ದಿನದ ಸುದ್ದಿ
ಯಜಮಾನಿಕೆ ಮತ್ತು ಯಜಮಾನರ ಅಧಿಪತ್ಯ
- ಪ್ರತಾಪ್ ಭಾನು ಮೆಹ್ತಾ ( ಇಂಡಿಯನ್ ಎಕ್ಸ್ ಪ್ರೆಸ್ 18-11-20), ಅನುವಾದ : ನಾ ದಿವಾಕರ
ರಾಜ್ಯಶಾಸ್ತ್ರದ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಬರ್ಬರತೆ ಎಂಬ ಪದವನ್ನು ಬಳಸಲಾಗುತ್ತದೆ. ಈ ಪ್ರಜಾಪ್ರಭುತ್ವದ ಬರ್ಬರತೆಯನ್ನು ನ್ಯಾಯಿಕ ಬರ್ಬರತೆಯು ಕಾಪಾಡಿಕೊಂಡುಬರುತ್ತದೆ. ಬರ್ಬರತೆಗೆ ಹಲವಾರು ಆಯಾಮಗಳಿವೆ. ಮೊದಲನೆಯದಾಗಿ ನ್ಯಾಯಾಂಗದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ, ತೀರ್ಪು ನೀಡುವಾಗ ನಿರಂಕುಶತೆ ಮೇಲುಗೈ ಸಾಧಿಸುತ್ತದೆ.
ಕಾನೂನುಗಳನ್ನು ಅನ್ವಯಿಸುವ ಸಂದರ್ಭದಲ್ಲಿ ನ್ಯಾಯಾಧೀಶರ ವ್ಯಕ್ತಿಗತ ನಿಲುವುಗಳನ್ನು ಅನುಸರಿಸಲಾಗುತ್ತದೆ. ಹಾಗಾಗಿ ಸಾಂವಿಧಾನಿಕ ನಿಯಮಗಳು, ಕಾಯ್ದೆ ಕಾನೂನುಗಳು ಅರ್ಥಹೀನವಾಗಿಬಿಡುತ್ತವೆ. ಕಾನೂನು ಎನ್ನುವುದು ದಬ್ಬಾಳಿಕೆಯ ಅಸ್ತ್ರವಾಗುತ್ತದೆ. ಕಾನೂನು ದಬ್ಬಾಳಿಕೆಗೆ ಕನಿಷ್ಟಪಕ್ಷ ಸಹಾಯಕವಾಗಿರುತ್ತದೆ.
ಹೀಗಾದಾಗ ನಾಗರಿಕ ಹಕ್ಕುಗಳ ಮತ್ತು ಪ್ರತಿರೋಧದ ದನಿಗಳ ರಕ್ಷಣೆ ದುರ್ಬಲವಾಗುತ್ತದೆ ಮತ್ತು ಸಾಂವಿಧಾನಿಕ ನಿಯಮಗಳ ಚೌಕಟ್ಟಿನಲ್ಲಿ ಪ್ರಭುತ್ವದ ಶಕ್ತಿಗೆ ಮನ್ನಣೆ ನೀಡುವ ಸಾಧ್ಯತೆಗಳು ಹೆಚ್ಚಾಗುತ್ತವೆ. ನ್ಯಾಯಾಲಯಗಳೂ ದೈವೀಕ ದೊರೆಯ ಹಾಗೆ ತನ್ನ ಅಸ್ತಿತ್ವ ಮತ್ತು ಗೌರವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ನ್ಯಾಯಾಲಯವನ್ನು ಗಂಭೀರವಾಗಿ ಟೀಕಿಸುವುದಾಗಲೀ, ಅಣಕಿಸುವುದಾಗಲೀ ಸಾಧ್ಯವಾಗುವುದಿಲ್ಲ. ನ್ಯಾಯಾಲಯದ ಘನತೆ ಗೌರವದ ರಕ್ಷಣೆಗೆ ಅದರ ವಿಶ್ವಾಸಾರ್ಹತೆಗಿಂತಲೂ ಅವಜ್ಞೆಯ ಶಕ್ತಿ ಮುಖ್ಯವಾಗುತ್ತದೆ.
ಅಂತಿಮವಾಗಿ ಇನ್ನೂ ಗಂಭೀರ ಸ್ವರೂಪದ ಬರ್ಬರತೆ ಇಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಭುತ್ವ ತನ್ನದೇ ಪ್ರಜೆಗಳನ್ನು ಜನದ್ರೋಹಿಗಳೆಂದು ಪರಿಗಣಿಸಿದಾಗ ಇದು ವ್ಯಕ್ತವಾಗುತ್ತದೆ. ರಾಜಕಾರಣದ ಧ್ಯೇಯ ಸಮಸ್ತ ಜನತೆಗೂ ಸಮಾನ ನ್ಯಾಯ ಒದಗಿಸುವುದು ಆಗಿರುವುದಿಲ್ಲ. ರಾಜಕಾರಣವನ್ನು ಶೋಷಕರು ಮತ್ತು ಶೋಷಿತರ ನಡುವಿನ ಸಂಘರ್ಷದಂತೆ ಪರಿವರ್ತಿಸಲಾಗುತ್ತದೆ. ಪ್ರಭುತ್ವ ಸದಾ ವಿಜಯಿಯಾಗುವಂತೆ ಎಚ್ಚರವಹಿಸಲಾಗುತ್ತದೆ.
ಭಾರತದ ಸರ್ವೋಚ್ಛ ನ್ಯಾಯಾಲಯ ಎಂದೂ ಪರಿಪೂರ್ಣತೆಯನ್ನು ಹೊಂದಿರಲಿಲ್ಲ. ಈ ಹಿಂದೆಯೂ ಸಹ ಕೆಲವು ಕಪ್ಪು ಚುಕ್ಕೆಗಳನ್ನು ಗುರುತಿಸಬಹುದಿತ್ತು. ಆದರೆ ಮೇಲೆ ಉಲ್ಲೇಖಿಸಲಾದ ಅಂಶಗಳ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ನ್ಯಾಯಿಕ ಬರ್ಬರತೆಯತ್ತ ಜಾರುತ್ತಿರುವ ಸೂಚನೆಗಳು ಕಾಣಿಸಿಕೊಳ್ಳುತ್ತಿದೆ. ಈ ವಿದ್ಯಮಾನ ಕೇವಲ ವ್ಯಕ್ತಿಗತವಾಗಿ ಒಬ್ಬ ನ್ಯಾಯಾಧೀಶರಿಗೆ ಅಥವಾ ಒಂದು ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಇದು ಸಾಂಸ್ಥಿಕವಾಗಿ ವ್ಯವಸ್ಥೆಯ ವಿದ್ಯಮಾನವಾಗಿದೆ. ಜಾಗತಿಕ ಮಟ್ಟದಲ್ಲೂ ಈ ಪ್ರವೃತ್ತಿಯನ್ನು ಗುರುತಿಸಬಹುದು.
ಟರ್ಕಿ, ಪೋಲೆಂಡ್ ಮತ್ತು ಹಂಗೆರಿಯಲ್ಲಿ ಇದರ ಛಾಯೆಯನ್ನು ಕಾಣಬಹುದು. ಈ ದೇಶಗಳಲ್ಲಿ ನ್ಯಾಯಾಂಗವು ಪ್ರಜಾತಾಂತ್ರಿಕ ಬರ್ಬರತೆಯನ್ನು ಪೋಷಿಸುತ್ತಿದೆ. ನಿಖರವಾಗಿ ಹೇಳುವುದಾದರೆ ಎಲ್ಲ ನ್ಯಾಯಾಧೀಶರೂ ಇದಕ್ಕೆ ಬಲಿಯಾಗುವುದಿಲ್ಲ. ವ್ಯವಸ್ಥೆಯಲ್ಲಿ ಇಂದಿಗೂ ಸಹ ಪ್ರತಿರೋಧದ ದನಿಗಳನ್ನು ಗುರುತಿಸಬಹುದು. ಸ್ವಾತಂತ್ರ್ಯದ ಪರ ಇರುವ ತಾತ್ವಿಕ ನೀತಿಗಳನ್ನು ಘೋಷಿಸುವ ಕೆಲವು ಪ್ರಸಂಗಗಳನ್ನೂ ಕಾಣಲು ಸಾಧ್ಯ.
ಅರ್ಹ ಅರ್ಜಿದಾರರಿಗೆ ಸಮಾಧಾನ ತರುವಂತಹ ತೀರ್ಪುಗಳನ್ನು ಅಪರೂಪವಾಗಿಯಾದರೂ ನೋಡಬಹುದು. ಹಾಗಾಗಿ ನಿತ್ಯ ಕಲಾಪಗಳಲ್ಲಿ ನ್ಯಾಯಾಂಗದ ಕಾರ್ಯವೈಖರಿಯಲ್ಲಿ ಏನೇ ದೋಷ ಗುರುತಿಸಬಹುದಾದರೂ ಸಂಸ್ಥೆಯ ಗೌರವ ಮತ್ತು ಘನತೆಯನ್ನು ಉಳಿಸುವ ಕೆಲವು ಪ್ರಸಂಗಗಳನ್ನು ಕಾಣಲೂ ಸಾಧ್ಯ.
ನ್ಯಾಯಿಕ ಬರ್ಬರತೆಯ ಲಕ್ಷಣಗಳೇನು ? ಪ್ರಜಾಪ್ರಭುತ್ವದ ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ಉಳಿಸುವಂತಹ ಪ್ರಕರಣಗಳಲ್ಲಿ ಸಕಾಲದಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿರುವುದು. ಇಲ್ಲಿ ಸ್ಪಷ್ಟ ನಿದರ್ಶನ ಎಂದರೆ ಚುನಾವಣಾ ಬಾಂಡ್ ಪ್ರಕರಣ.
ಸರ್ವೋಚ್ಛ ನ್ಯಾಯಾಲಯ ಮತ್ತು ಹಲವು ಉಚ್ಚ ನ್ಯಾಯಾಲಯಗಳು ಜಾಮೀನು ನೀಡುವ ಅಥವಾ ನಿರಾಕರಿಸುವ ಸಂದರ್ಭಗಳಲ್ಲಿ ನಿರಂಕುಶತೆಯ ಪರಾಕಾಷ್ಟೆ ತಲುಪಿರುವುದನ್ನು ಗಮನಿಸಬಹುದು. ಇಲ್ಲಿ ಒಂದು ಅಂಶವನ್ನು ಸ್ಪಷ್ಟವಾಗಿ ಹೇಳಬೇಕಾಗುತ್ತದೆ.
ಯಾವುದೇ ವಿಚಾರಣಾಧೀನ ಕೈದಿಗೆ ತಿಳಿದಿರುವಂತೆ, ಭಾರತದ ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸುವಾಗ ಅದೃಷ್ಟವೂ ಮುಖ್ಯವಾಗಿರುತ್ತದೆ. ಪ್ರಸ್ತುತ ಸಂದರ್ಭದ ವಿಶಿಷ್ಟತೆಯನ್ನು ನಾವು ತಪ್ಪಾಗಿ ಅರ್ಥೈಸಬೇಕಿಲ್ಲ. ಸಾಮಾಜಿಕ ಕಾರ್ಯಕರ್ತರಾದ, ದೇಶಪ್ರೇಮದ ಸಾಕಾರ ಎನ್ನಬಹುದಾದ ಸುಧಾ ಭರದ್ವಾಜ್, ಚಿಂತಕರಾದ ಆನಂದ್ ತೇಲ್ತುಂಬ್ಡೆ ಮುಂತಾದವರಿಗೆ ಜಾಮೀನು ನಿರಾಕರಿಸಲಾಗುತ್ತದೆ.
ಉಮರ್ ಖಾಲಿದ್ ಗೆ ತನ್ನ ಜೈಲು ಕೋಣೆಯಿಂದ ಹೊರಬರಲು ಕೊಂಚ ಅವಕಾಶ ನೀಡಿದ್ದುದು ಸಮಾಧಾನ ತರುವಂತಹುದು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಿ ಜೈಲುವಾಸ ಅನುಭವಿಸುತ್ತಿರುವ ಅನೇಕ ವಿದ್ಯಾರ್ಥಿ ಯುವಜನರು ಇಷ್ಟು ಅದೃಷ್ಟ ಮಾಡಿಲ್ಲ. ಪಾರ್ಕಿನ್ ಸನ್ ಖಾಯಿಲೆಯಿಂದ ಬಳಲುತ್ತಿರುವ 80 ವರ್ಷದ ಸಾಮಾಜಿಕ ಕಾರ್ಯಕರ್ತರಿಗೆ ಜಾಮೀನು ನಿರಾಕರಿಸಲಾಗುತ್ತದೆ.
ನ್ಯಾಯಾಲಯ ತನ್ನ ಇಚ್ಚೆಯನುಸಾರ ಇವರ ಅರ್ಜಿಯನ್ನು ವಿಚಾರಣೆಗೊಳಪಡಿಸುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ಕ್ರೌರ್ಯದ ಅನಾವರಣ ಆಗಬೇಕಿಲ್ಲ. ಹೇಬಿಯಸ್ ಕಾರ್ಪಸ್ ಮೂಲಕ ಪರಿಹಾರವನ್ನೂ ನೀಡಲಿಚ್ಚಿಸದೆ, ನೂರಾರು ಕಾಶ್ಮೀರಿಗಳನ್ನು ಬಂಧನದಲ್ಲಿರಿಸಲಾಗಿದೆ.
ಈ ಎಲ್ಲ ಪ್ರಕರಣಗಳು ಸಾಂಸ್ಥಿಕ ಅದಕ್ಷತೆಯಿಂದ ಉಂಟಾದ ನ್ಯಾಯ ವಂಚನೆಯ ಅಪರೂಪದ ಪ್ರಕರಣಗಳೆಂದು ಭಾವಿಸಲಾಗುವುದಿಲ್ಲ. ಪ್ರತಿಭಟನೆ, ಪ್ರತಿರೋಧ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ಪ್ರಭುತ್ವದ ಶತ್ರುಗಳು ಎನ್ನುವ ದೃಷ್ಟಿಕೋನದಿಂದಲೇ ನೋಡುವ ರಾಜಕೀಯ ನಿಲುವಿನ ನೇರ ಪರಿಣಾಮಗಳಾಗಿ ಇದನ್ನು ನಾವು ಪರಿಗಣಿಸಬೇಕಾಗುತ್ತದೆ.
ಈ ಪ್ರಜೆಗಳು ಕಾನೂನಿನ ದೃಷ್ಟಿಯಲ್ಲಿ ಸಮಾನ ಪ್ರಜೆಗಳಾಗಿ ಕಾಣುವುದಿಲ್ಲ. ಹಾಗಾಗಿ ಅನೇಕ ಪ್ರಕರಣಗಳಲ್ಲಿ ಇವರನ್ನು ಬಂಡುಕೋರರಂತೆ , ಯಾವುದೇ ಸಮರ್ಥನೆ ಇಲ್ಲದೆಯೇ, ಪರಿಗಣಿಸಲಾಗುತ್ತದೆ. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಈ ಆರೋಪವೊಂದೇ ಪ್ರಜಾಪ್ರಭುತ್ವದ ಬರ್ಬರತೆಗೆ ಸಮರ್ಥನೀಯ ಸಾಧನ ಎನಿಸುತ್ತದೆ. ಈ ಧೋರಣೆಗೆ ಈಗ ನ್ಯಾಯಿಕ ಸಮರ್ಥನೆ ದೊರೆಯುತ್ತಿದೆ. ಇದೇ ವಿದ್ಯಮಾನವನ್ನು ರಾಜ್ಯಗಳ ಮಟ್ಟದಲ್ಲಿ ವಿವಿಧ ರಾಜಕೀಯ ಪಕ್ಷಗಳ ವಿರುದ್ಧ ಅನುಸರಿಸುವ ಸಾಧ್ಯತೆಗಳಿವೆ.
ನಾಗರಿಕ ಸ್ವಾತಂತ್ರ್ಯದ ಚೌಕಟ್ಟಿನಲ್ಲಿ ಆಯ್ದ ಪ್ರಸಂಗಗಳಲ್ಲಿ ಅನ್ವಯಿಸಲಾಗುವ ನಿಯಮಗಳು ಕ್ರಮೇಣ ಪ್ರಭುತ್ವದ ಸೈದ್ಧಾಂತಿಕ ಚೌಕಟ್ಟಿನಲ್ಲಿ ಅಳವಡಿಸಲಾಗುತ್ತದೆ. ಒಂದಾದ ಮೇಲೊಂದರಂತೆ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸುತ್ತಿರುವುದನ್ನು ಗಮನಿಸಿದರೆ, ಕೋಮುವಾದಿ ದೃಷ್ಟಿಕೋನದ ಈ ವಂಚಕ ಬಲೆಯನ್ನು ಎಲ್ಲ ರಾಜ್ಯಗಳೂ ಅನುಸರಿಸುವ ಸಾಧ್ಯತೆಗಳಿವೆ.
ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಈ ಪ್ರಹಾರವನ್ನು ನ್ಯಾಯಾಲಯಗಳು ಹೇಗೆ ನ್ಯಾಯಬದ್ಧವಾಗಿಸುತ್ತವೆ ಎನ್ನುವುದನ್ನು ಗಮನಿಸುತ್ತಿರಿ. ದೇಶದ ಅತ್ಯುನ್ನತ ನ್ಯಾಯಾಲಯದ ದೌರ್ಬಲ್ಯಗಳನ್ನು ಸಾಂಸ್ಥಿಕ ಸುಧಾರಣೆಯ ಪರಿಭಾಷೆಯಲ್ಲಿ ಗುರುತಿಸುವ ಹಂತದಿಂದ ನಾವು ಬಹಳ ದೂರ ನಡೆದುಬಂದಿದ್ದೇವೆ. ಬದಲಾಗಿ ಪ್ರಜಾತಾಂತ್ರಿಕ ಬರ್ಬರತೆಯ ಪರಿಭಾಷೆಗೆ ನ್ಯಾಯಿಕ ಸ್ವರೂಪವನ್ನು ನೀಡಲಾಗುತ್ತಿದೆ.
ಅರ್ನಾಬ್ ಗೋಸ್ವಾಮಿಗೆ ಜಾಮೀನು ನೀಡಿದ ಸರ್ವೋಚ್ಚ ನ್ಯಾಯಾಲಯದ ಕ್ರಮ ಸರಿಯಾದದ್ದೇ. ಕೊನೆಗೂ ನ್ಯಾಯಾಲಯವು ಉತ್ತರಪ್ರದೇಶ ಸರ್ಕಾರಕ್ಕೆ, ಪತ್ರಕರ್ತರ ಬಂಧನದ ವಿಚಾರದಲ್ಲಿ ನೋಟಿಸ್ ಜಾರಿ ಮಾಡಿದೆ. ಆದರೆ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಮಧ್ಯ ಪ್ರವೇಶಿಸಿ, ಸರ್ವೋಚ್ಚ ನ್ಯಾಯಾಲಯವು ಸಂವಿಧಾನ ವಿಧಿ 32ರ ಬಳಕೆಯನ್ನು ಅನುಮೋದಿಸುವುದಿಲ್ಲ ಎಂದು ಹೇಳುವ ಮೂಲಕ ತಮಗೆ ತಿಳಿಯದೆಯೇ ರಹಸ್ಯವೊಂದನ್ನು ಹೊರಗೆಡಹಿದ್ದಾರೆ.
ಭಾರತದ ಸಂವಿಧಾನದಲ್ಲಿ ವಿಧಿ 32 ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಒಂದು ಪ್ರಬಲ ಅಸ್ತ್ರ. ತುರ್ತುಪರಿಸ್ಥಿತಿ ಘೋಷಿಸಿದಲ್ಲಿ ಮಾತ್ರವೇ ಇದನ್ನು ರದ್ದುಪಡಿಸಬಹುದು. ಒಂದು ರೀತಿಯಲ್ಲಿ ಈ ಪರಿಚ್ಚೇದದ ಬಳಕೆಯನ್ನು ಅನುಮೋದಿಸದೆ ಇರುವುದು ನಮ್ಮ ಕಾಲಘಟ್ಟದ ರೂಪಕದಂತೆ ಕಾಣುತ್ತದೆ. ಅಂದರೆ ನಾವು ತುರ್ತುಪರಿಸ್ಥಿತಿಯನ್ನು ಘೋಷಿಸಲೇ ಬೇಕಿಲ್ಲ, ತುರ್ತುಪರಿಸ್ಥಿತಿ ಘೋಷಣೆಯಾಗಿದೆ ಎನ್ನುವ ರೀತಿಯಲ್ಲೇ ನಮಗೆ ಬೇಕಾದಾಗ ವರ್ತಿಸಬಹುದು ಎನ್ನುವಂತಾಗಿದೆ. ಹಾಗಾಗಿ ವಿಧಿ 32ರ ಬಳಕೆಯನ್ನು ರದ್ದುಪಡಿಸದಿದ್ದರೂ ಅನುಮೋದಿಸುವುದಿಲ್ಲ ಎಂದು ಹೇಳಲಾಗಿದೆ.
ಇದರ ವಿರುದ್ಧ ಹೋರಾಟ ಸುಲಭವಲ್ಲ. ಪ್ರಜಾತಾಂತ್ರಿಕ ಬರ್ಬರತೆಯ ವಾತಾವರಣದಲ್ಲಿ ಪ್ರತಿಯೊಂದು ವಿಚಾರವನ್ನೂ ಪಕ್ಷಪಾತೀಯ ನೆಲೆಯಲ್ಲಿ ನೋಡಲಾಗುವುದೇ ಹೊರತು ತರ್ಕಬದ್ಧತೆಯಿಂದಲ್ಲ. ನ್ಯಾಯಾಂಗವು ಈ ಧೋರಣೆಯನ್ನು ಮೀರಿ ನಿಂತಿದೆ ಎಂದು ತೋರಿಸಿಕೊಳ್ಳಲೂ ವಿಫಲವಾಗಿರುವುದರಿಂದ ನ್ಯಾಯಾಂಗದ ನಿಷ್ಕರ್ಷೆಯೂ ಇದಕ್ಕೆ ಪೂರಕವಾಗಿಯೇ ಕಂಡುಬರುತ್ತಿದೆ.
ನ್ಯಾಯಿಕ ಅಪರಾಧಿಗಳನ್ನೂ ನಮ್ಮ ಮೂಗಿನ ನೇರಕ್ಕೆ ಅನುಗುಣವಾಗಿ ಪರಿಗಣಿಸುವ ಈ ಧೋರಣೆ ತೀವ್ರವಾಗಿರುವ ಸಂದರ್ಭದಲ್ಲಿ ಕಾನೂನು ಪಾಲನೆಯ ಬಗ್ಗೆ ಒಮ್ಮತಕ್ಕೆ ಬರುವುದು ಸುಲಭವೇನಲ್ಲ. ವಿಡಂಬನೆ ಎಂದರ, ಪ್ರತಿಯೊಂದು ವಿಚಾರವನ್ನೂ ನಿರ್ಷರ್ಷೆ ಮಾಡಲು ನ್ಯಾಯಾಂಗವೊಂದೇ ವೇದಿಕೆ ಎನ್ನುವ ದೃಷ್ಟಿಕೋನದಲ್ಲಿ ಬೆಳೆದುಬಂದಿರುವ ಕಾನೂನಾತ್ಮಕ ಕ್ರಿಯಾಶೀಲತೆಯ ಸಂಪ್ರದಾಯವೇ ಈ ರೀತಿಯ ನ್ಯಾಯಿಕ ಉನ್ಮತ್ತತೆಗೆ ಕಾರಣವಾಗಿದೆ. ಈ ಪ್ರವೃತ್ತಿ ಇನ್ನೂ ಮುಂದುವರೆಯಲಿದೆ.
ಉದಾಹರಣೆಗೆ, ಸೆಂಟ್ರಲ್ ವಿಸ್ಟಾ ಯೋಜನೆಯ ಬಗ್ಗೆ ( ನೂತನ ಸಂಸತ್ ಭವನ ನಿರ್ಮಾಣ ಯೋಜನೆ-ಅನು ) ನಾವು ನಮ್ಮದೇ ಆದ ನಿಲುವು ಹೊಂದಿರಬಹುದು. ಆದರೆ ಈ ವಿಚಾರಗಳಿಗೆ ನ್ಯಾಯಾಲಯಗಳು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿಲ್ಲ. ನ್ಯಾಯಾಲಯಗಳಿಂದ ಸಣ್ಣ ಪುಟ್ಟ ನೀತಿ ಸಂಹಿತೆಯ ವಿಚಾರಗಳಲ್ಲಿ ಜಯ ಗಳಿಸುವ ಸಂಭ್ರಮದಲ್ಲಿ ನಾವು ಬಹುಶಃ ಸಾಂವಿಧಾನಿಕ ತತ್ವಗಳ ವಿಚಾರದಲ್ಲಿ ನ್ಯಾಯಾಲಯಗಳ ಉಲ್ಲಂಘನೆಗಳಿಗೆ ಮಾನ್ಯತೆ ನೀಡುತ್ತಿದ್ದೇವೆ ಎನಿಸುತ್ತದೆ.
ನ್ಯಾಯವಾದಿಗಳ ಸಂಘದಲ್ಲಿ ಒಂದು ಸಂಸ್ಕೃತಿ ಇದೆ. ದುಷ್ಯಂತ ದವೆ, ಗೌತಮ್ ಭಾಟಿಯಾ, ಶ್ರೀರಾಂ ಪಂಚು ಮುಂತಾದವರು ನೇರವಾಗಿ ನ್ಯಾಯಾಂಗದ ಹುಳುಕುಗಳನ್ನು ಎತ್ತಿ ತೋರುವ ಆತ್ಮಸ್ಥೈರ್ಯ ಹೊಂದಿದ್ದಾರೆ. ಆದರೆ ಇದು ವೃತ್ತಿಪರ ನೆಲೆಯಲ್ಲಿ ಹಿಮ್ಮೆಟ್ಟಿಸುವ ಶಕ್ತಿಯಾಗಿ ಹೊರಹೊಮ್ಮಿಲ್ಲ. ಇಂದಿಗೂ ಸಹ ನ್ಯಾಯಿಕ ಬರ್ಬರತೆಯನ್ನು ಸಹನೀಯ ಎಂದು ಭಾವಿಸಿ, ನ್ಯಾಯಾಲಯಗಳ ಪವಿತ್ರ ಸ್ಥಾನಮಾನವನ್ನು ಮಾನ್ಯ ಮಾಡುವ ಹಿರಿಯ ವಕೀಲರ ಸಂಖ್ಯೆ ಹೆಚ್ಚಾಗಿಯೇ ಇದೆ.
ಇದು ವಿನಯ ರಹಿತ ಉತ್ಪ್ರೇಕ್ಷೆ ಎನಿಸಬಹುದು ಆದರೆ ವೀಮಾರ್ ನ್ಯಾಯಾಂಗದ ಛಾಯೆ ( ಹಿಟ್ಲರನ ನಾಝಿ ಕಾಲಘಟ್ಟದಲ್ಲಿ ಜರ್ಮನಿಯಲ್ಲಿದ್ದ ಸಂವಿಧಾನ ಮತ್ತು ನ್ಯಾಯ ವ್ಯವಸ್ಥೆ-ಅನು) ದಟ್ಟವಾಗಿ ಆವರಿಸುತ್ತಿರುವ ಸಂದರ್ಭದಲ್ಲಿ ದೇಶದ ಸಾಮಾನ್ಯ ಜನತೆಗೆ ವಿನಯ ಒಂದು ಆಯ್ಕೆಯಾಗಲು ಸಾಧ್ಯವಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

