ದಿನದ ಸುದ್ದಿ
ದಾವಣಗೆರೆ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ | ಅರ್ಹರಿಗೆ ಸರ್ಕಾರಿ ಸೌಲಭ್ಯಗಳ ವಿತರಣೆಯಲ್ಲಿ ಮದ್ಯವರ್ತಿಗಳ ಹಾವಳಿ ತಡೆಗಟ್ಟಲು ಕ್ರಮ : ಮಹಾಂತೇಶ್ ಬೀಳಗಿ
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಜಗಳೂರು ತಾಲ್ಲೂಕು ಗಡಿ ಭಾಗದ ಅಂಚಿನಲ್ಲಿರುವ ಬಸವನಕೋಟೆ ಹಾಗೂ ಅಗಸನಹಳ್ಳಿ ಗ್ರಾಮಗಳು ಜಿಲ್ಲೆಯ ಆಡಳಿತದ ಮುಖ್ಯಸ್ಥರ ಸ್ವಾಗತಕ್ಕೆ ತಳಿರು ತೋರಣಗಳಿಂದ ನವವಧುವಿನಂತೆ ಸಿಂಗಾರಗೊಂಡಿದ್ದವು.
ಉಭಯ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಕಟೌಟ್‍ಗಳು ರಾರಾಜಿಸುತ್ತಿದ್ದವು. ಗ್ರಾಮದ ಸಮಸ್ಯೆಗಳ ಪರಿಹಾರದ ನಿರೀಕ್ಷೆಯ ಕಣ್ಣುಗಳು ಜಿಲ್ಲಾಧಿಕಾರಿಗಳ ಬರುವಿಕೆಯ ಹಾದಿಯನ್ನೇ ಎದುರು ನೋಡುತ್ತಿದ್ದವು.
ಕೆಲವು ಜನರ ಕೈಯಲ್ಲಿ ಸರ್ಕಾರಿ ಸವಲತ್ತು ಪಡೆಯಲು ವಯಕ್ತಿಕ ಅರ್ಜಿಗಳಿದ್ದರೆ, ಇನ್ನು ಕೆಲವರ ಕೈಯಲ್ಲಿ ಗ್ರಾಮದ ಜನರ ಹಿತಾಸಕ್ತಿಗಾಗಿ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳ ಬೇಡಿಕೆಯನ್ನು ಹೊತ್ತ ಅರ್ಜಿಗಳಿದ್ದವು.
ಇದು ‘ಜಿಲ್ಲಾಧಿಕಾರಿಗಳ ನಡಿಗೆ- ಗ್ರಾಮಗಳ ಕಡೆಗೆ’ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಏರ್ಪಡಿಸಲು ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಡಳಿತ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕಾಗಿ ನಿಗದಿಪಡಿಸಲಾಗಿದ್ದ ಬಸವನಕೋಟೆ ಹಾಗೂ ಅಗಸನಹಳ್ಳಿ ಗ್ರಾಮಗಳಲ್ಲಿ ಶನಿವಾರ ಕಂಡುಬಂದ ದೃಶ್ಯಗಳಿವು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಮ್ಮ ವಾಹನವನ್ನು ಬಿಟ್ಟು, ಜಿಲ್ಲಾ ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳ ಸಮೇತ ಕೆಎಸ್‍ಆರ್‍ಟಿಸಿ ಬಸ್ ಮೂಲಕವೇ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕಾಗಿ ಬಸವನಕೋಟೆ ಗ್ರಾಮಕ್ಕೆ ಆಗಮಿಸಿದರು. ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಭವ್ಯ ಸ್ವಾಗತವನ್ನೇ ಏರ್ಪಡಿಸಿದ್ದರು.
ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ ಪ್ರಸಕ್ತ ವರ್ಷದ ಮೊದಲ ಗ್ರಾಮ ವಾಸ್ತವ್ಯ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಜಗಳೂರು ತಾಲ್ಲೂಕು ಬಸವನಕೋಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉದ್ಘಾಟಿಸಿದರು.
ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮೊದಲು ಜಗಳೂರಿನ ಬಸವನಕೋಟೆ ಗ್ರಾಮದಲ್ಲಿ ಕಾರ್ಯಕ್ರಮವನ್ನು ಆರಂಭಿಸಿದರು, ನಂತರ ಅಗಸನಹಳ್ಳಿಯಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು.
ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲಾ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು ಎಂಬ ಸರ್ಕಾರದ ಮಾರ್ಗಸೂಚಿಯಂತೆ ಈ ಬಾರಿ ಜಗಳೂರು ತಾಲ್ಲೂಕಿನ ಅಗಸನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದು, ಬಸವನಕೋಟೆ ಗ್ರಾಮದ ಜನರಿಂದ ಅಹವಾಲನ್ನು ಸ್ವೀಕರಿಸಿ ಸಾಧ್ಯವಾದಲ್ಲಿ ಇಲ್ಲಿಯೇ ಪರಿಹಾರ ಸೂಚಿಸುತ್ತೇವೆ ಎಂದು ಭರವಸೆ ಮೂಡಿಸಿದರು.
ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಬೇಕೆಂದರೂ ಮಧ್ಯವರ್ತಿಗಳು ಹಾಗೂ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಅವರಿಗೆ ಹಣ ನೀಡದಿದ್ದರೆ ಕೆಲಸ ಆಗುವುದಿಲ್ಲ ಎಂಬ ಅಪವಾದವಿದೆ. ಈ ಕಾರಣದಿಂದ ಏಜೆಂಟರು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸರ್ಕಾರದ ಎಲ್ಲಾ ಸವಲತ್ತುಗಳನ್ನು ಯಾವುದೇ ಖರ್ಚಿಲ್ಲದೇ ನೇರವಾಗಿ ನಿಮ್ಮ ಬಾಗಿಲಿಗೆ ತಲುಪಿಸುವ ಸದ್ದುದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಮದ ಕೇರಿ ಕೇರಿಗೂ ಓಡಾಡಿ ಖುದ್ದಾಗಿ ಸಾರ್ವಜನಿಕರಿಂದ ಅಲ್ಲಿಯ ಸಮಸ್ಯೆಗಳು, ವಾಸ್ತವತೆ ಕುರಿತು ತಿಳಿದುಕೊಂಡಿದ್ದೇನೆ. ಗ್ರಾಮಸ್ಥರು ತಮಗೆ ಸಿಗುವ ಸವಲತ್ತುಗಳ ಕುರಿತು ಪ್ರಾಮಾಣಿಕವಾಗಿ ಹೇಳಿದ್ದು, ಸಮಸ್ಯೆಗಳನ್ನು ತಿಳಿಸಿದ್ದಾರೆ. ಈ ಗ್ರಾಮದಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಸತ್ಯ ದರ್ಶನವಾಗಿದೆ. ಗ್ರಾಮದಲ್ಲಿ ಸಾಕಷ್ಟು ಕೆಲಸ ಮಾಡಲು ಬಾಕಿ ಉಳಿದಿದ್ದು ಅದನ್ನು ಪೂರೈಸಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ, ಸಂಧ್ಯಾ ಸುರಕ್ಷಾ ಯೋಜನೆಯಡಿ ಬಸವನಕೋಟೆಯಲ್ಲಿ 23 ಅರ್ಜಿ, ಅಗಸನಹಳ್ಳಿ ಗ್ರಾಮದಲ್ಲಿ 8 ಅರ್ಜಿ ಸೇರಿದಂತೆ ಒಟ್ಟು 31 ಅರ್ಜಿ ಬಂದಿದ್ದು ಅದರ ಮಂಜೂರಾತಿ ಆದೇಶಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ವೃದ್ಧಾಪ್ಯ ವೇತನ ಯೋಜನೆಯಡಿ ಬಸವನಕೋಟೆಯಲ್ಲಿ 31, ಅಗಸನಹಳ್ಳಿಯಲ್ಲಿ 07 ಸೇರಿದಂತೆ ಒಟ್ಟು 38 ಅರ್ಜಿಗಳು ಬಂದಿದ್ದು, ಅರ್ಹರೆಲ್ಲರಿಗೂ ಮಂಜೂರಾತಿ ಆದೇಶ ನೀಡಲಾಗುವುದು.
ಇನ್ನು ವಿಧವವೇತನ ಯೋಜನೆಯಡಿ ಬಸವನಕೋಟೆಯಲ್ಲಿ 4, ಅಗಸನಹಳ್ಳಿಯಲ್ಲಿ 01, ಒಟ್ಟು 5 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಮಂಜೂರು ಆದೇಶಗಳನ್ನು ನೀಡಲಾಗುವುದು ಹಾಗೂ 03 ಅಂಗವಿಕಲರ ಮಾಸಾಶನ ಮಂಜೂರಾತಿ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಗ್ರಾಮಸ್ಥರು ಮಗುವೊಂದನ್ನು ತೋರಿಸಿ ಮಗುವಿನ ಖಾಯಿಲೆ ಗುಣಮುಖ ಮಾಡಲು ಖಾಸಗಿ ಆಸ್ಪತ್ರೆಗೆ ಸೇರಿಸಿ ಇಂಜೆಕ್ಷನ್ ಮಾಡಿಸಿದ್ದರ ಪರಿಣಾಮ ಇಂದು ವಾಸಿಮಾಡಲಾಗದ ಸ್ಥಿತಿಗೆ ತಲುಪಿದೆ. ಚಿಕಿತ್ಸೆ ನೀಡಿ ಗುಣಮುಖರಾಗಲು ಸಾಧ್ಯವೇ ಇಲ್ಲದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದು, ಮಗುವಿನ ಸಂಪೂರ್ಣ ಚಿಕಿತ್ಸೆಗಾಗಿ ಜಿಲ್ಲಾಡಳಿತದ ವತಿಯಿಂದ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಗ್ರಾಮದಲ್ಲಿ ಬಹಳಷ್ಟು ಜನ ಅಂಗವಿಕಲರ ವೇತನ ತೆಗೆದುಕೊಳ್ಳುತ್ತಿದ್ದಾರೆ. ಅವರ ಪೈಕಿ ಕೆಲವರು ಶೇ.75 ಕ್ಕಿಂತ ಹೆಚ್ಚು ಜನರು ಅಂಗವೈಕಲ್ಯವಿದ್ದರು ಸಹ ಸರಿಯಾದ ಪ್ರಮಾಣಪತ್ರ ಸಿಗದೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ರೂ. 1400 ಪಿಂಚಣಿ ಪಡೆಯಲು ಈ ಗ್ರಾಮದಲ್ಲಿ ಸುಮಾರು 6-7 ಜನರು ಅರ್ಹರಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಎಲ್ಲಾ ಸೌಲಭ್ಯಗಳನ್ನು ವಿಳಂಬ ರಹಿತವಾಗಿ ವಿತರಿಸಲಾಗುತ್ತದೆ ಎಂದರು.
ಈ ಊರಿಗೆ ಅನೇಕ ಕೆಲಸ ಮಾಡಲು ಬಾಕಿ ಇದ್ದು ರಸ್ತೆ, ಚರಂಡಿ ಸ್ವಚ್ಚತೆ, ರಾಜಕಾಲುವೆ ನಿರ್ಮಾಣ, ಆಸ್ಪತ್ರೆಯಲ್ಲಿ ವೈದ್ಯರನ್ನು ಒದಗಿಸಲಾಗುವುದು. ಹಾಗೂ ಈ ಗ್ರಾಮದಿಂದ ಹರಪನಹಳ್ಳಿ, ಉಜ್ಜಯಿನಿ, ಕೊಟ್ಟೂರು ಮತ್ತು ದಾವಣಗೆರೆಗೆ ಸರ್ಕಾರಿ ಬಸ್ಸಿನ ಸೌಲಭ್ಯಗಳನ್ನು ನೀಡುವ ವ್ಯವಸ್ಥೆಯನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗಿದ್ದು, ಇದರಿಂದ ಅನೇಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾದರಿಯಾಗಲಿದೆ ಎಂದು ವಿದ್ಯಾರ್ಥಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಭರವಸೆ ಮೂಡಿಸಿದರು.
ಜಿಲ್ಲಾ ಕೇಂದ್ರದಲ್ಲಿ ಅನೇಕ ವಸತಿ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ದಾವಣಗೆರೆಯತ್ತ ಮುಖ ಮಾಡಿ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೆ ಏರಬೇಕು. ಅಲ್ಲದೇ ಈ ಗ್ರಾಮಗಳಲ್ಲಿ ಖಾಸಗಿ ಬಸ್ಸುಗಳ ಹಾವಳಿ ತುಸು ಹೆಚ್ಚಾಗೆ ಇದ್ದು, ಮುಂದಿನ ದಿನಗಳಲ್ಲಿ ಜನರ ಅನುಕೂಲಕ್ಕಾಗಿ ಸರ್ಕಾರಿ ಬಸ್ಸುಗಳ ಸವಲತ್ತುಗಳನ್ನು ಒದಗಿಸಲು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
ಮುಖ್ಯಾಂಶಗಳು
ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ
ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ
ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್
ಸುದ್ದಿದಿನ,ದಾವಣಗೆರೆ: ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಖರೀದಿ ವ್ಯವಹಾರದಲ್ಲಿ ನಿಯಮ ಉಲ್ಲಂಘಿಸಿ, ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆಯು ತನಿಖೆಯನ್ನು ತೀವ್ರಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ಅಧಿಕಾರಿಗಳು ಜುಲೈ 7 ರಿಂದ 10 ರವರೆಗೆ ಜಿಲ್ಲೆಯಲ್ಲಿ ಬೀಡುಬಿಡಲಿದ್ದು, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ನಿಯಮ ಗಾಳಿಗೆ: ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ– ಕರ್ನಾಟಕ’ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಅವರು 2025ರ ಜನೆವರಿ 21ರಂದು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದರು. 2022-23ನೇ ಸಾಲಿನಲ್ಲಿ ದಾವಣಗೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಖರೀದಿಸುವಾಗ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಅಧಿಕೃತ ಮಾರಾಟಗಾರರಿಂದ ದರಪಟ್ಟಿ (ಕೊಟೇಷನ್) ಪಡೆಯದೆ, ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತನಿಖೆ ಎದುರಿಸುತ್ತಿರುವವರು
ಶ್ರೀ ಎನ್.ಜೆ. ಆನಂದ್, ಕಾರ್ಯನಿರ್ವಾಹಕ ಅಧಿಕಾರಿ (ಇಒ), ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ನಾಗರಾಜ್ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ಚನ್ನಪ್ಪ ಎ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾ ಪಂಚಾಯತ್, ದಾವಣಗೆರೆ.
ಕಚೇರಿಯಲ್ಲಿ ತಪಾಸಣೆ
ದೂರಿನ ಅನ್ವಯ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ತನಿಖಾಧಿಕಾರಿ ಟಿ.ಸಿ. ಜಯರಾಮಯ್ಯ ಅವರು ತನಿಖಾ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಜುಲೈ 7 ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತನಿಖಾ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 10 ರವರೆಗೆ ಸರಣಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸ್ಥಳ ತನಿಖೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿದ್ದು, ಪೂರಕ ದಾಖಲೆಗಳೊಂದಿಗೆ ಸಹಕರಿಸುವಂತೆ ದೂರುದಾರರಿಗೂ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಪ್ರಭಾವಿ ಅಧಿಕಾರಿಗಳೇ ಲೋಕಾಯುಕ್ತ ತನಿಖೆಯ ಬಿಸಿಗೆ ಸಿಲುಕಿರುವುದು ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು.
ಅವರು ಸೋಮವಾರ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲೂ ಕೂಡ ಸಾಮೂಹಿಕವಾಗಿ ಫಾರಂ ವಿತರಣೆ ಮಾಡುತ್ತಿಲ್ಲ ಮತ್ತು ಮಾಡುವುದೂ ಇಲ್ಲ, ಕೆಲವು ಬೂತ್‌ಗಳಲ್ಲಿ ಸಾರ್ವಜನಿಕರೇ ಗುಂಪುಗೂಡಿ ಇಲ್ಲೇ ಫಾರಂ ನೀಡಿ ಎಂದು ಕೇಳಿರುವ ಉದಾಹರಣೆಗಳು ಇವೆಯೇ ಹೊರತು, ಇಲಾಖೆಯಿಂದ ಸಾಮೂಹಿಕ ವಿತರಣೆ ನಡೆದಿಲ್ಲ ಎಂದರು.
ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಲಿಖಿತ ಸೂಚನೆ ಹಾಗೂ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಅವರು ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಿ ಫಾರಂಗಳನ್ನು ವಿತರಿಸುವರು. ಭೇಟಿ ನೀಡಿದ ನಂತರ ಮನೆಯ ಬಾಗಿಲಿನ ಮೇಲೆ ಕಡ್ಡಾಯವಾಗಿ ಸ್ಟಿಕ್ಕರ್ ಅಂಟಿಸಬೇಕೆಂದು ಆದೇಶಿಸಲಾಗಿದೆ. ಹಳ್ಳಿಗಳಲ್ಲಿ ಹಾಗೂ ಕೆಲವು ಕಡೆ ಸಾರ್ವಜನಿಕರು ತಮ್ಮ ಫಾರಂಗಳನ್ನು ಬೇಗ ಮಾಡಿಕೊಡಿ ಎಂದು ಬಿ.ಎಲ್.ಓಗಳ ಬಳಿ ಗುಂಪುಗೂಡುತ್ತಿರುವುದು ಕಂಡುಬಂದಿದೆ. ಆದರೆ, ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲು ನಮ್ಮ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಂಪೂರ್ಣ ತಂಡವು ಬಿ.ಎಲ್.ಓ.ಗಳಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 40 ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ನೇರವಾಗಿ ಈ ಸಹಾಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಫಾರಂಗಳನ್ನು ಭರ್ತಿ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಫಾರಂಗಳನ್ನು ಕಡ್ಡಾಯವಾಗಿ ಬಿ.ಎಲ್.ಓ.ಗಳಿಗೆ ಹಸ್ತಾಂತರಿಸಬೇಕು ಎಂದರು
ರಾಷ್ಟ್ರೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿ.ಎಲ್.ಎ (ಬೂತ್ ಮಟ್ಟದ ಏಜೆಂಟ್‌ಗಳು) ಸಾರ್ವಜನಿಕರಿಗೆ ಫಾರಂ ಭರ್ತಿ ಮಾಡಲು ಸಹಾಯ ಮಾಡಬಹುದು. ಅವರು ಮೊದಲ ಹಂತದಲ್ಲಿ ತಲಾ 50 ಫಾರಂಗಳನ್ನು ಸಂಗ್ರಹಿಸಿ, ಭರ್ತಿ ಮಾಡಿ ನಮ್ಮ ಬಿ.ಎಲ್.ಓ.ಗಳಿಗೆ ತಂದುಕೊಡಲು ಅವಕಾಶ ಕಲ್ಪಿಸಲಾಗಿದೆ. ಇದು ಗುಂಪಾಗಿ ಮಾಡುವುದಲ್ಲ, ಬದಲಿಗೆ ಮನೆ ಮನೆಗೆ ಹೋಗಿ ಬಿ.ಎಲ್.ಓಗಳ ಸಹಯೋಗದೊಂದಿಗೆ ಮಾಡುವ ಕಾರ್ಯವಾಗಿದೆ ಎಂದರು.
ಸಹಿ ಮಾಡುವ ಪ್ರಕ್ರಿಯೆಯು ಮತದಾರರದ್ದೇ ಆಗಿರುತ್ತದೆ. ಮೊಬೈಲ್ ಬಳಸಲು ಬಾರದ ಅನಕ್ಷರಸ್ಥರಿಗೆ ಅಥವಾ ತಾಂತ್ರಿಕ ತೊಂದರೆ ಇರುವವರಿಗೆ ಬಿ.ಎಲ್.ಓ ಹಾಗೂ ಬಿ.ಎಲ್.ಎ.ಗಳು ಸಹಾಯ ಮಾಡಲಿದ್ದಾರೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಅಡಿಯಲ್ಲೇ ನಮ್ಮ ಇಡೀ ತಂಡ ಕೆಲಸ ಮಾಡುತ್ತಿದೆ ಎಂದರು.
ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಶಿಫ್ಟ್ ಮಾಡಿಕೊಂಡಿರುವ ಮತದಾರರು, ತಮ್ಮ ಹೆಸರು ಕೈಬಿಟ್ಟು ಹೋಗುವ ಆತಂಕ ಪಡಬೇಕಾಗಿಲ್ಲ. ಅಂತಹ ಮತದಾರರು ‘ಫಾರಂ-8’ ಅನ್ನು ಸಲ್ಲಿಸುವ ಮೂಲಕ ತಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು ಎಂದರು.
ಈಗಾಗಲೇ ಮ್ಯಾಪಿಂಗ್ ಆಗಿರುವ ಮತದಾರರು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿರುವುದಿಲ್ಲ. ಒಂದು ವೇಳೆ ತಪ್ಪಾಗಿ ಮ್ಯಾಪಿಂಗ್ ಆಗಿದ್ದರೆ ಅಥವಾ ತಂದೆ-ತಾಯಿಯ ಹೆಸರುಗಳಲ್ಲಿ ತಪ್ಪುಗಳಾಗಿದ್ದರೆ, 2002ರ ಹಳೆಯ ವೋಟರ್ ಐಡಿ ವಿವರಗಳ ಆಧಾರದ ಮೇಲೆ ಬಿ.ಎಲ್.ಓ ಮೊಬೈಲ್ ಆಪ್ (BLO Mobile App) ಮೂಲಕ ತಿದ್ದುಪಡಿ ಹಾಗೂ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
18 ವರ್ಷ ತುಂಬಿರುವ ಅರ್ಹ ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದ ಫಾರಂಗಳನ್ನು ಪಡೆದು ಭರ್ತಿ ಮಾಡಬಹುದಾಗಿದೆ. ಇದಕ್ಕಾಗಿ ಸಾರ್ವಜನಿಕರು ಯಾರೂ ಮತಗಟ್ಟೆಗಳನ್ನಾಗಲಿ ಅಥವಾ ಬಿ.ಎಲ್.ಓಗಳನ್ನಾಗಲಿ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ, ನಾವೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ ಎಂದು ತಿಳಿಸಿದರು.
ಅನಾಥಾಶ್ರಮಗಳಲ್ಲಿರುವ ಹಾಗೂ ತಂದೆ-ತಾಯಿಯರ ಮಾಹಿತಿ ಇಲ್ಲದವರಿಗೂ ಸಹ ಮತದಾನದ ಹಕ್ಕನ್ನು ಕಲ್ಪಿಸಲು ಚುನಾವಣಾ ಆಯೋಗವು ವಿಶೇಷ ಕ್ರಮ ಕೈಗೊಂಡಿದೆ. ಸರ್ಕಾರಿ ಅನಾಥಾಶ್ರಮವೊಂದರಲ್ಲಿರುವ 43 ಯುವಕರು 2025ನೇ ಇಸವಿಯಲ್ಲೂ ಮತದಾರರ ಪಟ್ಟಿಯಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರವೇ ಅವರಿಗೆ ಪೋಷಕರಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರೆ ಅವರ ಅಧಿಕೃತ ಪೋಷಕರಾಗಿರುತ್ತಾರೆ ಎಂದರು.
ದೇವದಾಸಿಯರಂತಹ ಪ್ರಕರಣಗಳಲ್ಲಿ ತಂದೆಯ ವಿವರಗಳು ಲಭ್ಯವಿಲ್ಲದಿದ್ದರೆ, ತಾಯಿಯ ವಿವರಗಳನ್ನು ನೀಡಿ ಹೆಸರು ನಮೂದಿಸಲು ಅವಕಾಶವಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಇಬ್ಬರೂ ಇಲ್ಲದಿದ್ದರೆ, ಅಂತವರು ತಮ್ಮ ಅಜ್ಜ ಅಥವಾ ಅಜ್ಜಿಯ ಹೆಸರನ್ನು ಸಂಬಂಧದ ಕಾಲಂನಲ್ಲಿ ನಮೂದಿಸಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗವು ಇಂತಹ ಎಲ್ಲಾ ಸವಾಲುಗಳಿಗೂ ಕಾನೂನಾತ್ಮಕವಾಗಿ ಹಾಗೂ ecinet ಮೊಬೈಲ್ ಆಪ್ ಮತ್ತು https://voters.eci.gov.in ಮೂಲಕ ಸೂಕ್ತ ಪರಿಹಾರವನ್ನು ಕಲ್ಪಿಸಿದೆ. ಹೀಗಾಗಿ ಯಾವುದೇ ಮತದಾರರು ಆತಂಕ ಪಡುವ ಅಗತ್ಯವಿಲ್ಲ. ಬಿ.ಎ.ಲ್.ಓ ಗಳು ಮನೆಗೆ ಬಂದಾಗ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸಾರ್ವಜನಿಕರು ಸ್ಪಂದಿಸಿ, ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಫಾರಂ ಹಂಚಿಕೆಯಲ್ಲಿ ರಾಜ್ಯದಲ್ಲೇ ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನ; ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಪ್ರಗತಿಯಲ್ಲಿದ್ದು, ಜಿಲ್ಲಾದ್ಯಂತ ಒಟ್ಟಾರೆ ಶೇ. 94 ರಷ್ಟು ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಫಾರಂಗಳನ್ನು ಹಂಚಿಕೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದು ಅಭೂತಪೂರ್ವ ಸಾಧನೆ ಮಾಡಿದೆ. ಇದೇ ವೇಳೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಶೇ. 99.81 ರಷ್ಟು ದಾಖಲೆ ಪ್ರಮಾಣದ ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಪಾರಂಗಳನ್ನು ಅತ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಹಾಗೂ ಶೇ. 10.8 ರಷ್ಟು ಗಣಕೀಕರಣವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮನೆ ಮನೆ ಭೇಟಿ ಹಾಗೂ ಮಾಹಿತಿ ಸಂಗ್ರಹ ಪ್ರಗತಿಯಲ್ಲಿ
ದಾವಣಗೆರೆ ಜಿಲ್ಲೆಯಲ್ಲಿ ಜೂನ್ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಇವರಿಗೆ ಸಂಬಂಧಿಸಿದ ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಮುದ್ರಿಸಿ ಬಿಎಲ್‌ಓಗಳಿಗೆ ವಿತರಿಸಲಾಗಿದೆ. ಜಿಲ್ಲಾದ್ಯಂತ ಜೂನ್ 06 ರಿಂದ ಜುಲೈ 29 ರ ಅವಧಿಯಲ್ಲಿ ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಇದೇ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಕಾರ್ಯವೂ ಪ್ರಗತಿಯಲ್ಲಿದೆ.
ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮತ್ತು ಪ್ರಗತಿ ವಿವರ
ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಬಿಎಲ್‌ಓಗಳು ಇದುವರೆಗೆ ಒಟ್ಟು 14,06,472 ಎನ್ಯುಮರೇಷನ್ ನಮೂನೆಗಳನ್ನು ವಿತರಿಸಿದ್ದು, 1,54,504 ನಮೂನೆಗಳನ್ನು ಗಣಕೀಕರಿಸಿದ್ದಾರೆ.
103-ಜಗಳೂರು: ಒಟ್ಟು 2,00,836 ಮತದಾರರಿದ್ದು, 1,88,446 ನಮೂನೆಗಳನ್ನು ವಿತರಿಸಲಾಗಿದ್ದು, 18,003 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ: ಒಟ್ಟು 2,11,023 ಮತದಾರರಿದ್ದು, 2,06,550 ನಮೂನೆಗಳನ್ನು ವಿತರಿಸಲಾಗಿದ್ದು, 32,630 ನಮೂನೆಗಳನ್ನು ಗಣಕೀಕರಿಸಲಾಗಿದೆ. 106-ದಾವಣಗೆರೆ ಉತ್ತರ: ಒಟ್ಟು 2,58,718 ಮತದಾರರಿದ್ದು, 2,44,948 ನಮೂನೆಗಳನ್ನು ವಿತರಿಸಲಾಗಿದ್ದು, 7,120 ನಮೂನೆಗಳನ್ನು ಗಣಕೀಕರಿಸಲಾಗಿದೆ. 107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, 194,785 ನಮೂನೆಗಳನ್ನು ವಿತರಿಸಲಾಗಿದ್ದು, 5,085 ನಮೂನೆಗಳನ್ನು ಗಣಕೀಕರಿಸಲಾಗಿದೆ. 108-ಮಾಯಕೊಂಡ: ಒಟ್ಟು 197,048 ಮತದಾರರಿದ್ದು, 196,486 ನಮೂನೆಗಳನ್ನು ವಿತರಿಸಲಾಗಿದ್ದು, 42,785 ನಮೂನೆಗಳನ್ನು ಗಣಕೀಕರಿಸಲಾಗಿದೆ. 109-ಚನ್ನಗಿರಿ ಒಟ್ಟು 2,03,628 ಮತದಾರರಿದ್ದು, 192,838 ನಮೂನೆಗಳನ್ನು ವಿತರಿಸಲಾಗಿದ್ದು, 36,531 ನಮೂನೆಗಳನ್ನು ಗಣಕೀಕರಿಸಲಾಗಿದೆ. 110- ಹೊನ್ನಾಳಿ ಒಟ್ಟು 2,00,033 ಮತದಾರರಿದ್ದು, 182,419 ನಮೂನೆಗಳನ್ನು ವಿತರಿಸಲಾಗಿದ್ದು, 12,350 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಮತದಾರರ ಗುರುತಿಸುವಿಕೆ ಪ್ರಗತಿ
ಜೂನ್ 6 ರಿಂದ ಜಿಲ್ಲೆಯಲ್ಲಿ ಮತದಾರರ ಎನ್ಯುಮರೇಷನ್ ಫಾರ್ಮ್ಸ್ ಹಂಚಿಕೆ ಹಾಗೂ ಮಾಹಿತಿ ಸಂಗ್ರಹಣೆಯ ವೇಳೆ ಒಟ್ಟು 1,707 ವಿವಿಧ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 30 ನಮೂನೆಗಳು ಸಂಗ್ರಹವಾಗದ/ಗೈರು ಹಾಜರಿ ಪ್ರಕರಣಗಳಾಗಿದ್ದು, 641 ಶಾಶ್ವತ ವಲಸೆ, 751 ಮರಣ ಹಾಗೂ 271 ದ್ವಿಪ್ರತಿ (Duplicate) ಪ್ರಕರಣಗಳಾಗಿವೆ.
ಜಗಳೂರು ಕ್ಷೇತ್ರದಲ್ಲಿ 122 ಪ್ರಕರಣಗಳನ್ನು ಗುರುತಿಸಲಾಗಿದ್ದು (2 ಗೈರು, 31 ಶಾಶ್ವತ ವಲಸೆ, 47 ಮರಣ, 40 ದ್ವಿಪ್ರತಿ, 2 ಇತರೆ), ಹರಿಹರ ಕ್ಷೇತ್ರದಲ್ಲಿ 149 ಪ್ರಕರಣಗಳು (2 ಗೈರು, 48 ಶಾಶ್ವತ ವಲಸೆ, 71 ಮರಣ, 26 ದ್ವಿಪ್ರತಿ, 2 ಇತರೆ), ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 246 ಪ್ರಕರಣಗಳು (5 ಗೈರು, 98 ಶಾಶ್ವತ ವಲಸೆ, 112 ಮರಣ, 31 ದ್ವಿಪ್ರತಿ), ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 235 ಪ್ರಕರಣಗಳು (6 ಗೈರು, 123 ಶಾಶ್ವತ ವಲಸೆ, 60 ಮರಣ, 44 ದ್ವಿಪ್ರತಿ, 2 ಇತರೆ), ಮಾಯಕೊಂಡ ಕ್ಷೇತ್ರದಲ್ಲಿ 337 ಪ್ರಕರಣಗಳು (4 ಗೈರು, 113 ಶಾಶ್ವತ ವಲಸೆ, 174 ಮರಣ, 45 ದ್ವಿಪ್ರತಿ,1 ಇತರೆ), ಚನ್ನಗಿರಿ ಕ್ಷೇತ್ರದಲ್ಲಿ 386 ಪ್ರಕರಣಗಳು (10 ಗೈರು, 139 ಶಾಶ್ವತ ವಲಸೆ, 167 ಮರಣ, 63 ದ್ವಿಪ್ರತಿ, 7 ಇತರೆ) ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 232 ಪ್ರಕರಣಗಳ (1 ಗೈರು, 89 ಶಾಶ್ವತ ವಲಸೆ, 120 ಮರಣ, 22 ದ್ವಿಪ್ರತಿ) ಗುರುತಿಸಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಗೂ ಮುನ್ನ ವಿವಿಧ ರಾಷ್ಟ್ರೀಯ ಪಕ್ಷಗಳೊಂದಿಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಬಿ.ಎಲ್.ಎ ಗಳನ್ನು ನೇಮಕ ಮಾಡಿದ್ದು ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಪಾರಂಗಳನ್ನು ನಮೂದಿಸಿ ಬಿ.ಎಲ್.ಓ ಗಳಿಗೆ ನೀಡಲು ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾರ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಉಪ ಕಾರ್ಯದರ್ಶಿ ಮಮತ ಹಸ ಗೌಡರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಪಾಲಿಕೆ ಆಯುಕ್ತ ಮಹಾಂತೇಶ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
ಸುದ್ದಿದಿನ,ದಾವಣಗೆರೆ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಜೀವಭಯದಿಂದ ಪೊಲೀಸ್ ರಕ್ಷಣೆ ಕೋರಿ ಠಾಣೆಗೆ ಬಂದಿದ್ದ ವೇಳೆ, ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಸಂಜೆ ನಡೆದಿದೆ.
ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿಯ ಸಿದ್ದೇಶ್ ಗಾಯಗೊಂಡ ಯುವಕರಾಗಿದ್ದು, ಚಾಕು ಇರಿತದಿಂದ ಅವರ ಬಲಗೈಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಹಿತಿಯ ಪ್ರಕಾರ, ಸಿದ್ದೇಶ್ ಮೈಸೂರಿನ ಫಾರಂ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ದಾಗಿನಕಟ್ಟೆ ಗ್ರಾಮದ ಲೀಲಾವತಿ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಯುವತಿಯ ಕುಟುಂಬದ ವಿರೋಧವಿದ್ದರೂ, ಜುಲೈ 1ರಂದು ಇಬ್ಬರೂ ವಿವಾಹವಾಗಿದ್ದರು.
ಇದಕ್ಕೂ ಮುನ್ನ, ಜೂನ್ 30ರಂದು ಲೀಲಾವತಿ ನಾಪತ್ತೆಯಾಗಿರುವ ಕುರಿತು ಅವರ ಪೋಷಕರು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೀವಭಯ ಇರುವುದಾಗಿ ತಿಳಿಸಿ ದಂಪತಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಕೋರಿದ್ದರು. ಅವರ ಸೂಚನೆಯಂತೆ ವಕೀಲರೊಂದಿಗೆ ಬಸವಾಪಟ್ಟಣ ಪೊಲೀಸ್ ಠಾಣೆಗೆ ತೆರಳಿದ್ದ ವೇಳೆ, ಯುವತಿಯ ಸಂಬಂಧಿಕರು ಸಿದ್ದೇಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಿದ್ದೇಶ್ ಅವರ ಬಲಗೈಗೆ ತೀವ್ರ ಗಾಯಗಳಾಗಿದ್ದು, ಪತಿಯನ್ನು ರಕ್ಷಿಸಲು ಮುಂದಾದ ಲೀಲಾವತಿ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಚಾಕು ದಾಳಿ ನಡೆಸಿದ ಆರೋಪದ ಮೇಲೆ ನಾಗರಾಜನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಳಿಕ ಮಾತನಾಡಿದ ಲೀಲಾವತಿ, “ನನಗೆ ಮತ್ತು ನನ್ನ ಪತಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು. ನಮ್ಮಿಬ್ಬರ ಕೊಲೆಗೆ ಯತ್ನಿಸಿದ ನಾಗರಾಜ ಹಾಗೂ ನನ್ನ ಅಣ್ಣ ಮಂಜುನಾಥ ವಿರುದ್ಧವೂ ದೂರು ದಾಖಲಿಸುತ್ತೇನೆ” ಎಂದು ತಿಳಿಸಿದ್ದಾರೆ.
ಈ ಸಂಬಂಧ ನಾಗರಾಜ ಸೇರಿದಂತೆ ಯುವತಿಯ ಕಡೆಯವರ ವಿರುದ್ಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬಸವಾಪಟ್ಟಣದ ಠಾಣೆಯಲ್ಲಿ ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಮಾರಣಾಂತಿಕ ದಾಳಿ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಎಚ್.ಟಿ.ಶೇಖರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೀತಿಸಿ ವಿವಾಹವಾಗಿದ್ದಕ್ಕೆ ಯುವಕ-ಯುವತಿ ಬಗ್ಗೆ ಯುವತಿ ಕುಟುಂಬಸ್ಥರ ವಿರೋಧವಿತ್ತು. ಪ್ರೀತಿಸಿ ಮದುವೆಯಾ ಗಿದ್ದ ಯುವಕ-ಯುವತಿಯಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದ ವೇಳೆ ಚಾಕುವಿನಿಂದ ದಾಳಿ ಮಾಡಲಾಗಿದೆ ಎಂದರು.
ಚಾಕುವಿನಿಂದ ದಾಳಿಗೊಳಗಾದ ಯುವಕನನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚನ್ನಗಿರಿ ತಾ. ಕಂಚುಗಾರನಹಳ್ಳಿ ಗ್ರಾಮದಲ್ಲಿ ಒಂದು ಕೆಎಸ್ಆರ್‌ಪಿ
ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ದಾಳಿ ಮಾಡಿದವರಮೇಲೆದೂರು ನೀಡದಂತೆ ಕೆಲ ಪೊಲೀಸ್ ಸಿಬ್ಬಂದಿ ಒತ್ತಡ ಹೇರಿದ್ದಾರೆಂಬ ಆರೋಪವಿದೆ. ಈ ಬಗ್ಗೆ ಚನ್ನಗಿರಿ ಡಿವೈಎಸ್ಪಿಗೆ ತನಿಖೆ ನಡೆಸುವಂತೆ ಸೂಚನೆ ನೀಡುತ್ತೇವೆ ಎಂದು ಎಸ್ಪಿ ಡಾ.ಶೇಖರ್ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ5 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ6 days agoದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್ಒಗಳ ಭೇಟಿ ಪ್ರಾರಂಭ
-
ದಿನದ ಸುದ್ದಿ6 days agoಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ
-
ದಿನದ ಸುದ್ದಿ3 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ14 hours agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ2 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ

