ದಿನದ ಸುದ್ದಿ
ಕೊಪ್ಪಳ | ಫೆ. 06 ಮತ್ತು 07 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
ಸುದ್ದಿದಿನ, ಕೊಪ್ಪಳ : ಫೆಬ್ರುವರಿ. 06 ಮತ್ತು 07 ರಂದು ಕೊಪ್ಪಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳವು ನಿರುದ್ಯೋಗಿಗಳಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗಕ್ಕೆ ಉತ್ತಮ ಅವಕಾಶ ಇದಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳ ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳನ್ನು ಒಂದೆಡೆ ತರುವ ಮೂಲಕ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಸ್ಥಾಪಿತಗೊಂಡಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರ, ಇವರುಗಳ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಫೆ. 06 ಮತ್ತು 07 ರಂದು ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳು ಅವರು ಹೊಂದಿರುವ ವಿದ್ಯಾರ್ಹತೆಗೆ ಅನುಗುಣವಾಗಿ ಉತ್ತಮ ಉದ್ಯೋಗವಕಾಶ ಪಡೆಯಲು ಉದ್ಯೋಗಾಕಾಂಕ್ಷಿಗಳು ಮತ್ತು ನಿಯೋಜಕರನ್ನು ಒಂದೇ ವೇದಿಕೆಯಲ್ಲಿ ತರಲು ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ 18 ರಿಂದ 35 ವರ್ಷದ ವಯೋಮಿತಿಯಲ್ಲಿರುವ ಅವಿದ್ಯಾವಂತರು ಮತ್ತು ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮೋ, ವಿವಿಧ ಪದವಿ, ಎಂ.ಬಿ.ಎ., ಎಂ.ಟೆಕ್., ವಿವಿಧ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪುರುಷ ಮತ್ತು ಮಹಿಳಾ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದಾಗಿದೆ.
ಸುಮಾರು 2500 ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ಗುರಿಯನ್ನು ಹೊಂದಲಾಗಿದೆ. ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತವಿರುವ ಉದ್ಯೋಗಾಕಾಂಕ್ಷಿಗಳಿಗೆ ಈಗಾಗಲೇ ಕೊಪ್ಪಳ ಜಿಲ್ಲಾಡಳಿತದಿಂದ ಅನಾವರಣಗೊಳಿಸಲಾಗಿರುವ ಜಾಲತಾಣ https://koppal.nic.in/ ನಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ದಿನಾಂಕದಂದು ಸ್ಥಳದಲ್ಲಿಯೇ ನೋಂದಾವಣೆ ಮಾಡಿಕೊಳ್ಳಲು 10 ಕೌಂಟರಗಳನ್ನು ತೆರೆಯಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಸ್ಥಳೀಯ ಹಾಗೂ ಹೊರ ಜಿಲ್ಲೆಯ ಸುಮಾರು 40 ವಿವಿಧ ಕಂಪನಿಗಳು/ ಉದ್ಯೋಗದಾತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಸಾರಿಗೆ, ಆರೋಗ್ಯ, ಬಿ.ಪಿ.ಓ., ಐ.ಟಿ. ತಂತ್ರಜ್ಞಾನ, ಮಾರುಕಟ್ಟೆ, ನಿರ್ಮಾಣ ಕ್ಷೇತ್ರ, ಕೈಗಾರಿಕೆ ವಲಯದ ಕಂಪನಿಗಳು ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಮುಖ್ಯವಾಗಿ ಬಾರಿ ವಾಹನ ಚಾಲಕರು, ಲಘು ವಾಹನ ಚಾಲಕರು, ಎಲೆಕ್ಟ್ರಿಶಿಯನ್, ಎಲೆಕ್ಟ್ರಿಶಿಯನ್ ಹೆಲ್ಪರ್ಸ್, ಸ್ಟೋರ್ ಕೀಪರ್, ಕಂಪ್ಯೂಟರ್ ಆಪರೇಟರ್/ ಡಾಡಾ ಎಂಟ್ರಿ ಆಪರೇಟರ್, ಕಛೇರಿ ಸಹಾಯಕರು/ ಪರಿಚಾರಕರು, ಸೆಕ್ಯೂರೆಟಿ ಗಾಡ್ರ್ಸ, ಹೊಲಿಗೆ ಯಂತ್ರ ನಿರ್ವಾಹಕರು, ಪ್ಲಂಬರ್ಸ್, ಲೆಕ್ಕಿಗರು, ಪ್ಯಾರಮೆಡಿಕಲ್, ನಿರ್ಮಾಣಕ್ಷೇತ್ರ. ಕೈಗಾರಿಕೆ ವಲಯದಲ್ಲಿ ಹಾಗೂ ಮಾರುಕಟ್ಟೆ ವಲಯದಲ್ಲಿ ಕಾರ್ಯನಿರ್ವಹಿಸಲು ಉದ್ಯೋಗಾಕಾಂಕ್ಷಿಗಳ ಅವಶ್ಯಕತೆ ಇರುತ್ತದೆ.
ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಿಂದ ಉದ್ಯೋಗ ಮೇಳ ನಡೆಯುವ ಜಿಲ್ಲಾ ಕ್ರೀಡಾಂಗಣಕ್ಕೆ ನಗರ ಸಾರಿಗೆ ವಾಹನ (ಸಿಟಿ ಬಸ್ಸಗಳ) ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಉದ್ಯೋಗಾಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ಆಹಾರ ಪೂರೈಕೆ ಯಾಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನೀಡಿರುವ ಸಂಚಾರಿ ಕ್ಯಾಂಟಿನ್ ವಾಹನದಲ್ಲಿ ಈ ವ್ಯವಸ್ಥೆ ಹಾಗೂ ಕಾರ್ಯಕ್ರಮದ ಸ್ಥಳದಲ್ಲಿ ಇತರೆ ಹೋಟೆಲ್‍ಗಳು ಕಡಿಮೆ ದರದಲ್ಲಿ ಆಹಾರ ಒದಗಿಸುವ ಕುರಿತು ಕ್ರೀಡಾಂಗಣದ ಹೊರಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಜಿಲ್ಲಾಡಳಿತದಿಂದ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯ ಅಗತ್ಯ : ಡಾ. ವೆಂಕಟೇಶ್ ಬಾಬು
ಸುದ್ದಿದಿನ,ಚನ್ನಗಿರಿ:ವಿದ್ಯಾರ್ಥಿಗಳು ಇಂದಿನ ಯುಗಕ್ಕೆ ಅಗತ್ಯವಿರುವ ಎಲ್ಲಾ ಜೀವನ ಹಾಗೂ ತಂತ್ರಜ್ಞಾನ, ವಿಶೇಷವಾಗಿ ಡಿಜಿಟಲ್ ಕೌಶಲ್ಯಗಳನ್ನು ಅರಿತಿರಬೇಕು ಎಂದು ಪ್ರಾಧ್ಯಾಪಕ ಡಾ. ವೆಂಕಟೇಶ್ ಬಾಬು ಅವರು ತಿಳಿಸಿದರು.
ಬುಧವಾರ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಕೋಶದ ಪ್ರೇರಣಾ ವಿಭಾಗದ ವತಿಯಿಂದ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಂಪ್ಯೂಟರ್ ಆಧರಿತ ಉದ್ಯೋಗದ ಕೌಶಲಗಳನ್ನು ಹೊಂದಿದ್ದರೆ ಉದ್ಯೋಗಗಳು ನಮ್ಮನ್ನ ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.
ಕಾಲೇಜಿನ ಅಲ್ಮನಿ ವಿದ್ಯಾರ್ಥಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀ ಮಧು ಜಿ.ಟಿ ರವರು ತಾನು ಈ ಕಾಲೇಜಿನಲ್ಲಿ ಕಲಿಯುವಾಗ ಇಲ್ಲದಿರುವ ಎಲ್ಲಾ ಸೌಲಭ್ಯಗಳು/ ಅವಕಾಶಗಳು ಈಗ ದೊರೆಯುತ್ತಿವೆ ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಅಮೃತೇಶ್ವರ ಬಿ.ಜಿ ಅವರು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಡಿಜಿಟಲ್ ಸ್ಕಿಲ್ ಹಾಗೂ ಇಂಗ್ಲಿಷ್ ಸಂವಹನ ಜ್ಞಾನದ ಅವಶ್ಯಕತೆ ಇದ್ದು ಪದವಿಯೊಂದಿಗೆ ಡಿಜಿಟಲ್ ಕೌಶಲ್ಯಗಳ ಅರಿ ವನ್ನು ವಿದ್ಯಾರ್ಥಿಗಳಿಗೆ ಕಾಲೇಜಿನ ಉದ್ಯೋಗ ಕೋಶ ವೇದಿಕೆಯು ಉಚಿತವಾಗಿ ನೀಡುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಕರೆ ನೀಡಿದರು.
ಡಾ. ಮಂಜುಳಾ ಟಿ ಪ್ಲೇಸ್ಮೆಂಟ್ ಸೆಲ್ ಸಂಚಾಲಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವರ್ತಮಾನದ ಜಗತ್ತಿಗೆ ಡಿಜಿಟಲ್ ಕೌಶಲ ವಿಶೇಷವಾಗಿ ವಿದ್ಯಾರ್ಥಿ ಗಳು ಅತಿ ತುರ್ತಾಗಿ ಕಲಿಯುವ ಅವಶ್ಯಕತೆ ಇದೆ ಎಂದರು.
ಬಿ ಸಿ ಎ/ ಸಿ ಎಸ್ ವಿಭಾಗದ ಮುಖ್ಯಸ್ಥರು ಶ್ರೀಮುರುಳಿಧರವರು, ವಾಣಿಜ್ಯಶಾಸ್ತ್ರ ವಿಭಾಗದ ಲಕ್ಷ್ಮಿ ರಂಗನಾಥ್, ಐಕ್ಯೂ ಏ ಸಿ ಸಂಚಾಲಕರಾದ ಶ್ರೀವಿಜಯಕುಮಾರ್ ಎನ್ ಸಿ ಡಾ. ಪ್ರದೀಪ್ ಕುಮಾರ್. ಡಾ. ದಾಕ್ಷಾಯಿಣಿ ಡೋಂಗ್ರೆ ಹಾಗೂ ಬೋಧಕ/ ಬೋಧಕೇತ ತರರು ಹಾಜರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ವಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉದ್ಘಾಟಿಸಲಾಯಿತು ಇಂದಿನಿಂದ ಸತತ 15 ದಿನಗಳು ಮದ್ಯಾಹ್ನ 2:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಿಜಿಟಲ್ ಸ್ಕಿಲ ಬಗ್ಗೆ ಪ್ರಾಯೋಗಿಕ ತರಗತಿಗಳು ಮತ್ತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಪಿಜಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಖರೀದಿಸಲು ನೋಂದಣಿ ಆರಂಭ
ಸುದ್ದಿದಿನ,ದಾವಣಗೆರೆ:ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್ ರೂ.2300 ಹಾಗೂ ಎ ಗ್ರೇಡ್ ಪ್ರತಿ ಕ್ವಿಂಟಾಲ್‍ಗೆ ರೂ.2320 ರಂತೆ ಹಾಗೂ ಪ್ರತಿ ಕ್ವಿಂಟಾಲ್‍ಗೆ ರಾಗಿಗೆ ರೂ.4290 ರಂತೆ ಖರೀದಿಸಲು ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
ನೋಂದಣಿ ಕೇಂದ್ರಗಳು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ದಾವಣಗೆರೆ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹೊನ್ನಾಳ್ಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಜಗಳೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹರಿಹರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಚನ್ನಗಿರಿ ಇಲ್ಲಿ ಕೃಷಿ ಇಲಾಖೆಯವರು ಸಿದ್ಧಪಡಿಸಿದ ಫ್ರೂಟ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲು ತಿಳಿಸಿದೆ. ನೊಂದಣಿ ಆರಂಭವಾಗಿದ್ದು 2025 ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಖರೀದಿಸಲಾಗುವುದು.
ರೈತರು ಕೃಷಿ ಇಲಾಖೆ ನೀಡಿರುವ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಫೂಟ್ ನೊಂದಣಿ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ಸಾಧನದ ಮುಖಾಂತರ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಫೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ನೇರವಾಗಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಮತ್ತು ಎನ್‍ಪಿಸಿಎಲ್ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಖರೀದಿ ಕೇಂದ್ರಕ್ಕೆ ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ನೀಡಬೇಕು.
ರೈತರು ತಾವು ನೀಡುವ ಎಲ್ಲಾ ದಾಖಲಾತಿಗಳಲ್ಲಿಯೂ ಒಂದೇ ಹೆಸರು ನಮೂದಾಗಿರತಕ್ಕದ್ದು, ಮತ್ತು ರಾಗಿ ತಂದು ಖರೀದಿ ಕೇಂದ್ರದಲ್ಲಿ ರಾಶಿ ಹಾಕಬೇಕು. ರಾಗಿ ಗುಣಮಟ್ಟ ಪರಿಶೀಲಿಸಲು ನೇಮಿಸಲ್ಪಟ್ಟ ಗ್ರೇಡರ್ಸ್ ದಾಸ್ತಾನಿನ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ಧೃಢಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟ ಸರಿಯಿಲ್ಲವೆಂದು ದೃಢಪಡಿಸಿದ್ದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು.
ಪ್ರತಿ ರೈತರಿಂದ ಪ್ರತಿ ಎಕರೆಗೆ ರಾಗಿ 10.00 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಮತ್ತು ರೈತರಿಂದ ಭತ್ತವನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ತಹಶೀಲ್ದಾರರು, ಉಪವಿಭಾಗಾಧಿಕಾರಿ, ಜಂಟಿ ನಿರ್ದೇಶಕರು (ಆಹಾರ), ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು. ಅಥವಾ ದೂರವಾಣಿ ಸಂಖ್ಯೆ -08192-296770 ಗೆ ಕರೆಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ ; ನಾಳೆ ಸರ್ಕಾರಿ ರಜೆ ಘೋಷಣೆ
ಸುದ್ದಿದಿನಡೆಸ್ಕ್:ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ. ನಾಳೆ ಅವರ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಕರ್ನಾಟಕ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ನಸುಕಿನ ಜಾವ 2:30ರ ಸುಮಾರಿಗೆ ನಿಧನರಾಗಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಾಳೆ ಬೆಳಗಾವಿ ಸೌಧದಲ್ಲಿ ನಡೆಯ ಬೇಕಾಗಿದ್ದ ಕಲಾಪಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ವಯೋಸಹಜ ಅನಾರೋಗ್ಯದ ಕಾರಣ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದರು. ಆದಾಗ್ಯೂ ನಂತರ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.
ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಮೃತರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2009 ರಿಂದ 2012ರ ಅಕ್ಟೋಬರ್ 28ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್. ಎಂ. ಕೃಷ್ಣ ಅವರು, 2004ರಿಂದ 2008ರವರೆಗೆ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
1999ರ ಅಕ್ಟೋಬರ್ 11ರಿಂದ 2004ರ ಮೇ 28ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್. ಕೃಷ್ಣ ಅವರು, ಉಪಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243