ನೆಲದನಿ
ಕರ್ನಾಟಕವೆಂದರೆ ಕರುಣೆಯಿಲ್ಲವೇ..? ಕನ್ನಡವೆಂದರೆ ಹೆಮ್ಮೆಯಲ್ಲವೇ..?
“ಉದಯವಾಗಲಿ ಚಲುವ ಕನ್ನಡನಾಡು
ಬದುಕು ಬಲಹೀನ ನಿಧಿಯು ಸದಭಿಮಾನದ ಗೂಡು”
ಅಂದು 1924 ನೇ ಇಸವಿ ಬೆಳಗಾವಿಯಲ್ಲಿ ಗಾಂಧೀಜಿಯವರು ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಗೀತ ವಿದೂಷಿ ಗಂಗೂಬಾಯಿ ಹಾನಗಲ್ ರವರು ಬಾಲಕಿಯಾಗಿದ್ದಾಗ ಹಾಡಿದಂಥ ಹಾಡಿದು. ಇದನ್ನು ಹುಯಿಲಗೋಳ ನಾರಾಯಣರಾಯರು ಬರೆದಂಥ ರಾಷ್ಟ್ರಗೀತೆ. ಹೌದು ಅಂದಿನ ಕಾಲಕ್ಕೆ ಇದು ಕನ್ನಡ ಭಾಷೆಗೆ ರಾಷ್ಟ್ರಗೀತೆಯೇ ಸರಿ. ಮೊದಲಿನಿಂದಲೂ ಭಾಷಾತೀತ ರಾಷ್ಟವಾಗಿರುವ ಭಾರತದಲ್ಲಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವೂ ದ್ರಾವಿಡಭಾಷೆಗಳಲ್ಲಿ ಒಂದು. ಇಂಥಾ ಭಾಷಾಪ್ರೇಮ ಹೊತ್ತ ಹುಯಿಲಗೋಳ ನಾರಾಯಣರಾಯರು ಕನ್ನಡಕ್ಕಾಗಿಯೇ ಬರೆದಂಥ ಅದ್ಭುತ ಅರ್ಥಗಳುಳ್ಳ ಸಾಲಿನ ಪದಗಳು. ಸ್ವತಂತ್ರ ಪೂರ್ವದಲ್ಲೇ ಭಾಷಾಭಿಮಾನದಿಂದ ಒಗ್ಗೂಡುವ ಪ್ರಯತ್ನಕ್ಕೆ ನಾಂದಿಯಾಯಿತೇನೋ ಇವರ ಬರಹದ ಹಾಡು. ಹುಯಿಲಗೋಳ ನಾರಾಯಣರಾಯರು ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು.
ಏಕೀಕರಣಗೊಂಡ ಕರ್ನಾಟಕ 60 ವಸಂತಗಳನ್ನ ಪೂರೈಸಿ ವಜ್ರಮಹೋತ್ಸವವನ್ನೂ ಆಚರಿಸಿಕೊಂಡಿದೆ. ಕನ್ನಡ ಭಾಷಿಕರು ವಾಸಿಸುವ ಬಹುತೇಕ ಪ್ರದೇಶಗಳೆಲ್ಲಾ ಪ್ರಥಮವಾಗಿ ಒಂದಾದ ಈ ಉತ್ಸವಕ್ಕೆ ಏನಿಲ್ಲವೆಂದರೂ ಒಂದೂವರೆ ಶತಮಾನದ ಹಿನ್ನೆಲೆ ಇದೆ. ಹಿಂದೆ ಒಂದು ಭೂಭಾಗಕ್ಕೆ ಕರ್ನಾಟಕವೆಂಬ ಹೆಸರು ಇರಲಿಲ್ಲ. ಕನ್ನಡ ಭಾಷೆ ಮಾತನಾಡುವ ಸ್ಥಳಗಳಲ್ಲಿ ಕನ್ನಡಿಗರೆ ಆಳ್ವಿಕೆ ನಡೆಸಿದರು. ಕದಂಬರು ಕನ್ನಡ ಮಾತೃಭಾಷೆಯ ರಾಜಮನೆತನಗಳಲ್ಲಿ ಮೊದಲಿಗರು. ಇವರ ಬಳಿಕ ಹಲವಾರು ರಾಜವಂಶಗಳು ನೂರಾರು ವರ್ಷಗಳ ಕಾಲ ವಿವಿಧ ಭಾಗಗಳಲ್ಲಿ ಆಡಳಿತ ನಡೆಸಿದರು. ಕನ್ನಡ ಭಾಷೆಗೆ ಆಗ ಮಾನ್ಯತೆ ಇತ್ತು.
ಬ್ರಿಟಿಷರು ಭಾರತಕ್ಕೆ ಬಂದು ಭಾರತವನ್ನೇ ತಮ್ಮ ಅಂಕೆಗೆ ತೆಗೆದುಕೊಳ್ಳಲು ಆರಂಭಿಸಿದರು. ಅನೇಕ ದೌರ್ಬಲ್ಯಗಳಿಂದ ನಮ್ಮ ನೂರೆಂಟು ಸಂಸ್ಥಾನಗಳು ಅವರ ವಶಕ್ಕೆ ಹೋದವು. ಬೆರಳೆನಿಕೆಯಷ್ಟು ರಾಜರು ಮಾತ್ರ ಬಿಳಿಯರ ವಿರುದ್ಧ ಸೆಟೆದು ನಿಂತರು. ಅಂಥವರಲ್ಲಿ ಮೈಸೂರು ಸಂಸ್ಥಾನದ ಟಿಪ್ಪು ಸುಲ್ತಾನ್ ಕೂಡ ಒಬ್ಬರು. ಕೊನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಪತನಗೊಂಡಿದ್ದು 1799ರಲ್ಲಿ. ಆ ಹೊತ್ತಿಗಾಗಲೇ ದೇಶದೆಲ್ಲೆಡೆ ಬ್ರಿಟಿಷರ ಆಡಳಿತ ಶುರುವಾಗಿತ್ತು. ಗೆದ್ದ ಪ್ರಾಂತ್ಯಗಳನ್ನೆಲ್ಲಾ ಅವರಿಷ್ಟಕ್ಕೆ ಬಂದಂತೆ ಹಂಚಿಕೆ ಮಾಡಲು ಆರಂಭಿಸಿದರು. ಇಂಥಹ ವಿಭಜನೆ ಒಳಪಟ್ಟವರಲ್ಲಿ ಕನ್ನಡಿಗರೂ ಸೇರಿದ್ದರು. ಕನ್ನಡ ಮಾತನಾಡುವ ಪ್ರದೇಶಗಳನ್ನು ಸುಮಾರು 20 ಕ್ಕೂ ಹೆಚ್ಚು ಭಾಗಗಳಾಗಿ ವಿಂಗಡಿಸಿದರು. ಕೆಲವು ಪ್ರದೇಶಗಳನ್ನು ತಾವೇ ಇಟ್ಟುಕೊಂಡರೆ ಇನ್ನೂ ಹಲವು ಪ್ರದೇಶಗಳನ್ನು ತಮಗೆ ಬೆಂಬಲಿಸುತ್ತಿದ್ದ ಸಂಸ್ಥಾನಗಳಿಗೆ ಬಿಟ್ಟುಕೊಟ್ಟರು. ದುರಾದೃಷ್ಟವೆಂದರೆ ಅವರು ಅನ್ಯ ಭಾಷಿಕರಾಗಿದ್ದರು. ಅವರ ಆಳ್ವಕೆಯಲ್ಲಿ ಕನ್ನಡ ಮಾತನಾಡುವವರು ಅಕ್ಷರಶಃ ಅನಾಥರಾದರು.
ಮರಾಠಿ, ಉರ್ದು, ತಮಿಳು, ತೆಲುಗು ಭಾಷಿಕರ ನಡುವೆ ಕನ್ನಡಿಗರು ಇರಲೇಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾಯಿತು. ಆಡಳಿತಗಾರರು ಕನ್ನಡಿಗರ ಆತಂಕ ದೂರ ಮಾಡುವ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ನಮಗೆ ಅನ್ಯಾಯವಾಗುತ್ತಿದೆ, ನಮ್ಮ ಭಾಷೆಗೆ ತೊಂದರೆಯಾಗುತ್ತಿದೆ ಎಂದು ಒಗ್ಗಟ್ಟಾಗಿ ಹೇಳುವ ಪರಿಸ್ಥಿತಿಯೂ ಕನ್ನಡಿಗರಿಗೆ ಇರಲಿಲ್ಲ. ನಮ್ಮದೇ ನೆಲದಲ್ಲಿ ನಾವೇ ಅಲ್ಪ ಸಂಖ್ಯಾತರೆನ್ನಿಸಿಕೊಂಡು ಬವಣೆ ಪಡುವ ಗೋಳು ನಮ್ಮದಾಗಿತ್ತು. ಸಾವಿರಾರು ವರ್ಷಗಳಿಂದ ಉಳಿದುಕೊಂಡಿದ್ದ, ಕನ್ನಡಿಗರ ಸಂಸ್ಕೃತಿಗೆ ಧಕ್ಕೆ ಉಂಟಾಯಿತು. ಇಪ್ಪತ್ತಕ್ಕೂ ಹೆಚ್ಚು ದ್ವೀಪಗಳಾಗಿ ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಕನ್ನಡತನ ಉಳಿಸಿ ಕೊಳ್ಳುವುದು ಅಸಾಧ್ಯವಾಗಿತ್ತು.ಅಚ್ಚ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಅನ್ಯಭಾಷಿಕರು ಅವರ ಭಾಷೆಯನ್ನು ಸುಕಾ ಸುಮ್ಮನೆ ಹೇರುತ್ತಿದ್ದರು. ಆಡಳಿತ ಅವರ ಕೈಯಲ್ಲಿದ್ದರಿಂದ ಕನ್ನಡಿಗರು ಮಣಿಯಲೇಬೇಕಾದ ಅನಿವಾರ್ಯ ಸ್ಥಿತಿ ಅದು. ಭಾಷೆ ಕಳೆದುಕೊಳ್ಳುತ್ತಿರುವ ಭೀತಿ ಒಂದೆಡೆಯಾದರೆ ಅನ್ಯಭಾಷಿಕರ ದಬ್ಬಾಳಿಕೆಗೆ ಕನ್ನಡಿಗರು ಗುರಿಯಾದರು. ಇಂಥಹ ಯಾತನಾಮಯ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕವಾಗಿ, ಪ್ರಾದೇಶಿಕವಾಗಿ ಕನ್ನಡಿಗರೆಲ್ಲಾ ಒಂದಾಗಬೇಕೆಂಬ ಕೂಗು ಎದ್ದಿತು. ತಾತ್ವಿಕ ತಳಹದಿಯ ಮೇಲೆ ಕನ್ನಡ ಸಂಸ್ಕೃತಿ-ಕನ್ನಡಿಗರು ಒಂದುಗೂಡಲು ಆರಂಭವಾದ ಆಂದೋಲನವೇ ಕನ್ನಡ ಏಕೀಕರಣ ಚಳುವಳಿ. ಕನ್ನಡಕ್ಕೆ, ಕನ್ನಡಿಗರಿಗೆ ನಾವೆಲ್ಲಾ ಒಂದಾಗಬೇಕೆಂದು ಮೊದ ಮೊದಲಿಗೆ ಪ್ರೇರಣೆ ಕೊಟ್ಟವರು ಅಭಿವ್ಯಕ್ತಿ ಮಾಡಲು ಅವಕಾಶವಿದ್ದ ಕವಿಗಳು, ಸಾಹಿತಿಗಳು, ಕಲಾವಿದರು.ಕಥೆ-ಕವನ-ಕಾದಂಬರಿ-ಚಿತ್ರ, ಬರಹಗಳಲ್ಲಿ ಕನ್ನಡತ್ವ ಕಾಣಿಸಿಕೊಳ್ಳತೊಡಗಿತು.
ಆ ಕಾಲಘಟ್ಟದಲ್ಲಿ ಕನ್ನಡಿಗರೆಲ್ಲರೂ ಒಂದಾಗಿ ಹೋರಾಟ ನಡೆಸುವ ವಾತಾವರಣ ಇರಲಿಲ್ಲ. ಇಂಗ್ಲೆಂಡ್ ನ ವ್ಯಾಪಾರಿ ಸಂಸ್ಥೆಯೊಂದು ಭಾರತದಲ್ಲಿ ಅಂದಾದುಂದಿ ಆಡಳಿತ ನಡೆಸುತ್ತಿತ್ತು. ಇದರಿಂದ ಇಂಗ್ಲೆಂಡ್ ನ ಪ್ರತಿಷ್ಟೆಗೆ ಪೆಟ್ಟು ಬಿದ್ದಾಗ ಸ್ವತಃ ಬ್ರಿಟನ್ ರಾಣಿಯೇ ಭಾರತದ ಆಡಳಿತವನ್ನು ನೇರವಾಗಿ ಕೈಗೆತ್ತಿಕೊಂಡರು. ಆಗ ಅಲ್ಲಿದ್ದ ಬಿಗಿವಾತಾವರಣ ಕಡಿಮೆಯಾಯಿತು. ಆಗ ಆಡಳಿತ ನಡೆಸಲು ಬಂದ ಕೆಲವು ಅಧಿಕಾರಿಗಳು ಕನ್ನಡಿಗರ ಪರಿಪಾಟಲುಗಳನ್ನ ನೋಡಿ ವಾಸ್ತವತೆ ಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ವರದಿ ನೀಡಿದರು. ಆ ಸಮಯದಲ್ಲಿ ಕನ್ನಡಿಗರ ಬಗೆಗೆ ಸಹಾನುಭೂತಿ ಸಿಕ್ಕಿತು. ಆದರೆ ತಾವು ಇಷ್ಟೂ ವರ್ಷ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಬೇಕಾದರೆ ಒಗ್ಗಟ್ಟಾಗಬೇಕೆಂಬ ಅಭಿಲಾಷೆ ಕನ್ನಡಿಗರಲ್ಲಿ ಮೂಡಿತು.ಅದಕ್ಕೆ ಬ್ರಿಟಿಷ್ ಅಧಿಕಾರಿಗಳು-ಸಂಶೋಧಕರು ಬೆಂಬಲ ಕೊಟ್ಟರು. ಕೇವಲ ಅನುಕೂಲಕ್ಕೆ ತಕ್ಕಂತೆ ಪ್ರದೇಶಗಳನ್ನು ತುಂಡು ತುಂಡು ಮಾಡಿದ್ದ ಬ್ರಿಟಿಷ್ ಸರ್ಕಾರದ ನೀತಿಯನ್ನು ದೇಶದ ಕೆಲವೆಡೆ ವಿರೋಧಿಸುವ ಕಾರ್ಯ ನಡೆಯಿತು.ವಾಸ್ತವಾಂಶ ಗೊತ್ತಿದ್ದ ಕೆಲ ಇಂಗ್ಲೀಷ್ ಅಧಿಕಾರಿಗಳೂ “ಭಾಷೆ”ಯ ಆಧಾರದ ಮೇಲೆ ಪ್ರಾಂತ್ಯಗಳನ್ನು ವಿಂಗಡಿಸಲು ಸೂಚಿಸಿದರು. ಆದರೆ ಇದರಿಂದ ಹೆಚ್ಚಿನ ಪ್ರಗತಿಯೇನೂ ಆಗಲಿಲ್ಲ. ಯಥಾಸ್ಥಿತಿ ಮುಂದುವರಿಯಿತು. ಕರ್ನಾಟಕದಲ್ಲಿ ಕನ್ನಡಕ್ಕೆ ಶಾಲೆಗಳಲ್ಲಿ ಹೆಚ್ವಿನ ಮಾನ್ಯತೆ ಸಿಕ್ಕಿತು. ಕೆಲವು ಕನ್ನಡ ಶಾಲೆಗಳು ಪ್ರಾರಂಭವಾದವು.
19 ನೇ ಶತಮಾನದ ಕೊನೆ ವೇಳೆಗೆ ಭಾರತ ಸ್ವತಂತ್ರವಾಗಬೇಕೆಂಬ ಕೂಗು ಎಲ್ಲೆಡೆ ಕೇಳಿಬಂತು. ಆಡಳಿತದ ಅನುಕೂಲಕ್ಕಾಗಿ ವಿಭಜನೆಯಾದ ಭಾಷಿಕರೂ ಸ್ವಾತಂತ್ರ್ಯ ಚಳುವಳಿಗೆ ದೊಡ್ಡ ಪ್ರಮಾಣದಲ್ಲಿಯೇ ಕೈ ಜೋಡಿಸಿದರು. ಭಾಷಾವಾರು ಪ್ರಾಂತ್ಯಗಳು ರಚನೆಗೊಳ್ಳಬೇಕೆಂಬ ಒಳಷರತ್ತಿನೊಡನೆ ಹೋರಾಟ ಮೊದಲಾಯಿತು. ಅದಕ್ಕೆ ಕನ್ನಡ ನಾಡು ಸೇರಿತು, ಕರ್ನಾಟಕ ಏಕೀಕರಣದ ಆಗ್ರಹವೂ ಅದರಲ್ಲಿತ್ತು. ಕನ್ನಡ ಮಾತನಾಡುವ. ಪ್ರದೇಶಗಳಲ್ಲಿ ಮುಂಬೈ ಭಾಗ ಹಾಗೂ ನಿಜಾಮ್ ಆಡಳಿತದ ಪ್ರಾಂತ್ಯಗಳು ಕನ್ನಡಿಗರಿಗೆ ತೊಂದರೆ ಒಡ್ಡಿದ್ದವು. ಒಂದೆಡೆ ಮರಾಠಿ ಪ್ರಾಬಲ್ಯ ಇನ್ನೊಂದೆಡೆ ಉರ್ದು ಹೇರಿಕೆ. ಕನ್ನಡಿಗರದು ಉಸಿರು ಕಟ್ಟಿದಂತ ಪರಿಸ್ಥಿತಿ. ಮುಂಬೈ ವಲಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆ ಬೆಳೆಸಲು ಹೆಚ್ಚಿನ ಒತ್ತಾಸೆಗಳು ಆರಂಭಗೊಂಡರು. ಇದಕ್ಕೆ ಶಾಂತ ಕವಿಗಳು, ಡೆಪ್ಯೂಟಿ ಚೆನ್ನಪ್ಪನವರು ಭದ್ರ ಬುನಾದಿಯನ್ನು ಒದಗಿಸಿಕೊಟ್ಟರು. ಕನ್ನಡದ ಚಟುವಟಿಕೆಗಳು ಶಾಲೆಗಳ ಹೊರಗೂ ಪ್ರಾರಂಭಗೊಂಡವು. ರಾ.ಹ ದೇಶಪಾಂಡೆ ಅವರು ಸಮಾನ ಮನಸ್ಕರೊಂದಿಗೆ ಸ್ಥಾಪಿಸಿದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಕನ್ನಡ ಪರದನಿ ಎತ್ತಲು ಸಾಂಸ್ಥಿಕ ರೂಪಕೊಟ್ಟಿತು. ಕನ್ನಡ ‘ವಾಗ್ಭೂಷಣ’ ಪತ್ರಿಕೆ ಏಕೀಕರಣದ ಅಗತ್ಯತೆಯನ್ನು ಸ್ಪಷ್ಟವಾಗಿ ಪ್ರಕಟಿಸಿತು. ಅಸ್ಸಾಂ, ಬಂಗಾಲ, ಗುಜರಾತ್ ಮೊದಲಾದ ಕಡೆಗಳಲ್ಲಿ ಸ್ಥಳೀಯ ಭಾಷೆಗಳ ನೆಲೆಯಲ್ಲಿ ನಡೆಸಿದ ಚಳುವಳಿಗಳನ್ನು ಗಮನಿಸುತ್ತಿದ್ದ ಮುಂಬಯಿ ಭಾಗದ ಕನ್ನಡಿಗರು ಕನ್ನಡ ಏಕೀಕರಣದ ಧ್ವನಿಯನ್ನು ನಿರಂತರವಾಗಿ ಉಳಿಸಿಕೊಂಡು ಬಂದರು. ಇದೇ ಹಾದಿಯಲ್ಲಿ ಅಖಿಲ ಕರ್ನಾಟಕ ಗ್ರಂಥಕರ ಸಮ್ಮೇಳನವೂ ನಡೆಯಿತು.ಎಲ್ಲವೂ ಏಕೀಕರಣಕ್ಕೆ ಪೂರಕವಾದ ವಾತಾವರಣವನ್ನು ಹುಟ್ಟುಹಾಕಿದವು. ಮೈಸೂರು ಪ್ರಾಂತ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಜನ್ಮತಾಳಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಏರ್ಪಡಿಸಿ ಅಲ್ಲಿ ಕನ್ನಡಪರ, ಕರ್ನಾಟಕಪರ ಚಿಂತನೆಗಳು ಹೊರ ಹೊಮ್ಮುವಂತೆ ಮಾಡಿತು.
ಕರ್ನಾಟಕದ ಭವ್ಯ ಇತಿಹಾಸ, ಕನ್ನಡ ಸಾಹಿತ್ಯದ ಶ್ರೀಮಂತಿಕೆ , ಕನ್ನಡ ನೆಲದ ವೈಶಿಷ್ಟ್ಯ ಮುಂತಾದ ವಿಷಯಗಳನ್ನು ಒಳಗೊಂಡ ಹಲವಾರು ಕೃತಿಗಳು ಕನ್ನಡಿಗರ ಕೈ ತಲುಪಿದವು. ಎಲ್ಲವೂ ಕರ್ನಾಟಕತ್ವವನ್ನು ಪ್ರತಿಪಾದಿಸುತ್ತಿದ್ದವು. ರಾಷ್ಟೀಯ ಹೋರಾಟದ ಜೊತೆ ಜೊತೆಗೆ ಕರ್ನಾಟಕ ಏಕೀಕರಣ ಚಳುವಳಿಯೂ ಹೆಜ್ಜೆ ಹಾಕಿತು.ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ಅಗತ್ಯವೆಂಬ ಮುಂದಾಲೋಚನೆಯಿಂದ ಕಾಂಗ್ರೆಸ್ ಪಕ್ಷ ಸಮಿತಿಗಳು ಭಾಷೆಯ ಆಧಾರದ ಘಟಕಗಳಾಗುವಂತೆ ಶ್ರಮಿಸಿದ್ದವು. ಮಹಾತ್ಮಗಾಂಧಿ ಅವರು ಅಖಿಲ ಭಾರತ ಕಾಂಗ್ರೆಸ್ ವಾರ್ಷಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಅದರ ಇತಿಹಾಸದಲ್ಲಿ ಒಮ್ಮೆ ಮಾತ್ರ. ಅದು ನಡೆದದ್ದು ಕನ್ನಡದ ನೆಲ ಬೆಳಗಾವಿಯಲ್ಲಿ (1924). ಇದೇ ಸಮ್ಮೇಳನ ಕರ್ನಾಟಕ ಏಕೀಕರಣದ ಮುನ್ನುಡಿ ಬರೆಯಲು ಪ್ರೇರೇಪಿಸಿತು. ಕರ್ನಾಟಕ ಏಕೀಕರಣ ಚಳುವಳಿ ಜೀವಂತವಾಗಿಯೇ ಇತ್ತು.ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಅಗ್ರಗಣ್ಯ ನಾಯಕರಲ್ಲೊಭ್ಬರಾದ ಎಸ್.ನಿಜಲಿಂಗಪ್ಪ ಎಡಬಿಡದೇ ಆಗಿನ ಪ್ರಧಾನಿ ಸೆಹರೂ ಅವರನ್ನು ಏಕೀಕರಣಕ್ಕಾಗಿ ನಿರ್ಧಾರ ತೆಗೆದುಕೊಳ್ಳಲು ನೆನಪು ಮಾಡುತ್ತಲೇ ಇದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಆಶ್ವಾಸನೆಗಳನ್ನು ಒಪ್ಪಿಕೊಳ್ಳಲು ಕೇಂದ್ರ ಸರ್ಕಾರ ಹಿಂದೇಟು ಹಾಕಿತು. ಆಂಧ್ರ ಉದಯದ ಸಮಯದಲ್ಲಿ ಬಳ್ಳಾರಿ ಮೈಸೂರಿಗೆ ಸೇರ್ಪಡೆಯಾದ ಸಂಭ್ರಮದ ಗಳಿಗೆಯಲ್ಲಿ ಯುವಕ ರಂಜಾನ್ ಸಾಬ್ ಅಸುನೀಗಿದರು. ಈ ಪ್ರಾಣಿಬಲಿ ಹಿಂದೆಯೇ ಕನ್ನಡಿಗರು ಅಮರಾಣಾಂತ ಉಪವಾಸ, ಸತ್ಯಾಗ್ರಹ ಅಸ್ತ್ರಪ್ರಯೋಗಿಸಿದರು.ದೊಡ್ಡ ಮೇಟಿ ಹಾಗೂ ಅದರ ಗುಂಚಿ ಶಂಕರಕಲ್ಲನ ಗೌಡ ಪಾಟೀಲರು ಉಪವಾಸ ಕೂತರು. ಪರಿಸ್ಥಿತಿ ಬಿಗಡಾಯಿಸಿತು. ಅಧಿಕಾರರೂಢ ಕಾಂಗ್ರೆಸ್ ಕೈಚೆಲ್ಲಿ ಕುಳಿತಾಗ ಕಾಂಗ್ರೆಸೇತರ ಪಕ್ಷಗಳು ಚಳುವಳಿ ಕೈಗೆತ್ತಿಕೊಂಡವು. ಅದರಲ್ಲಿ ಕಮ್ಯುನಿಷ್ಟ್ ಹಾಗೂ ಪ್ರಜಾ ಸಮಾಜವಾದಿ ಪಕ್ಷವಾದಿ ಮುಖ್ಯವಾದವು.
ಆ ವೇಳೆಗೆ ಅಸ್ತಿತ್ವಕ್ಕೆ ಬಂದಿದ್ದ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಏಕೀಕರಣಕ್ಕಾಗಿ ಹೋರಾಟಕ್ಕೆ ಇಳಿಯಿತು. ಪ್ರತಿಭಟನೆ-ಮೆರವಣಿಗೆ ಉಪವಾಸ, ಸಮ್ಮೇಳನ ಇವೆಲ್ಲ ಅವ್ಯಾಹತವಾಗಿ ನಡೆಯಲಾರಂಭಿಸಿದ್ದರಿಂದ ಅನ್ಯಮಾರ್ಗವಿಲ್ಲದೆ ಕೇಂದ್ರ ಸರ್ಕಾರ ನಾ!! ಫಜಲ್ ಆಲಿ ಅವರ ನೇತೃತ್ವದಲ್ಲಿ ಇನ್ನೊಂದು ಆಯೋಗವನ್ನು ನೇಮಿಸಿತು. ಜವಾಹರಲಾಲ ನೆಹರೂ ಅವರಿಗೆ ಕರ್ನಾಟಕ ಏಕೀಕರಣ ಮಾಡಬೇಕಾದ ಅನಿವಾರ್ಯತೆ ಅರ್ಥವಾಗಿತ್ತು. ರಾಜ್ಯ ವಿಂಗಡನಾ ಆಯೋಗವೆಂದು ಉಲ್ಲೇಖಿಸಲ್ಪಟ್ಟ ಈ ಸಮಿತಿಯಲ್ಕಿ ಎಚ್.ಎನ್. ಕುಂಜ್ರು ಹಾಗೂ ಕೆ.ಎಂ. ಫಣಿಕ್ಕರ್ ಸದಸ್ಯರಾಗಿದ್ದರು. ಈ ಮೂವರ ಸಮಿತಿ ಕರ್ನಾಟಕ ಏಕೀಕರಣದ ಎಲ್ಲಾ ಮಗ್ಗುಲುಗಳನ್ನು ಪರಿಶೀಲಿಸಿತು. ಕೊನೆಗೆ ಕನ್ನಡ ರಾಜ್ಯ ಏಕೀಕರಣಗೊಳ್ಳಲು ಪಕ್ವವಾಗಿದೆ ಎಂಬ ವರದಿಯನ್ನು 1955 ರ ಸೆಪ್ಟಂಬರ್ 30 ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಏಕೀಕರಣಕ್ಕೆ ಲೋಕಸಭೆ, ರಾಜ್ಯಸಭೆಗಳೂ ಒಪ್ಪಿಗೆ ಕೊಟ್ಟ ನಂತರ ರಾಷ್ಟ್ರಪತಿಗಳ ಅಂಕಿತ ಬಿತ್ತು. ಶತಕಗಳಷ್ಟು ಚರಿತ್ರೆ ಇದ್ದರೂ ಎಂದೂ ಏಕಾಡಳಿತಕ್ಕೆ ಒಳಪಡದಿದ್ದ ಕನ್ನಡಿಗರು 1956 ರ ನವೆಂಬರ್ 1 ರಂದು ಒಂದು ರಾಜ್ಯದ ಆಡಳಿತಕ್ಕೆ ಒಂದಾದರು. ಕರ್ನಾಟಕ ರಾಜ್ಯ ರಚನೆಗೆ ಅಂತಿಮ ಅಂಕಿತ ಹಾಕಿದ್ದ ಆಗಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರಪ್ರಸಾದ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ವಿಧ್ಯುಕ್ತವಾಗಿ ಮೈಸೂರು (ಕರ್ನಾಟಕ) ರಾಜ್ಯ ಉದಯವನ್ನು ಘೋಷಿಸಿದರು. ವಿಪರ್ಯಾಸವೆಂದರೆ ಬಹುತೇಕ ಕನ್ನಡ ಮಾತನಾಡುವ ಪ್ರದೇಶಗಳು ಆಂಧ್ರ , ತಮಿಳುನಾಡು, ಮಹಾರಾಷ್ಟ್ರ, ಕೇರಳಗಳಲ್ಲಿಯೇ ಉಳಿದು ಬಿಟ್ಟವು. ಕನ್ನಡಿಗರ ಹೊಸ ರಾಜ್ಯಕ್ಕೆ ಮೈಸೂರು ಎಂದು ಕರೆದಿದ್ದು ಅಸಮಾಧಾನಕ್ಕೆ ಕಾರಣವಾಯಿತು. ಇದು ನಡೆದ 17 ವರ್ಷಗಳ ತರುವಾಯ ಸಿ. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಏಕೀಕೃತ ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣವಾಗಿ ತೃಪ್ತಿಗೆ ಹಾದಿ ಮಾಡಿಕೊಟ್ಟಿತು.
ಈ ಮೇಲೆ ಹೇಳಿರುವುದೆಲ್ಲಾ ಕಥೆಯಲ್ಲ , ಬದಲಾಗಿ ನಡೆದ ಇತಿಹಾಸದ ಒಂದೊಂದು ಅಕ್ಷರಗಳ ಮುತ್ತುಗಳು. ಅಷ್ಟೊಂದು ಮಹನೀಯರುಗಳ ಪರಿಶ್ರಮದ ಫಲವಾಗಿಯೇ ಇಂದು ಅಖಂಡ ಕರ್ನಾಟಕದಲ್ಲಿ ನಾವೆಲ್ಲಾ ಅತ್ಯಂತ ಸಂತೋಷದಿಂದ ಜೀವಿಸುತ್ತಿದ್ದೇವೆ. ಜೇನಿನಂಥ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸವನ್ನು ಕೆಲ ನಾಯಕರುಗಳು ಅನಾವಶ್ಯಕವಾಗಿ ಮಾಡುತ್ತಿದ್ದಾರೆ. ಜನರು ಮುಗ್ಧರೇ, ಆದರೆ ಜನಗಳನ್ನಾಳುವ ಜನಪ್ರತಿನಿಧಿಗಳು ಮುಗ್ಧರಲ್ಲ.ಚಾಟಿ ಇಲ್ಲದೇ ಬುಗುರಿ ತಿರುಗಿಸುವ ಪ್ರವೀಣರು. ವಾಸ್ತವದಲ್ಲಿ ಅಖಂಡ ಕರ್ನಾಟಕವನ್ನ ಹಿಬ್ಬಾಗ ಮಾಡಲು ಪ್ರಯತ್ನಿಸುತ್ತಿರುವವರಿಗೆಲ್ಲಾ ಏನು ಸಿಗುವುದಿಲ್ಲ ಮತ್ತು ಅದರಿಂದ ಏನೂ ಲಾಭವಾಗುವುದಿಲ್ಲ. ಬದಲಾಗಿ ರಾಜಕಾರಣಿಗಳು ಲಾಭ ಪಡೆದುಕೊಳ್ಳುತ್ತಾರೆ. ಅಭಿವೃದ್ಧಿಯಾಗಲಿಲ್ಲ ಎಂಬ ಒಂದೇ ಕಾರಣ ಇಟ್ಟುಕೊಂಡು ರಾಜ್ಯವನ್ನು ವಿಭಜನೆ ಮಾಡಲು ಹೊರಟಿರುವ ಮುಗ್ಧಜನರಿಗೇನು ಗೊತ್ತು ಇದು ರಾಜಕೀಯದ ದೊಂಬರಾಟವೆಂದು. ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಎಂದು ಅವರೇ ಹೇಳಿಕೊಳ್ಳುತ್ತಿರುವ ಮಾತುಗಳು. ಇಲ್ಲಿ ಯಾವ ಸರ್ಕಾರಗಳಾಗಲೀ , ಮೀಡಿಯಾದವರಾಗಲೀ ಹೇಳುತ್ತಿಲ್ಲ. ಹೈದರಾಬಾದ್ ಕರ್ನಾಟಕಕ್ಕೆ 371J ಎಂಬ ಸಂವಿಧಾನಾತ್ಮಕ ವಿಶೇಷ ಸ್ಥಾನಮಾನವನ್ನು ನೀಡಿ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಅದಕ್ಕೆ ಪೂರಕವಾದ ಸವಲತ್ತುಗಳನ್ನು ನೀಡಲಾಗುತ್ತಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕಾಗಿರುವುದು ರಾಜಕಾರಣಿಗಳು ಮತ್ತು ಆಯಾ ಕ್ಷೇತ್ರದ ಎಂ.ಎಲ್.ಎ ಮತ್ತು ಎಂ.ಪಿಗಳದ್ದು. ಅಭಿವೃದ್ದಿ ಎಂಬ ಮಂತ್ರದ ಮೂಲಕ ಹುಳಿ ಹಿಂಡುವ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಅಥವಾ ನಾಯಕರುಗಳು ಜನಪ್ರತಿನಿಧಿಗಳ ಕೊರಳಪಟ್ಟಿ ಹಿಡಿದು ಕೇಳಬೇಕು. ಸ್ವಾತಂತ್ರ್ಯಾ ನಂತರ ಅಥವಾ ಕರ್ನಾಟಕ ಏಕೀಕರಣವಾದ ನಂತರ ಹೈದರಾಬಾದ್ ಕರ್ನಾಟಕಕ್ಕೆ ಅಥವಾ ಉತ್ತರ ಕರ್ನಾಟಕಕ್ಕೆ ಎಷ್ಟು ಅನುಧಾನ ನೀಡಿದ್ದಾರೆಂದು ಅಂಕಿ ಅಂಶಗಳನ್ನು ನೋಡಿದರೆ ತಿಳಿಯುತ್ತದೆ.
ಹಾಗೆ ನೆನ್ನೆಯ ದಿನ ದಿನಾಂಕ 05.08.2018 ರ ಪ್ರಜಾವಾಣಿ ಪತ್ರಿಕೆಯ ಕಡೆ ಕಣ್ಣಾಯಿಸಿದೆ. ಈ ಸಲದ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಎಷ್ಟು ಅನುಧಾನವನ್ನು ನೀಡಿದ್ದಾರೆ ಎಂದು ಬರೆದಿತ್ತು.ಅದನ್ನು ನೋಡಿ ಆಶ್ಚರ್ಯವಾಯಿತು. 13 ಜಿಲ್ಲೆಗಳಿಗೆ ಬರೋಬರಿ 7241 ಕೋಟಿ ರೂ.ಗಳು ಮತ್ತು ಮಿಕ್ಕ ದಕ್ಷಿಣ ಜಿಲ್ಲೆಗಳಿಗೆ 7238 ಕೋಟಿ ರೂ.ಗಳು ನೀಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತದೆಯೋ ಇಲ್ಲಾ ತಾಯಿ ಮಮತೆ ತೋರುತ್ತದೆಯೋ ಎಂದು. ಅವರು ಹೇಳಿದಂತೆ ಮಾಡಲು ಹೊರಟೇವೆಂದರೆ ಒಂದು ರಾಜ್ಯವನ್ನು ಕಟ್ಟುವುದು, ಬೆಳೆಸುವುದು ಅಷ್ಟೊಂದು ಸುಲಭದ ಮಾತಲ್ಲ. ಒಂದು ರಾಜ್ಯವನ್ನು ಹೊಸದಾಗಿ ಸೃಷ್ಟಿಸಲು ಹೋದರೆ ಸಂವಿಧಾನಾತ್ಮಕವಾಗಿ ಒಪ್ಪಿಗೆ ಇದ್ದರೂ ಆರ್ಥಿಕವಾಗಿ, ನೈಸರ್ಗಿಕವಾಗಿ, ಸ್ವಾಭಾವಿಕ ಸೌಕರ್ಯಾದಿಗಳಾಗಿ ನೋಡಕೊಳ್ಳಬೇಕಾಗುತ್ತದೆ. ಒಂದು ರಾಜ್ಯವನ್ನು ನಡೆಸಲು ಸಾಲ ತರುವುದೊಂದೇ ಮಾರ್ಗವಲ್ಲ, ಅದನ್ನು ತೀರಿಸಲು ಆದಾಯ ಬೇಕಲ್ಲವೇ? . ಆದಾಯದ ಮೂಲ ಯಾವುದಿದೆ ಉತ್ತರ ಭಾಗಕ್ಕೆ ?. ಪಕ್ಕದ ಆಂಧ್ರಪ್ರದೇಶವನ್ನು ನೋಡಿಯಾದರೂ ಬುದ್ದಿ ಕಲಿಯಬಹುದು. ಆದಾಯದ ಭಾಗವೆಲ್ಲಾ ತೆಲಾಂಗಣ ಭಾಗಕ್ಕೆ ಸೇರ್ಪಡೆಯಾಗಿ ಆಂಧ್ರಪ್ರದೇಶ ರಾಜ್ಯ ಅಭಿವೃದ್ಧಿಗೆ ಹೆಣಗಾಡುತ್ತಿದೆ. ಅದಕ್ಕಾಗಿ ಬಿಜೆಪಿಯ ಮೈತ್ರಿ ಪಕ್ಷವಾಗಿ ಚಂದ್ರಬಾಬುನಾಯ್ಡು ಸರ್ಕಾರ ಗುರುತಿಸಿಕೊಂಡರೂ ಅದರಿಂದ ಏನೂ ಪ್ರಯೋಜನವಾಗದೇ ಮೈತ್ರಿಯಿಂದ ಹೊರಬಂದದ್ದು ಈಗ ಇತಿಹಾಸ. ಹೊಸ ರಾಜಧಾನಿ ಸೃಷ್ಠಿಸಲು ಹರಸಾಹಸ ಪಡುತ್ತಿದೆ. ಅದರಂತೆಯೇ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತವಾಗಿ ಇರುವಂತ ಅಖಂಡ ಕರ್ನಾಟಕಕ್ಕೆ ಆದಾಯವೆಂದರೆ ಸಾಫ್ಟ್ ವೇರ್ ಮತ್ತು ಕೈಗಾರಿಕ ವಲಯಗಳು.ಇವೆರಡೂ ದಕ್ಷಿಣ ಭಾಗದಲ್ಲಿ ಇರುವುದರಿಂದ ಉತ್ತರಕ್ಕೆ ಅನಾನುಕೂಲವಾಗುವುದರಲ್ಲಿ ಸಂದೇಹವಿಲ್ಲ. ನೈಸರ್ಗಿಕವಾಗಿಯೂ ಕೂಡ ದಕ್ಷಿಣ ಕರ್ನಾಟಕ ಬಹಳ ಆದಾಯದಲ್ಲಿದೆ.
ದಕ್ಷಿಣದವರು ನಮಗೆ ಯಾವ ರೀತಿಯ ಬೆಂಬಲವನ್ನು ನೀಡುತ್ತಿಲ್ಲ ಎಂಬ ಆರೋಪ ಎಷ್ಟು ಸರಿ ?.ಕಳಸಾ ಬಂಡೂರಿ ವಿಚಾರದಲ್ಲಿ ಎಲ್ಲರೂ ಅವರ ಬೆಂಬಲಕ್ಕೆ ನಿಂತಿಲ್ಲವೇ? .ಇತ್ತೀಚಿಗಷ್ಟೇ ಕೇಂದ್ರದ ಪ್ರತಿಷ್ಟಿತ ವಿದ್ಯಾಕೇಂದ್ರ ಐ.ಐ.ಟಿ ಯನ್ನು ಧಾರವಾಡಕ್ಕೆ ನೀಡಲಿಲ್ಲವೇ? . ಕರ್ನಾಟಕ ಏಕೀಕರಣಕ್ಕೆ ಅರವತ್ತು ತುಂಬಿದ ಸಂಭ್ರಮದಲ್ಲಿ ಸುವರ್ಣ ಕರ್ನಾಟಕದ ನೆನಪಿಗಾಗಿ ಅವರ ಇಚ್ಛೆಯಂತೆ ಸುಮಾರು 594 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಡಳಿದ ಶಕ್ತಿಕೇಂದ್ರವಾದ ವಿಧಾನ ಸೌಧದ ತದ್ರೂಪು ಎಂಬಂತೆ “ಸುವರ್ಣ ಸೌಧ” ವನ್ನು ಬೆಳಗಾವಿಯಲ್ಲಿ ನಿರ್ಮಾಣ ಮಾಡಿಲ್ಲವೇ?. ದೂರದಿಂದ ಬರಲಾಗದು ಎಂಬ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಸಂಚಾರಿ ಉಚ್ಚನ್ಯಾಯಾಲಯವನ್ನು ಸ್ಥಾಪಿಸಲಾಯಿತು. ಇನ್ನು ಹಲವು ಪ್ರತಿಷ್ಟಿತ ಯೋಜನೆಗಳನ್ನು ಉತ್ತರ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನದ ಅಭಿಮಾನದ ಮೇಲೆ ನೀಡಲಾಗಿದೆ. ಹೀಗಿರುವಾಗ ಇಲ್ಲಿ ಅಭಿವೃದ್ಧಿ ಆಗಿಲ್ಲವೆಂಬ ಅನುಮಾನವೇಕೆ? . ಲೋಕಸಭೆಯಲ್ಲಿ, ವಿಧಾನಸಭೆಯಲ್ಲಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅರಿವು ಮೂಡಿಸು ಅನುದಾನವನ್ನು ಬಿಡುಗಡೆಗೊಳಿಸಿಕೊಂಡು ಮಾದರಿ ಕ್ಷೇತ್ರಗಳಾಗಿ ಮಾಡಿ ಜನರ ವಿಶ್ವಾಸವನ್ನು ಗೆಲ್ಲಬೇಕಾದದ್ದು ಜನಪ್ರತಿನಿಧಿಗಳ ಕೆಲಸ. ಹೋರಾಟ ಮಾಡಲೆಂದು ಹಳ್ಳಿಯ ಜನಗಳಿಗೆ 100/- ಅಥವಾ 200/- ರೂ.ಗಳ ಕೊಟ್ಟು ಪ್ರತಿಭಟನೆ ಮಾಡಿಸಿದರೆ ಪಾಪ ಅವರಿಗೆ ಸಿಗುವುದಾದರೂ ಏನು ?.
ಮೊದಲೇ ಹೇಳಿದಂತೆ ಒಂದು ರಾಜ್ಯಕ್ಕೆ ಆದಾಯದ ಮೂಲ ಎಂದರೆ ತೆರಿಗೆ. ತೆರಿಗೆ ವಸೂಲಿ ಮಾಡಬೇಕೆಂದರೆ ಅವರಿಗೆ ಪೂರಕವಾದ ಮೂಲಸೌಲಭ್ಯಗಳ ಒದಗಿಸಬೇಕು. ಬಂಡವಾಳ ಶಾಹಿಗಳಿಂದ ಬಂಡವಾಳ ಹೂಡಿಕೆ ಮಾಡಿದಾಗ ಮಾತ್ರ ತೆರಿಗೆ ಬಂದು ಒಂದು ಸರ್ಕಾರನ್ನು ನಡೆಸಲು ಆಗುವುದು. ಈಗಿನ ಪರಿಸ್ಥಿತಿಯನ್ನು ಗಮನಿಸಿದಾಗ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಬೆಂಬಲವಾಗಿ ನಿಲ್ಲುತ್ತದೆ ತಿಳಿದಿಲ್ಲ. ಒಮ್ಮತವಾದ ಸರ್ಕಾರ ಒಮ್ಮೆಯೂ ಬಂದಿಲ್ಲ. ಕೇಂದ್ರದಲ್ಲಿ ಒಂದು ಪಕ್ಷವಾದರೆ, ರಾಜ್ಯದಲ್ಲಿ ಇನ್ನೊಂದು ಪಕ್ಷ. ಯಾವಾಗಲೂ ದಾಯಾದಿಯ ಹಗೆಯಂತೆಯೇ ಮಲತಾಯಿ ಧೋರಣೆ ತೋರಿಸುತ್ತಾ ಬಂದಿವೆ. ಅನುದಾನವನ್ನೂ ಸಹ ನಮ್ಮ ರಾಜ್ಯಕ್ಕೆ ಸರಿಯಾಗಿ ವಿತರಣೆ ಮಾಡುವುದಿಲ್ಲ. ಇದು ನಮ್ಮ ಕರ್ನಾಟಕದ ದುರಾದೃಷ್ಟ ಎನ್ನಬಹುದು. ಇನ್ನು ರಾಜ್ಯ ಹೋಳಾದರೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂಬ ಯಾವ ನಂಬಿಕೆಯೂ ಇಲ್ಲ. ಮೊದಲೆ ಉತ್ತರ ಕರ್ನಾಟಕ ಬಯಲು ಸೀಮೆ, ಬಿಸಿಲನಾಡು ಎಂದೆಲ್ಲಾ ಖ್ಯಾತಿಗಳಿಸಿದೆ. ಹೀಗಿರುವಾಗ ವಿಭಜನೆಯಾಗಿ ಸಿಗುವ ಸವಲತ್ತಿನಿಂದಲೂ ವಂಚಿತವಾಗಬೇಕಾಗುತ್ತದೆ. ಅಖಂಡ ಕರ್ನಾಟಕದಲ್ಲಿ ಆರು ಕೋಟಿ ಜನರಿದ್ದರೂ ಪಕ್ಕದ ತಮಿಳುನಾಡು ಕಾವೇರಿ ನೀರಿನ ವಿಚಾರಕ್ಕೆ ಬಂದಾಗ ಅವರ ಹಿಡಿತಕ್ಕೆ ಒಳಗಾಗುತ್ತೇವೆ. ಇನ್ನು ಇಬ್ಭಾಗವಾದರೆ ಖಂಡಿತವಾಗಿಯೂ ಅದರ ಬೆರಳ ತುದಿಯಲ್ಲಿ ಆಡಿಸಿಬಿಡುತ್ತಾರೆ.
ಅಷ್ಟಕ್ಕೂ ಇಲ್ಲಿ ನಡೆಯುತ್ತಿರುವುದು ಬರೀ ಪ್ರದೇಶಗಳ ಹಂಚಲಾಟವಲ್ಲ. ರಾಜಕೀಯದ ಚದುರಂಗದಾಟ, ಜಾತಿರಾಜಕಾರಣದ ದೊಂಬರಾಟ. ರಾಜಕಾರಣಿಗಳ ಪ್ರಕಾರ ಜಾತಿ ಆಧಾರದಲ್ಲಿ ಜನಸಂಖ್ಯೆಯನ್ನು ನೋಡಿದಾಗ ಲಿಂಗಾಯಿತರೇ ಪ್ರಾಬಲ್ಯ ಹೊಂದಿದ್ದಾರೆ ಎಂದು ತಿಳಿದು ಹೇಗಿದ್ದರೂ ಲಿಂಗಾಯಿತರು ಬಿಜೆಪಿ ಸಾರಥ್ಯ ವಹಿಸಿರುವ ಬಿ.ಎಸ್.ಯಡಿಯೂರಪ್ಪ ನವರ ಮೇಲೆ ವಿಶ್ವಾಸ ಹೊಂದಿರುತ್ತಾರೆ. ರಾಜ್ಯ ವಿಭಜನೆಯಾದರೆ ಖಂಡಿತವಾಗಿಯೂ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಏಕಚಕ್ರಾಧಿಪತ್ಯವನ್ನು ಸಾಧಿಸಬಹುದು ಎಂಬ ದೂರಾಲೋಚನೆ. ನಿಜ ಹೇಳಬೇಕೆಂದರೆ ಇದು ದೂರಾಲೋಚನೆಯಲ್ಲ ದುರಾಲೋಚನೆ ಎಂದೇ ಹೇಳಬಹುದು. ಆದರೆ ಕಾಂಗ್ರೆಸ್ ನಲ್ಲೂ ಲಿಂಗಾಯಿತ ಘಟಾನುಘಟಿ ನಾಯಕರುಗಳಿರುವುದರಿಂದ ಬಿಜೆಪಿಗೆ ಸ್ವಲ್ಪ ಕಷ್ಟವೆಂದೇ ಹೇಳಬಹುದು. ರಾಜ್ಯ ವಿಭಜನೆ ವಿಷಯವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೋವನ್ನು ಸಂಪೂರ್ಣವಾಗಿ ಕೇಳಿದ ಮೇಲೆ ಒಂದು ಸ್ಪಷ್ಟವಾಯಿತು. ಅವರು ಅಲ್ಲಿ ಬಹಳ ನೋವಿನಿಂದ, ಒತ್ತಡದಿಂದ , ಹತಾಶೆಯಿಂದ “ಬೇರೆ ರಾಜ್ಯ ಬೇಕು ಎಂದು ಕೇಳುತ್ತಿದ್ದೀರಿ ಎಂಗೋ ತಗೋಳ್ರಪ್ಪಾ” ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಒಬ್ಬ ವ್ಯಕ್ತಿಯನ್ನು ಎಡೆಬಿಡದೆ ತಿಣುಕುತ್ತಿದ್ದರೆ ಮನಸ್ಸು ಹುಚ್ಚೇಳುವುದು ಸಹಜ. ಅದರಂತೆಯೇ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಅವರೂ ಕೂಡ ಮನುಷ್ಯರಲ್ಲವೇ? ಅವರಿಗೂ ಕೂಡ ಭಾವನೆಗಳು, ಆತ್ಮಗೌರವ, ರೋಷವೇಷ ಎಲ್ಲವೂ ಇದೆ. ಬೀದಿಗಳಲ್ಲಿ ನಾಯಿಗಳಂತೆ ವಿರೋಧ ಪಕ್ಷದ ನಾಯಕರು ಸಿಕ್ಕಸಿಕ್ಕ ಕಡೆ ಮೀಡಿಯಾ ಮುಂದೆ ಸ್ಟೇಟ್ಮೆಂಟ್ ಕೊಟ್ಟರೆ ಹೇಗೆ. ನಿಜವಾಗಿಯೂ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಇದ್ದರೆ ಕೂತು ಚರ್ಚಿಸಿ ಮಾಡಬೇಕು. ಅವತಿಗೆ ಬೇಕಾಗಿರುವುದು ಅಧಿಕಾರ, ಅಭಿವೃದ್ಧಿಯಲ್ಲ.
ಸನ್ಮಾನ್ಯ ಕುಮಾರಸ್ವಾಮಿಯವರು ಟಿವಿ ಮಾಧ್ಯಮದವರ ಬಗ್ಗೆ ಮಾತನಾಡಿದ್ದಾರೆನ್ನಲಾದ ವಿಷಯವನ್ನಿಟ್ಟುಕೊಂಡು ಅವರ ತೇಜೋವಧೆ ಮಾಡಲಿಕ್ಕೆ ಹೊರಟಿರುವುದು ಎಷ್ಟು ಸರಿ. ಹೌದು ಟಿವಿ ಮಾಧ್ಯಮದವರಿಂದಲೇ ಅಖಂಡ ಕರ್ನಾಟಕ ಹೋಳಾಗಬೇಕೆಂಬ ಕೂಗು ಎದ್ದಿರುವುದು. ಕೆಲಸಕ್ಕೆ ಬಾರದ ಅದೂ ರಾಜಕಾರಣಿಗಳನ್ನೇ ಕೂರಿಸಿಕೊಂಡು ಪಬ್ಲಿಕ್ ಟಿವಿಯಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಚರ್ಚೆ ನಡೆಯುತ್ತದೆ. ಅದು ರಾಜ್ಯದ ಹಿತವನ್ನ ಕಾಪಾಡುವ ಚರ್ಚೆಯಾಗಿರುವುದಿಲ್ಲ, ಬದಲಾಗಿ ಅವರವರ ಪಕ್ಷದವರ ಘನತೆಯನ್ನು ಬಿಂಬಿಸಿಕೊಳ್ಳುವ ಚರ್ಚೆಗಳಾಗಿರುತ್ತದೆ ಮತ್ತು ಅಕ್ಷರ ಸಹ ಬೀದಿ ನಾಯಿಗಳ ಜಗಳದಂತಿರುತ್ತದೆ.ಅದರ ಹೊರತಾಗಿ ಸಾಹಿತಿಗಳನ್ನೋ, ಚಿಂತಕರನ್ನೋ ಕರೆಸಿ ಮಾತನಾಡಬಹುದಲ್ಲ. ಅರುಣ್ ಬಡಿಗೇರ್ ಎಂಬ ನಿರೂಪಕ ತಾನೇ ಮೇಧಾವಿ ಎಂದು ತಿಳಿದುಕೊಂಡಿದ್ದಾನೆ ಮತ್ತು ವಯಸ್ಸಿಗೆ, ಹುದ್ದೆಗೆ ಮರ್ಯಾದೆ ನೀಡದೇ ಮಾತನಾಡುತ್ತಾನೆ. ಮೀಡಿಯಾದವರು ತೋರಿಸುವ ಮತ್ತು ಮಾತನಾಡುವ ವಿಷಯದಿಂದ ದೇಶಕ್ಕೆ ಅಥವಾ ರಾಜ್ಯಕ್ಕೆ ಒಳ್ಳೆಯದಾಗಬೇಕೇ ಹೊರತು ಕೆಡುಕಾಗಬಾರದು. ಇನ್ನಾದರೂ ರಾಜಕಾರಣಿಗಳು, ಸಂಘಟನೆಗಳು ಮತ್ತು ಮೀಡಿಯಾದವರು ಅನಾವಶ್ಯಕ ವಿಚಾರಗಳನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಅಖಂಡ ಕರ್ನಾಟಕಕ್ಕೆ ದುಡಿಯಿರಿ ಎಂದು ಆಶಿಸುತ್ತೇನೆ.
ಜೈ ಕರ್ನಾಟಕ ಜೈ ಭಾರತ
–ಮಹದೇವ್ ಬಿಳುಗಲಿ
9611339024
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ6 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ4 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ21 hours agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ20 hours agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

