Connect with us

ದಿನದ ಸುದ್ದಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ:ವಿಶ್ವಸಂಸ್ಥೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೃತಕ ಬುದ್ದಿಮತ್ತೆ ಉತ್ತಮ ಸರ್ಕಾರದ ಉಪಕರಣ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದ್ದು ಜಿಲ್ಲೆಯಲ್ಲಿ ಆಯೋಜಿಸಲಾದ ಬೃಹತ್ ಮಾನವ ಸರಪಳಿಯಲ್ಲಿ 85 ಸಾವಿರಕ್ಕಿಂತ ಹೆಚ್ಚು ಜನರು ಭಾಗಿಯಾಗುವ ಮೂಲಕ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಮತ್ತು ಶ್ರೇಷ್ಠ ಎಂದು ಸಾಬೀತು ಮಾಡಿದ್ದಾರೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಭಾನುವಾರ ಹರಿಹರದ ಮಹಾತ್ಮ ಗಾಂಧೀ ಮೈದಾನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನ್ಯಾಮತಿ ಗಡಿಯಿಂದ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 25 ಗ್ರಾಮಗಳು, 2 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸೇರಿ ರಾಣೆಬೆನ್ನೂರು ಗಡಿವರೆಗೆ 80 ಕಿ.ಮೀ ಉದ್ದದ ಮಾನವ ಸರಪಳಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಹಾಗೂ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಾತ್ಮ ಗಾಂಧಿ ಹಾಗೂ ಡಾ;ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ಅಂದರೆ ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಮತ್ತು ಎಲ್ಲಾ ಮಾನವನ ಘನತೆಯನ್ನು ಕಾಪಾಡುವುದಾಗಿದೆ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲ, ಸ್ವಾತಂತ್ರ್ಯ ಮತ್ತು ಅವಕಾಶಗಳ ಮೂರ್ತರೂಪ, ಇದು ಧ್ವನಿ ಇಲ್ಲದವರಿಗೆ ಧ್ವನಿಯಾಗುತ್ತದೆ. ಸಾಮಾಜಿಕ ನ್ಯಾಯ ಕಾಪಾಡುವ ಬಲಿಷ್ಠ ವ್ಯವಸ್ಥೆ ಇದಾಗಿದ್ದು ಶ್ರೇಷ್ಠವೆಂದು ನಂಬಿದ್ದೇವೆ. ಜಾಗತಿಕವಾಗಿ ವಿಶ್ಲೇಷಣೆ ಮಾಡಿದಾಗ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆಯೋ ಎನಿಸುತ್ತದೆ, ಈ ನಿಟ್ಟಿನಲ್ಲಿ ಜನರು ನಿರಂತರ ಜಾಗರೂಕತೆ, ಪೋಷಣೆ ಮತ್ತು ರಕ್ಷಣೆ ಮಾಡಬೇಕಾಗುತ್ತದೆ.ಸರ್ವಾಧಿಕಾರಿ ಆಡಳಿತಗಳು ಸ್ಥಿರತೆಯ ಭರವಸೆ ನೀಡುತ್ತವಾದರೂ ದಬ್ಬಾಳಿಕೆ, ಭಯವುಂಟು ಮಾಡುತ್ತವೆ, ಜನರು ಮತದಾನ ಮೂಲಕ ತಮ್ಮ ಪ್ರಭುತ್ವತೆಯನ್ನು ಮೆರೆಯಬೇಕಾಗಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಸಂಸ್ಥೆಗಳ ಜವಾಬ್ದಾರಿಯ ಜೊತೆಗೆ ನಾಗರಿಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಚುನಾವಣೆಯಲ್ಲಿ ಮತ ಹಾಕುವುದಷ್ಟೆ ಮತದಾರರ ಜವಾಬ್ದಾರಿ ಮತ್ತು ಪ್ರಕ್ರಿಯೆ ಎಂದುಕೊಳ್ಳದೆ, ಸರ್ಕಾರದ ಆಗುಹೋಗುಗಳಲ್ಲಿ ನಾಗರಿಕರಾಗಿ ತೊಡಗಿಸಿಕೊಂಡು, ಇತರರ ಹಕ್ಕುಗಳನ್ನು ಗೌರವಿಸಿ ಪಾರದರ್ಶಕ ಆಡಳಿತದ ಹೊಣೆಗಾರಿಕೆ ಅರಿತುಕೊಂಡು ಆಡಳಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗವುದು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರು ಕ್ರಿಯಾಶೀಲರಾಗಿ ಚುನಾವಣೆಗಳಲ್ಲಿ ಭಾಗಿಯಾಗಬೇಕು. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕು ನೀಡಲಾಗಿದೆ, ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಮತದಾರರಾಗಲಿದ್ದು ಎಲ್ಲರೂ ಮತದಾರರಾಗಿ ಚುನಾವಣೆಗಳಲ್ಲಿ ಪ್ರಭುದ್ದ ಮತದಾರರಾಗಿ ಭಾಗಿಯಾಗಬೇಕೆಂದು ವಿದ್ಯಾರ್ಥಿಗಳ ಕುರಿತು ಮಾತನಾಡಿದರು.

ಹರಿಹರ ಶಾಸಕರಾದ ಬಿ.ಪಿ.ಹರೀಶ್ ರವರು ಸಂವಿಧಾನ ಪೀಠಿಕೆಯನ್ನು ಓದಿದರು. ಈ ವೇಳೆ ಮಾತನಾಡಿದ ಅವರು ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕøತಿ, ಪ್ರಾಂತ್ಯಗಳನ್ನು ಹೊಂದಿದ್ದರೂ ಪ್ರಜಾಪ್ರಭುತ್ವದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಸಂವಿಧಾನದಡಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಶಸ್ಸನ್ನು ಸಾಧಿಸಿ ಅಭಿವೃದ್ದಿಯಲ್ಲಿ ಶ್ರೀಮಂತ ದೇಶಗಳೊಂದಿಗೆ ಸ್ಪರ್ಧೆಯಲ್ಲಿದೆ ಎಂದರು.

ಶಿವಮೊಗ್ಗ ಗಡಿ ಗ್ರಾಮ ನ್ಯಾಮತಿ ತಾಲ್ಲೂಕಿನ ಟಿ.ಗೋಪಗೊಂಡನಹಳ್ಳಿಯಿಂದ ಹರಿಹರ ತಾಲ್ಲೂಕಿನ ಹಾವೇರಿ ಜಿಲ್ಲೆಯ ಗಡಿ ಗ್ರಾಮದವರೆಗೆ 80 ಕಿ.ಮೀ ಅಂತರದಲ್ಲಿ 85 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗಿಯಾಗಿ, ಇದರಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ವಿವಿಧ ವೇಷಭೂಷಣಗಳಲ್ಲಿ ಭಾಗಿಯಾಗಿದ್ದರು. ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಕಲಾವಿದರು, ಸಂಘ, ಸಂಸ್ಥೆಯವರು, ಸರ್ಕಾರಿ ನೌಕರರು, ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಮಂದಿ ರಸ್ತೆಯುದ್ದಕ್ಕೂ ಎಡಬದಿಯಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಸಂವಿಧಾನ ಪೀಠಿಕೆ ವಾಚನ ಮಾಡಿದರು. ಹರಿಹರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದಗಂಗಾ ಶಾಲೆ ವಿದ್ಯಾರ್ಥಿಗಳು ವಿನೂತನವಾಗಿ ಭಾರತ ಭೂಪಟ ರಚನೆ ಮಾಡಿದರು. ವೇದಿಕೆಯಲ್ಲಿ ಭಾಗವಹಿಸಿದ್ದ ಗಣ್ಯರು ಸಸಿಗಳನ್ನು ನೆಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಿದ್ದಗಂಗಾ ಶಾಲೆ ಜಯಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಸೆಪ್ಟೆಂಬರ್ 22 ರಿಂದ ನೂತನ ನವೀಕೃತ ಕೆಎಸ್‍ಆರ್‍ ಟಿ ಸಿ ಬಸ್ ನಿಲ್ದಾಣದಿಂದ ಬಸ್ ಗಳ ಕಾರ್ಯಾಚರಣೆ

Published

on

ಸುದ್ದಿದಿನ,ದಾವಣಗೆರೆ:ನೂತನ ನವೀಕೃತ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಸೆಪ್ಟೆಂಬರ್ 22 ರಿಂದ ಬಸ್ ಕಾರ್ಯಾಚರಣೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಚಾಲನೆ ನೀಡುವರು.

ಸೆ.22 ರಿಂದ ಪ್ರಸ್ತುತ ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಕ.ರಾ.ರ.ಸಾ.ನಿಗಮದ ವತಿಯಿಂದ ನಿರ್ಮಿತವಾಗಿರುವ ಪಿ.ಬಿ.ರಸ್ತೆಯ ಮರುನಿರ್ಮಿತ ಬಸ್ ನಿಲ್ದಾಣ ಮತ್ತು ಬೇತೂರು ರಸ್ತೆಯ ನೂತನ ಮಾರ್ಗಗಳ ಬಸ್ ನಿಲ್ದಾಣದಿಂದ ಸಂಸ್ಥೆಯ ವಾಹನಗಳ ಕಾರ್ಯಾಚರಣೆ ಆರಂಭವಾಗಲಿದೆ. ಸೆ.22 ರಿಂದ ಹೈಸ್ಕೂಲ್ ಬಸ್ ನಿಲ್ದಾಣದಿಂದ ಸಂಸ್ಥೆಯ ಎಲ್ಲಾ ವಾಹನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್ ಹೆಬ್ಬಾರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಕಲಿ ಸೇವಾ ಪ್ರಮಾಣಪತ್ರ : ಅತಿಥಿ ಉಪನ್ಯಾಸಕ ಎಸ್. ಸಿದ್ಧನಗೌಡ ವಿರುದ್ಧ ಎಫ್.ಐ.ಆರ್ ದಾಖಲು

Published

on

ಸುದ್ದಿದಿನ,ಕೂಡ್ಲಿಗಿ:ಪಟ್ಟಣದ ಎಸ್.ಎ.ವಿ.ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಕಲಿ ಸೀಲು ಹಾಗೂ ನಕಲಿ ಸೇವಾ ಪ್ರಮಾಣಪತ್ರ ಸಿದ್ಧಪಡಿಸಿಕೊಂಡು ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದ ಎಸ್.ಸಿದ್ಧನಗೌಡ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನಾಲ್ಕು ವರ್ಷಗಳ ನಕಲಿ ಸೇವಾ ಪ್ರಮಾಣಪತ್ರ ತಯಾರಿಸಿಕೊಂಡ ಕೂಡ್ಲಿಗಿ ತಾಲ್ಲೂಕಿನ ಸೂಲದಹಳ್ಳಿ ಅಗ್ರಹಾರ ಗ್ರಾಮದ ಎಸ್.ಸಿದ್ಧನಗೌಡ ಎಂಬ ಅತಿಥಿ ಉಪನ್ಯಾಸಕನ ಮೇಲೆ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಎನ್.ಕಲ್ಲಪ್ಪ ಇವರು ಕೂಡ್ಲಿಗಿ ನಗರದ ಪೋಲಿಸ್ ಠಾಣೆಯಲ್ಲಿ ಐ.ಪಿಸಿ ಸೆಕ್ಷನ್ 1860 ಕಲಂ 420, 465, 468, 471 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ ಎಸ್.ಸಿದ್ಧನಗೌಡ ಅವರು ನಕಲಿ ಸೇವಾ ಪ್ರಮಾಣಪತ್ರ ಸಿದ್ಧಪಡಿಸಿಕೊಂಡು 2023ನೇ ಸಾಲಿನಲ್ಲಿ ನಡೆದ ಅತಿಥಿ ಉಪನ್ಯಾಸಕರ ಕೌನ್ಸಿಲಿಂಗ್ ನಲ್ಲಿ ಕನ್ನಡ ಉಪನ್ಯಾಸಕರಾಗಿ ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಆಯ್ದುಕೊಂಡು ಸೇವೆಗೆ ವರದಿ‌ ಮಾಡಿಕೊಂಡಿದ್ದರು. ಇವರ ಸೇವೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ಎ.ಓಬಳೇಶ್ ಅವರು ಮಾಹಿತಿಹಕ್ಕು ಅಧಿನಿಯಮ ಅಡಿಯಲ್ಲಿ ಮಾಹಿತಿ ಪಡೆದು, ಕೂಡ್ಲಿಗಿ ಪಟ್ಟಣದ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನ‌ ಪ್ರಾಂಶುಪಾಲರಾದ ಎನ್.ಕಲ್ಲಪ್ಪ ಇವರ ವಿರುದ್ಧ ಲೋಕಾಯುಕ್ತಾಗೆ ದೂರು ನೀಡಿದ್ದರು.

ವಿಚಾರಣೆಯನ್ನು ಕೈಗೆತ್ತಿಕೊಂಡ ಲೋಕಾಯುಕ್ತ ನ್ಯಾಯಾಲಯವು ಪ್ರಾಂಶುಪಾಲರಿಗೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ನಕಲಿ ಸೀಲು, ನಕಲಿ‌ ಪ್ರಮಾಣಪತ್ರ ಸಿದ್ಧಪಡಿಸಿಕೊಂಡ ಎಸ್.ಸಿದ್ಧನಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೋಲಿಸರು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಭಾರತವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಆಯೋಜಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆಮಂಡಳಿಯ 30ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯು 1ಸಾವಿರದ 700 ವಿಶ್ವವಿದ್ಯಾಲಯಗಳು 45 ಸಾವಿರ ಕಾಲೇಜುಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಭಾರತವು ಅಭಿವೃದ್ದಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿದ್ದು, ಮುಂಬರುವ ದಿನಗಳಲ್ಲಿ ದೇಶವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತರಲು ಪ್ರಯತ್ನ ಮಾಡಬೇಕಾಗಿದೆ ಎಂದು ರಾಜ್ಯಪಾಲರು ಕರೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending