Connect with us

ದಿನದ ಸುದ್ದಿ

ನಗರಗಳಲ್ಲಿ ಬೃಹತ್ ಕೈಗಾರಿಕೆ ಆರಂಭಿಸುವವರಿಗೆ ಹೆಚ್ಚಿನ ಪ್ರೋತ್ಸಾಹಧನ : ಸಚಿವ ಜಗದೀಶ ಶೆಟ್ಟರ್

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಹೊಸ ಕೈಗಾರಿಕಾ ನೀತಿಯನ್ವಯ ಬೆಂಗಳೂರು ಹೊರತುಪಡಿಸಿ ದಾವಣಗೆರೆಯಂತಹ ನಗರಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ ಶೆಟ್ಟರ ತಿಳಿಸಿದರು.

ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೈಗಾರಿಕೋದ್ಯಮ ಬೆಂಗಳೂರಿನಲ್ಲಿ ಮಾತ್ರ ಕೇಂದ್ರೀಕೃತವಾಗುವುದನ್ನು ತಪ್ಪಿಸಲು ಟೈರ್ 2 ಮತ್ತು ಟೈರ್ 3 ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಬೆಳೆಸುವ ಸಲುವಾಗಿ ನಗರಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಕೈಗೊಳ್ಳಲು ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ, ಇತರೆ ಸೌಲಭ್ಯ ನೀಡಲಾಗುವುದು. ಹಿಂದೆ ದಾವಣಗೆರೆ ಜವಳಿಗೆ ಹೆಸರಾಗಿದ್ದು ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಎಂದು ಹೆಸರು ಮಾಡಿತ್ತು. ಇದೀಗ ಜವಳಿ ಉದ್ಯಮ ಇಳಿಮುಖವಾಗಿದೆ. ಜವಳಿ ಸೇರಿದಂತೆ ಯಾವುದೇ ಕೈಗಾರಿಕೆಗಳಿಗೆ ಉದ್ಯಮಿಗಳು ಮುಂದೆ ಬಂದಲ್ಲಿ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದರು.

ಸಭೆಯಲ್ಲಿ ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಸಿದ್ದನಗೌಡ ಮಾತನಾಡಿ, ಕೆಎಸ್‍ಎಸ್‍ಐಡಿಸಿಯ ಹರಿಹರ ಕೈಗಾರಿಕಾ ವಸಾಹತುವಿನ ನಿವೇಶನಗಳಿಗೆ ಕ್ರಯಪತ್ರ ನೀಡಿಲ್ಲ. ಹಲವಾರು ಬಾರಿ ಈ ಬಗ್ಗೆ ಮನವಿ ಸಲ್ಲಿಸುತ್ತಾ ಬಂದಿದ್ದು, ಸಚಿವರೇ ಖುದ್ದಾಗಿ ಸೇಲ್‍ಡೀಡ್‍ನ್ನು ನಮಗೆ ವಿತರಿಸಬೇಕು ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಪಕ್ಕಾ ರಸ್ತೆ ಆಗಬೇಕು, ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಈ ಬಗ್ಗೆಯೂ ಹಲವಾರು ಬಾರಿ ನಗರಸಭೆಗೆ ಮನವಿ ಮಾಡಿದ್ದೇವೆ. ಅನುಕೂಲ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು.

ಸಚಿವರು ಪ್ರತಿಕ್ರಿಯಿಸಿ, ಕ್ರಯಪತ್ರ ವಿಚಾರದ ಕುರಿತು ನನಗೆ ಅರಿವಿದ್ದು ಇದನ್ನು ನಾನು ಅನುಸರಣೆ ಮಾಡುತ್ತಾ ಬಂದಿದ್ದೇನೆ. ಈಗ ಈ ನಿವೇಶನಗಳಿಗೆ ಖಾತೆ ಆಗಿದ್ದು ಇನ್ನೊಂದು ವಾರದಲ್ಲಿ ಪೋಡಿ ಮಾಡುವಂತೆ ಹರಿಹರ ತಹಶೀಲ್ದಾರರಿಗೆ ಸೂಚನೆ ನೀಡಿದ್ದೇನೆ. ಇನ್ನೊಂದು ವಾರದಲ್ಲಿ ಸೇಲ್‍ಡೀಡ್ ಪ್ರಕ್ರಿಯೆ ಆಗಿ, 15 ದಿನಗಳ ಒಳಗೆ ತಮಗೆ ಸ್ಥಳೀಯ ಸಚಿವರು, ಶಾಸಕರನ್ನೊಳಗೊಂಡಂತೆ ನಾನೇ ಕ್ರಯಪತ್ರಗಳನ್ನು ವಿತರಿಸುತ್ತೇನೆ ಎಂದರು.

ಇಲ್ಲಿನ ಉದ್ಯಮಿಗಳು ಸುಮಾರು 10 ವರ್ಷಗಳಿಂದ ನಗರಸಭೆಗೆ ತೆರಿಗೆ ಪಾವತಿಸಿಲ್ಲ. ಅದಕ್ಕೆ ದಂಡ ಹಾಕಿದ್ದಾರೆ ಹೌದು. ಆದರೆ ಪ್ರಸಕ್ತ ಸಾಲಿನ ತೆರಿಗೆ ಪಾವತಿಸಿಕೊಳ್ಳುವಂತೆ ನಗರಸಭೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು ಹಾಗೂ ನಾವು ಅನುದಾನ ನೀಡುತ್ತೇವೆ ರಸ್ತೆ ನಿರ್ಮಿಸಿಕೊಡುವಂತೆ ತಿಳಿಸಿದರು. ಉದ್ಯಮಿಗಳು ಒಂದು ವಾರದಲ್ಲೇ ಪ್ರಸಕ್ತ ಸಾಲಿನ ತೆರಿಗೆ ತುಂಬುವುದಾಗಿ ಭರವಸೆ ನೀಡಿದರು.

ಸಚಿವರು ಮಾತನಾಡಿ, ಜವಳಿ ಪಾರ್ಕಿನಲ್ಲಿ ಜವಳಿ ಹೊರತಾಗಿ ಇತರೆ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಬೇಕೆಂದು ನನಗೆ ಮನವಿಗಳು ಬಂದಿವೆ ಈ ಬಗ್ಗೆ ಜವಳಿ ಇಲಾಖೆ ಅಧಿಕಾರಿಗಳು ಮತ್ತು ಜವಳಿ ಉದ್ದಿಮೆದಾರರ ಅಭಿಪ್ರಾಯ ಕೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್ ಎನ್.ತಡಕನಹಳ್ಳಿ ಮಾತನಾಡಿ, 2002 ನೇ ಸಾಲಿನಲ್ಲಿ ಟೆಕ್ಸ್‍ಟೈಲ್ ಪಾರ್ಕ್ ಉದ್ದೇಶಕ್ಕಾಗಿ ಕೆಐಎಡಿಬಿಯಿಂದ 64 ಎಕರೆ ಕೈಗಾರಿಕಾ ಪ್ರದೇಶಾಭಿವೃದ್ದಿ ಮಾಡಲಾಗಿದ್ದು 71 ಜವಳಿ ಘಟಕಗಳನ್ನು ಪ್ರಾರಂಭಿಸಲಾಗಿತ್ತು. ಅದರಲ್ಲಿ 51 ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ ಕೊರೊನಾ ಹಿನ್ನೆಲೆಯಲ್ಲಿ 23 ಘಟಕಗಳು ಸ್ಥಗಿತಗೊಂಡಿವೆ. 2012 ರಿಂದ 19ನೇ ಸಾಲಿನವರೆಗೆ 39 ಘಟಕಗಳಿಗೆ ಒಟ್ಟು ರೂ.9.15 ಕೋಟಿ ಸಬ್ಸಿಡಿ ನೀಡಲಾಗಿದೆ. ಈ ಪ್ರದೇಶವನ್ನು ಜವಳಿ ಉದ್ಯಮಗಳಿಗೆ ಮೀಸಲಿಟ್ಟರೆ ಒಳಿತು ಎಂದು ಹೇಳಿದರು.

ಜವಳಿ ಪಾರ್ಕಿನ ಉದ್ಯಮಿಯೋರ್ವರು ಮಾತನಾಡಿ 2006 ರಲ್ಲಿ ಕರೂರು ಕೈಗಾರಿಕಾ ಪ್ರದೇಶದಲ್ಲಿ ಜವಳಿ ಪಾರ್ಕ್‍ಗೆಂದು 64 ಎಕರೆ ಜಾಗ ನೀಡಲಾಗಿದ್ದು, ಇಲ್ಲಿ ಪ್ರಸ್ತುತ 30 ಜವಳಿಗೆ ಸಂಬಂಧಿಸಿದ ಘಟಕಗಳು ಸಕ್ರಿಯವಾಗಿವೆ. ಇತರೆ ಘಟಕಗಳಿಗೆ ಅವಕಾಶ ನೀಡಿದರೆ ಪರಿಸರ ಮಾಲಿನ್ಯ ಇತರೆ ಸಮಸ್ಯೆಗಳಿಗೆ ಕಾರಣವಾಗಿ ಜವಳಿ ಉದ್ಯಮಕ್ಕೆ ಅನಾನುಕೂಲವಾಗಲಿದೆ. ಆದ ಕಾರಣ ಜವಳಿಗೆ ಪೂರಕವಾದ ಕೈಗಾರಿಕೆಗಳಿಗೇ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಹಾಗೂ ಡೈಯಿಂದ ಯುನಿಟ್ ಇಲ್ಲದ ಕಾರಣ ಹೊರ ರಾಜ್ಯಗಳಿಗೆ ಹೋಗ್ತಾ ಇದ್ದೇವೆ. ಡೈಯಿಂಗ್ ಯುನಿಟ್ ಆದರೆ ಒಳಿತು ಎಂದರು.

ಉದ್ಯಮಿ ಮಂಜುನಾಥ್ ಮಾತನಾಡಿ, ಇಲ್ಲಿ ಸಹ ಕ್ರಯಪತ್ರ(ಸೇಲ್‍ಡೀಡ್) ಮಾಡಿಕೊಡದೇ ಇರುವುದರಿಂದ ಬ್ಯಾಂಕ್‍ನವರು ಸಾಲ ಕೊಡುತ್ತಿಲ್ಲ ಎಂದರು.

ಸಚಿವರು ಪ್ರತಿಕ್ರಿಯಿಸಿ ಭೂಮಿಯ ಪರಿಹಾರದ ಕುರಿತು ಯಾವುದೂ ಸಮಸ್ಯೆಯಿಲ್ಲ. ಈ ಜಾಗಕ್ಕೆ ಸಂಬಂಧಿಸಿದಂತೆ ಕ್ರಯಪತ್ರ ನೀಡಲು ನನಗೆ ಪ್ರಸ್ತಾವನೆ ಕಳುಹಿಸಿಕೊಡಿ, ಶೀಘ್ರದಲ್ಲೇ ಮಾಡಿಕೊಡಲಾಗುವುದು ಎಂದರು.

ಹರಿಹರದ ವೆಲ್ಕಾಸ್ಟ್ ಫೌಂಡ್ರಿಯ ಉದ್ಯಮಿ ಸತ್ಯನಾರಾಯಣ ಮಾತನಾಡಿ, ತಾವೊಬ್ಬ ರಫ್ತುದಾರರಾಗಿದ್ದು, ಪ್ರತಿ ವರ್ಷ ವಿದ್ಯುತ್ ದರ ಹೆಚ್ಚುಸುತ್ತಿರುವ ಕಾರಣ ರಫ್ತಿಗೆ ತೊಂದರೆಯಾಗುತ್ತಿದೆ. ಆದ ಕಾರಣ ಕೈಗಾರಿಕೆಗಳಿಗೆ ಕನಿಷ್ಟ ಮೂರು ವರ್ಷಗಳಿಗೊಮ್ಮೆ ದರ ಹೆಚ್ಚಿಸಬೇಕೆಂದು ಹಾಗೂ ಕುಡಿಯುವ ನೀರು ವ್ಯವಸ್ಥೆ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು.

ಸಚಿವರು ಪ್ರತಿಕ್ರಿಯಿಸಿ ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ದರ ಹೆಚ್ಚಳದಿಂದ ಆಗುತ್ತಿರುವ ತೊಂದರೆ ನನ್ನ ಗಮನಕ್ಕೆ ಬಂದಿದ್ದು, ಕೈಗಾರಿಕೆಗಳಿಗೆ ವಿದ್ಯುತ್ ದರ ಕ್ಕೆ ಸಂಬಂಧಿಸಿದಮತೆ ಪ್ರತ್ಯೇಕ ನಿಯಮ ರೂಪಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದರು.

ಹರಿಹರದ ಸಮರ್ಥ ಇಂಡಸ್ಟ್ರಿಯ ಮಾಲೀಕರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೈಗಾರಿಕೆ ನಡೆಸುವುದೇ ಕಷ್ಟವಾಗುತ್ತಿದೆ. ಅದರಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ನೌಕರರಿಗೆ ನೀಡುತ್ತಿರುವ ಸಂಬಳ, ಪಿಎಫ್, ಇಎಸ್‍ಐ ಸಲುವಾಗಿ ಪದೇ ಪದೇ ತೊಂದರೆ ಕೊಡುತ್ತಿದ್ದಾರೆ ಹಾಗೂ ತಮ್ಮ ವಿರುದ್ದ ಪ್ರಕರಣ ದಾಖಲಿದ್ದಾರೆಂದು ದೂರಿದರು.

ಸಚಿವರು ಕಾರ್ಮಿಕ ಅಧಿಕಾರಿಗೆ ಕೈಗಾರಿಕೆಗಳು ನಡೆಯುವುದೇ ಕಷ್ಟವಾಗಿದ್ದು ಈ ರೀತಿ ತೊಂದರೆ ಕೊಡಬಾರದು. ಕಾರ್ಮಿಕ ಸಚಿವರು ಕೂಡ ತಮಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ತಾವು ಕೈಗಾರಿಕೋದ್ಯಮಿಗಳಿಗೆ ಸಹಕಾರ ನೀಡಬೇಕು ಎಂದರು.

ಗ್ರೀನ್ ಆಗ್ರೋಪ್ಯಾಕ್ ಪ್ರೈ.ಲಿ ನ ದೇವಯ್ಯ ಮಾತನಾಡಿ, ತಾವು ತರಕಾರಿಗಳನ್ನು ಯೂರೋಪ್‍ಗೆ ರಫ್ತು ಮಾಡುತ್ತಿದ್ದು, ತಮ್ಮ 15 ಬ್ರಾಂಚ್‍ಗಳಿವೆ, ಸುಮಾರು 10 ಸಾವಿರ ರೈತರಿಗೆ ಈ ಉದ್ದಿಮೆಯಿಂದ ಅನುಕೂಲವಾಗುತ್ತಿದೆ. ಕೊಗ್ಗನೂರಿನಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗುತ್ತಿದ್ದು, ಗ್ರಾಮೀಣ ಫೀಡರ್‍ನಿಂದ ವಿದ್ಯುತ್‍ಗೆ ತೊಂದರೆಯಾಗುತ್ತಿದೆ. ಹಾಗೂ ರಫ್ತು ಮಾಡಲು ಕಂಟೈನರ್ ಕೊರತೆ ಜೊತೆಗೆ ಕಂಟೈನರ್ ದರ ಮೂರು ಪಟ್ಟು ಹೆಚ್ಚಿದೆ ಈ ಬಗ್ಗೆ ಸೂಕ್ತ ಕೈಗೊಳ್ಳುವಂತೆ ಕೋರಿದರು.

ಮೆಕ್ಕೆಜೋಳ ಉದ್ಯಮಿ ಹಾಗೂ ರೈತರಾದ ಬಸವರಾಜಪ್ಪ ಮಾತನಾಡಿ, ತಾವು ರೈತರಾಗಿದ್ದು ಮೆಕ್ಕೆಜೋಳ ಸಂಸ್ಕರಿಸಿ ಇತರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ತಾವು ಸೇರಿದಂತೆ ಮೆಕ್ಕೆಜೋಳ ಸಂಸ್ಕರಣಾ ಘಟಕಕ್ಕೆ ತಮಗೆ ರೂ.2.5 ಕೋಟಿ ಮಂಜೂರಾಗಿದ್ದು ಬ್ಯಾಂಕಿನಿಂದ ರೂ.1 ಕೋಟಿ ಮಾತ್ರ ಬಿಡುಗಡೆ ಆಗಿದೆ. ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಆಗಿಲ್ಲ. ಅದರ ಹೊರತು ಕೆಲಸ ಮಾಡುವುದು ಕಷ್ಟವಾಗಿದೆ ಎಂದರು.

ಲೀಡ್‍ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ ಶಾಸ್ತ್ರಿ ಪ್ರತಿಕ್ರಿಯಿಸಿ, 8 ಮೆಕ್ಕೆಜೋಳ ಘಟಕಗಳಿಗೆ ಸಾಲ ಮಂಜೂರಾಗಿದ್ದು, ಯೋಜನಾ ವರದಿ ಪ್ರಕಾರ 2 ವರ್ಷದೊಳಗೆ ಮಷಿನರಿ ಅಳವಡಿಕೆ ಆಗಿಬೇಕು. ಆಗ ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಮಾಡಲಾಗುವುದು. ಆದರೆ ಈ ಘಟಕಗಳಲ್ಲಿ ಮಷಿನರಿ ಸೆಟ್‍ಅಪ್ ಆಗಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲದ ಕಾರಣ ವರ್ಕಿಂಗ್ ಕ್ಯಾಪಿಟಲ್ ನೀಡಿಲ್ಲವೆಂದರು.

ಸಚಿವರು ಹಾಗೂ ಎಂಡಿ ಯವರು, ರೈತರು ಉದ್ಯಮ ಮಾಡುತ್ತಿರುವುದು ಸಂತಸದ ವಿಚಾರವಾಗಿದ್ದು, ಅಧಿಕಾರಿಗಳು, ಸಾಲ ನೀಡುವಲ್ಲಿ ಆಗುತ್ತಿರುವ ಗೊಂದಲಗಳನ್ನು ನಿವಾರಿಸಿ ಪರಿಹಾರ ಹುಡುಕಿ ವರ್ಕಿಂಗ್ ಕ್ಯಾಪಿಟಲ್ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇಲ್ಲಿ ಇಂದು ಅನೇಕರು ಬ್ಯಾಂಕ್ ಸಾಲ ನೀಡುತ್ತಿಲ್ಲವೆಂದು ದೂರುತ್ತಿದ್ದೀರಿ. ಇದು ಎಲ್ಲೆಡೆ ಇರುವ ಸಮಸ್ಯೆ. ಹಂತ ಹಂತವಾಗಿ ಬಗೆಹರಿಯಲಿದೆ ಎಂದರು.

ನೇಕಾರರೋರ್ವರು ತಾವು ಕರೂರು ಟೆಕ್ಸ್‍ಟೈಲ್ಸ್ ಪಾರ್ಕ್‍ನಲ್ಲಿ ವೀವಿಂಗ್ ಮಷಿನ್ ಮತ್ತು ಇತರೆ ಮಷೀನ್ ಅಳವಡಿಸಿದ್ದು, ನಷ್ಟ ಹೊಂದಿ ಬ್ಯಾಂಕ್ ಸಾಲ ತೀರಿಸಲು ತಮ್ಮ ಮಳಿಗೆ ಮತ್ತು ಹೊರ ಮಾರಿದ್ದು ತಮಗೆ ಅಲ್ಲಿ ಇತರೆ ಕೈಗಾರಿಕೆ ಮಾಡುವಂತೆ ಅನುಮತಿ ಕೋರಿದರು. ಕಾರ್ಗಿಲ್ ಸಂಸ್ಥೆಯವರು ತಮ್ಮ ಸಂಸ್ಥೆ ಬಳಿ ರೈತರಿಂದ ರಸ್ತೆ ಸಮಸ್ಯೆ ಇದ್ದು ಬಗೆಹರಿಸಿಕೊಡಬೇಕೆಂದು ಕೋರಿದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಉದ್ಯಮಿ ಶಂಭುಲಿಂಗಪ್ಪ ಮಾತನಾಡಿ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಎಲ್‍ಟಿ ಸಂಪರ್ಕಕ್ಕೆ 65 ಹೆಚ್‍ಪಿ ನೀಡಲಾಗುತ್ತಿದ್ದು ಮುಂದಿನ ಬಜೆಟ್‍ನಲ್ಲಿ 100 ಕ್ಕೆ ಹೆಚ್ಚಿಸುವಂತೆ ಹಾಗೂ ಕರೂರಿನಲ್ಲಿ ಯುಜಿಡಿ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಕೆಎಸ್‍ಎಸ್‍ಐಡಿ ಎಂಡಿ ವಿ.ರಾಮಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ, ಪಾಲಿಕೆಯ ಅಮೃತ್ ಯೋಜನೆಯಡಿ ಯುಜಿಡಿ ಗೆ ಕ್ರಮ ವಹಿಸಬಹುದು. ಜೊತೆಗೆ ಯುಜಿಡಿ ನಿರ್ಮಾಣ ಕುರಿತು ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಎಸ್.ಎನ್ ಬಾಲಾಜಿ ಮಾತನಾಡಿ, ಸಾರಥಿ ಕುರುಬರಹಳ್ಳಿಯಲ್ಲಿ ಎಸ್‍ಸಿ/ಎಸ್‍ಟಿ ಗೆ 5 ಎಕರೆ ಎಂದು ನಿಗದಿಪಡಿಸಿದ್ದು ಇದನ್ನು ಸಬ್ ಲೇಔಟ್ ಮಾಡಬೇಕೆಂದರು ಕೋರಿದರು.

ಸಚಿವರು ಪ್ರತಿಕ್ರಿಯಿಸಿ ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿಗೆ ತಾತ್ಕಾಲಿಕ ದರ ನಿಗದಿಪಡಿಸುವಾಗ ಮುಂದೆ ಮಾರುಕಟ್ಟೆಯಲ್ಲಿ ಆಗಬಹುದಾದ ದರವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿಪಡಿಸಬೇಕು ಎಂದರು.

ಪರಿಹಾರದ ಭೂಮಿ ಕೊಡುವಂತೆ ರೈತರ ಮನವಿ

ಕರೂರು ಕೈಗಾರಿಕಾ ಪ್ರದೇಶಕ್ಕೆ ಸುಮಾರು 15 ವರ್ಷಗಳ ಹಿಂದೆ ರೈತರು 143 ಎಕರೆ ಭೂಮಿಯನ್ನು ಕೆಐಎಡಿಬಿಯವರಿಗೆ ನೀಡಿದ್ದು, ಈ ಭೂಮಿಗೆ ಬದಲಾಗಿ ತಮಗೆ ಬೇರೆ ಭೂಮಿ ನೀಡುವಂತೆ ಕೋರಿದ್ದು, ಈವರೆಗೆ ಭೂಮಿ ನೀಡಿಲ್ಲ. 15 ವರ್ಷಗಳಿಂದ ಸತತವಾಗಿ ಹೋರಾಡುತ್ತಾ ಬಂದಿದ್ದೇವೆ. ಇದರಲ್ಲಿ ಕೆವಲರು ಮೃತ ಹೊಂದ್ದಾರೆ. ತಕ್ಷಣ ತಮಗೆ ಭೂಮಿ ನೀಡಬೇಕೆಂದು ರೈತರು ಒತ್ತಾಯಿಸಿದರು.

ಸಚಿವರು ಪ್ರತಿಕ್ರಿಯಿಸಿ ಇದು ಸುಮಾರು 15 ವರ್ಷಗಳ ಸಮಸ್ಯೆಯಾಗಿದ್ದು ಇದಕ್ಕೆ ಪರಿಹಾರ ಒದಗಿಸಲಾಗುತ್ತಿದೆ. ಭೂಮಿಗೆ ಪರಿಹಾರವಾಗಿ ಭೂಮಿ ನೀಡುವ ಬಗ್ಗೆ ಸರ್ಕಾರದ ಹಂತದಲ್ಲಿ ನಿಯಮ ರೂಪಿಸಲಾಗುತ್ತಿದೆ. ಸ್ವಲ್ಪ ಸಮಯ ನೀಡಿ. ಶೀಘ್ರದಲ್ಲೇ ತಮಗೆ ಪರಿಹಾರ ಒದಗಿಸಲಾಗುವುದು ಎಂದು ರೈತರ ಮನವೊಲಿಸಿದರು.

ರೈಸ್‍ಮಿಲ್ ಮಾಲೀಕರು ಮಾತನಾಡಿ ಹಿಂದೆ ದಾವಣಗೆರೆಯಲ್ಲಿ 100 ರೈಸ್‍ಮಿಲ್‍ಗಳಿದ್ದವು ಈಗ 40 ರಿಂದ 50 ಮಾತ್ರ ಇವೆ. ರೈಸ್‍ಮಿಲ್‍ಗಳಿಗೆ ಬರುವ ಸಬ್ಸಿಡಿ ನಿಂತಿದ್ದು, ಶೀಘ್ರವೇ ಇದನ್ನು ನೀಡುವಂತೆ ಹಾಗೂ ವಿದ್ಯುತ್ ಸಬ್ಸಿಡಿ ನೀಡುವಂತೆ ಕೋರಿದರು.

ಶಾಸಕರಾದ ಎಸ್.ಎ.ರವೀಂದ್ರನಾಥ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಗ್ರಾಮಾಂತರ ಕೈಗಾರಿಕೆ ಇಲಾಖೆ ಉಪ ನಿರ್ದೇಶಕರ ಮನ್ಸೂರ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಜಯಪ್ರಕಾಶ್ ನಾರಾಯಣ್, ಉಪ ನಿರ್ದೇಶಕರಾದ ಮಂಜುನಾಥ್, ಭೂಸ್ವಾಧೀನ ಅಧಿಕಾರಿ ಸರೋಜಾ, ಕೆಎಸ್‍ಎಫ್‍ಸಿ ಪ್ರಧಾನ ವ್ಯವಸ್ಥಾಪಕರಾದ ಬಸವರಾಜು, ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಉಪ ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್, ಹರಿಹರ ನಗರಸಭೆ ಆಯುಕ್ತ ಉದಯ್ ಕುಮಾರ್.ಬಿ.ಟಿ, , ಕಾರ್ಮಿಕ ಅಧಿಕಾರಿ ಇಬ್ರಾಹೀಂ ಸಾಬ್, ಹರಿಹರ ಕೈಗಾರಿಕ ಸಂಘದ ಅಧ್ಯಕ್ಷರು ಇತರೆ ಕೈಗಾರಿಕಾ ಸಂಘದ ಅಧಿಕಾರಿಗಳು, ಉದ್ಯಮಿಗಳು, ರಫ್ತುದಾರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ

Published

on

ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.

ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.

ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.

ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.

ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending