Connect with us

ದಿನದ ಸುದ್ದಿ

ಜನಸ್ಪಂದನ ಸಭೆ ದೂರು ನೀಡುವ ವೇದಿಕೆಯಾಗಬಾರದು : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಸರ್ಕಾರದ ಸೌಲಭ್ಯ ಪಡೆಯಲು ಸಾರ್ವಜನಿಕರು ಎದುರಿಸುವ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವುದು ಸೇರಿದಂತೆ ಜನರ ಸಮಸ್ಯೆಗಳನ್ನು, ಜಿಲ್ಲಾ ಮಟ್ಟದಲ್ಲಿ ನಿವಾರಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಜನಸ್ಪಂದನ ಸಭೆ, ಅಧಿಕಾರಿಗಳ ಹಾಗೂ ವ್ಯವಸ್ಥೆ ವಿರುದ್ಧ ದೂರುಗಳನ್ನು ನೀಡುವ ವೇದಿಕೆಯಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸರ್ಕಾರಿ ಸೌಲಭ್ಯ ಪಡೆಯಲು ಕಚೇರಿಗಳಿಗೆ ಅಲೆದಾಡಿ ನೋವು ಅನುಭವಿಸಿದವರು, ಮೂಲಭೂತ ಸೌರ್ಕಯಗಳ ಕೊರತೆ ಎದುರಿಸುವವರು, ಹೀಗೆ ವಿವಿಧ ಸವಲತ್ತು ಪಡೆಯದೆ ಶೋಷಿತರಾದವರ ಧ್ವನಿಯಾಗಲು ಜನಸ್ಪಂದನ ಸಭೆ ನಡೆಸಲಾಗುತ್ತಿದೆ.

ಈ ಸಭೆಯ ಮೂಲಕ ಹಲವರ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನಸ್ಪಂದನ ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ದೂರು ಅರ್ಜಿ, ವೈಯಕ್ತಿಕ ಅಥವಾ ಇನ್ನಿತರೆ ದ್ವೇಷದ ಹಿನ್ನೆಲೆಯಲ್ಲಿ ಅಧಿಕಾರಿಗಳ ಹಾಗೂ ವ್ಯವಸ್ಥೆಯ ವಿರುದ್ಧ ದೂರು ನೀಡಿಕೆಯ ಅರ್ಜಿಗಳು ಹೆಚ್ಚು ಸಲ್ಲಿಕೆಯಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಳಕಳಿಯನ್ನಿಟ್ಟುಕೊಂಡು ನಡೆಸಲಾಗುತ್ತಿರುವ ಜನಸ್ಪಂದನ ಸಭೆಯನ್ನು ದೂರು ನೀಡುವ ವೇದಿಕೆಯನ್ನಾಗಿಸಿಕೊಂಡರೆ ಅದನ್ನು ಸಹಿಸುವುದಿಲ್ಲ ಎಂದರು. ಅಧಿಕಾರಿಗಳೂ ಕೂಡ ಸಾರ್ವಜನಿಕ ಕುಂದುಕೊರತೆಗಳು, ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಂಕುಚಿತ ಮನೋಭಾವದಿಂದ ನೋಡದೆ, ವಿಶಾಲ ಮನಸ್ಸಿನಿಂದ ನೋಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಕುಗ್ರಾಮಗಳಿಗೆ ತೆರಳಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ತಹಸಿಲ್ದಾರರು ಕೂಡ ಆಯಾ ತಾಲ್ಲೂಕು ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈಗಾಗಲೆ ಎರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದು, ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ. ಕೋವಿಡ್ ಸೋಂಕು ಹರಡುವ ಭೀತಿ ಇದ್ದು, ಸದ್ಯ ದಾವಣಗೆರೆ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆದರೂ ಸಾರ್ವಜನಿಕರು ಮೈಮರೆಯುವ ಹಾಗಿಲ್ಲ, ತಪ್ಪದೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದರು.

ದಾವಣಗೆರೆಯಲ್ಲಿ ಜಯದೇವ ಹೃದ್ರೋಗ ಉಪಕೇಂದ್ರವನ್ನು ಪ್ರಸಕ್ತ ಬಜೆಟ್‍ನಲ್ಲಿ ಸರ್ಕಾರ ಮಂಜೂರು ಮಾಡಿದ್ದು, ಇದಕ್ಕಾಗಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಕನಿಷ್ಟ 2 ಎಕರೆ ಭೂಮಿಯ ಅಗತ್ಯವಿದೆ, ನಿವೇಶನ ಗುರುತಿಸಿ, ಮಂಜೂರು ಮಾಡುವಂತೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ದಾವಣಗೆರೆ ನಗರ ವ್ಯಾಪ್ತಿಯಲ್ಲಿ 2 ಎಕರೆಯಷ್ಟು ವಿಸ್ತಾರದ ಭೂಮಿ ದೊರೆಯುವುದು ಕಷ್ಟ, ಹೀಗಾಗಿ ನಗರಕ್ಕೆ ಸಮೀಪದಲ್ಲಿ ಭೂಮಿ ಗುರುತಿಸಿ, ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ಹೆಡ್‍ಕಾನ್ಸ್‍ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಪತಿ ಅಪಘಾತಕ್ಕೊಳಗಾಗಿ ಕೋಮಾ ಸ್ಥಿತಿಯಲ್ಲಿದ್ದಾರೆ, ಹೀಗಾಗಿ ತಮ್ಮ ಕುಟುಂಬ ತೀವ್ರ ತೊಂದರೆಗೆ ಸಿಲುಕಿದೆ, ಆರ್ಥಿಕ ಹಾಗೂ ಚಿಕಿತ್ಸಾ ನೆರವು ಒದಗಿಸುವಂತೆ ಮಹಿಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸದರು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.

ಬೀದಿಬೀದಿಗಳಲ್ಲಿ ತಿರುಗಾಟ ನಡೆಸಿ ಮಸಾಲೆ ವ್ಯಾಪಾರ ಮಾಡುವ ದಾವಣಗೆರೆಯ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಕೂಡ ವ್ಯಾಪಾರ ಮಾಡಲು ಸಿದ್ಧವಿದ್ದು, ಅಗತ್ಯ ಸಾಲ ಸೌಲಭ್ಯ ಒದಗಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ದಂಪತಿಗಳಿಬ್ಬರಿಗೂ ವ್ಯಾಪಾರ ಚಟುವಟಿಕೆ ನಡೆಸಲು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಒಂದು ವಾರದ ಒಳಗಾಗಿ ಆರ್ಥಿಕ ಸೌಲಭ್ಯ ಒದಗಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತರು ಹಾಗೂ ಲೀಡ್‍ಬ್ಯಾಂಕ್ ವ್ಯವಸ್ಥಾಪಕರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ದಾವಣಗೆರೆ ನಗರದ ವೃದ್ಧ ಬಸಪ್ಪ ಎಂಬುವವರು ತಮಗೆ ವಾಸಿಸಲು ಮನೆಯಿಲ್ಲ, ವಸತಿ ಸೌಲಭ್ಯ ನೀಡುವಂತೆ ಈ ಹಿಂದೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ, ಮನೆ ಮಂಜೂರು ಆಗಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸದ್ಯ ನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುತ್ತಿಲ್ಲ, ಮನೆಗಳನ್ನು ನಿರ್ಮಿಸುವ ಸಲುವಾಗಿ ನಿವೇಶನ ಗುರುತಿಸುವ ಕಾರ್ಯ ನಡೆಯುತ್ತಿದೆ. ಬರುವ ದಿನಗಳಲ್ಲಿ ತಮಗೆ ಆದ್ಯತೆ ಮೇರೆಗೆ ಮನೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಅವರು, ಅರ್ಜಿ ಸಲ್ಲಿಸಿ ಗ್ರಾಮವೊಂದರಲ್ಲಿ ನೀರಿನ ಓವರ್‍ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಯಾರೂ ಸ್ಥಳಾವಕಾಶ ನೀಡದಿದ್ದಾಗ ಆ ಗ್ರಾಮದ ಗಂಗೀಬಾಯಿ ಎಂಬುವವರ ಮನವೊಲಿಸಿ, ಅವರಿಗೆ ಬೋರ್‍ವೆಲ್ ಕೊರೆಯಿಸಿಕೊಡುವ ಭರವಸೆ ನೀಡಿ, ಅವರಿಗೆ ಸಂಬಂಧಿಸಿದ ಸ್ಥಳದಲ್ಲಿ ತಾವು ಶಾಸಕರಾಗಿದ್ದಾಗ ಓವರ್‍ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಆದರೆ ಇದುವರೆಗೂ ಅವರಿಗೆ ಬೋರ್‍ವೆಲ್ ಕೊರೆಯಿಸಿಕೊಟ್ಟಿಲ್ಲ. ಇದಕ್ಕೆ ರಾಜಕೀಯ ಕಾರಣಗಳಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ನಿಗಮದ ಅಧಿಕಾರಿಗಳು ಪ್ರತಿಕ್ರಿಯಿಸಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರು, ರದ್ದುಪಡಿಸಿ ಆದೇಶ ನೀಡಿದ್ದಾರೆ ಎಂದು ಆದೇಶದ ಪ್ರತಿಯನ್ನು ಸಲ್ಲಿಸಿದರು.

ಗುತ್ತಿಗೆ ಆಧಾರದಲ್ಲಿ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ತಮ್ಮನ್ನು 06 ತಿಂಗಳ ಅವಧಿಗೆ ನೇಮಿಸಲಾಗಿತ್ತು. ಆದರೆ ಕೇವಲ ಎರಡು ತಿಂಗಳ ಒಳಗಾಗಿಯೇ ತಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆ, ತಮ್ಮನ್ನು ಸೇವೆಯಲ್ಲಿ ಮುಂದುವರಿಯಲು ಅನುವು ಮಾಡಿಕೊಡಬೇಕು ಎಂದು ಮೂವರು ಮಹಿಳಾ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನೆರವು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

ದಿನದ ಸುದ್ದಿ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

Published

on

ಕರ್ನಾಟಕದ ವೈಟ್‌ಫೀಲ್ಡ್-ಬಂಗಾರಪೇಟೆ, ಹೊಸೂರು-ಓಮಲೂರು ಮಾರ್ಗ ಸೇರಿ 9 ರಾಜ್ಯಗಳ 1200 ಕಿ.ಮೀ ರೈಲು ಜಾಲ ವಿಸ್ತರಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.

http://Visit : www.suddidina.com

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.

ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.

3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.

4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.

ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.

ಕರ್ನಾಟಕಕ್ಕೆ ಏನು ಲಾಭ?

ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.

ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.

ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Continue Reading

ದಿನದ ಸುದ್ದಿ

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

Published

on

ಸೆ.10 ರಂದು ವಿಧಾನಸೌಧದಲ್ಲಿ ಶತದಿನೋತ್ಸವ ಸಮಾರಂಭ; ಮಾಜಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ, ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 

ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:

ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

http://Visit : www.suddidina.com

ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ

ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.

100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Continue Reading

Trending