಜವಾಬ್ದಾರಿಕೆಯಿಂದ ರಾಷ್ಟ್ರ-ಪ್ರಭುತ್ವವು ಹಿಂದೆ ಸರಿಯಿತು ಎಂಬುದನ್ನು ಸೂಚಿಸುತ್ತದೆ. ಹಾಗಾಗಿ, ಈ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದ ನವ ಉದಾರ ಹಣಕಾಸು ಬಂಡವಾಳವು ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸಲು ಉಳಿಸಿಕೊಂಡಿರುವ ಏಕೈಕ ಮಾರ್ಗವೇ ಆಸ್ತಿಗಳ ಬೆಲೆ ಗುಳ್ಳೆಗಳ ಉದ್ದೀಪನೆ; ಮತ್ತು ಈ ಉದ್ದೇಶಕ್ಕಾಗಿ ಬಡ್ಡಿದರ ನೀತಿಯ ಬಳಕೆ.

ಆದರೆ, ಯಾವಾಗ ಬೇಕಾದರೂ ನಿಯಂತ್ರಿಸಬಹುದಾದ ಸರ್ಕಾರದ ವೆಚ್ಚಗಳಂತಲ್ಲದೆ, ಬೇಕು ಎಂದ ಕೂಡಲೇ ಗುಳ್ಳೆಗಳು ಪ್ರತ್ಯಕ್ಷವಾಗುವುದಿಲ್ಲ. 1990ರ ದಶಕದಲ್ಲಿ (ಅಮೇರಿಕಾದಲ್ಲಿ ಡಾಟ್-ಕಾಂ ಗುಳ್ಳೆಗಳು), ಮತ್ತು ಈ ಶತಮಾನದ ಆರಂಭದ ವರ್ಷಗಳಲ್ಲಿ (ಅಮೇರಿಕಾದಲ್ಲಿ ವಸತಿ ಗುಳ್ಳೆಗಳು) ಈ ಗುಳ್ಳೆಗಳು ಒಟ್ಟಾರೆ ಬೇಡಿಕೆಯನ್ನು ಸ್ವಲ್ಪ ಸಮಯದ ವರೆಗೆ ಉದ್ದೀಪಿಸಿದಂತೆ ಕಂಡಿತು. ಆದರೆ, ವಸತಿ ಗುಳ್ಳೆಗಳು ಒಡೆದ ಕೂಡಲೇ ಜನ ಜಾಗೃತರಾದರು. ಬಡ್ಡಿದರಗಳನ್ನು ಹತ್ತಿರ ಹತ್ತಿರ ಸೊನ್ನೆಯ ಮಟ್ಟಕ್ಕೆ ಇಳಿಸಿದರೂ ಸಹ, ಅಷ್ಟೇ ಪರಿಣಾಮದ ಹೊಸ ಗುಳ್ಳೆಗಳು ಪ್ರತ್ಯಕ್ಷವಾಗಲಿಲ್ಲ.

ಅದೇ ಸಮಯದಲ್ಲಿ, ಪ್ರತಿಯೊಂದು ದೇಶದಲ್ಲೂ ಮತ್ತು ಇಡೀ ವಿಶ್ವದಲ್ಲೇ ಒಟ್ಟಾರೆ ಬೇಡಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಭಾವಪೂರ್ಣವಾಗಿ ಕಾರ್ಯ ಪ್ರವೃತ್ತವಾಗಿರುವ ಇನ್ನೊಂದು ಅಂಶವೂ ಇದೆ. ಒಟ್ಟು ಉತ್ಪತ್ತಿಯಲ್ಲಿ ಮಿಗುತಾಯದ ಪಾಲು ಹೆಚ್ಚುತ್ತಿರುವ ಅಂಶವೇ ಆ ಇನ್ನೊಂದು ಅಂಶ. ಜಾಗತೀಕರಣವೆಂದರೆ, ಎಲ್ಲಕ್ಕಿಂತ ಮಿಗಿಲಾಗಿ, ಹಣಕಾಸೂ ಸೇರಿದಂತೆ, ಬಂಡವಾಳವು ದೇಶ ದೇಶಗಳ ಗಡಿಯಾಚೆಗೆ ಮುಕ್ತವಾಗಿ ಚಲಿಸುವ ಅವಕಾಶ. ಬಂಡವಾಳದ ಈ ಚಲನೆಯಿಂದಾಗಿ, ಜಾಗತಿಕ ಬೇಡಿಕೆಯನ್ನು ಪೂರೈಸಲು ಹೆಚ್ಚು-ಕೂಲಿಯ ಬೃಹತ್ ನಗರಗಳಲ್ಲಿ ನೆಲೆಸಿದ್ದ ಅನೇಕಾನೇಕ ಚಟುವಟಿಕೆಗಳು ಕಡಿಮೆ-ಕೂಲಿಯ ಮೂರನೆಯ ಜಗತ್ತಿನ ದೇಶಗಳಲ್ಲಿ ಮರು-ನೆಲೆಗೊಂಡವು. ಈ ವಿದ್ಯಮಾನದಿಂದಾಗಿ ಮುಂದುವರೆದ ದೇಶಗಳ ಕಾರ್ಮಿಕರನ್ನು ಮೂರನೆಯ ಜಗತ್ತಿನ ದೇಶಗಳ ಕಾರ್ಮಿಕರೊಂದಿಗೆ ಪೈಪೋಟಿಗೆ ತಳ್ಳಿದ ಕಾರಣದಿಂದಾಗಿ ಮುಂದುವರೆದ ದೇಶಗಳ ಕಾರ್ಮಿಕರ ಕೂಲಿಯು ಕೆಳ ಮಟ್ಟದಲ್ಲೇ ಉಳಿಯುವಂತಾಗಿದೆ.

ಅದೇ ಸಮಯದಲ್ಲಿ, ಮೂರನೆಯ ಜಗತ್ತಿನ ದೇಶಗಳ ಕಾರ್ಮಿಕರ ಕೂಲಿಯು ಬದುಕುಳಿಯುವ ಮಟ್ಟದಲ್ಲೇ ಉಳಿದಿದೆ, ಏಕೆಂದರೆ, ಕೈಗಾರಿಕಾ ಚಟುವಟಿಕೆಗಳು ಮರು-ನೆಲೆಗೊಂಡ ಬಳಿಕವೂ ಬರಿದಾಗದಷ್ಟು ದೊಡ್ಡ ಪ್ರಮಾಣದ ಮೀಸಲು ಶ್ರಮಿಕ ಪಡೆ ಮೂರನೆಯ ಜಗತ್ತಿನ ದೇಶಗಳಲ್ಲಿದೆ. ಆದ್ದರಿಂದ, ಜಗತ್ತಿನಾದ್ಯಂತ ಕಾರ್ಮಿಕರ ಉತ್ಪಾದಕತಾ ಪರಿಮಾಣವು ಹೆಚ್ಚಿದರೂ ಸಹ, ಜಗತ್ತಿನಾದ್ಯಂತ ಕಾರ್ಮಿಕರ ಕೂಲಿಯ ದರದ ಏರಿಕೆಯ ಪರಿಮಾಣವು ಹೆಚ್ಚಾಗುವುದಿಲ್ಲ. ಈ ಕಾರಣದಿಂದಾಗಿಯೇ ಪ್ರತಿಯೊಂದು ದೇಶದಲ್ಲೂ ಮತ್ತು ಇಡೀ ವಿಶ್ವದಲ್ಲೇ ಮಿಗುತಾಯದ ಪಾಲು ಹೆಚ್ಚುತ್ತಿದೆ.

ಮಿಗುತಾಯದ ಪಾಲಿನ ಈ ಪರಿಯ ಹೆಚ್ಚಳವು ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ (Overproduction) ಪ್ರವೃತ್ತಿಯನ್ನು ಬೆಳೆಸುತ್ತದೆ, ಏಕೆಂದರೆ, ತಮ್ಮ ವರಮಾನದ ಪ್ರತಿ ಯೂನಿಟ್‌ನಲ್ಲಿ ಕೂಲಿಗಾರರ ಬಳಕೆಯ ಭಾಗವು, ಮಿಗುತಾಯ ಸಂಪಾದಿಸುವವರ ವರಮಾನದ ಪ್ರತಿ ಯೂನಿಟ್‌ನ ಬಳಕೆಯ ಭಾಗಕ್ಕಿಂತ ಬಹಳ ದೊಡ್ಡದಿರುತ್ತದೆ. ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಈ ಪ್ರವೃತ್ತಿಯನ್ನು ಪ್ರತಿಯೊಂದು ದೇಶದೊಳಗೂ ಸರ್ಕಾರದ ವೆಚ್ಚಗಳನ್ನು ಏರಿಸುವ ಮೂಲಕ ಸರಿದೂಗಿಸಬಹುದಿತ್ತು. ಆದರೆ ಇದು ಸಾಧ್ಯವೇ ಇಲ್ಲದುದರಿಂದ, ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಪ್ರವೃತ್ತಿಯನ್ನು ತಡೆಯುವ ಏಕ ಮಾತ್ರ ಸಾಧ್ಯತೆ ಎಂದರೆ, ಆಸ್ತಿಗಳ ಬೆಲೆ ಗುಳ್ಳೆಗಳನ್ನು ಎಬ್ಬಿಸುವುದು. ಇಂತಹ ಗುಳ್ಳೆಗಳು ಏಳದೆ ಇದ್ದಾಗ ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಪ್ರವೃತ್ತಿಯು ಪೂರ್ಣ ಬಲದೊಂದಿಗೆ ಕೆಲಸಮಾಡುತ್ತದೆ. ನಾವೀಗ ನೋಡುತ್ತಿರುವುದು ಈ ವಿದ್ಯಮಾನವನ್ನೇ.

ಇಂತಹ ಪರಿಸ್ಥಿತಿಯಲ್ಲಿ ರೂಢಿಗತವಾಗಿ ಬಳಸುವ ಬಡ್ಡಿ ದರ ಇಳಿಸುವ ಉಪಕರಣವು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ, ಒಟ್ಟಾರೆ ಬೇಡಿಕೆಯ ಕೊರತೆಯನ್ನು ಸರಿದೂಗಿಕೊಳ್ಳುವ ಪ್ರಯತ್ನವಾಗಿ, ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಲಾರದ ಪರಿಸ್ಥಿತಿಯಲ್ಲಿ, ಡೊನಾಲ್ಡ್ ಟ್ರಂಪ್ ತಮ್ಮ ದೇಶ ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಹೊರಬರಲು ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಬಿಕ್ಕಟ್ಟನ್ನು ಬೇರೆ ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಚೀನಾ ದೇಶಕ್ಕೆ, ರಫ್ತು ಮಾಡುತ್ತಿದ್ದಾರೆ ಚೀನಾದಿಂದ ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳ ಮೇಲೆ ಟ್ರಂಪ್ ಶೇ.25ರಷ್ಟು ಸುಂಕ ಹೇರಿದ್ದಾರೆ. ಮುಯ್ಯಿಗೆ ಮುಯ್ಯಿ ಎಂಬಂತೆ ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳ ಮೇಲೆ ಚೀನಾ ಶೇ.25ರಷ್ಟು ಸುಂಕ ಹೇರಿದೆ.

ಬಿಕ್ಕಟ್ಟಿನಿಂದ ಹೊರಬರುವ ಸಾಧನವಾಗಿ ಅಮೇರಿಕಾ ಆರಂಭಿಸಿದ ಈ ವ್ಯಾಪಾರ ಸಮರವು ಇಡೀ ವಿಶ್ವದ ಅರ್ಥವ್ಯವಸ್ಥೆಯೇ ಬಿಕ್ಕಟ್ಟಿಗೆ ಒಳಗಾಗುವಂತೆ ಮಾಡಿದೆ, ಹೇಗೆಂದರೆ, ವಿಶ್ವದ ಬಂಡವಾಳಗಾರರಲ್ಲಿ ಕೆಲವರಿಗಾದರೂ ಹೂಡಿಕೆ ಮಾಡಲು ಇದ್ದ ಅಲ್ಪ ಸ್ವಲ್ಪ ಪ್ರೇರಣೆಯನ್ನೂ ಈ ವ್ಯಾಪಾರ ಸಮರವು ಒಳಗೊಳಗೇ ಕುಗ್ಗಿಸಿದೆ. ಆಸ್ತಿಗಳ ಬೆಲೆ ಗುಳ್ಳೆಗಳನ್ನು ಎಬ್ಬಿಸುವ ಉದ್ದೇಶದಿಂದ ಕೈಗೊಂಡ ಬಡ್ಡಿ ದರ ಇಳಿಕೆಯ ಕ್ರಮವು ಅಂದುಕೊಂಡದ್ದಕ್ಕಿಂತ ಭಿನ್ನವಾಗಿ ಪರಿಣಮಿಸಿದೆ – ವಿಶ್ವದ ಷೇರು ಮಾರುಕಟ್ಟೆಗಳು ಕುಸಿದು ಬೀಳುತ್ತಿವೆ. ಉದಾಹರಣೆಗೆ, ನ್ಯೂಯಾರ್ಕ್‌ನ ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯು ಆಗಸ್ಟ್ 14ರಂದು ಈ ವರ್ಷದ ಅತಿ ದೊಡ್ಡ ಕುಸಿತ ಕಂಡಿದೆ. ಅದನ್ನು ಹಿಂಬಾಲಿಸಿ ವಿಶ್ವದ ಷೇರು ಮಾರುಕಟ್ಟೆಗಳೂ ಕುಸಿದು ಬಿದ್ದಿವೆ.

ಪ್ರತಿಯೊಂದು ದೇಶದೊಳಗೂ ಸರ್ಕಾರದ ವೆಚ್ಚಗಳನ್ನು ಏರಿಸುವುದು ಸಾಧ್ಯವಾದರೆ, ನನ್ನ ನೆರೆಯವನು ಹಾಳಾಗಲಿ ಎನ್ನುವ ನೀತಿಯ ಅಗತ್ಯವಿಲ್ಲ. ಸರ್ಕಾರದ ವೆಚ್ಚಗಳಿಂದ ಉಂಟಾದ ಬೇಡಿಕೆ ಹೊರ ದೇಶಗಳಿಗೆ ಸೋರಿಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಒಂದು ವೇಳೆ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಂಡರೂ ಸಹ, ಅದರಿಂದಾಗಿ ಬೇರೇ ದೇಶಗಳಿಂದ ಮಾಡಿಕೊಳ್ಳುವ ಆಮದುಗಳಲ್ಲಿ ಕಡಿತವಾಗುವುದಿಲ್ಲ, ಏಕೆಂದರೆ, ಮಾರುಕಟ್ಟೆಯು ತನ್ನಷ್ಟಕ್ಕೆ ತಾನೇ ಬೆಳೆಯುತ್ತಿರುತ್ತದೆ. ಆದರೆ. ಸರ್ಕಾರದ ವೆಚ್ಚಗಳು ಏರಿಕೆಯಾಗದ ಸಂರ್ಭದಲ್ಲಿ (ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಸರ್ಕಾರದ ವೆಚ್ಚಗಳ ಏರಿಕೆಯನ್ನು ವಿರೋಧಿಸುತ್ತದೆ; ಈ ಕಾರಣದಿಂದಾಗಿಯೇ ಬಹುತೇಕ ಎಲ್ಲಾ ದೇಶಗಳೂ ತಮ್ಮ ವಿತ್ತೀಯ ಕೊರತೆಗೆ ಮಿತಿಯನ್ನು ವಿಧಿಸುವ ಕಾನೂನು ತಂದಿವೆ), ಒಂದು ದೇಶವು ಅನುಸರಿಸಬಹುದಾದ ನೀತಿಯನ್ನು ಆಯ್ದುಕೊಳ್ಳಲು ಆ ದೇಶಕ್ಕೆ ನನ್ನ ನೆರೆಯವನು ಹಾಳಾಗಲಿ ಎನ್ನುವ ನೀತಿಯನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಎಲ್ಲ ದೇಶಗಳ ಬಿಕ್ಕಟ್ಟಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ನಿಖರವಾಗಿ ಹೇಳುವುದಾದರೆ, ಈ ಪರಿಸ್ಥಿತಿಯೇ ನವ ಉದಾರ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟಿನ ಹೆಗ್ಗುರುತು. ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ಸಿಕ್ಕಿದ ದೇಶ ದೇಶಗಳು ಆ ಸುಳಿಯಲ್ಲಿಯೇ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಬಿಕ್ಕಟ್ಟೂ ಮುಂದುವರೆಯುತ್ತದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಷ್ಟು ಪ್ರಯತ್ನಗಳನ್ನು ಮಾಡಿದರೂ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರಲು, ಪ್ರತಿಯೊಂದು ದೇಶದ ಒಳಗೂ, ಒಂದು ಪರ್ಯಾಯ ಅಜೆಂಡಾದೊಂದಿಗೆ ದುಡಿಯುವ ಜನತೆಯನ್ನು ಅಣಿನೆರೆಸಬೇಕಾಗುತ್ತದೆ.

( ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

-ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

Published

on

ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ 23ಕ್ಕೆ ಹೆಚ್ಚು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ *ಮಹಬೂಬ್ ಭಾಷಾ* ಆಗ್ರಹಿಸಿದ್ದಾರೆ ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ ಯುವಜನರು ಹಾಗೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು, ಸಂವಿಧಾನ ವಿರೋಧಿ ನಡೆ ಹಾಗೂ ಹೋರಾಟವನ್ನು ಹತ್ತಿಕ್ಕು ಹೊನ್ನಾರವಾಗಿದೆ.

ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಕಾರ್ಪೊರೇಟರ್ ಶಿಕ್ಷಣ ನೀತಿಗಳ ಕಾರಣ, ಪರೀಕ್ಷೆಯ ಅಕ್ರಮ ವಿರುದ್ಧ ಹೋರಾಟ ಎರಡನೇ ಸ್ವತಂತ್ರ ಸಂಗ್ರಾಯದ ರೀತಿಯಲ್ಲಿ ದೇಶದಿಂದ ವ್ಯಾಪಿಸುತ್ತಿದ್ದು, ಆಳುವ ಸರ್ಕಾರ ರಾಷ್ಟ್ರದ ಭವಿಷ್ಯ ವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದೆಂದು ಹೇಳಿದ್ದಾರೆ.

ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸುದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ

Published

on

ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ

ರಾಜಿನಾಮೆ ನೀಡಬೇಕು. ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ,ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ವಿನಾಯಕ ಬಿ.ಎನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.

ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ
ಯುವಜನರು, ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಸೊನಮ್ ವಾಂಗ್ಟಕ್ ಅವರನ್ನು ಏಕಾಏಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಸಂವಿಧಾನವಿರೋಧಿ ನಡೆ, ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀಟ್ ಹಗರಣ, ವಿದ್ಯಾರ್ಥಿಗಳ ಆತ್ಮ ಹತ್ಯೆಗೆ ಕಾರ್ಪೊರೇಟ್ ಶಿಕ್ಷಣ ನೀತಿಗಳು ಕಾರಣ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸುತ್ತಿದೆ. ಆಳುವ ಸರ್ಕಾರ ರಾಷ್ಟ್ರದ ಭವಿಷ್ಯವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದು’.ಎಂದು ತಿಳಿಸಿದ್ದಾರೆ.

ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಂದನೆಗಳೊಂದಿಗೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ

Published

on

ಸುದ್ದಿದಿನ,ದಾವಣಗೆರೆ‌ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು ಡಿಜಿಟಲೀಕರಣ ಸಾಧನೆ ಮಾಡಲಾಗಿರುವುದರಿಂದ, ಪ್ರಗತಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.

ಅವರು ಮಂಗಳವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಒಟ್ಟು 1,97,048 ಮತದಾರರನ್ನು ಹೊಂದಿದ್ದು ಎಲ್ಲಾ 1,97,048 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ ಇದುವರೆಗೆ ಒಟ್ಟು 1,81,890 ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದ್ದು, ಶೇಕಡಾ 92.31 ರಷ್ಟು ಗುರಿಯನ್ನು ತಲುಪಲಾಗಿದೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆಯಲ್ಲಿ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಗಣತಿ ನಮೂನೆಗಳ ಹಂಚಿಕೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಇನ್ನು ಕೇವಲ 4,165 ಫಾರ್ಮ್‌ಗಳು (ಶೇಕಡಾ 2.11) ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಇವೆ ಕ್ಷೇತ್ರದಲ್ಲಿ ಯಾವುದೇ ಹಂಚಿಕೆಯಾಗದ ಫಾರ್ಮ್‌ಗಳು ಬಾಕಿ ಉಳಿದಿಲ್ಲ, ಬಾಕಿ ಉಳಿದಿರುವ ಗಣತಿ ನಮೂನೆಗಳ ಗಣಕೀಕರಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಮನೆ ಮನೆ ಭೇಟಿ ಸಂದರ್ಭದಲ್ಲಿ ಇಂದಿನವರೆಗೆ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,993 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 193 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5059 ಶಾಶ್ವತ ವಲಸೆ, 3951 ಮರಣ ಪ್ರಕರಣ, 1760 ದ್ವಿಪ್ರತಿ ನಮೂನೆಗಳು ಹಾಗೂ 30 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ದಾವಣಗೆರೆ ತಾಲ್ಲೂಕು ತಹಶೀಲ್ದಾರ್‌ ರಾಜೇಶ್‌ ಕುಮಾರ್‌ ಸಿ ಅವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending