ದಿನದ ಸುದ್ದಿ
ಜನರಿಗೆ ತಮ್ಮ ಕೆಲಸಗಳಾಗುವ ಭರವಸೆ,15 ದಿನಕ್ಕೊಮ್ಮೆ ಜನಸ್ಪಂದನ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ | ಜನಸ್ಪಂದನದ ಕಂಪ್ಲೀಟ್ ಡೀಟೆಲ್ಸ್ ; ಮಿಸ್ ಮಾಡ್ದೆ ಓದಿ
ಸುದ್ದಿದಿನ,ದಾವಣಗೆರೆ : ಜನಸ್ಪಂದನ ಕಾರ್ಯಕ್ರಮ ನಡೆಸುವುದರಿಂದ ಜನರಿಗೆ, ಸರ್ಕಾರ ಹಾಗೂ ಜಿಲ್ಲಾಡಳಿತ ನಮ್ಮ ನೆರವಿಗೆ ಇದೆ ಎಂಬ ಭಾವನೆ ಬಂದು ಅವರ ಕೆಲಸಗಳು ಆಗುವುದರಿಂದ ಸರ್ಕಾರದ ಮೇಲೆ ಅವರಿಗೆ ಭರವಸೆ ಮೂಡುತ್ತದೆ. ಹಾಗಾಗಿ ಪ್ರತಿ ಅರ್ಜಿದಾರರ ಸಮಸ್ಯೆಗಳನ್ನು ಆಲಿಸಿ ನಿಯಮಗಳನ್ವಯ ಅವರ ಕೆಲಸಗಳನ್ನು ಮಾಡಿಕೊಡಲು ಎಲ್ಲಾ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಹಾಗೂ ಮುಂದಿನ ದಿನಗಳಲ್ಲಿ 15 ದಿನಕ್ಕೊಮ್ಮೆ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳಲ್ಲಿ ಸಕಾರಾತ್ಮಕ ಮನೋಭಾವನೆ ಇರಬೇಕು. ಎಷ್ಟೋ ಸಮಸ್ಯೆಗಳನ್ನು ಮಾತಿನಿಂದ ಪರಿಹರಿಸಬಹುದು. ಹೀಗಿರುವಾಗ ಯಾವುದೇ ಸಮಸ್ಯೆಯಾಗಲೀ ತನ್ನಿಂದ ಆಗುವುದಿಲ್ಲ ಎನ್ನುವ ಬದಲು ಪರಿಶೀಲನೆ ನಡೆಸುತ್ತೇವೆ ಎಂದರೆ ಸಾರ್ವಜನಿಕರಲ್ಲಿ ಅಧಿಕಾರಿಗಳ ಮೇಲೆ ಆಶಾಭಾವನೆ ಬೆಳೆಯುತ್ತದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಚಿಕ್ಕಬೆನ್ನೂರು ಗ್ರಾಮದ ಕಲ್ಪನಾ ಅರ್ಜಿ ಸಲ್ಲಿಸಿ ಸರ್ವೇ ನಂ-25ರಲ್ಲಿ 3 ಎಕರೆ ಜಮೀನಿನ ಸಾಗುವಳಿ ಚೀಟಿಯನ್ನು ಪಡೆದುಕೊಂಡು ಖಾತೆ ಮತ್ತು ಪಹಣಿಯನ್ನು ಪಡೆದುಕೊಂಡಿದ್ದು, ಅದರಂತೆ ಸದರಿ ಜಮೀನನ್ನು ಪೋಡಿ ದುರಸ್ತಿ ಮತ್ತು ಹದ್ದುಬಸ್ತು ಮಾಡಿಸಿಕೊಡುವಂತೆ ಕೋರಿಕೊಂಡರು. ಇದಕ್ಕೆ ಜಿಲ್ಲಾಧಿಕಾರಿಗಳು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬಸವೇಶ್ವರ ಎಜ್ಯುಕೇಷನ್ ಟ್ರಸ್ಟ್ ಸದಸ್ಯರು ಮಹಾನಗರ ಪಾಲಿಕೆ ಚುನಾವಣೆ ಕೆಲಸಕ್ಕಾಗಿ ಕೆ.ಬಿ.ಬಡಾವಣೆಯ ಬಸವೇಶ್ವರ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ 2 ದಿನಗಳ ಕಾಲ ಶಾಲಾ ವಾಹನವನ್ನು ಬಳಸಿಕೊಂಡಿದ್ದು, ವಾಹನದ ಬಾಡಿಗೆಯನ್ನು ಕೊಡದೆ ಅಲೆದಾಡಿಸಿದ್ದಾರೆ. ಕೂಡಲೇ ಬಾಡಿಗೆಯನ್ನು ಕೊಡಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಕೂಡಲೇ ಪರಿಹರಿಸಲಾಗುವುದು ಎಂದರು.
ಆನಗೋಡು ಹೋಬಳಿ ನೇರಿಗೆ ಗ್ರಾಮದಲ್ಲಿ ಕೃಷಿ ಸಹಾಯಕರ ವಾಸಕ್ಕಾಗಿ ಸರ್ಕಾರದಿಂದ ವಸತಿ ಗೃಹವನ್ನು ನಿರ್ಮಿಸಿದ್ದು, ಇತ್ತೀಚೆಗೆ ಈ ಹುದ್ದೆಯನ್ನು ರದ್ದು ಮಾಡಲಾಯಿತು. ಪ್ರಸ್ತುತ ಈ ಜಾಗದಲ್ಲಿ ಖಾಸಾಗಿ ವ್ಯಕ್ತಿಯೊಬ್ಬರು ವಾಸಮಾಡುತ್ತಿದ್ದು, ಬಾಡಿಗೆಯನ್ನು ನೀಡುತ್ತಿಲ್ಲ.
ಅವರನ್ನು ಕೂಡಲೇ ಈ ಜಾಗದಿಂದ ಖಾಲಿ ಮಾಡಿಸಿ ಇಲ್ಲಿ ಅಂಚೆ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಅಥವಾ ಪಶು ಚಿಕಿತ್ಸಾಲಯ ಕಚೇರಿಗಳ ಪೈಕಿ ಯಾವುದಾದರು ಒಂದನ್ನು ಈ ಜಾಗಕ್ಕೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರೊಬ್ಬರು ಅರ್ಜಿ ಸಲ್ಲಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ | ಹೆಚ್.ಎ.ಎಲ್ ನಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನ
ವೆಂಕಟೇಶ್‍ನಾಯ್ಕ್ ಅರ್ಜಿ ಸಲ್ಲಿಸಿ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ನನ್ನ ಹೆಂಡತಿ ಮೂಕಿ ಹಾಗೂ ಕಿವುಡಿಯಾಗಿದ್ದಾಳೆ. ಒಂದುವರೆ ವರ್ಷದ ಮಗನಿಗೆ ಕಣ್ಣಿನ ತೊಂದರೆಯಿದ್ದು ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಆಸ್ಪತ್ರೆಯಲ್ಲಿ ಗುರುತಿನ ಚೀಟಿ, ರೇಷನ್‍ಕಾರ್ಡ್, ಆಧಾರ್‍ಕಾರ್ಡ್‍ಗಳನ್ನು ಕೇಳುತ್ತಿದ್ದು, ತಮ್ಮ ಬಳಿ ಇದ್ಯಾವುದೇ ಅಗತ್ಯ ದಾಖಲೆಗಳಿಲ್ಲ ಎಂದು ಸಮಸ್ಯೆ ಕುರಿತು ಹೇಳುವಾಗ, ಜಿಲ್ಲಾಧಿಕಾರಿ ಮೊದಲು ಆಧಾರ್‍ಕಾರ್ಡ್, ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಿ ತದನಂತರ ನಿಮ್ಮ ಮಗನ ಚಿಕಿತ್ಸೆ ನಡೆಯುತ್ತದೆ ಎಂದು ಭರವಸೆ ನೀಡಿದರು.
ಶಿವಕುಮಾರ್ ಸ್ವಾಮಿ ಲೇಔಟ್, 2ನೇ ಹಂತದ, 8ನೇ ಕ್ರಾಸ್, ಡಾಬಾ ಸ್ಟಾಪ್ ಹತ್ತಿರವಿರುವ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಾರ್ಕ್ ಆಗಿ ಅನುಮೋದಿತಗೊಂಡಿರುವ ಜಾಗದಲ್ಲಿ ಬಂಜಾರ ಸಮುದಾಯದವರು ದೇವಸ್ಥಾನ ನಿರ್ಮಿಸಿ 2 ಬಾವುಟಗಳನ್ನು ಹಾರಿಸಿದ್ದಾರೆ. ಸಾರ್ವಜನಿಕ ಉದ್ಯಾನವನದ ಜಾಗ ದುರ್ಬಳಕೆ ಮಾಡಿಕೊಂಡಿದ್ದು ಕೂಡಲೇ ದೇವಸ್ಥಾನವನ್ನು ತೆರವುಗೊಳಿಸಿ ಪಾರ್ಕ್ ಆಗಿ ಉಳಿಸಿಕೊಡಬೇಕು ಎಂದು ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕೂಡಲೇ ಪರಿಶೀಲನೆ ನಡೆಸಿ ವರದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಸ್.ಎಸ್.ಬಡಾವಣೆ ‘ಎ’ ಬ್ಲಾಕ್ ನೇತಾಜಿ ಸುಭಾಷ್‍ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದ ಎದುರು ಇರುವ ವಿದ್ಯುತ್ ಟ್ರಾನ್ಸ್‍ಫರ್ಮರ್ ಮತ್ತು ಕಂಬಗಳನ್ನು ಸ್ಥಳಾಂತರಿಸಿ, ಇದನ್ನು ಸೈಟ್ ನಂ.30, ಡೋರ್ ನಂಬರ್ 3989, 11ನೇ ಮುಖ್ಯ ರಸ್ತೆಗೆ ಮರುಸ್ಥಾಪಿಸಲು ಉದ್ದೇಶಿಸಲಾಗಿದೆ. ಆದರೆ ಈ ರಸ್ತೆಯು 20 ಅಡಿ ಅಗಲವಿದ್ದು, ಇದರಲ್ಲಿ ಚರಂಡಿ, ನೀರಿನ ಪೈಪ್‍ಲೈನ್, ಮತ್ತು ಯುಜಿಡಿ ಪೈಪ್‍ಲೈನ್ ಇದ್ದು, ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಈಗಾಗಲೇ ಹೊಂಗೆ ಮರವನ್ನು ಕಡಿದಿದ್ದಾರೆ.
ಸದರಿ ರಸ್ತೆಯಲ್ಲಿ ಬಹಳ ಜನ ಮತ್ತು ವಾಹನ ಸಂಚಾರವಿರುವುದರಿಂದ ಹಾಲಿ ಇರುವ ಅಂದರೆ ಒಳಾಂಗಣ ಕ್ರೀಡಾಂಗಣದ ಎದುರಿನಲ್ಲಿರುವ 80 ಅಡಿ ರಸ್ತೆಯಲ್ಲಿ ಎಲ್ಲಿ ಬೇಕಾದರೂ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ನ್ನು ಮರುಸ್ಥಾಪಿಸಬೇಕು ಎಂದು ಬಡಾವಣೆ ನಿವಾಸಿಗಳು ಮನವಿ ಮಾಡಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಈ ಸ್ಥಳಕ್ಕೆ ಸ್ವತಃ ನಾನು ಖುದ್ದಾಗಿ ಭೇಟಿ ನೀಡಿದ್ದು ಸಮಸ್ಯೆಯ ಬಗ್ಗೆ ತಿಳುವಳಿಕೆ ಇದೆ ಎಂದ ಅವರು 80 ಅಡಿ ರಸ್ತೆಯಲ್ಲೆ ಟ್ರ್ಯಾನ್ಸ್‍ಫಾರ್ಮ್ ಮರುಸ್ಥಾಪಿಸಲು ಕೆಇಬಿ ಅಧಿಕಾರಿಗೆ ನಿರ್ದೇಶಿಸಿದರು.
ಬೂದಳ್ ರಸ್ತೆಯಲ್ಲಿರುವ ಆಶ್ರಯ ಮನೆಗಳ ಪೈಕಿ ಮನೆ ನಂ.6ರ ಮೇಲೆ ಏರ್‍ಟೇಲ್ ನೆಟ್‍ವರ್ಕ್ ಟವರ್ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾದಲ್ಲಿ ಅಕ್ಕಪಕ್ಕದ ನಿವಾಸಿಗಳ ಆರೋಗ್ಯದ ಮೇಲೆ ತೊಂದರೆಯುಂಟಾಗುತ್ತದೆ. ಆದ್ದರಿಂದ ಇದನ್ನು ತಡೆ ಹಿಡಿಯಬೇಕು ಎಂದು ವ್ಯಕ್ತಿಯೊಬ್ಬರು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಸೂಚಿಸಿ ಸಮಸ್ಯೆ ಪರಿಹರಿಸುತ್ತೇವೆ ಎಂದು ತಿಳಿಸಿದರು.
ಸಂಧ್ಯಾಸುರಕ್ಷ ಯೋಜನೆಯಡಿ ನನಗೆ ಒಂದು ಸಾವಿರ ರೂಪಾಯಿ ಬರುತ್ತಿದ್ದು, ಅದನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮ ಮಾಡಿ ಎಂದು ಶಾರದಮ್ಮ ಮನವಿ ಸಲ್ಲಿಸಿದರು.
ಕೆ.ಬಿ.ಪ್ರಕಾಶ್ ಅರ್ಜಿ ಸಲ್ಲಿಸಿ ರಸ್ತೆ ಅಪಘಾತದಲ್ಲಿ ತಮ್ಮ ಎಡಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಚನ್ನಗಿರಿ ಆಸ್ಪತ್ರೆಯ ವೈದ್ಯರು ಮೆಡಿಕಲ್ ವರದಿಯಲ್ಲಿ ಶೇ.60 ರಷ್ಟು ಅಂಗನ್ಯೂನತೆ ಎಂದು ನಮೂದಿಸಿದ್ದಾರೆ. ಅದನ್ನು ಶೇಕಡಾ.75ರಷ್ಟು ಅಂಗನ್ಯೂನ್ಯತೆಗೆ ಹೆಚ್ಚಿಸಿ ಪರಿಹಾರ ಒದಗಿಸಬೇಕೆಂದು ಕೋರಿದರು. ಜಿಲ್ಲಾಧಿಕಾರಿ ಅವರನ್ನು ಸ್ಥಳದಲ್ಲೇ ಪರಿಶೀಲಿಸಿ ಇವರಿಗೆ ಕೂಡಲೇ ಶೇಕಡಾ. 75 ರಷ್ಟು ಅಂಗನ್ಯೂನತೆಗೆ ಹೆಚ್ಚಿಸಿ ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಶಾಮನೂರು ಗ್ರಾಮ ಡಾಲರ್ಸ್ ಕಾಲೋನಿಯಲ್ಲಿ ಕೊಳಚೆ ನೀರಿನ ರಾಜ ಕಾಲುವೆಗೆ ಸಿ.ಸಿ. ಚರಂಡಿ ಹಾಗೂ ಡಕ್ ಸ್ಲ್ಯಾಬ್ ನಿರ್ಮಾಣ ಮಾಡುವಂತೆ ನಾಗರೀಕರ ಪರವಾಗಿ ಎಸ್.ಎಂ.ಪ್ರಭುದೇವಯ್ಯ ಹಾಗೂ ಕೆ.ಜಿ.ಲಕ್ಷ್ಮಿಕಾಂತ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿ ಮಯೂರ್ ಬಿಸೆ ಅರ್ಜಿ ಸಲ್ಲಿಸಿ ಪಿಯುಸಿಯಲ್ಲಿ ಶೇಕಡ 84ರಷ್ಟು ಫಲಿತಾಂಶ ಹೊಂದಿ ಇಂಜಿನಿಯರಿಂಗ್ ಮಾಡುತ್ತಿದ್ದು, ನನ್ನ ತಂದೆ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇದೀಗ ನಾನು ಇಂಜಿನಿಯರಿಂಗ್ ಮಾಡುತ್ತಿದ್ದು ನನಗೆ ಬಿಸಿಎಂ ಹಾಸ್ಟೆಲ್ ಅಲ್ಲಿ ಸೀಟ್ ಸಿಗದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದರು.
ಇದಕ್ಕೆ ಜಿಲ್ಲಾಧಿಕಾರಿ ನಿನ್ನ ತಂದೆಯೊಂದಿಗೆ ನೀನು ಕೃಷಿಯಲ್ಲಿ ತೊಡಗಿಕೊಂಡು ನಿಮ್ಮ ಜಮೀನನ್ನು ಉನ್ನತಿಕರಣಗೊಳಿಸಬಹುದು ಎಂಬ ಸಲಹೆಗೆ ವಿದ್ಯಾರ್ಥಿ ಪ್ರತಿಕ್ರಿಯಿಸಿ ನನ್ನ ತಂದೆ ನನ್ನ ಹಾಗೆ ನೀನು ಕಷ್ಟಪಡಬೇಡ. ಉನ್ನತ ಮಟ್ಟದ ವಿದ್ಯಾಭ್ಯಾಸ ಪಡೆದು ಉದ್ಯೋಗ ಪಡೆದುಕೊಳ್ಳಬೇಕು ಎಂದಿದ್ದಾರೆ ಎಂದು ತಿಳಿಸಿದ. ಅದಕ್ಕೆ ಜಿಲ್ಲಾಧಿಕಾರಿಗಳು ಹಿಂದುಳಿದ ವರ್ಗಗಳ ಅಧಿಕಾರಿಗಳಿಗೆ ಸೂಚನೆ ನೀಡಿ ಈ ವಿದ್ಯಾರ್ಥಿಗೆ ಕೂಡಲೇ ಹಾಸ್ಟೆಲ್ ಸಿಗುವಂತೆ ನೋಡಿಕೊಳ್ಳಿ ಎಂದು ಆದೇಶಿಸಿದರು.
ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್.ಗಂಗಪ್ಪ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮ ಕೌಸರ್ ಮನವಿ ಮಾಡಿ, ಶಾಮನೂರಿಗೆ ಇರುವ ನಗರ ಸಾರಿಗೆಯನ್ನ ಜೆ.ಹೆಚ್.ಪಟೇಲ್ ಬಡಾವಣೆಯ ಮಹಿಳಾ ವಿದ್ಯಾರ್ಥಿ ನಿಲಯದವರೆಗೆ ವಿಸ್ತರಿಸಿದರೆ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ನಾಗರೀಕರಿಗೆ ಅನುಕೂಲವಾಗುವುದಾಗಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೆಎಸ್‍ಆರ್‍ಟಿಸಿ ಅಧಿಕಾರಿಗೆ ಸೂಚನೆ ನೀಡಿ ಈ ಬೇಡಿಕೆ ಕಳೆದ ವರ್ಷದಿಂದ ಇದ್ದು, ಈ ಕೂಡಲೇ ಅಂದರೆ ನಾಳೆಯಿಂದ ಅಲ್ಲಿಗೆ ಬಸ್ ಸಂಚಾರವನ್ನು ವಿಸ್ತರಿಸಲು ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಧಿಕಾರಿ ಮಮತ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ದೂಡ ಆಯುಕ್ತ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


