Connect with us

ದಿನದ ಸುದ್ದಿ

ಕೊರೊನಾ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ನಿಂತಿದೆ : ಸಚಿವ ಭೈರತಿ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ :1947ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದ ಭಾರತ, 1950ರ ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೊರೊನಾದಂತಹ ಸಂದರ್ಭವನ್ನೂ ದೇಶ ಸಮರ್ಥವಾಗಿ ಎದುರಿಸಿ ಜನರ ನೆರವಿಗೆ ಸರ್ಕಾರ ನಿಂತಿದೆ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ(ಭೈರತಿ) ನುಡಿದರು.

ಜಿಲ್ಲಾಡಳಿತ ವತಿಯಿಂದ ಜ.26 ರಂದು ಬೆಳಿಗ್ಗೆ 9 ಗಂಟೆಗೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನೆರೆವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿದರು.

ಮಹಾತ್ಮಾ ಗಾಂಧಿ, ನೆಹರೂ, ಜವಹರಲಾಲ್, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರಂಥ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಪಡೆದ ಸ್ವಾತಂತ್ರ್ಯ ಸತ್ಯ-ಶಾಂತಿ ಹಾಗೂ ಅಹಿಂಸೆಯಿಂದ ಪ್ರೇರಿತ ಗೊಂಡದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದ ಭಾರತಕ್ಕೆ ಈಗ 74 ರ ಹರೆಯ. ಭಾರತಕ್ಕೆ ಸಂವಿಧಾನ ಪ್ರಾಪ್ತವಾಗಿ 72 ವರ್ಷಗಳು ಸಂದದ್ದೂ ಅವಿಸ್ಮರಣೀಯ.

ಸಂವಿಧಾನದ ಕರಡು ರಚನಾ ಸಮಿತಿಯಲ್ಲಿ ಡಾ|| ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿತ್ತು. ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಅಂಬೇಡ್ಕರ್ ಅವರಿಗೆ ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅನುಭವ ನೆರವಾಯಿತು. ಡಾ|| ಅಂಬೇಡ್ಕರ್‍ರವರ ಸೇವೆಗೆ ದೊರೆತ ಮನ್ನಣೆಗೆ ಇವರನ್ನು “ಸಂವಿಧಾನದ ಪಿತಾಮಹ” ಎಂದು ನಾವು ಸ್ಮರಿಸುವಂತಾಗಿದೆ.

ಗಣರಾಜ್ಯವಾದ ತರುವಾಯ ದಾವಣಗೆರೆ ಜಿಲ್ಲೆಯು ಅನೇಕ ಬೆಳವಣಿಗೆಯನ್ನು ಕಂಡಿದೆ. ಈ ಜಿಲ್ಲೆಯ ಇತಿಹಾಸ ನೋಡುವುದಾದರೆ ದಾವಣಗೆರೆ ಜಿಲ್ಲೆಯು ಭೌಗೋಳಿಕವಾಗಿ ಧಾರವಾಡ ಶಿಲಾ ಪದರಿನ ವಿನ್ಯಾಸದ ಮೇಲೆ ರಚನೆಗೊಂಡಿದ್ದು, ಆಗಸ್ಟ್ 15, 1997 ರಲ್ಲಿ ನೂತನ ಜಿಲ್ಲೆಯಾಗಿ ರೂಪುಗೊಂಡಿತು.

2020 ರ ಆರಂಭದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಜಗತ್ತೇ ತಲ್ಲಣಿಸುವಂತೆ ಮಾಡಿದ ಸಂದರ್ಭದಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಕಟ್ಟಿಹಾಕಲು ಕಾರ್ಯೋನ್ಮುಖವಾಗಿ ಮಾಡಿದ ವ್ಯವಸ್ಥಿತ ಹೋರಾಟದ ಫಲವಾಗಿ ಇಂದು ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಇದಕ್ಕಾಗಿ ಶ್ರಮಿಸಿದ ಜಿಲ್ಲಾಡಳಿತದ ಕಾರ್ಯವನ್ನು ಶ್ಲಾಘಿಸುತ್ತೇನೆ. ಸಾವಿರ ಸಂಖ್ಯೆಯಲ್ಲಿದ್ದ ಕೊರೊನಾ ಪ್ರಕರಣಗಳು ಇಂದು ಎರಡಂಕಿಗೆ ಬಂದಿವೆ.. ಇದೇ ಸಂದರ್ಭದಲ್ಲಿ ಸಂಜೀವಿನಿಯಂತೆ ಬಂದಿರುವ ಲಸಿಕೆ ನಮ್ಮಲ್ಲಿ ಮತ್ತಷ್ಟು ಹುಮ್ಮಸ್ಸನ್ನು ತುಂಬಿದೆ. ಈ ಲಸಿಕೆ ಅಭಿಯಾನವು ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ಕೊರೊನಾ ಸಂದರ್ಭದಲ್ಲಿ ನಮ್ಮ ಸರ್ಕಾರ ಎಲ್ಲ ಜನ ವರ್ಗಗಳ ಶ್ರೇಯೋಭಿವೃದ್ದಿಗಾಗಿ ಕಂಕಣಬದ್ದವಾಗಿ ಶ್ರಮಿಸಿ, ರೈತರು, ಕಾರ್ಮಿಕರು, ನೇಕಾರರು ಸೇರಿದಂತೆ ದುಡಿಯುವ ವರ್ಗಗಳ ನೆರವಿಗೆ ನಿಂತಿದ್ದು, ಇದೇ ಸಂದರ್ಭದಲ್ಲಿ ಅತಿವೃಷಿಯಿಂದಾದ ಬೆಳೆ, ಮನೆ, ಜಾನುವಾರು ಹಾನಿಗಳಿಗೆ ಪರಿಹಾರವನ್ನು ನೀಡಿ ಎಲ್ಲರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕೋವಿಡ್-19ರ ಹೋರಾಟದಲ್ಲಿ ಸೇನಾನಿಗಳಾಗಿ ಕಾರ್ಯನಿರ್ವಹಿಸಿ ಮೃತಪಟ್ಟ ನಾಲ್ಕು ಪೊಲೀಸರ ಕುಟುಂಬಗಳಿಗೆ ತಲಾ 30 ಲಕ್ಷದಂತೆ ಪರಿಹಾರ ನೀಡಲಾಗಿದೆ.

ಮಹನೀಯರೇ, ಜನಸಮಾನ್ಯರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಕೊಳ್ಳುತ್ತಿದ್ದು, ಸರ್ಕಾರದ ಉತ್ತಮ ಕಾರ್ಯಗಳಿಗೆ ಸಾರ್ವಜನಿಕರು ಒತ್ತಾಸೆಯಾಗಿ ನಿಲ್ಲಬೇಕು ಮತ್ತು ಅವುಗಳ ಸಂಪೂರ್ಣ ಲಾಭವನ್ನು ವೈಯಕ್ತಿಕವಾಗಿ ಮತ್ತು ಸಮಷ್ಠಿಯಾಗಿ ಪಡೆಯಬೇಕು ಎಂದು ವಿನಂತಿಸುತ್ತೇನೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ 826 ಮಿಮೀ ಮಳೆಯಾಗಿದ್ದು ಶೇ.25 ರಷ್ಟು ಹೆಚ್ಚು ಮಳೆಯಾಗಿರುತ್ತದೆ. 2020-21 ನೇ ಸಾಲಿನಲ್ಲಿ ಇದುವರೆಗೂ ವಿವಿಧ ಬೆಳೆಗಳ ವಿವಿಧ ತಳಿಗಳ 17070 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ.

2019-20 ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಶೇಂಗಾ ಬೆಳೆಯಲ್ಲಿ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಗ್ರಾಮದ ರಮೇಶಪ್ಪ ಕೆ ಇವರು ಪ್ರಥಮ ಸ್ಥಾನ ಹಾಗೂ ನಾಗರಾಜಪ್ಪ ಇವರು ದ್ವಿತೀಯ ಸ್ಥಾನ ಮತ್ತು ಭತ್ತ (ನೀರಾವರಿ) ಬೆಳೆಯಲ್ಲಿ ಹರಿಹರ ತಾಲ್ಲೂಕಿನ ಧೂಳೆಹೊಳೆಯ ರಮೇಶ್ ಜಿ. ಎನ್. ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಜಿಲ್ಲೆಯಲ್ಲಿ ಕೋವಿಡ್‍ನ್ನು ಎಲ್ಲರ ಸಹಕಾರದಿಂದ ದಿಟ್ಟವಾಗಿ ಎದುರಿಸಲಾಗಿದ್ದು, ಪಾಸಿಟಿವಿಟಿ ದರವು 0.6% ಇರುತ್ತದೆ. ಕೋವಿಡ್-19 ಸೋಂಕು ಹೊಂದಿದ ರೋಗಿಗಳಿಗೆ 240 ಹಾಸಿಗೆಗಳ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ಸೋಂಕು ಹೊಂದಿದ ರೋಗಿಗಳಿಗೆ 20 ಹಾಸಿಗೆಗಳ ವೈದ್ಯಕೀಯ ತೀವ್ರ ನಿಗಾ ಘಟಕದ ವ್ಯವಸ್ಥೆ ಮಾಡಲಾಗಿದೆ. 6000 ಲೀಟರ್ ಸಾಮಥ್ರ್ಯದ ಮೆಡಿಕಲ್ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್-19 ರೋಗಿಗಳಿಗೆ ದಿನದ 24 ಗಂಟೆ ಆಕ್ಸಿಜನ್ ವ್ಯವಸ್ಥೆ ದೊರೆಯುವಂತೆ ಮಾಡಲಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ರೋಗ ಪತ್ತೆಗಾಗಿ ದಿನಕ್ಕೆ ಒಂದು ಸಾವಿರ ಪರೀಕ್ಷಾ ಪ್ರಯೋಗಗಳ ವ್ಯವಸ್ಥೆ ಇರುವ ಸುಸಜ್ಜಿತ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯವನ್ನು ಸ್ಥಾಪಿಸಿದ್ದು, ಇಲ್ಲಿಯವರೆಗೆ 1 ಲಕ್ಷದ 40 ಸಾವಿರ ಪ್ರಯೋಗಗಳನ್ನು ಮಾಡಿದ್ದು, ಅದರಿಲ್ಲಿ 5429 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ.

ಲಾಕ್‍ಡೌನ್ ವೇಳೆಯಲ್ಲಿ ಸರ್ಕಾರ ವಿವಿಧ ಯೋಜನೆಗಳಡಿ ಸಂತ್ರಸ್ತರಿಗೆ ಪರಿಹಾರ ನೀಡಿ ಸಂತ್ರಸ್ತರ ನೆರವಿಗೆ ನಿಂತಿದ್ದು, ಮೆಕ್ಕೆಜೋಳ ಬೆಳೆದ 66148 ರೈತರಿಗೆ ರೂ. 33.7 ಕೋಟಿ, ಹೂ, ಹಣ್ಣು ಹಾಗೂ ತರಕಾರಿ ಬೆಳೆದ 4199 ರೈತರಿಗೆ 3. 97 ಕೋಟಿ, ಕಟ್ಟಡ ಕಾರ್ಮಿಕರಿಗೆ ರೂ. 45.90 ಕೋಟಿ, 1438 ಕ್ಷೌರಿಕರು ಹಾಗೂ 2200 ಅಗಸರು ಒಟ್ಟು 3638 ಫಲಾನುಭವಿಗಳಿಗೆ 1.81 ಕೋಟಿ ಮತ್ತು 5159 ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರೂ. 2,57,95,000/- ಸಹಾಯಧನ ವಿತರಿಸಲಾಗಿರುತ್ತದೆ.

ಲಾಕ್‍ಡೌನ್ ವೇಳೆ ನಗರ ಸ್ಥಳೀಯ ಸಂಸ್ಥೆ ವತಿಯಿಂದ 5.73 ಲಕ್ಷ ಲೀಟರ್ ಹಾಲು ವಿತರಣೆ ಮಾಡಲಾಗಿರುತ್ತದೆ. 13.19 ಲಕ್ಷ ರ 583 ಪಡಿತರ ಚೀಟಿದಾರರಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 6979 ವಲಸೆ ಕಾರ್ಮಿಕರು, ಅಲೆಮಾರಿಗಳು, ಸಂಕಷ್ಟದಲ್ಲಿದ್ದ ಪಡಿತರಚೀಟಿರಹಿತ ಕುಟುಂಬಗಳು, ಭಿಕ್ಷುಕರು, ತೃತೀಯ ಲಿಂಗಿಗಳಿಗೆ ರೂ. 67.69 ಮೊತ್ತದ ಆಹಾರ ಕಿಟ್‍ಗಳನ್ನು ನೀಡಲಾಗಿರುತ್ತದೆ.

ಗ್ರಾಮವಿಕಾಸ ಯೋಜನೆಯಡಿ ದಾವಣಗೆರೆ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರದ 27 ಗ್ರಾಮಗಳನ್ನು ಆಯ್ಕೆ ಮಾಡಿ, ರೂ. 14.19 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. ಹಾಗೂ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಒಟ್ಟು 25 ಗ್ರಾಮಗಳು ಆಯ್ಕೆಯಾಗಿದ್ದು, ಪ್ರತಿ ಗ್ರಾಮಕ್ಕೆ ರೂ. 1 ಕೋಟಿಯಂತೆ ನಿಗದಿಯಾಗಿದ್ದು ಈವರೆಗೆ ಸರ್ಕಾರದಿಂದ ರೂ. 13.87 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಎಲ್ಲಾ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 28 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡು ಕಾರ್ಯಾಚರಣೆÉಯಲ್ಲಿವೆ.

ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿನ 1723 ಅಂಗನವಾಡಿ ಕೇಂದ್ರಗಳ ಮುಖಾಂತರ 6 ತಿಂಗಳಿಂದ 6 ವರ್ಷ ಒಳಪಟ್ಟ 1,11,264 ಫಲಾನುಭವಿಗಳಿಗೆ ಪ್ರತಿ ತಿಂಗಳು ಕೆನೆಸಹಿತ ಹಾಲಿನ ಪುಡಿ ವಿತರಿಸಲಾಗುತ್ತಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ 2020-21ನೇ ಸಾಲಿಗೆ 5068 ಹೆಣ್ಣು ಮಕ್ಕಳಿಗೆ ತಲಾ ರೂ.1 ಲಕ್ಷ ಮೌಲ್ಯದ ಭಾಗ್ಯಲಕ್ಷ್ಮಿ ಬಾಂಡ್‍ಗಳನ್ನು ಒದಗಿಸಲಾಗಿದೆ.

ಕೋವಿಡ್ 19 ರ ಪ್ರಯುಕ್ತ ಮಾರ್ಚ್-2020 ರಿಂದ ಇಲ್ಲಿಯವರೆಗೆ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿಲಾಗಿದ್ದು, ಈ ಅವಧಿಯಲ್ಲಿ ಎಲ್ಲಾ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರಿಂದ ಹಾಲಿನ ಪುಡಿ, ಮೊಟ್ಟೆ, ಅಕ್ಕಿ, ಗೋಧಿ, ಹೆಸರುಕಾಳು, ಶೇಂಗಾ ಬೀಜ, ಮಸಾಲೆ ಪುಡಿ, ಸಕ್ಕರೆ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಕಿಟ್ ರೂಪದಲ್ಲಿ ಫಲಾನುಭವಿಗಳ ಮನೆ-ಮನೆಗೆ ವಿತರಿಸಲಾಗುತ್ತಿದೆ. ಅಲ್ಲದೇ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ತಪಾಸಣೆಯನ್ನು ಸಹ ಮಾಡಿಸಲಾಗುತ್ತಿದೆ.

2019-20ನೇ ಸಾಲಿನಲ್ಲಿ ಡಾ|| ಬಿ.ಆರ್.ಅಂಬೇಡ್ಕರ್, ಡಾ|| ಬಾಬು ಜಗಜೀವನ್ ರಾಂ ಸಮುದಾಯ ಭವನಗಳ ನಿರ್ಮಾಣ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆಗೆ ಒಟ್ಟು 29 ಭವನಗಳ ನಿರ್ಮಾಣಕ್ಕೆ ರೂ.404 ಲಕ್ಷಗಳ ಮಂಜೂರಾತಿಯೊಂದಿಗೆ ಕೇಂದ್ರ ಕಛೇರಿಯಿಂದ ಮೊದಲನೇ ಕಂತಾಗಿ ಬಿಡುಗಡೆ ಮಾಡಲಾದ ರೂ.121.20 ಲಕ್ಷಗಳ ಅನುದಾನ ವೆಚ್ಚ ಭರಿಸಲಾಗಿರುತ್ತದೆ.

2018-19ಸಾಲಿನಲ್ಲಿ ಸ್ವಯಂ ಉದ್ಯೋಗದ ವಿವಿಧ ಕಾರ್ಯಕ್ರಮಗಳಿಗೆ (ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ / ಮೇಕೆ ಘಟಕ,ಸರಕು ಸಾಗಾಣಿಕೆ ವಾಹನ, ಮೊಲ ಸಾಕಾಣಿಕೆ) ಜಿಲ್ಲೆಗೆ ಒಟ್ಟು 164 ಫಲಾನಭವಿಗಳಿಗೆ ಆಯ್ಕೆ ಮಾಡಿ ರೂ. 127.00 ಲಕ್ಷಗಳನ್ನು ಬಿಡುಗಡೆ ಮಾಡಿ ಫಲಾನುಭವಿಗಳಿಗೆ ಚೆಕ್ ಮೂಲಕ ವಿತರಿಸಲಾಗಿದೆ. ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹವಾದ ಪರಿಶಿಷ್ಟ ಪಂಗಡದ ಪ್ರತಿ ಜೋಡಿಗೆ ರೂ. 50,000/-ಗಳಂತೆ ಒಟ್ಟು 178 ಜೋಡಿಗಳಿಗೆ 89 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಮಂಜೂರು ಮಾಡಲಾಗಿರುತ್ತದೆ.

‘ರಾಷ್ಟ್ರೀಯ ತೋಟಗಾರಿಕೆ ಮಿಷನ್’ (ಎನ್.ಹೆಚ್.ಎಂ.) ಅಡಿಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ ಕಲ್ಪಿಸಲಾಗುವುದು ಹಾಗೂ ಸಂಸ್ಕರಣಾಘಟಕ, ಪ್ಯಾಕ್ ಹೌಸ್‍ಗಳು, ಹಣ್ಣು ಮಾಗಿಸುವ ಘಟಕ, ಹಸಿರುಮನೆ, ನೆರಳು ಪರದೆಗಳ ನಿರ್ಮಾಣಕ್ಕೆ ಹಾಗೂ ಇತರೇ ಕಾರ್ಯಕ್ರಮಗಳಿಗೆ ರೂ.892 ಲಕ್ಷಗಳ ಮೊತ್ತವನ್ನು ನಿಗದಿಪಡಿಸಲಾಗಿದ್ದು ಅದರಲ್ಲಿ ಇದುವರೆಗೂ 762.00 ಬಿಡುಗಡೆಯಾಗಿದ್ದು 812 ಪಲಾನುಭವಿಗಳಿಗೆ 526 ಲಕ್ಷ ಸಹಾಯಧನ ವಿತರಿಸಲಾಗಿದೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 2020-21 ನೇ ಸಾಲಿನಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಹನಿ ನೀರಾವರಿ ಅಳವಡಿಸಲು ಶೇಕಡಾ 90 ರಷ್ಟು ಸಹಾಯಧನ ಒದಗಿಸುತ್ತಿದ್ದು ಒಟ್ಟು ರೂ. 28.70 ಕೋಟಿಗಳ ಅನುದಾನ ನಿಗದಿಪಡಿಸಲಾಗಿದ್ದು ಅದರಲ್ಲಿ ಇದುವರೆಗೂ ರೂ.16.33 ಕೋಟಿ ಬಿಡುಗಡೆಯಾಗಿದ್ದು 2864 ಪಲಾನುಭವಿಗಳಿಗೆ ರೂ. 14.60 ಕೋಟಿ ಸಹಾಯಧನ ವಿತರಿಸಲಾಗಿದೆ.

ಸ್ಮಾರ್ಟ್‍ಸಿಟಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಒಟ್ಟಾರೆ ರೂ.1,014 ಕೋಟಿಗಳ ಯೋಜನಾ ಮೊತ್ತದಲ್ಲಿ 95 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದಾವಣಗೆರೆ ನಗರಕ್ಕೆ ಎ.ಡಿ.ಬಿ. ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ನಿರಂತರ (24*7) ಕುಡಿಯುವ ನೀರು ಸರಬರಾಜು ಯೋಜನೆಯ ಯಶಸ್ಸಿಗೆ ಅವಶ್ಯವಿರುವ ನೀರಿನ ಮೂಲವನ್ನು ಶಾಶ್ವತವಾಗಿ ಬಲಪಡಿಸಲು ತುಂಗಭದ್ರ ನದಿಗೆ ಅಡ್ಡಲಾಗಿ ರೂ.91.86 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.

ಪೌರಕಾರ್ಮಿಕರಿಗೆ 381 ಜಿ+1 ಮಾದರಿಯಲ್ಲಿ ವಸತಿ ಸಮುಚ್ಛಯಗಳನ್ನು ನಿರ್ಮಿಸುವ ಕಾಮಗಾರಿಯು ಪ್ರಗತಿಯ ಹಂತದಲ್ಲಿದ್ದು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಲು ಕ್ರಮ ವಹಿಸಲಾಗುತ್ತದೆ.

ಜಲಸಿರಿ ಯೋಜನೆಯಡಿಯಲ್ಲಿ ದಾವಣಗೆರೆ ಸಿಟಿಗೆ (24ಘಿ7) ನೀರು ಪೂರೈಸಲು ಅಂದಾಜು ಮೊತ್ತ ರೂ 83.37 ಕೋಟಿಯಲ್ಲಿ ರಾಜನಹಳ್ಳಿಯಲ್ಲಿ 120 ಎಂಎಲ್‍ಡಿ ಸಾಮಥ್ರ್ಯದ ಜಾಕ್‍ವೆಲ್ ಮತ್ತು ಬಾತಿಯಲ್ಲಿ 40 ಎಂ.ಎಲ್.ಡಿ ಸಾಮಥ್ರ್ಯದ ನೀರು ಶುದ್ಧೀಕರಣ ಘಟಕ ಹಾಗೂ ದಾವಣಗೆರೆ ನಗರದವರೆಗೆ ಮುಖ್ಯ ನೀರು ಸರಬರಾಜು ಕೊಳವೆಯನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಶಿಸ್ತಿನ ಪಥಸಂಚಲನ

ಡಿಎಆರ್ ಪೊಲೀಸ್ ತಂಡ, ನಾಗರಿಕ ಪೊಲೀಸ್ ತಂಡ, ಗೃಹ ರಕ್ಷಕದಳ, ಅರಣ್ಯ ಇಲಾಖೆ, ಅಬಕಾರಿ ಪೊಲೀಸ್ ತಂಡ, ಅಗ್ನಿಶಾಮಕ ದಳಗಳು ಪೊಲೀಸ್ ವಾದ್ಯವೃಂದದ ಹಿಮ್ಮೇಳದಲ್ಲಿ ಶಿಸ್ತಿನ ಪಥಸಂಚಲನ ನಡೆಸಿದವು.

ಸನ್ಮಾನ

ಕೋವಿಡ್ ಹಿನ್ನೆಲೆಯಲ್ಲಿ ಸೇವೆ ಸಲ್ಲಿಸಿದ ಡಾ. ಮುನಾವರ್ ಹುಸೇನ್, ವೈದ್ಯರು, ಚಿಗಟೇರಿ ಜಿಲ್ಲಾ ಆಸ್ಪತ್ರೆ ದಾವಣಗೆರೆ. ಡಾ. ಚಂದ್ರಪ್ಪ, ಆಡಳಿತ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ. ಡಾ. ಆರ್.ಎಮ್.ಗಿರಿ, ಆಡಳಿತ ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ ಚನ್ನಗಿರಿ. ಡಾ.ಹರ್ಷ ಬಿ.ಎಮ್.ವೈದ್ಯಕೀಯ ನಿರ್ದೇಶಕರು ಬಾಪೂಜಿ ಮಕ್ಕಳ ಆಸ್ಪತ್ರೆ ದಾವಣಗೆರೆ. ಡಾ.ನವೀನ್, ಹೆಚ್.ಎನ್.ವೈದ್ಯಕೀಯ ನಿರ್ದೇಶಕರು, ಸ್ಪಂದನಾ ಯೂರಾಲಜಿ ಸೆಂಟರ್ ದಾವಣಗೆರೆ. ಕುಮಾರಿ ಶ್ರೀಷ್ಮ ಹೆಗಡೆ ಎನ್.ಸಿ.ಸಿ ದಾವಣಗೆರೆ. ಕುಮಾರ ಮಹಮ್ಮದ್ ಮುಸವೀರ್ ಪಾಷಾ ಎನ್.ಸಿ.ಸಿ ದಾವಣಗೆರೆ. ಕುಮಾರಿ ಇಂಫನಾ ಆರ್.ಎ ಎನ್.ಸಿ.ಸಿ ದಾವಣಗೆರೆ. ಕುಮಾರಿ ಅನುಶ್ರೀ ಬಿ.ಜಿ ಎನ್.ಸಿ.ಸಿ ದಾವಣಗೆರೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.

ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ

Published

on

ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ‌ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ‌. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending