Connect with us

ದಿನದ ಸುದ್ದಿ

ತರಳಬಾಳು ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ ಸೋಂಕಿತರಿಗಾಗಿ ದಾವಣಗೆರೆ-ಶಿರಮಗೊಂಡನಹಳ್ಳಿ ಮಾರ್ಗದಲ್ಲಿರುವ ತರಳಬಾಳು ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ವ್ಯವಸ್ಥೆಗೊಳಿಸಲಾಗಿದ್ದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಶನಿವಾರದಂದು ಉದ್ಘಾಟಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕಿತರಿಂದ ಇತರರಿಗೆ ರೋಗ ಹರಡುವುದನ್ನು ತಡೆಗಟ್ಟುವ ಸಲುಗಾಗಿ ಜಿಲ್ಲೆಯಲ್ಲಿ ವಿವಿಧೆಡೆ ವ್ಯವಸ್ಥಿತವಾಗಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಸ್ಥಾಪಿಸಲಾಗುತ್ತಿದೆ.

ನಗರಕ್ಕೆ ಸಮೀಪದಲ್ಲಿರುವ ತರಳಬಾಳು ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿಸಲು ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳಿಗೆ ಕೋರಿದಾಗ, ಸ್ವಾಮೀಜಿಗಳು, ತಕ್ಷಣವೇ ಒಪ್ಪಿಗೆ ಸೂಚಿಸಿ, ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್‍ಗಾಗಿ ಒದಗಿಸಿದ್ದಾರೆ, ಅಲ್ಲದೆ ಅಗತ್ಯವಿರುವ ಎಲ್ಲ ಸಹಕಾರವನ್ನೂ ನೀಡುವುದಾಗಿ ಹೇಳಿದ್ದಾರೆ. ಜನತೆಯ ಪರವಾಗಿ ಸ್ವಾಮೀಜಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ತರಳಬಾಳು ವಸತಿ ನಿಲಯದ 30 ಕೊಠಡಿಗಳನ್ನು ಒದಗಿಸಿದ್ದು, ಪ್ರತಿ ಕೊಠಡಿಯಲ್ಲಿ 03 ಬೆಡ್ ವ್ಯವಸ್ಥೆ ಇದೆ. ಹೀಗಾಗಿ ಒಟ್ಟು 90 ಜನರಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸ್ಥಳಾವಕಾಶ ಕಲ್ಪಿಸಬಹುದಾಗಿದೆ. ಅಲ್ಲದೆ ಇಲ್ಲಿನ ವಾತಾವರಣವೂ ಹಿತಕರವಾಗಿದ್ದು, ಬಿಸಿನೀರು, ಉತ್ತಮ ಊಟೋಪಹಾರದ ವ್ಯವಸ್ಥೆ ಒದಗಿಸಲಾಗುವುದು.

ಇದನ್ನೂ ಓದಿ | ದಿ ಗ್ರೇಟ್ ಇಂಡಿಯನ್ ಕಿಚನ್ : ಮಹಿಳಾ ಅಸಮಾನತೆಯ ಕರಾಳ ಜಗತ್ತಿನ ಚಿತ್ರಣ

ಕೋವಿಡ್ ಸೋಂಕಿಗೆ ಒಳಗಾಗಿ, ಮನೆಯಲ್ಲಿ ಒಂದೇ ಶೌಚಾಲಯ, ಬಾತ್‍ರೂಂ ಹೊಂದಿರುವವರು ಹೋಂ ಐಸೋಲೇಷನ್ ನಲ್ಲಿ ಮನೆಯಲ್ಲಿ ಒಂದೇ ಶೌಚಾಲಯ, ಬಾತ್‍ರೂಂ ಹೊಂದಿರುವ ಸೋಂಕಿತರು, ಯಾವುದೇ ಕಾರಣಕ್ಕೂ ಹೋಂ ಐಸೋಲೇಷನ್‍ನಲ್ಲಿ ಇರಬಾರದು. ಇದರಿಂದಾಗಿ ಮನೆಯ ಇತರೆ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚು.

ಹೀಗಾಗಿ ಇಂತಹ ಯಾವುದೇ ರೋಗಲಕ್ಷಣಗಳು ಕಂಡುಬರದ, ಎ-ಸಿಂಮ್ಟಮ್ಯಾಟಿಕ್ ಇದ್ದು, ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದವರಿಗೆ, ಇಲ್ಲಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ನಿಗಾದಲ್ಲಿ ಇರಿಸಲಾಗುವುದು. ಕೋವಿಡ್ ಕೇರ್ ಸೆಂಟರ್‍ಗೆ ವೈದ್ಯರ ಶಿಫಾರಸಿನ ಮೇರೆಗೆ ದಾಖಲಾಗುವ ಎ-ಸಿಂಮ್ಟಮ್ಯಾಟಿಕ್ ಸೋಂಕಿತರಿಗೆ ಉತ್ತಮ ರೀತಿಯಲ್ಲಿ ಊಟೋಪಹಾರ, ಬಿಸಿನೀರಿನ ವ್ಯವಸ್ಥೆ ಇದೆ.

ಸೋಂಕಿತರ ಆರೈಕೆಗಾಗಿ ವೈದ್ಯರು ಹಾಗೂ ನರ್ಸ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕೇವಲ ಖಾಸಗಿ ವಸತಿ ನಿಲಯಗಳು ಮಾತ್ರವಲ್ಲದೆ, ಬಿಸಿಎಂ ವಸತಿ ನಿಲಯಗಳು, ಕಲ್ಯಾಣಮಂಟಪಗಳನ್ನು ಕೂಡ ಅವಶ್ಯಕತೆ ಎನಿಸಿದಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನಾಗಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಆಕ್ಸಿಜನ್ ಕೊರತೆ ನೀಗಿಸುವ ಸಲುವಾಗಿ ಕೇಂದ್ರ ಸರ್ಕಾರ 84 ಲಕ್ಷ ರೂ. ವೆಚ್ಚದ 10 ಕೆ.ಎಲ್. ಆಕ್ಸಿಜನ್ ಘಟಕ ಮಂಜೂರು ಮಾಡಿದ್ದು, ಈಗಾಗಲೆ ಕಂಪನಿಯೊಂದಿಗೆ ಸಮನ್ವಯ ಸಾಧಿಸಿದ್ದು, 20 ದಿನಗಳೊಳಗೆ ಕಾರ್ಯಾರಂಭವಾಗುವ ಸಾಧ್ಯತೆ ಇದೆ.

ಅಲ್ಲದೆ ತಮ್ಮ ತಂದೆ-ತಾಯಿಯವರ ಹೆಸರಿನಲ್ಲಿರುವ ಟ್ರಸ್ಟ್ ವತಿಯಿಂದಲೂ ದಾವಣಗೆರೆ ಹಾಗೂ ಜಗಳೂರಿನಲ್ಲಿ ಆಕ್ಸಿಜನ್ ಘಟಕ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸೌರ್ಹಾದ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್‍ಗಳೊಂದಿಗೆ ಸಭೆ ನಡೆಸಿ ಅವರಿಂದ ಆಕ್ಸಿಜನ್ ಮಷಿನ್ ಖರೀದಿಸಲು ಚರ್ಚೆ ನಡೆಸುತ್ತೇವೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಮೊದಲುಗೊಂಡು, ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ವೈದ್ಯರು, ಶುಶ್ರೂಷಕರು, ಪೊಲೀಸರು ಸೇರಿದಂತೆ ಬಹಳಷ್ಟು ಜನ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಜನರೂ ಕೂಡ ಸರ್ಕಾರದ ಆಶಯವನ್ನು ಅರ್ಥ ಮಾಡಿಕೊಂಡು, ಕೋವಿಡ್ ನಿಯಂತ್ರಣಕ್ಕೆ ರೂಪಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು, ಇಲ್ಲದಿದ್ದಲ್ಲಿ ಕೋವಿಡ್ ನಿಯಂತ್ರಣಗೊಳಿಸುವುದು ಕಷ್ಟ ಎಂದರು.

ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಕೋವಿಡ್ ಸೋಂಕಿತರಿಗೆ ಸೂಕ್ತ ವೈದ್ಯಕೀಯ ನೆರವು ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದುಕೊಂಡು, ಅಗತ್ಯ ವ್ಯವಸ್ಥೆ ಮಾಡುತ್ತಿದ್ದೇವೆ. ಕೋವಿಡ್ ಸೋಂಕು ವ್ಯಾಪಕವಾಗಿ ಹರಡದಂತೆ ಸರ್ಕಾರ ಹಲವು ರೀತಿಯಲ್ಲಿ ಯತ್ನಿಸುತ್ತಿದೆ. ಇನ್ನಾದರೂ ಸಾರ್ವಜನಿಕರು ಜಾಗೃತರಾಗಬೇಕು, ವಿನಾಕಾರಣ ಮನೆಯಿಂದ ಹೊರಗಡೆ ಬಂದು ಓಡಾಡಬಾರದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಾನಗರಪಾಲಿಕೆಯ ಮಹಾಪೌರರಾದ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್ ಹಾಗೂ ಇತರರು ಉಪಸ್ಥಿತರಿದ್ದರು. ಕೋವಿಡ್ ಕೇರ್ ಸೆಂಟರ್‍ಗಾಗಿ ಪೂರೈಕೆ ಮಾಡಲಾದ ಮೊಟ್ಟೆಗಳನ್ನು ಇದೇ ಸಂದರ್ಭದಲ್ಲಿ ಸಂಸದರು, ಶಾಸಕರು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.

ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ

Published

on

ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ‌ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ‌. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending